ಲೇಖನ
ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ.
ಸುನೀತಾ ಕುಶಾಲನಗರ
ಶಾಲೆ ಸೇರಿದಾಗಿನಿಂದ ಈವರೆಗೂ ಪ್ರತಿವರ್ಷ ಆಗಸ್ಟ್ ಬಂತೆಂದರೆ ಅದೇನೋ ಸಂಭ್ರಮ.ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ವಾತಂತ್ರೋತ್ಸವದ ಸಡಗರ ಅದು ಹಾಗೆಯೇ ಉಳಿಯಲು ಮತ್ತು ಬೆಳೆಸಲು ಶಿಕ್ಷಕ ವೃತ್ತಿಯಲ್ಲಿರುವುದರಿಂದ ಮತ್ತಷ್ಟು ಉತ್ಸಾಹಿಯಾಗಿ ನಿರ್ವಹಿಸುವ ಅವಕಾಶ.
ವಿದ್ಯಾರ್ಥಿಗಳಾಗಿದ್ದಾಗ ದೇಶಭಕ್ತಿ ಮೈಗೂಡಿಸುವ ಭಾಷಣದ ಬಾಯಿಪಾಠ,ದೇಶಭಕ್ತಿ ಗೀತೆ ಹಾಡಿ ನಲಿದು ಶಿಕ್ಷಕರು ಕೊಡುವ ಮಿಠಾಯಿ ಚೀಪುತ್ತಾ ಕೇಕೆ ಹಾಕಿ ಆ ದಿನ ಸವಿದ ಖುಷಿಯನ್ನು ಮೆಲುಕಿಸುತ್ತಾ ಮನೆಗೆ ತೆರಳುತಿದ್ದ ನೆನಪು ಮೊನ್ನೆ ಮೊನ್ನೆಯೆಂಬಂತೆ.
ಸ್ವತಃ ಶಿಕ್ಷಕಿಯಾಗಿರುವುದರಿಂದ ಪ್ರತಿವರ್ಷ ವಿದ್ಯಾರ್ಥಿಗಳ ತಯಾರಿ ಮಾಡುವಾಗ ಹೊಸತನ ಇದ್ದೇ ಇರುತ್ತದೆ. ಆ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಹೊಸ ಸಾಧ್ಯತೆಗಳತ್ತ ಹೊರಳುವ ಯೋಜನೆ ಹಿಂದಿನ ವರ್ಷದಿಂದಲೇ ಯೋಜಿಸಲಾಗಿರುತ್ತದೆ. ಆಗಸ್ಟ್ ಪ್ರಾರಂಭದ ದಿನಗಳಿಂದಲೇ ವಿದ್ಯಾರ್ಥಿಗಳಿಗೆ ಸಾಕಷ್ಟು ತಾಲೀಮು ನಡೆಸಿ ಆ ದಿನವನ್ನು ರಂಗು ರಂಗಾಗಿಸುವ ಕನಸು. ಧ್ವಜಕಟ್ಟೆ ತೊಳೆದು ರಂಗೋಲೆ ,ಹೂಗಳಿಂದ ಅಲಂಕರಿಸುವ ಕೇಸರಿ,ಬಿಳಿ,ಹಸಿರು ಬಣ್ಣಗಳ ಬ್ಯಾಂಡಗಳೂ,ಒಪ್ಪವಾಗಿ ಜೋಡಿಸಿ ತೊಟ್ಟ ಗಾಜಿನ ಬಳೆಗಳ ಪುಟ್ಟ ಕೈಗಳ ಉತ್ಸಾಹದ ನಿನಾದಕ್ಕೆ ಶಾಲಾ ಗೇಟಿಗೆ ತೋರಣ ಕೊಡುವ ಕಲರವ ಹೀಗೆ ಸಾಲು ಸಾಲು ಸಂಭ್ರಮ.
ಧ್ವಜಾರೋಹಣದ ತಕ್ಷಣ ಆಗಸದೆತ್ತರಕೆ ಏರಿ ಹಾರಿದಂತೆ ಕಾಣುವ ತ್ರಿವರ್ಣ ಪತಾಕೆಗೆ ನಮಿಸುತ್ತಲೇ ರಾಷ್ಟ್ರಗೀತೆ ಹಾಡುವಾಗ ಪ್ರತಿಯೊಬ್ಬ ಭಾರತೀಯನ ನರನಾಡಿಗಳಲ್ಲಿ ನಾವೆಲ್ಲರೂ ಒಂದೇ ಎಂಬ ಘೋಷವಾಕ್ಯಗಳು ಮೊಳಗಿ ನಮ್ಮೊಳಗೆ ದೇಶಭಕ್ತಿಯ ಸಂಚಲನದ ವೇಗ ಹೆಚ್ಚುತ್ತಲೇ ವಿದ್ಯಾರ್ಥಿಗಳಲ್ಲೂ ಎಳವೆಯಿಂದಲೇ ರಾಷ್ಟ್ರ ಭಕ್ತಿ ಹಾಗೂ ಭಾವಾಕ್ಯತೆಯನ್ನು ಮೈಗೂಡಿಸಿ ಬಿಡುತ್ತದೆ.
ಆದರೆ ಇದೀಗ ಬೀಗಗಳೊಳಗೆ ಮೌನವಾದ ಶಾಲಾ ಕೊಠಡಿಗಳೂ,ಬಿಕೋ ಎನ್ನುವ ವಠಾರವೂ, ಮೌನವಾಗಿ ನಿಂತಿರುವ ಧ್ವಜ ಕಂಬವೂ ಈ ಎಲ್ಲವುಗಳ ಜೊತೆ ಶಿಕ್ಷಕರಷ್ಟೇ ಧ್ಜಜ ಹಾರಿಸುವಂತಹ ವಿಪರ್ಯಾಸವನ್ನು ಕಾಲವೇ ತಂದೊಡ್ಡಿದೆ.
ಲಾಕ್ಡೌನ್,ಸೀಲ್ಡೌನ್,ಕ್ವಾರೈಂಟೈನ್,ಕಂಟೈನಮೆಂಟ್ ಜೋನ್, ಸೋಷಿಯಲ್ ಡಿಸ್ಟನ್ಸ್ ಎಂಬ ಕಂಡೂ ಕೇಳರಿಯದ ಪದಗಳೊಳಗನಿಂದ ಇಣುಕುತಿರುವ ವೈರಾಣು ಅಂತರವೆಂಬ ಭಯದೊಳಗೆ ಧ್ಜಜದ ನಿರಾಳ ಉಸಿರನ್ನೂ ಕಸಿದುಕೊಂಡ ಈ ದಿನಗಳಲ್ಲಿ ಸ್ವಾತಂತ್ರ್ಯ ಎಂಬ ಪದ ಕಾಡಿ ಯೋಚನೆಗೆ ತಳ್ಳುತ್ತಿದೆ.
ಸ್ವಾತಂತ್ರ್ಯ ಮತ್ತು ಬದುಕು:
ಸ್ವಾತಂತ್ರ್ಯ ಎಂದರೇನು ?ನಿರಂತರ ಕಾಡುವ ಪ್ರಶ್ನೆಯಿದು.ದೇಶ ಸ್ವತಂತ್ರಗೊಂಡ ದಿನವನ್ನು ವರ್ಷಂಪ್ರತಿ ಸಂಭ್ರಮಿಸುತ್ತೇವೆ ನಿಜ.ಆದರೆ ಸ್ವಾತಂತ್ರ್ಯ ಮತ್ತು ಬದುಕನ್ನು ಸಮೀಕರಿಸಿದಾಗ ಬಹುತೇಕರಿಗೆ ಬದುಕಿನಲ್ಲಿ ಸ್ವಾತಂತ್ರ್ಯ ಎಂಬ ಪದವೇ ಹತ್ತಿರ ಸುಳಿದಿರಲಾರದು. ಮನದಿಚ್ಛೆಯಂತೆ ಬದುಕುವ ಆಸೆಯಿದ್ದರೂ ಜವಾಬ್ದಾರಿ,ಕರ್ತವ್ಯ,ಭಯ ಹುಟ್ಚಿಸುವ ಸನ್ನಿವೇಶಗಳಿಂದ ಹೊರಬರಲಾಗದೆ ಸದಾ ಯಾವುದೋ ಹಂಗಿನಲ್ಲಿ ಜೀವನ ಸವೆಸುವ ಅಥವಾ ಬೇರೆಯವರ ಹಿತಕ್ಕಾಗಿಯಷ್ಟೇ ಬದುಕನ್ನು ಮೀಸಲಿಟ್ಟು ಸ್ವಾತಂತ್ರ್ಯವೆಂಬ ಪದದ ಅರ್ಥ ತಿಳಿಯುವ ಗೋಜಿಗೆ ಹೋಗದ ಜೀವಗಳು ನಮ್ಮ ನಿಮ್ಮೊಳಗೆಷ್ಟೋ ಇದ್ದಾರೆಂಬುದು ಕಟು ವಾಸ್ತವ.
ಸ್ವಾತಂತ್ರ್ಯ ಮತ್ತು ಹೆಣ್ಣು:
ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ದಿಟ್ಟ ಹೆಜ್ಜೆ ಇಡುತಿರುವವರಲ್ಲಿ ಧೀರ ನಾರಿಯರದ್ದೇ ಮೇಲುಗೈ ಎಂಬುದು ಹೆಮ್ಮೆಯ ವಿಚಾರ. ಎರಡೂ ಕಡೆ ನಿಭಾಯಿಸಬಲ್ಲಷ್ಟು ಗಟ್ಟಿಗಿತ್ತಿಯರಾಗಿ ಉದ್ಯೋಗದ ಜೊತೆಗೆ ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಲೇ ಅಧಿಕಾರದ ಚೌಕಟ್ಟಿನೊಳಗೆ ಸಿಲುಕಿ ತನ್ನ ತನವನ್ನು ತೆರೆದುಕೊಳ್ಳಲಾರದೆ ಬದುಕಿನಲ್ಲಿ ಸ್ವಾತಂತ್ರ್ಯ ವೂ ಇಲ್ಲದೆ ಕಳೆದು ಹೋಗುವ ಜೀವಗಳು ಬದುಕಿನ ವ್ಯೆವಸ್ಥೆಯ ಹುದುಲಿಗೆ ಸದ್ದಿಲ್ಲದೆ ಹೊಂದಿಕೊಂಡಿದ್ದಾರೆ. ಭಾರತೀಯ ಸಂವಿಧಾನ ನೀಡಿದ ಸಮಾನತೆಯ ಹಕ್ಕು ಪದೇ ಪದೇ ತಲೆಯ ಮೇಲೆ ಗಿರಕಿ ಹೊಡೆದು ವ್ಯಂಗ್ಯ ನಗುವೊಂದು ಕ್ಷಣ ಕ್ಷಣವೂ ಮೂಡಿ ಮರೆಯಾಗುವಾಗ ನಿಟ್ಟುರಿಸಿಡುತ್ತಲೇ ಅದೇನಾದರೂ ಆಗಲಿ’ ವ್ಯಕ್ತಿಗಿಂತ ನಾಡು ದೊಡ್ಡದು’ ಎಂದು ಮೈಗೊಡವಿ ನಿಲ್ಲುವಷ್ಟರಲ್ಲಿ ಕಾಲದೊಡನೆ ಪ್ರಕೃತಿಯೂ ಮುನಿಸಿಕೊಂಡು ಇನ್ನಿಲ್ಲದ ದುರಂತಗಳಿಗೆ ಸಾಕ್ಷಿಯಾಗುತ್ತಿದ್ದೇವೆ.
ಭರವಸೆಯ ನಿರೀಕ್ಷೆ
ಮುಂಬರುವ ವರ್ಷವಾದರೂ ಯಾವ ಕಾರಣಗಳೂ ಬಾಧಿಸಿದೆ ಸ್ವಾತಂತ್ರ್ಯೋತ್ಸವಕ್ಕೆ ಸಂಭ್ರಮದ ಆಚರಣೆ ಯ ಸೌಭಾಗ್ಯ ದಕ್ಕಲಿ.ಎತ್ತರೆತ್ತರಕೆ ಹಾರುವ ತ್ರಿವರ್ಣ ಧ್ವಜವನ್ನು ಯಾವುದೇ ಭಯ ಆಕ್ರಮಿಸದಿರಲಿ. ಜಾತಿ,ಧರ್ಮ, ಭಾಷೆ ,ಲಿಂಗ ಬೇಧವಿಲ್ಲದ ನಾವು ಭಾರತೀಯರು ಎಂಬ ಒಗ್ಗಟ್ಟಿನ ಹಾಗು ಸಮಾನತೆಯ ಆಶಾಕಿರಣ ನಮ್ಮೆಲ್ಲರನ್ನೂ ಆವರಿಸಿ ಆ ಮೂಲಕ ಭಾರತಾಂಬೆ ನೆಮ್ಮದಿಯ, ನಿರಾಳತೆಯ ಉಸಿರಾಡುವಂತಾಗಲಿ.ಪರಿಸ್ಥಿತಿಯ ನಿರ್ಬಂಧಗಳಿಂದ ಸ್ವತಂತ್ರವಾಗಿ ,ಸ್ವಚ್ಛಂದವಾಗಿ ಹಾರಾಡುವ ರಾಷ್ಟ್ರಧ್ವಜವನ್ನು ಕಣ್ತುಂಬಿಕೊಳ್ಳಬಹುದೆಂಬ ಭರವಸೆಯಲ್ಲಿರೋಣ.
***************************
:
**********************
ಚೆನ್ನಾಗಿದೆ ಸುನೀತ.
Thumba chennagide sunitha
ಸ್ವಾತಂತ್ರ ದಿನಾಚರಣೆಯ ಅರ್ಥಪೂರ್ಣ ಲೇಖನ ಸಮಯೋಚಿತ ವಾಗಿ ಮೂಡಿಬಂದಿದೆ. ಬಾಲ್ಯದ ನೆನಪು, ಶಿಕ್ಷಕರ ಜವಾಬ್ದಾರಿ ಎಲ್ಲವು ಇದರಲ್ಲಿದ್ದು ನೆನಪಿಸುವಂತೆ ಮಾಡಿದಿರಿ. ಧನ್ಯವಾದಗಳು ಮೇಡಂ. ಅಭಿನಂದನೆಗಳು.
ಅರೆ! ನನ್ನದೇ ಮನಸಿನ ಭಾವನೆಗಳ ಪ್ರತಿಬಿಂಬ ಅನ್ನಿಸಿತು ಮೇಡಂ. ಬರಹ .
ಅರ್ಥಪೂರ್ಣವಾದ ಲೇಖನ ಬಾಲ್ಯದ ದಿನಗಳಲ್ಲಿನ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನೆನಪು ಮರುಕಳಿಸಿತು. ತಮಗೆ ಧನ್ಯವಾದಗಳು ….