ಅವ್ಯಕ್ತಳ ಅಂಗಳದಿಂದ

ದೌರ್ಬಲ್ಯ-ಸಾಮರ್ಥ್ಯ -2

ಅವ್ಯಕ್ತ

ನನ್ನ ಹಿಂದಿನ ಕಥೆಯಲ್ಲಿ ಹೇಳಿದ ರೀತಿ ನಮ್ಮ ದೃಷ್ಟಿಕೋನ ದಲ್ಲಿ ಬದಲಾವಣೆಯಾದಂತೆ ನಮ್ಮ ದೌರ್ಬಲ್ಯಗಳು ನಮ್ಮ ಸಾಮರ್ಥ್ಯಗಳಾಗಿ ಬದಲಾಗುತ್ತವೆ….. ಇದಕ್ಕೆ ಅಂಟಿಕೊಂಡಂತೆ ಇನ್ನೊಂದು ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನಿಸೋಣ…


ಸಾಮಾನ್ಯವಾಗಿ ಮಕ್ಕಳು ಅಥವಾ ಕೆಲವು ದೊಡ್ಡವರು ತಮಗೆಲ್ಲ ತಿಳಿದಿದೆ ಎಂದು ಪ್ರತಿಯೊಂದು ಘಟನೆಯನ್ನು ಪ್ರತಿಯೊಬ್ಬರನ್ನು ಸರಿ-ತಪ್ಪುಗಳಲ್ಲಿ, ಒಳ್ಳೆಯದು-ಕೆಟ್ಟದ್ದು ಗಳಲ್ಲಿ ತೂಗಿ ತಮ್ಮ ಹಳೆಯ ಅನುಭವಗಳ ಮೇರೆಗೆ ಅವರದೇ ಆದ ಒಂದು ದೃಷ್ಟಿಕೋನವನ್ನು ಮಾಡಿಕೊಂಡು ಬಿಡುತ್ತಾರೆ.. ಅವರಿಗೆ ಅದೇ ಸರಿ…ಈ ನಿಟ್ಟಿನಲ್ಲಿ ನನ್ನ ಮಕ್ಕಳಲ್ಲಿಯೂ ಕೂಡ ಇದು ಕಂಡುಬಂತು…


ಆ ದಿನ ನಾನು ಹೇಳಿ ಕೊಟ್ಟಿದ್ದೇನೋ ಹೌದು ನಮ್ಮ ಗುಣಗಳನ್ನು ನಾವು ತಿಳಿದುಕೊಂಡರೆ, ಅದು ನಮ್ಮ ಸಾಮರ್ಥ್ಯವಾಗಿ ಬಿಡುತ್ತವೆ…. ಆದರೆ ಎಲ್ಲೋ ಇದು ಅರ್ಧ ಸತ್ಯವಾಗಿತ್ತು. ಅದನ್ನು ಸಮಾಜದ ದೃಷ್ಟಿಯಿಂದಲೂ ಹೇಳಿಕೊಡಬೇಕಾದ ಅಗತ್ಯತೆ ಇತ್ತು…


ಇದಕ್ಕೆ ಪೂರಕವಾಗಿ ಒಂದು ಹುಡುಗಿ ನನ್ನ ಬಳಿಗೆ ಬಂತು ‘ಮಿಸ್ ಮಿಸ್ಆವತ್ ಹೇಳಿದ್ದೇನೋ ನಿಜ! ನಾವು ಹೇಗಿದ್ದೇವೆ ಅದನ್ನು ಒಪ್ಪಿಕೊಂಡರೆ ನಮಗೆ ನೋವಾಗುವುದಿಲ್ಲ. ಆದರೂ ಏಕೆ ಸಮಾಜದಲ್ಲಿ ಕೆಲವೊಂದನ್ನು ಎತ್ತಿಹಿಡಿಯುತ್ತಾರೆ ?…’ ಅವಳ ಮಾತು ಕೇಳಿ ನನಗೆ ಅಯ್ಯೋ ಎನಿಸಿತು, ಹೌದಲ್ವಾ ಇದರಲ್ಲಿ ಸಮಾಜದ ಜವಾಬ್ದಾರಿಯನ್ನು ತಿಳಿಸಿ ಹೇಳೋಣ..


 ಇವತ್ತಿನ ಕ್ರಿಯೆ ನನ್ನದು ಸ್ವಲ್ಪ ವಿಚಿತ್ರವಾಗಿತ್ತು, ಪ್ರತಿಯೊಂದು ಮಗುವಿನ ದೌರ್ಬಲ್ಯವು ನನಗೆ ಗೊತ್ತಿತ್ತು.. ಬೇಕಂತಲೇ ಅದನ್ನು ಎತ್ತಿ ಹಿಡಿದು ಹೀಯಾಳಿಸಿ ಬಿಟ್ಟೆ.. “ಏನೇ ಡುಮ್ಮಿ ಕೊಟ್ಟ ಕೆಲಸ ಮಾಡಿದ್ಯಾ, ಇಲ್ಲ ಬರೀ ತಿಳ್ಕೊಂಡೆ ಕೂತಿದ್ಯಾ”……“ಕೋಳಿ ಅಳುಬುರುಕಿ ಕೆಲಸ ಮುಗಿಸು ಆಮೇಲೆ ಕಾವೇರಿಯ ಹೊಳೆ ತುಂಬಿಸುವಂತೆ”…. “ಏ ಕುಳ್ಳ , ನೋಡಲಿಕ್ಕೆ ಮಾತ್ರ ಕುಳ್ಳ ಬರೀ ಕುಚೇಷ್ಟೆ ಪ್ರತಿಷ್ಠೆ ನಿನ್ನದು ಸುಮ್ಮನೆ ಕೂತು ನಿನ್ನ ಕೆಲಸ ಮಾಡು ಹುಂಬ”…. ಐದೇ ನಿಮಿಷದಲ್ಲಿ ಮಕ್ಕಳ ಮುಖಗಳೆಲ್ಲ ಚಪ್ಪೆಯಾಗಿ ಹೋದವು… ನಾನು ಮನಸ್ಸಿನಲ್ಲಿ ನಗಾಡಿ ಕೊಳ್ಳುತ್ತಾ….ಆ ದಿನದ ಕೊನೆ ಬರುವವರೆಗೂ ಅವರುಗಳನ್ನು ಗೊಂದಲದಲ್ಲಿಯೇ ಬಿಟ್ಟುಬಿಟ್ಟೆ…. ನನಗೆ ಗೊತ್ತು ಸುಲಭವಾಗಿ ಬಾಯಲ್ಲಿ ಹೇಳಿದ ನೀತಿ ಮಕ್ಕಳ ತಲೆಗೆ ಹತ್ತುವುದಿಲ್ಲ ಕ್ರಿಯೆಯಲ್ಲಿ ಮಾಡಿತೋರಿಸಿದರೆ ಮಾತ್ರ ಹತ್ತರಲ್ಲಿ ಐದು ಜನಕ್ಕಾದರೂ ಉಳಿದುಕೊಳ್ಳುತ್ತದೆ….
ದಿನದ ಕೊನೆಯಲ್ಲಿ ಮಕ್ಕಳಲ್ಲಿ ಕೇಳಿದೆ, ಹೇಗಿತ್ತು ಇವತ್ತು ನನ್ನ ಮಾತಿನ ಶೈಲಿ ವೆರಿ ಸ್ಟ್ರಾಂಗ್ ಅಲ್ವಾ….. ಎಲ್ಲರೂ ಸಪ್ಪೆಯಾಗಿ ಸ್ವಲ್ಪ ಹೊತ್ತು ಕೂತರು ನಂತರ ಅದರಲ್ಲಿ ಒಬ್ಬಳು ‘ಮಿಸ್ ನೀವ್ ಇವತ್ತು ಹೀಗೆ ಮಾತನಾಡಬಾರದಿತ್ತು. ಯಾಕೆ ಅವಳನ್ನು ಹೀಯಾಳಿಸಿದಿರಿ, ಅವಳಿಗೆ ನೋವಾಗುವುದಿಲ್ಲ ವೇ?’ ಎಂದು ಕೇಳಿಯೇ ಬಿಟ್ಟಳು… ನನಗೂ ಬೇಕಿದ್ದದು ಅವೇ ತಾನೇ….


ನಾನು ಹೇಳಿದೆ ‘ಹೌದು ಬೇಕಂತಲೇ ಹೀಗೆ ಮಾಡಿದೆ.ಕೆಲವು ದಿನಗಳ ಕೆಳಗೆ ನಮ್ಮ ದೌರ್ಬಲ್ಯವನ್ನು ನಾವು ಸಾಮರ್ಥ್ಯ ವಾಗಿ ಹೇಗೆ ಉಳಿಯಬಹುದು ಎಂದು ತಿಳಿಸಿಕೊಟ್ಟಿದೆ, ಇವತ್ತು ಬೇರೆಯವರ ದೌರ್ಬಲ್ಯಗಳ ಕಡೆಗೆ ನಮ್ಮ ದೃಷ್ಟಿಕೋನ ಹೇಗಿರಬೇಕು ಹಾಗೂ ನಮ್ಮ ಜವಾಬ್ದಾರಿ ಏನು ಹೇಳಿ ನೋಡೋಣ??’ಎಲ್ಲರೂ ಯೋಚಿಸತೊಡಗಿದರು, ನನಗೆ ಗೊತ್ತಿತ್ತು ಅಷ್ಟು ಸುಲಭವಾಗಿ ಇವರು ಗ್ರಹಿಸಿರಲಿಕ್ಕಿಲ್ಲಾ… ಇನ್ನೊಬ್ಬರಿಗೆ ದೈಹಿಕವಾಗಿ ನಾವು ಹೊಡೆಯುವುದು ಜಿಗುಟುಗಳು ಎಷ್ಟು ಸರಿಯಲ್ಲವೋ ಹಾಗೆ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹದನ್ನು ಮಾತನಾಡುವುದು ತಪ್ಪು, ಇದರಲ್ಲಿ ಅವರ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದಾದರೆ ಎಂದಿಗೂ ಹಾಗೆ ಮಾಡಬಾರದು…’ಆತ್ಮೀಯ ಸ್ನೇಹಿತರು ಹೀಗೆ ಅಡ್ಡ ಹೆಸರು ಇಟ್ಟು ಕರೆಯಬಹುದು ಅಲ್ಲವೇ’ ಎಂದು ಇನ್ನೊಬ್ಬ ಕೇಳಿದ..


ನಮಗೆ ಆತ್ಮೀಯ ವಾದವರು ನಮ್ಮ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಮಾಜದ ಎದುರು ವರ್ತಿಸುವುದಿಲ್ಲ, ಹಾಗಾದರೆ ಮಾತ್ರ ಅವರು ನಮ್ಮ ನಿಜವಾದ ಆತ್ಮೀಯರು, ನಾವು ನಾವು ಇರುವಾಗ ಎಷ್ಟು ಸಲಿಗೆಯ ಮಾತನಾಡಿದರು, ಮುಕ್ತವಾಗಿ ತರಲೆ ಹೊಡೆದರೂ ಹತ್ತಾರು ಜನಗಳ ಎದುರು ಅವರ ಗೌರವ ಪ್ರೀತಿ ಎಷ್ಟು ಮುಖ್ಯವೋ ಅಷ್ಟೇ ಆತ್ಮೀಯರ ಗೌರವ ಪ್ರೀತಿಯನ್ನು ಕಾಪಾಡುತ್ತಾರೆ…ಇಲ್ಲವಾದರೆ ಅವರು ನಿಮ್ಮ ಪರಮಾಪ್ತರು ಅಲ್ಲವೇ ಅಲ್ಲ… ಇದು ಮಾತ್ರ ನಿಜವಾದ ಸಂಬಂಧ ವಾಗಿರುತ್ತದೆ, ನೆನಪಿನಲ್ಲಿಡಿ ಮಕ್ಕಳೇ ಎಂದೆ.

ಮಾಜದ ಒಳಿತಿಗೆ, ಅದರ ಆರೋಗ್ಯಕರ ಬೆಳವಣಿಗೆಗೆ ಪ್ರತಿಯೊಬ್ಬನಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು.

**********************************


2 thoughts on “ಅವ್ಯಕ್ತಳ ಅಂಗಳದಿಂದ

Leave a Reply

Back To Top