ನೆಲೆ ಸಂಭ್ರಮ – 2020
ಫೇಸ್ಬುಕ್ ನಲ್ಲಿ ಕಾವ್ಯ ಓದುವುದರ ಮೂಲಕ ಕತೆ ಕೇಳುತ್ತಲೇ ಚಿಂತನೆಗಳನ್ನು ಮೆಲುಕು ಹಾಕುವುದರ ಜೊತೆಗೆ ನೆಲೆ ಸಂಭ್ರಮವನ್ನು ಆಚರಿಸೋಣ ಬನ್ನಿ…… ಎನ್ನುತ್ತಲೇ ಆರಂಭವಾದ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಗೆ ಇದೀಗ ನಾಲ್ಕು ದಶಕಗಳನ್ನು ಪೂರೈಸುತ್ತಿದೆ. ಇದರ ಹುಟ್ಟಿಗೆ ಪ್ರಮುಖ ಕಾರಣರು ಇದರ ಜೋಡಿ ಸ್ಥoಭದಂತಿರುವ ಡಾ. ಎಂ ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು. ಹವ್ಯಾಸಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ಸ್ಥಳೀಯ ಲೇಖಕರ ಹಾಗೂ ಮಹಿಳೆಯರ ಕೃತಿಗಳ ಪ್ರಕಟಣೆಗೆ ಆದ್ಯತೆ ನೀಡುವುದರ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಭಿನ್ನ ಭಿನ್ನ ಪ್ರಾದೇಶಿಕ ನೆಲೆಯಿಂದ ಸಾಹಿತ್ಯ ಪರಿಚಾರಿಕೆಯ ಕೆಲಸವನ್ನು ಮಾಡುತ್ತ ಬಂದಿದೆ. ಇದೀಗ ಕೊರೋನಾ ಪರಿಣಾಮವಾಗಿ ಪ್ರತಿವರ್ಷವೂ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದ ನೆಲೆ ಸಂಸ್ಥೆ ಈ ಬಾರಿ ಫೇಸ್ಬುಕ್ ಲೈವ್ ನ ಮೂಲಕ ಕಾರ್ಯಕ್ರಮ ಆಯೋಜಿಸಿದ್ದು ರಾಜ್ಯ, ದೇಶ ಹಾಗೂ ದೇಶದಾಚೆಗೂ ಪಸರಿಸಿದ್ದು ಇದರ ಯಶಸ್ಸಿಗೆ ಸಾಕ್ಷಿಯಾಗಿ ನಿಂತಿದೆ.
ಆಕರ್ಷಕ ಮಾದರಿಯಲ್ಲಿ ಆರಂಭವಾದ ನೆಲೆ ಸಂಭ್ರಮವು ವಿವಿಧ ಹಿರಿಯ ಚಿಂತಕರಾದ ಜಯಂತ್ ಕಾಯ್ಕಿಣಿ(ಹಿರಿಯ ಕವಿ, ಕತೆಗಾರರು ), ಪ್ರೊ. ಸಿ ಎಸ್. ಭೀಮರಾಯ (ಸಿ ಎಸ್ಪಿ- ಕವಿ ವಿಮರ್ಶಕರು), ಡಾ. ರಾಜಶೇಖರ ಮಠಪತಿ (ರಾಗಂ – ಹಿರಿಯ ಕವಿಗಳು ), ಡಾ. ಶ್ರೀರಾಮ ಇಟ್ಟಣ್ಣವರ ( ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಬಯಲಾಟ ಅಕಾಡೆಮಿ ಬೀಳಗಿ ), ಡಾ. ಬಾಳಾಸಾಹೇಬ ಲೋಕಾಪುರ(ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು – ನವದೆಹಲಿ) ಮುಂತಾದವರ ಆಶಯ ನುಡಿಗಳೊಂದಿಗೆ ಕಾರ್ಯಕ್ರಮದ ರಂಗೇರಿಸಿತು. ಜುಲೈ 19 ರಿಂದ ಆಗಸ್ಟ್ 11 ರವರೆಗೆ ನಿರಂತರವಾಗಿ ಫೇಸ್ಬುಕ್ ಲೈವ್ ಮೂಲಕ ಅಚ್ಚುಕಟ್ಟಾದ ನಿರ್ವಹಣೆಯೊಂದಿಗೆ ಆರಂಭವಾದ “ನೆಲೆ ಸಂಭ್ರಮ -2020” ಅತ್ಯಂತ ಯಶಸ್ವಿಯಾಗಿ ನಡೆದು ಇದರಲ್ಲಿ ಭಾಗವಹಿಸಿದ ಎಲ್ಲಾ ಉತ್ಕೃಷ್ಟ ಕವಿಮನಸುಗಳ ಸವಿನೆನಪುಗಳನ್ನು ಶಾಶ್ವತವಾಗಿಸಲು ಇದೀಗ ಮೂರು ಕೃತಿಗಳನ್ನು ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿಸಲು ಅಣಿಗೊಳಿಸಲಾಗುತ್ತಿದೆ. ಕ್ರಮವಾಗಿ “ಬಯಲ ರೆಕ್ಕೆಗಳು”, “ಕಥಾ ಕಾಲಕ್ಷೇಪ”‘ ಹಾಗೂ “ಸಂಕಥನ” ಎಂಬ ಬಹುಕಾಲ ಗಟ್ಟಿಯಾಗಿ ಉಳಿಯಬಲ್ಲ ಮೂರು ಮಹತ್ವದ ಕೃತಿಗಳನ್ನು ದೇವು ಮಾಕೊಂಡ, ಮನು ಪತ್ತಾರ ಹಾಗೂ ಡಾ. ಶ್ರೀಶೈಲ ನಾಗರಾಳ ರವರುಗಳು ಸಂಪಾದಿಸಿದ್ದಾರೆ.
ನೆಲೆ ಸಾಹಿತ್ಯ ಸಂಭ್ರಮ-2020 ಕಾವ್ಯ ಕಂತು, ಕಥಾ ಸಪ್ತಾಹ ಹಾಗೂ ಚಿಂತನಾ ಸಪ್ತಾಹವೆಂದು ಮೂರು ಹಂತಗಳಲ್ಲಿ ನಡೆಯಿತು. ಕಾವ್ಯಸಪ್ತಾಹವು 7 ಕಂತುಗಳಲ್ಲಿ ನಡೆದು ನಾಡಿನ ವಿವಿಧ ಮೂಲೆಗಳಿಂದ ಹಾಗೂ ಅನ್ಯ ರಾಜ್ಯ, ಅನ್ಯ ದೇಶದಿಂದಲೂ ಒಟ್ಟು 41ಕ್ಕೂ ಹೆಚ್ಚು ಕವಿಗಳು ಇದರಲ್ಲಿ ಭಾಗವಹಿಸಿದ್ದು ವಿಶೇಷ. ಇದರಲ್ಲಿ ಒಂದು ಗಜಲ್ ಗೋಷ್ಠಿಯನ್ನು ಕೂಡ ಆಯೋಜಿಸಲಾಗಿತ್ತು. ಜುಲೈ 19 – 2020 ರಿಂದ ಆರಂಭವಾದ ಕಾವ್ಯಗೋಷ್ಠಿಯ ಜೊತೆಜೊತೆಗೆ “ಕಾವ್ಯದಲ್ಲಿ ಶೋಧದ ದಾರಿ” ಕುರಿತು ಡಾ. ರಾಜಶೇಖರ ಮಠಪತಿಯವರು, “ಸಾಮಾಜಿಕ ಜವಾಬ್ದಾರಿ ಮತ್ತು ಕಾವ್ಯ” ಕುರಿತು ಪ್ರೊ. ಎಲ್. ಎನ್. ಮುಕುಂದರಾಜ್ ರವರು, “ವರ್ತಮಾನದ ಕಾವ್ಯದ ಅನುಸಂಧಾನ” ಕುರಿತು ಡಾ. ದೇವೇಂದ್ರಪ್ಪ ಜಾಜಿಯವರು, “ಗಂಗಾಧರ ಚಿತ್ತಾಲರ ಕಾವ್ಯದಲ್ಲಿ ರೂಪಕ ಮತ್ತು ಪ್ರತಿಮೆ” ಗಳ ಕುರಿತು ಡಾ. ಸುರೇಶ ನಾಗಲಮಡಿಕೆಯವರು, “ಕಾವ್ಯದ ಸ್ವರೂಪ -ಓದುವ ಬಗೆಗಳು” ಕುರಿತು ಡಾ.ಎನ್ ದುಂಡಪ್ಪ ರವರು, “ಸರಕು ಸಮಾಜದಲ್ಲಿ ಕಾವ್ಯ ವ್ಯವಸಾಯ” ಕುರಿತು ಪ್ರೊ. ಕಮಲಾಕರ ಭಟ್ ಅಹ್ಮದ್ ನಗರ ಹಾಗೂ “ಗಾಲಿಬ್ ಗಜಲ್ ನಲ್ಲಿ ವಸ್ತು ವೈವಿದ್ಯತೆ” ಕುರಿತಾಗಿ ಗಿರೀಶ್ ಜಕಾಪುರೆಯವರು ಹೀಗೆ ಅತ್ಯಂತ ಮಹತ್ವದ ಸಂಗತಿಗಳನ್ನು ಹಂಚಿಕೊಂಡರು.
ತದನಂತರ ಕಥಾ ಸಪ್ತಾಹದ ಸರಣಿಯಲ್ಲಿ ಹಲವಾರು ಪ್ರಸಿದ್ಧ ಕತೆಗಾರರು ಭಾಗವಹಿಸಿದ್ದರು.. ಅವರಲ್ಲಿ ಡಾ. ಕೇಶವ ಮಳಗಿಯವರು “ಕನ್ಯಾಗತ ಕತೆ”, ಡಾ. ಬಸು ಬೇವಿನಗಿಡದರವರು “ನೆರಳಿಲ್ಲದ ಮರ” ಕತೆಯನ್ನು, ನಟ ಮಂಡ್ಯ ರಮೇಶ್ ರವರು ಚದುರಂಗ ಅವರ “ಸಾವಿನ ಮನೆ” ಕತೆಯನ್ನು, ದೀಪ್ತಿ ಭದ್ರಾವತಿಯವರು “ನೆರಳಿನಾಚೆ” ಕತೆಯನ್ನು, ಅನುಪಮಾ ಪ್ರಸಾದ್ ರವರು “ಸೈತಾನನ ಬಲೆ” ಕತೆಯನ್ನು, ರಾಜಶೇಖರ ಹಳೆಮನೆ ಅವರು ” ಗೋಡೆಯ ಚಿತ್ರ”, ಚೀಮನಹಳ್ಳಿ ರಮೇಶಬಾಬು ಅವರು “ಹುಣಸೆ ಮರ”, ಆನಂದ ಕುಂಚನೂರು ಅವರು “ಗಂಧರ್ವ ಪಟ್ಟಣ” ಮತ್ತು ಕೊನೆಯದಾಗಿ ಕಪಿಲ್ ಹುಮನಾಬಾದ್ ರವರು “ನಿರೋಷ”.. ಹೀಗೆ ಎಲ್ಲಾ ಕಥೆಗಳು ವಿಭಿನ್ನ ಕಥಾವಸ್ತುಗಳನ್ನು ಒಳಗೊಂಡಿದ್ದು ಕತೆಗಾರರು ಮನೋಜ್ಞವಾಗಿ ಮನ ಮುಟ್ಟುವಂತೆ ವಾಚಿಸಿದರು. ನಂತರದಲ್ಲಿ ಚಿಂತನಾ ಸಪ್ತಾಹದಲ್ಲೂ ಮೇರು ಚಿಂತಕರು ಪಾಲ್ಗೊಂಡು ವಿವಿಧ ಆಯಾಮಗಳಲ್ಲಿ ತಮ್ಮ ಚಿಂತನಾ ಲಹರಿಗಳನ್ನು ಹರಿಯಬಿಟ್ಟರು. ಅವರಲ್ಲಿ ಡಾ. ರಹಮತ್ ತರೀಕೆರೆಯವರು “ತತ್ವಪದದಲ್ಲಿ ಅರಿವಿನ ನೆಲೆ”, ಡಾ. ಜಿ. ಪಿ. ಬಸವರಾಜುರವರು “ಬೊಗಸೆಯಲ್ಲಿ ಬುದ್ಧ”, ಡಾ. ಬಾಳಾಸಾಹೇಬ ಲೋಕಾಪುರರವರು “ಪ್ರಪ್ರಾಚೀನ ಜೈನ ಕಥೆಗಳು ಮತ್ತು ಲೋಕಪ್ರಜ್ಞಪ್ತಿ”, ಡಾ. ನಟರಾಜ್ ಬೂದಾಳ್ ರವರು “”ನಾಗಾರ್ಜುನನೆಂಬ ಜ್ಞಾನಸೂರ್ಯ” ಕುರಿತು, ಡಾ. ಪುರುಷೋತ್ತಮ ಬಿಳಿಮಲೆಯವರು “ತುಳು ಜಾನಪದ”, ಡಾ. ಬಸವರಾಜ ಡೋಣೂರ ಅವರು “ಬೇಂದ್ರೆ -ಕೀಟ್ಸ್ ತೌಲನಿಕ ಅಧ್ಯಯನ” ಕುರಿತಾಗಿ, ಡಾ. ಶ್ರೀಶೈಲ ನಾಗರಾಳ ಅವರು “ಜಾನಪದ ಲೋಕರೂಢಿ”… ಹೀಗೆ ವಿವಿಧ ವಸ್ತುವಿಷಯಗಳನ್ನು ಒಳಗೊಂಡು ಚಿಂತನೆಗೆ ಹಚ್ಚಿದರು. ಇಷ್ಟೂ ದಿನಗಳು ನಡೆದಂತಹ ಸಾಹಿತ್ಯಸುಗ್ಗಿಯ ಸಂಭ್ರಮವನ್ನು ಕುರಿತು, ನೆಲೆ ಪ್ರಕಾಶನ ಸಂಸ್ಥೆಯ ಹುಟ್ಟಿನಿಂದ ಹಿಡಿದು ಇಲ್ಲಿಯವರೆಗೆ ನಡೆದುಬಂದ ಪಯಣ, ನೆಟ್ಟ ಹೆಜ್ಜೆಗಳು ಮುಂತಾದ ವಿಷಯಗಳ ಕುರಿತು ಡಾ. ಶ್ರೀರಾಮ ಇಟ್ಟಣ್ಣನವರ ಅವರು ತಮ್ಮ ಸಮಾರೋಪ ನುಡಿಗಳಲ್ಲಿ ಸವಿಸ್ತಾರವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಕೃತಜ್ಞತಾ ನುಡಿಗಳನ್ನು ಈ ಸಂಸ್ಥೆಯ ಆಧಾರ ಸ್ಥoಭಗಳಾದ ಡಾ. ಎಂ. ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು ತಿಳಿಸಿದರು.
ಯಾವುದೇ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಯಶಸ್ವಿಗೊಳಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಅಂತೆಯೇ ಒಂದು ಯಶಸ್ವಿ ಕಾರ್ಯಕ್ರಮದ ಹಿಂದೆ ಹಲವಾರು ಕಾಣದ ಕೈಗಳ ಸಹಕಾರ, ಪರಿಶ್ರಮವಿರುತ್ತದೆ, ಗೆಳೆಯರ ಬಳಗವಿರುತ್ತದೆ, ಹಿರಿಯರ ಮಾರ್ಗದರ್ಶನವಿರುತ್ತದೆ. ಹೀಗೆ ಎಲ್ಲವನ್ನೂ ಒಗ್ಗೂಡಿಸಿ ದೇಶದೆಲ್ಲೆಡೆ ಮಹಾಮಾರಿಯಾಗಿ ಹರಡಿ ಜನರನ್ನು ಕಾಡುತ್ತಿರುವ ಈ ಕೊರೋನಾ ಕಾಲದಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಆಯೋಜಿಸಲಾಗಿದ್ದ ನೆಲೆ ಸಂಭ್ರಮ -2020 ಸಾಹಿತ್ಯಾತ್ಮಕ ಕಾರ್ಯಕ್ರಮವು ಈಗ ಮಗದೊಂದು ಹೆಜ್ಜೆಗುರುತನ್ನು ಮೂಡಿಸಿರುವುದು ಸ್ತುತ್ಯಾರ್ಹ. ಇನ್ನು ಈ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊತ್ತ ದೇವು ಮಾಕೊಂಡ ರವರು ಕಾರ್ಯಕ್ರಮದ ಆದಿಯಿಂದ ಅಂತ್ಯದವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮೂಡಿಬರುವಂತೆ ಕಾಳಜಿ ವಹಿಸಿ, ಇಂತಹ ಒಂದು ಕಾರ್ಯಕ್ರಮವನ್ನು ಸವಿಯಲು ಅನುವು ಮಾಡಿಕೊಟ್ಟು ಹಲವು ಪ್ರತಿಭೆಗಳಿಗೆ ಆನ್ಲೈನ್ ಮೂಲಕವೇ ವೇದಿಕೆ ಒದಗಿಸಿಕೊಟ್ಟು ಯಶಸ್ವಿಗೊಳಿಸಿದ್ದು ಆದರ್ಶನೀಯ. ಇಂತಹ ನೂರಾರು ಸಾವಿರಾರು ಕಾರ್ಯಕ್ರಮಗಳು ಇನ್ನು ಮುಂದೆಯೂ ಜರುಗಲಿ.. ಕನ್ನಡಮ್ಮನ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನೆರಡು ಅಭಿಮಾನದ ನುಡಿಗಳಿಗೆ ವಿರಾಮ ನೀಡುತ್ತಿದ್ದೇನೆ.
**********************************
ತೇಜಾವತಿ ಹೆಚ್.ಡಿ.