ಅವ್ಯಕ್ತಳ ಅಂಗಳದಿಂದ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ

ಎಲ್ಲಾ ಮಕ್ಕಳ ರಿಸಲ್ಟ್ ಗಳು ಒಂದಾದಮೇಲೊಂದು ಮೆಸೇಜ್ ಗಳಾಗಿ ನನ್ನ ಬಳಿ ಬರುತ್ತಿವೆ, ಕೆಲವು ಮೆಸೇಜ್ ಗಳು, ಕೆಲವು ಮುಖಗಳು, ಪ್ರಸನ್ನತೆಯ ಅಲೆಗಳು, ಸ್ವೀಟಿನ ಡಬ್ಬಗಳು, ಕೃತಜ್ಞತೆಗಳು,ಕಥೆಗಳು ಒಂದಾದಮೇಲೊಂದು ಸಿಹಿ ಸುದ್ದಿಗಳು ಎಳೆ ಎಳೆಯಾಗಿ ಹರಿದುಬಂದರೆ ನನಗೆ ಮಾತ್ರ ಮನಸ್ಸಿನಲ್ಲೊಂದು ಆತಂಕ! ಮುಖದಲ್ಲಿ ನಗುವಿದ್ದರೂ ಬಾಯಿ ತುಂಬಾ ಆಶೀರ್ವಾದಗಳಿದ್ದರೂ ಅವಳ ರಿಸಲ್ಟ್ ಏನಾಯ್ತು?! ಇನ್ನೂ ವಿಷಯ ಬರಲಿಲ್ಲವಲ್ಲ ಎಂಬುದು ಮಾತ್ರ ಮನಸಲ್ಲಿ ಬೇರೂರಿತ್ತು. ಬರುವ ಮಕ್ಕಳನ್ನೆಲ್ಲಾ ಕೇಳುವುದು “ಅವಳ ರಿಸಲ್ಟ್ ಏನಾಯ್ತು?” “ಯಾರಿಗಾದರೂ ಸಿಕ್ಕಿ ದ್ಲಾ.?”. “ಅವಳ ರಿಜಿಸ್ಟರ್ ನಂಬರ್ ಏನು……?”  ಮಧ್ಯಾಹ್ನದೊತ್ತಿಗೆ ಅವಳಮ್ಮ ಫೋನ್ ಮಾಡಿದರು,

ಕೆಲವೊಂದರಲ್ಲಿ ಬಹಳ ಒಳ್ಳೆ ಅಂಕ ಬಂದಿದೆ ಕನ್ನಡ ಮಾತ್ರ ಉಳಿದಿದೆ, ಧನ್ಯವಾದಗಳ ಒಂದು ಅಲೆ. ನನ್ನ ಮನದಲ್ಲಿ ಎಲ್ಲಿಲ್ಲದ ಸಂತೋಷ ಸದ್ಯ ಈ ಮಗು ಪಾರಾಗಿಬಿಟ್ಟಳು. ನಾನು ಮನೆಯೊಳಗೆ ಹೋಗಿ ಎರಡು ದ್ರಾಕ್ಷಿಗಳನ್ನು ಬಾಯಿಗೆ ಹಾಕಿ ಕೃಷ್ಣನಿಗೆ ಒಂದು ನಮಸ್ಕಾರ ಹಾಕಿ ಅಲ್ಲಿದ್ದ ಮಕ್ಕಳಿಗೆ ಪಾಠ ಮಾಡುವ ಕೆಲಸ ಮುಂದುವರಿಸಿದೆ.

ಅವಳು ನನ್ನ ಬಳಿ ಬಂದ ದಿನ ಇನ್ನೂ ಹಸನಾಗಿ ಮನದಲ್ಲಿ ನನಗಿದೆ. 10ನೇ ತರಗತಿಗೆ ನನ್ನ ಬಳಿ ಕಲಿಯಲು ಬಂದವಳು ಒಂದೇ ಒಂದು ಸಾಲು ಓದಲೂ ಬಹಳ ಕಷ್ಟ.. ಅತೀ ಮುಗ್ದೆ. ತುಂಬಾ ಭಯ. ಮುಖದಲ್ಲಿ ನಗು ಇದ್ದರೂ ಕಣ್ಣಲ್ಲಿ ಏನೋ ಭಯ. ಮಾತೇ ಆಡುತ್ತಿರಲಿಲ್ಲ. ‘ಹೃದಯವನ್ನೇ ಯಾರೋ  ಹಿಸುಕಿ ಬಿಟ್ಟಿದ್ದಾರೆ’ ಅನ್ನಿಸಿಬಿಟ್ಟಿತ್ತು.. ಓದಲು ಬರುವುದಿಲ್ಲ, ಬರೆಯುವ ಶೈಲಿ ಅರ್ಥವೇ ಆಗುತ್ತಿಲ್ಲ, ಹೆದರಿಕೆ ಮಿತಿಮೀರಿದ್ದು…. ಏನು ಮಾಡಲಿ ಈ ಹುಡುಗಿಗೆ ಎಂದು ಆಲೋಚಿಸುತ್ತಿದ್ದೆ.


ದಿನಾ ನನ್ನ ಬಳಿ ಕೂಡಿಸಿಕೊಂಡು ಅವಳಲ್ಲಿ ಏನು ಕತೆಗಳಿವೆ ಎಂದು ವಿಶ್ಲೇಷಣೆ ಮಾಡುವುದು ನನ್ನ ಕೆಲಸವಾಗಿತ್ತು. ನನಗೆ ಸಹಕಾರ ಕೊಡಲು ಇನ್ನೂ ಮೂರು ಅದೇ ಮನೋಭಾವನೆ ಇರುವ ಹುಡುಗಿಯರು ನನ್ನ  ಬಳಿ ಬರುತ್ತಿದ್ದರು ಅವರ ಸಹಾಯದಿಂದ ಹುಡುಗಿಯ ಎಲ್ಲಾ ಲಕ್ಷಣಗಳನ್ನು ಪದರಪದರವಾಗಿ ಬಿಚ್ಚತೊಡಗಿದೆ. ಆಶ್ಚರ್ಯವೆಂದರೆ ಓದಲೇ ಬರದ ಹುಡುಗಿ ಅದು ಹೇಗೆ ಯಾವ ಮೆಂಟಲ್ ಎಬಿಲಿಟಿ ಪುಸ್ತಕದಲ್ಲಿಯೂ ವಿವರಣೆ ಇಲ್ಲದೆ ಹಾಗೆ ಬರೆಯುತ್ತಿದ್ದಾಳೆ. ನನಗೆ ಒಂದು ಕುತೂಹಲ… ಓದಲು ಬರದವಳು ಹೇಗೆ ಬರೆಯುತ್ತಾಳೆ?! 

ಕೇಳಿದರೆ ಹೇಳುತ್ತಾಳೆ…. “ನನಗೆ ಬೇರೆ ಶಿಕ್ಷಕಿಯೊಬ್ಬಳು ಬೆತ್ತದಲ್ಲಿ ಬಿಡುತ್ತಿದ್ದಳು, ನನ್ನನ್ನು ಗಮನಿಸುತ್ತಲೇ ಇರಲಿಲ್ಲ…ಜಗತ್ತಿನ ಭಯಕ್ಕೆ ನಾನು ಹೇಗೋ ಬರೆಯುವುದನ್ನು ಕಲಿತೆ” ಎನ್ನುತ್ತಾಳೆ. ತನ್ನ ಮೊದಲ ಕ್ಲಾಸಿನಿಂದ ಹತ್ತನೇ ಕ್ಲಾಸಿನವರೆಗೆ ಒಂದು ಹುಡುಗಿಗೆ …..ನಿನಗೆ ಓದಲು ಬರೆಯಲು ಬರುವುದಿಲ್ಲ ಆಗೋದಿಲ್ಲ ಎಂದರೆ ಯಾರಿಗೂ ಹೇಳಿಕೊಳ್ಳಲಾಗದ ಎಷ್ಟು ಕಸಿವಿಸಿ ಪಟ್ಟಿರಬಹುದು.


ನಮ್ಮ ಶೈಕ್ಷಣಿಕ ಸಮಾಜದಲ್ಲಿ ಮಕ್ಕಳು ಓದುತ್ತಿಲ್ಲ, ಬರೆಯುತ್ತಿಲ್ಲ, ಅಂಕಗಳಿಸುತ್ತಿಲ್ಲ, ಪಾಠ ಕೇಳುತ್ತಿಲ್ಲ, ಓದುತ್ತಿಲ್ಲ, ಬರೆಯುತ್ತಿಲ್ಲ, ಇತ್ಯಾದಿ, ಇತ್ಯಾದಿ…… ಕಾರಣಗಳನ್ನು ಕೊಡುವವರೇ ಹೊರತು ಕಾರಣದ ಮೂಲ ಸಮಸ್ಯೆಯನ್ನು ಹುಡುಕುವವರು ಬಹಳ ವಿರಳ . ತಂದೆ-ತಾಯಿಯೂ ಅಸಹಾಯಕರಂತೆ ಒದ್ದಾಡುವರು. ಇಲ್ಲವಾದರೆ ಮಕ್ಕಳನ್ನು ಶಿಕ್ಷಿಸುವರು……. 

ಈ ಹುಡುಗಿಗೆ ಇದ್ದ ಸಮಸ್ಯೆ ‘ಅಕ್ಷರ ಜ್ಞಾನವೇ ಇಲ್ಲ’. ಅಕ್ಷರಗಳನ್ನು ಚಿತ್ರಗಳಂತೆ ಜೋಡಿಸಿ ಜೋಡಿಸಿ ಬರೆಯುತ್ತಿದ್ದಳು ಅಕ್ಷರ ಜ್ಞಾನವಿಲ್ಲದವರು ಚಿತ್ರಗಳಂತೆ ಜೋಡಿಸಿ ಅಂಕಗಳನ್ನು ಹೇಗೆ ತೆಗೆಯಬಲ್ಲರು…..ಬರುತ್ತಿದ್ದದ್ದು ಮೂರು-ನಾಲ್ಕು ಅಂಕ. ಆದರೂ ನನಗೆ ಅದು ಬಹಳ ಹೆಮ್ಮೆಯ ವಿಷಯ. ಅಕ್ಷರ ಜ್ಞಾನವಿಲ್ಲದೆ ಅಂಕ ಪಡೆದವಳು, ಅಕ್ಷರಗಳು ಬಂದಮೇಲೆ ಅಕ್ಷರಗಳನ್ನು ಜೋಡಿಸಿ ಪದಗಳನ್ನು ಜೋಡಿಸಿ ಸ್ವಚ್ಛವಾಗಿ ವಾಕ್ಯ ಮಾಡಲಿಕ್ಕೆ ಕಲಿತರೆ ಅವಳು ಇನ್ನಷ್ಟು ಒಳ್ಳೆಯ ಅಂಕ ಪಡೆಯಬಹುದು……

ಒಳ್ಳೆ ಚಿತ್ರಗಾರಳು ಹಾಗಾಗಿ ಬದುಕುಳಿದಳು, ಕೂಡುವುದು- ಕಳೆಯುವುದು- ಗುಣಿಸುವುದು- ಬಾಗಿಸೋದು, ಅದೆಲ್ಲ ಆರಾಮಾಗಿ ಮಾಡ್ತಿದ್ಲು. ಹಾಗಾಗಿ, ಈ ಜನಗಳ ಮಧ್ಯದಲ್ಲಿ ಹೇಗೋ ಒಂದು ಹಂತದವರೆಗೆ ಜಸ್ಟ್ ಪಾಸ್ ಆಗಿದ್ಳು.ನನ್ನ ಮುಂದೆ ಒಂದಲ್ಲ ಹಲವಾರು ಚಾಲೆಂಜ್ ಗಳು…. ಅವಳಲ್ಲಿದ್ದ ಭಯ ಹೋಗಿಸಬೇಕು, ಅಷ್ಟೇ ಅಲ್ಲ ಹತ್ತಾರು ಜನರ ಎದುರು ಧೈರ್ಯವಾಗಿ ಸ್ಪಂದಿಸುವ ವ್ಯಕ್ತಿತ್ವ ರೂಪಿಸಬೇಕು, ಅವಳು ಸರಿಯಾದ ರೀತಿಯಲ್ಲಿ ಓದುವುದು ಬರೆಯುವುದು ಕಲಿಯಬೇಕು, ಮುಂದಿನ ಭವಿಷ್ಯಕ್ಕೆ ಒಂದು ದಾರಿ ಮಾಡಬೇಕು, ಅವಳ ನಗುವಿನ ಹಿಂದೆ ಇದ್ದ ನೋವುಗಳನ್ನು ಶಮನ ಮಾಡಬೇಕು

.
 “ಮನಸ್ಸು ಮೆದುಳಿನ ಸರಿಯಾದ ಸ್ಪಂದನ ವಿದ್ದರೆ ಸಮಸ್ಯೆಗಳ ಅರಿವು ಅದರ ಶಮನಕ್ಕೆ ನಾಂದಿ ಯಾಗುವುದು.”

**********


Leave a Reply

Back To Top