ಕಾವ್ಯಯಾನ

ಕವಿತೆ

ನನ್ನ ಶ್ರಾವಣ

ಅನಿತಾ ಪಿ. ಪೂಜಾರಿ ತಾಕೊಡೆ.

ಕರುಳ ನಂಟಿನ ಪ್ರೀತಿ ಪ್ರತಿರೂಪಗಳ
ಕಂಡುಂಡು ಬೆಳೆದ ಮನೆಯ
ಹೊಸ್ತಿಲು ದಾಟಿದೆನಲ್ಲ ಅಂದು
ಬಾಳಿ ಬದುಕುವ ಮನೆಗೆ ಬಲಗಾಲಿಟ್ಟು

ನೆನಪಿನ್ನೂ ಹಸಿರೇ ಶ್ರಾವಣ ಸಿರಿಯಂತೆ
ಅಂದು ಮೊದಲ ಬಾರಿ ತವರಿಗೆ ಬಂದಾಗ
ಮುಳ್ಳನ್ನು ಬದಿಗೊತ್ತಿ ಖುಷಿಯ ಹೂವುಗಳನ್ನೇ ಬಿಡಿಸಿಟ್ಟಿದ್ದು…

ಶ್ರಾವಣ ಕಳೆದು
ಒಲ್ಲದ ಮನಸನು ಮೆಲ್ಲನೆ ಒಲಿಸಿ ಮುಂದೆ ನಡೆದಾಗ
ಕಳೆದ ದಿನಗಳು ಸುತ್ತ ಸುಳಿದು.
ಶ್ರಾವಣವೇ ನಿಲ್ಲು ನಿಲ್ಲೆಂದು ಮರುಗಿದ್ದು

ಈಗಲೂ ಶ್ರಾವಣವೆಂದರೆ ಅದೇನೋ ಸೆಳವು
ಅಲ್ಲಿರುವ ಸಲುಗೆ ಇಲ್ಲಿರುವ ಬೆಸುಗೆ
ಅಲ್ಲಿರುವ ಪ್ರೀತಿ ಇಲ್ಲಿರುವ ನೀತಿ
ಎಲ್ಲವೂ ಬೇರೆ ಬೇರೆ

ಸಂಸಾರ ಸೂತ್ರದ ಹಲವ ಪಾತ್ರಗಳ
ಜೊತೆಯಲೇ ಕಳೆದು ಹೋಗುತಿದೆ ಶ್ರಾವಣ
ಏಗಿ ಮಾಗಿ ಬಾಗಿ ತೂಗಿ ತುಂಬಿದ ಬದುಕನು
ಉತ್ತು ಈಗ ನಗೆಯ ಬೀಜವನೇ ಬಿತ್ತಿದ್ದೇನೆ
ಹಳೆಯ ನೆನಪುಗಳ ಬೇರೂ ಗಟ್ಟಿಯಾಗಿವೆ

*************************************

13 thoughts on “ಕಾವ್ಯಯಾನ

  1. ನಿಮ್ಮ”ಶ್ರಾವಣ”ದ ನೆನಪಿನಾಳದಲ್ಲಿ ತವರಿನ ಸುಂದರ ಹಾಗೂ ಆ ಸುಖದ ಪರಿಮಳವಿದೆ.

  2. Beautiful narration of maintaining cordial relationship between paternal home n matrimonial home, upkeeping traditional values through your writing.

  3. ಬರೆದವೆಲ್ಲ ಅಭಿವ್ಯಕ್ತ ಪ್ರಸಾದವು, ನಿಮ್ಮ ಒಳಿತಿನ ಸ್ಮಾರಕಗಳು

    ವೈವಿಧ್ಯಮಯ ಜೀವನದ ಸೂತ್ರಗಳು ಪ್ರಕೃತಿಯಲ್ಲಿನ ಸಮನ್ವಯ ಹೊದಿಕೆಗಳು

    ಬೆರೆತವು ಬಾಳಿನ ಅಮೃತ ಗಳಿಕೆಯ ಪವಾಡಗಳಷ್ಟೆ

    ಬಿಡಲು, ತೊರೆಯಲು ಅನುಭವ ಸ್ಪಂದಿಸುವ ಸೂಕ್ಷ್ಮ ಪ್ರಹರದ ಮಾಲಿಕೆಯ ಕ್ಷಣಗಳಲ್ಲಿ

    ಮುಕ್ತವಾಗುವ ಪರಿ ಅನಾವರಣ ಸಕ್ಷಮವಾದಲ್ಲಿ

    ಮೋಕ್ಷ ಫಲವಾಗಿ ವಿಜ್ರಂಭಿಸುವುದೇ ಪ್ರಕೃತಿಯ ನಿಗೂಢತೆ

    ಇದುವೇ ಸಾಕ್ಷಾತ್ಕಾರ ಪರಮತತ್ವ – primordial essence … ಶುಭಂ

Leave a Reply

Back To Top