ನನ್ನ ಇಷ್ಟದ ಕವಿತೆ

ಪೂಜಾ ನಾಯಕ್

ಬೆಳಗು ಜಾವ

ರಚನೆ :ದ. ರಾ. ಬೇಂದ್ರೆ

ಏಳು ಚಿನ್ನ, ಬೆಳಗಾಯ್ತು ಅಣ್ಣ,

ಮೂಡಲವು ತೆರೆಯೆ ಕಣ್ಣ,

ನಕ್ಷತ್ರ ಜಾರಿ, ತಮವೆಲ್ಲ ಸೋರಿ,

ಮಿಗಿಲಹುದು ಬಾನ ಬಣ್ಣ

ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ,

ಜುಮ್ಮೆಂದು ಬಿಟ್ಟ ಮಾರ

ಗುಡಿಗೋಪುರಕ್ಕು, ಬಲೆ ಬೀಸಿ ಬಂದ,

ಅಗೋ ಬೆಳಕು-ಬೇಟೆಗಾರ.

ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ,

ಸೋತಿರಲು ಜಗವು ಸವಿಗೆ

ಕಣ್ಣಿದಿರು ಒಂದು, ಕಟ್ಟಿತ್ತು ಕನಸು;

ಕೂಗೊಂದು ಬಂತು ಕಿವಿಗೆ.

ಮಕ್ಕಳಿರ ಕೇಳಿ, ರಸ ಕುಡಿಯಲೇಳಿ,

ಹುಸಿನಿದ್ದೆಗಿದ್ದೆ ಸಾಕು

ಈ ತುಂಬಿಬಾಳು, ತುಂಬಿರುವ ತನಕ,

ತುಂತುಂಬಿ ಕುಡಿಯಬೇಕು.

ಯಾವಾಗೊ ಕೋಳಿ ಕೂಗಿಹುದು ಏಳಿ,

ತಡವೇಕೆ ಪಾನಕೇಳಿ

ಮೊದಲಾಗಲೀಗ, ಅಂಗಡಿಯ ಕದವ

ಈ ಕ್ಷಣಕೆ ತೆರೆಯ ಹೇಳಿ

ಜೀವನದ ನದಿಗೆ ಸೆಳವಿಹುದು,

ಮರಣ ಬಂದೀತು ಕ್ಷಣವು ಉರುಳಿ

ಹೋದವರು ತಿರುಗಿ ಬಂದಾರೆ,

ಅವರು ಬರಲಿಕ್ಕು ಇಲ್ಲ ಮರಳಿ.

ಬಾನ್ ಹೊಗರಲುಂಟು, ಮರ ಚಿಗುರಲುಂಟು,

ಬರಲುಂಟೆ ಸುಗ್ಗಿ ಮತ್ತೆ?

ಮುಳುಗಿರಲಿ ಮುಪ್ಪು ಚಿಂತನದಿ, ತಾನು

ಹರಯಕ್ಕೆ ಬೇರೆ ಹೊತ್ತೆ?


   ನಿಜವಾದ ಕವಿತೆಯೆಂಬುದು ತನ್ನಷ್ಟಕ್ಕೆ ತಾನೇ ಇಂದಿನವರೆಗೆ ಉಳಿದಿದೆ ಮತ್ತು ಎಂದೆಂದಿಗೂ ಉಳಿಯುತ್ತದೆ ಎಂಬುದಕ್ಕೆ ಆಧುನಿಕ ಕನ್ನಡ ಸಾಹಿತ್ಯದ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರಾದ ದ. ರಾ. ಬೇಂದ್ರೆಯವರ ‘ಬೆಳಗು ಜಾವ’ ಕವಿತೆಯೇ ಒಂದು ಉತ್ತಮ ನಿದರ್ಶನವಾಗಿ ಇಂದಿಗೂ ನಮ್ಮ ಮುಂದೆ ಇದ್ದು ಈ ಕವಿತೆಯನ್ನು ಓದಿದ ಎಷ್ಟೋ ಯುವಕರ ಬಾಳನ್ನು ಹಸನಾಗಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ . ಈ ಕವಿತೆಯನ್ನು ನಾನು ಮೊಟ್ಟಮೊದಲ ಬಾರಿ ಓದಿದ್ದು ನಾನು ದ್ವಿತೀಯ ಪಿಯುಸಿ  ಇರುವಾಗ ನಮ್ಮ ಕಾಲೇಜಿನ ಪಠ್ಯದಲ್ಲಿ.  ಅದ್ಯಾಕೋ ಗೊತ್ತಿಲ್ಲ ನನಗೆ ಈ ಕವಿತೆಯನ್ನು ಓದಿದಾಗ, ಒಂದು ಸಾರಿಯ ಓದಿಗೆ ಕೊನೆಗೊಳಿಸಬೇಕು ಎಂದೆನಿಸದೇ ಮಗದೊಮ್ಮೆ ಓದಬೇಕು ಎಂದೆನಿಸಿತು. ಆದರೆ ಮೊದಲ ಬಾರಿ ಓದಿದಾಗ ದ. ರಾ ಬೇಂದ್ರೆಯವರು ಕೇವಲ ಈ ಕವಿತೆಯಲ್ಲಿ ಮುಂಜಾನೆಯ ನಿಸರ್ಗದ ಸೌಂದರ್ಯವನ್ನಷ್ಟೇ ವರ್ಣನೆ ಮಾಡಿದ್ದಾರೆ ಎಂದು ಭಾವಿಸಿದ್ದೆ ತದನಂತರ ಈ ಕವಿತೆಯಲ್ಲಿ ಕೇವಲ ಬೆಳಗು ಜಾವದ ವರ್ಣನೆಯನ್ನಷ್ಟೇ ಮಾಡಿದ್ದಲ್ಲ, ಅದರಲ್ಲಿ ಯೌವನಿಗರಿಗೆ ನೀಡಿದ ಅದ್ಬುತವಾದ ಸಂದೇಶವನ್ನು ಕೂಡಾ ಕವಿ ತಮ್ಮ ಕವಿತೆಯೊಳಗೆ ಹುದುಗಿಸಿಟ್ಟಿದ್ದಾರೆ ಎಂದು ತಿಳಿದ ಬಳಿಕ ನನಗೆ ಈ ಕವಿತೆ ಇನ್ನೂ ಹೆಚ್ಚು ಇಷ್ಟವಾಯಿತು. ನವೋದಯ ಕವಿಗಳು ಪ್ರಕೃತಿ ಸೌಂದರ್ಯವನ್ನು ವರ್ಣಿಸುವ ಕೆಲವು ಪರಿಗಳನ್ನು ಇಲ್ಲಿ ಗಮನಿಸುವುದರ ಮುಖಾಂತರ ಬೆಳಗು ಜಾವದ ಅತ್ಯದ್ಭುತ  ಕಲ್ಪನೆ ಮತ್ತು ಅದರ ಮಹತ್ವವನ್ನು ನಾವು ಅರಿತುಕೊಳ್ಳಬಹುದು.

ಮೊದಲಿಗೆ ಸೂರ್ಯೋದಯದ ಸರಳ ಸುಂದರ ವರ್ಣನೆ ನೋಡಿ :

ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ,

ನಕ್ಷತ್ರ ಜಾರಿ, ತಮವೆಲ್ಲ  ಸೋರಿ, ಮಿಗಿಲಹುದು ಬಾನ ಬಣ್ಣ

ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ,

ಝಂ ಎಂದು ಬಿಟ್ಟ ಮಾರ

ಗುಡಿಗೋಪುರಕ್ಕು, ಬಲೆ ಬೀಸಿ ಬಂದ,

ಅಗೋ ಬೆಳಕು ಬೇಟೆಗಾರ.

ಇದು ಸುತ್ತಣ ನಿಸರ್ಗದಲ್ಲಿ ಒಂದು ಬೆಳಗಿನ ಸೌಂದರ್ಯಾನುಭವವನ್ನು ಪಡೆದ ಕವಿಯ ಉಲ್ಲಾಸದ ಕರೆಯನ್ನು ನೀಡಿದರೆ, ಮತ್ತೊಂದೆಡೆ ಯೌವನಿಗರಿಗೆ ಎಚ್ಚರಿಸುವ ಕರೆ! ಏನು ಸೋಜಿಗ ಈ ಕವಿಯ ರೀತಿ! ಪುಟ್ಟ-ಪುಟ್ಟ ಸಂಗತಿಯ ಸೌಂದರ್ಯವೂ ಕೂಡ ಇಲ್ಲಿ ಕವಿಗೆ ಸೋಜಿಗವಾಗಿ ಕಾಡಿದಂತಿದೆ. ಪ್ರಕೃತಿಯ ಅದ್ಭುತ ಸೌಂದರ್ಯ ತುಂಬಿ ತುಳುಕುವ ‘ಬೆಳಗು ಜಾವ’ ಕವನ ಮುಂಜಾನೆಯ ಚೈತನ್ಯ,ಶಾಂತಿ, ಉಲ್ಲಾಸ, ಆಹ್ಲಾದಗಳನ್ನು ಚೇತೋಹಾರಿಯಾಗಿ ವ್ಯಕ್ತ ಪಡಿಸುತ್ತದೆ. ಮೂಡಲ ಮನೆಯ ತೆರೆದ ಬಾಗಿಲಿನಿಂದ  ಹರಿದ ಹೊಂಬೆಳಕು ಜಗವನ್ನೆಲ್ಲಾ ಬೆಳಗಿರುವ ಇಲ್ಲಿನ ಕಲ್ಪನೆ ರಮೋಜ್ವಲವಾದುದು. ನಮ್ಮ ದ. ರಾ. ಬೇಂದ್ರೆಯವರು ಅಲೆ ಅಲೆಯಾಗಿ ಹೊಮ್ಮುವ ಪ್ರಕೃತಿ ಸೌಂದರ್ಯದ ಸಾಗರದೊಳಕ್ಕೆ ಮುಳುಗಿ ರಸಾನುಭವವನ್ನು ಪಡೆದಿದ್ದಾರೆ. ಅವರಿಗೆ ಈ ಒಂದು ಅನುಭವ ಕೇವಲ ಐಂದ್ರಿಕವಾಗಿರದೆ ಅಧ್ಯಾತ್ಮದ ಔನತ್ಯಕ್ಕೇರುವ  ಸ್ವರ್ಣ ಸೋಪಾನವೂ ಆಗಿದೆ ಎನ್ನಬಹುದು. ಬೆಳಗು ಜಾವ ಆನಂದಮಯವೆಂದೂ,  ಇದು ಪ್ರಕೃತಿ ನಮಗೆ ನೀಡಿದ ವರವೆಂದೂ ತಿಳಿದು ಆನಂದಿಸಿದ ಕವಿಗೆ ಅದರ ಇನ್ನೊಂದು ಮಗ್ಗಲು ತಿಳಿದಿತ್ತು. ಪ್ರಕೃತಿಯ ವರವಾದ ಬೆಳಗು ಜಾವದಲ್ಲಿ ಸೌಂದರ್ಯವಿರುವಂತೆ ಯೌವನಿಗರ ಬದುಕಿಗೆ ಅದಮ್ಯ ಚೈತನ್ಯವನ್ನು ತುಂಬುವ ಅಪಾರ ಶಕ್ತಿಯೂ ಕೂಡಾ ಇರುವುದು ಕವಿಗೆ ಕಾಣಿಸದೇ ಹೋಗಿಲ್ಲ. ಹಾಗಾಗಿಯೇ ಕವಿ ಅದನ್ನು ಗುರುತಿಸಿ ತನ್ನ ಕಾವ್ಯದಲ್ಲಿ ಚಿತ್ರಿಸಿದ್ದಾನೆ:

ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ,

ಸೋತಿರಲು ಜಗವು ಸವಿಗೆ

ಕಣ್ಣಿದಿರು ಒಂದು, ಕಟ್ಟಿತ್ತು ಕನಸು;

ಕೂಗೊಂದು ಬಂತು ಕಿವಿಗೆ.

ಮಕ್ಕಳಿರ ಕೇಳಿ, ರಸಕುಡಿಯಲೇಳಿ,

ಹುಸಿನಿದ್ದೆಗಿದ್ದೆ ಸಾಕು

ಈ ತುಂಬಿಬಾಳು, ತುಂಬಿರುವ ತನಕ,

ತುಂತುಂಬಿ ಕುಡಿಯಬೇಕು.

ತಮ್ಮ ಮೂರನೆಯ ಚೌಪದಿಯಲ್ಲಿ ಕವಿ ಇಂದಿನ ಯುವ ಪೀಳಿಗೆಗೆ, ತಮ್ಮ ಯೌವನದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದಿರಲಿ ಎಂದು ಎಚ್ಚರಿಕೆಯ ಗಂಟೆಯನ್ನು ಬಾರಿಸಿದಂತಿದೆ. ಜೀವನವೆಂಬ ನದಿಗೆ ಪ್ರವಾಹ ಬರಬಹುದು ಎಂದಿದ್ದಾರೆ ಅಂದರೆ ಯಾವಾಗ ಬೇಕಾದರೂ ಸಾವು ಪ್ರವಾಹದ ರೀತಿಯಲ್ಲಿ ಬಂದು ನಮ್ಮನ್ನು  ಎಳೆದೊಯ್ಯಬಹುದು. ಮರಣ ಬಂದ ಮೇಲೆ ಬದುಕಲು ಅವಕಾಶವಂತು ಇಲ್ಲವೇ ಇಲ್ಲ ಎಂದಾದ ಮೇಲೆ ಬದುಕಿರುವಾಗಲೇ ಯೌವನವನ್ನು ಸಾರ್ಥಕ ಪಡಿಸಿಕೊಳ್ಳಲು ದುಡಿಮೆಯಲ್ಲಿ ತೊಡುಗುವುದು ಉತ್ತಮವಲ್ಲವೇ? ಎಂದು ಹೇಳುವ ಮೂಲಕ ಇಂದಿನ ಎಷ್ಟೋ ಕರ್ತವ್ಯ ರಹಿತ ಯುವಕರನ್ನು ಸರಿ ದಾರಿಗೆ ತರುವ ಪ್ರಯತ್ನವನ್ನು ಕವಿ ತಮ್ಮ ಕವಿತೆಯ ಮೂಲಕವೇ ಮಾಡಿದ್ದಾರೆ.

ಹಾಗೆಯೇ ಕವಿ ವಸ್ತುವಿನ ಪೂರ್ತಿ ತಿರುಳನ್ನು ತಮ್ಮ ಕೊನೆಯ ಎರಡು ಚರಣಗಳಲ್ಲಿ ಈ ರೀತಿ ಚಿತ್ರಿಸಿದ್ದಾರೆ :

ಬಾನ್ ಹೊಗರಲುಂಟು, ಮರ ಚಿಗುರಲುಂಟು,

ಬರಲುಂಟೆ ಸುಗ್ಗಿ ಮತ್ತೆ?

ಮುಳುಗಿರಲಿ ಮುಪ್ಪು ಚಿಂತನದಿ, ತಾನು

ಹರಯಕ್ಕೆ ಬೇರೆ ಹೊತ್ತೇ?

ಆಕಾಶದಲ್ಲಿ ಒಮ್ಮೆ ಮೋಡ ಕವಿದು ಮಬ್ಬು ಆವರಿಸಿದ್ದರು ಕೂಡ ಮೋಡ ಸರಿದ ಮೇಲೆ ಮತ್ತೆ ಪ್ರಕಾಶಿಸಬಹುದು, ಒಂದು ಋತುವಿನಲ್ಲಿ ತನ್ನ ಪೂರ್ತಿ ಎಲೆಯನ್ನು ಉದುರಿಸಿ ಒಣಗಿದ ಮರ ಕೂಡ ಪುನಃ ಮತ್ತೆ ವಸಂತ ಋತುವಿನಲ್ಲಿ ಚಿಗುರಬಹುದು ಆದರೆ ಮನುಷ್ಯನ ಯೌವನದ ಕಾಲ ಕಳೆದು ಹೋದರೆ ಎಂದಿಗೂ ಹಿಂದಿರುಗಿ ಬರಲಾರದು ಆದ್ದರಿಂದ ಮುಪ್ಪು ಬಂದು ಆವರಿಸುವ ಚಿಂತೆ ಇರಲಿ ಹಾಗೆಯೇ ಯೌವನವು ಇನ್ನೊಮ್ಮೆ ಸಿಗುವುದಿಲ್ಲವೆಂಬ ಎಚ್ಚರವಿರಲಿ. ಈಗ ಹರೆಯ ಇರುವುದರಿಂದ ಎಲ್ಲ ಚಿಂತೆಯನ್ನು ಬದಿಗೊತ್ತಿ ದುಡಿಯಲು ಮುಂದಾಗಿ, ಯೌವನದ ಸಾರ್ಥಕತೆಯನ್ನು ಅನುಭವಿಸಿ ಎಂದು ಕರೆ ನೀಡಿದ್ದಾರೆ. ಈ ಕವಿತೆ ಇಂಗ್ಲಿಷಿನ ಸಾನೆಟ್ ಪ್ರಕಾರಕ್ಕೆ ಸಂವಾದಿಯಾಗಿ ಬಂದ ಸುನೀತ ಪ್ರಕಾರದಲ್ಲಿದ್ದು ಷೇಕ್ಸ್‌ಪಿರಿಯನ್ ಮಾದರಿಯಲ್ಲಿದೆ. ಈ ಮಾದರಿಯ ಸುನೀತಗಳಲ್ಲಿ ಹನ್ನೆರಡು ಚರಣಗಳು ಮೂರು ಚೌಪದಿಗಳಿಂದ ಕೂಡಿದ್ದು ಕೊನೆಯ ಎರಡು ಚರಣಗಳು ದ್ವಿಪದಿಯ ರೂಪದಲ್ಲಿವೆ. ಹಾಗೆಯೇ ಚೌಪದಿಯ ಮೊದಲ ಎರಡು ಸಾಲುಗಳು ಒಂದು ಪ್ರಾಸದಿಂದ ಕೂಡಿದ್ದರೆ ಕೊನೆಯ ಎರಡು ಸಾಲುಗಳು ಇನ್ನೊಂದು ಪ್ರಾಸವನ್ನು ಹೊಂದಿರುತ್ತವೆ. ಕಡೆಯ ದ್ವಿಪದಿ ಒಂದೇ ಪ್ರಾಸದಲ್ಲಿ ಮುಕ್ತಾಯವಾಗುತ್ತದೆ. ಈ ಪ್ರಾಸ ವಿನ್ಯಾಸದಲ್ಲಿ ರಚನೆಯಾದ ವಿಶಿಷ್ಟ ಕವನವಿದು.

ಈ ಕವಿತೆ ಯುವ ಪೀಳಿಗೆಗೆ ಎಚ್ಚರಿಸಲು ಹೇಳಿ ಮಾಡಿಸಿದ ಕವಿತೆಯಂತಿದೆ ಯಾಕೆ ಕೇಳಿದರೆ ಇಂದಿನ ಯುವ ಪೀಳಿಗೆ ಆಧುನಿಕತೆ,ವಿಜ್ಞಾನದ ಅತಿಯಾದ ಮುಂದುವರಿಕೆ,ನಾನಾ ಹೊಸ ಶೈಲಿಯ ಕಲಿಕಾ ಕ್ರಮದಲ್ಲಿ ಮೈಮರೆತು ಹಕ್ಕಿಯಂತೆ ಕೃತಕವಾಗಿ ಹಾರಾಡಿ, ಮೀನಿನಂತೆ ಕೃತಕವಾಗಿ ಈಜಿ, ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಕಾಲೂರಿ ಇನ್ನೂ ಅನೇಕಾನೇಕ ಸಾಹಸವನ್ನು ಮಾಡಿರಬಹುದು ಆದರೆ ಪ್ರಕೃತಿಯೇ ನಮಗೆ ನಿಸರ್ಗದತ್ತವಾಗಿ ನೀಡಿದ ಬೆಳಗು ಜಾವದ ಅದ್ಭುತ ಕ್ಷಣವನ್ನು ಅನುಭವಿಸುವುದರಲ್ಲಿ ಇರುವ ನೆಮ್ಮದಿ, ಸಂತೋಷ ಆಧುನಿಕತೆಯಲ್ಲಿ ಎಂದಿಗೂ ಸಿಗಲಾರದು ಹಾಗೆಯೇ ಮನುಷ್ಯನ ಬದುಕಿಗೆ ಬೇಕಾದ ಚೈತನ್ಯವನ್ನು ಸಹ ಆಧುನಿಕತೆ ಎಂದಿಗೂ ಕೊಡಲಾರದು. ಮನುಷ್ಯರೇ(ಯುವಕರೇ) ಯೌವನದ ಅವಧಿಯನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಅವರನ್ನು ಬಡಿದೆಬ್ಬಿಸಿ, ಬೆಳಗು ಜಾವದ ಮಹತ್ವವನ್ನು ಸಾರಿ ಹೇಳಿದ ದ. ರಾ. ಬೇಂದ್ರೆಯವರ ಈ ಕವಿತೆ ಎಂದೆಂದಿಗೂ ನನ್ನ ಅಚ್ಚುಮೆಚ್ಚು.

***************************

8 thoughts on “ನನ್ನ ಇಷ್ಟದ ಕವಿತೆ

  1. ಕಲ್ಪನಾತೀತ ಕವಿತೆಯನ್ನು ಕೆಲವೇ ಸಾಲುಗಳಲ್ಲಿ ಅದ್ಭುತವಾಗಿ ವರ್ಣಿಸಲಾಗಿದೆ.

  2. ನಿಸರ್ಗದ ಸೌಂದರ್ಯದ ಬೆಳಗಿನ ಜಾವಕ್ಕೆ ಯವ್ವನವನ್ನು ಹೋಲಿಸಿ ಬರೆದ ದ ರಾ ಬೇಂದ್ರೆಯವರಿಗೆ ಕೋಟಿ ನಮನಗಳು ಯುವಪೀಳಿಗಿಗೆ ಜೀವನದ ಅರಿವನ್ನು ಮೂಡಿಸಿ ಬಾಳ ಹಾದಿಯನ್ನು ತೋರುವ, ಉತ್ತೇಜಿಸುವ ಅದ್ಬುತ ಕವನ.. ನನ್ನ ನೆಚ್ಚಿನ ಕವನ ❤

Leave a Reply

Back To Top