ಪುಸ್ತಕ ಸಂಗಾತಿ

ಚರಿತ್ರೆಯ ಪುಟಗಳ ಕಟ್ಟ ಹೊತ್ತ ಪರಿಸರದ ಕಥಾ ಮಾಲೆ.

ಮಧ್ಯಘಟ್ಟ – ಕಾದಂಬರಿ
ಶಿವಾನಂದ ಕಳವೆ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.

ಪರಿಸರದ ಬಗೆಗಿನ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಪತ್ರಕರ್ತ ಶಿವಾನಂದ ಕಳವೆ. ಶಿರಸಿಯ ಬಳಿಯ ಕಳವೆಯಲ್ಲಿ ಅವರ ನೇತೃತ್ವದ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ, ಕಾನ್ಮನೆ – ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರವಾಗಿದೆ. ಅವರು ಈ ಹೊತ್ತಿಗೆಯಲ್ಲಿ ಮತ್ತಿಘಟ್ಟ ಎಂಬ ಕಾನನದ ನಡುವಿನ ಪ್ರದೇಶದ ಕಥನವನ್ನು ಹೇಳಿದ್ದಾರೆ.

ಜನಪದ ಸಂಸ್ಕೃತಿ ಮತ್ತು ಪ್ರಕೃತಿಯ ಜೊತೆ ಸಂವಾದಿಯಾದ ವ್ಯಕ್ತಿಯು ಮಾತ್ರ ಇಂತಹದೊಂದು ವಿಶಿಷ್ಟವಾದ ಕೃತಿಯನ್ನು ರಚಿಸಬಲ್ಲರು. ಅವರ ಸ್ಮೃತಿಪಟಲದಲ್ಲಿ ಇದರಿಂದ ಮೂಡಿರುವ ಘಟನೆಗಳು, ಪಾತ್ರಗಳೊಂದಿಗೆ ಸಮ್ಮಿಳಿತಗೊಂಡು ಚೆಂದನೆಯ ಕೊಲಾಜ್ ಇಲ್ಲಿ ನಿರ್ಮಾಣಗೊಂಡಿದೆ. ಈ ಪುಸ್ತಕದ ತಮ್ಮ ಮನದ ಮಾತಿನಲ್ಲಿ, ಹೋಮ್ ಸಿಕ್ನೆಸ್ ಅನ್ನು ‘ಹುಟ್ಟೂರಿನ ಹಂಬಲ’ ಎಂದು ಅನುವಾದಿಸುವಲ್ಲೇ ಶಿವಾನಂದರ ಸಕಾರಾತ್ಮಕ ನೋಟದ ನಿಲುವು, ಒಲವು ಓದುಗನಿಗೆ ದಕ್ಕುತ್ತದೆ. ‌
ಕಳವೆಯವರ ಜೇನಿನ ಕುರಿತು ಆಸಕ್ತಿ, ನಾಟಿ ವೈದ್ಯರ ಸಮೀಕ್ಷೆ, ಕಾಡಿನ ಪ್ರೀತಿ, ಪ್ರಾಣಿಗಳೆಡೆಗಿನ ಪ್ರೇಮ ( ಗೌರಿ ಜಿಂಕೆಯ ಆತ್ಮಕಥೆ ಕೃತಿ), ಜೀವಲೋಕದ ಸಸ್ಯಗಳ ಖಜಾನೆಯ ಕುತೂಹಲ ಮತ್ತು ಭಾಷೆಯೆಡೆಗಿನ ಮಮತೆಗಳ ಒಟ್ಟೂ ಮೊತ್ತವೇ ಕಾದಂಬರಿಯಾಗಿರಬಹುದು. ಸ್ಥಳೀಯ ಭಾಷೆ, ನಿರೂಪಣೆ ಮತ್ತು ಕಥೆಯ ಬಂಧ ಈ ಕಾದಂಬರಿಯ ಶಕ್ತಿಯಾಗಿದೆ. ಇಲ್ಲಿನ ನಾಣ್ಣುಡಿಗಳು, ತಮಾಷೆಗಳು, ಆರ್ದ್ರ ಘಟನೆಗಳು ಗಮನ ಸೆಳೆಯುತ್ತವೆ.

‘ಪರೂರ ಹೊಳೆ ಮತ್ತು ಊರ ಸ್ಮಶಾನ ಹೆದರಿಸುತ್ತದೆ’ ಎಂದು ಹೇಳುತ್ತಾ, ಕಥನ ಮಾರ್ಗದ ‘ದಾಟುಸಾಲು’ ಹುಡುಕುತ್ತಿದ್ದೇನೆ ಎಂಬ ವಿನಮ್ರತೆಯಿಂದ ಕಳವೆಯವರು, ಕೇರಳದ ಕೊಟ್ಟಾಯಂ ಕೋಶಾಂಬುಲಿಯಿಂದ ನೂರಾರು ಮೈಲಿ ದೂರವನ್ನು ಹತ್ತು ದಿನಗಳ ಪರ್ಯಂತ ಒಂಬತ್ತು ನದಿ ದಾಟಿ ಕಾಲ್ನಡಿಗೆಯಲ್ಲಿ ಶಿರಸಿ ಸಮೀಪದ ಮಧ್ಯಘಟ್ಟಕ್ಕೆ, ಮಗಳು ಶ್ರೀದೇವಿಯನ್ನು ಕಾಣಲು ಬರುವ ಭೂದೇವಿಯ ಪ್ರಯಾಣದಿಂದ ಕಾದಂಬರಿಯನ್ನು ಆರಂಭಿಸುತ್ತಾರೆ. ಶಿರಸಿ ಭಾಗದಲ್ಲಿ ಈಗ ಮತ್ತೆ ಶುರುವಾಗಿರುವಂತೆ, ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆ ‘ತಿರಾ’ ( ವಧುದಕ್ಷಿಣೆ) ತೆತ್ತು ಲಗ್ನವಾಗುವ ಪ್ರಸಂಗ ಇದ್ದಾಗ ಗೋಪಯ್ಯ ಹೆಗಡೆ ಕುಂಬಳದ ಹೆಣ್ಣು ಶ್ರೀದೇವಿಯನ್ನು ವರಿಸುತ್ತಾರೆ. ಮದುವೆಯಾಗುವ ಹಂಬಲಕ್ಕೆ ಬಿದ್ದು ಸಾಲಮಾಡಿ ಜಮೀನು ಕಳೆದುಕೊಂಡವರ ಉಲ್ಲೇಖ ಕೂಡ ಇಲ್ಲಿ ಬರುತ್ತದೆ. ಒಂದು ಕೊಳಗ ಗೋಟಡಿಕೆಗೆ ಮಗುವನ್ನು ನೀಡುವ ತಾಯಿಯ ಚಿತ್ರಣ ಆ ಕಾಲದ ಪರಿಸ್ಥಿತಿಯ ಭೀಕರತೆಯನ್ನು ಸೂಚ್ಯವಾಗಿ ಹೇಳುತ್ತದೆ.

ತಿರಸಿ (ಶಿರಸಿ) ಯಲ್ಲಿ ಮನುಷ್ಯರ ತಿಂಬುವ ಜನ ಇದ್ವಡ ಎಂಬ ಮಾತು ಕೇಳಿ ಹೊರಟ ಭೂದೇವಿಯ ಪ್ರಯಾಣದ ಜೊತೆಗೆ ಪುಡಿಯಮ್ಮ ಎಂಬ ನಸ್ಯ ಸೇದುವ ಕುಂಬಳೆ ಕಡೆಯ ಮತ್ತೊಂದು ಹೆಂಗಸಿನ ಕಥೆ ಸಾಥ್ ಪಡೆದು ಸಾಗುತ್ತದೆ. ಮಧ್ಯಘಟ್ಟದಲ್ಲಿ ಭತ್ತದ ಗದ್ದೆಗಳಿಲ್ಲದೇ ಅಕ್ಕಿ ದುಬಾರಿ. ಹಾಗಾಗಿ ಅವರು ಹಲಸು ಮತ್ತು ಬಾಳೆಯನ್ನು ಅವಲಂಬಿಸಿದ್ದ ಸನ್ನಿವೇಶದ ಚಿತ್ರಣ ಕಾಡುತ್ತದೆ. ಕೇಮು ಮರಾಠಿ ಭೂದೇವಿಗೆ ಮಗಳ ಮನೆಗೆ ದಾರಿ ತೋರಿಸುವವ ಮಾತ್ರವಾಗದೇ, ಮಗುವಾಗದ ಶ್ರೀದೇವಿ ಮತ್ತು ಗೋಪಯ್ಯ ಹೆಗಡೆ ದಂಪತಿಗೆ ನಾಟಿ ಮದ್ದು ನೀಡುವ ಆಪತ್ಬಾಂಧವನೂ ಆಗುತ್ತಾನೆ. ಹೀಗೆ ಈ ಕೃತಿ ಹವ್ಯಕರ ಬದುಕಿನ ಕಥನವಾಗದೇ ಗೌಳಿ, ಸಿದ್ಧಿ, ಕುಣಬಿ,ಕರೆವೊಕ್ಕಲಿಗ, ಕುಮರಿ ಮರಾಠಿಗರ ಜೀವನಗಾಥೆಯೂ ಆಗಿ ಗಮನ ಸೆಳೆಯುತ್ತದೆ. ದೇವಕಾನಿನ ನೀರ ನಡಿಗೆಯ ಜೊತೆಗೆ ಹೊಸಕಟ್ಟಿನ ಹೆರಿಗಮನೆಯ ದೃಶ್ಯವನ್ನು ನೋಡುವುದೇ ಇಲ್ಲಿಯ ಸೊಗಸಾಗಿದೆ. ಅಮಟೆ ಮರವನ್ನು ಮನುಷ್ಯನ ಬದುಕಿಗೆ ಹೋಲಿಸಿ ಮಾತನಾಡುವ ರೀತಿಯೇ ಕಾಡುನೆಲೆಯ ಮಧ್ಯಘಟ್ಟದ ಅದ್ಭುತವೆಂದು ಕೃತಿಕಾರ ಪಾತ್ರದ ಮೂಲಕ ಹೇಳುವುದು ಸತ್ಯವೂ ಹೌದು. ಅದಕ್ಕೆ ಕೆಂಪೆತ್ತಿನ ಕಾಯಿಯಂತಹ ಹೆಸರುಗಳು ಸಾಕ್ಷಿ.

ಮನೆಗೆ ಸೋಗೆ ಹೊಚ್ಚುವ ಕಂಬಳ, ಅಡಿಕೆ ಮರದಲ್ಲಿ ಕೊನೆಗೆ ಕೊಟ್ಟೆ ಕಟ್ಟುವ ಕಂಬಳ, ಆಲೆಮನೆ ಹಬ್ಬ; ಇವೆಲ್ಲ ಇಂದಿನ ದಿನಗಳಲ್ಲಿ ಇಲ್ಲವೇ ಆಗಿಹೋಗಿದ್ದರೂ, ಈ ಅಧ್ಯಾಯಗಳನ್ನು ಓದುವಾಗ ಕೃತಿಯ ಕಾಲದ ಸ್ತಂಭನ ಮಾಡುವುದು ಕಾದಂಬರಿಯ ಪರಿಣಾಮಕ್ಕೆ ಸಾಕ್ಷಿ!ಇದರಲ್ಲಿ ಬರುವ ಗಂಜಿ ಕುಳಿ ಪ್ರಸಂಗದಂತವು ಸಂಕಟವನ್ನುಂಟು ಮಾಡುತ್ತವೆ.

ಗಮಯನ ಗಿಣ್ಣು, ಚಾಂದ್ ಷಾ ಶಿಕಾರಿ, ಹುಲಿಯಜ್ಜನ ಅವತಾರ, ನಳಿನಮನೆ ಬೆಟ್ಟದ ಹುಲಿ ಬೇಟೆ ಅಧ್ಯಾಯಗಳು ಬೆರಗನ್ನು ಮೂಡಿಸುತ್ತವೆ. ಗಿಡ್ಡೂ ಮರಾಠಿಯ ಸಾವು ಅಧಿಕಾರಶಾಹಿ ವ್ಯವಸ್ಥೆಯ ಕರಾಳ ಮುಖವನ್ನು ಬಯಲಿಗೆ ಎಳೆಯುತ್ತದೆ. ಚಾಂದ್ ಷಾ ತಾವೇ ಗುಂಡು ಹಾರಿಸಿಕೊಂಡು ಸಾಯುವ ಸನ್ನಿವೇಶದಲ್ಲಿ ಎದೆ ಝಲ್ ಎನ್ನುತ್ತದೆ. ಉಗ್ರಾಣಿ ಧರ್ಮನ ರಹಸ್ಯ ಶೋಧ ಮತ್ತು ಡೊಳ್ಳು ಹೊಟ್ಟೆಯ ಭಟ್ಟರ ಹಾವು ಅಧ್ಯಾಯಗಳು, ಹಾಸ್ಯದ ಧಾಟಿಯಲ್ಲಿ ಮನುಷ್ಯನ ಕ್ರೂರತೆಯನ್ನು ಬಿಚ್ಚಿಡುತ್ತವೆ.ತಾಂಮ್ರ ಕಲ್ಲಂಟೆಯ ಕುಂಟಭೂತ, ಗುಂಡಟ್ಲಕಾನಿನ ಗಿರಿಜಮ್ಮನ ಕಥೆ ಮತ್ತು ಆಲೆ ಬಯಲಿನ ದೆವ್ವಗಳು ನಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ.

ಒಕ್ಕಲಿಗರ – ಮತ್ತಿಮರದ ಸಂಬಂಧ, ಕುಮರಿ ಮರಾಠಿಗರ – ತಾಳೆ ಮರ ಸಂಬಂಧ, ಕನ್ನೆಕುಡಿ, ಹಲಸು, ಅಪ್ಪೆ ಮಾವಿನ ಜೊತೆ ಹವ್ಯಕರ ಸಂಬಂಧ ಈ ಹೊತ್ತಿಗೆಯಲ್ಲಿ ಅಪರೂಪದ ಹೊಳಹನ್ನು ನೀಡುತ್ತದೆ. ‘ಕಾಡಲ್ಲಿ ಕಂಡಿದ್ದೆಲ್ಲ ಮುಟ್ಟಲಾಗ, ನೋಡಿದ್ದೆಲ್ಲ ಕೆದಕಲಾಗ’ ಎಂಬ ವರದಪ್ಪಣ್ಣನ ಮಾತು ಕೃತಿಯ ಆಶಯವೂ ಆಗಿದೆ. ಪಟಾನ್ಸ್ ರಾಮ, ವಾಚು ತಂದ ವೈದ್ಯರು, ಎತ್ತಿನ ಗಾಡಿಯ ಕಾಲಚಕ್ರ, ಕಲ್ಲಂಟೆಯ ಕಳ್ಳರ ಮಾಳ ಅಧ್ಯಾಯಗಳು ಮಧ್ಯಘಟ್ಟ ಪ್ರಗತಿಯ ದಾರಿಗೆ ತೆರೆದುಕೊಳ್ಳುತ್ತಾ ಹೋಗುವುದನ್ನು ಸೂಕ್ಷ್ಮವಾಗಿ ಹೇಳುತ್ತವೆ.

ಕಾದಂಬರಿಯ ಕೊನೆಯಲ್ಲಿರುವ ಆಯ್ದ ಪದಗಳ ಅರ್ಥ, ಜೀವಲೋಕದ ಖಜಾನೆ, ಕೃಷಿ ಮೂಲದ ಸಸ್ಯಗಳು, ಕಾದಂಬರಿಯಲ್ಲಿ ಪ್ರಸ್ತಾಪಿಸಿದ ಪ್ರಾಣಿಗಳ ಪಟ್ಟಿ ಓದುಗನಿಗೆ ಅನುಕೂಲವಾಗುವಂತಿದೆ.
ನೆನಪಿನ ಜೇನಿನ ರೊಟ್ಟಿನಿಂದ ಮಧುರವಾದ ತುಪ್ಪವನ್ನು ಆಸ್ವಾದಿಸಲು, ಪರಿಸರದ ಅಧ್ಯಯನ, ಜಾನಪದದ ಮಾಹಿತಿ ಕುರಿತು, ಅದೆಲ್ಲಕ್ಕಿಂತ ಮುಖ್ಯವಾಗಿ ರಸ ಸ್ಪುರಣೆಯ ದೃಷ್ಟಿಯಿಂದ ಓದಲೇಬೇಕಾದ ಮಹತ್ವದ ಕೃತಿ ‘ ಮಧ್ಯಘಟ್ಟ’ ಎಂದು ನಿಶ್ಚಿತವಾಗಿ ಹೇಳಬಹುದು.
**********************

ಡಾ. ಅಜಿತ್ ಹರೀಶಿ

Leave a Reply

Back To Top