ಅಂಕಣ ಬರಹ
ಹೂವು ಹೊರಳುವ ಹಾದಿ
ಬಾಲ್ಕನಿ ಎಂದಾಗಲೆಲ್ಲ ನನಗೆ ಹೂವಿನ ಕುಂಡಗಳು ನೆನಪಾಗುತ್ತವೆ. ಪುಟ್ಟಪುಟ್ಟ ಕುಂಡಗಳ ಕೆಂಪು ಗುಲಾಬಿ, ಗುಲಾಬಿ ಬಣ್ಣದ ನುಣುಪಾದ ಕುಂಡಗಳಲ್ಲರಳಿದ ದುಂಡು ಮಲ್ಲಿಗೆ, ದುಂಡನೆಯ ಕುಂಡದಲ್ಲೊಂದು ಹಸುಗೂಸಿನಂಥ ಮೊಳಕೆ, ಮೊಳಕೆಯೊಂದು ಮೊಗ್ಗಾಗುವ ಪ್ರಕ್ರಿಯೆ ಹೀಗೆ ಹೂಗಳ ದೊಡ್ಡದೊಂದು ಪ್ರಪಂಚವೇ ಪುಟ್ಟ ಬಾಲ್ಕನಿಯಲ್ಲಿ ಎದುರಾಗುತ್ತದೆ. ಅರಳಿಯೂ ಅರಳದಂತಿರುವ ಕೆಂಪು ದಾಸವಾಳ ಬೆಳಗನ್ನು ಸ್ವಾಗತಿಸಿದರೆ, ಮುಳುಗುವ ಸೂರ್ಯನನ್ನು ಮಲ್ಲಿಗೆಯ ಪರಿಮಳ ಬೀಳ್ಕೊಡುತ್ತದೆ; ಮಧ್ಯರಾತ್ರಿಯಲ್ಲಿ ಅರಳಿದ ಬ್ರಹ್ಮಕಮಲಗಳೆಲ್ಲ ಚಂದಿರನಿಗೆ ಜೊತೆಯಾಗುತ್ತವೆ. ಸಮಯ ಸಿಕ್ಕಾಗ ಹೂಬಿಡುವ ನಾಗದಾಳಿ, ಡೇರೆಗಳೆಲ್ಲ ನಿತ್ಯವೂ ಅರಳುವ ನಿತ್ಯಪುಷ್ಪದೊಂದಿಗೆ ಸ್ನೇಹ ಬೆಳೆಸುತ್ತವೆ. ಹೀಗೆ ಎಲ್ಲೆಗಳನ್ನೆಲ್ಲ ಮೀರಿದ ಬಣ್ಣಬಣ್ಣದ ಸ್ನೇಹಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತದೆ.
ಸ್ನೇಹ ಎನ್ನುವುದೊಂದು ಸುಂದರ ಸಂಜೆಯಂಥ ಅನುಭವ. ಹಸಿರು ಹುಲ್ಲಿನ ಬೆಟ್ಟಗಳ ಅಂಚಿನಲ್ಲಿ, ಉದ್ದಗಲಕ್ಕೂ ಹರಡಿಕೊಂಡ ಸಮುದ್ರದ ಮಧ್ಯದಲ್ಲಿ, ಆಗಸಕ್ಕೆ ಅಂಟಿಕೊಂಡಂತಿರುವ ಅಪಾರ್ಟ್ಮೆಂಟಿನ ಹೆಲಿಪ್ಯಾಡ್ ಪಕ್ಕದಲ್ಲಿ, ಕಾಫಿಯ ಘಮಕ್ಕೆ ಜೊತೆಯಾಗುವ ಕಾದಂಬರಿಯ ಸಂಜೆಯ ವರ್ಣನೆಯಲ್ಲಿ, ಮೊಬೈಲಿನ ಗ್ಯಾಲರಿಯ ಸನ್ ಸೆಟ್ ವಿಡಿಯೋಗಳಲ್ಲಿ ಇಂಚಿಂಚೇ ಮರೆಯಾಗುವ ಸೂರ್ಯನ ಸೌಂದರ್ಯವೇ ಸ್ನೇಹಕ್ಕೂ ಲಭ್ಯವಾಗಿದೆ. ಸೂರ್ಯ ಹುಟ್ಟುವ, ಮುಳುಗುವ ಪ್ರಕ್ರಿಯೆಗಳೆಲ್ಲ ಕಲ್ಪನೆಗಳಲ್ಲಿ ಬಗೆಬಗೆಯ ರೂಪ ಪಡೆಯುವಂತೆ ಸ್ನೇಹದ ಭಾವನೆಯೂ ಅವರವರ ಕಲ್ಪನೆಗಳಿಗನುಸಾರವಾಗಿ ವಿಸ್ತರವಾಗುತ್ತ ಹೋಗುತ್ತದೆ. ಇಂಗುಗುಂಡಿಗಳ ನಿಂತ ನೀರಿನೊಂದಿಗೆ ಕಪ್ಪೆಯ ಸಂಸಾರ ಸ್ನೇಹ ಬೆಳಸಿಕೊಂಡರೆ, ಏಲಕ್ಕಿಯ ಸುಳಿಗಳ ನಡುವಿನಲ್ಲೊಂದು ಹಸಿರುಹಾವು ಸದ್ದುಮಾಡದೆ ಸರಿದಾಡುತ್ತದೆ; ನಂದಾದೀಪದ ಬತ್ತಿಯೊಂದು ಎಣ್ಣೆಯೊಂದಿಗೆ ಸ್ನೇಹವನ್ನು ಬೆಳಸಿದರೆ, ತೀರ್ಥದ ತಟ್ಟೆಯಲ್ಲೊಂದು ತುಳಸಿದಳ ತಣ್ಣಗೆ ತೇಲುತ್ತಿರುತ್ತದೆ; ಸ್ನೇಹದಿನದ ಮೆಸೇಜೊಂದು ಮೊಬೈಲ್ ತಲುಪುವ ವೇಳೆ, ನೆನಪಿನ್ನಲ್ಲಷ್ಟೇ ಉಳಿದುಹೋದ ಸ್ನೇಹವೊಂದು ಮುಗುಳ್ನಗೆಯನ್ನು ಅರಳಿಸುತ್ತದೆ; ಎರೆಹುಳುವಿನೊಂದಿಗಿನ ಹೂವಿನ ಸ್ನೇಹ ನೀರಿನ ಸಖ್ಯದಲ್ಲಿ ಜೀವಂತವಾಗಿರುತ್ತದೆ.
ಈ ಜೀವಂತಿಕೆಯ ಪರಿಕಲ್ಪನೆಯಲ್ಲಿ ಹೂವಿಗೊಂದು ವಿಶೇಷ ಮಹತ್ವ ಪ್ರಾಪ್ತಿಯಾಗಿದೆ. ದೇವರ ತಲೆಯಿಂದುದುರಿ ಪ್ರಸಾದದ ರೂಪ ಪಡೆದುಕೊಳ್ಳುವ ಹೂವಿನಿಂದ ಹಿಡಿದು ಪಬ್ಬಿನ ರಿಸೆಪ್ಷನ್ನಿನ ಹೂದಾನಿಗಳವರೆಗೂ ಬಗೆಬಗೆಯಾಗಿ ಹರಡಿಕೊಳ್ಳುವ ಹೂವುಗಳು ಸ್ನೇಹ ಪ್ರೇಮ ಸೌಂದರ್ಯಗಳ ಜೀವಂತಿಕೆಯಲ್ಲಿ, ಧಾರ್ಮಿಕತೆಯ ಭಾವನೆಗಳಲ್ಲಿ, ಆಧುನಿಕತೆಯ ಮನಸ್ಥಿತಿಯಲ್ಲಿ ತಮ್ಮದೇ ಮಹತ್ವವನ್ನು ಉಳಿಸಿಕೊಂಡಿವೆ. ಸ್ನೇಹಿತೆಯೊಬ್ಬಳು ತನ್ನ ಮನೆಯಂಗಳದಲ್ಲಿ ಅರಳಿದ ಹೂವಿನ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸುವ ಹೊತ್ತು, ಪ್ರೇಮಿಯ ಹೃದಯದಲ್ಲೊಂದು ಕೆಂಪು ಗುಲಾಬಿ ಅರಳುತ್ತದೆ; ಹೆಣ್ಣನ್ನು ವರ್ಣಿಸಲು ಪದಗಳೇ ಸಿಗದ ಕವಿಯೊಬ್ಬ ಹೂವಿನೊಂದಿಗೆ ಹೋಲಿಸಿ, ಅವರವರ ಭಾವಕ್ಕೆ ತಕ್ಕ ಸೌಂದರ್ಯದ ಪರಿಕಲ್ಪನೆಗಳನ್ನು ಹುಟ್ಟುಹಾಕುತ್ತಾನೆ; ಕೆಸರಿನಲ್ಲಿ ಅರಳಿದ ಕಮಲವೊಂದು ಸಾರ್ಥಕತೆಯ ಭಾವದಲ್ಲಿ ದೇವರ ಮುಡಿಗೇರುತ್ತದೆ; ಬರ್ಥ್ ಡೇ ಪಾರ್ಟಿಗಳ ಉಡುಗೊರೆಗಳೊಂದಿಗೆ ಹೂಗುಚ್ಛಗಳು ನಳನಳಿಸುತ್ತವೆ. ಹೀಗೆ ಹೂವು ಎನ್ನುವ ಸುಂದರ ಸೃಷ್ಟಿ ಎಲ್ಲರ ಭಾವ-ಭಕ್ತಿಗಳಿಗೆ ನಿಲುಕುತ್ತ, ಸಂಬಂಧಗಳಿಗೆ ಹೊಸ ಆಯಾಮವನ್ನು ಒದಗಿಸುತ್ತ, ಸುಂದರವಾದ ನೆನಪುಗಳನ್ನು ಹುಟ್ಟುಹಾಕುತ್ತದೆ.
ಆ ನೆನಪುಗಳಲ್ಲಿ ಕನ್ನಡ ಶಾಲೆಯ ಉದ್ದ ಜಡೆಯ ಅಕ್ಕೋರಿನ ನೆನಪೂ ಸೇರಿಕೊಂಡಿದೆ. ಪ್ರೈಮರಿ ಸ್ಕೂಲಿನ ಟೀಚರನ್ನು ಮಕ್ಕಳಷ್ಟೇ ಅಲ್ಲದೇ ಊರಿನವರೆಲ್ಲ ಅಕ್ಕೋರು ಎಂದೇ ಕರೆಯುತ್ತಿದ್ದರು. ಟೀಚರುಗಳ ಹೆಸರಿನ ಮುಂದೆ ಅಕ್ಕೋರು ಎಂದು ಸೇರಿಸಿದರೆ ಅವರು ಆ ಭಾಗದ ಪ್ರೈಮರಿ ಟೀಚರೆನ್ನುವುದು ಎಲ್ಲರಿಗೂ ಅರ್ಥವಾಗುತ್ತಿತ್ತು. ಶಾಲೆಯಿಂದ ಸ್ವಲ್ಪ ದೂರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಮ್ಮ ಉದ್ದ ಜಡೆಯ ಅಕ್ಕೋರು ಕಾಲ್ನಡಿಗೆಯಲ್ಲೇ ಶಾಲೆಗೆ ಬರುತ್ತಿದ್ದರು. ಅವರು ಬರುವ ಸಮಯಕ್ಕೆ ಸರಿಯಾಗಿ ಅವರನ್ನು ಸೇರಿಕೊಳ್ಳುತ್ತಿದ್ದ ನಾವೆಲ್ಲ ಜಡೆಯನ್ನು ನೋಡಲೆಂದೇ ಅವರಿಂದ ನಾಲ್ಕು ಹೆಜ್ಜೆ ಹಿಂದೆಯೇ ಉಳಿಯುತ್ತಿದ್ದೆವು. ಸೀರೆಯ ಬಣ್ಣಕ್ಕೆ ಹೊಂದುವಂತಹ ರಬ್ಬರ್ ಬ್ಯಾಂಡನ್ನೋ, ಲವ್ ಇನ್ ಟೋಕಿಯೋ ಹೇರ್ ಬ್ಯಾಂಡನ್ನೋ ಧರಿಸುತ್ತಿದ್ದ ಅವರ ಜಡೆಯ ಸೌಂದರ್ಯದ ಚರ್ಚೆ ಊರಿನ ಮನೆಮನೆಗಳಲ್ಲಿಯೂ ಆಗುತ್ತಿತ್ತು.
ಪ್ರತಿದಿನ ಬೆಳಿಗ್ಗೆ ಅಮ್ಮ ತೆಂಗಿನೆಣ್ಣೆಯನ್ನು ಹಚ್ಚಿ ತಲೆ ಬಾಚಿ ಎರಡೂ ಜಡೆಗಳನ್ನು ರಿಬ್ಬನ್ನಿನಿಂದ ಮಡಚಿ ಕಟ್ಟಿ, ಆಯಾ ಸೀಸನ್ನಿನಲ್ಲಿ ಅರಳುತ್ತಿದ್ದ ಹೂವನ್ನು ಮುಡಿಸುತ್ತಿದ್ದಳು. ಹಾಗೆ ಅಮ್ಮ ನನಗಾಗಿ ಹೂ ಕೊಯ್ಯುವಾಗಲೆಲ್ಲ ನಾನು ಅಕ್ಕೋರ ಸಲುವಾಗಿಯೂ ಹೂವೊಂದನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ಮಳೆಗಾಲದ ಡೇರೆ-ನಾಗದಾಳಿಗಳು, ಮಳೆಗಾಲ ಮುಗಿಯುತ್ತಿದ್ದಂತೆ ಅರಳಲು ಆರಂಭವಾಗುತ್ತಿದ್ದ ಗುಲಾಬಿ-ಸೇವಂತಿಗೆಗಳು ಹೀಗೆ ಎಲ್ಲ ಹೂವಿನ ಗಿಡಗಳ ಮೇಲೂ ಅಕ್ಕೋರ ಹೆಸರು ಕೂಡಾ ಬರೆದಿರುತ್ತಿತ್ತು. ಹಾಗೆ ಅಕ್ಕೋರ ಹೆಸರು ಹೊತ್ತ ಹೂವನ್ನು ಗಾಳಿ-ಮಳೆಗಳಿಂದ ಜೋಪಾನ ಮಾಡಿ, ಪ್ರೀತಿಯಿಂದ ಶಾಲೆಗೆ ಒಯ್ದು ಅವರ ಕೈಗೆ ಕೊಡುತ್ತಿದ್ದೆ. ನಗುನಗುತ್ತಾ ಅವರು ಅದನ್ನು ಸ್ವೀಕರಿಸುವ ಹೊತ್ತು ಒಂದು ರೀತಿಯ ವಿಚಿತ್ರವಾದ ಧನ್ಯತೆಯ ಭಾವ ಮನಸ್ಸನ್ನು ಆವರಿಸುತ್ತಿತ್ತು. ನನ್ನಂತೆಯೇ ದಿನಕ್ಕೆ ನಾಲ್ಕೈದು ಮಕ್ಕಳಾದರೂ ತಂದುಕೊಡುತ್ತಿದ್ದ ಹೂವುಗಳು ಅಕ್ಕೋರಿನ ಗುಂಗುರು ಕೂದಲ ಜಡೆಯನ್ನು ಅಲಂಕರಿಸುತ್ತಿದ್ದವು. ಮಳೆಗಾಲದಲ್ಲಂತೂ ಅವರ ಮೇಜಿನ ಮೇಲೆ ಬಣ್ಣಬಣ್ಣದ ಡೇರೆ ಹೂವುಗಳು ತುಂಬಿಹೋಗಿರುತ್ತಿದ್ದವು. ಸಂಜೆ ಶಾಲೆ ಮುಗಿದಮೇಲೆ ಅವರು ತಪ್ಪದೇ ಅವುಗಳನ್ನೆಲ್ಲ ನೀಟಾಗಿ ಜೋಡಿಸಿಕೊಂಡು ಪ್ರೀತಿಯಿಂದ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈಗಲೂ ಬಾಲ್ಕನಿಯಲ್ಲಿ ಗುಲಾಬಿಯೊಂದು ಅರಳಿದರೆ ಅಕ್ಕೋರಿನ ನಗು, ಆ ನಗು ನನ್ನಲ್ಲಿ ಮೂಡಿಸುತ್ತಿದ್ದ ಧನ್ಯತೆಯ ಭಾವ, ಅವರು ಹೂಗಳನ್ನು ಕೈಯಲ್ಲಿ ಹಿಡಿದು ಮನೆಗೆ ಹೋಗುವಾಗ ಸೆರಗಿನೊಂದಿಗೆ ಸ್ಪರ್ಧೆಗಿಳಿದಂತೆ ತೂಗಾಡುತ್ತಿದ್ದ ಉದ್ದನೆಯ ಜಡೆ ಎಲ್ಲವೂ ನೆನಪಾಗುತ್ತವೆ. ಚಿಕ್ಕಪುಟ್ಟ ಸಂಗತಿಗಳಲ್ಲೂ ಸಂಭ್ರಮ-ಸಾರ್ಥಕತೆಗಳನ್ನು ಕಾಣುತ್ತಿದ್ದ ಬಾಲ್ಯದ ನೆನಪುಗಳನ್ನು ಬಾಲ್ಕನಿಯ ಹೂಗಿಡಗಳೊಂದಿಗೆ ಜೋಪಾನ ಮಾಡಿ ನೀರೆರೆಯುತ್ತೇನೆ.
ಹಾಗೆ ನೀರೆರೆದು ಪೋಷಿಸುವ ನೆನಪುಗಳಲ್ಲಿ ದಿನಕ್ಕೊಂದು ಹೊಸ ಬಗೆಯ ಹೂವುಗಳು ಅರಳುತ್ತಲೇ ಇರುತ್ತವೆ. ತಾನು ಪ್ರೀತಿಯಿಂದ ಬೆಳಸಿದ ಗುಲಾಬಿ ಗಿಡಗಳಲ್ಲಿ ಅರಳುತ್ತಿದ್ದ ಹೂವುಗಳನ್ನು ಕಿತ್ತು ನನ್ನ ಮುಡಿಗೆ ಮುಡಿಸುತ್ತಿದ್ದ ಪಕ್ಕದ ಮನೆಯ ಅಕ್ಕ, ತೋಟದಲ್ಲಿ ಹಬ್ಬಿದ್ದ ಮಲ್ಲಿಗೆ ಬಳ್ಳಿಯ ಸುತ್ತ ನೆರೆಯುತ್ತಿದ್ದ ಹೆಣ್ಣುಮಕ್ಕಳ ದೊಡ್ಡ ಗುಂಪು, ದೇವರ ಕಾರ್ಯದ ದಿನ ಬೆಳಿಗ್ಗೆ ಬೇಗ ಎದ್ದು ಹೂಮಾಲೆ ಕಟ್ಟುತ್ತ ಸುಪ್ರಭಾತ ಹಾಡುತ್ತಿದ್ದ ಅತ್ತೆ, ಕೇರಿಯ ಮಕ್ಕಳು-ಗಂಡಸರೆಲ್ಲ ಸೇರಿ ಬೆಟ್ಟ-ಗುಡ್ಡಗಳನ್ನು ಅಲೆದು ಗೌರಿ ಹೂವನ್ನು ತಂದು ಮಂಟಪ ಕಟ್ಟುತ್ತಿದ್ದ ಚೌತಿಹಬ್ಬದ ಸಂಭ್ರಮ ಹೀಗೆ ಹೂವಿನೊಂದಿಗೆ ಪರಿಮಳದಂತೆ ಬೆರೆತುಹೋದ ನೆನಪುಗಳು ಯಾವತ್ತಿಗೂ ಬಾಡುವುದಿಲ್ಲ. ಕಾಲೇಜಿನ ಹುಡುಗ ಕೊಟ್ಟಿದ್ದ ಕೆಂಪು ಗುಲಾಬಿಯ ಒಣಗಿದ ಎಸಳುಗಳು ಕೀರ್ತನೆಯ ಪುಸ್ತಕದೊಳಗೋ, ರಂಗೋಲಿ ಪಟ್ಟಿಯೊಳಗೋ ಈಗಲೂ ಇರಬಹುದು; ಮಲ್ಲಿಗೆಯ ಮಾಲೆ ಮುಡಿದಿದ್ದ ಉದ್ದ ಜಡೆಯ ಫೋಟೋಗಳು ಹಳೆಯ ಆಲ್ಬಮ್ ಗಳಲ್ಲಿ ಬೆಚ್ಚಗೆ ಕುಳಿತಿರಬಹುದು; ಮೈತುಂಬ ಹೂವಿರುವ ಸೀರೆ ಉಟ್ಟ ಹೂವಿನಂಥ ನಾಯಕಿಯ ಹಾಡೊಂದು ಹೈವೇ ಪಕ್ಕದ ಡಾಬಾದಲ್ಲಿ ಪ್ಲೇ ಆಗುತ್ತಿರಬಹುದು; ರಸ್ತೆಯಂಚಿನ ಸಂಪಿಗೆ ಮರದಲ್ಲಿ ಅರಳಿದ ಹೂಗಳ ಪರಿಮಳ ಮುಚ್ಚಿದ ಬಾಗಿಲುಗಳು ತೆರೆಯುವುದನ್ನೇ ಕಾಯುತ್ತಿರಬಹುದು.
*******
ಲೇಖಕರ ಬಗ್ಗೆ ಎರಡು ಮಾತು:
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಹೂವು ಹಲವು ಸಂಗತಿಗಳ ಜೊತೆ ಹಾಸುಹೊಕ್ಕಾಗಿ ನಮ್ಮ ಜೀವನದ ಜೊತೆ ಬೆರೆತಿರುವ ಪರಿ ಎಷ್ಟು ಚೆನ್ನ!