ಹೆಣ್ಣೊಡಲಾಳದ ನೋವಿನ ದನಿಗಳು

ಅಂಕಣ ಬರಹ



ಊರ ಒಳಗಣ ಬಯಲು
ಲೇಖಕಿ-ವಿನಯಾ
ಪ್ರಕಾಶಕರು- ಛಂದ ಪುಸ್ತಕ
ಬೆಲೆ-೪೦/-


             ನಮ್ಮ ಮನೆಯಿಂದ ಒಂದುವರೆ ಕಿ.ಮಿ ಹೋದರೆ ಗಂಗಾವಳಿ ನದಿ ಸಮುದ್ರಕ್ಕೆ ಸೇರುವ ಸ್ಥಳ ಬರುತ್ತದೆ. ಅಲ್ಲಿಯೇ ಸ್ವಲ್ಪ ಹಿಂದೆ ಗಂಗಾವಳಿ ನದಿಯನ್ನು ದಾಟಿಸುವ ಸ್ಥಳವಿದೆ. ಮೊದಲೆಲ್ಲ ದೋಣಿಯಲ್ಲಿ ದಾಟಿಸುತ್ತಿದ್ದರು. ಈಗ ದೊಡ್ಡದೊಂದು ಬಾರ್ಜು ಬಂದಿದೆ. ಮಕ್ಕಳಿಗೆ ಒಂದು ಚಂದದ ಅನುಭವವಾಗಲೆಂದು ಕೆಲವೊಮ್ಮೆ ಅಲ್ಲಿಂದ ಬಾರ್ಜಿನಲ್ಲಿ ದಾಟಿ ಸಮೀಪದ ಮಾಸ್ಕೇರಿ ಎಂಬ ಊರಿಗೆ ಹೋಗಿ ಬರುವುದೂ ಇದೆ. ಕೆಲವೊಮ್ಮೆ ಅಲ್ಲಿಂದ ಒಂದೆರಡು ಕಿ.ಮಿ ದೂರ ಇರುವ ಗೋಕರ್ಣಕ್ಕೂ ಹೋಗಿ ಬರುವುದಿದೆ. ಮೊದಲ ಕಥೆಯನ್ನು ಓದುತ್ತಲೇ ಮತ್ತೆ ಇದೆಲ್ಲವನ್ನೂ ನೆನಪಿಸಿ, ಒಮ್ಮೆ ಮಾಸ್ಕೇರಿಗೆ ಹೋಗಬೇಕು ಎನ್ನುವ ಭಾವ ಹುಟ್ಟಿಸಿದ ಪುಸ್ತಕ ವಿನಯಾ ಒಕ್ಕುಂದರವರ ಊರೊಳಗಣ ಬಯಲು ಎನ್ನುವ ಕಥಾ ಸಂಕಲನ. ಮೊದಲ ಕಥೆ ಒಬ್ಬ ಹುಡುಗಿ ತನ್ನದೇನೂ ತಪ್ಪಿಲ್ಲದೇ ಹುಡುಗನ ಬರೀ ಬಾಯಿ ಮಾತಿನ ತೆವಲಿಗೆ ಬಲಿಯಾಗಿ ಇಡೀ ಹದಿಹರೆಯ ಹಾಗು ಯೌವ್ವನದ ದಿನಗಳನ್ನು ಅಂಜುತ್ತ, ಉಳಿದವರ ಅನುಮಾನದ ದೃಷ್ಟಿಗೆ ಪಕ್ಕಾಗಿ ನೋಯುತ್ತ ನವೆದ ಕಥೆಯಿದೆ. ಹದಿಮೂರು ವರ್ಷದ ಹುಡುಗಿಯನ್ನು ಅದಾವ ಕಾರಣಕ್ಕಾಗಿ ತನ್ನ ಪ್ರಿಯತಮೆ ಎಂದು ಸುದ್ದಿ ಹಬ್ಬಿಸಿದ ಎಂಬುದು ಕೊನೆಗೂ ಅರ್ಥವಾಗುವುದಿಲ್ಲ. ಅದೆಷ್ಟೋ ವರ್ಷಗಳ ನಂತರ ಪುನಃ ದೋಣಿ ದಾಟಲು ಬಂದವಳು ಅಕಸ್ಮಾತಾಗಿ ಅವನನ್ನು ಕಂಡು ಹಳೆಯದ್ದನ್ನೆಲ್ಲ ನೆನಪಿಸಿಕೊಂಡು ಬರೆಯುವ ಪತ್ರ ಈ ಕಥೆ. ಇಲ್ಲಿ ಬರುವ ಹಲವಾರು ಮನೆಗಳ ಹೆಸರುಗಳು ಅದೆಷ್ಟು ಆಪ್ತವೆಂದರೆ ನಾನೇ ಆ ಜಾಗದಲ್ಲಿ ಇದ್ದೆನೇನೋ ಎಂಬ ಭಾವ. ಗಾಂವಕರ ಮನೆಯ ಯಾರು ಹೀಗೆ ಮಾಡಿದ್ದು ಎಂಬ ಊಹೆ, ಒಟ್ಟಿನಲ್ಲಿ ಕಥೆ ಎಂಬುದು ಕಥೆಯಾಗಷ್ಟೇ ಉಳಿಯದೇ ಇದು ನನ್ನದೇ ಬದುಕಿನ ಒಂದುಚಭಾಗ ಎನ್ನಿಸುವಂತಾಗಿದ್ದಕ್ಕೆ ಕಾರಣವೂ ಇದೆ. ಮಾಸ್ಕೇರಿಯ ಗಾಂವಕರ ಮನೆತನ ಒಂದು ಪ್ರತಿಷ್ಟೆಯ ಮನೆತನವಷ್ಟೇ ಅಲ್ಲ ಅದು ನನ್ನ ಅಪ್ಪನ ಅಜ್ಜಿ ಮನೆಯೂ ಹೌದು. ನನ್ನ ಅಜ್ಜಿಯನ್ನು ಮದುವೆಯ ಸಮಯದಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಕರೆತಂದಿದ್ದರಂತೆ ಎಂದು ಅಪ್ಪ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹೀಗಾಗಿ ಇಲ್ಲಿ ಬರುವ ಪಾತ್ರಗಳೆಲ್ಲ ನನಗೆ ಹತ್ತಿರದ್ದು ಎಂದು ಅನ್ನಿಸಲು ಪ್ರಾರಂಭವಾಗಿದ್ದು. ಅಷ್ಟೇ ಅಲ್ಲ, ನನ್ನ ಚಿಕ್ಕಪ್ಪನ ಮಗಳು ಭಾರತಿಗೂ ಇದು ಅಜ್ಜಿ ಮನೆಯಾದ್ದರಿಂದ ನಮ್ಮಿಬ್ಬರ ಅಡೆತಡೆಯಿಲ್ಲದ ಅದೆಷ್ಟೋ ಮಾತುಗಳಲ್ಲಿ ಮಾಸ್ಕೇರಿಯ ವಿಷಯ ಆಗಾಗ ಬಂದು ಹೋಗುತ್ತಿರುತ್ತದೆ. ಆ ಕಾಲದಲ್ಲೇ ಕಾಶಿ ವಿದ್ಯಾಪೀಠದಲ್ಲಿ ಓದಿ ಶಾಸ್ತ್ರಿ ಪದವಿ ಪಡೆದ ಅಪರೂಪದ ಮಹಾನುಭಾವರಲ್ಲಿ ಆಕೆಯ ಅಜ್ಜ ಕೂಡ ಒಬ್ಬರು. ಇದೆಲ್ಲವೂ ಈ ಕಥೆಯನ್ನು ಓದಿದ ನಂತರ ನೆನಪು ಮರುಕಳಿಸಿ ಕಥೆ ಓದುತ್ತಿದ್ದೇನೆಯೋ ಅಥವಾ ಸಿನೇಮಾ ನೋಡುತ್ತಿದ್ದೇನೆಯೋ ಎಂಬ ಭಾವ ಹುಟ್ಟಿಸಿದ್ದು ಸುಳ್ಳಲ್ಲ.


    ಅಮ್ಮನ ಕವನ ಸಂಕಲನ ಬಿಡುಗಡೆಗೆ ಬಾ ಎಂದ ವಿನಯರವರು ನನಗೆ ಈಗಲೂ ನೆನಪಾಗುತ್ತಾರೆ. ನಮ್ಮೂರ ಕಡೆಗಳಲ್ಲಿ ಗೌರಮ್ಮ ಅಕ್ಕೋರೆಂದರೆ ಕರಕುಶಲವಸ್ತುಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು ಎಂದೇ ಪರಿಚಿತ. ಅವರ ಮನೆಗೆ ಹೋದವಳು ಹುಲ್ಲಿನಲ್ಲಿ ಮಾಡಿದ ಬೀಸಣಿಗೆಯನ್ನು ನನಗೆ ಬೇಕು ಎನ್ನುತ್ತ ತೆಗೆದುಕೊಂಡು ಬಂದಿದ್ದೆ. ಈಗಲೂ ಮನೆಯ ಬಾಗಿಲಿನಲ್ಲಿರುವ ಆ ಬೀಸಣಿಕೆ ನೋಡಿದಾಗಲೆಲ್ಲ ಗೌರಮ್ಮಕ್ಕನ ನೆನಪು ಮತ್ತು ಅದರ ಜೊತೆಜೊತೆಯಾಗಿಯೇ ಬರುವ ವಿನಯಾ ನೆನಪು.


         ಹದಿಮೂರು ವರ್ಷದ ಹುಡುಗಿಯನ್ನು ತನ್ನ ಪ್ರಿಯತಮೆ ಎಂದು ಬಿಂಬಿಸಲು ಹೊರಟವನು ತನ್ನ ಅದೇ ವಯಸ್ಸಿನ ತಮ್ಮನನ್ನು ಪುಟ್ಟ ಮಗುವಂತೆ ನೋಡಿಕೊಳ್ಳುತ್ತ, ಬಸ್ ಹತ್ತಿಸಿ ಶಾಲೆಗೆ ಬಿಡುತ್ತಾನೆ. ಹೆಣ್ಣಾದರೆ ಆಕೆ ಹದಿಮೂರಕ್ಕೇ ದೊಡ್ಡವಳಾದ ಲೆಕ್ಕವೇ ಎಂದು ಕೇಳುವ ಪ್ರಶ್ನೆ ಇಂದಿನ ಜಗತ್ತಿಗೆ ಹಿಡಿದ ಕೈಗನ್ನಡಿಯಂತಿದೆ. ಹತ್ತು ಹನ್ನೆರಡು ವಯಸ್ಸಿಗೆ ಮೈನೆರೆದು ಬಿಡುವ ಇಂದಿನ ಹುಡುಗಿಯರು ಸಹಜವಾಗಿಯೇ ತಮ್ಮ ಬಾಲ್ಯವನ್ನು ಕಳೆದುಕೊಂಡು ಬಿಡುವ ಕ್ರೂರ ನೆನಪುಗಳ ಮಾಲೆಯೂ ಇಲ್ಲಿದೆ. ಯಾಕೆಂದರೆ ತನಗೆ ಗೊತ್ತಿಲ್ಲದ ಪ್ರೇಮಿಯೊಬ್ಬ ತನ್ನ ಮನೆಯೆದುರು ಸುಳಿದಾಡುವಾಗ ಚಿಕ್ಕಪ್ಪ ಎನ್ನಿಸಿಕೊಂಡವನೂ ಕೂಡ ಏನಿರಬಹುದು ಎಂಬುದನ್ನು ಇವಳ ಬಳಿಯೂ ಕೇಳದೆ, ಯೋಚಿಸುವ ವ್ಯವಧಾನವೂ ಇಲ್ಲದಂತೆ ಸಾರಾಸಗಟಾಗಿ ‘ತೀಟೆಯಿದ್ದರೆ ನನ್ನ ಸಂಗಡ ಬಾರೆ’ ಎಂದು ಬಿಡುವುದು ಅದೆಷ್ಟು ಅಸಹ್ಯದ ಪರಮಾವಧಿ, ಆಡಾಡುತ್ತಲೇ ಹೇಳಿದ ಮಾತಿರಬಹುದು ಎಂದು ಸಮಾಧಾನ ಹೇಳಿಕೊಳ್ಳಬಹುದಾಗಿದ್ದರೂ ವರಸೆಯಲ್ಲಿ ಮಗಳೇ ಆಗಬೇಕಿದ್ದವಳಿಗೆ ಆಡುವ ಮಾತೇ ಇದು ಎಂದು ನಿಬ್ಬೆರಗಾಗುವಂತೆ ಮಾಡುತ್ತದೆ. ಗಂಡಸರ ಕಾಮವಾಂಛೆಗೆ ಯಾರಾದರೇನು ಎಂಬ ಮಾತಿಗೆ ಪುರಾವೆ ನೀಡುವಂತಿದೆ.
   ಎರಡನೆಯ ಕಥೆ ಊರ ಒಳಗಣ ಬಯಲು ಕೂಡ ಮಾಸ್ಕೇರಿಯ ಆವರಣದ್ದೇ. ಊರು ಬಿಟ್ಟು ಹೋಗಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾದ ಕಥಾನಾಯಕ ತನ್ನ ತಂದೆ ಪಾಂಡುರಂಗ ಗಾಂವಕರರ ಹೆದರಿಕೆಯಿಂದಾಗಿ ಊರಿಗೆ ಬಂದರೂ ಮನೆಗೆ ಹೋಗಲಾಗದೇ ಹಿಂದಿರುಗುವ ಕಥೆಯಿದ್ದರೂ ಅದು ಒಂದು ಊರು ನಿಧಾನವಾಗಿ ತನ್ನ ಹಳೆಯ ಬಾಂಧವ್ಯವನ್ನು ಮರೆಯುವ ಕಥೆಯನ್ನು ಹೇಳುತ್ತಲೇ, ಅಂದು ಜಾತಿ ಕಾರಣಕ್ಕಾಗಿ ಮಾಪಿಳ್ಳೆಯರ ಹುಡುಗಿಯನ್ನು ಬೆನ್ನಟ್ಟಿ ಹೋಗಿದ್ದನ್ನು ವಿರೋಧಿಸಿ ಜಗಳವಾಡಿದ್ದ ಊರಿನ ಹಿಂದಿನ ಗುನಗನ ಮಗನಾಗಿದ್ದವ, ಪ್ರಸ್ತುತ ಶಾಂತಿಕಾ ಪರಮೇಶ್ವರಿಯ ಗುನಗ ‘ಹಿರೀ ಸೊಸೆಯನ್ನು ಮನೆ ತುಂಬಿಸಿಕೊಳ್ಳದೇ ಕಿರಿ ಸೊಸೆಯನ್ನು ತುಂಬಿಸಲಾಗದು ಎಂದು ದೇವಿಯ ಅಪ್ಪಣೆ’ ಕೊಡಿಸುವುದಾಗಿ ಹೇಳುವುದು, ದೋಣಿ ದಾಟಿಸುವವನೂ ಕೂಡ ಪಾಂಡೊಡೆದಿರು ಮಗನನ್ನು ಒಪ್ಪಿ ಕೊಂಡರೇನೋ, ಹಂಗಾದ್ರೆ ಸಾಕು ಎಂದು ಹಾರೈಸುವುದು ಇನ್ನೂ ಉಳಿದಿರುವ ಮಾನವೀಯತೆಯ ಪ್ರೀತಿಯನ್ನು ನೆನಪಿಸುತ್ತದೆ. ಮನೆ ಎಂದರೆ ಅದು ಕೇವಲ ತನ್ನೊಬ್ಬನ ಮನೆಯಲ್ಲ, ಇಡೀ ಊರನ್ನೂ ಒಳಗೊಂಡಿದ್ದು ಎನ್ನುವ ಮಾತು ಒಮ್ಮೆ ಎದೆಯನ್ನು ಹಸಿಯಾಗಿಸುತ್ತದೆ.


   ಮೂರನೆಯ ಕಥೆ ಕಡಿತನಕ ಕಾಯುವ ಅಭಿಮಾನದಲ್ಲಿ ಹೆಣ್ಣು ಅನುಭವಿಸುವ ಅಸ್ಥಿರತೆಯನ್ನು ತೀರಾ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಅತ್ತೆ, ಸೊಸೆ ಗಂಗಮ್ಮ, ಹಾಗೂ ಅವಳ ಮಗಳು ಕರಿಶ್ಮಾ ಆದ ಕರಿಯಮ್ಮ ಹೀಗೆ ಮೂರು ತಲೆಮಾರಿನ ಹೆಣ್ಣುಗಳು ಅನುಭವಿಸುವ ಯಾತನೆಯನ್ನು ಕಾಣಬಹುದು. ಮಾವ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ತನ್ನೆಲ್ಲ ಗದ್ದೆಯನ್ನೂ ಮಾರಿ, ಅತ್ತೆಯ  ಬಂಗಾರವನ್ನೂ ಊರಿನ ವೇಶ್ಯೆಗೆ ಸುರಿದವನು. ಅವನೆಲ್ಲ ಆಟಾಟೋಪವನ್ನು ಸೋದರ ಸೊಸೆಯಾಗಿ ಕಣ್ಣಾರೆ ಕಂಡವಳು, ನಂತರ ಅವನ ಮಗನನ್ನು ಮದುವೆಯಾಗಿ ತಾನೂ ಜವಾಬ್ಧಾರಿ ಇಲ್ಲದ ಗಂಡನನ್ನು ನಿಭಾಯಿಸಿದವಳು. ಬೆಳದಿಂಗಳಿಂದ ಕಡ ತಂದಂತಹ ದಂತದ ಗೊಂಬೆ ಮಗಳನ್ನು ಓದಿಸಿ ಮದುವೆ ಮಾಡಿ ನಿಶ್ಚಿಂತಳಾಗಿರುವ ಗಂಗಕ್ಕ, ಮಗಳು ಅಲ್ಲಿಯೂ ಮನೆಯೊಳಗಿನ ಕೈದಿ. ಹುಟ್ಟಿದ ಮಗನನ್ನು ಓದಿಸಿ, ಈಗಿನ ಟ್ರೆಂಡ್‌ಗೆ ತಯಾರು ಮಾಡಲೆಂದು ದೂರದ ಡೆಹರಾಡೂನ್ ಸ್ಕೂಲ್‌ಗೆ ಹಾಕಿ ಅಮ್ಮ ಮಗನ ಬಾಂಧವ್ಯವನ್ನೇ ಕಸಿದು ಬಿಡುವ ಅಪ್ಪ, ನಂತರ ಟ್ಯೂಷನ್‌ಗೆಂದು ಬರುವು ಹುಡುಗರ ಮೇಲೂ ಅನುಮಾನ ಪಟ್ಟು, ಆಕೆ ಪ್ರಾಣ ಕಳೆದುಕೊಳ್ಳುವಂತೆ ಮಾಡುತ್ತಾನೆ.


   ನಾಲ್ಕನೆಯ ಕಥೆಯಂತೂ ತೀರಾ ತಿಳಿಯದ ಆಳಕ್ಕೆ ನನ್ನನ್ನು ನೂಕಿದ ಕಥೆ ಎಲ್ಲ ಆರಾಮ. ಹೇಳಲಾಗದ ಅದೆಂತಹುದ್ದೋ ಬಾಲ್ಯದ ನೆನಪುಗಳನ್ನೆಲ್ಲ ಗಬರಾಡಿ ಎದುರಿಗಿಟ್ಟ ಕಥೆಯಿದು. ಸಾವಿತ್ರಿ ಟೀಚರ್ ಯಾಕೆ ತಮ್ಮ ಸಹೋದ್ಯೋಗಿ ಪ ನಾ ಮಾಗೋಡರಿಗೆ ಎಲ್ ಐ ಸಿ ನಾಮಿನೇಟ್ ಮಾಡಿದರು? ಆಯಿ ಎಂದು ಕರೆಯುತ್ತಿದ್ದ ಹುಡುಗ ಯಾರು? ಮೇದಾರ ಸರ್ ಯಾರು ಎಂಬೆಲ್ಲ ಪ್ರಶ್ನೆಗಳು ಬಗೆಹರಿಯುವುದೇ ಇಲ್ಲ. ನಮ್ಮ ಬಾಲ್ಯದಲ್ಲೂ ಇಂತಹ ಹತ್ತಾರು ಪ್ರಶ್ನೆಗಳು ಹುಟ್ಟಿ ಈಗಲೂ ಕಾಡುತ್ತಿರುವ ವಿಷಯಗಳು ಹಾಗೆಯೇ ಇದ್ದಿರಬಹುದು, ಅದು ಶಿಕ್ಷಕರಾಗಿರಬಹುದು, ಸುತ್ತ ಮುತ್ತಲಿನ ಯಾರೋ ಸಂಬಂಧಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ದೂರದಲ್ಲಿ ಕೇಳಿದ ಯಾರದ್ದೋ ಕತೆಯೇ ಆಗಿರಬಹುದು,  ಇಂತಹ ಹಲವಾರು ಪ್ರಶ್ನೆಗಳು ನಮ್ಮೆದೆಯ ಒಂದು ಮೂಲೆಯಲ್ಲಿ ಹಾಗಿಯೇ ಬೆಚ್ಚಗೆ ಮಲಗಿರುತ್ತದೆ. ಅಂತಹ ಪ್ರಶ್ನೆಗಳೆಲ್ಲ ನನ್ನೆದುರಿಗೂ ಧುತ್ತನೆ ಎದುರು ನಿಂತಂತಾಗಿ ತಲ್ಲಣಿಸುವಂತಾಗಿದ್ದು ಸುಳ್ಳಲ್ಲ.


ನೋಯದವರೆತ್ತ ಬಲ್ಲರೋ ಎನ್ನುವ ಕಥೆಯ ತವರು ಮನೆಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ ಅಂಜನಿ ಆಸ್ತಿಯನ್ನೆಲ್ಲ ಕೊಡುತ್ತೇನೆಂದರೆ ನಿರಾಕರಿಸಿ ಸಾವನ್ನಪ್ಪುವ ಬಗೆ ಒಂದು ಕ್ಷಣ ಕೊರಳು ಹಿಡಿದಂತಾಗುತ್ತದೆ. ಅಂಜನಿಯನ್ನು ಮದುವೆಯಾಗಬೇಕಾಗಿದ್ದ ಅನಿಲ, ‘ಮೋಸ ಮಾಡುಕೆ ನಾ ಏನ ಅದರ ಮೈ ಮುಟ್ಟಿನೆ’ ಎಂದು ಒಂದಿಷ್ಟೂ ಅಳುಕಿಲ್ಲದೇ ಹೇಳಿ, ಮೈ ಮುಟ್ಟಿದರೆ ಮಾತ್ರ ತಪ್ಪು ಎಂಬಂತೆ ನಡೆದುಕೊಳ್ಳುವ ಭಾವ ಮತ್ತೊಮ್ಮೆ ಈ ಸಮಾಜz, ಇಲ್ಲಿನ ಗಂಡಸರ ರೀತಿನೀತಿಯ ಬಗ್ಗೆ, ಅವರು ಯೋಚಿಸುವ ಬಗೆಯ ಕುರಿತು ತಿರಸ್ಕಾರ ಹುಟ್ಟುವಂತೆ ಮಾಡಿ ಬಿಡುತ್ತದೆ. ದಣಿವು ಕಾಡುವ ಹೊತ್ತು ಕಥೆಯಲ್ಲಿ ಒಂದಿಷ್ಟು ಗೊಂದಲ ಕಾಣಿಸುತ್ತದೆ. ಕಥೆಯ ಮೊದಮೊದಲು ಯಾರಿಗೆ ಏನಾಗಿದ್ದು ಎಂಬುದು ತಿಳಿಯದೇ ಕೊನೆಗೆ ಹೆಡ್ಮಾಸ್ತರರ ಹೆಂಡತಿ ತೀರಿ ಹೋಗಿದ್ದು, ಇತ್ತ ಗಂಡ ಯಾರು ಸತ್ತರೇನು ಉಳಿದವು ಆತನನ್ನು ಬದುಕಿಸುತ್ತವೆ ಎಂಬಂತೆ ಮಾತನಾಡಿದ್ದು ಎಲ್ಲವೂ ಬದುಕು ಇಷ್ಟೇನೇ ಎಂಬಂತೆ ಮಾಡಿಬಿಡುತ್ತದೆ. ಸ್ವಯ ಕಥೆಯಲ್ಲಿ ಯಾವುದೋ ಗರ್ಜಿಗೆ ದೂರಾದ ಗಂಡ ಹೆಂಡಿರ ಮನದ ಮಾತುಗಳಿವೆ. ಊರೆಲ್ಲ ಸುತ್ತುವ ಗಂಡಸಿಗೆ ಮನೆಯ ಹೆಂಡತಿ ನೆನಪಾಗುವುದು ತಾನು ಹಾಸಿಗೆ ಹಿಡಿದಾUಲೇ. ಆದೇ ಹೆಣ್ಣು ತಿರಸ್ಕಾರವ ನುಂಗಿ, ಗಂಡ ಹಾರಿದ ಬೇಲಿ ಎದುರಿಗೇ ಇದ್ದರೂ ಮಾತನಾಡದವಳು. ಎಲ್ಲಿಯೂ ಉಳಿದ ಹೆಂಗಸರಂತೆ ನಮ್ಮವರು ಎನ್ನದೇ, ನಿಮ್ಮನ್ನೋರು ಎನ್ನುತ್ತ ಕೊನೆಗೆ ತನ್ನ ಗಂಡ ಹೋಗುತ್ತಿದ್ದ ಮನೆಯವಳಿಗೂ ನಿಮ್ಮಣ್ಣೋರು ಎಂದು ಹೇಳಿ ನಕ್ಕುಬಿಡುವ ಪರಿ  ಸಾಧಾರಣಕ್ಕೆ ದಕ್ಕುವಂತಹುದ್ದಲ್ಲ. ಇಬ್ಬರ ಮನದ ಮಾತು ನಮ್ಮೊಳಗಿನ ಆಳವನ್ನು ಕೆದರಿ ಗಾಯವಾಗಿಸುತ್ತದೆ. ಕ್ಷಮೆಯಿರಲಿ ಕಂದಾ ಕಥೆಯಲ್ಲಿ ಶಿಕ್ಷಕಿಯೊಬ್ಬಳು ಎದುರಿಸಿದ ಸಾಮಾಜಿಕ ಬಂಧದ ಕಥೆಯಿದೆ. ಮಕ್ಕಳಂತೆ ಕಾಣುವ ವಿದ್ಯಾರ್ಥಿಗಳಲ್ಲಿ ಈ ಸಮಾಜ ಜಾತಿ ವಿಷಬೀಜವನ್ನು ಬಿತ್ತುವಾಗ,  ಆ ಮಕ್ಕಳ ಕುರಿತು ಶಿಕ್ಷಕಿಯ ಮೇಲೇ ಇಲ್ಲ ಸಲ್ಲದ ಸಂಬಂಧದ ಆರೋಪ ಹೊರಿಸುವಾಗ ಶಿಕ್ಷಕಿ ಅಸಹಾಯಕಳಾದ ಕಥೆ ಇಲ್ಲಿದೆ. ಜಾಣೆಯಾಗಿರು ಮಲ್ಲಿಗೆ ಕಥೆಯಲ್ಲಿ ದೊಡ್ಡವಳಾಗುವ ಮಗಳ ವೇದನೆಯಿದೆ. ಅಲ್ಲಿ ಬರುವ ಕಥೆ ಕೂಡ ತೀರಾ ರೂಪಕದಲ್ಲಿದ್ದು ಕಪ್ಪು ಬಣ್ಣದ ಕಾಲುವೆ ಹರಿದು ಬಾವಿಯಾಗುವಂತೆ ಹೇಳುತ್ತದೆ. ಕೊನೆಯ ಕಥೆ ಹತ್ತು ವರ್ಷದ ಹಿಂದೆ ಮತ್ತೂರ ತೇರಿನಲಿ ಕಥೆಯಲ್ಲಿ ‘ನೋಡಿದರೆ ತನ್ನಂತೆ ಕಾಣುವ ಮೊಬೈಲ್ ಸೆಟ್ ಎಂದು ತಂದೆ’ ಎಂದಿದ್ದು ನಂತರ ಅದು ಬೇಸರವಾಗಿದೆ ಬದಲಾಯಿಸುವೆ ಎಂದಾಗ ತನ್ನನ್ನೇ ಬದಲಾಯಿಸುವೆ ಎಂದಂತಾಗಿ ಅವಳು ನಡುಗುವುದು, ಮತ್ತು ಆತ ಹೇಳಿದ ಮಾತಿಗೆ ಅರ್ಥ ಹಚ್ಚುತ್ತ ಸಮಾಧಾನ ಮಾಡಿಕೊಳ್ಳುವ ಕೆಲಸದಲ್ಲಿ ಅವಳು ತಲ್ಲೀನಳಾಗುವುದು ಎಲ್ಲರ ಮನೆಯ ಕಥೆಯನ್ನೇ ನೆನಪಿಸುತ್ತದೆ.


   ಇಲ್ಲಿರುವ ಹೆಚ್ಚಿನ ಕಥೆಗಳು ನನಗೆ ತೀರಾ ಆಪ್ತವಾಗುವುದಕ್ಕೆ ಕಾರಣ ಅದು ನಮ್ಮೂರಿನ ಸುತ್ತ ಮುತ್ತಲ ಹಳ್ಳಿಗಳ ಹೆಸರನ್ನು ಒಳಗೊಂಡಿದ್ದು. ಮಾಸ್ಕೇರಿ, ಹೊನ್ನೆಬೈಲು, ಅಗಸೂರು, ದೇವರಭಾವಿ, ಸಗಡಗೇರಿ, ತೊರ್ಕೆಗಳು ನನ್ನದೇ ಅವಿಭಾಜ್ಯ ಅಂಗಗಳಾಗಿರುವ ಊರುಗಳು. ಇನ್ನು ಹೆಚ್ಚಿನ ಕಥೆಗಳ ಭಾಷೆಗಳಂತೂ ನನ್ನದೇ ಆಡುಭಾಷೆ. ಹೀಗಾಗಿ ಈ ಕಥೆಗಳಲ್ಲೆಲ್ಲ ನಾನೇ ಭಾಗವಾಗಿದ್ದೇನೆ ಎಂದುಕೊಳ್ಳುತ್ತಲೇ ಓದಿದ್ದೇನೆ.


   ಅಂದಹಾಗೆ ಇಡೀ ಕಥೆ ಹೆಣ್ಣಿನ ಸುತ್ತ ಸುತ್ತುತ್ತದೆ. ಹೆಣ್ಣಿನ ಜೀವನದ ಆಗುಹೋಗುಗಳು ಇಲ್ಲಿನ ಪ್ರಧಾನ ವಿಷಯಗಳು. ಹೆಣ್ಣಿನ ಕಷ್ಟಗಳ ಅರಿವು ಅವಳಿಗಷ್ಟೇ ಇರಲು ಸಾಧ್ಯ. ಇಡೀ ಸಂಕಲನ ಹೆಣ್ತನದ ಮೂಸೆಯಲ್ಲಿ ಅದ್ದಿ ತೆಗೆದಂತಿದೆ. ಜೀವನದ ಹತ್ತಾರು ಅನುಭವಗಳು, ನೋವು ನಲಿವುಗಳನ್ನು ಹೆಣ್ಣಿನ ದೃಷ್ಟಿಯಲ್ಲಿ ನೋಡುವುದನ್ನು ಇಲ್ಲಿನ ಕಥೆಗಳು ನಮಗೆ ಕಲಿಸಿಕೊಡುತ್ತವೆ. ಹತ್ತಿರದವರು ಎಂದುಕೊಂಡವರೇ ಹೆಣ್ಣನ್ನು ಬಳಸಿಕೊಳ್ಳುವ ಪರಿ ಮೈ ನಡುಗಿಸುತ್ತದೆ. ಮೊದಲ ಕಥೆಯ ಸುಧಾಕರನಂತೆ ಇದೇ ಎಂದು ನಿಖರವಾಗಿ ತೋರಿಸಲಾಗದ ಆದರೆ ಜೀವಮಾನವಿಡೀ ನೋವನುಭವಿಸುವ ಹಾನಿಯನ್ನು ಮಾಡಿ ತನು ನಿರುಮ್ಮಳವಾಗಿರುವ ಪುರುಷ ಸಮಾಜದ ಕ್ರೌರ್‍ಯವನ್ನು, ಎಲ್ಲವನ್ನೂ ಅವಡುಗಚ್ಚಿ ಸಹಿಸುವ ಹೆಣ್ಣಿನ ಒಳತೋಟಿಗಳನ್ನು ಇಲ್ಲಿನ ಕಥೆಗಳು ಸಮರ್ಥವಾಗಿ ಮಾಡಿವೆ.  ಕೋಮುಸಂಘರ್ಷ, ಜಾತಿವಾದಗಳೂ ಕೂಡ ಇಲ್ಲಿ ಕಥೆಯಾಗಿವೆ. ಸಮಸಮಾಜದ ಕನಸನ್ನು ಕನಸುವ, ಏಕತೆಯನ್ನು ಬಯಸುವ ಜೀವಪರ ಕಾಳಜಿಯ ವಿನಯಾರ ಕಥೆಗಳು ಮತ್ತೇಗೆ ಬೇರೆ ಆಗಲು ಸಾಧ್ಯ ಹೇಳಿ?

**************************

************************************************************************

ಲೇಖಕರ ಬಗ್ಗೆ ಎರಡು ಮಾತು:
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

Leave a Reply

Back To Top