ಕಬ್ಬಿಗರ ಅಬ್ಬಿ – ಸಂಚಿಕೆ -7
ಕಾವ್ಯ, ವಾಸ್ತವ ಮತ್ತು ವಿಜ್ಞಾನಗಳು
ಮುಖಾಮುಖಿಯಾದಾಗ
ಕಾವ್ಯ, ವಾಸ್ತವ ಮತ್ತು ವಿಜ್ಞಾನಗಳು ಮುಖಾಮುಖಿಯಾದಾಗ
ಓಹ್! ನಮಸ್ಕಾರ ಸಾರ್!.. ಬನ್ನಿ..ಬನ್ನಿ.. ಹೀಗೆ ಬನ್ನಿ!
ಇದೇ ನೋಡಿ! ನಮ್ಮ ಕವಿಗಳ ಮನೆಯ ಡ್ರಾಯಿಂಗ್ ರೂಂ, ಎಷ್ಟು ವಿಶಾಲವಾಗಿದೆ ಅಲ್ವಾ.
ಕೆಲವೇ ಕೆಲವು ಪೀಠೋಪಕರಣಗಳು,
ಅವರಿವರು ಬಂದಾಗ, ಮುಖಕ್ಕೆ ಮುಖ ಕೊಟ್ಟು ಮಾತಾಡಲು,
ಕೆಲವೊಮ್ಮೆ ಮುಖವಾಡ ತೊಟ್ಟು ಮಾತಾಡಲೂ.
ಸ್ವರಗಳು ಕಂಪಿಸುವ ಮಾತುಗಳು,
ಸ್ವರಗಳು ಸರೀಸೃಪದ ಹಾಗೆ ಹರಿದಾಡುವ ಮಾತುಗಳು,
ಹಾವಿನಂತೆ ಬುಸುಗುಟ್ಟುವ ಮಾತುಗಳು,
ಏರು ಸ್ವರ, ತಗ್ಗು ಸ್ವರದ ಬೆನ್ನೇರಿ ಥಳತಳಿಸುವ ಮಾತುಗಳು ಸಾಮಾನ್ಯವೇ.
ಮಾತುಗಳು, ಮಾತುಗಳು ಖಡ್ಗ ಹಿಡಿದು ಕಾದಿ
ಮಾತು ಮಾತನ್ನು ತುಂಡರಿಸಿ ತುಂಡು ತುಂಡಾಗಿ ಮಾತುಗಳು ಕಸದ ಬುಟ್ಟಿ ಸೇರಿಯೋ
ಅಥವಾ ಕಣ್ಣೀರಾಗಿ ಹರಿದೋ,
ಕೊನೆಗೆ ಒಂದೇ ದೊಡ್ಡ ಮಾತು ಉಳಿದಂತೆ ಭಾಸವಾಗುತ್ತದೆ.
ಮಾತುಗಳು ಮುಖಾಮುಖಿಯಾದವೆಂದರೆ, ಅಲ್ಲಿ ಯುದ್ಧವೇ ನಡೆಯಬೇಕೆಂದಿಲ್ಲ.
ಮಾತುಗಳು ಪ್ರಣಯೋನ್ಮತ್ತ ಕಾಳಿಂಗಸರ್ಪಗಳ ಹಾಗೆ ಒಂದಕ್ಕೊಂದು ಸುತ್ತಿ ಆಟವಾಡಿ, ಶಾಂತವಾಗಿ
ಮಾತುಗಳು ಮೊಟ್ಟೆಯಿಟ್ಟು, ಕಾವು ಕೊಟ್ಟು ಹತ್ತಾರು ಮರಿಗಳಾಗಿ ಹರಿದಾಡುತ್ತವೆ.
ಕೆಲವೊಮ್ಮೆ ಮಾತುಗಳು ಗಂಟಲೊಳಗೇ ಇಂಗಿ, ಮೌನ ಮೌನಕ್ಕೇ ಮುಖವಾಗುವುದೂ ಇದೆ.
ಈ ಡ್ರಾಯಿಂಗ್ ರೂಂ ನಲ್ಲಿ, ಒಂದು ಕುರ್ಚಿ, ಟೇಬಲ್ಲು. ಆ ಕುರ್ಚಿಯಲ್ಲಿ ಕುಳಿತು, ರಾತ್ರೆ – ಜಗತ್ತು ಮಲಗಿದಾಗ, ಕಿಟಿಕಿಯಲ್ಲಿ ಇಣುಕುವ ಆಗಸದತ್ತ ಕಣ್ಣು ನೆಟ್ಟರೆ, ಕೆಲವೊಮ್ಮೆ ತಾರೆಗಳ ಮಾತುಗಳು ಇಳಿದು ಬಂದು, ಮನಸ್ಸೊಳಗೆ ಆವಿಷ್ಕರಿಸುತ್ತವೆ.
ಕೆ. ವಿ. ತಿರುಮಲೇಶ್ ಅವರ “ಮುಖಾಮುಖಿ” ಕವಿತೆಯಲ್ಲಿ ಒಂದು ದಷ್ಟ ಪುಷ್ಟ ಬೆಕ್ಕು,ಕವಿಯ ಡ್ರಾಯಿಂಗ್ ರೂಮ್ ಗೆ ನುಗ್ಗುತ್ತೆ. ಅವರದ್ದೇ ಸಾಲುಗಳು ಹೀಗಿವೆ.
“ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ
ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು
ಹಠಾತ್ತನೆ ನಿಂತಿತು. ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು.
ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ
ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ.
ತುಸು ಅಸಮಾಧಾನದಿಂದ ನನ್ನ ಕಡೆ ನೋಡಿತು.
ನಮ್ಮ ಕಣ್ಣುಗಳು ಪರಸ್ಪರ ನಟ್ಟು ಯಾರು ಮೊದಲು
ಮುಖ ತಿರುಗಿಸುವುದು ಎಂಬ ಒಂದು ವಿಧ
ಅಘೋಷಿತ ಯುದ್ಧದಲ್ಲಿ ಇಬ್ಬರೂ ತೊಡಗಿದೆವು.
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.”
ಬಂದದ್ದು ಬೆಕ್ಕು. ಪೀಚು ಪೀಚು ಬೆಕ್ಕಲ್ಲ, ದಷ್ಟಪುಷ್ಟ ಬೆಕ್ಕು. ಅದು ಮನುಷ್ಯನ ಡ್ರಾಯಿಂಗ್ ರೂಂಗೆ ಬಂದದ್ದು ಪ್ರಾಣಿ ಮನುಷ್ಯನ ಮುಖಾಮುಖಿ ಎಂಬುದು ನೇರವಾದ ಅರ್ಥ. ಆಮೇಲೆ ಮನುಷ್ಯ ಮತ್ತು ಪ್ರಾಣಿಯ ಅಘೋಷಿತ ದೃಷ್ಟಿಯುದ್ಧ,ಕವಿತೆಯುದ್ದಕ್ಕೂ.
ಈ ಕವಿತೆಯಲ್ಲಿ ಬಂದದ್ದು ನಿಜವಾದ ಬೆಕ್ಕು ಎಂದೇ ಅದರ ಅರ್ಥವೇ?. ಮನುಷ್ಯನ ಡ್ರಾಯಿಂಗ್ ರೂಂ, ಮನುಷ್ಯನ ಮನಸ್ಸು. ಆ ಮನಸ್ಸೊಳಗೆ ಒಂದು ಪ್ರಾಣಿ ಪ್ರಜ್ಞೆಯಿದೆ. ಮನುಷ್ಯ ಮೂಲತಃ ಪ್ರಾಣಿಯೇ ಆದ್ದರಿಂದ, ಅದು ದಷ್ಟಪುಷ್ಟ ಪ್ರಾಣಿ ಪ್ರಜ್ಞೆ. ಮನುಷ್ಯನ ಮನಸ್ಸೊಳಗೆ, ವಿಕಸಿತ,ಚಿಂತನಶೀಲ, ವಿವೇಚನಾಶೀಲ ಪ್ರಜ್ಞೆಯೂ ಇದೆ. ಅದು ಕವಿ. ಈ ಎರಡೂ ಪ್ರಜ್ಞೆಯೊಳಗೆ ನಡೆಯುವ ದೃಷ್ಟಿ ಯುದ್ಧ ಈ ಕವಿತೆಯಾಗಬಹುದು.
ಮೂರನೆಯದಾಗಿ, ಡ್ರಾಯಿಂಗ್ ರೂಂ, ಹೆಸರೇ ಹೇಳುವಂತೆ ಹೊಸ ಹೊಸ ಡ್ರಾಯಿಂಗ್ ಬರೆಯಲು ಉಪಯೋಗಿಸುವ ಕೋಣೆ. ಯಾವುದೇ ಹೊಸತನ್ನು ಬರೆಯುವಾಗ, ಹಳೆಯ, ವಿಚಾರಗಳು,ಹೊಸತನ್ನು ವಿರೋಧಿಸುತ್ತವೆ. ಬೆಕ್ಕು,ಪ್ರಾಣಿ, ಅದು ಮನುಷ್ಯನ ಹಳತು. ಡ್ರಾಯಿಂಗ್ ರೂಂ ನಲ್ಲಿ ಹೊಸತರ ಅನ್ವೇಷಣೆಯಲ್ಲಿ ತೊಡಗಿದಾಗ ದಷ್ಟ ಪುಷ್ಟವಾದ ( well established) ಬೆಕ್ಕು, ಹೊಸ ಡ್ರಾಯಿಂಗ್ ನ್ನು (ಚಿತ್ರ ಬಿಡಿಸುವುದನ್ನು) ವಿರೋಧಿಸುತ್ತೆ. ಹಾಗೆ ನಡೆಯುವುದು ದೃಷ್ಟಿಯುದ್ಧ.
ವಿಚಾರಗಳ ಒಂದಕ್ಕೊಂದು ಮುಖಾಮುಖಿ, ವರ್ತಮಾನ ಸಂಧಿಯಲ್ಲಿ, ಭೂತ ಭವಿಷ್ಯಗಳ ಮುಖಾಮುಖಿ. ಇನ್ನೂ ಹತ್ತು ಹಲವು ದೃಷ್ಟಿಯುದ್ಧ ನಮಗೆ ದಿನಾಲೂ ಅನುಭವಗ್ರಾಹ್ಯವಾಗುತ್ತೆ.
“ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.” ಮುಖಾಮುಖಿಯ ಮುಖ್ಯ ಅಂಗ, ಕಣ್ಣು. ಕಣ್ಣು ಎಂದರೆ, ನೋಟ, ಒಳನೋಟ. ಕಣ್ಣಿನ ಮೂಲಕ ನಾವು ನೋಡುವುದು ಎಂದರೆ, ನಮ್ಮ ಬದುಕಿನಲ್ಲಿ ನಂಬಿದ, ಅಳವಡಿಸಿದ ಸಿದ್ಧಾಂತದ,ಸಂಪ್ರದಾಯದ ಮೂಲಕ ನೋಡುವುದು ತಾನೇ. ಮುಖಾಮುಖಿಯಾದ ಬೆಕ್ಕಿನ ಕಣ್ಣು, ನಿಶ್ಚಲವಾಗಿ ದೃಷ್ಟಿಯುದ್ಧಕ್ಕೆ ಅಣಿಯಾಗಿ ನಿಂತಾಗ, ಆ ಕಣ್ಣುಗಳು ಸ್ಥಿರವಾದ, ಅಚಲಾಗಿ ನಂಬಿದ, ಬದಲಾಗಲು ನಿರಾಕರಿಸುವ ಸಿದ್ಧಾಂತವೇ?.
ತಿರುಮಲೇಶ್ ಅವರ ಅನನ್ಯ ಕವಿತೆ ಮುಖಾಮುಖಿಯ ಹಂದರ, ಕವಿಯ ಡ್ರಾಯಿಂಗ್ ರೂಂ ನೊಳಗೆ ನಡೆಯುವ ಬೆಕ್ಕು ಮತ್ತು ವ್ಯಕ್ತಿಯ ನಡುವಿನ ದೃಷ್ಟಿಯುದ್ಧ. ಹಾಗಂತ, ಈ ಮುಖಾಮುಖಿಯನ್ನು ಪ್ರಾಣಿ ಮತ್ತು ಮನುಷ್ಯನ ನಡುವೆ ನಡೆಯುವ ಡೈನಾಮಿಕ್ಸ್ ಗೆ ಮಾತ್ರ ಸೀಮಿತ ಗೊಳಿಸಿದರೆ, ನಮ್ಮ ಕಣ್ಣು ಕೂಡಾ, ಕವಿ ಹೇಳಿದ, ಬೆಕ್ಕಿನ ನಿಶ್ಚಲ ಕಣ್ಣುಗಳ ಹಾಗೆ ಸ್ಥಿರವೂ, ಸೀಮಿತವೂ ಆಗುತ್ತವೆ.
ಮುಖಾಮುಖಿ ಎಂಬ ಒಂದು ಸಹಜಕ್ರಿಯೆ, ನಮ್ಮ ಮನಸ್ಸೊಳಗೆ, ಮನಸ್ಸು ಮನಸ್ಸುಗಳ ನಡುವೆ, ಹಳೆ-ಹೊಸ ಜನರೇಶನ್ ಗಳ ನಡುವೆ, ಸಿದ್ಧಾಂತಗಳ ನಡುವೆ, ಕ್ರಿಯೆ-ಪ್ರತಿಕ್ರಿಯೆಗಳ ನಡುವೆ, ವೈರಸ್ಸು ಮತ್ತು ಬಿಳಿ ರಕ್ತ ಕಣಗಳ ನಡುವೆ, ಮಿಸೈಲು-ಮಿಸೈಲುಗಳ ನಡುವೆ, ತಾರೆಯೊಳಗೆ ನಿರಂತರ ನಡೆಯುವ ಗುರುತ್ವಾಕರ್ಷಣ ಶಕ್ತಿ ಮತ್ತು ಪರಮಾಣು ಸಂಯೋಗದಿಂದ ಉತ್ಪನ್ನವಾದ ಉಷ್ಣಚೈತನ್ಯದ ನಡುವೆ, ಮತ್ತು ನನ್ನ ಅರಿವಿಗೆ ಮೀರಿದ ನೂರಾರು ಪ್ರಕ್ರಿಯೆಗಳಲ್ಲಿ ನಡೆಯುತ್ತಲೇ ಇರುತ್ತೆ.
ಹೈದರಾಬಾದ್ ನ ಕನ್ನಡ ಕವಿ,
ಪ್ರಹ್ಲಾದ ಜೋಶಿಯವರ ಕವನ, ” ಕವಿ – ಕವಿಪತ್ನಿ ಯರ ಸಂವಾದ ” ಇಂತಹ ಒಂದು ಸಾತ್ವಿಕ ಮುಖಾಮುಖಿಯ, ಕಣ್ಣಿಗೆ ಕಣ್ಣಿಟ್ಟು ನೋಡುವ,ಅವಲೋಕಿಸುವ ಕವನ.
ಈ ಕವಿತೆಯಲ್ಲಿ, ಕವಿ ಮತ್ತು ಕವಿ ಪತ್ನಿಯರ ಸಂಭಾಷಣೆಯೇ ಕವಿತೆಯ ತಂತ್ರ. ಕವಿತೆಯಲ್ಲಿ ಮನೆಯಾಕೆ, ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ತರಲು ಕವಿಯನ್ನು ಮಾರ್ಕೆಟ್ ಗೆ ಕಳುಹಿಸುತ್ತಾಳೆ. ಕವಿ ಮಾರ್ಕೆಟ್ ನಿಂದ ವಾಪಸ್ ಬಂದಾಗ, ಕವಿ ತೊಟ್ಟ ಬಿಳಿ ಬಟ್ಟೆ ಪೂರಾ ಮಣ್ಣು ಮಣ್ಣಾಗಿದ್ದನ್ನು ನೋಡಿ ತನ್ನ ಸಾತ್ವಿಕ ಅಸಹನೆಯನ್ನು ಪ್ರಕಟಿಸುವುದೇ ಮೊದಲ ಪ್ಯಾರಾ.
” ಕವಿಯ ಪತ್ನಿ :
ಏನಾಗ್ಯದ ನೋಡರ‍್ಯಾ
ಸ್ವಲ್ಪನ ಅದನ ಮೈಮ್ಯಾಲೆ ಖಬರ
ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣೂ ಬಾರಾ
ಹಿಂಗ್ಯಾಕ ರಮರಾಡಿ ಮಾಡ್ಕೊಂಡು ಬಂದ್ರಿ
ಎಲ್ಲಾ ನನ್ನ ಹಣೇಬಾರಾ
ಗೊತ್ತಾಯ್ತು ನನಗ ಖಯಾಲಿಯೊಳಗ ಇದ್ದಿರಬೇಕು
ನೆಲ ನೋಡದ ಆಕಾಶ ನೋಡ್ತಿರಬಹುದು
ಅಥವಾ ಯಾವುದರ ಹೂವು ಕಂಡಿರಬೇಕು
ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು
ತೆರೆದು ಕಲ್ಪನಾಲೋಕ
ಹೊಕ್ಕು ಅದ್ರೊಳಗ ನೀವು ವಿಹಾರ ಮಾಡಿರಬೇಕು
ನಾ ಕೊಟ್ಟ ಸಾಮಾನಿನ ಪಟ್ಟಿ ಥಟ್ಟನೆ ನೆನಪಾಗಿ
ಸರ‍್ರನೆ ನೀವು ಭೂಮಿಗೆ ಇಳಿದಿರಬೇಕು
ಸಿಗದೆ ಕಕ್ಕಾಬಿಕ್ಕಿಯಾಗಿ ರಾಡಿಯೊಳಗ
ಜಾರಿ ಬಿದ್ದಿರಬೇಕು
ಏನು ಮಾಡಲಿ ಎಲ್ಲ ನನ್ನ ಹಣೇಬಾರಾ
ಎಷ್ಟು ಹಚ್ಚಿದ್ದೆ ಸಾಬೂಣು ಬಾರಾ”
ಇಲ್ಲಿ ಕವಿ ಪತ್ನಿ , ನೆಲ ಕಚ್ಚಿ ನಿಂತು, ಮನೆ ನಡೆಸುವ, ಜವಾಬ್ದಾರಿ ಹೊತ್ತವಳು. ಹಸಿವೆಯಾದರೆ, ಊಟ ಬಡಿಸಬೇಕು ತಾನೇ. ಕವಿತೆ, ಹಾಡು, ಭಾವನೆ ಬಡಿಸಿದರೆ ಹೊಟ್ಟೆ ತುಂಬಲಾರದು. ಆಕೆ ಒಂದು,ಸಾತ್ವಿಕ, ಸಾಂಸಾರಿಕ, ಭೌತಿಕ ಪ್ರಜ್ಞೆಗೆ ಪ್ರತಿಮೆ.
“ಸ್ವಲ್ಪನ ಅದನ ಮೈಮ್ಯಾಲೆ ಖಬರ
ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ
ಎಷ್ಟೋ ಸಾಬೂಣೂ ಬಾರಾ
ಹಿಂಗ್ಯಾಕ ರಮರಾಡಿ ಮಾಡ್ಕೊಂಡು ಬಂದ್ರಿ
ಎಲ್ಲಾ ನನ್ನ ಹಣೇಬಾರಾ”
ಎಂತಹ ಸಾತ್ವಿಕ, ಸಾಂಸಾರಿಕ, ವಾಸ್ತವ ಪ್ರಜ್ಞೆ. ಗಂಡನ ಬಟ್ಟೆ,ಸಾಬೂನು ಹಚ್ಚೀ ಹಚ್ಚೀ ತಿಕ್ಕಿ ತೊಳೆದು ಗಂಡನ ರೂಪಕ್ಕೆ ಸ್ವಚ್ಛತೆಯನ್ನು ಹೊಳಪನ್ನೂ ಕೊಟ್ಟರೆ, ಆತ ಮಣ್ಣು ಮೆತ್ತಿ ರಮರಾಡಿ ಮಾಡ್ಕೊಂಡು ಬರಬೇಕೇ. ಎಲ್ಲಾ ನನ್ನ ಹಣೇಬರಹ ಎನ್ನುವ ಆಕೆ ಹಳ್ಳಿಯ,ಮುಗ್ಧ ಪ್ರಜ್ಞೆ.
“ಗೊತ್ತಾಯ್ತು ನನಗ ಖಯಾಲಿಯೊಳಗ ಇದ್ದಿರಬೇಕು
ನೆಲ ನೋಡದ ಆಕಾಶ ನೋಡ್ತಿರಬಹುದು
ಅಥವಾ ಯಾವುದರ ಹೂವು ಕಂಡಿರಬೇಕು
ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು
ತೆರೆದು ಕಲ್ಪನಾಲೋಕ
ಹೊಕ್ಕು ಅದ್ರೊಳಗ ನೀವು ವಿಹಾರ ಮಾಡಿರಬೇಕು”
ಆಕೆ, ಕವಿಯ ಕಲ್ಪನಾ ಸಾಮ್ರಾಜ್ಯದ ಪರಿಚಯ ಕೊಡುವ ಸಾಲುಗಳಿವು. ಈ ಸಾಲುಗಳಲ್ಲಿ ಕವಿಯ ಪ್ರಜ್ಞೆ ನೆಲೆ ನಿಂತಿರುವ, ಭಾವ ಜಗತ್ತು, ಕಲ್ಪನಾ ಜಗತ್ತು ಆಕೆಯ ಮಾತುಗಳಲ್ಲಿ ಪ್ರಕಟವಾಗುತ್ತೆ. ಅದು ನಿಜವೂ ತಾನೇ.
“ಸರ‍್ರನೆ ನೀವು ಭೂಮಿಗೆ ಇಳಿದಿರಬೇಕು
ಸಿಗದೆ ಕಕ್ಕಾಬಿಕ್ಕಿಯಾಗಿ ರಾಡಿಯೊಳಗ
ಜಾರಿ ಬಿದ್ದಿರಬೇಕು”
ಕವಿಯ ಕಾವ್ಯಜಗತ್ತಿನಿಂದ ವಾಸ್ತವ ಜಗತ್ತಿಗೆ ಆತ ಜಾರಿ ಬಿದ್ದು ಅಂಗಿ ಕೊಳೆಯಾಗಿರಬಹುದು ಎಂದು ಆಕೆಯ ಅಂಬೋಣ.
ಈ ಪ್ಯಾರಾದಲ್ಲಿ, ಕವಿ ಪತ್ನಿಯ, ವಾಸ್ತವ,ಸಾಂಸಾರಿಕ,ಭೌತಿಕ ಪ್ರಜ್ಞೆ ಮತ್ತು ಕವಿಯ ಭಾವನಾತ್ಮಕ, ಕಲ್ಪನಾ ಪ್ರಜ್ಞೆಗಳ ನಡುವೆ ಮುಖಾಮುಖಿ ಸಂಭವಿಸಿದೆ. ಈ ಸಂವಾದದಲ್ಲಿ ಈ ಎರಡೂ ಪ್ರಜ್ಞೆಗಳು,ಅತ್ಯಂತ ಸಾತ್ವಿಕವಾಗಿ ತಾಕಲಾಡುತ್ತವೆ. ಆಕೆ ಕವಿಯನ್ನು ಭಾವನೆಯ ಲೋಕದಿಂದ ಸಾಬೂನು ಹಾಕಿ ತೊಳೆದು ಪುನಃ ವಾಸ್ತವಕ್ಕೆ ತರುವ ಪ್ರಯತ್ನ ಮಾಡುತ್ತಲೇ, ಮಾಡುತ್ತಲೇ ಇರುತ್ತಾಳೆ.
ಮುಂದಿನ ಪ್ಯಾರಾದಲ್ಲಿ ಕವಿ, ಸಾಮಾನು ತರಲು ಹೋದಾಗ ರಸ್ತೆಯಲ್ಲಿ, ತನ್ನ ಮತ್ತು ನೀಲ್ ಆರ್ಮ್‌ಸ್ಟ್ರಾಂಗ್ ನ ( ಚಂದ್ರನ ಮೇಲೆ ಮೊದಲು ಕಾಲಿಟ್ಟ ವ್ಯೋಮಯಾತ್ರಿ) ನಡುವಿನ ಸಂಭಾಷಣೆಯನ್ನು ಹೆಂಡತಿಗೆ ವಿವರಿಸುತ್ತಾನೆ.
ಚಂದ್ರನ ಬಗ್ಗೆ ಕವಿಗಳ ವರ್ಣನೆ ಕೇಳಿ ಚಂದಿರನ ಮೇಲೆ ಕಾಲಿಟ್ಟ ವ್ಯೋಮಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಗೆ ಅಲ್ಲಿ ,ಬರೇ ಮಣ್ಣು ಕಂಡು ಭ್ರಮನಿರಸನವಾದಾಗ ಆತನ ಪ್ರತಿಕ್ರಿಯೆ, ಕವಿಯತ್ತ, ಹೇಗಿರಬಹುದು?
ಕವಿತೆಯ ಸಾಲುಗಳು ಹೀಗಿವೆ.
“ಕವಿ:
ಸುಮ್ಮನಾಗು ಮಾರಾಯ್ತಿ, ಗುಟ್ಟಾಗಿ ಹೇಳ್ತೀನಿ
ರಟ್ಟಾದರ ನಮ್ಮರ‍್ಯಾದಿ ಪ್ರಷ್ನಿ
ಹೊಂಟಿದ್ದೆ ಹಿಡಿದು ನಂದಾರಿ
ನೀನಂದದ್ದು ನೆನಪಿನೊಳಗಿಟ್ಟು
ಕವಿತೆ ರಚಿಸುವ ಗೀಳು ಬಿಟ್ಟು
ಸೀದಾ ರಸ್ತೆ ಮ್ಯಾಲೆ ನನ್ನ ಕಣ್ಣು ನೆಟ್ಟು
ಮಾಡಲಿಲ್ಲ ಕವಿತೆಗೆ ವಿಷಯ ಹುಡುಕೊ ಉಸಾಬರಿ
ಅರಳಿದರೆ ಅರಳಲಿ ಎಂದೆ ಹೂವು
ಕೆರಳಿದರೆ ಕೆರಳಲಿ ಭಾವ
ಇದ್ದರೆ ಇರಲಿ ರಮ್ಯ ಸೂರ‍್ಯಾಸ್ತ ಇಂದಿನದೇನಲ್ಲ
ಅದು ನಾಳೆ ಇಲ್ಲವೆಂದಿಲ್ಲ
ಮುಗಿಯಲಿ ಮೊದಲು ಬಂದ ಕೆಲಸ ಅಂತ ಸಾಗಿದ್ದೆ
ಆಗ ಎಲ್ಲಿಂದಲೋ ಬಂದ ತುಂಟ ಪೋರ
ಬಿರ ಬಿರ ನಡೆದರೂ ಬಂದ ಹತ್ತಿರ
ಬಂದವನೆ ಎಸೆದ ತನ್ನ ಮುಷ್ಠಿಯೊಳಗಿನ ಮಣ್ಣು
ನಂಬಲಾರದಾದವು ನನ್ನ ಕಣ್ಣು
ತಬ್ಬಿಬಾಗಿ ಕೇಳಿದೆ ಪೋರನ
ನಾನೇನು ಮಾಡಿದೆ ಎಂದು ಕೊಳೆ ಮಾಡಿದಿ
ನಾ ಧರಿಸಿದ ಉಡುಪು
ಏನು ಹೇಳಲಿ ನನ್ನ ಮನೆಯಾಕೆಗೆ
ಸಾಬೂನಿನ ಜೊತೆ ಶುಭ್ರ ಪ್ರೀತಿಯನು ಹಚ್ಚಿ
ಹೇಗೆ ಹೋಗಬೇಕು ಕಲೆ
ಅಂದರ ಏನನಬೇಕು ತುಂಟ ಪೋರ
“ಇರಲಿ ಕಡೀತನ ಈ ಕಲೆ
ಕವಿ ಅಲ್ಲವೆ ನೀವು –
ಕಲ್ಪನೆಯ ಕುದುರೆಯನೇರಿ ಇಲ್ಲದನು ಬಣ್ಣಿಸುವ ಕಲೆ
ಅಲ್ಲವೆ ನಿಮಗೆ ಕರಗತ
ಹೊಗಳಲಿಲ್ಲವೆ ನೀವು ಚಂದಿರನ ಸತತ
ಸುಂದರಿಯರ ನೋಡಿ ಇಂದುಮುಖಿ ಎಂದಿರಿ
ಕಾವ್ಯಗಳ ಪುಟಗಳಲಿ ತುಂಬಿಸಿದಿರಿ
ಚಂದಿರ ಬೆಳದಿಂಗಳು ಕರ್ನೈದಿಲೆಗಳಿಂದ
ನೀವು ಹೇಳಿದ್ದು ಕೇಳಿ ಬಾಯಾಗ ನೀರೂರಿ
ಹೋದೆ ಅಲ್ಲೀತನಕ ಆಸ್ವಾದಿಸಲು ಸೌಂದರ್ಯ
ಆದರ ಅಲ್ಲಿ ಸಿಕ್ಕಿದ್ದೇನು
ನಿನ್ನ ಮ್ಯಾಲೆ ಎಸೆದ ಮಣ್ಣು”
ಅಂತ ಅನಬೇಕ
ಬಿಡಲಿಲ್ಲ ನಾನು, ಕೇಳಿದೆ ನೀ ಇರೋದು ಎಲ್ಲೆ
ನಿನ್ನ ಹೆಸರೇನು ಅಂದರ
“ ನನ್ನ ಹೆಸರು ನೀಲ್ ಆರ್ಮ್‌ಸ್ಟ್ರಾಂಗ್” ಅಂತ ಹೇಳಿ
ಓಡ ಬೇಕ ಮಿಂಚಿನ ವೇಗದಾಗ
ಸಿಗದ್ಹಾಂಗ ಕೈಗೆ
ಆದದ್ದು ಹೇಳ ಬ್ಯಾಡ ಮಾರಾಯ್ತಿ ಯಾರಿಗೂ
ಮನಸಿನಾಗೇ ಇಟ್ಕೋ ಮರ‍್ಯಾದಿ ಪ್ರಷ್ನಿ”
,ಇಲ್ಲಿ ನಮಗೆ ಕವಿಯ,ಕಾವ್ಯಪ್ರಜ್ಞೆ ಮತ್ತು, ವ್ಯೋಮಯಾತ್ರಿಯ ಭೌತಿಕ ವೈಜ್ಞಾನಿಕ ಪ್ರಜ್ಞೆಯ ನಡುವಿನ ಮುಖಾಮುಖಿ ಕಾಣ ಸಿಗುತ್ತೆ. ಈ ಮುಖಾಮುಖಿ, ಸಾತ್ವಿಕವಲ್ಲ. ಹಿಂಸಾತ್ಮಕ. ಕವಿಯ ಮೇಲೆ ಮಣ್ಣೆಸೆದ ತುಂಟ ಹುಡುಗನ ಮಾತುಗಳು, ಕಾವ್ಯಪ್ರಜ್ಞೆಯನ್ನು ಅವಹೇಳನ ಮಾಡುತ್ತೆ.
“ಕವಿ ಅಲ್ಲವೆ ನೀವು –
ಕಲ್ಪನೆಯ ಕುದುರೆಯನೇರಿ ಇಲ್ಲದನು ಬಣ್ಣಿಸುವ ಕಲೆ
ಅಲ್ಲವೆ ನಿಮಗೆ ಕರಗತ
ಹೊಗಳಲಿಲ್ಲವೆ ನೀವು ಚಂದಿರನ ಸತತ
ಸುಂದರಿಯರ ನೋಡಿ ಇಂದುಮುಖಿ ಎಂದಿರಿ
ಕಾವ್ಯಗಳ ಪುಟಗಳಲಿ ತುಂಬಿಸಿದಿರಿ
ಚಂದಿರ ಬೆಳದಿಂಗಳು ಕರ್ನೈದಿಲೆಗಳಿಂದ
ನೀವು ಹೇಳಿದ್ದು ಕೇಳಿ ಬಾಯಾಗ ನೀರೂರಿ
ಹೋದೆ ಅಲ್ಲೀತನಕ ಆಸ್ವಾದಿಸಲು ಸೌಂದರ್ಯ
ಆದರ ಅಲ್ಲಿ ಸಿಕ್ಕಿದ್ದೇನು
ನಿನ್ನ ಮ್ಯಾಲೆ ಎಸೆದ ಮಣ್ಣು”
ಚಂದ್ರನನ್ನು, ಇಂದುಮುಖಿ,ಅಂದದ್ದು, ಬೆಳದಿಂಗಳು ಹೀರಿ ಕರ್ನೈದಿಲೆ ಎಂಬ ಹೂ ಅರಳಿದ್ದು ಇತ್ಯಾದಿ ವಿವರಣೆ ಕೇಳಿ, ವಿಜ್ಞಾನಿ ಸಂಶೋಧನೆಗಾಗಿ ಚಂದ್ರನ ಮೇಲಿಳಿದರೆ,ಆತನಿಗೆ ಸಿಕ್ಕಿದ್ದು ಬರೇ ಮಣ್ಣು!
ಆ ಮಣ್ಣನ್ನು ಕವಿಯ ಶುಭ್ರ ಬಿಳಿಯ ಉಡುಪಿನ ಮೇಲೆಸೆಯುವ ವಿಜ್ಞಾನಿಯ ಕ್ರಮ ಹಿಂಸಾತ್ಮಕವೂ ಭಾವರಹಿತವೂ ಆಗಿರುವುದು, ವಿಜ್ಞಾನ ಎಷ್ಟು ನಿರ್ಭಾವುಕ,ಹಲವು ಬಾರಿ ಅಮಾನವೀಯ ಮತ್ತು ಕತ್ತಿಯ ಅಲಗಿನಂತೆ ಹರಿತವೂ ಆಗಿದೆ ಎಂದು ತೋರಿಸುತ್ತೆ. ವಿಜ್ಞಾನ ತನಗೊಪ್ಪದ ವಾದವನ್ನೆಲ್ಲಾ ಕತ್ತರಿಸುತ್ತದೆ,ಖಡಾಖಂಡಿತವಾಗಿ ನಿರಾಕರಿಸುತ್ತದೆ.
ಹೀಗೆ ಮಣ್ಣೆರಚಿ ತುಂಟ ಹುಡುಗ ಕವಿಯ ಕೈಗೆ ಸಿಗದೆ ಓಡಿ ಹೋಗುವುದು, ವಿಜ್ಞಾನ, ಕವಿಯ ವ್ಯಾಪ್ತಿಗೆ ಮೀರಿದ ವಿಷಯ ಅಂತ ಸೂಚಿಸುತ್ತೆ.
ಹೀಗೆ, ಈ ಕವಿತೆಯಲ್ಲಿ ಕವಿ ಮಧ್ಯದಲ್ಲಿ ನಿಂತು, ಎರಡು ಮುಖಾಮುಖಿಗೆ ಕಾರಣನಾಗುತ್ತಾನೆ.
ಮೊದಲನೆಯದ್ದು, ಸಾಂಸಾರಿಕ,ವಾಸ್ತವ, ಸಾತ್ವಿಕ ಪ್ರಜ್ಞೆ ಮತ್ತು ಕಾವ್ಯ ಪ್ರಜ್ಞೆಯ ಮುಖಾಮುಖಿ.
ಎರಡನೆಯದು ವೈಜ್ಞಾನಿಕ ಪ್ರಜ್ಞೆ ಮತ್ತು ಕಾವ್ಯಪ್ರಜ್ಞೆಯ ಮುಖಾಮುಖಿ. ಇದು ವೈಜ್ಞಾನಿಕ ಪ್ರಜ್ಞೆಯ ಡಾಮಿನೇಷನ್ ನಲ್ಲಿ ಅಂತ್ಯವಾಗುತ್ತೆ.
“ಆದದ್ದು ಹೇಳ ಬ್ಯಾಡ ಮಾರಾಯ್ತಿ ಯಾರಿಗೂ
ಮನಸಿನಾಗೇ ಇಟ್ಕೋ ಮರ‍್ಯಾದಿ ಪ್ರಷ್ನಿ”
ಕವಿ ಹೆಂಡತಿಗೆ ಹೇಳುವ ಮರ್ಯಾದಿ ಪ್ರಶ್ನಿ, ಸಾಮಾನ್ಯ ಬದುಕಿನ ಸಂಕೋಚ, ತೋರಿಸಿದರೆ, ಮಣ್ಣೆರಚಿ ಓಡುವ ವಿಜ್ಞಾನಿ ಅತ್ಯಂತ ಬೇಷರಮ್ ಆಗಿ ಕಾಣಿಸುತ್ತಾನೆ. ವಿಜ್ಞಾನಕ್ಕೆ ,ಭಾವವಿಲ್ಲ,ಅದಕ್ಕೇ ಅದು ತನಗೆ ಸತ್ಯವೆನಿಸಿದ್ದನ್ನು ಬಚ್ಚಿಡುವುದಿಲ್ಲ.
ಕವಿ, ಕವಿಪತ್ನಿ, ಮತ್ತು ನೀಲ್ ಆರ್ಮ್‌ಸ್ಟ್ರಾಂಗ್, ಮೂವರೂ, ಮೇಲೆ ವಿವರಿಸಿದ ಮೂರು ಪ್ರಜ್ಞೆಗಳಿಗೆ ಪ್ರತಿಮೆಗಳು. ಈ ಕವಿತೆ ಮೂರು ಪಾತ್ರಗಳ ಸಂಭಾಷಣೆಯಾದರೂ, ಈ ಮೂರೂ ಪ್ರಜ್ಞೆಗಳು, ಪ್ರತಿಯೊಬ್ಬ ಮನುಷ್ಯನ ಮನಸ್ಸೊಳಗೆ ಇದ್ದು, ಸಮಯ ಸಮಯದಲ್ಲಿ, ಮುಖಾಮುಖಿಯಾಗಿ ತಾಕಲಾಟವನ್ನು ನಡೆಸುತ್ತವೆ.
*********************************************************
ಲೇಖಕರ ಬಗ್ಗೆ:
ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ವಾಹ್ ! ಕಾವ್ಯ ಪ್ರಜ್ಞೆಯಲ್ಲಿ ವಿಜ್ಞಾನದ ರಸದೂಟ
ಲೇಖಕರೆ ನಿಮಗೆ ಅಭಿನಂದನೆಗಳು ಸಾಹಿತ್ಯ ವಿಜ್ಞಾನದ ಸಂಘರ್ಷ ಗಂಡ ಹೆಂಡತಿಯರ ಸಂಘರ್ಷದಂತೆ ಸೊಗಸಾಗಿದೆ ನಿಮ್ಮ ಬರಹ ರಸವತ್ತಾಗಿದೆ
ಅನಾಮಿಕ ಅವರೇ. ಕಾವ್ಯಾರ್ಥಗಳು ಕೈಹಿಡಿದು ನಡೆಸಿದ ಹಾಗೆ ನಡೆದೆ. ತುಂಬಾ ಧನ್ಯವಾದಗಳು
ವಾಹ್ !ಸೊಗಸಾಗಿದೆ ರಸವತ್ತಾಗಿದೆ ಲೇಖನ
ಕಾವ್ಯ ಪ್ರಜ್ಞೆ ಯಲ್ಲಿ ವಿಜ್ಞಾನದ ರಸದೂಟ ವಿಜ್ಞಾನ ಮತ್ತು
ಸಾಹಿತ್ಯದ ಸಂಘರ್ಷ ಗಂಡ ಹೆಂಡತಿಯರ ಸಂಘರ್ಷದಂತೆ ಎರಡೂ ಮುಖಾಮುಖಿ ಯಾದಾಗ ಮತ್ತೊಂದು ರೀತಿಯ ಗಂಧ ! ಲೇಖಕರೆ ಅಭಿನಂದನೆಗಳು
ಅನಾಮಿಕಾ ಅವರೇ.
ಕಾವ್ಯಪ್ರಜ್ಞೆಯ ಜತೆಗೆ ವಿಜ್ಞಾನ ಮತ್ತು ನಿಜಜೀವನ ಸದಾ ಮುಖಾಮುಖಿ ಆಗುತ್ತೆ.
ನಿಮ್ಮ ಅಮೂಲ್ಯ ಅಭಿಪ್ರಾಯ ನನಗೆ ತುಂಬಾ ಮುಖ್ಯ.
ಧನ್ಯವಾದಗಳು
ಪ್ರಹ್ಲಾದ್ ಜೋಷಿ
ಮಹಾದೇವ ಅವರೆ, ‘ ಕಬ್ಬಿಗರ ಅಬ್ಬಿ’ ಅಂಕಣಕ್ಕೆ, ನನ್ನ ಕವಿತೆಯನ್ನು ಆಯ್ಕೆ ಮಾಡಿ , ಅದನ್ನು ವಿಶದವಾಗಿ ವಿಶ್ಲೇಷಣೆ ಮಾಡಿದ್ದಕ್ಕೆ ಅನೇಕ ಧನ್ಯವಾದಗಳು.
ಹಿರಿಯ ಕವಿ ಹಾಗೂ ಕನ್ನಡ ಸಾಹಿತ್ಯದ ದಿಗ್ಗಜರಾದ ತಿರುಮಲೇಶ್ ಅವರ ‘ ಮುಖಾ ಮುಖಿ’ ಕವನದ ಹಿನ್ನೆಲೆಯಿಂದಾಗಿ ವಿಷಯಕ್ಕೆ ಬೃಹತ್ ಕ್ಯಾನ್ವಾಸ್ ದೊರಕಿದೆ; ಇದು ನನ್ನ ಸೌಭಾಗ್ಯ ವೆಂದು ಭಾವಿಸುತ್ತೇನೆ.
ತಿರುಮಲೇಶ್ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಬಹಳ ಉದಾತ್ತ, ಸ್ನೇಹ ಪರ ಹಾಗೂ ಅಂತಃಕರಣ ಕೂಡಿದ ವೈಕ್ತಿ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು. ಅವರಿಂದ ಬಹಳಷ್ಟು ಕಲಿತಿದ್ದೇನೆ. ಅವರು ಯಾವಾಗಲೂ ನನ್ನ ಬರಹದ ಬಗ್ಗೆ ಪ್ರೀತಿ – ಆಸಕ್ತಿಗಳನ್ನು ತೋರಿ, ನನಗೆ ಪ್ರೋತ್ಸಾಹ ನೀಡಿದ್ದಾರೆ.
ನೀವು ಕವನವನ್ನು ಬಗೆಯುವ ರೀತಿ ಬಹಳ ಅನನ್ಯವಾಗಿದೆ. ಇದೇ ರೀತಿ, ನಿಮ್ಮ ಸಾಹಿತ್ಯ ಕೃಷಿ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ
ಪ್ರಹ್ಲಾದ ಜೋಶಿ ಸರ್.
ತಿರುಮಲೇಶ್ ಸರ್ ಮತ್ತು ನಿಮ್ಮ ಆತ್ಮೀಯ ಗುರು ಶಿಷ್ಯ ಸಂಬಂಧ ಕವಿತೆಯ ಹೊಳಹಲ್ಲಿ ಮಿನುಗಿದರೂ, ನಿಮ್ಮದೇ ಆದ ಶೈಲಿ ರೂಢಿಸಿ, ಉತ್ತರಕರ್ನಾಟಕದ ರಸಭರಿತ ಕನ್ನಡದಲ್ಲಿ ಬರೆದ ಕವಿತೆ ನಿಮ್ಮದು.
ನಿಮ್ಮ ಪ್ರೋತ್ಸಾಹ ನನಗೆ ಯಾವಾಗಲೂ ಪ್ರೇರಣೆ ಸರ್.