ಧೂರ್ತ ಆಮೆ
ನೀ.ಶ್ರೀಶೈಲ ಹುಲ್ಲೂರು
ಹಂಸವೆರಡು ಕೊಳದ ಬಳಿ
ನೀರನರಸಿ ಬಂದವು
ನೀರು ಕುಡಿದು ತಣಿದ ಮೇಲೆ
ಆಮೆ ನೋಡಿ ನಿಂದವು
ಹರಟೆ ಮಲ್ಲ ಆಮೆ ತಾನೆ
ಕೊಳದ ರಾಜನೆಂದಿತು
ಅದನು ಇದನು ಏನೊ ಹೇಳಿ
ಅವುಗಳ ತಲೆ ತಿಂದಿತು
ಸರಿ,ನಾವು ಬರುವೆವಿನ್ನು
ಮತ್ತೆ ಸಿಗುವೆವೆಂದವು
ಬಿಡದ ಆಮೆ ನಡೆಯ ನೋಡಿ
ಮನದಿ ತಾವೆ ನೊಂದವು
ನನಗೆ ಕೊಳದ ಸಂಗ ಸಾಕು
ನದಿಯಲೀಜಬೇಕು
ಹಾಡಿ ಜಿಗಿದು ಕುಣಿದು ತಣಿದು
ಜಲದಿ ತೇಲಬೇಕು
ದಮ್ಮಯ್ಯ ಎನುವೆ ನಾನು
ಮಾಡಿ ನೀವ್ ಉಪಾಯವ
ಏನೆ ಬಂದರೂ ಸರಿಯೆ
ಗೆಲುವೆ ನಾ ಅಪಾಯವ
ಹಂಸವೆರಡು ಬಡಿಗೆ ತಂದು
ಆಚೆ ಈಚೆ ಹಿಡಿದವು
ನಡುವೆ ಆಮೆ ಬಡಿಗೆ ಕಚ್ಚ
ಲೆರಡು ಹಾರಿ ನಡೆದವು
ತುಸು ದೂರ ಸಾಗಿದೊಡನೆ
ಕಂಡಿತೊಂದು ಊರು
ಮಕ್ಕಳೆಲ್ಲ ಆಮೆ ಕಂಡು
ಕೂಗಿದರು ಜೋರು
ಕಲ್ಲನೆಸೆದು ಗೇಲಿ ಮಾಡೆ
ಆಮೆ ಕೋಪ ಸಿಡಿಯಿತು
ಬೈಯ್ಯಲೆಂದು ಬಾಯಿ ತೆರೆಯೆ
ಕೆಳಗೆ ಬಿದ್ದು ಮಡಿಯಿತು
ಹಮ್ಮು ಬಿಮ್ಮು ಬೇಡ ನಮಗೆ
ಬೇಡ ಕೋಪ ತಾಪ
ಮನಗಾಣಿರಿ ಮಕ್ಕಳೆಲ್ಲ
ಅವುಗಳೆಮಗೆ ಶಾಪ
******************