ದೌರ್ಬಲ್ಯದ ಸಾಮರ್ಥ್ಯ

ಅವ್ಯಕ್ತ

ದೌರ್ಬಲ್ಯದ ಸಾಮರ್ಥ್ಯ
ಇವತ್ತಿನ ಕಥೆಯ ವಿಶೇಷವೇ ಹೆಚ್ಚಿನ ಮಕ್ಕಳಲ್ಲಿ ಕಂಡುಬರುವ ತಳಮಳ, ನೋವು-ನಲಿವುಗಳಿಗೆ ಕಾರಣವಾಗುವುದು.
ನಾನು ಗಮನಿಸಿದ ಹಾಗೆ ಈ ಸಮಸ್ಯೆ ಎಂಟನೇ ಕ್ಲಾಸಿನ ಪ್ರೌಢ ಮಕ್ಕಳಲ್ಲಿ ಶುರುವಾದರೆ ಎಲ್ಲಿಯವರೆಗೆ ಬೇಕಿದ್ದರೂ ಹೋಗಬಹುದು.
ಇವತ್ತಿನ ದಿನ ನಾನೊಂದು ಸಹಜವಾದ ಸಮಸ್ಯೆಯನ್ನು ತೆಗೆದುಕೊಂಡು ಮಕ್ಕಳಲ್ಲಿ ಮಾತನಾಡುವ ಎಂದು ಶುರುಮಾಡಿದೆ. ಅಲ್ಲಿ ಕ್ಲಾಸಲ್ಲಿದ್ದ ಎಲ್ಲ ಮಕ್ಕಳಿಗೂ ಒಂದು ಅಸೈನ್ಮೆಂಟ್ ಕೊಟ್ಟೆ.. ಎಲ್ಲರೂ ಒಂದು ಚೀಟಿ ತೆಗೆದುಕೊಂಡು ನಿಮಗೆ ಸಹಜವಾಗಿ ನೋವುಂಟುಮಾಡುವ ಬೇರೆಯವರ ಟೀಕೆ ಟಿಪ್ಪಣಿಗಳನ್ನು 4 ಪಾಯಿಂಟ್ಗಳಲ್ಲಿ ಬರೆಯಿರಿ ಅಂದೆ. ಮೊದಲು ಎಲ್ಲರೂ ಹಿಂದು-ಮುಂದು ನೋಡಿದರು, ಸ್ವಲ್ಪ ನಾಟಕದ ನಗೆ ಹೊನಲು ಹರಿಸಿದರು…. ನಾನು ಹೇಳಿದೆ ‘ಇದನ್ನು ಬರೆದರೆ ನಿಮಗೆ ಒಂದು ಹೊಸ ವಿದ್ಯೆ ಕಲಿಸುತ್ತೇನೆ ನಿಮ್ಮ ದೌರ್ಬಲ್ಯವನ್ನು ನಿಮ್ಮಸಾಮರ್ಥ್ಯವನ್ನಾಗಿ ಮಾಡುತ್ತೇನೆ. ಸ್ವಲ್ಪ ಪ್ರಯತ್ನ ಮಾಡಿ…’ನಂತರ ಒಂದೊಂದೇ ಮಗು ಬರಿಲಿಕ್ಕೆ ಶುರು ಮಾಡ್ತು…ಬರದ್ರು 3 4 5 ಇತರ ಹಲವು ವಿಷಯ, ಹಲವು ನೋವುಗಳ ಪಟ್ಟಿ ರೆಡಿಯಾಯಿತು.
ಒಬ್ಬೊಬ್ಬರಾಗಿಯೇ ಓದಿ ಈಗ ಎಂದೆ.. ‘ಮಿಸ್ ನನಗೆ ನೀನು ಕಪ್ಪಗಿದ್ದೀಯ ನಿನ್ನ ಸ್ನೇಹ ಬೇಡ ಎಂದಿದ್ದಾರೆ. ಮನಸ್ಸಿಗೆ ತುಂಬಾ ನೋವಾಗುತ್ತದೆ’ ಎಂದು ಅವಳ ಕಥೆ ಹೇಳಿ ಮರುಗಿದಳು. ಇನ್ನೊಬ್ಬ ಎದ್ದು ‘ಮಿಸ್ ನೀನು ದಪ್ಪಗಿದ್ದೀಯಾ, ನಮ್ಮ ಜೊತೆ ಸರಿಹೊಂದುವುದಿಲ್ಲ, ಬೇರೆ ಕಡೆ ಇರು ಎಂದು ನನ್ನನ್ನು ಎಲ್ಲರೂ ದೂರ ಮಾಡುತ್ತಾರೆ ಮನಸ್ಸಿಗೆ ನೋವಾಗುತ್ತದೆ’ ಎಂದು ಅವನ ಕಥೆ ಹೇಳಿದ…ಮತ್ತೊಬ್ಬಳು ಎದ್ದುನಿಂತು ‘ಮಿಸ್ ನಾನು ಕುಳ್ಳಗಿರುವುದರಿಂದ ನನ್ನನ್ನು ಎಲ್ಲರೂ ಕುಳ್ಳಿ ಕುಳ್ಳಿ ಎಂದು ಕರೆಯುತ್ತಾರೆ. ನನಗೆ ತುಂಬಾ ಕಿರಿಕಿರಿಯಾಗುತ್ತದೆ’ ಅಂತ ಅವಳ ಕಥೆ…ಹೀಗೆ ಒಬ್ಬರಾದ ಮೇಲೊಬ್ಬರು ಕುಳ್ಳಗಿರುವುದು, ಹೆಚ್ಚು ಉದ್ದ ಇರೋದು, ಕರ್ರಗೆ ಇರುವುದು, ತುಂಬಾನೇ ಬೆಳ್ಳಗಿರುವುದು, ದಪ್ಪಗಿರುವುದು, ಸಣ್ಣಕ್ ಇರುವುದು, ಉಗ್ಗುವುದು, ಹುಬ್ಬುಗಳು ಕೂಡಿರುವುದು, ಇತ್ಯಾದಿಗಳು…
ಎಲ್ಲ ಮಕ್ಕಳಲ್ಲೂ ಒಂದು ಅಥವಾ ಇನ್ನೊಂದು ಮನಸ್ಸಿಗೆ ಕೂಡಿದ ಸಮಸ್ಯೆಗಳಿವೆ ಎಂದು ನನಗೆ ಗೊತ್ತಿತ್ತು ಅದು ಇವತ್ತು ಸ್ವಲ್ಪ ಮಟ್ಟಿಗೆ ಹೊರಗೆ ಬಂದಂತಾಯಿತು,.. ನಾನೇ ಹೇಳಿದೆ ‘ಎಲ್ಲರೂ ಈಗ ಐದು ನಿಮಿಷ ಸುಮ್ಮನೆ ಕೂತ್ಕೊಳ್ಳಿ. ಮತ್ತೆ ನಿಮ್ಮ ನಿಮ್ಮ ಚೀಟಿಯಲ್ಲಿರುವ ಘಟನೆಗಳನ್ನು ತಾಳ್ಮೆಯಿಂದ ಓದಿ. ಅದರಲ್ಲಿ ಸತ್ಯ ಯಾವುದು ನೋಡಿ ಹೇಳಿ. ನನ್ನನ್ನು ಕೇಳಿದರೆ,ನಾನು ಸಣ್ಣವನಿದ್ದಾಗ, ನನ್ನನ್ನು ಹೆಚ್ಚಿನ ಮಕ್ಕಳು ಶಾಲೆಯಲ್ಲಿ ಕುಳ್ಳಿ ಕುಳ್ಳಿ ಎನ್ನುತ್ತಿದ್ದರು, ಆದರೆ ಸತ್ಯವೆಂದರೆ ನಾನು ಹೆಚ್ಚಿನ ಮಕ್ಕಳಿಗೆ ಹೋಲಿಸಿದರೆ ಕುಳ್ಳಗೆ ಇದ್ದೇನೆ ಎಂದು ನಾನು ತಿಳಿದಿದ್ದೆ. ಹಾಗಾಗಿ ನನ್ನ ಪ್ರಕಾರ ಕುಳ್ಳಿ ಎಂದರೆ ಅದು ನನ್ನಲ್ಲಿರುವ ಒಂದು ಸಾಮರ್ಥ್ಯವೇ ಹೊರತು ದೌರ್ಬಲ್ಯವಲ್ಲ, ಮತ್ತೆ ಯಾಕೆ ಬೇಸರ ಮಾಡಿಕೊಳ್ಳಬೇಕು’ ಎಂದು ಹೇಳಿದೆ.
‘ನೀವು ನಾನು ಹೇಳಿದ್ದನ್ನು ಮಾಡಿ’ಎಂದು ಹೇಳಿದೆ. 10 ನಿಮಿಷ ಬಿಟ್ಟು ಕೇಳಿದೆ…. ‘ನಿಮಗೆ ಆ ಪಟ್ಟಿಯಲ್ಲಿ ಇರುವ ನೋವಾಗುವ ವಿಷಯಗಳ ಗುಣವು ನಿಮ್ಮಲ್ಲಿವೆಯೆ????’
ಅನಿಸಿಕೆಗಳು ಮಿಶ್ರಿತವಾಗಿ ಬಂದದ್ದು ನೋಡಿ ಸಂತೋಷವಾಯಿತು. ಸತ್ಯವನ್ನು ಸತ್ಯದಂತೆ ತೆಗೆದುಕೊಂಡವರು ಕೆಲವರು, ಹೇಳಿದ ಮಾತಲ್ಲಿ ಸಾಧ್ಯತೆಗಳನ್ನು ವಿಶ್ಲೇಷಿಸಿದವರು ಕೆಲವರು. ‘ಹೌದು ನಿಜ! ನಾನು ನಿಜವಾಗಲೂ ದಪ್ಪಗಿದ್ದೇನೆ,ಕುಳ್ಳಗಿದ್ದೇನೆ, ಕರ್ರಗಿದ್ದೇನೆ,’ ಇತ್ಯಾದಿ,ಇತ್ಯಾದಿ,ಹೇಳುವ ಗುಂಪೊಂದಾದರೆ;
‘ಇಲ್ಲ,ಇಲ್ಲ ನನ್ನ ಹುಬ್ಬುಗಳೇನು ಅಷ್ಟು ದಪ್ಪನಾಗಿಲ್ಲ, ಅಷ್ಟು ಕೆಟ್ಟದಾಗಿಲ್ಲ, ಸ್ವಲ್ಪ ಕೂಡಿದೆ ಅಷ್ಟೇ….’ಇಂತಹ ಅಭಿಪ್ರಾಯವು ಹಳ್ಳಿ ಗುಂಪು ಇನ್ನೊಂದು……
ನಂತರ ನಾನು ಹೇಳಿದೆ ‘ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ನಿಜ ಗುಣಗಳನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಒಪ್ಪಿಕೊಂಡು ಬಿಟ್ಟರೆ ಅದು ಎಂದಿಗೂ ನಮ್ಮ ದೌರ್ಬಲ್ಯವಾಗಿ ಉಳಿಯುವುದಿಲ್ಲ. ಹಾಗಾಗಿ ನೀವೆಲ್ಲರೂ ಇನ್ಮೇಲೆ ಯಾರೇ ನಿಮ್ಮ ಬಗ್ಗೆ ಏನೇ ಹೇಳಿದರೂ ಮೊದಲು ಅದು ನೀವು ಅಹುದೇ ಎಂದು ಆಲೋಚಿಸಿ, ಹೌದಾದರೆ ಒಪ್ಪಿಕೊಂಡು ಬಿಡಿ, ಅಲ್ಲವಾದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ….’
ಮಕ್ಕಳಿಗೆ ಇನ್ನೂ ಸರಿಯಾಗಿ ಅರ್ಥ ಮಾಡಿಸಲು ಅಷ್ಟಾವಕ್ರ ಎಂಬ ಪಂಡಿತೋತ್ತಮನ ಕತೆಯನ್ನು ಮಕ್ಕಳಿಗೆ ಹೇಳಿದೆ. ಇದರಲ್ಲಿ ಇಡೀ ಸಭೆ ಅವನನ್ನು ನೋಡಿ ನಗುವಾಗ ಅಷ್ಟಾವಕ್ರ ಒಂದು ಮಾತನ್ನು ಹೇಳುತ್ತಾನೆ, “ ನಾನು ದೈಹಿಕವಾಗಿ ವಕ್ರವಾಗಿರಬಹುದು,ಆದರೆ ನೀವುಗಳು ಮಾನಸಿಕವಾಗಿ ವಕ್ರ ವಕ್ರವಾಗಿದ್ದೀರ”. ಕತೆ ಮುಗಿಯುವಷ್ಟರಲ್ಲಿ ಈ ವಿಷಯವು ಮಕ್ಕಳ ಮನಸ್ಸನ್ನು ಮುಟ್ಟಿತ್ತು.ಅದೇ ಒಂದು ನೆಮ್ಮದಿ.
ನಮ್ಮ ಸಮಾಜದಲ್ಲಿ ಮಕ್ಕಳ ನ್ಯೂನ್ಯತೆಗಳನ್ನು ಅವರ ಸಾಮರ್ಥ್ಯವನ್ನಾಗಿ ಮಾಡಲು ಯಾವುದೇ ಪುಸ್ತಕವಿಲ್ಲ, ಪರೀಕ್ಷೆಯಿಲ್ಲ,ಶಾಲೆಯೂ ಇಲ್ಲ.ಅಂಕಗಳು ಮಾತ್ರವಲ್ಲ,ಅವರ ವ್ಯಕ್ತಿತ್ವವೂ ವಿಕಸನವಾಗುವುದು ಮುಖ್ಯ.
“ನಮ್ಮ ಜೀವನದ ಅಂಕಪಟ್ಟಿಯನ್ನು ಅನುಭವಗಳಿಂದ ತುಂಬಿಸಿದರೆ, ಹೊಸ ವ್ಯಕ್ತಿತ್ವ ಹೊರಹೊಮ್ಮುವುದು ಖಂಡಿತ “
************