ಕವಿತೆ
ಏಕಾಂತದ ನಿರೀಕ್ಷೆಯಲ್ಲಿ
ತೇಜಾವತಿ.ಹೆಚ್.ಡಿ.
ಬಹಳ ಖುಷಿಯಾಗಿದ್ದೆ ನಾನು
ಹರೆಯದ ವಯಸ್ಸಿನಲ್ಲಿ ಮೂಡಿದ
ಅಸ್ಪಷ್ಟ ಕನಸುಗಳಿಗೆ ರೆಕ್ಕೆಪುಕ್ಕ ಕಟ್ಟಿಕೊಂಡು
ನನ್ನದೇ ಕಲ್ಪನಾ ಲೋಕದಲ್ಲಿ ತಾರೆಯಾಗಿ ಪ್ರಜ್ವಲಿಸಿದ್ದೆ
ದಿಂಬಿಕೆ ತಲೆಗೊಡುವುದೇ ತಡ
ನಿದ್ರಾದೇವಿಗೆ ಶರಣಾಗುತ್ತಿದ್ದೆ
ಗುಡಿಸಿಲಿನ ಅಂಗಳದಿ ಕುಳಿತು
ಅರಮನೆಯ ರಾಣಿಯಾಗಿದ್ದೆ
ಅತೀ ಸೂಕ್ಷ್ಮ ಸಂವೇಗಗಳಿಗೂ ಪ್ರತಿಕ್ರಿಯಿಸುತ್ತಾ
ಚಳಿಗೆ ಬೆಂಕಿ ಕಾಯಿಸುವಾಗ
ಮಾರು ದೂರವಿರುವಾಗಲೇ
ನೆಗೆದು ಹೌಹಾರಿ ಬೀಳುತ್ತಿದ್ದೆ
ಎಡವಿದ ಕಲ್ಲಿಗೂ ಕಂಬನಿಗರೆದು
ಮಳೆಯಲ್ಲಿ ತೋಯುತ್ತಿದ್ದೆ
ಪುಟ್ಟ ಪುಟ್ಟ ಕಂಗಳಲಿ ದೊಡ್ಡ ದೊಡ್ಡ ಖುಷಿಯ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದೆ
ಪ್ರತಿ ವೀಕೆಂಡ್ ಬಂತೆಂದರೆ ಸಾಕು
ಕಾಲಿಗೆ ಚಕ್ರ ಕಟ್ಟಿದವಳಂತೆ ಗರಗರ ಗಿರಕಿ ಹೊಡೆಯುತ್ತಿದ್ದೆ
ಬರುಬರುತ್ತಾ….
ಕಾಯ ಗಟ್ಟಿಗೊಂಡು
ಮನಸ್ಸು ಪಕ್ವವಾಗಿ
ಚರ್ಮ ಸುಕ್ಕುಗಟ್ಟಿ
ಅಂತರಂಗ ಬಹಿರಂಗಗಳೆರಡರ ಆದ್ಯತೆಗಳೊಂದಿಗೆ
ಕಾಲ ಬದಲಾಯಿತು
ಪರಿಸ್ಥಿತಿ ಬದಲಾಯಿತು
ಈಗ ನಾನೂ ಕೂಡ..
ಬದಲಾವಣೆ ಜಗದ ನಿಯಮ
ಕೆಂಡ ಮುಟ್ಟಿದರೂ ಕೈ ಸುಡುತ್ತಿಲ್ಲ ಈಗ
ಅಕ್ಷಿಗಳ ಸನಿಹವೇ ಸ್ವರ್ಗ ತೋರಿಸಿದರೂ ತೇಲಾಡುವ ಮರ್ಜಿಯಿಲ್ಲ
ಮನೆ -ರಸ್ತೆಗಳ ತುಂಬೆಲ್ಲಾ ವಾಹನಗಳ ಕಾರುಬಾರಿದ್ದರೂ ತಿರುಗಾಡಬೇಕೆನಿಸುತ್ತಿಲ್ಲ
ಪಟ್ಟದರಸಿಯಾಗಿರುವೆ…
ಆದರೀಗ ಭವದ ಭೋಗಗಳನ್ನೇ ತೊರೆದಿರುವೆ
ಸದ್ಯಕ್ಕೆ ಮನಸ್ಸು ಮತ್ತೇನನ್ನೋ ಬಯಸುತ್ತಿದೆ
ದೂರದ ಬೆಳಕನೊಂದ ಅರಸಿ ಹೊರಟಂತಿದೆ
ಗತಿಸಿದ ಖುಷಿಯನ್ನು ಮತ್ತೆ ಪಡೆಯಲು ಏಕಾಂತದಿ….
*****************************