ಸ್ವಾತ್ಮಗತ

ಗಜಾನನ ಹೆಗಡೆ ಅಸ್ತಂಗತ..

ಕೆ.ಶಿವು ಲಕ್ಕಣ್ಣವರ

ಖ್ಯಾತ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ ಅಸ್ತಂಗತ..!

ಖ್ಯಾತ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ ಇಂದು ವಿಧಿವಶರಾಗಿದ್ದಾರೆ.
ಇತ್ತೀಚಿಗೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ ಜೆ.ಪಿ.ನಗರದ ಪಿ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೬-೨-೨೦೨೦ರಂದು ಮಧ್ಯಾಹ್ನ ಕೊನೆಯುಸಿರೆಳೆದರು.
ಮೃತರಿಗೆ ಪತ್ನಿ, ಒಬ್ಬ ಪುತ್ರ (ಮಯೂರ) ಹಾಗೂ ಒಬ್ಬ ಪುತ್ರಿ ಇದ್ದಾರೆ.

ಉತ್ತರ ಕನ್ನಡ ಮೂಲದವರಾದ ಗಜಾನನ ಹೆಗಡೆಯವರು ಹೊನ್ನಾವರ – ಗೇರುಸೊಪ್ಪ ಮಧ್ಯೆದಲ್ಲಿರೋ ಕವಲಕ್ಕಿ ಗ್ರಾಮದವರು. ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂದು ಇಪ್ಪತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೊರ ಬಂದಿದ್ದರು. 2001ರಲ್ಲಿ ‘ಈ ಟಿವಿ’ ಕನ್ನಡ ಸುದ್ದಿ ವಾಹಿನಿ ಮೂಲಕ ನ್ಯೂಸ್ ಆಂಕರ್ ಆಗಿದ್ದವರು. ಬಳಿಕ ಕನ್ನಡ ವಾಹಿನಿ ‘ಕಸ್ತೂರಿ 24’ನಲ್ಲಿ ಆಂಕರ್ ಚೀಫ್ ಆಗಿ ಕಾರ್ಯ ನಿರ್ವಹಿಸಿದರು.

ಅಲ್ಲಿಂದ ಮತ್ತೊಂದು ಖಾಸಗಿ ಸುದ್ದಿ ವಾಹಿನಿಯಾದ ‘ಪ್ರಜಾ ಟಿವಿ’ಯಲ್ಲಿ ಮುಖ್ಯ ಸುದ್ದಿ ನಿರೂಪಕರಾಗಿ ಮನೆ ಮಾತಾಗಿದ್ದರು. ಪ್ರಚಲಿತ ವಿದ್ಯಮಾನಗಳ ಕುರಿತು ಗಂಟೆಗಟ್ಟಲೇ ಚರ್ಚೆ ನಡೆಸಿ ತೆಗೆದುಕೊಂಡ ವಿಷಯದ ಮೇಲೆ ಬೆಳಕು ಚೆಲ್ಲುತ್ತಿದ್ದರು. ಮಾಧ್ಯಮ ರಂಗದಲ್ಲಿ ಅನೇಕ ಮಿತ್ರರನ್ನು ಸಂಪಾದಿಸಿದ್ದರು ಅವರು. ಜೊತೆಗೆ ಅನೇಕ ಶಿಷ್ಯರಿಗೂ ಅವರು ಮಾರ್ಗದರ್ಶಕರಾಗಿದ್ದರು.

ಇಂತಹ ಗಜಾನನ ಹೆಗಡೆ ಧಾರವಾಡದಲ್ಲಿ ಡಿಗ್ರಿ ಓದುತ್ತಿರುವಾಗಲೇ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿದ್ದರು. ಮುಂದೆ ಅದೇ ಸಲುಗೆ ಪ್ರೇಮಕ್ಕೆ ತಿರುಗಿ ಇಬ್ಬರೂ ಪಾಲಕರನ್ನು ಒಪ್ಪಿಸಿ ಮದ್ವೆಯಾಗಿದ್ದರು. ಗಜಾನನ ಹೆಗಡೆಯವರು ಪ್ರೀತಿಸಿದ ಹುಡುಗಿ ಲಿಂಗಾಯತರೆಂಬ ಕಾರಣಕ್ಕೆ ಬ್ರಾಹ್ಮಣರಾದ ಹೆಗಡೆಯವರ ಮನೆಯವರು ಮೊದ ಮೊದಲು ಒಪ್ಪಿರಲಿಲ್ಲವಂತೆ. ನಂತರ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು.

ಪ್ರೀತಿಸಿ ಮದುವೆಯಾದ ಗಜಾನನ ಅವರಿಗೆ ಹಾಡು, ನಾಟಕವನ್ನು ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಹೀಗಾಗಿ ಪ್ರೀತಿಸಿದವಳನ್ನು ಕಟ್ಟಿಕೊಂಡ ಸಂತೋಷ ಒಂದು ಕಡೆಯಾದರೆ, ಯಾರ ಸಹಾಯವಿಲ್ಲದೇ ಬದುಕನ್ನು ಕಟ್ಟಿಕೊಳ್ಳೋದು ಹೇಗೆ? ಎಂಬ ಚಿಂತೆಯಾಗಿತ್ತು. ಆಗ ನೆರವಿಗೆ ಬಂದದ್ದೇ ‘ಈ ನಾಡು’ ಕನ್ನಡ ವಾಹಿನಿ!

ಆಗ ತಾನೆ ಮೂಡಿ ಬಂದಿದ್ದ ‘ಈ ಟಿವಿ’ಯಲ್ಲಿ ಗೆಳೆಯರ ನೆರವಿನಿಂದ ಗಜಾನನ ಹೆಗಡೆ ಮೊದಲಿಗೆ ಎಂಟರ್ ಟೈನ್ಮೆಂಟ್ ವಿಭಾಗದಲ್ಲಿ ನಿರೂಪಕರಾಗಿ ಕೆಲಸ ಆರಂಭಿಸುತ್ತಾರೆ. ಈ ವೇಳೆ, ಅದಾಗಲೇ ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಅದೇ ಟಿವಿಯಲ್ಲಿ ನ್ಯೂಸ್ ಆಂಕರ್ ಆಗಿದ್ದ ಗೌರೀಶ್ ಅಕ್ಕಿ ಮತ್ತು ಚೆನ್ನವೀರ ಸಗರನಾಳ್ ಅವರ ಪರಿಚಯವಾಗುತ್ತೆ.

ಮದುವೆ ಮಾಡಿಕೊಂಡು ಪತ್ನಿಯನ್ನು ಊರಿನಲ್ಲಿಯೇ ಬಿಟ್ಟು ಬಂದಿದ್ದ ಗಜಾನನ ಅವರಿಗೆ ಇಬ್ಬರು ಸ್ನೇಹಿತರು ತಮ್ಮಲ್ಲೇ ಆಶ್ರಯವೊದಗಿಸುತ್ತಾರೆ. ಮುಂದೆ ಕೆಲ ದಿನಗಳಲ್ಲಿಯೇ ಗಜಾನನ ಹೆಗಡೆಯವರು ತಮ್ಮ ಪತ್ನಿಯನ್ನು ಹೈದರಾಬಾದ್ ಗೆ ಕರೆದುಕೊಂಡು ಬಂದು ಸಂಸಾರದ ನೊಗ ಎಳೆಯುತ್ತಾರೆ. ಹೈದರಾಬಾದ್ ನಲ್ಲಿಯೇ ಸುಮಾರು ಹತ್ತು ವರ್ಷಗಳನ್ನು ಕಳೆದ ಗಜಾನನ ಹೆಗಡೆ ತಿರುಗಿ ನೋಡಿದ್ದಿಲ್ಲ.

ಗಜಾನನ ಹೆಗಡೆ ಕನ್ನಡ ಸುದ್ದಿ ನಿರೂಪಕರಲ್ಲಿ ಎದ್ದು ಕಾಣುವಂಥ ವ್ಯಕ್ತಿತ್ವವುಳ್ಳವರು. ಅವರದು ಕಂಚಿನ ಕಂಠ. ಕನ್ನಡವನ್ನು ಬಹುವಾಗಿ ಪ್ರೀತಿಸುತ್ತಿದ್ದ ಗಜಾನನ ಹೆಗಡೆ ಕನ್ನಡವನ್ನು ಅಷ್ಟೇ ಸೊಗಸಾಗಿ ಮತ್ತು ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಟಿವಿಯಲ್ಲೂ ಅಷ್ಟೇ ಸುಂದರವಾಗಿ ಕಾಣುತ್ತಿದ್ದರು.

ಗಜಾನನ ಹೆಗಡೆಯವರು ಓರ್ವ ರಂಗಕರ್ಮಿ ಕೂಡ ಆಗಿದ್ದರು ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಗಜಾನನ ಅವರು ನೀನಾಸಂ ನಲ್ಲಿದ್ದರು. ಬಣ್ಣ ಹಚ್ಚಿ ನಾಟಕ ಮಾಡಿದ್ದುಂಟು. ಒಳ್ಳೆಯ ಗಾಯಕರೂ ಆಗಿದ್ದ ಗಜಾನನ ಹೆಗಡೆ, ಬೇಂದ್ರೆಯವರ ಶ್ರಾವಣ ಬಂತು ನಾಡಿಗೆ ಹಾಡನ್ನು ತಮ್ಮದೇಯಾದ ವಿಶಿಷ್ಟ ರೀತಿಯಲ್ಲಿ ಹಾಡುತ್ತಿದ್ದರು. ಮಾತ್ರವಲ್ಲ, ಅವರು ಅಲ್ಲಲ್ಲಿ ಸಂಗೀತ ಕಚೇರಿ ನಡೆಸಿದ್ದೂ ಉಂಟು. ಯೂ ಟ್ಯೂಬ್ ಚಾನೆಲ್ ಗೂ ಅಲ್ಬಮ್ ಮಾಡಿದ್ದರು.

ಇಂತಹ ಗಜಾನನ ಹೆಗಡೆ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಮಾಧ್ಯಮ ಸ್ನೇಹಿತರಿಗೆ ಶಾಕ್ ಉಂಟಾಗಿದೆ. ಮೊದಲಿಗೆ ಯಾರೂ ನಂಬದಾಗಿದ್ದರು. ಆಂಕರ್ಸ್ ಗ್ರೂಪ್ ನಲ್ಲಿ ಆ ಬಗ್ಗೆ ಚರ್ಚೆ ನಡೆದಿತ್ತು. ಆಸ್ಪತ್ರೆಯಲ್ಲಿ ಶವವಾಗಿ ಮಲಗಿದ್ದ ಗಜಾನನ ಹೆಗಡೆಯವರ ಭಾವಚಿತ್ರವನ್ನು ನೋಡಿ ಎಲ್ಲರೂ ದಿಗ್ಬ್ರಮೆಗೊಳಗಾದರು. ಈ ವೇಳೆ ಬಹುತೇಕ ಎಲ್ಲ ಸುದ್ದಿ ನಿರೂಪಕರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಇಂಥ ಗಜಾನನ ಹೆಗಡೆಯವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಗಜಾನನ ಹೆಗಡೆಯವರ ಸ್ವಂತ ಊರಿಗೆ ತೆಗೆದುಕೊಂಡು ಹೋಗಲಾಗುತ್ತೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಸದ್ಯ ಬೆಂಗಳೂರಿನ ಜೆಪಿ ನಗರದಲ್ಲಿರೋ ಹೆಗಡೆ ನಿವಾಸದಲ್ಲಿ ಯಾರೂ ಇಲ್ಲದೇ ನೀರವ ಮೌನ ಆವರಿಸಿದೆ. ಏನೇ ಆಗಲಿ ಗಜಾನನ ಹೆಗಡೆಯವರಿಗೆ ಶಾಂತಿ ದೊರಕಲಿ ಎಂದು ಹಾರೈಸೋಣ.

*********

Leave a Reply

Back To Top