ಮಾಸದ ನೆನಪು

ನಾನು ಕಂಡ ಹಿರಿಯರು

ಅರ್ಥವಿದ:ಎಚ್ಚೆಸ್ಕೆ

ಡಾ.ಗೋವಿಂದ ಹೆಗಡೆ

ಅರ್ಥವಿದ:ಎಚ್ಚೆಸ್ಕೆ

(೧೯೨೦-೨೦೦೮)

ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದೆ.೧೯೮೭ರಲ್ಲಿ ಇರಬಹುದು,’ಗ್ರಾಮಾಂತರ ಬುದ್ಧಿಜೀವಿಗಳ ಯುವ ಬಳಗ,ಭೇರ್ಯ’ ಎಂಬ ಸಂಘಟನೆ ಕವಿಗೋಷ್ಠಿಯನ್ನು ಏರ್ಪಡಿಸಿತ್ತು.’ಕವನ ತನ್ನಿ,ಓದಿ!”ಎಂಬ ಕೋರಿಕೆಯೂ ಇತ್ತು.ಸರಿ,ನಾನೂ ಭಾಗವಹಿಸಿದೆ. ಹಿರಿಯ ಬರಹಗಾರರಾದ ಸಿ.ಭೈರವಮೂರ್ತಿ ಸಭೆಯಲ್ಲಿ ಇದ್ದ ನೆನಪು.

ಮರು ತಿಂಗಳ ಕಾರ್ಯಕ್ರಮಕ್ಕೆ ಪತ್ರ ಮೂಲಕ ಆಹ್ವಾನ ಬಂತು. ಹಿರಿಯ ಲೇಖಕ ಎಚ್ಚೆಸ್ಕೆ ಇರುತ್ತಾರೆ ಎಂಬ ಮಾತಿತ್ತು. ಸರಿ, ನಾನು ಹೋದೆ.

ಹಳೆಯ ಕಾಲದ ಮನೆ. ಈಗ ಶಿಶುವಿಹಾರವೋ ಏನೋ ಆಗಿತ್ತು. ಸುಮಾರು ೨೫ × ೨೫ ಅಡಿ ವಿಶಾಲವಾದ ಹಾಲ್. ಹೆಚ್ಚು ಎತ್ತರವಿರದ ಛಾವಣಿ.ಸೆಖೆ.

ಒಂದೆಡೆ ನಾಲ್ಕು ಕುರ್ಚಿ ಮೇಜು ಇಟ್ಟು ವೇದಿಕೆಯನ್ನು ಕಲ್ಪಿಸಿದ್ದರು. ಎದುರಿಗೆ ಇಪ್ಪತ್ತೈದು  ಮೂವತ್ತು ಜನ  ಕವಿಗಳು – ಕಿವಿಗಳು !

ಮೊದಲಲ್ಲೇ ನನಗೆ ಕವನ ವಾಚನದ ಅವಕಾಶ ಸಿಕ್ಕಿತೆಂದು ನೆನಪು. ಓದುತ್ತಿದ್ದವನು ಹಾಗೆಯೇ ಎಚ್ಚೆಸ್ಕೆ ಅವರತ್ತ ಕಣ್ಣು ಹಾಯಿಸಿದೆ. ನನ್ನತ್ತಲೇ ತಿರುಗಿ ತುಂಬಾ ಆಸ್ಥೆಯಿಂದ ಆಲಿಸುತ್ತಿದ್ದರು! ಬರೆದದ್ದು ಸಾರ್ಥಕವಾಯಿತು ಅಂದುಕೊಂಡೆ.

ಅಂದು ನಾನು ಓದಿದ ಕವಿತೆ”ದಾರಿಯೊಂದರ ಇತಿ-ವೃತ್ತ”.

ಅಂದು ಎಚ್ಚೆಸ್ಕೆ ಏನು ಮಾತನಾಡಿದರೋ ನೆನಪಿಲ್ಲ ಆದರೆ ಹಿರಿಯರ ಎದುರು ಕವಿತೆ ಓದಿದ ಧನ್ಯತೆ ನನ್ನದಾಗಿತ್ತು.

ಅದಾಗಿ ಒಂದೆರಡು ವರ್ಷಗಳಲ್ಲಿ ಅವರ ‘ದವನದ ಕೊನೆ’ ಕವನ ಸಂಕಲನ ಓದಲು ಸಿಕ್ಕಿತು. ಅವರೊಬ್ಬ ಗಮನಾರ್ಹ ಕವಿ ಎಂದು ನನಗೆ ತಿಳಿದದ್ದು ಆಗ.

ಅದೇ ಸುಮಾರಿನಲ್ಲಿ ಗೆಳೆಯ ಸುದರ್ಶನ ಅವರ ‘ಎತ್ತರದ ವ್ಯಕ್ತಿಗಳು’ ಸಂಕಲನವನ್ನು ಕೊಟ್ಟು  ವ್ಯಕ್ತಿಚಿತ್ರಗಳನ್ನು ಓದಲು ಹಚ್ಚಿದ. ಎಲ್ಲಾ ನುಡಿಚಿತ್ರಗಳನ್ನು ಓದದಿದ್ದರೂ ಅಪೂರ್ವ ಕನ್ನಡ ಪ್ರೇಮಿ ‘ಅನಂತಪದ್ಮನಾಭ ಸೋಗಾಲ’ರ ಬಗ್ಗೆ ನಾನು ತಿಳಿದದ್ದು ಅಲ್ಲಿ.ಅಲ್ಲಿ ಮಾತ್ರ.

ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಕನ್ನಡ ವಿಶ್ವಕೋಶದ ಸಂಪಾದಕರಾಗಿ, ತಮಗೆ ವಿಶಿಷ್ಟವಾದ ಶೈಲಿಯ ಅಂಕಣ ಬರಹಗಳಿಗಾಗಿ ಎಚ್ಚೆಸ್ಕೆ ಸದಾ ಸ್ಮರಣೀಯರು. ದೇಶಬಂಧು, ವಿಶ್ವಕರ್ನಾಟಕ, ಛಾಯಾ, ಕನ್ನಡನುಡಿ, ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಐದಾರು ದಶಕಗಳ ಕಾಲ ಅಂಕಣ ವ್ಯವಸಾಯ ಮಾಡಿದವರು ಅವರು. ವಾರದಿಂದ ವಾರಕ್ಕೆ, ವಾರದ ವ್ಯಕ್ತಿ, ವ್ಯಕ್ತಿ, ವಿಷಯ, ಆರ್ಥಿಕ ನೋಟ, ದುರ್ಬೀನು ತರಂಗ, ಮುಂತಾದವು ಇವರ ಅಂಕಣ ಶೀರ್ಷಿಕೆಗಳು.ಸ್ಟಾರ್ ಆಫ್ ಮೈಸೂರು ಇಂಗ್ಲೀಷ್ ಪತ್ರಿಕೆಯಲ್ಲಿ ಅವರು ಇಂಗ್ಲಿಷ್ ನಲ್ಲಿ ಅಂಕಣ ಬರೆಯುತ್ತಿದ್ದರು ಎಂದು ಕೇಳಿದ್ದೇನೆ. ‘ಸಮದರ್ಶಿ’,’ವಿಚಾರ ಪ್ರಿಯ’ ಅವರ ಲೇಖನ ನಾಮಗಳು. ಅರವತ್ತು ವರ್ಷಗಳಿಗೂ ಮಿಕ್ಕಿದ ಲೇಖನ ವ್ಯವಸಾಯ ಅವರದು.

ಬ್ಯಾಂಕಿಂಗ್ ಸೇವೆಯಲ್ಲಿ ಕನ್ನಡ ಬಳಕೆಗೆ ಭದ್ರ ಬುನಾದಿ ಹಾಕಿದ ಆಚಾರ್ಯ ಪುರುಷರು ಅವರು. ಬ್ಯಾಂಕ್ ಉದ್ಯೋಗಿಗಳಿಗಾಗಿ 25ಕ್ಕೂ ಹೆಚ್ಚು ಕನ್ನಡ ಕಮ್ಮಟಗಳನ್ನು ನಡೆಸಿಕೊಟ್ಟವರು.

ವಾಣಿಜ್ಯ ಕನ್ನಡ,ಆಡಳಿತ ಕನ್ನಡ,ಕಾನೂನು ಕನ್ನಡ, ವ್ಯವಹಾರಿಕ ಕನ್ನಡ, ಕನ್ನಡ ಬಳಕೆ, ಸಿದ್ಧರು ಪ್ರಸಿದ್ಧರು,ಹೊಂಗನಸು ಕಂಡವರು,ಮಿಂಚಿನ ಹುಡಿ,ವಿಚಾರ ವಿಹಾರ, ಬಿ ಆರ್ ಅಂಬೇಡ್ಕರ್, ರಾಮಾನುಜ:ಜೀವನ ಚರಿತ್ರೆ ಮೊದಲಾದವು ಅವರ ಗ್ರಂಥಗಳು. ಅವರ ಸಮಗ್ರ ಪ್ರಬಂಧಗಳ ಸಂಕಲನ ಪ್ರಕಟವಾಗಿದೆ.

ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು ಕನ್ನಡ ವಿಶ್ವಕೋಶದ ಸಂಪಾದನೆಯ ಕಾರ್ಯಕ್ಕಾಗಿ ವಿಶ್ವವಿದ್ಯಾಲಯಕ್ಕೆ ಎರವಲು ಸೇವೆಗೆ ತೆರಳಿ ಅಲ್ಲಿಯೇ ನಿವೃತ್ತಿ ಹೊಂದಿದರು. ಪಿಂಚಣಿಯನ್ನು ಯಾರು ನೀಡಬೇಕು ಎಂಬ ವಿಷಯ ಮೂರು ದಶಕಗಳಾದರೂ ತೀರ್ಮಾನವಾಗದೇ ಎಚ್ಚೆಸ್ಕೆ ಅವರಿಗೆ ಅನ್ಯಾಯವಾಯಿತು ಎಂದು ಕೇಳಿದ್ದೇನೆ.

ವಾರದ ವ್ಯಕ್ತಿ, ವ್ಯಕ್ತಿ ವಿಷಯಗಳ ಮೂಲಕ ಸಾವಿರಾರು ವ್ಯಕ್ತಿಗಳ ಬಗ್ಗೆ ಬರೆದ ಎಚ್ಚೆಸ್ಕೆ ಅವರ ಬಗ್ಗೆ ಅಂತರ್ಜಾಲದಲ್ಲಿ,ವಿಕಿಪೀಡಿಯಾದಲ್ಲಿ ಒಂದು ಸರಿಯಾದ ಪರಿಚಯಾತ್ಮಕ ಲೇಖನ ಇಲ್ಲದಿರುವುದು ವಿಷಾದನೀಯ. ಇದು ಎಚ್ಚೆಸ್ಕೆ ಅವರ ಜನ್ಮ ಶತಮಾನೋತ್ಸವ ವರ್ಷ. ಈ ಸಂದರ್ಭದಲ್ಲಿ ಅವರ ಕೊಡುಗೆಯನ್ನು ಸ್ಮರಿಸುವಂತಹ ಕೆಲಸಗಳು ಆಗಬೇಕಾಗಿವೆ.

ತಮ್ಮ ವೈವಿಧ್ಯಮಯ ಬರಹಗಳಿಂದ ಕನ್ನಡವನ್ನು ಶ್ರೀಮಂತಗೊಳಿಸಿದ ಧೀಮಂತ ಎಚ್ಚೆಸ್ಕೆ ಅವರಿಗೆ ನಮನ.

————–

ಪೂರಕ ಮಾಹಿತಿ

(ಎಚ್ಚೆಸ್ಕೆ ಬೆಳಕು )

  ಐದನೆಯ ಸಂಚಿಕೆ

 ಎಚ್ಚೆಸ್ಕೆ ಜನ್ಮ ಶತಮಾನೋತ್ಸವ ವರ್ಷ

ಎಚ್ಚೆಸ್ಕೆ ಎಂದೇ ಪ್ರಸಿದ್ಧರಾದ

ಡಾ ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ ( ೧೯೨೦-೨೦೦೮) ಅವರು ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಗೆ ಆಚಾರ್ಯ ಸ್ವರೂಪರು. ೧೯೮೦ ರಿಂದ ಸಮಿತಿ, ಎಲ್ಲ ಬ್ಯಾಂಕುಗಳ ಕನ್ನಡ ಸಂಘಗಳು ಹಾಗೂ ಕನ್ನಡ ಕಾರ್ಯಕರ್ತರುಗಳಿಗೆ ಅರಿವು ಮತ್ತು ಸ್ಪೂರ್ತಿಯ ನಿರಂತರ ಚಿಲುಮೆಯಾಗಿದ್ದಾರೆ.

ಬ್ಯಾಂಕಿಂಗ್ ಅನ್ನು ಕನ್ನಡದಲ್ಲಿ ಅಭಿವ್ಯಕ್ತಿಸಬೇಕೆಂಬ ನಮ್ಮ ಆಸೆಯನ್ನು ಪೋಷಣೆ ಮಾಡಿದವರು ಎಚ್ಚೆಸ್ಕೆ. ೧೯೮೦ ರಲ್ಲಿ ಸಮನ್ವಯ ಸಮಿತಿ ಪ್ರಕಾಶಿಸಲು ಆರಂಭಿಸಿದ ಬ್ಯಾಂಕಿಂಗ್ ಪ್ರಪಂಚ ಅರ್ಧವಾರ್ಷಿಕ, ನಂತರ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಬ್ಯಾಂಕನ್ನಡ ವಾಙ್ಮಯಕ್ಕೆ , ಹಣ ಮತ್ತು ಬ್ಯಾಂಕಿಂಗ್ ಶಾಸ್ತ್ರ ಕ್ಕೆ ಅಪಾರ ಕೊಡುಗೆಯನ್ನು ನೀಡಿದರು. ಹೊರಗಿನ ಲೇಖಕರ ಮೇಲೆ ಬ್ಯಾಂಕಿಂಗ್ ಪ್ರಪಂಚ ಅಲಂಬಿತವಾಬಾರದು ಎಂದು ಕನ್ನಡದಲ್ಲಿ ಬ್ಯಾಂಕಿಂಗ್ ಬರಹಗಾರರ ಪಡೆಯನ್ನು ನಿರ್ಮಾಣ ಮಾಡಲು ಸಮನ್ವಯ ಸಮಿತಿಯು  ಪ್ರತಿ ಆರು ತಿಂಗಳಿಗೊಮ್ಮೆ ಸಂಘಟಿಸಿದ ೨೭ ಬ್ಯಾಂಕಿಂಗ್ ಕಮ್ಮಟ ಗಳ ನಿರ್ದೇಶಕರಾಗಿ ಕನ್ನಡ ಕಟ್ಟಿದರು . ೧೯೮೫ ರಲ್ಲಿ  ಅವರ ಸಂಪಾದಕತ್ವದಲ್ಲಿ ಬ್ಯಾಂಕಿಂಗ್ ನಿಘಂಟು ಅನ್ನು ಬಿಡುಗಡೆ ಮಾಡಲಾಯಿತು. ಹಲವಾರು ವಿಚಾರ ಸಂಕಿರಣಗಳು, ಭಾಷಣಗಳು, ಬ್ಯಾಂಕಿಂಗ್ ಪ್ರತಿಷ್ಠಾನ, ಪ್ರಕಟಣೆಗಳು ಎಲ್ಲವೂ ಅವರ ನಿರ್ದೇಶನದಲ್ಲಿ ನಡೆಯಿತು. ಕನ್ನಡ, ಬ್ಯಾಂಕಿಂಗ್, ಬದುಕು, ಸೃಜನಾತ್ಮಕ ಬರಹ, ಸಂಘಟನೆ,  ಮಾತುಗಾರಿಕೆ ಎಲ್ಲದರಲ್ಲೂ ಎಚ್ಚೆಸ್ಕೆ ನಮ್ಮನ್ನು ಪಳಗಿಸಿದರು.

ಈಗ ಸಮನ್ವಯ ಸಮಿತಿಯ ಕಾರ್ಯಕರ್ತರಿಂದ ನಡೆಯುತ್ತಿರುವ ಸಾಹಿತ್ಯ ದಾಸೋಹ ,” ಸಮನ್ವಯ ಸಮಿತಿ# ಕನ್ನಡವೇ ಸತ್ಯ  ವಾಟ್ಸಪ್ ವೇದಿಕೆಗಳಿಗೆ ಶ್ರೀ ಎಚ್ಚೆಸ್ಕೆ ಅವರೇ ಸ್ಪೂರ್ತಿ.

೨೦೧೬ ರಿಂದ ವೇದಿಕೆಯ ಮೂಲಕ ಸಮನ್ವಯ ಸಮಿತಿಯು ಎಚ್ಚೆಸ್ಕೆ ಬೆಳಕು ಎಂಬ ಒಂದು ದಿನದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಬ್ಯಾಂಕಿಂಗ್, ಸಾಹಿತ್ಯ ಮತ್ತು ಸಂಸ್ಕೃತಿಗಳ ರಸದೌತಣವದು.
೨೦೨೦ ರ ಎಚ್ಚೆಸ್ಕೆ ಬೆಳಕು ಕಾರ್ಯಕ್ರಮವನ್ನು ಫೆಬ್ರುವರಿ ೧೬ ರಂದು ಆಯೋಜಿಸಲಾಗಿದೆ. ಬೆಳಗ್ಗೆ ೧೦.೩೦ ರಿಂದ ಸಂಜೆ ೫.೦೦ ಗಂಟೆಯವರೆಗೆ.

ಕಾರ್ಯಕ್ರಮ ದಲ್ಲಿ ಮುಖ್ಯವಾಗಿ ನಾಲ್ಕು‌ಗೋಷ್ಠಿಗಳು ಇರುತ್ತದೆ. ಸಾಹಿತ್ಯ, ಬ್ಯಾಂಕಿಂಗ್ , ಸಾಂಸ್ಕೃತಿಕ ಮತ್ತು ಕವಿಗೋಷ್ಠಿ. ಕವಿಗೋಷ್ಠಿಯು ಫೆ ೧೬ ರ ಮಧ್ಯಾನ್ಹ ೩ ಗಂಟೆಗೆ ಇರುತ್ತದೆ.
‘ಎಚ್ಚೆಸ್ಕೆ ಬೆಳಕು’ ಕಾರ್ಯಕ್ರಮದ ಕವಿಗೋಷ್ಠಿ ಯ ಅಧ್ಯಕ್ಷತೆಯನ್ನು ಡಾ. ಗೋವಿಂದ ಹೆಗಡೆ ಇವರು ವಹಿಸಲಿದ್ದಾರೆ ಎಂದು ಸಂಚಾಲಕ ಬೆಂ ಶ್ರೀ ರವೀಂದ್ರ ತಿಳಿಸಿದ್ದಾರೆ.)

***************

One thought on “ಮಾಸದ ನೆನಪು

Leave a Reply

Back To Top