ಶಾಂತಿ ಬೀಜಗಳ ಜತನ’
ಸಾಹಿತ್ಯದ ಬರವಣಿಗೆ ಗಂಭೀರವಾದಂತೆಲ್ಲಾ ಲೇಖಕರ ಜವಾಬ್ದಾರಿ ಹೆಚ್ಚುತ್ತದೆ ಡಾ. ಪ್ರಕಾಶ ಗ. ಖಾಡೆ ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿರುವ ಡಾ. ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ೧೦-೦೬-೧೯೬೫ ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ, ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾಗಿ , ೨೦೦೫ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ “ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ” ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಮಾಡುತ್ತಿದ್ದಾರೆ. ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಜಾನಪದ, ಶಿಕ್ಷಣ, ಸಂಶೋಧನೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವ, ಕನ್ನಡದ ಪ್ರಮುಖ ಪತ್ರಿಕೆ, ಆಕಾಶವಾಣಿ, ದೂರದರ್ಶನಗಳಲ್ಲಿ ನಿರಂತರವಾಗಿ ಲೇಖನ, ಕವಿತೆ, ಕಥೆ, ವಿಮರ್ಶೆ ಪ್ರಕಟ ಮತ್ತು ಪ್ರಸಾರವಾಗಿವೆ. ಈವರೆಗೆ ಗೀತ ಚಿಗಿತ, ಪ್ರೀತಿ ಬಟ್ಟಲು, ತೂಕದವರು, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕೃಷ್ಣಾ ತೀರದ ಜನಪದ ಒಗಟುಗಳು, ಮುನ್ನುಡಿ ತೋರಣ, ಜತ್ತಿ ಕಾವ್ಯಾಭಿವಂದನ, ನೆಲಮೂಲ ಸಂಸ್ಕೃತಿ, ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಜಾನಪದ ಕೋಗಿಲೆ ಗೌರಮ್ಮ ಚಲವಾದಿ, ಸಾಹಿತ್ಯ ಸಂಗತಿ ,ಮೌನ ಓದಿನ ಬೆಡಗು,ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ,ಶಾಂತಿ ಬೀಜಗಳ ಜತನ ಸೇರಿದಂತೆ ೨೭ ಕೃತಿಗಳನ್ನು ಪ್ರಕಟಿಸಿದ್ದಾರೆ. ಮುಧೋಳ,ಶಿವಮೊಗ್ಗ, ವಿಜಾಪುರ ಮತ್ತು ಮೈಸೂರುಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹಂಪಿ ಉತ್ಸವ,ಮೈಸೂರು ದಸರಾ,ನವರಸಪುರ ಉತ್ಸವಗಳಲ್ಲಿ ಕವಿತೆ ವಾಚನ. ಕೇರಳದಲ್ಲಿ ಜರುಗಿದ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ. ಉತ್ತಮ ವಾಗ್ಮಿ, ಅಪರೂಪದ ಶಿಕ್ಷಣ ಚಿಂತಕ ಡಾ. ಪ್ರಕಾಶ ಖಾಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿದ್ದಾರೆ. ಶಾಂತಿ ಬೀಜ ಜತನದ ಕವಿ …………………………………. ನಾಗರಾಜ ಹರಪನಹಳ್ಳಿ : ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಪ್ರಕಾಶ್ ಖಾಡೆ ; ಮೊದಲೆಲ್ಲ ಹೆಸರಿಗಾಗಿ ಬರೆಯಬೇಕೆನಿಸುತ್ತಿತ್ತು, ಈಗ ಹಾಗಿಲ್ಲ. ಸಾಹಿತ್ಯದ ಬರವಣಿಗೆ ಗಂಭೀರವಾದಂತೆಲ್ಲಾ ಲೇಖಕರ ಜವಾಬ್ದಾರಿ ಹೆಚ್ಚುತ್ತದೆ, ನನಗೂ ಆಗಿದ್ದು ಅದೇ. ಒಂದು ಕತೆ, ಒಂದು ಕವಿತೆ ಉಂಟು ಮಾಡುವ ಪರಿಣಾಮವಿದೆಯಲ್ಲ ಅದು ಬೆರಗು ಹುಟ್ಟಿಸುವಂಥದು. ನನ್ನ ರಚನೆಯ ಇಂಥ ಸಾಲುಗಳನ್ನು ನಾನೇ ಅನೇಕ ಬಾರಿ ಓದಿ ಬೆರಗುಗೊಂಡಿದ್ದೇನೆ. ಸಾಹಿತ್ಯ ಸಾರ್ಥಕತೆ ಕಂಡಾಗ ಅದರ ಮೌಲ್ಯ ಹೆಚ್ಚುತ್ತದೆ, ರಚನೆ ಗಂಭೀರವಾಗಿ ಸಾಗುತ್ತದೆ, ಬರಹ ತನ್ನಿಂದ ತಾನೆ ಬರೆಸಿಕೊಳ್ಳುತ್ತದೆ, ಇಲ್ಲಿ ಕವಿ ಸಣ್ಣವನಾಗಬೇಕು, ಕವಿತೆ ದೊಡ್ಡದಾಗಬೇಕು, ಇಂಥ ಭಾವ ನನ್ನಲ್ಲಿ ಬಂದ ಘಳಿಗೆಯಿಂದ ನಾನೇ ಮತ್ತೆ ಮತ್ತೇ ಕೇಳಿಕೊಳ್ಳುತ್ತೇನೆ, ಹೌದು ನಾನೇಕೆ ಬರೆಯುತ್ತೇನೆ,ಕ್ಷಮಿಸಿ ಉತ್ತರಕ್ಕಾಗಿ ಇನ್ನೂ ಹುಡುಕುತ್ತಿದ್ದೇನೆ. ಪ್ರಶ್ನೆ ; ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು. ಉತ್ತರ : ಅದೊಂದು ಕ್ಷಣಿಕದ ಸಂದರ್ಭ,ಅದು ಹುಟ್ಟಿದ ಘಳಿಗೆಯೇ ಗೊತ್ತಾಗೊಲ್ಲ,ಒಂದು ಕತೆ ,ಒಂದು ಕವಿತೆ ಹುಟ್ಟುತ್ತಿದೆ ಎಂದರೆ ,ಅದರ ಹಿಂದೆ ನಮಗರಿವಿಲ್ಲದೇ ಅನೇಕ ಅನುಭವಗಳು ,ಸಂದರ್ಭಗಳು ರೂಪು ಪಡೆದುಕೊಳ್ಳತ್ತಿರುತ್ತವೆ,ಒಂದು ರಚನೆ ಪೂರ್ಣವಾದಾಗ ಅದರ ನಿಲುಗಡೆ,ಈ ನಿಲುಗಡೆಯ ಹಿಂದಿನ ಚಲನೆಗಳು ಇವತ್ತಿಗೂ ಲೆಕ್ಕಕ್ಕೆ ಸಿಗುತ್ತಿಲ್ಲ,ಹಾಗಾಗಿ ಆ ಕ್ಷಣ ಎಂಬುದು ಒಂದು ಬಯಲು,ಒಂದು ಬೆಳಕು. ಪ್ರಶ್ನೆ ; ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು.? ಉತ್ತರ : ಮೂರು ದಶಕಗಳ ಕಾಲ ನನ್ನ ಕಾವ್ಯದ ಪಯಣ, ನಾನು ಬರೆವ ಹೊತ್ತಿಗೆ ನವ್ಯ ಮರೆಯಾಗಿ ,ಬಂಡಾಯ ಕಾವ್ಯದ ಬಿರುಸು ವಿಜೃಂಭಿಸುತ್ತಿತ್ತು. ಈಗ ಎಲ್ಲ ನಿರಾಳ ಹೊಸ ಕಾಲ, ಹೊಸ ಓದುಗ ಬಳಗ, ಅದರಲ್ಲೂ ವಿಶ್ವವ್ಯಾಪಿ. ಬಹುಬೇಗ ಕಾವ್ಯ ತಲುಪುವ ಕಾಲ.ಈಗಂತೂ ತುಂಬಾ ಅವಸರದ ಜಗತ್ತು, ಎಲ್ಲವನ್ನೂ ಅಂದರೆ ಮೇಘಸ್ಪೋಟ ಮಳೆ, ಪ್ರವಾಹ, ಪ್ರಳಯ ಇಂಥ ಪ್ರಾಕೃತಿಕ ಅವಘಡಗಳನ್ನೂ ಕಾಣಬೇಕಾದ ಕೆಟ್ಟ ಕಾಲ.ಜನತೆಯ ನೆಮ್ಮದಿ ಕೆಡಿಸುವ ಆಗುಂತಕ ವಿಷಯಗಳು,ಹಿಂಸೆ,ದುರಾಡಳಿತ,ಭ್ರಷ್ಟಾಚಾರ ಸಾರ್ವತ್ರಿಕ,ಇಂಥ ಹೊತ್ತಲ್ಲಿ ಶಾಂತಿ,ಪ್ರೀತಿ ಹುಡಕ ಹೊರಟಿರುವುದು ನನ್ನ ಕವಿತೆಗಳ ವಸ್ತು ಮತ್ತು ವ್ಯಾಪ್ತಿ.ನನ್ನ `ಶಾಂತಿ ಬೀಜಗಳ ಜತನ’ ಕಾವ್ಯ ಸಂಕಲನವು ಇಂಥ ಆಶಯಗಳನ್ನು ಹೊತ್ತ ಮೊತ್ತ.’ ಪ್ರಶ್ನೆ ; ಕತೆ,ಕವಿತೆಗಳಲ್ಲಿ ಬಾಲ್ಯ ,ಹರೆಯ ಇಣುಕಿದೆಯೇ ? ಉತ್ತರ : ಖಂಡಿತ ಸರ್,ಈಗಲೂ ಬಾಲ್ಯವನ್ನು ಕಳೆದ ನನ್ನ ತೊದಲಬಾಗಿಯ (ಜಮಖಂಡಿ ತಾಲೂಕು) ಹಳ್ಳಿಯ ನೆನಪುಗಳು ಕಾಡುತ್ತವೆ, ನನ್ನ ‘ಸೂರ್ಯ ಚಂದ್ರರು ಕಾವಲೋ’ ಕಥೆಯಂತೂ ನನ್ನೂರ ಪಾತ್ರಗಳನ್ನು,ಸಂದರ್ಭಗಳನ್ನು ಕಟ್ಟಿಕೊಡುತ್ತದೆ, ನನ್ನ ‘ಮತ್ತೆ ಬಾಲ್ಯಕ್ಕೆ..’ ಕವಿತೆಯಂತೂ ಬಾಲ್ಯದ ದಿನಗಳ ಆಡೊಂಬಲ ಸಾರುತ್ತದೆ,ಸ್ವರ್ಗಕ್ಕಿಂತಲೂ ಮಿಗಿಲಾದ ಹುಟ್ಟಿಸಿದ ತಾಯಿ, ಹುಟ್ಟಿದ ಊರು ಮರೆಯಲಾದೀತೆ.? ಪ್ರಶ್ನೆ ; ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಇಂದು ರಾಜಕೀಯ ಪರಿಕಲ್ಪನೆಯೇ ಬೇರೆ ಯಾಗಿದೆ,ನಾವೆಲ್ಲ ಕನ್ನಡದೊಂದಿಗೆ ರಾಜಕೀಯ ಶಾಸ್ತ್ರವನ್ನು ಒಂದು ವಿಷಯವಾಗಿ ಪದವಿ ತರಗತಿಯಲ್ಲಿ ಓದಿದವರು, ಅಲ್ಲಿ ಓದಿದ್ದು , ಈಗ ನಡೆಯುತ್ತಿರುವುದು ತುಂಬಾ ಆತಂಕಾರಿಯಾಗಿದೆ. ಈಗ ಬದ್ಧತೆ ಎಂಬುದು ಉಳಿದಿಲ್ಲ,ಅಧಿಕಾರ ಹಣವುಳ್ಳವರ ಸೊತ್ತಾಗಿದೆ . ಮಠಗಳು ಸ್ವಂತದ ಕುಲ ,ಕುಲದವರನ್ನು ಉದ್ಧರಿಸಲು ಲಕ್ಷ್ಮಣ ರೇಖೆ ಹಾಕಿಕೊಂಡಿವೆ, ಬಲಿಷ್ಠ ಜಾತಿ,ಪಂಗಡ ನಾಯಕರು ಮುಂಚೂಣಿಯಲ್ಲಿದ್ದಾರೆ,ಸಣ್ಣ ಪುಟ್ಟ ಜಾತಿ ಜನಾಂಗದವರನ್ನು ಕೇಳುವವರೇ ಇಲ್ಲ,ಅಧಿಕಾರಕ್ಕಾಗಿ ಹೂಡುವ ತಂತ್ರಗಳು,ಬೆಳವಣಿಗೆಗಳು ಮಾನವತ್ವವನ್ನೂ ಮೀರಿ ಬೆಳೆದಿವೆ. ಭವಿಷ್ಯವಂತೂ ಬಹಳ ಕರಾಳವಾಗಿದೆ. ಕವಿಗಳು ಎಚ್ಚರವಾಗಿರಬೇಕು. ಪ್ರಶ್ನೆ ; ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು.? ಉತ್ತರ : ಧರ್ಮ ಮತ್ತ ದೇವರು ವಿಷಯ ನಮ್ಮ ತಿಳುವಳಿಕೆ ಹೆಚ್ಚಿದಂತೆಲ್ಲಾ ಬದಲಾಗುತ್ತಾ ಹೋಗುತ್ತದೆ. ಕಂದಾಚಾರ, ಡಾಂಭಿಕತೆಗಳನ್ನು ನಮ್ಮ ತಂದೆ ವಿರೋಧಿಸುತ್ತಿದ್ದರು,ನಮ್ಮಲ್ಲೂ ಅಂಥ ಆಲೋಚನೆಗಳನ್ನು ಬಿತ್ತಿದರು,ಹೀಗಾಗಿ ದೇವರು ಧರ್ಮದ ಬಗೆಗೆ ನಮಗೊಂದು ಸ್ಪಷ್ಠ ಕಲ್ಪನೆ ಇತ್ತು.ಕಲ್ಲು ದೇವರುಗಳಿಗಿಂತ ಮನುಷ್ಯರೊಳಗಿನ ದೇವರನ್ನು ಇವತ್ತಿಗೂ ಹುಡುಕುತ್ತಿದ್ದೇನೆ,ಅನೇಕರು ಸಿಕ್ಕಿದ್ದಾರೆ,ಹೀಗಾಗಿ ಬದುಕು ಸುಂದರವಾಗಲು ನಮಗೆ ನಂಬುಗೆ ಇರಬೇಕು, ಅದು ವಾಸ್ತವದ ನೆಲೆಯಲ್ಲಿದಷ್ಟೂ ದೇವರು ಎಂಬುದು ಆಪ್ತವಾಗುತ್ತದೆ. ಪ್ರಶ್ನೆ ; ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ.? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಗಬ್ಬೆದ್ದು ಹೋಗಿದೆ.ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಗೌರವ ಡಾಕ್ಟರೇಟುಗಳ ಹೆಸರಿನಲ್ಲಿ ಯಾರು ಯಾರೋ ಪದವಿ ಕೊಡುತ್ತಿದ್ದಾರೆ, ಅಪಾತ್ರರು ಪಡೆದುಕೊಳ್ಳುತ್ತಿದ್ದಾರೆ, ಯಾವುದೇ ಪ್ರಶಸ್ತಿ ಘೋಷಣೆಯಾದರೂ ‘ಅರ್ಹರಿಗೆ ಮುಂದಿನ ಬಾರಿ’ ಎನ್ನುವಂತಾಗಿದೆ. ಸಂಸ್ಕೃತಿ ಇಲಾಖೆಯ ಅನುದಾನ ನಿಜ ಕಲಾವಿದರಿಗೆ ಸಿಗುತ್ತಿಲ್ಲ, ಇಲ್ಲಿಯೂ ಬ್ರೋಕರುಗಳು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಪ್ರಶ್ನೆ ; ಸಾಹಿತ್ಯ ವಲಯದ ರಾಜಕಾರಣದ ಬಗೆಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ.? ಉತ್ತರ : ಈಗಂತೂ ರಾಜಕಾರಣ ಎಲ್ಲ ಕ್ಷೇತ್ರವನ್ನೂ ವ್ಯಾಪಿಸಿದೆ, ಅದರ ರಾಕ್ಷಸ ಬಾಹುಗಳು ಎಲ್ಲವನ್ನೂ ಆಪೋಶನ ಮಾಡುತ್ತಾ ಸಾಗಿವೆ. ಕವಿ ಬರಹಗಾರರಿಗೆ ಯಾವ ಪಂಥವೂ ಇರಬಾರದು, ಆತ ಸಮಾಜವನ್ನು ಎಚ್ಚರಿಸುತ್ತ ಜನತೆಯನ್ನು ಸರಿಮಾರ್ಗಕ್ಕೆ ತರುವ ಕೆಲಸ ಮಾಡಬೇಕು. ಇಂಥ ಹೊತ್ತಲ್ಲಿ ಕವಿ ಸಮಾಜದೊಂದಿಗೆ ನಿಲ್ಲಬೇಕು, ಸಮಾಜದೊಂದಿಗೆ ಬೆರೆಯಬೇಕು, ಆದರೆ ಆಗುತ್ತಿರುವುದೇನು, ರಾಜಕಾರಣಿಗಳ ಸುತ್ತ ಗಿರಕಿ ಹೊಡೆಯತ್ತಾ, ಬೇಳೆ ಬೇಯಿಸಿಕೊಳ್ಳತ್ತಿರುವ ಇಂಥಹವರಿಂದ ನಿಜ ಸಾಹಿತಿಗಳು ಮರೆಯಲ್ಲಿಯೇ ಉಳಿಯುವ ಸಂದರ್ಭ ಬಂದಿದೆ, ಪ್ರಶಸ್ತಿಗಾಗಿ, ಪಠ್ಯ ಪುಸ್ತಕಗಳಲ್ಲಿ ಪದ್ಯ ಸೇರಿಸುವದಕ್ಕಾಗಿ, ಅಧಿಕಾರಕ್ಕಾಗಿ ಹಪಹಪಿಸುವ ಸಾಹಿತಿಗಳು ಸಮಾಜಕ್ಕೆ ಏನೂ ಸಂದೇಶ ಕೊಡಬಲ್ಲರು, ಕಾಲವೇ ಎಲ್ಲವನ್ನೂ ಉತ್ತರಿಸುತ್ತದೆ. ಹೊಸ ಬರಹಗಾರರು ಎಚ್ಚರದಿಂದಿರಬೇಕು. ಪ್ರಶ್ನೆ ; ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳು ಏನು.? ಉತ್ತರ : ವಾಸ್ತವದ ನೆಲೆಯಲ್ಲಿ ಬದುಕುತ್ತಿರುವ ನಮಗೆ ಆಶಾದಾಯಕವಾಗಿ ಒಂದಿಷ್ಟು ಕನಸುಗಳಿರಬೇಕು. ‘ಕವಿತೆಯ ಜೀವಂತಿಕೆಯಲ್ಲಿ ಕವಿ ಬದುಕಿದ್ದಕೆ ಸಾಕ್ಷಿಯಿದೆ’ ಎಂದು ನಂಬಿದವ ನಾನು, ಹಾಗಾಗಿ ನನ್ನ ಬರವಣಿಗೆ ಓದುಗರಲ್ಲಿ ಒಂದಿಷ್ಟು ಪರಿವರ್ತನೆ ತಂದರೆ ಅದೇ ನನ್ನ ಸಾರ್ಥಕತೆ ಎಂದುಕೊಂಡಿದ್ದೇನೆ, ನನಗೆ ಕನಸುಗಳಿವೆ ಒಂದು ಕಾದಂಬರಿ ಬರೆಯಲು ಆರಂಭಿಸಿದ್ದೇನೆ, ಬರೆಸಿಕೊಳ್ಳುತ್ತಾ ಸಾಗಿದೆ ಮುಗಿಯಬೇಕಷ್ಟೇ.. ಪ್ರಶ್ನೆ ; ನಿಮ್ಮ ಇಷ್ಟದ ಕವಿ,ಸಾಹಿತಿ ಯಾರು ? ಉತ್ತರ : ನನಗೆ ಲಂಕೇಶ, ಕಂಬಾರ, ತೇಜಸ್ವಿ ಅವರ ಬರಹಗಳು, ಬರಗೂರು,ಚಂಪಾ,ದೇವನೂರು,ಕಾಟ್ಕರ್ ಅವರ ಚಿಂತನೆಗಳು ತುಂಬಾ ಪ್ರಭಾವಿಸಿವೆ. ಜನಪದ ಹಾಡು,ಕಥೆಗಳಂತೂ ನನಗೆ ಜೀವದ್ರವ್ಯ. ಪ್ರಶ್ನೆ ; ಈಚೆಗೆ ಓದಿದ ಕೃತಿಗಳಾವವು ? ಉತ್ತರ : ಡಾ,ಸರಜೂ ಕಾಟ್ಕರ್ ಅವರ ಅನುವಾದಿತ ಕೃತಿಗಳನ್ನು ಓದುತ್ತಿದ್ದೇನೆ, ಅಲಕ್ಷಿತ ಸಾಹಿತ್ಯವನ್ನು ,ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವ ಅವರ ಕೆಲಸ ಮಾದರಿಯಾದುದು, ಹಾಗಾಗಿ ಅವರ ಬರಹಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ.ಹೊಸಬರ ಕಾವ್ಯಗಳನ್ನು ತಪ್ಪದೇ ಓದುತ್ತೇನೆ. ಪ್ರಶ್ನೆ ; ನಿಮಗೆ ಇಷ್ಟವಾದ ಕೆಲಸ ಯಾವುದು.? ಉತ್ತರ : ನನ್ನ ಕೆಲಸದಿಂದ ಇನ್ನೊಬ್ಬರು ಖುಷಿಯಿಂದಿರುವುದು. ಪ್ರಶ್ನೆ ; ನಿಮಗೆ ಇಷ್ಟವಾದ ಸ್ಥಳ ಯಾವುದು.? ಉತ್ತರ : ಬಾದಾಮಿ ಪರಿಸರ, ಕೊಡಗಿನ ಪ್ರಕೃತಿ, ಸಮುದ್ರದ ದಂಡೆ. ಪ್ರಶ್ನೆ ; ನಿಮ್ಮ ಪ್ರೀತಿಯ ,ನೀವು ಇಷ್ಟ ಪಡುವ ಸಿನಿಮಾ ಯಾವುದು ? ಉತ್ತರ : ಡಾ.ರಾಜಕುಮಾರ,ಮಾಧವಿ ಅಭಿನಯದ ‘ಭಾಗ್ಯದ ಲಕ್ಷ್ಮೀ ಬಾರಮ್ಮ’. ಪ್ರಶ್ನೆ ; ನೀವು ಮರೆಯಲಾಗದ ಘಟನೆ ಯಾವುದು ? ಉತ್ತರ : ನಮ್ಮ ತಂದೆ ಬದುಕಿನ ಅನೇಕ ಪಾಠಗಳನ್ನು ಹೇಳಿಕೊಟ್ಟರು,ಅವು ಯಾವ ಪಠ್ಯದಲ್ಲೂ ಇರಲಿಲ್ಲ,ಬದುಕು ಕಟ್ಟಿಕೊಳ್ಳಲು ಅಣ್ಣ ಮತ್ತು ಈಚೆಗೆ ಅಗಲಿದ ತಂದೆ ಅನೇಕ ಮರೆಯಲಾಗದ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ************ ******** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ವಾತ್ಮಗತ
ಮರಗಳ ಮಹಾತಾಯಿ ನಾನು ಎಕೋ ಇಷ್ಟು ಬರಹವನ್ನು ಬರೆದರೂ ಅದ್ಯಾಕೋ ಈ ‘ಸಾಲು ಮರಗಳ ತಿಮ್ಮಕ್ಕ’ನ ಬಗೆಗೆ ಬರೆಯಲಾಗಿರಲಿಲ್ಲ. ಈ ತಿಮ್ಮಕ್ಕನ ಬಗೆಗೆ ಟಿಪ್ಪಣಿ ಬರೆದಿಟ್ಟುಕೊಂಡು ಬಹಳ ದಿನಗಳಾದವು. ಈಗ ಸಾಲು ಮರದ ಈ ತಿಮ್ಮನ ಬಗೆಗೆ ಬರೆಯಬೇಕು ಎಂಬ ತವಕ ಅದ್ಯಾಕೋ ಹೇಚ್ಚಾಯಿತು. ಅದಕ್ಕಾಗಿ ಇಂದು ಈ ಬರಹ ಬರೆದನು.ಅದೋ ಈ ಲೇಖನ ‘ಮರಗಳ ತಾಯಿ ತಿಮ್ಮಕ್ಕ’..! ಮರ ಎಂದಾಕ್ಷಣ ನಮ್ಮ ಮನದಲ್ಲಿ ಮೂಡಿ ಬರುವವರೇ ತಿಮ್ಮಕ್ಕನರವರು. ಬರೀ ತಿಮ್ಮಕ್ಕನೆಂದರೆ ಬಹುಶಃ ಯಾರಿಗೂ ಗೊತ್ತಾಗಲಾರದು. ಸಾಲು ಮರದ ತಿಮ್ಮಕ್ಕನೆಂದೇ ಕರೆಯಬೇಕು.ಇವರ ಬಗ್ಗೆ ತಿಳಿದೇ ಇಲ್ಲ ಅನ್ನೋ ಜನ ಬಹಳ ಕಡಿಮೆ. ನಮಗೆ ತಿಳಿದ ಪ್ರಕಾರ, ಸಾಲು ಮರದ ತಿಮ್ಮಕ್ಕ ಎಂದರೆ ನಾಲ್ಕು ಕಿಲೋಮೀಟರ್ ಉದ್ದಕ್ಕೂ ಮರ ನೆಟ್ಡಿದ್ದಾರೆ. ಪೃಕೃತಿ ಮಾತೆಯನ್ನೇ ಬೆಳೆಸಿ ಪೋಷಿಸುವ ಮಹತ್ಕಾರ್ಯ ಮಾಡಿರುವ ಸಾಲು ಮರದ ತಿಮಕ್ಕ. ಅವರು ನಮ್ಮೆಲ್ಲರ ಹೆಮ್ಮೆ ಹಾಗೂ ಆದರ್ಶವಾದ ಪರಿಸರವಾದಿ. ತಿಮ್ಮಕ್ಕ ಮೂಲತಃ ಬೆಂಗಳೂರು ಹತ್ತಿರದ, ಮಾಗಡಿ ತಾಲ್ಲೂಕಿನ ಹುಳಿಕಲ್ ಗ್ರಾಮದವರು. ತಿಮಕ್ಕನರವರು ಹೆಚ್ಚು ಓದಿಲ್ಲದ ಕಾರಣ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಮಕ್ಕಳಾಗದಿದ್ದರೆ ಎಂತವರಿಗೂ ಬೇಸರವಾಗುತ್ತದೆ. ಹಾಗೆಯೇ ತಿಮ್ಮಕ್ಕನವರಿಗೂ ಈ ಕೊರತೆ ಕಾಡುತ್ತಲೇ ಇತ್ತು. ಆದರೆ ತಿಮ್ಮಕ್ಕ ಕುಗ್ಗಲಿಲ್ಲ. ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು. ಮರಗಳನ್ನೇ ಮಕ್ಕಳಂತೆ ಪ್ರೀತಿಯಿಂದ ಬೆಳೆಸಿದರು ಅವರ ಈ ಮಹಾನ್ ಕೆಲಸಕ್ಕೆ, ಪತಿ ಚಿಕ್ಕಯ್ಯ ಅವರೂ ಸಹ ಕೈ ಜೋಡಿಸಿದರು. ತಿಮ್ಮಕ್ಕ ಹುಟ್ಟುತ್ತಲೇ ಬಡತನವನ್ನು ಹಾಸಿ ಹೊದ್ದು ಬಂದವರು. ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ ಅವರದು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು. ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ ಮಹಿಳೆ ತಿಮ್ಮಕ್ಕರವರಿಗೆ 100 ವರ್ಷ ತುಂಬಿದೆ. ತಮ್ಮ ಸಾಧನೆಗಾಗಿ ತಿಮ್ಮಕ್ಕ ಅವರಿಗೆ ಹಲವು ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಇವರಿಗೆ, ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆರವರಿಂದ ಮಾನ್ಯತೆಯ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಕಡೆಯಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಟ ಆಫ ಲೀವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010 ರ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿಗಳು ಲಭಿಸಿವೆ. ಸಾಲು ಮರದ ತಿಮ್ಮಕ್ಕ ಅವರ ಸಾಧನೆಯಿಂದ ಸ್ಪೂರ್ತಿ ಪಡೆದಾದರೂ ನಾವು ಪರಿಸರವನ್ನು ಉಳಿಸುವಲ್ಲಿ ನಮ್ಮ ಕಾರ್ಯ ನಿರ್ವಹಿಸಬೇಕು. ಗಿಡ ಮರಗಳನ್ನು ನಮ್ಮ ಮನೆ ಸುತ್ತ ಬೆಳೆಸೋಣ. ಕಸ-ಕಡ್ಡಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕೋದನ್ನು ನಿಲ್ಲಿಸೋಣ. ಶಬ್ದ ಮಾಲಿನ್ಯ ಕಡಿಮೆ ಮಾಡೋಣ. ಜಲಮಾಲಿನ್ಯ ಆದಷ್ಟು ತಡೆಯೋಣ. ನದಿ, ಭಾವಿ, ಕೆರೆ, ಕೊಳ್ಳಗಳನ್ನು ಉಳಿಸಿ ಮಾಲಿನ್ಯದಿಂದ ತಡೆಗಟ್ಟೋಣ. ನಮ್ಮ ಪರಿಸರವನ್ನು ಶುದ್ಧಿಯಾಗಿ ಉಳಿಸಲು ಇನ್ನು ಏನೇನು ಸಾಧ್ಯವೋ ಅದನ್ನು ಮಾಡೋಣ. ಇದೇ ನಾವು ಈ ಅಜ್ಜಿಗೆ ಸಲ್ಲಿಸುವ ಸನ್ಮಾನ- ಗೌರವ. ಸಾಲುಮರದ ತಿಮ್ಮಕ್ಕ ನಮಗೆಲ್ಲ ಮಾದರಿಯಾಗಲಿ. ********* ಕೆ.ಶಿವು.ಲಕ್ಕಣ್ಣವರ
ಕಬ್ಬಿಗರ ಅಬ್ಬಿ – ಸಂಚಿಕೆ – ೨
ಚೊಕ್ಕಾಡಿಯ ಹಾಡುಹಕ್ಕಿ ಮಹಾದೇವ ಕಾನತ್ತಿಲ ಎರಡು ದಶಕಗಳ ಹಿಂದೆ, ಹಿಮಾಲಯದ ತಪ್ಪಲಿನ, ರಾಣೀಖೇತ್ ಎಂಬ ಜಾಗದಲ್ಲಿ, ಚಾರಣ ಮಾಡುತ್ತಿದ್ದೆ. ಬೆಟ್ಟ ಹತ್ತುತ್ತಾ, ಓರ್ವ ಬೆಟ್ಟದ ಜೀವಿ ಜತೆಯಾದ. ಆತನ ಮನೆ ಬೆಟ್ಟದ ತುದಿಯ ಹತ್ತಿರ. ಬರೇ ಕಾಲುದಾರಿ,ಸುತ್ತೀ ಬಳಸೀ, ಮರ ಹತ್ತುವ ಲತೆಯಂತೆ ಗುಡ್ಡ ಹತ್ತುತ್ತೆ. ಆಸ್ಪತ್ರೆಗೆ ಬೇಕಾದಲ್ಲಿ ಹತ್ತಾರು ಕಿಲೋಮೀಟರ್ ದೂರ. ಆತನ ಹತ್ತಿರ, ನಾನು ಕೇಳಿದೆ, ಅನಾರೋಗ್ಯವಾದಾಗ ಏನು ಮಾಡುತ್ತೀರಿ ಅಂತ. ಆತ ಅಂದ, “ಇಧರ್ ವನಸ್ಪತಿಯೋಂ ಕೀ ಹವಾ ಹೈ, ಹಮ್ ಹಮೇಷಾ ಸ್ವಸ್ತ್ ರೆಹ್ ತೇ ಹೈ” ಅಂತ. ( ಇಲ್ಲಿ ವನಸ್ಪತಿಗಳ ಗಾಳಿ ತುಂಬಿದೆ, ನಾವು ಯಾವಾಗಲೂ ಆರೋಗ್ಯದಿಂದಿರುತ್ತೇವೆ). ಕನ್ನಡ ಕಾವ್ಯ ಸಂದರ್ಭದಲ್ಲಿ, ಚೊಕ್ಕಾಡಿಯವರ ಕಾವ್ಯ, ಹೀಗೆಯೇ ವನಸ್ಪತಿಯ ಗಾಳಿಯ ಹಾಗೆ, ಕಾವ್ಯಲೋಕದೊಳಗೆ ಪ್ರೀತಿ ತುಂಬಿ, ಕವಿಗಳನ್ನು, ಓದುಗರನ್ನು, ದಷ್ಟಪುಷ್ಟವಾಗಿರಿಸಿ, ಕಾವ್ಯ ಪ್ರಜ್ಞೆಗೂ ಆರೋಗ್ಯ ತುಂಬಿದ ಸತ್ವವದು. ಗಿಡಮರಗಳು ನೆಲದ ಸಾರಹೀರಿ ಬೆಳೆಯುವಂತೆಯೇ, ಕಾವ್ಯವೂ ಕವಿ ಬೆಳೆದ ನೆಲದ ಅಷ್ಟೂ ರಸ ಹೀರಿ ಘಮಘಮಿಸುತ್ತದೆ. ಬೇಂದ್ರೆಯವರ ಕವಿತೆಯಲ್ಲಿ ಧಾರವಾಡ ಫೇಡಾದ ಸಿಹಿ, ರವೀಂದ್ರನಾಥ ಟಾಗೋರ್ ಅವರ ಕವಿತೆಯಲ್ಲಿ ಹೂಗ್ಲೀ ನದಿಯ ಮೆಕ್ಜಲು ಮಣ್ಣಿನ ತತ್ವ , ಹಾಗೇ ಚೊಕ್ಕಾಡಿಯವರ ಕವಿತೆಗಳಲ್ಲಿ ವನಸ್ಪತಿಯ ‘ಹವಾ’ ಈ ಚೊಕ್ಕಾಡಿ, ಪಶ್ಚಿಮ ಘಟ್ಟಗಳ ಮಡಿಲಿನ ಪುಟ್ಟ ಊರು. ಜಗತ್ತಿನ ಅತ್ಯಂತ ವೈವಿಧ್ಯಮಯ ಜೀವಜಾಲಗಳ ತವರು, ಪಶ್ಚಿಮ ಘಟ್ಟಗಳ ಸಾಲುಗಳು ಎಂದು ಪ್ರಕೃತಿ ಸಂಶೋಧನೆ ಹೇಳಿದೆ. ಇಲ್ಲಿ ವರ್ಷದ ನಾಲ್ಕು ತಿಂಗಳು ಸುರಿವ ವರ್ಷಧಾರೆಯಿಂದ, ವ್ಯೋಮಾನಂತಕ್ಕೆ ಬಾಯಿತೆರೆದು ಬೆಳೆದ ಅಸಂಖ್ಯ ಸಸ್ಯ ಸಂಕುಲ, ಮಣ್ಣು, ಮತ್ತು ವಾತಾವರಣದ ಜೀವ-ತೇವಾಂಶದಲ್ಲಿ ವಂಶ ಚಿಗುರಿಸುವ ಬಗೆ ಬಗೆಯ ಪ್ರಾಣಿಗಳು, ಬಯೋಡೈವರ್ಸಿಟಿಯ ಪ್ರತೀಕವಾಗಿದೆ. ಇದೆಲ್ಲವೂ ಚೊಕ್ಕಾಡಿಯ ನೆಲದ ಗುಣ ಹೇಗೆಯೋ, ಹಾಗೇ ಕಾವ್ಯದ ಘನವೂ ಹೌದು!. ಕವಿ,ಸುಬ್ರಾಯ ಚೊಕ್ಕಾಡಿಯವರ ಕಾವ್ಯದ ಪ್ರತಿಮೆಗಳು ಈ ವನಜನ್ಯ ಜೀವಜಾಲದ ಗರ್ಭಕೋಶದಲ್ಲಿ ಬಸಿರಾದವುಗಳು. ಅವರ ಪ್ರಕೃತಿ ಎಂಬ ಕವನದ ಸಾಲುಗಳು ಇದನ್ನೇ ಧ್ವನಿಸುತ್ತೆ. “ಹಸುರ ದಟ್ಟಣೆ , ಕೆಳಗೆ ವಿಸ್ಮೃತಿಯ ಪ್ರತಿರೂಪದಂತೆ ಮಲಗಿದ ನೆರಳು ಅಂತಸ್ಥಪದರದಲಿ ಬೀಜರೂಪದ ಹಾಗೆ” ಮರಗಿಡ ಪ್ರಾಣಿ ಪಕ್ಷಿಗಳನ್ನು ತನ್ನದೇ ಭಾಗವಾಗಿ ನೋಡುವ ಕವಿ, ತನ್ನದೇ ಒಂದು ಪುಟ್ಟ ಪ್ರಪಂಚದಲ್ಲಿ ಬದುಕುತ್ತಾನೆ. ಪ್ರಾಣಿ ಪಕ್ಷಿಗಳ ಲೋಕ ಅಮಾಯಕತೆಯ ನೇರ ಸರಳತೆಯ ಪ್ರತಿಮೆ. ಅವರ “ಪುಟ್ಟ ಪ್ರಪಂಚ” ಹೀಗಿದೆ ನೋಡಿ “ಮರಗಿಡ ಪ್ರಾಣಿಪಕ್ಷಿಗಳ ನನ್ನ ಪುಟ್ಟ ಪ್ರಪಂಚದ ಒಳಗೆ ಒಮ್ಮೊಮ್ಮೆ ಮನುಷ್ಯರೂ ನುಸುಳಿಕೊಳ್ಳುತ್ತಾರೆ ಅನಾಮತ್ತಾಗಿ- ಸುತ್ತ ಸೇರಿದ್ದ ಮರಗಿಡ ಬಳ್ಳಿಗಳು, ಅಳಿಲು, ಗುಬ್ಬಿ, ಬೆಳ್ಳಕ್ಕಿಗಳು ಸುತ್ತ ಮಾಯೆಯ ಬಟ್ಟೆ ನೇಯುತ್ತಿರಲು, ಅಪರಿಚಿತರಾಗಮನಕ್ಕೆ ಗಡಬಡಿಸಿ, ಚೆಲ್ಲಾಪಿಲ್ಲಿಯಾಗುತ್ತಾವೆ. ನಾಚಿಕೆಯಿಂದ ಮುದುಡಿಕೊಳ್ಳುತ್ತಾ, ಅವನತಮುಖಿಗಳಾಗಿ ಕುಗ್ಗುತ್ತ, ಕುಗ್ಗುತ್ತ ಇಲ್ಲವಾಗುತ್ತಾವೆ” ಅಂತಹ ಪ್ರಪಂಚಕ್ಕೆ ಮನುಷ್ಯ ನುಗ್ಗಿದಾಗ, ಬಟ್ಟೆ ನೇಯುತ್ತಿರುವ ಸಸ್ಯ ಪ್ರಾಣಿ ಸಂಕುಲಗಳು ಚಲ್ಲಾಪಿಲ್ಲಿಯಾಗುತ್ತವೆ. ಕುಗ್ಗುತ್ತ ಕುಗ್ಗುತ್ತ ಇಲ್ಲವಾಗುತ್ತವೆ. ಇಲ್ಲಿ ಮನುಷ್ಯ ಅನ್ಬುವ ಪ್ರತಿಮೆ, ಆಕ್ರಮಣಕಾರಿ. ತನ್ನಷ್ಟಕ್ಕೇ, ಶಾಂತವಾಗಿ, ಮುಕ್ತವಾಗಿ ಸ್ವತಂತ್ರವಾಗಿ ಬದುಕುವ ಒಂದು ಮಲ್ಟಿಪೋಲಾರ್ ವ್ಯವಸ್ಥೆಯನ್ನು ಒಂದು ಆಕ್ರಮಣಕಾರಿ, ಯುನಿಪೋಲಾರ್ ತತ್ವ ಹೇಗೆ ನಾಶಮಾಡುತ್ತೆ,ಎಂಬ ಸಮಾಜ ತತ್ವವನ್ನು ಕವಿ ಚೊಕ್ಕಾಡಿಯ ಪುಟ್ಟ ಪ್ರಪಂಚ ತೆರೆದಿಡುತ್ತೆ. ಒಂದು ನದಿ ಹರಿಯುತ್ತಾ ಅದರ ಪ್ರವಾಹದಲ್ಲಿ ಒಂದು ಎಲೆ ತೇಲಿ, ವನಕವಿಗೆ ಎಲೆಯೂ ಕವಿತೆಯಾಗುತ್ತೆ, ಹರಿಯುವ ನದಿ, ನದಿಯ ಇಕ್ಕೆಲದ ದಡಗಳು, ನದಿಯ ಪ್ರವಾಹ ಮತ್ತು ತೇಲುವ ಎಲೆ, ಇವೆಲ್ಲಾ ಕಾವ್ಯದ ಬೀಜಾಕ್ಷರಗಳು. “ಮೇಲೆ ಆಕಾಶಕ್ಕೆ ಹಾರದೆ ಕೆಳಗೆ ತಳಕ್ಕಿಳಿಯದೆ ನದಿ ನಡುವೆ ತಿರುಗಣಿ ಮಡುವಿಗೆ ಸಿಲುಕಿಯೂ ಒಳಸೇರದೆ ಅಂಚಿನಲ್ಲೇ ಸುತ್ತು ಹಾಕುತ್ತಾ ದಂಡೆಯ ಗುಂಟ ಚಲಿಸುತ್ತಿದೆ ದಡ ಸೇರದೆ” ಬದುಕು ಕಾಲದ ಪ್ರವಾಹದಲ್ಲಿ ತೇಲುತ್ತಿದೆಯೇ?, ಭಾವದ ಅಲೆಗಳಲ್ಲಿ ಕವಿ ತೇಲುತ್ತಿದ್ದಾನೆಯೇ?. ಮುಳುಗದೆ, ಆಕಾಶಕ್ಕೆ ಹಾರದೆ ದಂಡೆಯಗುಂಟ ತೇಲಿ ಸಾಗುವ ಎಲೆ, ವಾಸ್ತವ ತತ್ವವೇ, ನಿರ್ಲಿಪ್ತತೆಯೇ? ಚೊಕ್ಕಾಡಿಯ ಹಳ್ಳಿಯ ಕವಿಗೆ ಕಾಡುಮರದೆಲೆಯೂ, ಮಹಾಕಾವ್ಯ ಬರೆಯಲು ಪತ್ರವಾಯಿತು ನೋಡಿ! ಅವರ ಇನ್ನೊಂದು ಕವಿತೆ ಹಕ್ಕಿ ಮತ್ತು ಮರದ ಬಗ್ಗೆ ( ದ್ವಾ ಸುಪರ್ಣಾ). ಹಕ್ಕಿ, ಮರದ ಆಸರೆಯಲ್ಲಿ ಗೂಡುಕಟ್ಟಿ ಒಂದರೊಳಗೊಂದಾಗಿ ಜೀವಿಸುವ ವಸ್ತು ಈ ಕವಿತೆಯದ್ದು. ಜಗತ್ತಿನಲ್ಲಿ ಯಾರೂ, ಯಾವ ತತ್ವವೂ ಇಂಡಿಪೆಂಡೆಂಟ್ ಅಲ್ಲ, ಇಂಟರ್ಡಿಪೆಂಡೆಂಟ್ ಎಂಬ ಆಧುನಿಕ ಮ್ಯಾನೇಜ್ಮೆಂಟ್ ತತ್ವವೂ ಇದೇ. “ಸ್ಥಗಿತ ಕಾಲದ ಆಚೆ,ಹುತ್ತ ಕಟ್ಟಿದ ಹಾಗೆ ಮರಕ್ಕೆ ಹಕ್ಕಿಯ ರೆಕ್ಕೆ ಎಲೆ ಮೂಡಿ ಹಕ್ಕಿ ದೇಹಕ್ಕೆ ಹಕ್ಕಿ ಮರವಾಗಿ,ಮರವೇ ಹಕ್ಕಿಯಾಗಿ” ಮರ ಸ್ಥಿರ ಚೇತನ, ಹಕ್ಕಿ ಚರ ಚೇತನ. ಮರ ಸ್ಥಿರ ವ್ಯವಸ್ಥೆ, ಹಕ್ಕಿ ಹೊಸತಿಗಾಗಿ ಚಾಚುವ ಪ್ರಯೋಗ ಮರ ಸ್ಥಿರ ಮನಸ್ಸು, ಹಕ್ಕಿ ಗಗನಕ್ಕೆ ಲಗ್ಗೆ ಹಾಕುವ ಕನಸು. ಆದರೆ ಇವೆರಡೂ ಒಂದಕ್ಕೊಂದು ಪೂರಕವಾಗಿ ಒಂದರೊಳಗೊಂದು ಅನ್ಯೋನ್ಯವಾಗಿ ಸಹಬಾಳ್ವೆ ನಡೆಸುವ ಸಮತತ್ವ ಪ್ರಕೃತಿಯದ್ದೂ ಚೊಕ್ಕಾಡಿಯ ಕಾವ್ಯದ್ದೂ. ನೆಲ ಹಸನು ಮಾಡಿ, ಮಗು ಬೀಜ ಬಿತ್ತಿ ಮೊಳಕೆ ಬರುವುದನ್ನು,ಬೆರಗುಗಣ್ಣಿಂದ ಕಾದು ನೋಡುತ್ತೆ, ಒಂದೊಂದಾಗಿ ಎಲೆಗಳನ್ನು, ಟಿಸಿಲೊಡೆಯುವ ಗೆಲ್ಲುಗಳನ್ನು ನೋಡಿ ಇದೇಕೆ ಹೀಗೆ ಎಂದು ಅನ್ವೇಷಣೆ ಮಾಡುತ್ತೆ. ಅಂತಹ ಒಂದು ಮಗುವಿನ ಪಕ್ಷಪಾತರಹಿತ ಮುಗ್ಧ ಅನ್ವೇಷಣೆ ಕೂಡಾ ಚೊಕ್ಕಾಡಿಯವರ ಕಾವ್ಯದ ಮೂಲಸೆಲೆ. ಅವರ ‘ಪರಿಚಯ’ ಎಂಬ ಕವಿತೆ, ಇದಕ್ಕೊಂದು ನೇರ ಉದಾಹರಣೆ. ಈ ಕವಿತೆಯಲ್ಲಿ, ಕವಿ, ತನ್ನ ಪಕ್ಕದ ಮನೆಗೆ ಬಾಡಿಗೆಗೆ ಬಂದ ವ್ಯಕ್ತಿಯ ಮನೆಯ ಕದ ತಟ್ಟಿ, ಆತ ಯಾರು, ಎಂದು ತಿಳಿಯುವ ಮುಗ್ಧ ಪ್ರಯತ್ನ ಮಾಡುತ್ತಾನೆ. ಕವಿ ಮತ್ತು ಆ ವ್ಯಕ್ತಿಯ ಸಂಭಾಷಣೆ ಕವಿತೆಯಲ್ಲಿ ಹೀಗೆ ಕೊನೆಯಾಗುತ್ತದೆ. “ಪೆಚ್ಚುಪೆಚ್ಚಾಗಿ ಕೊನೆಯ ಯತ್ನವಾಗಿ ಕೇಳಿದೆ ಸ್ವಾಮೀ, ಇಷ್ಟಕ್ಕೂ ತಾವು ಯಾರು? ನಾನೇ? – ಅಂದ – ನಾನೇ ನೀನೂ ಅಂದು ಫಳಕ್ಕನೆ ಬಾಗಿಲು ಮುಚ್ಚಿದ ಅಯ್ಯಾ , ನಾನು ಯಾರು?” ನೀವು ಯಾರು? ಎಂದು ಶುರುವಾಗುವ ಕವಿತೆ ಕೊನೆಯಾಗುವುದು, ನಾನು ಯಾರು? ಎಂಬ ಪ್ರಶ್ನೆಯೊಂದಿಗೆ. ಈ ಕವಿತೆಯಲ್ಲಿ ಬರುವ ನಾನು, ನೀನು, ಬಾಡಿಗೆ ಮನೆ, ತಟ್ಟುವ ಕದ, ಮುಚ್ಚುವ ಬಾಗಿಲು, ಸಂವಾದ ಎಲ್ಲವೂ ಆಳಚಿಂತನೆ ಬೇಡುವ ಪ್ರತಿಮೆಗಳಲ್ಲವೇ. ಚೊಕ್ಕಾಡಿಯವರಿಗೆ ಎಂಭತ್ತು ವರ್ಷ ತುಂಬಿ ಕೆಲವೇ ದಿನಗಳು ಕಳೆದವು. ಅಡಿ ಚೊಕ್ಕವಾಗಿದ್ದರೆ, ಶಿರ ಶುಭ್ರ, ಮನಸ್ಸು ನಿರ್ಮಲ ಎಂದು ಬದುಕಿದ, ಹಾಡುಹಕ್ಕಿ ಅವರು. ಹಳ್ಳಿಯಲ್ಲಿ ಗೂಡು ಕಟ್ಟಿ, ಪಟ್ಟಣಕ್ಕೆ, ಸಮಗ್ರ ಹೃದಯ ಪಟ್ಟಣಕ್ಕೆ, ಪ್ರೀತಿರೆಕ್ಕೆ ಬೀಸಿ ಹಾರಿ, ರಾತ್ರೆಯೊಳಗೆ ಪುನಃ ಗೂಡು ಸೇರುವ ಮತ್ತು ತಮ್ಮ “ವನಸ್ಪತೀ ಹವಾ” ದಿಂದ ಸ್ವಸ್ಥ ಸಾರಸ್ವತ ಲೋಕದ ವಾತಾವರಣ ನಿರ್ಮಾಣ ಮಾಡಿದ ಅವರಿಗೆ ಎಂಭತ್ತರ ಶುಭಾಶಯಗಳು. **********
ವಲಸೆಯ ಹಾದಿಯಲ್ಲಿ ಪುಸ್ತಕ- ಮಲಾಣ್ಲೇಖಕರು- ಶಾಂತಾ ನಾಯ್ಕ ಶಿರಗಾನಹಳ್ಳಿಬೆಲೆ-೩೧೦/-ಪ್ರಕಾಶಕರು- ದೇಸಿ ಪುಸ್ತಕ ಸೃಷ್ಟಿ ನಾಗೇಶ್ ಒಂದಿಷ್ಟು ಪುಸ್ತಕಗಳನ್ನು ಕಳಿಸಿದ್ದರು. ಅದರಲ್ಲಿ ಮಲಾಣ್ ಕೂಡ ಒಂದು. ನೋಡಿದ ಕೂಡಲೇ ಬೇರೆಲ್ಲ ಕೆಲಸ ಬಿಟ್ಟು ಅದನ್ನೇ ಓದಲಾರಂಭಿಸಿದೆ. ಯಾಕೆಂದರೆ ಅದು ನಾನು ತುಂಬಾ ಗೌರವಿಸುವ ಶಾಂತಾ ನಾಯ್ಕ ಶಿರಗಾನಹಳ್ಳಿಯವರ ಪುಸ್ತಕ. ಹಿಂದೊಮ್ಮೆ ಸುಮಾರು ನಾನು ಹೈಸ್ಕೂಲಿನಲ್ಲಿದ್ದಾಗ ಅವರು ಕಾರವಾರದ ಆಕಾಶವಾಣಿಯಲ್ಲಿದ್ದವರು. ಆಗಲೇ ಇವಳು ಬರೆಯುತ್ತಾಳೆ ನೋಡಿ ಎಂದು ಬೆನ್ನು ತಟ್ಟಿದವರು. ಹೀಗಾಗಿ ಅವರ ಹೆಸರು ನೋಡಿದಾಕ್ಷಣ ಅದನ್ನೇ ಮೊದಲು ಓದಬೇಕೆನಿಸಿತ್ತು. ಈ ಸಲ ಸೃಷ್ಟಿ ನಾಗೇಶ್ ಹೇಳಿದ ಇದನ್ನು ಮೊದಲು ಓದಿ ಎನ್ನುವ ಎಲ್ಲ ಮಾತುಗಳನ್ನೂ ಗಾಳಿಗೆ ತೂರಿಯಾಗಿತ್ತು. ಇದೊಂದು ಶತಮಾತಗಳ ವಲಸೆಯ ಕಥೆ. ರಾಜಸ್ಥಾನದ ಒಂದು ಹಳ್ಳಿಯಿಂದ ಕರ್ನಾಟಕ, ಆಂದ್ರದ ಕಡೆಗೆ ಗುಳೆ ಬಂದಂತಹ ಈ ಜನಾಂಗದ ಕಥೆಯನ್ನು ಓದಿದರೆ ಮೈನವಿರೇಳದೇ ಇರದು. ಕೆಲವು ಕಡೆ ಕೋಪ, ಕೆಲವು ಕಡೆ ಕಣ್ಣೀರು ನಮ್ಮನ್ನು ಕೇಳದೇ ನುಸುಳದಿದ್ದರೆ ನೀವು ಈ ಕಾದಂಬರಿಯನ್ನು ಓದಿದ್ದೂ ವ್ಯರ್ಥ ಎನ್ನುವಷ್ಟು ಸೊಗಸಾಗಿ ಮೂಡಿ ಬಂದಿದೆ. ಬಂಜಾರಾ ಜನಾಂಗವು ರಾಜಸ್ಥಾನದ ಹಳ್ಳಿಗಳಲ್ಲಿ ವೈಭವದಿಂದ ಜೀವನ ಮಾಡಿಕೊಂಡಿದ್ದವರು. ವ್ಯಾಪಾರ ವಹಿವಾಟಿನಿಂದಾಗಿ ಸಾಕಷ್ಟು ಗಟ್ಟಿ ಕುಳ ಎನ್ನಿಸಿಕೊಂಡವರು. ಆದರೆ ಯಾವಾಗ ದೆಹಲಿಯಲ್ಲಿ ಮುಸ್ಲಿಂ ಆಡಲಿತ ಪ್ರಾರಂಭವಾಯಿತೋ ಅದರಲ್ಲೂ ಔರಂಗಜೇಬ್ ದೆಹಲಿಯ ಸಿಂಹಾಸನವನ್ನೇರಿದನೋ ಆಗ ಪ್ರಾರಂಭವಾಯಿತು ನೋಡಿ, ಬಂಜಾರಾಗಳ ದುರ್ವಿಧಿ. ಈ ಕಾದಂಬರಿ ಪ್ರಾರಂಭವಾಗುವುದೂ ಕೂಡ ದಕ್ಷಿಣಕ್ಕೆ ವಲಸೆ ಹೋಗುವ ಸೈನ್ಯದೊಂದಿಗೆ ಸೇರಿಕೊಳ್ಳುವ ಇಬ್ಬರು ಸಹೋದರರ ಕಥೆಯೊಂದಿಗೆ. ಅವರು ದಕ್ಷಿಣದ ಕಡೆಗೆ ವಲಸೆ ಹೋಗಲು ನಿರ್ಧರಿಸಿರುವುದೂ ಕೂಡ ಮುಸ್ಲಿಂ ಯುವಕರು ತಮ್ಮ ಸಹೋದರಿಯರನ್ನು ‘ಆಗ್ವಾ’ ಮಾಡಿಕೊಂಡು ಹೋದಾರೆಂಬ ಭಯದಿಂದಲೇ. ಬಂಜಾರಾ ಹುಡುಗಿಯರು ತಾಂಡಾದಿಂದ ಹೊರಗೆ ಬರುವುದೇ ದೀಪಾವಳಿ ಹಬ್ಬದಂದು ಮಾತ್ರ. ತಾಂಡಾದ ಆದಿದೇವತೆ ಮರಿಯಮ್ಮನ ಮಟ್ಟೋದ ಮುಂದೆ ನೃತ್ಯ ಮಾಡಲು. ಆಗ ಮಾತ್ರ ಮುಸ್ಲಿಂ ಯುವಕರಿಗೆ ಆ ಹುಡುಗಿಯರು ಕಾಣಸಿಗುತ್ತಿದ್ದುದು. ಹೀಗಾಗಿ ಗುಂಪು ಗುಂಪಾಗಿ ಬರುವ ಮುಸ್ಲಿಂ ಯುವಕರು ಬಂಜಾರಾ ಯುವತಿಯರನ್ನು ಅಪಹರಿಸಿಕೊಂಡು ಹೋಗಿಬಿಡುತ್ತಿದ್ದರು. ಹಾಗೆ ಅಪಹರಿಸಿಕೊಂಡು ಹೋದ ನಂತರ ಆ ಯುವತಿಯರು ಅತ್ತ ಮುಸ್ಲಿಂ ಕೂಡ ಆಗಲಾರದೇ, ಇತ್ತ ಬಂಜಾರಾ ಸಮುದಾಯಕ್ಕೂ ಸೇರಿದವರಾಗಿ ಉಳಿಯದೇ ಜೀವನದಲ್ಲಿ ನೊಂದು ಬದುಕೇ ಬೇಸರವಾಗಿ ಆತ್ಮಹತ್ಯೆಗೂ ಹೇಸದ ಸ್ಥಿತಿ ತಲುಪಿಬಿಡುತ್ತಿದ್ದರು. ಈ ಕಾರಣದಿಮದಾಗಿಯೇ ಎತ್ತುಗಳನ್ನು ಸಾಕಿಕೊಂಡು ದೊಡ್ಡ ವ್ಯಾಪಾರಸ್ಥರಾಗಿದ್ದ ಬಂಜಾರ ಸಮುದಾಯ ಗುಜರಾತ ಕಡೆಗೆ ಅತ್ತ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಕಾಡುಗಳೊಳಗೆ ಸೇರಿಕೊಂಡು ಬುಡಕಟ್ಟುಜನಾಂಗದವರಂತೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಬಂಜಾರರ ವ್ಯಾಪಾರದ ನೈಪುಣ್ಯತೆ, ಅವರ ವ್ಯವಹಾರಿಕ ಜ್ಞಾನ ಮತ್ತು ಎಲ್ಲದ್ದಕ್ಕಿಂತ ಮುಖ್ಯವಾಗಿ ಅವರ ಧೈರ್‍ಯ ಸಾಹಸ ಹಾಗೂ ದೇಹದೃಢತೆಯಿಂದಾಗಿ ಮುಸ್ಲಿಂ ಆಡಳಿತಗಾರರಿಗೆ ಬಂಜಾರರ ಮಾರ್ಗದರ್ಶನ ಅನಿವಾರ್ಯವಾಗಿದ್ದಿತು. ಇತ್ತ ಬಂಜಾರರಿಗೂ ಮುಸ್ಲಿಂ ಆಡಳಿತದಿಂದ ದೂರ ಸರಿದು ತಮ್ಮ ಹೆಣ್ಣುಮಕ್ಕಳ ರಕ್ಷಣೆ ಮಾಡಿಕೊಳ್ಳುವ ಆತುರದಲ್ಲಿದ್ದರು. ಇಂತಹುದ್ದೇ ಹೊತ್ತಿನಲ್ಲಿ ತಮ್ಮ ತಂಗಿ ರೂಪ್ಕಿ ಹಾಗೂ ಅವಳ ತಂಗಿ ಪಾರೂವನ್ನು ರಕ್ಷಣೆ ಮಾಡುವ ಭರದಲ್ಲಿ ಹತ್ತು ಮುಸ್ಲಿಂ ಯುವಕರನ್ನು ಕೊಂದು ಹಾಕಿದ್ದ ಮೀಟು ಹಾಗೂ ಥಾವು ಔರಂಗಜೇಬನ ಸೇನಾಧಿಪತಿಯರಲ್ಲಿ ಒಬ್ಬನಾದ ಜುಲ್ಮಾನ್‌ಖಾನ ಎಂಬುವವನಿಗೆ ತಿಳಿದರೆ ಇಡೀ ತಾಂಡಾ ಸರ್ವನಾಶವಾಗುವುದನ್ನು ಅರಿತು ಸಂಕೆಭಾಕ್ರಿ ಎನ್ನುವ ತಾಂಡಾವನ್ನು ಬಿಟ್ಟು ಜೈಪುರದ ಹತ್ತಿರ ದಕ್ಷಿಣ ಭಾರತದ ವ್ಯಾಪಾರಕ್ಕೆಂದು ತಮ್ಮೊಂದಿಗೆ ಸೈನ್ಯವನ್ನು ಆಯ್ಕೆ ಮಾಡುತ್ತಿರುವ ಜಂಗಿ ಭಂಗಿ ಎಂಬ ಸಹೋದರರ ಕಡೆ ಬಂದಿದ್ದರು. ಅವರ ಬಳಿ ತಾವು ಚವ್ಹಾಣರು ಎಂದು ಕೆಲಸಕ್ಕೆ ಸೇರಿಕೊಂಡು ಹೊರಡುವ ಮಹಾ ವಲಸೆಯ ಕಥೆ ಇದು. ಆ ವಲಸೆಯಲ್ಲಿಯೇ ಮದುವೆ ಮಾಡಿಕೊಳ್ಳುವ ಮೀಟುವಿನ ಬಾಳಿನ ತಿರುವಿನ ಕಥೆ ಇಲ್ಲಿದೆ. ಚಿಕ್ಕವಳಿರುವಾಗ ನನಗೆ ರಾಧಾ ಕೃಷ್ಣರ ಕಥೆ ಅಚ್ಚರಿ ಹುಟ್ಟಿಸುತ್ತಿತ್ತು. ಇಡೀ ಜಗತ್ತಿಲ್ಲಿ ಅತ್ಯುನ್ನತ ಪ್ರೇಮಕ್ಕೆ ಉದಾಹರಣೆಯಾಗಿ ನೀಡುವ ಈ ಕಥೆಯ ನಾಯಕಿ ರಾಧಾ ಕೃಷ್ಣನ ಪತ್ನಿಯಲ್ಲ. ಆಕೆ ಬರೀ ಕೃಷ್ಣನ ಪ್ರೇಯಸಿ. ಆಕೆಗೊಬ್ಬ ಗಂಡನಿದ್ದಾನೆ. ಅವಳದ್ದೇ ಆದ ಒಂದು ಸಂಸಾರವಿದೆ. ಆದರೆ ಕೃಷ್ಣನ ಮೇಲಿರುವ ಅವಳ ಪ್ರೇಮಕ್ಕೆ ಯಾವುದೇ ಹೋಲಿಕೆಯಿಲ್ಲ. ಅಚ್ಚರಿಯೆಂದರೆ ಈ ಪ್ರೇಮ ಎಂದೂ ಅನೈತಿಕ ಎಂದು ಅನ್ನಿಸಿಕೊಳ್ಳಲೇ ಇಲ್ಲ. ತೀರಾ ಮಡಿವಂತರಿಂದ ಹಿಡಿದು ತೀರಾ ಕರ್ಮಠ ಸಂಪ್ರದಾಯಿಗಳವರೆಗೆ ಎಲ್ಲರೂ ಈ ಪ್ರೇಮವನ್ನು ಅತ್ಯಂತ ಸಹಜ ಎಂದು ಒಪ್ಪಿಕೊಂಡಿದ್ದರು. ಆದರೆ ನಿಜ ಜೀವನಕ್ಕೆ ಬಂದ ಕೂಡಲೇ ಈ ತರಹದ ಪ್ರೇಮಗಳೆಲ್ಲ ಅನೈತಿಕ ಅಥವಾ ಹಾದರ ಎನ್ನಿಸಿಕೊಳ್ಳುತ್ತದೆ. ಬಾಜಿರಾವ್ ಎಂಬ ಮರಾಠಾ ಶೂರ ಮಸ್ತಾನಿ ಎಂಬ ಮುಸ್ಲಿಂ ಯುವತಿಯನ್ನು ಪ್ರೇಮಿಸಿದರೆ ಅದು ಅಪ್ಪಟ ಸಾಮಾಜಿಕ ಬಹಿಷ್ಕಾರಗೊಂಡ ಪ್ರೇಮವಾಗುತ್ತದೆ. ಕೊನೆಯಪಕ್ಷ ಬಾಜಿರಾವ್ ಹಾಗೂ ಮಸ್ತಾನಿಯ ಈ ಪ್ರೇಮ ಕಥಾನಕವಾಗಿಯಾದರೂ ಅದೆಷ್ಟೋ ಕಾಲದ ನಂತರ ಒಪ್ಪಿತವಾಗುತ್ತದೆ. ಆದರೆ ಜನಸಾಮಾನ್ಯರ, ನಮ್ಮ ನಿಮ್ಮ ನಡುವೆಯೇ ಇಂತಹ ಪ್ರೇಮವನ್ನು ಕಂಡರೆ ನಾವು ಹೇಗೆ ಅವರೊಡನೆ ವ್ಯವಹರಿಸಬಹುದು ಎಂದು ಒಮ್ಮೆ ಯೋಚಿಸಿ ನೋಡಿ. ವಿವಾಹದ ಆಚೆಗಿರುವ ಗಂಡು ಹೆಣ್ಣಿನ ಸಂಬಂಧವನ್ನು ನಾವು ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕೆಲವು ವರ್ಷಗಳ ಹಿಂದೆ ಒಬ್ಬ ವಿವಾಹಿತ ಯುವತಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣವಿಷ್ಟೇ. ಅರಬ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಗಂಡ ಊರಿಗೆ ಬಂದವನು ಅವಳ ಬಳಿ ಬರದೇ ಸೀದಾ ಅವನ ತಾಯಿಯ ಬಳಿ ಹೋಗಿದ್ದ. ಅದಕ್ಕೆ ಕಾರಣವೂ ಇತ್ತೂ ಈ ಯುವತಿ ಬೇರೆ ಯುವಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆತನಿಗೆ ತಿಳಿಸಲಾಗಿತ್ತು. ಗಂಡ ಬರುತ್ತಾನೆ ಎಂದು ಎರಡು ದಿನ ಕಾದ ಆಕೆ ನಂತರ ಬೆಂಕಿ ಹಚ್ಚಿಕೊಂಡಿದ್ದಳು. ಆಗಲೆಲ್ಲ ಆಕೆ ರಾತ್ರಿ ಹೊತ್ತು ಹೊರಗೆ ನಿಂತು ಒಬ್ಬನ ಬಳಿ ಮಾತನಾಡುತ್ತಿರುತ್ತಾಳೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ನಿಜಕ್ಕೂ ನನಗೆ ಅಚ್ಚರಿ. ‘ಆ ಯುವಕನೊಂದಿಗೆ ಆಕೆಯ ಸಂಬಂಧ ಇದ್ದಿದ್ದೇ ನಿಜವಾದರೆ ಮನೆಯ ಹೊರಗೆ ನಿಂತು ಮಾತನಾಡುವ ಅಗತ್ಯವಾದರೂ ಏನಿದೆ? ಹೊರಗೆ ನಿಂತು ಮಾತನಾಡುತ್ತಿದ್ದಾಳೆಂದರೆ ಅವರಿಬ್ಬರ ನಡುವೆ ನಾವೆಲ್ಲ ಅನುಮಾನಿಸುವ ಸಂಬಂಧ ಇರಲಿಕ್ಕಿಲ್ಲ. ಅದು ಕೇವಲ ಸ್ನೇಹವಿರಬಹುದು.’ ಎಂದು ಅವಳ ಪರವಾಗಿ ಮಾತನಾಡಿದ್ದೆ. ಆದರೆ ಏನೇ ಆದರೂ ವಿವಾಹದ ಆಚೆಗಿನ ಹೆಣ್ಣು ಗಂಡಿನ ಸ್ನೇಹ ಕೂಡ ಅನುಮಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಗಮನಿಸುವಾಗ ಈ ಕಾದಂಬರಿಯಲ್ಲಿನ ಅಂತಹುದ್ದೊಂದು ಸಂಬಂಧ ಹೇಗೆ ಇಡೀ ಬಂಜಾರಾ ಜನಾಂಗವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬುದನ್ನು ಗಮನಿಸಬೇಕಿದೆ. ಮೀಟು ಹೊರಟಿದ್ದು ಆಸೀಫ್‌ಖಾನ್ ಎನ್ನುವವನೊಡನೆ. ಆದರೆ ಆತನ ಮಗಳು ಮೀಟುವಿನ ಶೌರ್‍ಯಕ್ಕೆ ಮರುಳಾಗಿ ಆತನಿಗೆ ಒಲಿದು ಬಂದಿದ್ದಳು. ಇತ್ತ ಆಗತಾನೆ ಮದುವೆಯಾದ ಮೀಟು ಸೈನಾಜ್‌ಳ ಒತ್ತಾಯಕ್ಕೆ ಅನಿವಾರ್‍ಯವಾಗಿ ಅವಳೊಂದಿಗೆ ಸಂಬಂಧ ಬೆಳೆಸಬೇಕಾಗಿತ್ತು. ಅವಳ ಮದುವೆಯ ನಂತರವೂ ಈ ಸಂಬಂಧ ಮುಂದುವರೆದು ಆಕೆ ಮಿಟುವಿನಿಂದ ಒಬ್ಬ ಮಗನನ್ನು ಪಡೆಯುವ ಆಕೆ ಬಾಣಂತಿಯ ನಂಜಿನಿಂದ ಸಾವನ್ನಪ್ಪುತ್ತಾಳೆ. ಆದರೆ ಮುಂದೊಮ್ಮೆ ಅವಳ ಗಂಡ ಲತೀಫ್‌ಖಾನ್‌ನಿಗೆ ಇವರ ವಿಷಯ ಗೊತ್ತಾಗಿದ್ದಲ್ಲದೇ ಮಾವನ ಅಧಿಕಾತರವನ್ನು ಪಡೆಯುವುದಕ್ಕೋಸ್ಕರ ಮೀಟುನನ್ನು ಕೊಂದು ಹಾಕುವುದರೊಂದಿಗೆ ಕಥೆ ಮತ್ತೊಂದು ತಿರುವು ಪಡೆಯುತ್ತದೆ. ಮೀಟುವಿನ ತಮ್ಮ ಥಾವೂ ಅಣ್ಣನ ಹೆಂಡತಿ ಹಾಗೂ ಮಗ ದೇಸೂನನ್ನು ತುಂಬ ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಾನಾದರೂ ಪೀಳಿಗೆಗಳು ಮುಂದುವರೆದಂತೆ ಹಳೆಯ ಬಾಂಧವ್ಯದ ಎಳೆ ಬಿಚ್ಚಿಕೊಳ್ಳುತ್ತ ಸಡಿಲವಾಗುತ್ತದೆ. ಇತ್ತ ಥಾವೂ ಕೂಡ ಹೈದರಾಬಾದಿನ ಕಡೆ ವ್ಯಾಪಾರಕ್ಕೆಂದು ಮಗ ಲಚ್ಮಿ ಜೊತೆ ಹೋದವನು ಅಲ್ಲಿ ನಿಜಾಮರ ಜೊತೆಗಿದ್ದ ಲತೀಫ್‌ಖಾನನ ಮಗನ ಸೈನಿಕರಿಂದ ಸತ್ತು ಹೋಗುತ್ತಾನೆ. ಇರಿತದ ಗಾಯದ ನಂಜೇರಿ ಲಚ್ಮ ಕೂಡ ಮರಣ ಹೊಂದುತ್ತಾನೆ. ಲಚ್ಮನ ಹೆಂಡತಿ ಗುಜಾ ಸತಿಯಾಗುತ್ತಾಳೆ. ಆಕೆ ದೈವಿಸ್ಥಾನ ಪಡೆಯುತ್ತಾಳೆ. ಇಂದಿಗೂ ಭರಮ್‌ಕೋಟ್‌ದ ಜನಾಂಗ ಗುಜಾಸತಿಯನ್ನು ಪ್ರಾರ್ಥಿಸಿಯೇ ಮುಂದುವರೆಯುವ ಸಂಪ್ರದಾಯವಿದೆ. ಮುಂದೆ ದೇಸು ಹೈದರಾಬಾದಿನ ಕಡೆ ಪುನಃ ವ್ಯಾಪಾರಕ್ಕೆ ಹೊರಟಾಗ ಮತ್ತೆ ಲತೀಫ್‌ಖಾನನ ಮಗ ಜಂಗ್ಲಿಖಾನ್‌ನ್ನು ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ತನ್ನಂತೆಯೇ ಇರುವ ಬಂಜಾರಾನನ್ನು ನೋಡಲು ಆಸಕ್ತನಾದ ಜಂಗ್ಲಿಖಾನನನ್ನು ಸಂಧಿಸಿದಾಗ ಇಬ್ಬರಿಗೂ ಒಳಮರ್ಮ ಅರ್ಥವಾದರೂ ಏನೂ ಅರಿವಾಗದಂತೆ ಇಬ್ಬರೂ ದೂರವಾಗಿದ್ದರೂ ದರೋಡೆಕೋರರು ದಾಳಿ ಮಾಡಿದಾಗ ಪುನಃ ಜಂಗ್ಲಿಖಾನನೇ ಬಂದು ದೇಸುವಿನ ರಕ್ಷಣೆ ಮಾಡಿದ್ದ. ಇದು ಕಥೆಯೊಳಗೆ ಕಾಣುವ ಮಾನವ ಸಂಬಂಧದ ಮಿತಿ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ಆದರೆ ದೇಸುವಿನ ಚಿಕ್ಕಪ್ಪ ಥಾವೂನ ಮಗ ತೋತ್ಯಾ ಬೇರೆಯಾಗಿದ್ದ. ಸಂಬಂಧಗಳು ನಿಧಾನವಾಗಿ ಹರಿದು ಹೋಗತೊಡಗಿತ್ತು. ಇದಾದ ನಂತರ ಈ ಬಂಜಾರರಿಗೆ ದೊಡ್ಡ ಏಟು ಬಿದ್ದಿದ್ದು ಬ್ರಿಟೀಷ್ ಆಡಳಿತದಲ್ಲಿ. ಸ್ವತಃ ವ್ಯಾಪಾರಿಗಳಾದ ಬ್ರಿಟೀಷರು, ಈ ಚಿಕ್ಕಪುಟ್ಟ ವ್ಯಾಪಾರಿಗಳನ್ನೆಲ್ಲ ಹೊಸಕಿ ಹಾಕಿಬಿಟ್ಟಿದ್ದರು. ತಮ್ಮ ಅನುಮತಿಯಿಲ್ಲದೇ ವ್ಯಾಪಾರ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಬಂಜಾರರನ್ನೆಲ್ಲ ದರೋಡೆಕೋರರೆಂದು ಬಿಂಬಿಸಿ ಬಿಟ್ಟಿದ್ದರು. ಬ್ರಿಟೀಷರಿಂದ ತಮ್ಮನ್ನು ಕಾಪಾಡಿಕೊಳ್ಳುವ ಸಲುವಾಗಿ ಮತ್ತೆ ಈ ಜನಾಂಗ ಕಾಡುಗಳನ್ನೇ ಆಶ್ರಯಿಸಬೇಕಾದದ್ದು ವಿಪರ್‍ಯಾಸ. ದೇಸೂನ ನಂತರ ಧನಸಿಂಗ್, ಅವನ ನಂತರ ಹನುಮನಾಯ್ಕ ಹಾಗೆಯೇ ಸಾಗಿ ಸೂರ್ಯನಾಯ್ಕನವರೆಗಿನ ಕಥೆಯನ್ನು ಹೇಳುತ್ತದೆ. ಇಡೀ ಕಾದಂಬರಿಯ ಕೊನೆಯ ಹಂತದಲ್ಲಿ ಬಂಜಾರಾ ಜನಾಂಗ ಹೇಗೆ ಆಧುನಿಕತೆಯತ್ತ ಮುಖ ಮಾಡಿದೆ ಎನ್ನುವುದನ್ನು ಹಂತಹಂತವಾಗಿ ತಿಳಿಸುತ್ತದೆ. ಭಮರ್‌ಕೋಟ್ಯಾದ ಕವಲುಗಳು ಬೇರೆಬೇರೆಯಾಗಿ ಈಗಿನ ಕರಮ್‌ತೋಟ್ ಜನಾಂಗದ ಸೂರ್ಯನಾಯ್ಕ ಉಪನ್ಯಾಸಕನಾಗಿದ್ದ. ಹೆಂಡತಿ ವಂದನಾ ಕೂಡ ಸಂಶೋಧನೆ ಮಾಡಿ ವಿದ್ಯಾವಂತೆ ಅನ್ನಿಸಿಕೊಂಡಿದ್ದಳು. ನೇರ ನಡೆನುಡಿಯ ಸೂರ್‍ಯ ನಾಯ್ಕ ಬದುಕನ್ನು ಸರಳವಾಗಿ ಎದುರಿಸಿದವನು. ಬಡತನದ ಬದುಕಿನಿಂದ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಕೊಂಡಿದ್ದನಾದರೂ ಸಹೋದ್ಯೋಗಿಗಳ ತುಳಿತಕ್ಕೂ ಒಳಗಾದವನು. ತನ್ನ ಮಕ್ಕಳಾದರೂ ಮೇಲೆ ಬರಲಿ ಎಂದು ಕಾಯುತ್ತಿರುವವನುಇಷ್ಟೆಲ್ಲದರ ನಡುವೆ ಇಡೀ ಕಾದಂಬರಿಯಲ್ಲಿ ಬಂಜಾರಾಗಳ ಪದ್ದತಿಗಳು, ಆಚಾರ ವಿಚಾರಗಳು ಯಥೇಶ್ಚವಾಗಿ ಕಾಣಸಿಗುತ್ತವೆ. ಪ್ರತಿ ಸಂಪ್ರದಾಯದ ಸ್ಥೂಲ ಚಿತ್ರಣವನ್ನು ಕೊಡುವುದರಲ್ಲಿ ಕಾದಂಬರಿಕಾರರು ಯಶಸ್ವಿಯಾಗುತ್ತಾರೆ. ಜೊತೆಗೆ ಬಂಜಾರಾ ಜನಾಂಗದ ಭಾಷೆಯ ಸಣ್ಣ ಪರಿಚಯವೂ ಸಿಗುತ್ತದೆ. ಚಿಕ್ಕವಳಿದ್ದಾಗ ಲಂಬಾಣಿ ಜನಾಂಗದ ಉಡುಪು ನೋಡುವುದೇ ಒಂದು ವಿಶೇಷ ಎನ್ನಿಸುತ್ತಿತ್ತು ನನಗೆ. ಕಟ್ಟಡ ಕೆಲಸ ಮಾಡಲು ಬಂದ ಬಂಜಾರಾ ಹೆಂಗಸರ ಬಳಿ ಮಾತನಾಡುತ್ತ ನಾಣ್ಯಗಳನ್ನು ಪೋಣಿಸಿ ಹೊಲೆದ ಅವರ ದುಪಟ್ಟಾಗಳನ್ನು ಮುಟ್ಟಿಮುಟ್ಟಿ ನೋಡಿ ಖುಷಿಪಡುತ್ತಿದ್ದೆ. ಯಾರ ಬಳಿಯಲ್ಲಾದರೂ ಸರಿ ಸಲೀಸಾಗಿ ಸ್ನೇಹ ಬೆಳೆಸುವ ನನ್ನ ಗುಣ ಆ ಹೆಂಗಳೆಯರ ಬಳಿ ಹೋಗುವಂತೆ ಮಾಡುತ್ತಿತ್ತು. ಕಾದಂಬರಿ ಓದಿ ಮುಗಿಸಿದ ನಂತರ ಶಾಂತಾ ನಾಯ್ಕರಿಗೆ ಫೋನ್ ಮಾಡಿ ನನಗೆ ನಿಮ್ಮ ಹೆಂಗಸರು ಹಾಕುವಂತಹ ಡ್ರೆಸ್ ಬೇಕು ಪುಟ್ಟ ಮಕ್ಕಳಂತೆ ಹಠ ಹಿಡಿದು ಹೇಳಿದ್ದೆ. ಮುಂದಿನ ಸಲ ಇಲ್ಲಿಗೆ ಬಂದಾಗ ಕೊಡಸ್ತೀನಿ. ಆದರೆ ಈಗ ಅದನ್ನು ಮಾಡೋದು ಕಡಿಮೆ ಆಗಿದೆ. ಹೇಳಿ ಮಾಡಿಸಬೇಕು. ಎಂದಿದ್ದಾರೆ. ಚಂದದ ನಾಣ್ಯ ಹೊಲಿದು ಮಾಡಿದ ಆ ದುಪಟ್ಟಾಗೋಸ್ಕರ ಈಗ ಕಾಯುತ್ತಿದ್ದೇನೆ. —– ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು
ಬೊಗಸೆಯಲ್ಲೊಂದು ಹೂನಗೆ ನೆನಪೊಂದು ಮಳೆಯಾಗಿ ಸುರಿದಾಗಲೆಲ್ಲ ನಗುವೊಂದು ಮಳೆಯ ಹನಿಗಳಾಗಿ ಅಂಗೈಯನ್ನು ಸ್ಪರ್ಶಿಸುತ್ತದೆ. ಹಾಗೆ ಸ್ಪರ್ಶಿಸಿದ ಒಂದಿಷ್ಟು ಹನಿಗಳು ಜಾರಿಬಿದ್ದು ನೆಲವನ್ನು ಹಸಿಯಾಗಿಸಿದರೆ, ಉಳಿದವು ಬೊಗಸೆಯಲ್ಲೊಂದು ಹೊಸ ಪ್ರಪಂಚವನ್ನು ಬಿಚ್ಚಿಡುತ್ತವೆ. ಹಾಗೆ ನಮ್ಮೆದುರು ತೆರೆದುಕೊಳ್ಳುವ ಪ್ರಪಂಚದಲ್ಲಿ ಕೈಗೂಸಿನ ಕನಸಿನಂಥ ನಗುವೊಂದು ಅಮ್ಮನ ಮಡಿಲಿನಲ್ಲಿ ಕದಲಿದರೆ, ಹೂನಗೆಯ ಹೊತ್ತ ಹುಡುಗಿಯೊಬ್ಬಳು ಸೈಕಲ್ಲನ್ನೇರಿ ಕನಸಿನಂತೆ ಮರೆಯಾಗುತ್ತಾಳೆ; ಹನಿಮೂನ್ ಪ್ಯಾಕೇಜಿನ ರೆಸಾರ್ಟ್ ಒಂದರ ಡೈನಿಂಗ್ ಹಾಲ್ ನಲ್ಲಿ ನಾಚಿಕೆಯ ನಗುವೊಂದು ಮೋಂಬತ್ತಿಯಾಗಿ ಕರಗಿದರೆ, ಆಪರೇಟಿಂಗ್ ರೂಮೊಂದರಿಂದ ಹೊರಬಂದ ವೈದ್ಯರ ನಗುವೊಂದು ಕಣ್ಣೀರನ್ನೆಲ್ಲ ಕರಗಿಸಿ ಕಣ್ಮರೆಯಾಗಿಸುತ್ತದೆ. ಹೀಗೆ ನಗುವಿನಲ್ಲಿ ಕಣ್ತೆರೆವ ಬದುಕೊಂದು ಜಾತ್ರೆಯಲ್ಲಿ ಖರೀದಿಸಿದ ಹೇರ್ ಕ್ಲಿಪ್ಪಿನಲ್ಲಿ, ಬಾಲ್ಯದ ಗೆಳೆಯನೊಬ್ಬನ ನೆನಪಿನಲ್ಲಿ, ಕಾಲೇಜಿನ ಗ್ರೂಪ್ ಫೋಟೋಗಳಲ್ಲಿ, ಕಂಟ್ರೋಲಿಗೆ ಸಿಕ್ಕುವ ಶುಗರ್ ಲೆವಲ್ಲಿನಲ್ಲಿ, ತಾನೇ ನಗುವಾಗಿ ಅರಳುತ್ತದೆ. ನಗುವೊಂದು ಬದುಕಿನೊಂದಿಗೆ ತೆರೆದುಕೊಳ್ಳುವ ರೀತಿಯೇ ಒಂದು ವಿಸ್ಮಯ. ಕ್ಯಾಮರಾಗಳಿಲ್ಲದ ಕಾಲದಲ್ಲಿ ಅಪ್ಪನ ಕಣ್ಣುಗಳಲ್ಲಿ, ಅಮ್ಮನ ಹೃದಯದಲ್ಲಿ ಪ್ರಿಂಟಾಗುತ್ತಿದ್ದ ಮಗುವಿನ ನಗೆಯೊಂದು ಬಿಡುವಿನ ಸಮಯದಲ್ಲಿ ಎಳೆಎಳೆಯಾಗಿ ಧಾರಾವಾಹಿಯಂತೆ ಜಗಲಿಯಲ್ಲಿ ಬಿಚ್ಚಿಕೊಳ್ಳುತ್ತಿತ್ತು. ಮಗುವಿಗೆ ಮೊದಲಹಲ್ಲು ಹುಟ್ಟಿದಾಗ ಅಮ್ಮನ ಮುಖದಲ್ಲರಳಿದ ನಗುವನ್ನು ಎಷ್ಟೇ ದುಬಾರಿಯ ಕ್ಯಾಮರಾದಿಂದಲೂ ಸೆರೆಹಿಡಿಯಲಾಗದು. ಅಂಬೆಗಾಲಿಡುತ್ತಲೋ, ಗೋಡೆಯನ್ನು ಹಿಡಿದು ಒಂದೊಂದೇ ಹೆಜ್ಜೆಯನ್ನಿಡುತ್ತಲೋ ಅಮ್ಮನ ತೆಕ್ಕೆ ಸೇರುವ ಮಗುವೊಂದು ಅಮ್ಮನ ಮಡಿಲಿಗೆ ಸುರಿಯುವ ನಗುವಿಗೆ ಪರ್ಯಾಯ ನಗುವೊಂದನ್ನು ಸೃಷ್ಟಿಸಲಾಗದು. ಮಗುವಿನ ಬೆಳವಣಿಗೆಯ ಪ್ರತೀಹಂತವೂ ಸುಂದರವೆನ್ನಿಸುವುದು ಅದು ಕಟ್ಟಿಕೊಡುವ ಬದುಕಿನ ಸಾಧ್ಯತೆಗಳಲ್ಲಿ. ಆ ಸಾಧ್ಯತೆಗಳೆಲ್ಲ ನೆನಪುಗಳಾಗಿ, ಕನಸಾಗಿ, ಒಮ್ಮೊಮ್ಮೆ ದುಗುಡವಾಗಿ, ನಗುವಿನಲ್ಲಿ ಸುಖಾಂತ್ಯವಾಗುವ ಸನ್ನಿವೇಶಗಳಾಗಿ, ಸಂಸಾರವೊಂದರ ರಸವತ್ತಾದ ಕಥೆಗಳಾಗಿ ಉಳಿದುಕೊಳ್ಳುತ್ತವೆ. ಅಂತಹ ದುಗುಡವೊಂದು ನಗುವಾಗಿ ಬದಲಾಗಿ ನನ್ನ ಬದುಕಿನಲ್ಲಿ ಉಳಿದ ಕಥೆ ಕೂದಲಿನದು. ನಾನು ಹುಟ್ಟಿ ಒಂದು ವರ್ಷವಾದರೂ ನನ್ನ ತಲೆಯಲ್ಲಿ ಒಂದೇ ಒಂದು ಕೂದಲು ಹುಟ್ಟುವ ಲಕ್ಷಣವೂ ಕಾಣಿಸಿಕೊಳ್ಳಲಿಲ್ಲವಂತೆ. ಏನಾದರೂ ಸಮಸ್ಯೆಯಿರಬಹುದೆಂದು ಡಾಕ್ಟರಿಗೆ ತೋರಿಸಲು ಕರೆದೊಯ್ದರೆ ಗುಂಡುಗುಂಡಾಗಿ ಮುದ್ದಾಗಿದ್ದ ನನ್ನನ್ನು ಎತ್ತಿಕೊಂಡೇ ರೌಂಡ್ಸ್ ಮುಗಿಸಿದ ಡಾಕ್ಟರು, ಏನೂ ಸಮಸ್ಯೆಯಿಲ್ಲವೆಂದು ಸಮಾಧಾನ ಮಾಡಿದರೂ ಅಮ್ಮನ ಚಿಂತೆ ಕರಗಲಿಲ್ಲವಂತೆ. ದೇವತೆಯಂಥ ಅಮ್ಮ ದೇವರಿಗೆ ಹರಕೆ ಹೊತ್ತು ನನ್ನ ತಲೆಯಮೇಲೆ ಕೂದಲು ಕಾಣಿಸಿಕೊಂಡು, ಅಮ್ಮನ ದುಗುಡವೊಂದು ದೇವರು ಕಣ್ಬಿಡುವಲ್ಲಿಗೆ ಸುಖಾಂತ್ಯ ಕಂಡಿತು. ಈಗಲೂ ಪಾರ್ಲರಿನ ಕತ್ತರಿಗೆ ಕೂದಲು ಕೊಡುವಾಗಲೆಲ್ಲ ಅಮ್ಮನ ದುಗುಡವೇ ಕಣ್ಮುಂದೆ ಬಂದು ನಿಂತಂತಾಗಿ, ಕಾಣದ ದೇವರಲ್ಲೊಂದು ಕ್ಷಮೆ ಯಾಚಿಸುತ್ತೇನೆ. ಒಂದೊಂದೇ ಕೂದಲು ಬೆಳ್ಳಗಾಗುತ್ತಿರುವುದು ಕಾಣಿಸಿದಾಗಲೆಲ್ಲ ಈ ದುಗುಡಕ್ಕೆ ಯಾವ ದೇವರಲ್ಲಿ ಪರಿಹಾರವಿರಬಹುದೆಂದು ಯೋಚಿಸಿ, ನಕ್ಕು ಸುಮ್ಮನಾಗುತ್ತೇನೆ. ದೇವರಿಗೂ ಡಾಕ್ಟರಿಗೂ ಜಾಸ್ತಿ ವ್ಯತ್ಯಾಸವಿಲ್ಲ ಎನ್ನುವ ನಂಬಿಕೆ ನನ್ನದು. ದೇಹಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಡಾಕ್ಟರ್ ಹತ್ತಿರ ಸಿಗದ ಪರಿಹಾರವೊಂದು ದೇವರ ಹತ್ತಿರ ಇದ್ದಿರಬಹುದಾದ ಸಾಧ್ಯತೆಗಳೆಲ್ಲವೂ ನನ್ನ ನಂಬಿಕೆಯಿಂದ ಹೊರಗೆ ಇರುವಂಥವುಗಳು. ದೇವರಂಥ ಡಾಕ್ಟರ್ ಎನ್ನುವ ನಂಬಿಕೆಯೊಂದು ನಿಜವಾಗಬಹುದೇ ಹೊರತು ದೇವರನ್ನೇ ಡಾಕ್ಟರನ್ನಾಗಿಸಿದರೆ ದೇವರ ನಗುವನ್ನೂ ಕಸಿದುಕೊಂಡಂತಾದೀತು. ಇಂತಹ ದೇವರ ರೂಪದ ವೈದ್ಯರೊಬ್ಬರು ಪ್ರತಿಯೊಬ್ಬರ ಜೀವನದಲ್ಲೂ ನಗುವನ್ನು ಮರಳಿಸಲು ಅಥವಾ ಇಲ್ಲದ ನಗುವೊಂದನ್ನು ಹೊಸದಾಗಿ ಹುಟ್ಟಿಸಲು ಕಾರಣೀಕರ್ತರಾಗಿರುತ್ತಾರೆ. ಸ್ವರ್ಗದ ಕಲ್ಪನೆಯನ್ನು ಸರಾಗವಾಗಿ ಕಟ್ಟಿಕೊಡುವ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನಾನು ಬೆಂಗಳೂರಿಗೆ ಬಂದಾಗ ಅನಾರೋಗ್ಯ ಎನ್ನುವುದು ಸಮಯ ಸಿಕ್ಕಾಗಲೆಲ್ಲ ಬೆನ್ನಹಿಂದೆ ಬಿದ್ದು ಹಿಂಸಿಸುತ್ತಿತ್ತು. ಗಂಭೀರವೂ ಅಲ್ಲದ, ನಿರ್ಲಕ್ಷ್ಯಿಸಲೂ ಆಗದ ಸಣ್ಣಪುಟ್ಟ ತೊಂದರೆಗಳೆಲ್ಲ ಸಂಜೆಯಾದಂತೆ ಸಮಯ ತಪ್ಪದೇ ಹಾಜರಾಗುವ ಸೊಳ್ಳೆಗಳಂತೆ ಕಾಟ ಕೊಡುತ್ತಿದ್ದವು. ಅವರಿವರು ಸೂಚಿಸಿದ ಆಸ್ಪತ್ರೆ, ಡಾಕ್ಟರುಗಳನ್ನೆಲ್ಲ ಭೇಟಿ ಮಾಡಿದ್ದಾಯಿತು. ಬಣ್ಣಬಣ್ಣದ ಮಾತ್ರೆಗಳೆಲ್ಲ ಕಣ್ಮುಂದೆ ಬಂದು ಕುಣಿದಂತೆನ್ನಿಸಿ, ಮುಖದ ಮೇಲಿಂದ ನಗುವೊಂದು ಅದೆಲ್ಲಿಯೋ ಮಾಯವಾಗಿಹೋಯಿತು. ಈ ಅನಾರೋಗ್ಯದ ಕಥೆಗೊಂದು ತಿರುವು ಸಿಕ್ಕಿದ್ದು ಪರಿಚಿತರೊಬ್ಬರು ತೋರಿಸಿದ ದವಾಖಾನೆಯಿಂದ. ತಪಾಸಣೆ ಮಾಡಿದ್ದಕ್ಕೆ ಶುಲ್ಕವನ್ನು ಕೂಡಾ ಪಡೆಯದೇ ಔಷಧದ ಖರ್ಚನ್ನು ಮಾತ್ರವೇ ತೆಗೆದುಕೊಳ್ಳುತ್ತಿದ್ದ ವೈದ್ಯರೊಬ್ಬರು ನಡೆಸುತ್ತಿದ್ದ ಆ ದವಾಖಾನೆ, ಅವರ ಮುಖದಲ್ಲಿದ್ದ ಮಂದಹಾಸದಿಂದಾಗಿ ಪುಟ್ಟದೊಂದು ದೇವಸ್ಥಾನದಂತೆ ಭಾಸವಾಗುತ್ತಿತ್ತು. ಅಂಥ ದೇವಸ್ಥಾನದಂಥ ದವಾಖಾನೆಯ ಪ್ರವೇಶದಿಂದ ವರ್ಷಗಟ್ಟಲೇ ಕಷ್ಟಪಟ್ಟ ಮೂಗು, ಗಂಟಲುಗಳೆಲ್ಲ ಎರಡೇ ತಿಂಗಳಿಗೆ ನೆಮ್ಮದಿಯಿಂದ ಉಸಿರಾಡಲಾರಂಭಿಸಿದವು. ಆರೋಗ್ಯ ಸುಧಾರಿಸಿ ಜೀವನಕ್ಕೆ ನಗುವೊಂದು ಮರಳಿ ದೊರಕಿದರೂ, ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗುವ ಭಕ್ತಿಯಲ್ಲಿ ದವಾಖಾನೆಗೆ ಹೋಗಿ ವೈದ್ಯರ ಆರೋಗ್ಯವನ್ನೇ ವಿಚಾರಿಸಿಕೊಂಡು ಪರಿಪಾಠವೊಂದು ಖಾಯಂ ಆಯಿತು. ಮನೆಯನ್ನು ಬದಲಾಯಿಸಿ ಬೇರೆ ಏರಿಯಾಕ್ಕೆ ಶಿಫ್ಟ್ ಆದರೂ ಔಷಧಿಯ ಅಗತ್ಯ ಬಿದ್ದಾಗಲೆಲ್ಲ, ನಗುವಿನಿಂದಲೇ ಅರ್ಧರೋಗವನ್ನು ವಾಸಿಮಾಡುತ್ತಿದ್ದ ದೇವರಂಥ ಡಾಕ್ಟರನ್ನು ನೆನಪಿಸಿಕೊಂಡು ನಗುನಗುತ್ತಲೇ ಮಾತ್ರೆಯನ್ನು ನುಂಗಿ ನೀರು ಕುಡಿಯುತ್ತೇನೆ. ಹೀಗೇ ನೆನಪುಗಳೊಂದಿಗೆ ನಗುವೆನ್ನುವುದು ಒಂದಿಲ್ಲೊಂದು ವಿಧದಲ್ಲಿ ಅಂಟಿಕೊಂಡೇ ಇರುತ್ತದೆ. ಇನ್ನೆಂದೂ ಮರಳಿ ಬಾರದಂತೆ ನಮ್ಮನ್ನಗಲಿ ದೂರವಾದವರು, ಬದುಕಿದ್ದೂ ಸಂಪರ್ಕವಿಲ್ಲದೇ ಮರೆಯಾಗಿ ಹೋದವರು ಎಲ್ಲರೊಂದಿಗೂ ನೆನಪೊಂದು ನಗುವಾಗಿ ಬೆಸೆದುಕೊಂಡು ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನನ್ನೊಂದಿಗೆ ಓದುತ್ತಿದ್ದ ಹುಡುಗನೊಬ್ಬ ಯಾವಾಗಲೂ ಜಿದ್ದಿಗೆ ಬಿದ್ದವನಂತೆ ಜಗಳವಾಡುತ್ತಿದ್ದ. ಆ ವಯಸ್ಸಿನಲ್ಲಿ ಅದೊಂದು ಗಂಭೀರವಾದ ವಿಷಯವೇ ಆಗಿದ್ದರೂ ಈಗ ಅವನ ನೆನಪಾದಾಗಲೆಲ್ಲ, ಆ ಜಗಳಕ್ಕೆ ಕಾರಣವೇನಿದ್ದಿರಬಹುದೆಂದು ಯೋಚಿಸಿ ನನ್ನಷ್ಟಕ್ಕೆ ನಾನೇ ನಗುತ್ತಿರುತ್ತೇನೆ. ಕಾಮನ್ ಫ್ರೆಂಡ್ಸ್ ಎನ್ನುವಂಥವರು ಯಾರೂ ಇಲ್ಲದ ಕಾರಣ ಆತನನ್ನು ಇನ್ನುವರೆಗೂ ಹುಡುಕಲು ಸಾಧ್ಯವಾಗದೇ, ಆ ಜಗಳದ ಕಾರಣವೂ ಬಗೆಹರಿಯದೇ, ಅದು ದಯಪಾಲಿಸಿದ ಸಣ್ಣದೊಂದು ನಗುವನ್ನು ನನ್ನದಾಗಿಯೇ ಉಳಿಸಿಕೊಂಡಿದ್ದೇನೆ. ಆತ ಎಲ್ಲಾದರೂ ಒಮ್ಮೆ ಎದುರಾಗಿ ಜಗಳದ ಕಾರಣ ತಿಳಿದುಬಿಟ್ಟರೆ ಅಪರೂಪದ ನಗೆಯೊಂದು ಮರೆಯಾಗಿಬಿಡುವ ಭಯವಿದ್ದರೂ, ಸದ್ಯಕ್ಕೆ ಆ ನಗು ನನ್ನದೆನ್ನುವ ಸಮಾಧಾನದೊಂದಿಗೆ ಜಗಳದ ನೆನಪನ್ನೂ ಕಾಪಾಡಿಕೊಳ್ಳುತ್ತೇನೆ. ಇಂತಹ ಚಿಕ್ಕಪುಟ್ಟ ನೆನಪುಗಳೊಂದಿಗೆ ಶಾಶ್ವತ ನೆಂಟಸ್ತನ ಬೆಳೆಸಿಕೊಳ್ಳುವ ನಗುವೊಂದು ತನ್ನ ಕರ್ತವ್ಯವೆನ್ನುವಂತೆ ಮನಸ್ಸುಗಳನ್ನು ಬೆಸೆಯುತ್ತ, ಮಾತುಗಳನ್ನು ಬೆಳೆಸುತ್ತ, ಮೌನವನ್ನೂ ಗೌರವಿಸುತ್ತ ಸಂಬಂಧಗಳನ್ನೆಲ್ಲ ಕಾಪಾಡುತ್ತಿರುತ್ತದೆ. ಶಾಪಿಂಗ್ ಮಾಲ್ ನ ಅಂಗಡಿಗಳ ಗ್ಲಾಸುಗಳಲ್ಲಿ ಹೊಳೆಯುವ ಹೊಟ್ಟೆಪಾಡಿನ ನಗು, ಆಫೀಸಿನ ಕನ್ನಡಕದೊಳಗಿನ ಒತ್ತಡಕ್ಕೆ ಉತ್ತರವೆಂಬಂಥ ರಿಸೆಪ್ಷನ್ನಿನ ನಗು, ಸ್ಮೋಕಿಂಗ್ ಝೋನ್ ಒಂದರ ಬಿಡುಗಡೆಯ ನಗು, ಕಾಫಿಶಾಪ್ ಒಂದರ ಮೊದಲಭೇಟಿಯ ನಗು ಎಲ್ಲವೂ ಜೀವಂತವಾಗಿರುವವರೆಗೂ ಬೊಗಸೆಯಲ್ಲೊಂದಿಷ್ಟು ಸುಂದರ ಸಂಬಂಧಗಳು ನಸುನಗುತ್ತಿರುತ್ತವೆ. ******************************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಅವಮಾನದ ಒಂದು ಪ್ರಸಿದ್ಧ ಉದಾಹರಣೆ; ಪವಿತ್ರ ನರ್ಮದಾ ನದಿಯಲ್ಲಿ ಒಮ್ಮೆ ಸಂತ ಏಕನಾಥ ಸ್ನಾನ ಮಾಡಿ ಹೊರ ಬರುತ್ತಿದ್ದ.ಆಗ ಪಠಾಣನೊಬ್ಬ ಮನದಲ್ಲಿ ವಿಷ ತುಂಬಿಕೊಂಡು ಸಂತನ ಮೇಲೆ ಉಗುಳಿದ. ಏಕನಾಥ ‘ಜೈ ವಿಠ್ಠಲ’ ಎನ್ನುತ್ತ ಮತ್ತೆ ನರ್ಮದೆಗಿಳಿದ. ಈ ರೀತಿ ಮುಂಜಾನೆಯಿಂದ ಸಂಜೆಯವರೆಗೂ ಇಬ್ಬರ ನಡುವೆ ನಡೆಯಿತು ಯಾರು ಸೋಲುತ್ತಾರೆಂದು ನದಿ ತಟದಲ್ಲಿ ಜನ ನಿಂತು ನೋಡುತ್ತಿದ್ದರು. ಕೊನೆಗೆ ಪಠಾಣ, ಸಂತರನ್ನು ಉದ್ದೇಶಿಸಿ ನಾನು ಯಾವುದೇ ಕಾರಣವಿಲ್ಲದೇ ನಿಮ್ಮನ್ನು ಹೀಗೆ ಅವಮಾನಗೊಳಿಸುತ್ತಿದ್ದೇನೆ ಅಶುದ್ಧಿಗೊಳಿಸುತ್ತಿದ್ದೇನೆ.ಆದರೆ ನೀವು ನನ್ನ ಮೇಲೆ ಕೋಪಿಸಿಕೊಳ್ಳದೇ ನಗುತ್ತಲೇ ನನ್ನನ್ನು ಸ್ವೀಕರಿಸುತ್ತಿದ್ದೀರಿ ಇದು ಹೇಗೆ ಸಾಧ್ಯವೆಂದು ಕೇಳಿದ.’ನೀನು ನನ್ನ ಪೋಷಕ.’ನಿನ್ನಿಂದಾಗಿ ಇಂದು ಪವಿತ್ರ ನರ್ಮದೆಯಲ್ಲಿ ಇಷ್ಟು ಬಾರಿ ಮಿಂದೆದ್ದೆ. ನನ್ನನ್ನು ಶುದ್ಧೀಕರಿಸಿಕೊಳ್ಳಲು ಒಂದು ಅವಕಾಶ ನೀಡಿದೆ ಎಂದನಂತೆ. ಫೋರ್ಡ್ ಕಾರಿನ ಹೆನ್ರಿ ,ವಿಮಾನ ಸಂಶೋಧಿಸಿದ ರೈಟ್ ಬ್ರದರ್ಸ್, ಅಬ್ರಹಾಂ ಲಿಂಕನ್,ಇತಿಹಾಸ ಪ್ರಸಿದ್ಧ ಚಾಣಕ್ಯ, ಮಹಾತ್ಮ ಗಾಂಧಿ, ಹಿಂದಿ ಚಿತ್ರ ಲೋಕದ ದಿಗ್ಗಜ ಅಮಿತಾಬ್ ಬಚನ್, ಸಾವಿರ ಸಂಶೋಧನೆಗಳ ಸರದಾರ ಥಾಮಸ್ ಅಲ್ವಾ ಎಡಿಸನ್ನಂಥ ಸಾವಿರ ಗೆಲುವಿನ ಸರದಾರರು ಅವಮಾನದ ತಿರುವುಗಳನ್ನೇ ಗೆಲುವಿನ ಮೈಲಿಗಲ್ಲುಗಳನ್ನಾಗಿ ರೂಪಿಸಿಕೊಂಡಿದ್ದು ಈಗ ಇತಿಹಾಸ. ಅವಮಾನವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅವು ಮೈಲಿಗಲ್ಲುಗಳಾಗುವುದು ಅವಲಂಬಿತವಾಗುತ್ತದೆ. ಅವಮಾನವನ್ನು ಅನುಭವಿಸಿದವರು ಕೋಟಿ ಕೋಟಿ ಜನ ಆದರೆ ಅದನ್ನು ಗಂಭೀರವಾಗಿ ಕೈಗೆತ್ತಿಕೊಂಡವರ ಸಂಖ್ಯೆ ಸಾವಿರ ಇಲ್ಲವೇ ಲಕ್ಷ ದಾಟುವುದಿಲ್ಲ. ಉಳಿದವರಿಗೆ ಸವಾಲಾಗದೇ ಕಾಡದೇ ಇದ್ದುದು ಎದುರಿಸಿ ನಿಲ್ಲಬೇಕೆನ್ನುವವರಿಗೆ ಸವಾಲಾಗಿ ಕಂಡಿದ್ದು ನಿಜ. ಅಳ್ಳೆದೆಯವರಿಗೆ ಅವಮಾನವೆಂಬ ಪದವೇ ದೂರ ಸರಿಯುವಂತೆ ಮಾಡುವುದೂ ಅಷ್ಟೇ ಸತ್ಯ. ದೂರು ಸರಿಯುವ ಬದಲು ಗಟ್ಟಿ ಧೈರ್ಯ ಮಾಡಿದರೆ ಅವಮಾನದೊಂದಿಗೆ ಮುಖಾಮುಖಿಯಾಗಬಹುದು. ಹಾಗಾದರೆ ಅವಮಾನವೆಂದರೇನು? ಅದರ ಲಕ್ಪ್ಷಣಗಳೇನು? ಪರಿಣಾಮಗಳು ಎಂಥವು? ಅದನ್ನು ನಿರ್ವಹಿಸುವ ಕಲೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಅವಮಾನವೆಂದರೆ. . . . .? ಯಾರಿಗೂ ಹೇಳಿಕೊಳ್ಳಲಾಗದ ಅವಮಾನದ ನೋವುಗಳನ್ನು ಎದೆಯ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ತಿರುಗುವ ನೋವು ನಮ್ಮ ಶತ್ರುಗಳಿಗೂ ಬೇಡ. ‘ನಮ್ಮ ಭೀಮ ಗಾತ್ರದ ಶಕ್ತಿಗಳನ್ನು ಲವಲೇಶಕ್ಕೂ ಬೆಲೆ ಇಲ್ಲದಂತೆ ಲಘುವಾಗಿಸುವ ಪ್ರಯತ್ನ ನಡೆಸುವುದೇ ಅವಮಾನ.’ಅವಮಾನಿಸಿಯೇ ನಮ್ಮ ಗಮನ ಸೆಳೆಯುವವರೂ ಕಾಣ ಸಿಗುತ್ತಾರೆ. ಅದಕ್ಕೆಲ್ಲ ಬೇಸರಿಸಿಕೊಳ್ಳುವ ಹಾಗಿಲ್ಲ. ಅವರ ಹೀಯಾಳಿಕೆಯನ್ನೇ ಹೆಗ್ಗಳಿಕೆಯಾಗಿಸಿಕೊಳ್ಳುವುದೇ ಜಾಣತನ. ಭಯ ಆತಂಕದಿಂದಲೇ ಪಡೆಯಬೇಕಾದುದನ್ನು ಮನಸಾರೆ ಸ್ವೀಕರಿಸಿದರೂ ಅಗಾಧ ಬದಲಾವಣೆಯನ್ನು ತರುವ ಅಪಾರ ಶಕ್ತಿ ಅವಮಾನಕ್ಕೆ ಉಂಟು. ಅವಮಾನಿಸಿದವರ ಮುಂದೆ ತಲೆ ಎತ್ತಿ ಬದುಕಬೇಕೆಂದರೆ ಅವಮಾನವನ್ನೇ ಉತ್ಸಾಹವಾಗಿಸಿಕೊಳ್ಳಬೇಕು. ಅದೇ ಉತ್ಸಾಹ ನಮ್ಮನ್ನು ಉತ್ತೇಜಿಸುತ್ತದೆ. ಹೀಗೆ ದೊರೆತ ಉತ್ಸಾಹ ಬದಲಾಗುತ್ತ ಬೆಳೆಯುತ್ತ ಹೋಗುತ್ತದೆ. ಸನ್ಮಾನದತ್ತ ತಂದು ನಿಲ್ಲಿಸುತ್ತದೆ. ಲಕ್ಷಣ ಕಪಾಳ ಮೋಕ್ಷ,ಗುದ್ದುವುದು, ಅಪಹಾಸ್ಯದ ನಗು, ಮುಖದಲ್ಲಿಯ ಅಭಿವ್ಯಕ್ತಿ ಹೀಗೆ ದೈಹಿಕವಾಗಿರಬಹುದು. ಇಲ್ಲವೇ ಸಾಮಾನ್ಯವಾಗಿ ವ್ಯಂಗ್ಯವಾಡುವುದು, ಅಣಕಿಸುವುದು, ಅವಾಚ್ಯ ಶಬ್ದಗಳ ಬಳಕೆ ಅಸಂಬದ್ಧ ಟೀಕೆಗಳನ್ನು ಮಾಡುವುದಿರಬಹುದು. ಪರಿಣಾಮಗಳು ಅವಮಾನ ಮಾಡುವ ಅಡ್ಡ ಪರಿಣಾಮಗಳು ಒಂದೇ ಎರಡೇ? ಅದರ ಪಟ್ಟಿ ಮಾಡುತ್ತ ಸಾಗಿದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಮೊದಲನೆಯದಾಗಿ ನಮ್ಮ ಸಂತೋಷವನ್ನೇ ಹಾಳು ಮಾಡುತ್ತದೆ. ಆತ್ಮವಿಶ್ವಾಸವನ್ನು ಸ್ವ ಗೌರವವನ್ನು ಒಮ್ಮಿಂದೊಮ್ಮೆಲೇ ಕೆಳಕ್ಕೆ ತಳ್ಳುತ್ತದೆ. ಏಕಾಂಗಿಯಾಗಿಸುತ್ತದೆ. ಸಿಟ್ಟು ತರಿಸುತ್ತದೆ. ಆತಂಕಕ್ಕೆ ಒಳಪಡಿಸುತ್ತದೆ. ಅಷ್ಟೇ ಅಲ್ಲ ಇನ್ನೂ ಮುಂದಕ್ಕೆ ಹೋಗಿ ಖಿನ್ನತೆಯೂ ಆವರಿಸುವಂತೆ ಮಾಡುತ್ತದೆ. ನಿರ್ವಹಿಸುವ ಬಗೆ ಹಲವು ಅವು ಇಲ್ಲಿವೆ ನೋಡಿ ಸಿಟ್ಟು ಅವಮಾನಕ್ಕೆ ಸಿಟ್ಟಿನಿಂದ ಉತ್ತರಿಸುವುದು ನಿಜಕ್ಕೂ ತುಂಬ ಅಶಕ್ತವೆನಿಸುತ್ತದೆ. ಅವಮಾನಿಸಿದವರನ್ನು ಮತ್ತು ಅವಮಾನವನ್ನು ಅತಿ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅವಮಾನದಲ್ಲಿ ಸತ್ಯವಿದೆ ಎನಿಸುತ್ತದೆ. ಮನದ ಸ್ಥಿರತೆಯನ್ನು ತಗ್ಗಿಸುತ್ತದೆ. ಮತ್ತಷ್ಟು ಅವಮಾನಕ್ಕೆ ಎಡೆಮಾಡುತ್ತದೆ. ಹೀಗಾಗಿ ಅವಮಾನವನ್ನು ಸಿಟ್ಟಿನಿಂದ ಎದುರಿಸುವುದ ಅಷ್ಟು ಸೂಕ್ತವಲ್ಲ ಎನಿಸುತ್ತದೆ. ಸ್ವೀಕರಿಸುವಿಕೆ ಮೇಲ್ನೋಟಕ್ಕೆ ಅವಮಾನವನ್ನು ಸ್ವೀಕರಿಸುವುದು ಅಶಕ್ತವೆನಿಸಿದರೂ ಸಶಕ್ತ ವಿಧಾನವಾಗಿದೆ. ಅವಮಾನಿತಗೊಂಡಾಗ ಮೂರು ವಿಷಯಗಳನ್ನು ಪರಿಗಣಿಸಬೇಕು. ಅವಮಾನ ಸತ್ಯದ ಆಧಾರದ ಮೇಲಿದೆಯೇ? ಅವಮಾನಿಸಿದವರು ಯೋಗ್ಯರೇ? ಅವಮಾನ ಏಕೆ ಮಾಡಲ್ಪಟ್ಟಿತು? ಸತ್ಯವೆನಿಸಿದರೆ, ಯೋಗ್ಯರೆನಿಸಿದರೆ, (ಪಾಲಕರು, ಗುರುಗಳು, ಗೆಳೆಯರು) ಉದ್ದೇಶ ಒಳ್ಳೆಯದಿತ್ತು ಎನಿಸಿದರೆ ಅವಮಾನವ ಮಾಡಿದವರು ನೀವು ಗೌರವಿಸುವ ವ್ಯಕ್ತಿಯಾಗಿದ್ದರೆ ಆ ಅವಮಾನವನ್ನು ಉಡಾಫೆ ಮಾಡುವಂತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆಯನ್ನು ಅರಿತು ಬದಲಾಗಲು ಸ್ವೀಕರಿಸಬೇಕು. ಮರಳಿಸುವಿಕೆ ಅವಮಾನವನ್ನು ಮರಳಿಸುವಿಕೆಯಲ್ಲಿ ಕೆಲವೊಂದಿಷ್ಟು ವಿಷಯಗಳು ಹುದುಗಿವೆ. ಆದ ಅವಮಾನ ಮರಳಿಸಲು ಯೋಗ್ಯವಾಗಿರಬೇಕು. ಸರಿಯಾದ ಸಮಯಕ್ಕೆ ಜಾಣತನದಿಂದ ಉತ್ತರಿಸುವಂತಿರಬೇಕು. ‘ಪರಿಪೂರ್ಣತೆಯನ್ನು ಕಡಿಮೆ ಮಾಡುವುದು ವಿರಳವಾಗಿ ಉತ್ತಮ ಪ್ರತಿಕ್ರಿಯೆ’ ಎಂದಿದ್ದಾನೆ ಆಸ್ಕರ್ ವೈಲ್ಡ್. ಆದರೆ ಹೀಗೆ ಕಡಿಮೆ ಮಾಡುವ ಪ್ರತಿಕ್ರಿಯೆಯ ಒಂದು ಮುಖ್ಯ ಸಮಸ್ಯೆ ಎಂದರೆ ಎಷ್ಟೇ ಜಾಣರಾಗಿದ್ದರೂ ಅದು ನಮ್ಮನ್ನು ಅವಮಾನಿಸಿದವರ ಮಟ್ಟಕ್ಕೆ ಇಳಿಸುತ್ತದೆ. ಹೀಗಾಗಿ ಇದು ಅಂದವಾದ ದುರ್ಬಲವಾದ ವಿಧಾನ. ಇದರಲ್ಲಿನ ಅವಮಾನಿಸಿದವರನ್ನು ಕೆರಳಿಸಿ ಮತ್ತಷ್ಟು ಆಕ್ರಮಣಗಳನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದರೆ ಈ ವಿಧಾನವನ್ನು ಹಾಸ್ಯಮಯವಾಗಿ ಗೆಳೆಯರೊಂದಿಗೆ ಸಮವಯಸ್ಕರೊಂದಿಗೆ ಬಳಸಬಹುದು. ಅಲಕ್ಷಿಸುವಿಕೆ ಹಾಸ್ಯ, ಶೋಚನೀಯವಾಗಿ ಮರಳಿಸುವಿಕೆಯ ಫಲಿತಾಂಶವನ್ನು ಪಡೆದಿದೆ. ನಿಮ್ಮ ಉತ್ತರ ಮೋಜಿನದಾಗಿರಬೇಕು. ಸರಿಯಾದ ಸಮಯಕ್ಕೆ ಸರಿಯಾದ ಭಾವದೊಂದಿಗೆ ಹೇಳುವಂತಿರಬೇಕು. ನಿಜದಲ್ಲಿ ಅವಮಾನವನ್ನು ಅಲಕ್ಷಿಸುವಿಕೆ ಬಹು ಸರಳ ಮತ್ತು ಹೆಚ್ಚು ಪರಿಣಾಮಕಾರಿ ವಿಧಾನ ಎನ್ನಬಹುದು. ಈ ವಿಧಾನವು ಅಪರಿಚಿತರೊಂದಿಗೆ ಸರಿಯಾಗುತ್ತದೆ. ಆದರೆ ಇದು ನಮ್ಮ ವೈಯಕ್ತಿಕ ವೃತ್ತಿಪರ ಸಂಬಂಧಗಳೊಂದಿಗೆ ಸರಿ ಹೊಂದುವುದಿಲ್ಲ.ಇಂಥ ಸಂದರ್ಭದಲ್ಲಿ ಸರಿಯಾದ ಶಬ್ದವನ್ನು ಬಳಸುವುದು ಆಯ್ಕೆಗೆ ಅರ್ಹವಾದುದು.ಶಬ್ದ ಬಳಸುವಾಗ ನಮ್ಮ ಎಲ್ಲೆಗಳನ್ನು ಮೀರದಂತೆ ಪುನಃ ದೃಢಪಡಿಸಲು ಪ್ರಯತ್ನಿಸಬೇಕು. ವೈಯಕ್ತಿಕ ಮತ್ತು ವೃತ್ತಿಪರ ಆರೋಗ್ಯಕರ ಪರಿಸರ ನಿರ್ಮಿಸುವುದು ಒಂದು ಸವಾಲಿನ ಸಂಗತಿಯೇ ಸರಿ. ಇಲ್ಲಿ ಶಾರೀರಿಕ ಎಲ್ಲೆಗಳನ್ನು ಎಷ್ಟರಮಟ್ಟಿಗೆ ನಿರ್ದಿಷ್ಟವಾಗಿ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದೊಂದು ನಾಯಿ ಬಾಲವನ್ನು ನೆಟ್ಟಗಾಗಿಸಿದಂತೆ.ಪ್ರತಿ ಬಾರಿ ಅದನ್ನು ಪುನಃ ದೃಢಪಡಿಸುವಾಗಲು ಅದು ಬಿಡಿಸದಂತೆ ಡೊಂಕಾಗಿರುತ್ತದೆ. ಇದಕ್ಕೆ ಸಾಕಷ್ಟು ಪ್ರಯತ್ನ ಬೇಕು. ಕೆಲವು ಬಾರಿ ಧೈರ್ಯವೂ ಬೇಕಾಗುತ್ತದೆ. ಆದರೆ ಈ ವಿಧಾನವನ್ನು ಪ್ರಾರಂಭದಿಂದಲೇ ರೂಢಿಸಿಕೊಂಡರೆ ಇದು ಬಹು ಪರಿಣಾಮಕಾರಿ ವಿಧಾನ. ಅವಮಾನ ಅಪರಾಧವಲ್ಲ ಅವಮಾನವನ್ನು ಅಪರಾಧವೆಂದು ಎಂದೂ ತಿಳಿಯಬಾರದು. ಅಪರಾಧವು ನಾವು ಅವಮಾನಕ್ಕೆ ಪ್ರತಿಕ್ರಿಯಿಸುವುದರಲ್ಲಿದೆ. ನಮ್ಮ ಪ್ರತಿಕ್ರಿಯೆಗಳು ನಮ್ಮ ಹತೋಟಿಯಲ್ಲಿರುತ್ತವೆ. ಒಬ್ಬ ಗಮಾರನನ್ನು ಗಮಾರನೆಂದು ನಿರೀಕ್ಷಿಸುವುದು ಅಸಮಂಜಸವಾಗಿದೆ. ಅವನ ಕೆಟ್ಟ ನಡುವಳಿಕೆಯಿಂದ ನಮ್ಮನ್ನು ಅಪರಾಧಿಗಳೆಂದುಕೊಂಡರೆ ನಮ್ಮನ್ನು ನಾವು ದೂಷಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ಆದ್ಯತೆಗಳೂ ಕಾರಣವಾಗುತ್ತವೆ. ಅದಕ್ಕಾಗಿಯೇ ಸುತ್ತಲಿನ ಲೋಕ ಚಾಲ್ತಿ ಪಡೆಯುತ್ತದೆ. ಮೇಲ್ನೋಟದಲ್ಲಿ ಅವಮಾನವೆನಿಸುವುದು ಅವಮಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಮ್ಮೊಳಗಿನ ಚೇತನವನ್ನು ಬಡಿದೆಬ್ಬಿಸುವ ದೊಡ್ಡ ಕೆಲಸವನ್ನು ಮಾಡುವ ಮಾಯಾ ಶಕ್ತಿಯನ್ನು ಹೊಂದಿರುತ್ತದೆ ಎಂಬುದನ್ನು ತಿಳಿದು ನಮ್ಮ ಶಕ್ತಿ ದೌರ್ಬಲ್ಯವನ್ನು ಅಳೆದು ತೂಗಿ ನೋಡಿ ಸಾಧಿಸಬೇಕಾದ ಗುರಿಗೆ ಗುರಿ ಇಡಬೇಕು. ಅನುಮತಿಯಿಲ್ಲದೇ ಅವಮಾನವಿಲ್ಲ ‘ನಿನ್ನ ಅನುಮತಿ ಇರಲಾರದೇ ನಿನ್ನನ್ನು ಯಾರೂ ಅವಮಾನಿಸಲಾರರು.’ ಎಂಬುದು ಅನುಭವಿಕರ ನುಡಿ. ಅವಮಾನದ ಭೀತಿ ಇರುವವರೆಗೂ ಅವಮಾನಗಳು ನಮ್ಮನ್ನು ಸುತ್ತುವರೆಯುತ್ತವೆ. ಅವಮಾನದ ಭೀತಿ ತೊರೆದ ಮೇಲೆ ನಮ್ಮನ್ನು ಬಿಟ್ಟು ತೊಲಗುತ್ತವೆ. ಅವಮಾನಕ್ಕೆ ಪ್ರತಿಕ್ರಿಯಿಸಿ ಮತ್ತೆ ಅವಮಾನಿಸಿಕೊಳ್ಳುವುದು ಮೂರ್ಖತನವೇ ಸರಿ.ಅವಮಾನಕ್ಕೆ ಪ್ರತಿಯಾಗಿ ಅಸಂಬದ್ಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಕುಳಿತರೆ ನಡೆಯುವ ದಾರಿ ತಪ್ಪಿ ಹೋಗುತ್ತದೆ. ಅವಮಾನ ಎದುರಿಸುವಾಗ ಎಚ್ಚರದಿಂದಿರು. ಅವಮಾನವೆಂಬ ಹೆಸರಿನಲ್ಲಿ ಜೀವನದ ಖಾತೆಗೆ ನಷ್ಟ. ಜನರ ದೃಷ್ಟಿಯಲ್ಲಿ ಅವಮಾನ ಸಣ್ಣದಿರಲಿ ದೊಡ್ಡದಿರಲಿ ನಮ್ಮ ಪಾಲಿಗಂತೂ ಅದು ದೊಡ್ಡ ಕಹಿಯೇ ‘ಅವಮಾನ ಹೆಚ್ಚಿದಷ್ಟು ಹೆಚ್ಚು ಲಾಭ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ..’ ಕೊನೆ ಹನಿ ಗೆಲುವಿನೆಡೆಗೆ ಪಯಣ ಬೆಳೆಸುವಾಗ ಅವಮಾನ ಕಟ್ಟಿಟ್ಟ ಬುತ್ತಿ. ಇಲ್ಲಿ ಅವಮಾನ ಯಾರಿಗಿಲ್ಲ ಹೇಳಿ.ಲೋಕದಲ್ಲಿ ಹುಟ್ಟಿದ ಎಲ್ಲರೂ ಅವಮಾನ ಅನುಭವಿಸಿದವರೆ. ಹೆಜ್ಜೆ ಹೆಜ್ಜೆಗೂ ಕಾಡುವ ಅವಮಾನ ಗೆಲುವಿನ ಏಣಿ ಏರಿ ಯಶಸ್ಸಿನ ಶಿಖರವನ್ನು ಮುಟ್ಟಲು ಕಾರಣವಾಗತ್ತದೆ.ಸಣ್ಣ ಪುಟ್ಟ ಘಟನೆಗಳ ಅವಮಾನವೂ ಗಮನ ಸೆಳೆಯುತ್ತದೆ. ಒಮ್ಮೊಮ್ಮೆಯಂತೂ ನಿರುತ್ಸಾಹ ಮೂಡಿಸಿ ಹಿಂಡಿ ಹಿಪ್ಪಿ ಮಾಡಿ ಬಿಡುತ್ತದೆ. ಅವಮಾನಗಳಿಗೆ ಹೆದರುವ ಅಗತ್ಯವಿಲ್ಲ. ಅನಗತ್ಯ ಅವಮಾನವಾಗಿದ್ದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಎಲ್ಲರೂ ನಮ್ಮನ್ನು ಮೆಚ್ಚಿಕೊಂಡರೆ ನಾವು ಶುದ್ಧರಾಗುವುದಿಲ್ಲ. ಶುದ್ಧೀಕರಣ ಇತರರು ನಮ್ಮನ್ನು ಪರೀಕ್ಷೆಗೆ ಒಡ್ಡಿದಾಗ ಟೀಕಿಸಿದಾಗ ಉಂಟಾಗುತ್ತದೆ. ಅವಮಾನವೆಂಬ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು. ಅವಮಾನದ ಸಂದರ್ಭದಲ್ಲಿ ಗೆಳೆಯರು ಬಂಧುಗಳು ಕೈ ಬಿಟ್ಟರೂ ಸಂಗಾತಿಯಾಗಿ ನಿಲ್ಲುವುದೇ ಆತ್ಮವಿಶ್ವಾಸ.ಅವಮಾನದ ಪ್ರತಿ ತಿರುವನ್ನು ಸವಾಲಾಗಿ ಸ್ವೀಕರಿಸಿದರೆ ಒಂದೊಂದು ಅವಮಾನದ ಪ್ರತಿ ತಿರುವೂ ನಿಮ್ಮ ಗೆಲುವಿನ ಮೈಲಿಗಲ್ಲುಗಳಾಗಿ ಜನರು ನಮ್ಮನ್ನು ಅಭಿಮಾನದಿಂದ ತಿರುಗಿ ನೋಡುವಂತೆ ಮಾಡುತ್ತವೆ.ಅವಮಾನಿಸಿದವರೇ ಸನ್ಮಾನಿಸುವಂತೆ ಬೆಳೆದು ತೋರಿಸುವುದೇ ಅವಮಾನಕ್ಕೆ ತಕ್ಕ ಉತ್ತರವಲ್ಲವೇ? ******** ಜಯಶ್ರೀ ಜೆ.ಅಬ್ಬಿಗೇರಿ
ರೇಖಾಚಿತ್ರ ಕಲೆಯ ತಾಯಿ “ಚಿತ್ರಕಲಾ ಅಧ್ಯಾಪಕರ ಆಯ್ಕೆಯಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾಗಬೇಕು” …………………………………. ಹಜರತ್ ಅಲಿ ನಾಡಿನ ಖ್ಯಾತ ಕಲಾವಿದ. ಹರಪನಹಳ್ಳಿ ಬಳಿಯ ಉಚ್ಚಂಗಿ ದುರ್ಗ ಅವರ ಹುಟ್ಟೂರು. ಅವರು ನೆಲೆಸಿರುವುದು ದಾವಣೆಗರೆಯಲ್ಲಿ. ಕಾರ್ಯ ನಿರ್ವಹಿಸುತ್ತಿರುವುದು ತುಮಕೂರು ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ. ಉತ್ಸವಾಂಬ ಪ್ರೌಢಶಾಲೆಯಲ್ಲಿ ಕಲಿತ ಅವರು , ದಾವಣಗೆರೆಯ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ ಮತ್ತು ಮಾಸ್ಟರ್ ಆಫ್ ಆರ್ಟ ಪದವಿಗಳಿಸಿದರು. ಹಂಪಿ ಅವರ ನೆಚ್ಚಿನ ತಾಣ. ನಿಸರ್ಗ ಮತ್ತು ಹಳ್ಳಿ ಬದುಕು ಅವರ ಚಿತ್ರಕಲೆಯ ಮೂಲ ನೆಲೆ. ರೇಖಾ ಚಿತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಾರೆ. ನಾಡಿನ ಹಿರಿಯ ಕಲಾವಿದ ಕೆ.ಕೆ.ಹೆಬ್ಬಾರರ ರೇಖಾ ಚಿತ್ರಗಳನ್ನು ಮೀರಿಸುವಂತೆ ಬೆಳೆದ ಕಲಾವಿದ ಇವರು. ರೇಖೆಗಳ ಮಾಂತ್ರಿಕ ಹಜರತ್ ಅಲಿ ಅವರ ಚಿತ್ರಗಳಿಗೆ ಸೋಲದ ಚಿತ್ರರಸಿಕರೇ ಇಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಗದಗನಲ್ಲಿ ಕಲಾವಿದ ಗೆಳೆಯ ಹಜರತ್ ಮಾತಿಗೆ ಸಿಕ್ಕಿದ್ದರು. ತುಂಬಾ ಸಂಕೋಚದ, ನಾಚಿಕೆ ಸ್ವಭಾವದ ಹಜರತ್ ಅವರನ್ನು ಮಾತಿಗೆ ಎಳೆದು, ಅವರೊಳಗಿನ ಮೌನವನ್ನು ಮಾತಾಡಿಸಿ, ಸಂದರ್ಶನ ರೂಪದಲ್ಲಿ ಇಲ್ಲಿ ನೀಡಲಾಗಿದೆ. ಹಂಪಿಯ ಅವಶೇಷ ಹಾಗೂ ಅಳಿದುಳಿದ ವೈಭವವನ್ನು ವಿದ್ಯಾರ್ಥಿಯಾಗಿದ್ದಾಗ, ಕಲಾವಿದ ಅಧ್ಯಾಪಕನಾಗಿದ್ದಾಗ ಹಲವು ಸಲ ಚಿತ್ರಿಸಿದ ಪ್ರೀತಿ ಅವರದ್ದು. ನಾಡಿನ ಶಿಲ್ಪ ಕಲೆಯ ಬಗ್ಗೆ, ರೇಖಾ ಚಿತ್ರ, ಬಣ್ಣದ ಚಿತ್ರಗಳು, ಅವುಗಳ ಬೆರಗು, ವಾಟರ್ ಕಲರ್ ಪೇಯಿಂಟಿಂಗ್ಸ, ಮಣ್ಣಿನ ಕಲಾಕೃತಿಗಳ ಬಗ್ಗೆ, ಲೋಹದ ಕಲಾಕೃತಿಗಳ ಬಗ್ಗೆ ಅವರು ಗಂಟೆಗಟ್ಟಲೆ ಮಾತಾಡಬಲ್ಲರು. ಹಾಗೂ ವಿವಿಧ ಪ್ರಕಾರಗಳಲ್ಲಿ ಚಿತ್ರಗಳನ್ನು ರೂಪಿಸಬಲ್ಲರು. ನಾಡಿನ ಶ್ರೇಷ್ಠ ಕಲಾವಿದರ ಪರಂಪರೆಯಲ್ಲಿ ಹಜರತ್ ಅಲಿ ಅವರನ್ನು ಸಹ ಕಾಣಬೇಕು. ಅಂಥ ಪ್ರತಿಭೆ ಅವರಲ್ಲಿದೆ. …………………………………. “ಸಂದರ್ಶನದಲ್ಲಿ ನಾಡಿನ ಖ್ಯಾತ ಚಿತ್ರ ಕಲಾವಿದ ಹಜರತ್ ಅಲಿ ಅವರು ಚಿತ್ರ ಕಲೆಯ ಕುರಿತು ಮಾತಾಡಿದ್ದು ಇಲ್ಲಿದೆ. ……………………………. ನಾಗರಾಜ ಹರಪನಹಳ್ಳಿ : ಚಿತ್ರ ನಿಮ್ಮ ಉಸಿರು ಎಂದು ಗೊತ್ತು. ಆದರೂ ಈ ಪ್ರಶ್ನೆ ಕೆಣಕಲು ಕೇಳುತ್ತಿರುವೆ. ಚಿತ್ರ, ಬಣ್ಣಗಳ ಜೊತೆ ಯಾಕೆ ಆಟವಾಡುತ್ತೀರಿ ಅಥವಾ ಚಿತ್ರ ಬರೆಯುತ್ತೀರಿ ? ಹಜರತ್ ಅಲಿ : ಕಲೆ ಮಾನವನ ಆಲೋಚನೆಗಳು ತೀವ್ರಗೊಂಡಾಗ ಸ್ಪೋಟಗೊಳ್ಳುವ ಮೂರ್ತರೂಪದ ಅಥವಾ ದೃಶ್ಯ ರೂಪದ ಭಾವನೆಗಳೇ ಆಗಿರುತ್ತವೆ. ಅದು ಬಣ್ಣ, ರೇಖೆ, ಶಿಲ್ಪ, ಶ್ರಾವ್ಯ,ಅಭಿನಯ, ನೃತ್ಯ ಸಾಹಿತ್ಯ …..ಹೀಗೆ ಹತ್ತುಹಲವು ಬಗೆಗಳಲ್ಲಿ ಅಭಿವ್ಯಕ್ತಿಯಾಗಿರುತ್ತದೆ. ಪ್ರಶ್ನೆ : ಕಲೆ ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ? ಉತ್ತರ ; ಯಾವುದೇ ಬಗೆಯ ಕಲೆಯ ಹುಟ್ಟಿಗೆ ಮೂಲ ಪ್ರೇರಕ ಶಕ್ತಿ ಪ್ರಕೃತಿಯೇ ಆಗಿರುತ್ತದೆ. ಅದು ಕಾಲ ಮತ್ತು ದೇಶಾತೀತವಾದುದು, ಹಾಗಾಗಿ ಇಂಥದ್ದೇ ಸಮಯದಲ್ಲಿ ಕಲೆ ಹುಟ್ಟುತ್ತದೆ ಎಂದೇನಿಲ್ಲ, ಕಲಾವಿದನಲ್ಲಿ ಭಾವತೀವ್ರಗೊಳಿಸುವ ಯಾವುದೇ ವಿಷಯಯವೂ ಚಿತ್ರರೂಪ ಪಡೆಯಬಲ್ಲದು. ನನ್ನನ್ನು ಹೆಚ್ಚಾಗಿ ಕಾಡುವ ವಸ್ತು ವಿಷಯ ಗ್ರಾಮೀಣ ಪ್ರದೇಶದ ಬದುಕು ಮತ್ತು ನೆಲೆ. ನಗರದ ಯಾಂತ್ರಿಕ ಬದುಕಿನ ನಿರ್ಭಾವುಕತೆಗಿಂತಲೂ , ಭಾವುಕ ಜಗತ್ತಿನ ಸ್ವಭಾವ ನನಗೆ ಇಷ್ಟದ ವಿಷಯ. ಪ್ರಶ್ನೆ : ನಿಮ್ಮ ರೇಖಾ ಚಿತ್ರಗಳು ತುಂಬಾ ಕಾಡುತ್ತವೆ. ಹೇಗೆ ಅದರ ಸೆಳೆತ ನಿಮಗೆ ? ಉತ್ತರ : ಚಿತ್ರಕಲೆಯಲ್ಲಿ ರೇಖಾಚಿತ್ರ ಕಲೆಯ ತಾಯಿ ಎಂದು ಕರೆಯಲಾಗುತ್ತದೆ. ಹಾಗಾಗಿ ರೇಖಾಚಿತ್ರದ ಅಭ್ಯಾಸ ಪ್ರತಿಯೊಬ್ಬ ಕಲಾವಿದ್ಯಾರ್ಥಿಗೆ ಹಾಗೂ ಕಲಾವಿದನಿಗೆ ಅತ್ಯಗತ್ಯ. ಪ್ರಶ್ನೆ : ರೇಖೆಗಳು ಚಿತ್ರ ಕಲೆಯ ಶಾಸ್ತ್ರೀಯ ನೆಲೆ ಅಂತ ನೀವು ಹೇಳಿದ ನೆನಪು ನನಗೆ. ಬದಾಮಿ-ಬೇಲೂರು ಶಿಲ್ಪಕಲಾ ವೈಭವದ ವಿಶೇಷತೆ ಏನು ? ಉತ್ತರ : ನಮ್ಮ ಐತಿಹಾಸಿಕ ನೆಲೆಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಬಿಜಾಪುರ, ಬೇಲೂರು ಹಳೇಬೀಡು ಮೊದಲಾದ ಸ್ಥಳಗಳು ಆಯಾಕಾಲದ ಜನಜೀವನದ ಸಾರವನ್ನು ಹೊಂದಿರುವ ಆಕರ ಕೇಂದ್ರಗಳಾಗಿವೆ. ಇವು ಆ ಕಾಲದ ಕಲಾ ಪರಂಪರೆಯನ್ನು ಒಳಗೊಂಡಿದ್ದು ಇಲ್ಲಿ ರಚಿಸಲಾಗಿರುವ ಶಿಲ್ಪಕಲಾಕೃತಿಗಳು ಧಾರ್ಮಿಕ ವಿಷಯಗಳನ್ನಷ್ಟೇ ಅಲ್ಲದೆ, ಆ ಕಾಲದ ಜನರ ಉಡುಗೆ ತೊಡುಗೆಗೆಳು, ವೇಷ ಭೂಷಣಗಳು,ಕ್ರೀಡೆ, ಯುದ್ಧದ, ವೈಭೋಗ ಮುಂತಾದ, ತಮ್ಮ ಕಾಲದ ವರ್ತಮಾನವನ್ನ ನಮ್ಮ ಕಾಲಕ್ಕೂ ತೆರೆದಿಟ್ಟಿರುವ ಜ್ಞಾನ ಭಂಡಾರಗಳಾಗಿವೆ. ಇಲ್ಲನ ವಾಸ್ತುಶಿಲ್ಪ ಶಿಲ್ಪಕಲೆಗೆ ಮನಸೋಲದವರಾರು ? ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಹಂಪಿ ನನ್ನ ನೆಚ್ಚಿನ ಪ್ರಕೃತಿ ತಾಣ, ವಿದ್ಯಾರ್ಥಿಯಾಗಿ, ಅಧ್ಯಾಪಕನಾಗಿ ಇಲ್ಲಿ ನೂರಾರು ನಿಸರ್ಗ ಚಿತ್ರಗಳನ್ನು ರಚಿಸಿದ್ದೇನೆ. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ತುಂಬಾ ಕಲುಷಿತ ಗೊಂಡಿದೆ . ಜಾತಿ ಜಾತಿಗಳ ಮಧ್ಯೆ ಗೋಡೆಗಳು ನಿರ್ಮಿಸುವುದೇ ಸದ್ಯದ ರಾಜಕೀಯ ಬಂಡವಾಳ.. ಪ್ರಶ್ನೆ : ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ತೋರಿಕೆಯಾಗಬಾರದು. ಹೊಸ್ತಿಲೊಳಗಿರಬೇಕಾದ ಧರ್ಮ ಬೀದಿಗೆ ಬಂದು ಅಬ್ಬರಿಸುತ್ತಿದೆ. ಮನುಷ್ಯ ಮನುಷ್ಯನ ನಡುವೆ ಮಾನವತೆಯ ಬಿತ್ತದ ಧರ್ಮ ನನ್ನದೃಷ್ಟಿಯಲ್ಲಿ ಅಪ್ರಯೋಜಕ. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕ ವಲಯವ ಉಳ್ಳವರ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿದೆ. ಅಕಾಡೆಮಿಯಗಳಲ್ಲಿ ಬಹುತೇಕ ಜಾತಿ ಮತಗಳ ಪರವಾದ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರಿಗೆ ಗುರುತಿಸಲ್ಪಡುವುದು ಅತಿವಿರಳ. ಪ್ರಶ್ನೆ : ಚಿತ್ರ, ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ: ಚಿತ್ರಕಲಾ ಕ್ಷೇತ್ರವೂ ಈ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿಲ್ಲ. ಇಂದು ಕರ್ನಾಟಕದ ಚಿತ್ರಕಲಾ ಶಿಕ್ಷಣ ಬಹುತೇಕ ಸೊರಗಿದೆ. ಇಂದು ಕಾಲೇಜುಗಳಲ್ಲಿ ಬೋಧನೆ ಮಾಡುವ ಅಧ್ಯಾಪಕರು ಬಹುತೇಕ ಯೂಜಿಸಿ ಮಾನ್ಯತೆಯ ಪದವಿಧರರಿದ್ದಾರೆಯೇ ಹೊರತು, ಪ್ರತಿಭಾವಂತ ರಿರುವುದು ಕಡಿಮೆಯೆ.. ವಿ.ವಿ.ಗಳ ಅಧಿಕಾರಿಗಳಿಗೆ ಚಿತ್ರಕಲಾ(ದೃಶ್ಯ ಕಲಾ) ಶಿಕ್ಷಣದ ಅರಿವಿನ ಕೊರತೆ ಇದೆ. ಪಠ್ಯಕ್ರಮದಲ್ಲಿ ಏನನ್ನು ಕಲಿಸಲಾಗುತ್ತದೆ ಎಂಬುವುದು ಅವರಿಗೆ ತಿಳಿದಿರುವುದಿಲ್ಲ. ಅಧ್ಯಾಪಕರ ಆಯ್ಕೆ ಯಲ್ಲಿ ಸರ್ಟಿಫಿಕೇಟ್ ಅಷ್ಟೇ ಮುಖ್ಯ, ಅಧ್ಯಾಪಕ ನ ಪ್ರತಿಭೆ ನಗಣ್ಯ. ಚಿತ್ರಕಲಾ ಶಿಕ್ಷಣ ಪ್ರಾಯೋಗಿಕ ಆಧಾರಿತ ಶಿಕ್ಷಣ ವಾಗಿರುವುದರಿಂದ ಅಧ್ಯಾಪಕರ ಆಯ್ಕೆಯಲ್ಲಿ ಅಥವಾ ಸಂದರ್ಶನದಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾದರೆ ಶಿಕ್ಷಣದ ಗುಣಮಟ್ಟ ಸುಧಾರಿಸಬಹುದು.. ಪ್ರಶ್ನೆ : ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಸದ್ಯ ದೇಶಕ್ಕೆ ಮನುಷ್ಯ ಮನುಷ್ಯರನ್ನು ಬೆಸೆಯುವ ಧರ್ಮ ಧರ್ಮ ಗಳನ್ನ ಬೆಸೆಯುವ ಸೌಹಾರ್ದ ಸಂತನ ಅಗತ್ಯವಿದೆ. ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಲ್ಲಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಯುವಜನತೆಯಲ್ಲಿ ಪ್ರಜ್ಞೆ ಮೂಡಿಸಬೇಕು. ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿರುವ ಸಂವಿಧಾನದ ಘನತೆ ನಮ್ಮಲ್ಲಿ ಎಚ್ಚರಗೊಳ್ಳಬೆರಕು.. ಪ್ರಶ್ನೆ : ಆರ್ಟ ,ಪೇಯಿಂಟಿಂಗ್ಸ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಮನುಷ್ಯನ ಬದುಕು ಅರಾಜಕವಾದಲ್ಲಿ ಕಲೆ ಮತ್ತು ಸಂಸ್ಕ್ರತಿಗಳು ಅವಸಾನದ ಹಾದಿ ಹಿಡಿಯುತ್ತವೆ. ದೇಶ ಸುಭಿಕ್ಷುವಾಗಿದ್ದರೆ ಮಾತ್ರ ಕಲೆ, ಕಲಾವಿದರ ಅಸ್ತಿತ್ವ. ಇದಕ್ಕೆ ಪೂರಕವಾದ ಸಮಾಜ ನಮ್ಮದಾಗಲಿ. …………… ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಹಾ ಎನ್ನುವ ಜನುಮದ ಸಾಕಿ ಬುಕ್ ಆಫ್ ಟೀ ಲೇಖಕರು – ಕುಮಾರ್ ಎಸ್ ಬೆಲೆ- -100 ಎಲ್ಲವನ್ನೂ ಬೆಸೆದ ಚಹಾ ಪ್ರೀತಿಗೆ ಎನ್ನುವ ಬರೆಹದೊಂದಿಗೆ ಈ ಪುಸ್ತಕ ನನ್ನ ಕೈ ಸೇರಿದಾಗ ಎಷ್ಟೊಂದು ಖುಷಿಯಾಗಿತ್ತು ಎಂದರೆ ಕುಳಿತಲ್ಲೇ ಒಂದು ಕಪ್ಪು ಬಿಸಿಬಿಸಿ ಚಹಾ ಕುಡಿದಷ್ಟು ರಿಲ್ಯಾಕ್ಸ್ ಆಗಿದ್ದೆ. ನನ್ನ ಚಹಾ ಪ್ರೀತಿಯೇ ಅಂತಹುದ್ದು. ಕೊಟ್ಟರೆ ಮೊಗಮೊಗೆದು ಕುಡಿಯುತ್ತಲೇ ಇರುವ ಇಲ್ಲದಿದ್ದರೆ ದಿನವಿಡೀ ಕುಡಿಯದ ಪ್ರೀತಿಯಂತಹ ಪ್ರೀತಿ ಈ ಚಹ. ಪ್ರೀತಿಯೂ ಹಾಗೆ. ಪ್ರೇಮ ಸಾಗರದಲ್ಲಿ ಮುಳುಗೇಳು ಎಂದರೆ ‘ಮುಳುಗಿಯೇ ಇರುತ್ತೇನೆ ಬಿಡು’ ಎನ್ನಬಲ್ಲೆ ನಾನು. ‘ಬೇಡ, ಒಂಟಿಯಾಗಿರು’ ಎಂದರೆ ಸರಿ ಬಿಡು ಎನ್ನುತ್ತ ಯಾವುದೋ ಪುಸ್ತಕ ಹಿಡಿದು ಕುಳಿತುಬಿಡಲೂ ಸೈ. ಅದಕ್ಕೇ ನನಗೆ ಈ ಪ್ರೀತಿ ಮತ್ತು ಚಹಾ ಒಂದೇ ರೀತಿಯದ್ದಾಗಿ ಕಾಣುತ್ತದೆ. ಆದರೆ ಪ್ರೀತಿಯಲ್ಲಿರುವ ಸುಖ ಒಂಟಿಯಾಗಿರುವುದರಲ್ಲೆಲ್ಲಿದೆ ಹೇಳಿ? ಹೀಗಾಗಿಯೇ ಚಹ ಕೊಟ್ಟಷ್ಟೂ ಪ್ರೀತಿಯಿಂದ ಕುಡಿಯುತ್ತಲೇ ಇರುತ್ತೇನೆ. ಹೀಗಾಗಿ ಪುಸ್ತಕ ಕೈ ಸೇರಿದಾಗ ಮತ್ತೊಮ್ಮೆ ಚಹಾ ಕುಡಿದಷ್ಟೇ ಖುಷಿಯಿಂದ ಓದತೊಡಗಿದೆ. ಈ ಪುಸ್ತಕವನ್ನು ಕುಮಾರ್ ಅವರು ನನಗೆ ಕಳುಹಿಸಲೂ ಒಂದು ಉದ್ದೇಶವಿದೆ. ನಾನು ಆಗ ದಿನಕ್ಕೊಂದರಂತೆ ಚಹಾ ಕವನಗಳನ್ನು ಬರೆಯುತ್ತಿದ್ದೆ. ಹಿಂದಿನ ದಿನ ರಾತ್ರಿ ಕುಳಿತು ಕವನ ಬರೆಯುವುದು, ಬೆಳಗೆದ್ದು ಒಮ್ಮೆ ಅದನ್ನು ಓದಿ, ತಿದ್ದುವುದಿದ್ದರೆ ತಿದ್ದಿ, ಪೋಸ್ಟ್ ಮಾಡುವುದು. ಪ್ರಾರಂಭದಲ್ಲಿ ಕೇವಲ ಇಬ್ಬರು ಸದಾ ಪ್ರೀತಿಸುವ ಜೀವಗಳ- ಅದು ಪ್ರೇಮಿಗಳೂ ಆಗಿರಬಹುದು ಅಥವಾ ಗಂಡ ಹೆಂಡಿರೂ ಆಗಿರಬಹುದು. – ನಡುವಣ ಪ್ರೇಮ ಸಲ್ಲಾಪಕ್ಕೆ ಚಹಾ ಒಂದು ಮಾಧ್ಯಮ ಎಂಬಂತೆ ಚಿತ್ರಿಸಿ ಬರೆಯುತ್ತಿದ್ದರೆ ನಂತರದ ದಿನಗಳಲ್ಲಿ ಹೆಣ್ಣಿನ ಒಳಕುದಿತವನ್ನು ಕುದಿಯುತ್ತಿರುವ ಡಿಕಾಕ್ಷನ್ಗೆ ಹೋಲಿಸಿ ಬರೆಯುತ್ತಿದ್ದೆ. ಬಹಳಷ್ಟು ಜನರಿಗೆ ಅದು ಬಹಳ ಇಷ್ಟವಾಗುತ್ತಿತ್ತು. (ಕೆಲವರಿಗೆ ಕಿರಿಕಿರಿ ಎನ್ನಿಸಿತೆಂದೂ ನಂತರ ತಿಳಿಯಿತು.) ಹಿರಿಯರಾದ ಎಲ್ ಸಿ ನಾಗರಾಜ್ ಚಹಾದ ಕುರಿತು ಜಪಾನಿ ಹಾಯಿಕುಗಳನ್ನು ಕಳಿಸುತ್ತ ಬರೆಯಿರಿ. ನಾನು ಬೇಕಾದ ಮಾಹಿತಿ ಕೊಡುತ್ತೇನೆ ಎನ್ನುತ್ತ ಜಪಾನಿನ ಪ್ರಸಿದ್ದ ಚಹಾ ಗೋಷ್ಠಿಯ ಕುರಿತು ಮಾಹಿತಿ ನೀಡಿದರು. ಈ ಸಮಯದಲ್ಲಿ ಕುಮಾರ್ ಕೂಡ ಈ ಕವಿತೆಗಳನ್ನು ಓದಿ ಅದೆಷ್ಟು ಖುಷಿಪಟ್ಟರೆಂದರೆ ಚಹಾದ ಕುರಿತಾಗಿ ನನ್ನದೊಂದು ಪುಸ್ತಕವಿದೆ ಎಂದು ಕಳಿಸಿಯೇ ಬಿಟ್ಟರು. ಹೀಗೆ ಚಹಾದ ಘಮದ ಬೆನ್ನು ಹತ್ತಿ ಮನೆಗೆ ಬಂದ ಪುಸ್ತಕ ಇದು. ಕುಡಿಯುವವರು ಯಾವಾಗಲೂ ಹೇಳುವ ಮಾತೊಂದಿದೆ. ‘ನಾವೇನೂ ಕುಡಿಯುವ ಕಿಕ್ಕಿಗಾಗಿ ಕುಡಿಯುತ್ತೇವೆ ಎಂದುಕೊಂಡಿದ್ದೀರಾ? ಹಾಗೇನಿಲ್ಲ. ಕುಡಿಯುವ ನೆಪದಿಂದ ಸ್ನೇಹಿತರೆಲ್ಲ ಜೊತೆಗೆ ಸೇರ್ತೀವಿ, ಎಲ್ಲರ ಮನದ ಮಾತು ಹೊರಗೆ ಬರುತ್ತದೆ, ಎಲ್ಲರೂ ಪರಸ್ಪರ ಮುನಿಸು ಮರೆತು ಮತ್ತೆ ಒಂದಾಗ್ತೀವಿ ಅದಕ್ಕೇ ಕುಡಿಯೋದು.’ ಆಗೆಲ್ಲ ನಾನು ಅಂದುಕೊಳ್ಳುತ್ತಿದ್ದೆ. ‘ಹೌದಲ್ವಾ? ಕುಡಿಯೋಕೆ ಕುಳಿತರೆ ಎಷ್ಟೆಲ್ಲ ವಿಷಯಗಳು ಹೊರಬರುತ್ತವೆ. ಆದರೆ ಅದಕ್ಕೆ ಅಲ್ಕೋಹಾಲ್ ಯಾಕಾಗಬೇಕು? ಚಹ ಆಗುವುದಿಲ್ಲವೇ?’ ಎಂದುಕೊಳ್ಳುವಾಗಲೇ ಈ ಪುಸ್ತಕ ನನ್ನ ಕೈ ಸೇರಿದ್ದು. ನಿಮ್ಮ ಜೊತೆಗೆ ಒಂದು ಕಪ್ ಚಹಾದೊಂದಿಗೆ ಇದನ್ನೆಲ್ಲ ಹಂಚಿಕೊಳ್ಳಬಹುದೆಂದುಕೊಂಡೇ ಈ ಬುಕ್ ಆಫ್ ಟೀ’ ನಿಮ್ಮ ಕೂಗಿಡುತ್ತಿದ್ದೇನೆ’ ಎನ್ನುತ್ತ ಕುಮಾರ್ ಚಹಾದ ಜಗತ್ತಿನೊಳಗೆ ನಮ್ಮನ್ನೆಲ್ಲ ಅಕ್ಷರಶಃ ಕೈ ಹಿಡಿದು ಯಾತ್ರೆ ಹೊರಡಿಸುತ್ತಾರೆ. ಚಹಾದ ಬಗ್ಗೆ ಇನ್ನೂವರೆಗೆ ನಾವೆಲ್ಲ ಕಂಡು ಕೇಳರಿಯದ ಎಷ್ಟೊಂದು ವಿಷಯಗಳು ಬರುತ್ತವೆಂದರೆ ನಾವು ಕುಡಿಯುವ ಯಕಶ್ಚಿತ್ ಚಹಾದೊಳಗೆ ಇಷ್ಟೆಲ್ಲ ವಿಷಯ ಇದೆಯಾ? ಎಂದು ಖಂಡಿತವಾಗಿ ನಿಬ್ಬೆರಗಾಗಿ ಬಿಡುತ್ತೇವೆ. ಚಹಾದ ಬಗ್ಗೆ ನಾನು ತಿಳಿದುಕೊಳ್ಳಲೇ ಬೇಕೆಂದುಕೊಂಡ ಎಲ್ಲ ವಿಷಯಗಳೂ ಇಲ್ಲಿದ್ದು ನನ್ನಂತಹ ಚಹಾದ ಬಯಕೆಯವರಿಗೆ ಇದು ಸಣ್ಣ ಎನ್ಸೈಕ್ಲೋಪೀಡಿಯಾ ಅಂತನ್ನಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಚಿಕ್ಕವಳಿರುವಾಗ ನಾನು ಚಹಾ ಕುಡಿಯುತ್ತಲೇ ಇರಲಿಲ್ಲ. ನನ್ನ ಅಣ್ಣ ಈಗಲೂ ಚಹಾ ಕುಡಿಯುವುದಿಲ್ಲ. ‘ಮಾವ ಇನ್ನೂ ಸಣ್ಣ ಪಾಪು, ಹಾಲು ಕುಡಿತಾನೆ’ ನನ್ನ ಮಕ್ಕಳು ನನ್ನಣ್ಣನನ್ನು ಅವನು ಚಹಾ ಕುಡಿಯದಿರುವುದಕ್ಕಾಗಿ ಕಿಚಾಯಿಸುತ್ತಾರೆ. ಚಿಕ್ಕವಳಿದ್ದಾಗ ಚಹಾ ಬೇಕು ಎಂದರೆ ಮೊದಲೇ ಕಪ್ಪು, ಚಹಾ ಕುಡಿದರೆ ಮತ್ತಿಷ್ಟು ಕಪ್ಪಾಗ್ತೀಯಾ ನೋಡು’ ಅಮ್ಮ ಅತ್ತ ಹೆದರಿಸುವ ದನಿಯೂ ಅಲ್ಲದ, ಇತ್ತ ರೇಗುವ ದನಿಯೂ ಅಲ್ಲದ ಧ್ವನಿಯಲ್ಲಿ ಸೀರಿಯಸ್ ಆಗಿ ಹೇಳುವಾಗಲೆಲ್ಲ ತುಟಿಗಿಟ್ಟ ಚಹಾದ ಲೋಟವನ್ನು ಮರುಮಾತನಾಡದೇ ಕೆಳಗಿಡುತ್ತಿದ್ದೆ. ಥೇಟ್ ಅಪ್ಪನ ಬಣ್ಣವನ್ನೇ ಹೊತ್ತುಕೊಂಡು ಬಂದಿದ್ದ ನನಗೆ ಆ ಕ್ಷಣಕ್ಕೆ ನನ್ನ ಬಣ್ಣ ಹಾಗೂ ಚಹಾದ ಸೆಳೆತ ಎರಡೂ ಒಂದೊಂದು ಕಡೆ ಪಾಶ ಹಾಕಿ ಎಳೆದಂತೆ ಭಾಸವಾಗುತ್ತಿತ್ತು. ಆದರೆ ಬಣ್ಣ ಅನ್ನುವುದು ಯೋಚಿಸಬೇಕಾದ ವಿಷಯವೇ ಅಲ್ಲ, ಅಪ್ಪ ನಾನು ಬಣ್ಣದ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ಮೂಲೆಗೆ ಸೇರದಂತೆ ಕಿವಿ ಮಾತು ಹೇಳುತ್ತಲೇ ಆತ್ಮವಿಶ್ವಾಸ ತುಂಬುವ ಹೊತ್ತಿಗೆ ಅದ್ಯಾವ ಮಾಯಕದಲ್ಲಿ ನಾನು ಚಹಾದ ಅತ್ಯುಗ್ರ ಅಭಿಮಾನಿಯಾಗಿ ಬದಲಾದೆನೋ ನನಗೆ ಅರ್ಥವೇ ಆಗಲಿಲ್ಲ. ಚಹಾದ ಸಮಗ್ರ ಇತಿಹಾಸವನ್ನು ಕಟ್ಟಿಕೊಡಲು ಲೇಖಕರು ಇಲ್ಲಿ ಪ್ರಯತ್ನಿಸಿದ್ದಾರೆ. ಚಹಾ ಮೊದಲು ಕೇವಲ ಈಗಿನಂತೆ ಪೇಯವಾಗಿರಲಿಲ್ಲ. ಅದೊಂದು ಔಷಧಿಯಾಗಿತ್ತು ಎನ್ನುತ್ತಲೇ ತಮ್ಮ ಚಹಾದ ಅತಿ ಪ್ರೀತಿಗೊಂದು ಘನತೆಯನ್ನು ತಂದುಕೊಡಲೆತ್ನಿಸುತ್ತ ತಮ್ಮ ಬರೆಹವನ್ನು ಪ್ರಾರಂಭಿಸುತ್ತಾರೆ. ಐದು ಸಾವಿರ ವರ್ಷಗಳ ಹಿಂದೆ ಜಗತ್ತಿನ ಮೊಟ್ಟಮೊದಲ ಚಹಾವನ್ನು ತಯಾರಿಸಿದ್ದು ಚೀನಿ ದೊರೆ ಶೆನ್ ನುಂಗ್ ಕೃಷಿ ದೇವರೆಂದೇ ಆತನನ್ನು ಪೂಜಿಸುತ್ತಿದ್ದ ಚೀನಿಯರಿಗೆ ಆತ ಹೊಸ ಹೊಸ ಕೃಷಿ ಪದ್ದತಿಯನ್ನು ಕಲಿಸಿಕೊಟ್ಟಿದ್ದ ಶೆನ್ ನುಂಗ್ ಒಮ್ಮೆ ಔಷಧಿಯ ಸಸ್ಯಗಳನ್ನು ಹುಡುಕುತ್ತ ಹೋದಾಗ ವಿಶ್ರಾಂತಿಗೆಂದು ತಂಗಿದ್ದ ಕುಟೀರದಲ್ಲಿ ಆತನ ಕುದಿಸುವ ನೀರಿನ ಪಾತ್ರೆಗೆ ಎಲ್ಲಿಂದಲೋ ಚಹಾದ ಎಲೆಯೊಂದು ಹಾರಿ ಬಂದು ಬಿದ್ದಿತ್ತಂತೆ. ಅದು ನೀರಿನ ಬಣ್ಣವನ್ನು ಬದಲಾಯಿಸಿತ್ತು. ಅದನ್ನು ಕುಡಿದ ಶೆನ್ ನುಂಗ್ ದೊರೆಗೆ ಆಯಾಸವೆಲ್ಲ ಪರಿಹಾರವಾಗಿ ಹೊಸ ಚೈತನ್ಯ ಮೂಡಿತ್ತಂತೆ. ಆದರೆ ಈಗಿನ ಚೀನಾ- ಭಾರತದ ನಡುವಣ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಚಹಾ ಚೀನಿಯದ್ದು ಎಂದು ಹೇಳಲೂ ಭಯವೇ ಆದರೂ ಅದು ನಿಷೇಧೀತ ಪಟ್ಟಿಯಲ್ಲಿಲ್ಲ ಎಂಬುದೇ ಚಹಾದ ತಲುಬಿರುವವರಿಗೆ ಸಮಾಧಾನದ ವಿಷಯ. ಯಾಕೆಂದರೆ ಚಹಾ ಕುಡಿಯುವವರಿಗೆ ಒಮ್ಮೆ ಚಹಾ ಕುಡಿಯಬೇಕು ಎನ್ನಿಸಿದರೆ ತಕ್ಷಣವೇ ಕುಡಿಯಲೇ ಬೇಕು ಅನ್ನಿಸಿಬಿಡುತ್ತದೆ. ಆ ಸಮಯದಲ್ಲಿ ಉಳಿದೆಲ್ಲವೂ ನಗಣ್ಯವಾಗಿ ಬಿಡಬಹುದು. ಆದರೆ ಮತ್ತೊಂದು ಸಮಾಧಾನದ ವಿಷಯವೇನೆಂದರೆ ಕುಮಾರ್ ಉಲ್ಲೇಖಿಸಿದ ಮತ್ತೊಂದು ಕಥೆಯ ಪ್ರಕಾರ ಚಹಾದ ಮೂಲ ಭಾರತವೇ ಆಗಿರುವುದು. ಬೋಧಿಧರ್ಮ ಸತತ ಒಂಬತ್ತು ವರ್ಷಗಳ ಕಾಲ ನಿರಂತರ ಧ್ಯಾನ ಮಾಡುವ ಶಪಥ ಮಾಡಿದ್ದ. ಆದರೆ ಕೆಲವು ಸಮಯದ ನಂತರ ನಿತ್ರಾಣಗೊಂಡು ನಿದ್ದೆ ಹೋದ. ಎದ್ದಾಗ ತನ್ನ ಕಣ್ಣುಗಳ ಮೇಲೆ ಕೋಪಗೊಂಡು ಮುಚ್ಚಿಕೊಂಡ ರೆಪ್ಪೆಗಳನ್ನು ಕಿತ್ತೆಸೆದ. ಆ ರೆಪ್ಪೆಗಳು ಬೇರು ಬಿಟ್ಟು ಗಿಡವಾಗಿ ಬೆಳೆಯಿತು. ಅದರ ಎಲೆಗಳು ಕಣ್ಣಿನ ರೆಪ್ಪೆಯ ಆಕಾರದಲ್ಲೇ ಇತ್ತು. ಆ ಎಲೆಗಳನ್ನು ತಿಂದಾಗ ಆಯಾಸವೆಲ್ಲ ಪರಿಹಾರವಾಗಿ ಉತ್ಸಾಹ ತುಂಬಿಕೊಂಡಿತ್ತು. ಈತನೇ ಮುಂದೆ ಈ ಗಿಡವನ್ನು ಚೀನಾಕ್ಕೆ ಒಯ್ದನೆಂದು ಹೇಳಲಾಗುತ್ತದೆ. ನಂತರ ಬೇರೆ ಬೇರೆ ದೇಶಗಳಲ್ಲಿ ಚಹಾದ ಮಹಿಮೆ ಹಬ್ಬಿತು. ಕ್ರಿಶ 726ರಲ್ಲಿ ಚಹಾ ಜಪಾನನ್ನು ಪ್ರವೇಶಿಸಿತು. ಶೋಮು ಎಂಬ ದೊರೆ ಚಹಾದ ಕೃಷಿಯನ್ನು ಪ್ರಾರಂಭಿಸಿದ. ಚೀನಾದ ಹೊರಗೆ ಚಹಾ ಬೆಳೆದ ಮೊದಲ ದೇಶ ಎಂಬ ಹೆಗ್ಗಳಿಕೆ ದೊರೆಯಿತು. ಚೀನಾದಲ್ಲಿ ಟಿಯಿಸಂ ಬೆಳೆದ ಹಾಗೆ ಜಪಾನಿನಲ್ಲಿ ಚಹಾ ಸಮಾರಾಧನೆ ಎನ್ನುವ ವಿಶಿಷ್ಟ ಸಂಪ್ರದಾಯವೇ ಬೆಳೆಯಿತು. ಹೇಗೆ ಸಮಾರಾಧನೆಯ ಕೋಣೆಯನ್ನು ಪ್ರವೇಶಿಸಬೇಕು, ಹೇಗೆ ನಿಂತುಕೊಳ್ಳಬೇಕು ಎಂಬುದರಿಂದ ಹಿಡಿದು ಪ್ರತಿಯೊಂದನ್ನೂ ಹೀಗೆಯೇ ಮಾಡಬೇಕು ಎನ್ನುವ ನಿಯಮಗಳನ್ನು ರೂಪಿಸಿ ಮಾಡುವ ಸಮಾರಾಧನೆ ಇದು. 16ನೇ ಶತಮಾನದಲ್ಲಿ ಡಚ್ಚರಿಂದ ಚಹಾ ಯುರೋಪಿಗೆ ಪರಿಚಯಿಸಲ್ಪಟ್ಟಿತ್ತು. ಅವರು ಚೀನಾದ ಪ್ರಮುಖ ಬಂದರಾದ ಅಮೋಯ್ ಎಂಬಲ್ಲಿ. ಅಲ್ಲಿನ ವ್ಯಾಪಾರಿಗಳು ತಮ್ಮ ಆಡು ಭಾಷೆಯಲ್ಲಿ ಟೇ ಎನ್ನುತ್ತಿದ್ದರಂತೆ. ಹೀಗಾಗಿ ಡಚ್ಚರು ಅದನ್ನು ಟೀ ಯನ್ನಾಗಿಸಿದರು. 1650ರಲ್ಲಿ ಚಹಾ ಇಂಗ್ಲೆಂಡಿಗೆ ಕಾಲಿಟ್ಟಾಗ ಅದ್ಭುತವೂ, ವೈದ್ಯರಿಂದ ಪ್ರಮಾಣಿಕೃತವೂ ಆದ ಚೀನಿ ಪೇಯ.’ ಎಂದಿದ್ದು ದಾಖಲೆಯಾಗಿ ಉಳಿದಿದೆ. ಮೊದಮೊದಲು ಚಾ, ಚಾಯ್, ಟು, ಟೆ, ಮಿಂಗ್, ಥಿಯ ಮುಂತಾದ ಪದಗಳಿಂದ ಪರಿಚಿತವಾಗಿದ್ದ ಈ ಪಾನೀಯಕ್ಕೆ ಚಹಾ ಹಾಗೂ ಟೀ ಎನ್ನುವ ಹೆಸೆರು ಸೂಟ್ ಆದಷ್ಟು ಬೇರೆ ಯಾವುದೇ ಹೆಸರೂ ಆಗುವುದಿಲ್ಲ. ನಾನು ಕೆಲಸ ಸಿಕ್ಕ ಸಂಭ್ರಮದಲ್ಲಿ ಯಾವ ಸ್ಥಳ ಒಳ್ಳೆಯದೆಂದೇ ತಿಳಿಯದೇ ಬೆಳ್ತಂಗಡಿಯ ಒಂದು ಕಾಡೊಳಗಿನ ಹಳ್ಳಿಯನ್ನು ಆರಿಸಿಕೊಂಡಿದ್ದೆ. ಅಲ್ಲಿನ ಹೆಚ್ಚಿನವರಿಗೆ ಕನ್ನಡವೇ ಬರುವುದಿಲ್ಲ. ಆದರೆ ನಮಗೆ ತುಳು ಮಾತನಾಡಲು ಬರದಿದ್ದರೆ ‘ಭಾಷೆ ಇಜ್ಜಿ’ ಎನ್ನುವವರು. ಹೀಗಾಗಿ ತುಳು ಕಲಿಯಲೇ ಬೇಕಾಗಿತ್ತು. ಪ್ರೌಢಶಾಲೆಯಲ್ಲಿ ಉಳಿದ ಶಿಕ್ಷಕರೆಲ್ಲ ತುಳು ಮಾತಾಡುವಾಗ ನಾನು ಮುಖ ಮುಖ ನೋಡುತ್ತ ಕುಳಿತುಕೊಳ್ಳಬೇಕಾಗಿತ್ತು. ಹೀಗಾಗಿ ತುಳು ಕಲಿಯುವ ಪ್ರಯತ್ನದಲ್ಲಿ ನನಗೆ ಸಿಕ್ಕ ಮೊದಲ ವಾಕ್ಯವೇ ‘ಚಾ ಪೆರಿಯಾರ?’ ಮುಂದಿನ ವಾಕ್ಯ ‘ಬಲ್ಲೆ, ಚಾ ಪರ್ಕ’ ಹೀಗಾಗಿ ಚಹಾ ನನಗೆ ನನ್ನನ್ನು ತುಳುನಾಡಿನೊಟ್ಟಿಗೆ ಬೆಸೆಯುವ ಕೊಂಡಿಯಾಗಿದ್ದು. ಮುಂದೆ ಈ ‘ಬಲ್ಲೆ ಚಾ ಪರ್ಕ’ ಎನ್ನುವುದು ತುಳುನಾಡಿನ ಪ್ರಸಿದ್ಧ ನಾಟಕವೊಂದರ ಹೆಸರು ಎಂಬುದೂ ಗೊತ್ತಾಗಿದ್ದು. ನಾಟಕಕ್ಕೂ ಚಹಾ ಕುಡಿಯೋಣ ಬನ್ನಿ ಎಂಬ ಹೆಸರಿಡುತ್ತಾರೆಂದರೆ ಈ ಚಹಾ ನಮ್ಮನ್ನು ಎಲ್ಲಿಂದ ಎಲ್ಲಿಗೆ ಬೆಸೆಯುತ್ತದೆ ನೋಡಿ. ‘ಒಬ್ಬ ಬಾಲ್ಟಿಯೊಂದಿಗೆ ನೀವು ಚಹಾ ಕುಡಿಯುತ್ತಿದ್ದೀರಿ ಎಂದರೆ ನೀವೊಬ್ಬ ಅಪರಿಚಿತ ಅಷ್ಟೆ. ಎರಡನೇ ಸಾರಿ ನೀವು ಅವನೊಡನೆ ಚಹಾ ಸೇವಿಸುತ್ತಿದ್ದೀರಿ ಎಂದರೆ ನೀವು ಆತನ ಅತಿಥಿ, ಮೂರನೇ ಸಲ ನೀವು ಅವನೊಂದಿಗೆ ಚಹಾ ಕಪ್ ಹಂಚಿಕೊಳ್ಳುತ್ತಿದ್ದೀರೆಂದರೆ ಅದರರ್ಥ ನೀವು ಆ ಕುಟುಂಬದ ಸದಸ್ಯ. ನಿಮಗಾಗಿ ಆತ ಸಾಯಲೂ ಸಿದ್ಧ ಎಂದರ್ಥ’ ಈ ಮಾತನ್ನು ಹೇಳಿದ್ದು ಒಬ್ಬ ತಾಲಿಬಾನಿಯಂತೆ. ಅಂದರೆ ಚಹಾದ ಶ್ರೇಷ್ಟತೆಯನ್ನು ಅರ್ಥಮಾಡಿಕೊಳ್ಳಿ. ಇಂತಹ ಚಹಾದ ಹಿರಿಮೆಯನ್ನು ಓದುತ್ತಿದ್ದರೆ ನನಗೆ ನಾನೆಲ್ಲೋ ಕಳೆದು ಹೋಗುತ್ತಿದ್ದೇನೆ ಎಂಬಂತೆ ಭಾಸವಾಗುತ್ತಿತ್ತು. ಚಹಾದ ಕುರಿತಾದ ಲೇಖನಗಳೂ ಅಷ್ಟೇ. ಒಂದೊಂದೂ ಒಂದೊಂದು ತರಹ ಚಹಾದ ಬಗ್ಗೆ ಸಮಗ್ರ ಮಾಹಿತಿ ನೀಡುವಂತಹುದ್ದು. ಚಹಾದ ಮೂಲ, ಎಲ್ಲೆಲ್ಲಿ ಬೆಳೆದ ಚಹಾದ ರುಚಿ ಹೇಗಿರುತ್ತದೆ, ವಿವಿಧ ಚಹಾ ಪ್ರಕಾರಗಳ ಬಗ್ಗೆ, ಟೀ ಬ್ಯಾಗ್ ಕುರಿತು, ಜಾರ್ಜ್ ಆರ್ವೆಲ್ಲರ ಟೀ ಟಿಪ್ಸ್ ಬಗ್ಗೆ, ಚಹಾದ ಎಲೆಗಳನ್ನು ಸಂಗ್ರಹಿಸುವ ಒಣಗಿಸುವ ಹಾಗೂ ಸಂಸ್ಕರಿಸುವ ವಿಧಾನಗಳನ್ನು ತಿಳಿಸುವ ಲೇಖನಗಳು ಖಂಡಿತಾ ಗಮನ ಸೆಳೆಯುತ್ತವೆ. ಹಲವಾರು ತರಹದ ಚಹಾ ಮಾಡುವ ವಿಧಾನಗಳ ಬಗ್ಗೆಯೂ ಲೇಖಕರು ವಿವರವಾಗಿ ತಿಳಿಸುತ್ತಾರೆ. ಇದರೊಟ್ಟಿಗೆ ಬೇರೆ ಬೇರೆ ದೇಶಗಳ ಚಹಾ ಪ್ರೀಯತೆ ಮತ್ತು ಅವರು ಇಷ್ಟಪಡುವ ಚಹಾದ ವೆರೈಟಿಯನ್ನೂ ತಿಳಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಹಾ ಇಷ್ಟ ಎಂಬುದನ್ನು ಬಹು ಚಂದವಾಗಿ ವಿವರಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಜಪಾನಿನಲ್ಲಿ ನಡೆಯುವ ಚಹಾ ಸಮಾರಾಧನೆಯ ಹಾಗೂ ಸೆನ್ ರಿಕ್ಯೂ ಹೇಳಿದ ಚಹಾದ ನಾಲ್ಕು ತತ್ವಗಳು ತೀರಾ ಆಕಷರ್ಿಸುತ್ತವೆ. ಹಿಂದೆ ನಮ್ಮ ಹಳ್ಳಿಯ ಕಡೆ ಬೆಳಗೆದ್ದು ಚಹಾ ಕುಡಿಯುತ್ತಾರೆಂದರೆ ಕೀಳು ಎಂಬಂತೆ ಕಾಣುತ್ತಿದ್ದರಂತೆ. ‘ಛೀ ಅಂವಾ ಬೆಳಿಗ್ಗೆನೇ ಚಹಾ ಕುಡಿತಾನೆ’ ಎಂದು ಆಡಿಕೊಳ್ಳುತ್ತಿದ್ದುದೂ ಇತ್ತಂತೆ. ನಾವೀಗ ಹೇಗೆ ‘ಅವನು ಬೆಳಿಗ್ಗೆ ಬೆಳಿಗ್ಗೆನೆ ಕುಡಿತಾನೆ’ ಎಂದು ಕುಡುಕರನ್ನು ಆಡಿಕೊಳ್ಳುತ್ತೇವೋ ಹಾಗೆ. ಹಳ್ಳಿಯ ಯಾವುದೋ ಮನೆಯಲ್ಲಿ ಚಹಾವನ್ನು ಬಳಸಲು ಪ್ರಾರಂಭಿಸಿದಾಗ ಹಳ್ಳಿಯ
ಜಾಮಿನಿಯ ನೆನಪಿನಲ್ಲಿ ಈ ಮಳೆಗಾಲದಲ್ಲಿಯೇ ನೆನಪುಗಳು ಹುಟ್ಟಿಕೊಂಡಿರಬಹುದು ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಮೋಡಗಳೊಂದಿಗೆ ತಣ್ಣಗೆ ತೇಲಿಬಂದ ನೆನಪೊಂದು, ಏಕಾಂತ ಬಯಸಿ ಟೆರೇಸಿನಲ್ಲಿ ಕುಳಿತು ಆಕಾಶ ದಿಟ್ಟಿಸುತ್ತಿದ್ದ ಹೃದಯವೊಂದನ್ನು ತಾಕಿ ನೆಲಕ್ಕೆ ಇಳಿದಿರಬಹುದು. ಹಾಗೆ ತಾಕಿದ ನೆನಪು ಒಮ್ಮೆ ಬಾಲ್ಯದ ಬೆರಗಾಗಿ, ಇನ್ನೊಮ್ಮೆ ಹರೆಯದ ಕನಸಾಗಿ, ಮತ್ತೊಮ್ಮೆ ಫ್ರಿಡ್ಜ್ ನಲ್ಲಿಟ್ಟ ಐಸ್ ಕ್ರೀಮಾಗಿ ಎಲ್ಲರ ಅರಿವಿಗೂ ದಕ್ಕಿರಬಹುದು. ಹಾಗೆ ದಕ್ಕಿದ ನೆನಪು ಈಗಷ್ಟೇ ಟ್ರೆಕ್ಕಿಂಗ್ ಮುಗಿಸಿದ ಹುಡುಗನೊಬ್ಬನ ಭಾರವಾದ ಬ್ಯಾಗ್ ನಲ್ಲೋ, ಕಾಡುಪಾಪವೊಂದನ್ನು ಕಷ್ಟಪಟ್ಟು ಕ್ಲಿಕ್ಕಿಸಿದ ಫೋಟೋಗ್ರಾಫರ್ ನ ಕ್ಯಾಮರಾದಲ್ಲೋ, ಸಮುದ್ರದಂಚಿಗೆ ಕಾಲುಚಾಚಿ ಕುಳಿತ ಹುಡುಗಿಯೊಬ್ಬಳ ಉಗುರಿನೊಳಗೆ ಸೇರಿಕೊಂಡ ಮರಳಿನ ಕಣಗಳಲ್ಲೋ ಹೊಸದೊಂದು ರೂಪ ಪಡೆದುಕೊಂಡಿರಬಹುದು. ಹೀಗೆ ಹೊಸ ರೂಪ ಪಡೆದ ನೆನಪುಗಳೆಲ್ಲ ಒಂದೊಂದಾಗಿ ಹಿಂದೆಮುಂದೆ ಸುಳಿದಾಡಿ ಅವನೆಂದರೆ ಇವಳು, ಇವಳೆಂದರೆ ಬದುಕು ಹೀಗೆ ಎಲ್ಲವೂ ಹುಟ್ಟಿಕೊಂಡಿರಬಹುದು. ಬದುಕು ಸಹ್ಯವಾಗುತ್ತಾ, ಸಲೀಸಾಗುತ್ತಾ ಸಾಗಬೇಕೆಂದರೆ ಅಲ್ಲೊಂದಿಷ್ಟು ಸುಂದರ ನೆನಪುಗಳು ಸರಿದಾಡುತ್ತಿರಬೇಕು. ಅಪ್ಪ ದೀಪಾವಳಿಗೆಂದು ತಂದುಕೊಟ್ಟ ಫ್ರಾಕಿನ ಮೇಲೆ ಪ್ರಿಂಟಾಗಿದ್ದ ಕೀಲಿಕೈಗಳು, ವಾಲಿಬಾಲ್ ಕೋರ್ಟ್ ನೊಳಗಿಂದಲೇ ಕದ್ದು ನೋಡುತ್ತಿದ್ದ ಹತ್ತನೇ ಕ್ಲಾಸಿನ ಹುಡುಗನ ಕಣ್ಣುಗಳಲ್ಲಿರುತ್ತಿದ್ದ ತುಂಟತನ, ಗಾಳಿ ಕೂಡಾ ನುಸುಳಲು ಸಾಧ್ಯವಾಗದಂತೆ ತುಂಬಿರುತ್ತಿದ್ದ ಸಿಟಿಬಸ್ಸನ್ನು ಸೇಫಾಗಿ ಕಾಲೇಜು ತಲುಪಿಸುತ್ತಿದ್ದ ಡ್ರೈವರ್ ಸಲೀಮಣ್ಣನ ಸಹನೆ, ಆಫೀಸಿನ ಗ್ರಾನೈಟ್ ಕಟ್ಟೆಯ ಮೇಲೆ ತಪಸ್ಸಿಗೆ ಕೂತ ಕಾಮಧೇನುವಿನಂಥ ಕಾಫಿ ಮಷಿನ್ನು ಹೀಗೇ ಲಕ್ಷ್ಯಕ್ಕೇ ಬಾರದ ಸಣ್ಣಪುಟ್ಟ ಸಂಗತಿಗಳೆಲ್ಲ ನೆನಪಾಗಿ ದಿನನಿತ್ಯ ಎದುರಾಗುತ್ತಲೇ ಇರುತ್ತವೆ. ಈ ನೆನಪುಗಳೊಟ್ಟಿಗಿನ ಸಾಂಗತ್ಯ ಸಾಧ್ಯವಾಗದೇ ಇದ್ದಿದ್ದರೆ ಪಾರಿವಾಳವೊಂದು ಪತ್ರ ವಿಲೇವಾರಿ ಮಾಡಿದ ಕಥೆಯೊಂದು ಸಿನೆಮಾವಾಗುತ್ತಲೇ ಇರಲಿಲ್ಲ; ಆ ಸಿನೆಮಾದ ಡ್ಯೂಯೆಟ್ ಒಂದು ಬಾತ್ ರೂಮ್ ಸಿಂಗರ್ ಗಳನ್ನು ಹುಟ್ಟುಹಾಕುತ್ತಿರಲಿಲ್ಲ; ಅಪ್ಪ-ಅಮ್ಮನ ವಿರೋಧವನ್ನು ಧಿಕ್ಕರಿಸಿ ಒಂದಾಗುವ ಪ್ರೇಮಿಗಳು ಆದರ್ಶಪ್ರೇಮವೊಂದರ ಉದಾಹರಣೆಯಾಗುತ್ತಿರಲಿಲ್ಲ. ಹೀಗೇ ನವರಸಗಳನ್ನೂ ಒಟ್ಟೊಟ್ಟಿಗೇ ನಮ್ಮೆದುರು ಬಿಚ್ಚಿಡುವ ಸಾಮರ್ಥ್ಯವೊಂದು ಅದು ಹೇಗೋ ಈ ನೆನಪಿಗೆ ಸಿದ್ಧಿಸಿದೆ. ನೆನಪಿನ ಒಡನಾಟದಲ್ಲಿ ವಿಷಾದವೆನ್ನುವುದು ಇರದಿದ್ದರೆ ಬದುಕು ಇನ್ನಷ್ಟು ವರ್ಣಮಯವೆನ್ನಿಸುತ್ತಿದ್ದಿರಬಹುದು. ಹೊಸ ಸೀರೆಗೊಂದು ಮ್ಯಾಚಿಂಗ್ ಚಪ್ಪಲಿ ಧರಿಸಿ ಗೆಳತಿಯೊಬ್ಬಳ ಬರ್ತ್ ಡೇ ಪಾರ್ಟಿಯೊಂದಕ್ಕೆ ಹೋದಾಗ, ಊಟದ ತಟ್ಟೆಯಲ್ಲಿನ ಜಿಲೇಬಿಯೊಂದು ಜಿಲೇಬಿಪ್ರಿಯರನ್ನೆಲ್ಲ ನೆನಪಿಸುವುದುಂಟು. ಹಾಗೆ ಥಟ್ಟನೆ ನೆನಪಿಗೆ ಬರುವವರ ಲಿಸ್ಟ್ ನಲ್ಲಿ ಹೈಸ್ಕೂಲಿನ ಬೆಂಚಿನ ಮೇಲೆ ಊಟ ಹಂಚಿಕೊಂಡು ತಿಂದ ಗೆಳತಿಯೊಬ್ಬಳಿರಬಹುದು; ಮದುವೆ-ಮುಂಜಿಗಳಲ್ಲಿ ಮಾತ್ರ ಭೇಟಿಯಾಗುವ ದೂರದ ಸಂಬಂಧಿಯೊಬ್ಬನಿರಬಹುದು; ಫೇಸ್ ಬುಕ್ ಪೇಜಿನಲ್ಲಿ ಕಾಣಿಸಿಕೊಂಡ ಜಿಲೇಬಿ ತಿನ್ನುತ್ತಿರುವ ಪುಟ್ಟ ಮಗುವೊಂದಿರಬಹುದು. ಆ ಲಿಸ್ಟ್ ನಲ್ಲಿರುವ ಎಲ್ಲರೊಂದಿಗೂ ಕುಳಿತು ಜಿಲೇಬಿ ತಿನ್ನಲಾಗುವುದಿಲ್ಲ ಎನ್ನುವ ಸತ್ಯವೊಂದು ಗೊತ್ತಿದ್ದರೂ, ಅವರ ಊಟದ ತಟ್ಟೆಯಲ್ಲಿಯೂ ಜಿಲೇಬಿ ಲಭ್ಯವಿರುತ್ತದೆಯೆನ್ನುವ ಸಮಾಧಾನವೊಂದು ನೆನಪುಗಳನ್ನು ಸಲಹುತ್ತಿರುತ್ತದೆ. ಆದರೆ ಆ ಲಿಸ್ಟ್ ನಲ್ಲಿದ್ದ ಮುಖವೊಂದು ಇನ್ನೆಂದಿಗೂ ಎದುರಾಗುವುದೇ ಇಲ್ಲವೆನ್ನುವ ವಿಷಾದವೊಂದು ನೆನಪಿನ ರೂಪದಲ್ಲಿ ಜಿಲೇಬಿಯೊಂದಿಗೆ ಪ್ಲೇಟಿನ ತುದಿಯಲ್ಲಿ ಕಾಣಿಸಿಕೊಂಡಾಗ, ಜಿಲೇಬಿಯೆಡೆಗಿನ ಮೋಹ ಇನ್ನಿಲ್ಲದಂತೆ ಮಾಯವಾಗಿಬಿಡುತ್ತದೆ. ಹಾಗೆ ಲಿಸ್ಟ್ ನಿಂದ ಥಟ್ಟನೆ ಅರಿವಿಗೇ ಬಾರದಂತೆ ಕಳೆದುಹೋದವಳು ಜಾಮಿನಿ. ಮಣಿಪುರದ ಹುಡುಗಿ ಜಾಮಿನಿ ನನ್ನೊಂದಿಗೇ ಕೆಲಸಕ್ಕೆ ಸೇರಿದವಳು. ಮೆತ್ತನೆಯ ಕೂದಲನ್ನು ಮೇಲಕ್ಕೆ ಎತ್ತಿಕಟ್ಟಿ ಜುಟ್ಟು ಅಲ್ಲಾಡಿಸುತ್ತಾ ಫ್ಲೋರ್ ತುಂಬಾ ಓಡಾಡುತ್ತಿದ್ದ ಜಾಮಿನಿ, ಅವಳ ಅಪರೂಪದ ಹೆಸರಿನಿಂದಾಗಿ ಆಫೀಸಿನಲ್ಲೆಲ್ಲ ಫೇಮಸ್ಸಾಗಿದ್ದಳು. ಮೆಲುಮಾತಿನ ಮಿತಭಾಷಿ ಜಾಮಿನಿ ಮನಸ್ಸಿಗೆ ಹತ್ತಿರವಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ತುಂಬುಕುಟುಂಬವೊಂದರ ಕಿರಿಯ ಸೊಸೆಯರಂತೆ ನಾವಿಬ್ಬರೂ ಮನಬಂದಾಗ ಕೆಲಸ ಮಾಡುತ್ತಾ, ಪಾಪ್ ಕಾರ್ನ್ ತಿನ್ನುತ್ತಾ ವರ್ಷಗಳನ್ನೇ ಕಳೆದೆವು. ಮೆಚ್ಚಿದ ಹುಡುಗನನ್ನು ಮದುವೆಯಾದ ಜಾಮಿನಿ ಕೆಲಸ ಬಿಟ್ಟು ಬೇರೆಡೆ ಸೇರಿಕೊಂಡಳು. ನಂತರದ ಐದು ವರ್ಷಗಳಲ್ಲಿ ಒಮ್ಮೆ ಭೇಟಿಯಾಗಿದ್ದು ಬಿಟ್ಟರೆ ಜಾಸ್ತಿ ಮಾತುಕತೆಯೇನೂ ನಮ್ಮಿಬ್ಬರ ಮಧ್ಯೆ ಇರಲಿಲ್ಲ. ಊಟ ಮಾಡುವಾಗಲೋ, ಪಾಪ್ ಕಾರ್ನ್ ತಿನ್ನುವಾಗಲೋ, ಕೆಲವೊಮ್ಮೆ ಮೀಟಿಂಗುಗಳಲ್ಲೋ ಅವಳ ವಿಷಯ ಪ್ರಸ್ತಾಪವಾಗುತ್ತಾ ಫ್ಲೋರ್ ನಲ್ಲಿ ಅವಳ ನೆನಪೊಂದು ಸುಳಿದಾಡುತ್ತಲೇ ಇತ್ತು. ಅಚಾನಕ್ಕಾಗಿ ಒಮ್ಮೆ ಮಧ್ಯಾಹ್ನದ ಹೊತ್ತು ಫೋನ್ ಮಾಡಿದವಳೇ, ಮಾತನಾಡುವುದಿದೆ ಭೇಟಿ ಆಗಬೇಕು ಎಂದಳು. ಅನಿವಾರ್ಯ ಕಾರಣಗಳಿಂದ ಆ ವೀಕೆಂಡ್ ಭೇಟಿ ಸಾಧ್ಯವಾಗಲೇ ಇಲ್ಲ. ಮುಂದಿನ ಶನಿವಾರ ಭೇಟಿಯಾಗುವುದಾಗಿ ಮೆಸೇಜ್ ಕಳಿಸಿ ಸುಮ್ಮನಾಗಿಬಿಟ್ಟೆ. ಅದಾಗಿ ನಾಲ್ಕೇ ದಿನಕ್ಕೆ, ಗುರುವಾರ ಸಂಜೆ ಕ್ಯಾಬ್ ನಲ್ಲಿ ಕುಳಿತು ಮೊಬೈಲ್ ತೆಗೆದರೆ ಜಾಮಿನಿ ಇನ್ನಿಲ್ಲವೆಂಬ ಸುದ್ದಿ ಹರಿದಾಡುತ್ತಿತ್ತು. ಏನಾಗಿತ್ತು, ಏನಾಯಿತು, ಅವಳ ಸಾವಿಗೆ ಕಾರಣವೇನು ಎನ್ನುವ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ಅವಳು ಎರಡು ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದಳೆಂಬ ವಿಷಯವೇ ನಮಗೆಲ್ಲ ಅವಳ ಬಗ್ಗೆ ದೊರಕಿದ ಕೊನೆಯ ಮಾಹಿತಿ. ಅವಳ ಮನಸ್ಸಿನಲ್ಲಿ ಏನಿತ್ತು, ಅವಳು ನನ್ನ ಹತ್ತಿರ ಮಾತನಾಡಬೇಕೆಂದಿದ್ದ ವಿಷಯ ಏನಿದ್ದಿರಬಹುದು, ಅವಳ ಸಮಸ್ಯೆಗೆ ನನ್ನಲ್ಲೇನಾದರೂ ಉತ್ತರವಿತ್ತೇ ಎನ್ನುವಂತಹ ಎಲ್ಲ ಪ್ರಶ್ನೆಗಳಿಗೂ ಈಗಲೂ ಉತ್ತರ ಹುಡುಕುತ್ತಲೇ ಇದ್ದೇನೆ. ನಾನು ಆ ವೀಕೆಂಡ್ ಅವಳನ್ನು ಭೇಟಿಯಾಗಿದ್ದರೆ ಅವಳ ಸಾವನ್ನು ತಪ್ಪಿಸಲು ಸಾಧ್ಯವಿತ್ತೇನೋ ಅಥವಾ ಕೊನೆಪಕ್ಷ ಮುಂದೂಡಬಹುದಿತ್ತೇನೋ ಎನ್ನುವ ಎಲ್ಲ ತಪ್ಪಿತಸ್ಥ ಭಾವನೆಗಳು ಈಗಲೂ ಹಾಗೆಯೇ ಇವೆ. ಜಾಮಿನಿಯ ಘಟನೆಯ ನಂತರ ಯಾರಾದರೂ ಭೇಟಿಯಾಗುವ ಪ್ರಸ್ತಾಪವನ್ನಿಟ್ಟರೆ ಕೆಲಸಗಳನ್ನೆಲ್ಲ ಬದಿಗಿಟ್ಟು, ಜೊತೆಗೊಂದು ಮಸಾಲೆದೋಸೆ ತಿಂದು ಬರುತ್ತೇನೆ. ಹಾಗೆ ಜೊತೆಯಾಗಿ ಕುಡಿದ ಕಾಫಿಯೊಂದು ಯಾವುದೋ ದುಃಖವೊಂದರ ಸಮಾಧಾನವಾಗಿರಬಹುದು; ಸಮಸ್ಯೆಯೊಂದಕ್ಕೆ ಪರಿಹಾರವೂ ಆಗಬಹುದು; ಏನಿಲ್ಲವೆಂದರೂ ಅಲ್ಲೊಂದು ಸುಂದರವಾದ ನೆನಪು ಹುಟ್ಟಿಕೊಳ್ಳಬಹುದು; ಆ ನೆನಪು ಜಾಮಿನಿಯಿಲ್ಲದ ನೋವನ್ನು ಕೊಂಚವಾದರೂ ಕಡಿಮೆ ಮಾಡಬಹುದು. ನೋವಿನೊಂದಿಗಿನ ನೆನಪಿನ ಪಯಣ ಯಾವಾಗಲೂ ದೀರ್ಘ. ಖುಷಿಯಾಗಿ, ಸುಖವಾಗಿ ಕಳೆದ ಗಳಿಗೆಗಳನ್ನು ಎಷ್ಟೋ ಸಲ ಮರೆತೇಹೋಗಿರುತ್ತೇವಾದರೂ, ನೆನಪಲ್ಲಿ ಉಳಿದುಹೋದ ನೋವು ಮಾತ್ರ ಬೇಗ ಮರೆಯಾಗುವಂಥದ್ದಲ್ಲ. ಕಾರಣವೇ ಇಲ್ಲದೇ ಮುರಿದುಬಿದ್ದ ಮೊದಲಪ್ರೇಮ, ಆಪ್ತ ಸಂವಹನವಿಲ್ಲದೇ ಮುಗಿದುಹೋದ ಗೆಳೆತನ, ಅಜ್ಜಿಯ ಸಾವು ಹೀಗೇ ನೋವು ತರುವ ನೆನಪೊಂದು ಎಲ್ಲರ ಬದುಕಿನಲ್ಲೂ ಬೇಡವೆಂದರೂ ಜೀವಂತವಾಗಿರುತ್ತದೆ. ಅಂಥದ್ದೇ ಒಂದು ಅತ್ತ ತೀರಾ ಗಂಭೀರವೂ ಅಲ್ಲದ ಹಾಗಂತ ನಿರ್ಲಕ್ಷ್ಯಿಸಲೂ ಸಾಧ್ಯವಾಗದ, ನೆನಪಿನಿಂದ ಎಂದೂ ಮರೆಯಾಗದ ನೋವೆಂದರೆ ಮನೆಗಳನ್ನು ಬದಲಾಯಿಸುವುದು. ಕೆಲಸಕ್ಕಾಗಿ ಊರು ಬದಲಾಯಿಸುವವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ನಾಲ್ಕೈದು ಮನೆಗಳಾದರೂ ನೆನಪಿನ ಅರಮನೆಗಳಾಗಿ ಉಳಿದುಕೊಂಡಿರುತ್ತವೆ. ಪುಟ್ಟ ಮನೆಯೊಂದರ ಹಾಲ್ ನಲ್ಲಿ ರಾಜಗಾಂಭೀರ್ಯದಲ್ಲಿ ಕುಳಿತಿರುತ್ತಿದ್ದ ಆರಾಮ ಕುರ್ಚಿ, ವಿಶಾಲವಾದ ಮನೆಯಂಗಳದ ಅಂಚಿನಲ್ಲಿ ಯಾರೋ ನೆಟ್ಟು ಬೆಳೆಸಿದ್ದ ಕರಿಬೇವಿನ ಗಿಡ, ಅಪಾರ್ಟ್ಮೆಂಟಿನ ಫ್ಲ್ಯಾಟ್ ನ ಬಾಲ್ಕನಿಯ ಸರಳುಗಳಿಗೆ ಹಬ್ಬಿಕೊಂಡಿದ್ದ ಮನಿಪ್ಲಾಂಟ್ ಹೀಗೇ ಒಂದೊಂದು ಮನೆಯೂ ಸಿಂಪಲ್ಲಾದ ಯಾವುದೋ ನೆನಪಿನೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಮನೆ ಬದಲಾದಾಗ ಲಕ್ಷಗಟ್ಟಲೆ ಸುರಿದು ಸೋಫಾ ಖರೀದಿಸಿ ಮನೆಯನ್ನು ಅಲಂಕರಿಸಿದರೂ ಹಳೆಮನೆಯಲ್ಲಿದ್ದ ಆರಾಮ ಕುರ್ಚಿ ಆಗಾಗ ನೆನಪಿಗೆ ಬಂದು ಸುಖದ ಪರಿಕಲ್ಪನೆಯನ್ನು ಪ್ರಶ್ನಿಸುತ್ತಿರುತ್ತದೆ. ಹೀಗೆ ಸುಖ-ದುಃಖ, ನೋವು-ನಲಿವು ಎನ್ನುವ ಭಾವನೆಗಳೆಲ್ಲವೂ ನೆನಪಿನ ವ್ಯಾಪ್ತಿಯಲ್ಲಿ ಸ್ಥಾನಪಲ್ಲಟಗೊಳ್ಳುತ್ತಾ, ಹೊಸದಾಗಿ ಸೇರ್ಪಡೆಯಾದ ನೆನಪೊಂದು ಹಳೆಯ ನೆನಪುಗಳೊಂದಿಗೆ ವಾದ-ಸಂವಾದಗಳನ್ನು ನಡೆಸುತ್ತಾ ಬದುಕಿನ ಚಲನೆಯುದ್ದಕ್ಕೂ ನೆನಪಿನ ಹೆಜ್ಜೆಗಳು ಜೊತೆಯಾಗುತ್ತಲೇ ಇರುತ್ತವೆ. ದೀಪಾವಳಿಯ ಫ್ರಾಕಿನ ಮೇಲಿದ್ದ ಕೀಲಿಕೈಗಳೆಲ್ಲ ಬದಲಾಯಿಸಿದ ಮನೆಗಳ ನೆನಪೆಲ್ಲವನ್ನೂ ಜೋಪಾನ ಮಾಡಿದರೆ, ಥಿಯೇಟರಿನಲ್ಲಿ ಹೊಸ ಸಿನೆಮಾ ನೋಡುತ್ತಾ ಪಾಪ್ ಕಾರ್ನ್ ತಿನ್ನುವಾಗ ಜಾಮಿನಿಯ ನೆನಪೊಂದು ಪಕ್ಕದ ಸೀಟಿನಲ್ಲಿ ತಣ್ಣಗೆ ಕುಳಿತಿರುತ್ತದೆ. ************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಅಕ್ಷರದ ಬಂಡಾಯ ತಲ್ಲಣಗಳಿಗೆ ಪ್ರತಿಕ್ರಿಯೆ ಬೇಕಾದ ಅನಿವಾರ್ಯತೆಯಲ್ಲಿ ಬರೆಯಲು ಮನಸ್ಸು ಮಾಡಿದೆ’ ಡಾ.ರಾಮಕೃಷ್ಣ ಗುಂದಿ ಡಾ.ರಾಮಕೃಷ್ಣ ಗುಂದಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕತೆಗಾರರಲ್ಲಿ ಒಬ್ಬರು. ಅವಾರಿ ಅವರ ಪ್ರಸಿದ್ಧ ಕತೆ. ಅವರ ಮೊದಲ ಕಥಾ ಸಂಕಲನ ಅವಾರಿ ಹೆಸರಲ್ಲೇ ಪ್ರಕಟವಾಯಿತು. ಕಡಲ ಬೆಳಕಿನ ದಾರಿಯಲ್ಲಿ, ಸೀತೆದಂಡೆ ಹೂವೆ ಅವರ ಕಥಾ ಸಂಕನಲಗಳು. ಪ್ರಾಂಜಲ ಅವರು ವಿವಿಧ ಲೇಖಕರಿಗೆ ಬರೆದ ಮುನ್ನುಡಿಗಳ ಸಂಗ್ರಹ. ಆಗೇರರ ಬದುಕು ಮತ್ತು ಸಂಸ್ಕೃತಿ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಅವರ ಆತ್ಮಕತೆ ಸಹ ಪ್ರಕಟವಾಗಿದೆ. ಯಕ್ಷಗಾನ ಕಲಾವಿದರೂ ಆಗಿರುವ ಡಾ.ಗುಂದಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಕ್ಷಗಾನ ಅಕಾಡಮಿಯ ಸದಸ್ಯರಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸುಧೀರ್ಘ ಅವಧಿ ಕಾರ‍್ಯ ನಿರ್ವಹಿಸಿದ ಅವರು, ಕಾರವಾರದ ದಿವೇಕರ ಕಾಲೇಜಿನಲ್ಲಿ ಕೆಲ ವರ್ಷ ಪ್ರಾಂಶುಪಾಲರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಅವರು ಅಂಕೋಲಾದ ನಾಡು ಮಾಸ್ಕೇರಿ ಬಳಿಯ ಗ್ರಾಮದವರು. ಈಗ ನೆಲಸಿರುವುದು ಅಂಕೋಲಾದಲ್ಲಿ. ಅವಾರಿ, ಕಡಲ ಬೆಳಕಿನ ದಾರಿಯಲ್ಲಿ, ಸೀತೆ ದಂಡೆ ಹೂವೆ, ಮಾನಿನಿ ಮಣಿಯೆ ಬಾರೆ ಅವರ ಬರೆದ ಅತ್ಯುತ್ತಮ ಕತೆಗಳ ಸಾಲಿಗೆ ಸೇರುವಂತಹವು. ಬಂಡಾಯ ಮತ್ತು ದಲಿತ ಸಾಹಿತ್ಯದ ಓದು ಅವರ ಕತೆಗಳನ್ನು ಪ್ರಭಾವಿಸಿದೆಯಾದರೂ, ಕರಾವಳಿಯಲ್ಲಿ ಶೋಷಣೆ, ಜಾತಿಯ ಮುಸುಕು, ಕಾಣುವ ದೌರ್ಜನ್ಯ ಕತೆಗಳಲ್ಲಿ ಅನಾವರಣಗೊಳ್ಳುವ ಬಗೆ ವಿಶಿಷ್ಟ. ಅವರ ಕತೆಗಳಲ್ಲಿ ಮಾನವೀಯ ಅನುಕಂಪ ಮತ್ತು ಮನುಷ್ಯನ ಸೂಕ್ಷ್ಮ ಪ್ರತಿಸ್ಪಂದನಗಳು ಎದ್ದು ಕಾಣುವಂತಹವು. …………………………. ನಾಗರಾಜ ಹರಪನಹಳ್ಳಿ : ಕತೆಗಳನ್ನು ಯಾಕೆ ಬರೆಯುತ್ತೀರಿ? ರಾಮಕೃಷ್ಣ ಗುಂದಿ : ನನ್ನ ಊರು ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಎಂಬ ಪುಟ್ಟ ಗ್ರಾಮ. ನನ್ನ ಬಾಲ್ಯ ಮತ್ತು ಹರೆಯದ ಬಹುಪಾಲು ಅಲ್ಲಿಯೇ ಕಳೆದವು. ಅಂದಿನ ಅಲ್ಲಿಯ ಸಾಮಾಜಿಕ ಪರಿಸರ, ಜಾತಿ ವ್ಯವಸ್ಥೆ, ಮುಖಾಮುಖಿಯಾದ ವಿಕ್ಷಿಪ್ತ ಮತ್ತು ಉದಾತ್ತ ವ್ಯಕ್ತಿತ್ವಗಳು, ನನ್ನೊಳಗೆ ಉಂಟು ಮಾಡಿದ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕಾದ ಅನಿವಾರ‍್ಯತೆಯಲ್ಲಿ ನಾನು ಬರೆಯಲು ಮನಸ್ಸು ಮಾಡಿದೆ ಮತ್ತು ಅದಕ್ಕೆ ಕಥೆಯೇ ಸೂಕ್ತವಾದ ಮಾಧ್ಯಮ ಅನ್ನಿಸಿತು. ಅದೇ ಸಮಯ ಆರಂಭವಾದ ದಲಿತ-ಬಂಡಾಯ ಚಳುವಳಿಯಿಂದಲೂ ಪ್ರಭಾವಿತನಾಗಿ ಕತೆ ಬರೆಯಲು ತೊಡಗಿದೆ. ಪ್ರಶ್ನೆ : ಕಥೆ ಹುಟ್ಟುವ ಕ್ಷಣ ಯಾವುದು? ಉತ್ತರ : ಸಂವೇದನಾ ಶೀಲತೆ ಇದ್ದರೆ ಬರಹಗಾರನಿಗೆ ಇಂಥಹುದೇ ಕ್ಷಣ ಎಂಬುದೇನಿಲ್ಲ. ಅಥವಾ ಅದು ನಿಜವೂ ಇರಬಹುದೇನೋ. ತೀರ ಮನಸ್ಸನ್ನು ಕಾಡುವ ಕ್ಷಣವೊಂದು ಅಭಿವ್ಯಕ್ತಿಯ ಉದ್ದೀಪನಕ್ಕೆ- ಪ್ರೇರಣೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ನಮ್ಮೂರಿನ ಬಂಡಿಹಬ್ಬ ನೋಡಲು ನೂರಾರು ಜನರ ನಡುವೆ ನಿಂತಿದ್ದೆ, ಆಗ ದೇವರ ಮೋಕ್ತೇಸರ ಭಕ್ತ ಜಂಗುಳಿಯತ್ತ ತೆಂಗಿನ ಕಾಯಿ ಎಸೆಯುತ್ತಾನೆ. ಅದು ಯಾರ ಕೈಗೆ ಸಿಗುತ್ತದೋ ಅವರು ಬಂಡಿ ಕಟ್ಟೆಗೆ ಒಡೆಯುವ ಅವಕಾಶ ಪಡೆಯುತ್ತಾರೆ. ಅಲ್ಲಿ ಆಕಸ್ಮಿಕವಾಗಿ ದಲಿತ ಯುವಕನೋರ‍್ವನ ಕೈಗೆ ಕಾಯಿ ಸಿಕ್ಕಾಗ ಅದನ್ನು ಒಡೆಯಲು ಆತನಿಗೆ ಅವಕಾಶ ನೀಡದೆ ಸವರ್ಣೀಯನೊ ಬ್ಬನ ಕೈಗೆ ನೀಡಿ ಕಾಯಿ ಒಡೆಯಲಾಯಿತು. ಈ ದೃಶ್ಯ ನನಗೆ ಆ ಕ್ಷಣದಲ್ಲಿ ತುಂಬ ಕಾಡಿತು. ಮತ್ತು ಅಂದೇ ನಾನು ‘ಚಾಚುದಾರರು’ ಎಂಬ ಕಥೆ ಬರೆಯಲೇ ಬೇಕಾಯಿತು. ದಲಿತನಾದ ನನಗೆ ಅಸ್ಪ್ರಶ್ಯತೆಯ ಕಾರಣದಿಂದ ನೋವು ನೀಡಿದ ಕ್ಷಣಗಳೇ ನನ್ನ ಹಲವು ಕಥೆಗಳ ಹುಟ್ಟಿಗೆ ಕಾರಣವೂ ಆಗಿದೆ. ಪ್ರಶ್ನೆ : ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಉತ್ತರ : ನಾನು ಆಗಲೇ ಹೇಳಿರುವಂತೆ ನನ್ನೂರಿನ ದಲಿತ ಕೇರಿಯ ಬಡತನ, ಹಸಿವು, ಅಸ್ಪ್ರಶ್ಯತೆಯ ಅವಮಾನಕರ ಪ್ರಸಂಗಗಳು ಇದೇ ಕಾರಣದಿಂದ ಅನಿವಾರ‍್ಯವಾಗಿ ಅನುಭವಿಸುವ ಶೋಷಣೆ ಮುಂತಾದವುಗಳೇ ನನ್ನ ಕಥೆಗಳಿಗೆ ವಸ್ತುವಾದವು. ಮುಖ್ಯವಾಗಿ ಒಂದು ಉಪೇಕ್ಷಿತ ದಲಿತ ಸಮುದಾಯವಾಗಿ ಇಂದಿಗೂ ನಿರೀಕ್ಷಿತ ಪ್ರಗತಿ ಕಾಣದ ನಮ್ಮ ‘ಆಗೇರ’ ಜನಾಂಗದ ಧ್ವನಿಯಾಗಬೇಕೆಂಬ ಉತ್ಕಟ ಹಂಬಲವೇ ನನ್ನ ಬಹುತೇಕ ಕಥೆಗಳ ಪ್ರೇರಣೆ ಅನ್ನಬಹುದು. ಹಾಗಾಗಿ ನನ್ನ ಕಥೆಗಳ ವಸ್ತು ವ್ಯಾಪ್ತಿ ಅದರಾಚೆಗೆ ವಿಸ್ತರಿಸಿದ್ದು ಬಹಳ ಕಡಿಮೆಯೇ ಎಂದು ಒಪ್ಪಿಕೊಳ್ಳುವೆ. ಈಗಲೂ ಜಾತಿ-ಮತ-ಧರ‍್ಮದ ಕಾರಣದಿಂದಲೇ ನಿರ್ಧಾರಿತವಾಗುತ್ತಿರುವ ‘ಮನುಷ್ಯ ವ್ಯಕ್ತಿತ್ವ’ ನನ್ನನ್ನು ಯಾವಾಗಲೂ ಕಾಡುತ್ತದೆ. ಪ್ರಶ್ನೆ : ಕಥೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಉತ್ತರ : ಖಂಡಿತವಾಗಿ. ಬಹುಶಃ ಯಾವುದೇ ವ್ಯಕ್ತಿತ್ವ ಬೆಳೆದು ಬರುತ್ತಲೇ ಬಾಲ್ಯ-ಯೌವನಗಳ ಅನುಭವಗಳು ಗಾಢವಾಗಿ ಪ್ರಭಾವಿಸಿರುತ್ತವೆ. ನನ್ನ ಬಹುತೇಕ ಕಥೆಗಳು ನನ್ನ ಬಾಲ್ಯದ ಅನುಭವಗಳಿಂದಲೇ ಸಾಕಷ್ಟು ವಸ್ತುಗಳನ್ನು ದೊರಕಿಸಿಕೊಂಡಿವೆ. ಹರೆಯದ ಅನುಭವಗಳ ಹಿನ್ನಲೆಯಲ್ಲಿ ಕೆಲವು ಕಥೆಗಳನ್ನು ನಿರೂಪಿಸಿದ್ದೇನೆ. ನನ್ನ ‘ಅವಾರಿ’, ‘ಇರಿತ’, ‘ಉಲ್ಕಾಪಾತ’, ‘ಅತಿಕ್ರಾಂತ’ ಮುಂತಾದ ಕಥೆಗಳು ನನ್ನ ಬಾಲ್ಯದ ಹಸಿ ಹಸಿ ನೆನಪುಗಳ ಹಿನ್ನೆಲೆಯಿಂದಲೇ ರೂಪುಗೊಂಡವು. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು? ಉತ್ತರ : ರಾಜಕೀಯ ವಿದ್ಯಮಾನಗಳ ಕುರಿತು ಮಾತೇ ಆಡದಿರುವುದು ಒಳಿತು ಎಂಬಂಥ ಸ್ಥಿತಿಯಲ್ಲಿ ಈಗ ನಾವಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ ಎನ್ನುವುದು ಕೇವಲ ಬಾಯಿ ಮಾತಿಗೆ ಅಷ್ಟೇ. ಎಲ್ಲರಿಗೂ ಅಧಿಕಾರ-ಗದ್ದುಗೆ ಮತ್ತು ಸ್ವಾರ‍್ಥವೇ ಮುಖ್ಯವಾಗಿರುವಾಗ ಪ್ರಜಾಹಿತವೆಂಬುದು ಒಂದು ಚರ್ಚಿತ ವಿಷಯವಾಗಿ ಅಷ್ಟೇ ಉಳಿದುಕೊಂಡಿದೆ. ರೈತರ, ನಿರುದ್ಯೋಗಿಗಳ, ಸಂತ್ರಸ್ತರ ಕುರಿತು ಆಲೋಚಿಸಬೇಕಾದ ರಾಜಕಾರಣಿಗಳು ಕೇವಲ ಅಧಿಕಾರಕ್ಕಾಗಿ ಕಚ್ಚಾಡುವುದು, ಪರಸ್ಪರ ಕಾಲೆಳೆಯುವ, ಕೆಸರೆರಚುವ ಹುಡುಗಾಟದಲ್ಲಿ ಮಗ್ನರಾಗಿರುವುದು ರಾಜಕೀಯದ ಶೋಚನೀಯ ಸ್ಥಿತಿಗೆ ದೃಷ್ಟಾಂತಗಳಾಗಿ ತೋರುತ್ತಿವೆ. ಪ್ರಶ್ನೆ: ಧರ್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಉತ್ತರ : ನನಗೆ ‘ವಚನ ಸಾಹಿತ್ಯ’ ತುಂಬಾ ಪ್ರಭಾವಿಸಿದ ಪ್ರಕಾರ ಅಲ್ಲಿಯೂ ಬಸವಣ್ಣನಂಥವರ ಧರ‍್ಮ ಮತ್ತು ದೇವರ ಕುರಿತಾದ ನಿಲುವು ಪರಿಕಲ್ಪನೆಗಳೇ ಹೃದಯದಿಂದ ಒಪ್ಪಿತವಾದವುಗಳು. ನನ್ನ ಬಾಲ್ಯ, ತಾರುಣ್ಯದ ಬಹು ಮುಖ್ಯ ಜೀವಿತಾವಧಿಯಲ್ಲಿ ನನಗೆ ಜಾತಿಯ ಕಾರಣದಿಂದ ದೇವಾಲಯ ಪ್ರವೇಶ ನಿಷಿದ್ಧವಾಗಿತ್ತು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಗೋಕರ‍್ಣದ ಶಿವರಾತ್ರಿಯಲ್ಲಿ ಮಹಾಬಲೇಶ್ವರ ದೇವಸ್ಥಾನ ಪ್ರವೇಶಕ್ಕೆ ಅರ‍್ಚಕರು ತಡೆದಾಗ ನಮ್ಮ ತಂದೆಯವರು ಅರ‍್ಚಕರೊಡನೆ ಜಗಳಕ್ಕೇ ನಿಂತಿದ್ದು ನನಗೆ ನೆನಪಿದೆ. ಇಂಥ ಸನ್ನಿವೇಶಗಳಿಂದಾಗಿ ‘ದೇವಾಲಯಗಳಿಗೆ ಹೋಗದಿದ್ದರೆ ಆಗುವ ನಷ್ಟವೇನು?’ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡು ಅವುಗಳಿಂದ ದೂರವೇ ಉಳಿದೆ. ಹಾಗೆಂದು ನಾಸ್ತಿಕನೇನಲ್ಲ. ನಾನು ದೇವರನ್ನು ಆರಾಧಿಸುವ ಕ್ರಮ-ಪರಿಕಲ್ಪನೆಗಳು ಬೇರೆ ಅಷ್ಟೇ. ಮನುಷ್ಯನನ್ನು ಮನುಷ್ಯನಾಗಿ ನೋಡದ, ಮನುಷ್ಯ ಮನುಷ್ಯರ ನಡುವೆ ಭೇದ ಕಲ್ಪಿಸುವ ಯಾವ ದೇವರು ಧರ‍್ಮದ ಕುರಿತಾಗಿಯೂ ನನ್ನ ದಿಕ್ಕಾರವೇ. ಸೌಹಾರ್ದತೆ-ಶಾಂತಿ – ಪ್ರೀತಿಯ ನೆಲೆಯ ಯಾವ ಧರ‍್ಮವೇ/ದೇವರೇ ಆದರೂ ನಾನು ಆತ್ಮಸಾಕ್ಷಿಯಾಗಿ ಆರಾಧಿಸುವೆ. ದೇವಾಲಯ ಪ್ರವೇಶ, ಕ್ಷೇತ್ರದರ್ಶನ ಇತ್ಯಾದಿ ನನಗೆ ನಂಬಿಕೆಯಿಲ್ಲ. ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತದೆ? ಉತ್ತರ : ಸಾಂಸ್ಕೃತಿಕ ವಾತಾವರಣ ತಕ್ಕಮಟ್ಟಿಗೆ ಆಶಾದಾಯಕವಾಗಿಯೇ ಇದೆ ಅನಿಸುತ್ತದೆ. ಅಲ್ಲಿಯೂ ಆಗಾಗ ಪ್ರವೇಶ ಪಡೆಯುವ ರಾಜಕಾರಣ, ಸ್ವಜನಪಕ್ಷಪಾತ ಇತ್ಯಾದಿಗಳು ಸ್ವಲ್ಪಮಟ್ಟಿನ ಆತಂಕಕ್ಕೆ ಕಾರಣವಾಗುತ್ತದೆ ಎಂಬುದು ನಿಜವಾದರೂ ಒಟ್ಟಾರೆಯಾಗಿ ಸಾಂಸ್ಕೃತಿಕ ವಾತಾವರಣ ಸಹನೀಯವಾಗಿದೆ ಎನ್ನಬಹುದು. ಪ್ರಶ್ನೆ: ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜಕಾರಣ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇರುತ್ತದೆ. ಸಾಹಿತ್ಯ ವಲಯ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಮತ್ತೆ ಅದೇ ಪ್ರಶ್ನೆ. ಮತ ಧರ‍್ಮಗಳಿಗೆ ಸೇರಿದ, ಸೇರದ ಎಂಬ ಗುಂಪುಗಾರಿಕೆ, ಅಕಾಡೆಮಿ, ಸಾಹಿತ್ಯ ಪರಿಷತ್ತು, ಮತ್ತಿತರ ಸಾಹಿತ್ಯ ಸಂಘಟನೆಗಳಲ್ಲಿನ ಗದ್ದುಗೆಯ ಗುದ್ದಾಟ ಇತ್ಯಾದಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದು ಅಸಹನೀಯವೆನಿಸುತ್ತದೆ. ಸಾಹಿತ್ಯದ ಓದು-ಬರಹಗಳು ಭಾವನಾತ್ಮಕವಾಗಿ ನಮ್ಮನ್ನು ಒಂದುಗೂಡಿಸಲು ವಿಫಲವಾದರೆ ಅದರಿಂದ ಶ್ರೀಸಾಮಾನ್ಯನಿಗಾಗುವ ಪ್ರಯೋಜನವಾದರೂ ಏನು? ಪ್ರಶ್ನೆ: ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ಉತ್ತರ : ಅಂತರಾಷ್ಟ್ರೀಯ ಮಟ್ಟದ ಸ್ನೇಹ-ಬಾಂಧವ್ಯ, ಸ್ವಚ್ಛತೆಯ ಕುರಿತಾದ ರಾಷ್ಟ್ರಮಟ್ಟದ ಅರಿವು ಮುಂತಾದ ಸಂಗತಿಗಳು ಹೆಮ್ಮೆಯೆನಿಸುವಂತಿವೆ. ದಿನದಿಂದ ದಿನಕ್ಕೆ ಗಾಬರಿ ಹುಟ್ಟಿಸುವಂತೆ ಬೆಳೆಯುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗದ ತೀವ್ರ ಸಮಸ್ಯೆ, ರೈತರು ಮತ್ತು ಮದ್ಯಮ ವರ‍್ಗದ ಜನಸಾಮಾನ್ಯರ ಸಮಸ್ಯೆಗಳು ಆತಂಕ ಹುಟ್ಟಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದೊಂದಿಗೆ ಪ್ರಬಲ ವಿರೋಧಿ ಪಕ್ಷವೂ ಸಕ್ರಿಯವಾಗಿರಬೇಕಾಗುತ್ತದೆ. ರಾಜ್ಯದಲ್ಲಿಯೇ ಇರಲಿ ರಾಷ್ಟ್ರಮಟ್ಟದಲ್ಲಿಯೇ ಇರಲಿ ಧ್ವನಿ ಕಳೆದುಕೊಳ್ಳುತ್ತಿರುವ ವಿರೋಧ ಪಕ್ಷಗಳ ಸ್ಥಿತಿಯನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆ ಭವಿಷತ್ತಿನಲ್ಲಿ ಸಾಧ್ಯವೆ? ಸಂವಿಧಾನ ನಿಷ್ಠೆಯ ಕುರಿತು ಗಂಭೀರ ಚಿಂತನೆ ತುರ್ತು ಅಗತ್ಯವೆನಿಸುತ್ತದೆ. ಪ್ರಶ್ನೆ: ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸಾಹಿತ್ಯ ರಚನೆ ಆಶಾದಾಯಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತೋಷ ತರುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಓದುಗರ ಸಂಖ್ಯೆ ಬೆಳೆಯುವಂತೆ ತೋರುತ್ತಿಲ್ಲ. ಸಾಹಿತ್ಯ ವೇದಿಕೆಗಳು, ಸಂಘ-ಸಂಸ್ಥೆಗಳು ಯುವ ಓದುಗರನ್ನು ಹೆಚ್ಚಿಸುವ ಕುರಿತು ಯೋಜನೆಗಳನ್ನು ರೂಪಿಸಬೇಕು, ಪ್ರಯತ್ನಿಸಬೇಕು. ವೈಯುಕ್ತಿಕವಾಗಿ ಇನ್ನಷ್ಟು ಬರಹಗಳಲ್ಲಿ ತೊಡಗಿಕೊಳ್ಳುವ, ಪ್ರಕಟನೆಯ ಕನಸುಗಳಿವೆ ನೋಡಬೇಕು. ಪ್ರಶ್ನೆ: ಕನ್ನಡ ಮತ್ತು ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಕಾಡಿದ ಕತೆಗಾರ ಸಾಹಿತಿ ಯಾರು? ಕನ್ನಡದಲ್ಲಿ ಬಹುತೇಕ ಎಲ್ಲ ಹಿರಿಯ ಸಾಹಿತಿಗಳೂ ಕವಿಗಳೂ ನನ್ನ ನೆಚ್ಚಿನವರೇ. ದೇವನೂರು, ತೇಜಸ್ವಿ, ಕುಂ. ವೀರಭದ್ರಪ್ಪ ನನ್ನ ಬಹುಮೆಚ್ಚಿನ ಲೇಖಕರು. ಮುಖ್ಯವಾಗಿ ಕಥೆ ಬರೆಯುವ ನಿಟ್ಟಿನಲ್ಲಿ ಕುಂ.ವೀ. ನನ್ನ ಇಷ್ಟದ ಮತ್ತು ನನ್ನನ್ನು ತುಂಬ ಪ್ರಭಾವಿಸಿದ ಕತೆಗಾರ. ಇಂಗ್ಲೀಷ ಸಾಹಿತ್ಯ ಶ್ರದ್ಧೆಯ ಓದು ನನ್ನದಲ್ಲ ಹೆಮಿಂಗ್ವೇ, ಗಾರ್ಕಿ ಟಾಲ್ಸ್ಟಾಯ್ರಂಥವರ ಪ್ರಾಸಂಗಿಕ ಬೀಸು ಓದು ಮಾತ್ರವೇ ನನಗೆ ಸಾಧ್ಯವಾಗಿದೆ. ಯಾವ ಬಗೆಯ ಪ್ರಭಾವಕ್ಕೆ ದಕ್ಕುವ ಲೇಖಕರನ್ನು ಹೆಸರಿಸಲಾರೆ ಕ್ಷಮಿಸಿ. …. ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
