Category: ಅಂಕಣ

ಅಂಕಣ

ಕಬ್ಬಿಗರ ಅಬ್ಬಿ -8 ನಿಸರ್ಗಕ್ಕೂ ಬೇಕು ಸ್ವಾತಂತ್ರ್ಯ ಈ ನೆಲ, ಈ ಜಲ ಈ ಆಕಾಶಈ ಜೀವ ಈ ಭಾವ ಅನಂತಾವಕಾಶಈ ಕಲ್ಲು ಪರಮಾಣು ಒಳದೇವರ ಕಣ್ಣುಈ ಸ್ಥಾವರ ಈ ಜಂಗಮ ಪ್ರಾಣ ವಿಹಂಗಮಈ ವಾತ ನಿರ್ವಾತ ಆತ್ಮನೇ ಆತ್ಮೀಯಈ ಅಂಡ ಬ್ರಹ್ಮಾಂಡ ಉಸಿರಾಡುವ ಕಾಯ ಕಾವ್ಯದೊಳಗೆ ಜೀವರಸವಿದೆ.ರಸದ ಸೆಲೆಯಿದೆ.ಕುದಿಸಮಯವನ್ನೂ ತಣಿಸುವ ಪ್ರೀತಿಯಿದೆ.ಕಲ್ಲ ಮೊಟ್ಟೆಯನ್ನೂ ಕಾವು ಕೊಟ್ಟು ಮರಿ ಮಾಡುವ ಸೃಷ್ಟಿ ತಂತುವಿನ ತರಂಗವಿದೆ.ಕವಿಯ ಕಣ್ಣೊಳಗೆ ಮೂಡಿದ ಪ್ರತೀ ವಸ್ತುವಿನ ಬಿಂಬ ಜೀವಾತ್ಮವಾಗಿ ಕಾವ್ಯದೇಹ ತೊಟ್ಟು ಹೊರ ಬರುತ್ತೆ.ಸ್ಪಂದನೆ ಮತ್ತು ಪ್ರತಿಸ್ಪಂದನೆ ಕಲ್ಲಿನೊಳಗಿನ ಪರಮಾಣು ಕೂಡಾ ಮಾಡುತ್ತೆ.ನೋಟದ ವ್ಯಾಪ್ತಿಗೆ ಸಿಕ್ಕಿದ ಅಷ್ಟನ್ನೂ ಕವಿಯ ಪ್ರಜ್ಞೆ ಬಾಚಿ ಎದೆಗಿಳಿಸುತ್ತೆ.ಮನುಷ್ಯ ಜಗತ್ತಿನ ನೋವು ನಲಿವು, ಶೋಷಣೆಗಳು, ಕಪ್ಪು ಬಿಳುಪು, ಹೆಣ್ಣು ಗಂಡು, ಬೇಧಭಾವಗಳು ಕವಿಗೂ ಕಾಣಿಸುತ್ತೆ, ಇತರರಿಗೂ ಕಾಣಿಸುತ್ತೆ. ಆದರೆ ದಿನಾಲೂ ಬೆಳಗ್ಗೆ ಕೂಗುವ, ಈ ದಿನ ಹಾಜರು ಹಾಕದ ಕೋಗಿಲೆ,ಚಿಟ್ಟೆಯ ರೆಕ್ಕೆಯಲ್ಲಿರುವ ಚುಕ್ಕಿಗಳ ಡಿಸೈನ್,ರಸ್ತೆಯಗಲಿಸಲು ಕಡಿದ ಮರದ ಕಾಂಡದಿಂದ ಜಿನುಗುವ ಕಣ್ಣೀರು,ನೀರ ಹರಿವು ನಿಂತು ಏದುಸಿರು ಬಿಡುತ್ತಿರುವ ನದೀ ಪಾತ್ರ,ಎಂಡೋಸಲ್ಫಾನ್ ಸ್ಪ್ರೇ ಯಿಂದ ಸತ್ತು ಬೀಳುವ ಜೇನು ನೊಣ,ಕಾರಿನ ಹೊಗೆ, ಗಗನ ಚುಚ್ಚುವ ಕಟ್ಟಡ,ಎಲ್ಲವೂ ಕವಿ ಹೃದಯಕ್ಕೆ ತುಂಬಾ ಚುಚ್ಚುತ್ತೆ. ಪರಿಸರದ ಪರಿವರ್ತನೆಗಳು, ಪರಿಸರದ ಮೇಲೆ ಮನುಷ್ಯನ ಯಾಂತ್ರಿಕ ಮನೋಭಾವದ ಅತ್ಯಾಚಾರ, ಮತ್ತು ಅದರಿಂದಾಗಿ, ಪರಿಸರದಲ್ಲಿ ನಢೆಯುತ್ತಿರುವ ಅಸಮತೋಲನ, ಅತಿವೃಷ್ಟಿ,,ಅನಾವೃಷ್ಟಿ ಕವಿಯನ್ನು ದರ್ಶಿಸಿ, ದರ್ಶನವಾಗಿ ಇಳಿದು ಬಂದಾಗ ಕವಿತೆ ಒಳಗೊಳಗೇ ಅಳುತ್ತೆ. ಅಂತಹ ಒಂದು ಎದೆತಟ್ಟುವ ಕವಿತೆ, ಚಂದಕಚರ್ಲ ರಮೇಶ್ ಬಾಬು ಅವರು ಪುಟಕ್ಕಿಳಿಸಿದ್ದಾರೆ. ಈ ಕವಿತೆಯಲ್ಲಿ, ಕೋಗಿಲೆ, ಮನುಷ್ಯನಲ್ಲಿ ಕ್ಷಮೆ ಕೇಳುತ್ತೆ. ಕೋಗಿಲೆಯ ಮಾತುಗಳು ಹೀಗಿವೆ. ಕ್ಷಮೆ ಇರಲಿ ವಸಂತವನದವಸ್ತುಪ್ರದರ್ಶನಕ್ಕೆನಿಮಗೆಲ್ಲ ಸ್ವಾಗತನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ ಹೀಗೆ ಬನ್ನಿಇಲ್ಲಿ ಒಂದು ಸಮಯದಲ್ಲಿನಿಸರ್ಗದ ಮಡಿಲಾದದಟ್ಟ ಕಾಡೊಂದಿತ್ತುಗಿಡಮರ ಹೂವು ಹಣ್ಣುಗಳಿಂದನಮ್ಮೆಲ್ಲರ ತಂಗುದಾಣವಾಗಿತ್ತುಈಗ ಇದು ಬರೀ ಅವಶೇಷ ಭೂಮಿಇಲ್ಲಿಗೆ ವಸಂತನ ಆಗಮನದಸುಳಿವು ಸಿಗುವುದಿಲ್ಲಕುರುಹೂ ಕಾಣುವುದಿಲ್ಲಆದಕಾರಣ ಏನೂ ಕಾಣದಿದ್ದರೆಕ್ಷಮೆ ಇರಲಿ ಹೀಗೆ ಬನ್ನಿಕೆಲವಾರು ದಶಕಗಳ ಹಿಂದೆ ಇಲ್ಲಿವನಜೀವಿಗಳ ಸಂಭ್ರಮವಿತ್ತುಪಶು ಪಕ್ಷಿಗಳ ಜಾತ್ರೆಯಿತ್ತುಹಸಿರುವನ ಸಿರಿಯ ನಡುವೆಅವುಗಳ ಜೀವನವೂ ಹಸಿರಾಗಿತ್ತುಈಗ ಇದು ಬರೇ ಬೀಡುಗುಡ್ಡ ದಿನ್ನೆಗಳ ನಾಡು ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ ವಸಂತನ ಆಗಮನದಕಾತರ ತೋರುವ ನಿಮಗೆನಿರಾಶೆ ಮಾಡುತ್ತಿದ್ದಕ್ಕೆಕ್ಷಮೆ ಇರಲಿನೀವು ಮುಂದುವರೆಸಿಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ *** *** *** ಕೋಗಿಲೆಯ ಸ್ವಗತ ಈ ಕವಿತೆ. ವಸಂತವನದ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಪ್ರೇಕ್ಷಕರಿಗೆ ತೋರಿಸುವ ಕೆಲಸ ಕೋಗಿಲೆಯದ್ದು. ವಸಂತ ಎಂದರೆ ಪ್ರಕೃತಿ ನಳನಳಿಸಿ, ಹೂ ಅರಳಿಸಿದ ಹಸಿರು ಲಂಗ ತೊಟ್ಟು ಇನಿಯನಿಗಾಗಿ ಕಾದು ಪ್ರೇಮಿಸಿ,ಕಾಮಿಸಿ, ನಲಿದು ಗರ್ಭವತಿಯಾಗುವ ಕಾಲ. ಸೃಷ್ಟಿ ಕ್ರಿಯೆ ಔನ್ನತ್ಯವನ್ನು ಮುಟ್ಟುವ, ಕಲಾತ್ಮಕವಾಗುವ, ಜೀವರಾಶಿಗಳು ಸಂಭ್ರಮಿಸುವ ಕಾಲ. ಮಾವಿನ ಮರ ಹೂ ಬಿಡುತ್ತೆ,ಕೆಲವೆಡೆ ಚಿನ್ನದ ತಳಿರಾಗಿ ಮೆದು ಮೆದುವಾದ ಎಲೆ ಚಿಗುರಿ, ಕೋಗಿಲೆಗೆ ಹಬ್ಬವೋ ಹಬ್ಬ! ಇಂತಹ ಜೀವೋತ್ಸವವನ್ನು, ಕವಿ ವಸಂತವನದ ‘ ವಸ್ತುಪ್ರದರ್ಶನ’ ಅಂತ ಹೆಸರಿಟ್ಟು ಕರೆಯುವಾಗಲೇ ಜೀವರಾಶಿಗಳು ಹೆಣವಾಗಿ ಮಸಣ ಹುಡುಕುವುದರ ಚಿತ್ರಣದ ಅರಿವಾಗುತ್ತೆ. ವಸ್ತು ಪ್ರದರ್ಶನ, ಮಾನವ,ತನ್ನ ಸಾಧನೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಮಾನವ ನಿರ್ಮಿತ ಎಂದರೆ ಅದು ನಿರ್ಜೀವ ವಸ್ತುವೇ. ‘ವಸಂತವನದ ವಸ್ತುಪ್ರದರ್ಶನ’ ಎಂಬ ಈ ಸಾಲಿನ ಮೊದಲ ಪದ ಜೀವತತ್ವ,ಎರಡನೆಯ ಪದ ನಿರ್ಜೀವ ತತ್ವ. ಈ ಕವಿತೆ ಅಷ್ಟೂ ದ್ವಂದ್ವಗಳನ್ನು, ಜೀವದಿಂದ ನಿರ್ಜೀವತ್ವದತ್ತ ನಡೆದ ದಾರಿಯನ್ನು ಎರಡೇ ಪದದಲ್ಲಿ ಸೆರೆಹಿಡಿಯಿತಲ್ಲಾ. ಇದು ಕವಿಸಮಯ. “ನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು” ಕೋಗಿಲೆಯ ಸೆಲ್ಫ್ ಇಂಟ್ರೊಡಕ್ಷನ್ ನಲ್ಲಿ, ಗತವೈಭವದ ನೆನಪಿನ ಸುಖವಿದೆ. ಕವಿತೆ ಹಾಗೆ ಆರಂಭವಾಗುತ್ತೆ. ಕೋಗಿಲೆಯ ಸ್ವರ ವಸಂತಾಗಮನಕ್ಕೆ ರೂಪಕವೂ ಆಗಿದೆ. “ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ” ವಸಂತನ ಆಗಮನ ಸೂಚಿ, ಕೋಗಿಲೆಯ ಕೊರಳ ಕುಹೂ. ಮೇಲಿನ ಸಾಲಿನಲ್ಲಿ, ಹೇಳುವಂತೆ, ಕೋಗಿಲೆಗೆ ಇತ್ತೀಚೆಗೆ ಮಾವಿನ ತಳಿರು ಸಿಗುತ್ತಿಲ್ಲ. ಹುಡುಕಿ ಸಾಕಾಗಿದೆ. ತಳಿರು ಮೆದ್ದರೇ ಕೋಗಿಲೆಗೆ ಸ್ವರ. ತಳಿರು ತಿನ್ನದೆ ಸ್ವರ ಹೊರಡಲ್ಲ ಕೋಗಿಲೆಗೆ.ವಸಂತಾಗಮನದ ಮಾರ್ಗ ಸೂಚಿ ಕೂಗಿಲ್ಲ ಎಂದರೆ, ವಸಂತಾಗಮನವೇ ಆಗುತ್ತಿಲ್ಲ. ಮನುಷ್ಯನಿಗೆ ಅದರ ಪರಿವೆಯೂ ಇಲ್ಲ! ಆತ ಸ್ಪಂದನಾರಹಿತ ಸ್ವಾರ್ಥಿ ಜೀವ.ಆತನಿಗೆ ವಸ್ತು ಪ್ರದರ್ಶನ ನಡೆದರೆ ಸಾಕು ತಾನೇ. ಮುಂದುವರೆದು ಕೋಗಿಲೆ ಅಳುತ್ತೆ. ಬಿಕ್ಕಿ ಬಿಕ್ಕಿ ಅಳುತ್ತೆ. “ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ” ವಸ್ತುಪ್ರದರ್ಶನ ತೋರಿಸಲು ಕೋಗಿಲೆಗೆ ಮಾತು ಹೊರಡುತ್ತಿಲ್ಲ. ಅದು ಬಿಕ್ಕುತ್ತಿದೆ. ಬಿಕ್ಕಿ ಬಿಕ್ಕಿ ಅಳುವ ನಡುವೆ ಮಾತುಗಳು ತುಂಡು ತುಂಡಾಗಿ ನೋವಿನಲ್ಲಿ ಅದ್ದಿ ಅರ್ಧ ಪದಗಳಾಗಿ, ಉಳಿದರ್ಧ ಎಂಜಲಿನ ಜತೆ ಗಂಟಲು ಸೇರಿ ಮಾತಾಡಲಾಗಲ್ಲ. ದನಿಯ ಒತ್ತಿ ಹಿಡಿದು,ಅಳು ಕಟ್ಟಿ ಹೊರಡುತ್ತಿಲ್ಲ. “ಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ” ಕೋಗಿಲೆ, ಪ್ರೇಕ್ಷಕನಿಗೆ, ವಿನಂತಿಸುತ್ತೆ. ಎಲ್ಲಾದರೂ ವನಸಿರಿ ನಳನಳಿಸಿದ್ದು ಕಂಡರೆ ತಿಳಿಸಿ, ಮತ್ತೆ ನನ್ನ ದನಿಗೊಂದು ನವಜೀವನ ಬಂದೀತು, ಅಂತ.‌ ಹೋಗಿ ಬನ್ನಿ ನಮಸ್ಕಾರ ಎಂದು ಕೋಗಿಲೆ ಪ್ರೇಕ್ಷಕನಿಗೆ ಹೇಳುವಾಗ ನಮಸ್ಕಾರದೊಳಗೆ,ಮನುಷ್ಯಜಗತ್ತಿನತ್ತ ತಿರಸ್ಕಾರ ಭಾವನೆಯಿದೆಯೇ?. ಇಷ್ಟೊಂದು ನಿರಾಶೆಯಲ್ಲೂ ‘ನವ ಜೀವನ ಬಂದೀತು’ ಎಂಬ ಆಶಾಭಾವದೊಂದಿಗೆ ಕೋಗಿಲೆಯ ಕವಿತೆ ಮುಗಿಯುತ್ತೆ. ಕವಿತೆಯ ಶೀರ್ಷಿಕೆ ವಿಡಂಬನಾತ್ಮಕ. ಮನುಷ್ಯ ಕೋಗಿಲೆಯಲ್ಲಿ ಕ್ಷಮೆ ಕೇಳಬೇಕಿತ್ತು. ಆದರೆ ಮನುಷ್ಯನ ಸ್ವಕೇಂದ್ರಿತ ಮನಸ್ಸು ಸ್ಪಂದನೆಯನ್ನೇ ಮರೆತು ಒಣವಾದಾಗ, ಕೋಗಿಲೆಯೇ ಕ್ಷಮೆ ಕೇಳುವಂತಾಗಿದೆ. ಆದರೆ ಕವಿಯ ಪ್ರಜ್ಞೆ ಹೊಸತೊಂದು ಅನುಭವಕ್ಕೆ ತೆಗೆದುಕೊಂಡಾಗ, ಅದೇ ಕೋಗಿಲೆಯ ಕವಿತೆ ಹೇಗೆ ಬದಲಾಗುತ್ತೆ ಅಂತ ನೋಡಿ!.ಕರೋನಾ ಲಾಕ್ ಡೌನ್ ಆದಾಗ, ಮನುಷ್ಯನ ಇಂಟರ್ಫಿಯರೆನ್ಸ್ ಇಲ್ಲದೇ, ವನಪುಷ್ಪಗಳು ನಳನಳಿಸಿದಾಗ ಕೋಗಿಲೆಯ ಕನಸು ನನಸಾಗುತ್ತೆ. ರಮೇಶ್ ಬಾಬು ಅವರ ಕರೋನ ಸಮಯದ ಕೋಗಿಲೆಯ ಉಲ್ಲಾಸದ ಮಾತುಗಳು ಹೀಗಿವೆ. ತಳಿರು ಮೆದ್ದ ಕೋಗಿಲೆ ಪ್ರತಿವರ್ಷದಂತೆಯುಗಾದಿಯಂದುವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗಹರಡಿದ ರಂಗಸ್ಥಳದಿನವಿಡೀ ಮನತುಂಬಿಸಾಗಿತು ಗಾನಕೊರೋನಾದ ಖಬರಿಲ್ಲಆಡಳಿತದ ಅರಿವಿಲ್ಲಕಾಲುಷ್ಯ ಕಾಣದ್ದೇ ಮಾನದಂಡಅಂದಿನಿಂದ ಇಂದಿಗೂಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ ! ** *** **** ಈ ಸಾಲುಗಳನ್ನು ನೋಡಿ! “ವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗ “ ಬಹುಷಃ ಕೋಗಿಲೆಯಷ್ಟೇ ನಿಮಗೂ ಖುಶಿಯಾಗಿರಬೇಕು!‘ತನ್ನ ಉಸಿರು ಕಟ್ಟಲಿಲ್ಲ ದನಿ ಗೊಗ್ಗರಾಗಲಿಲ್ಲ’ ಅಂತ ಕೋಗಿಲೆ ಮನುಷ್ಯಾಕ್ರಮಣದಿಂದ ಕಳೆದ ಕೊರಳು ಮರುಪಡೆದ ಸಂತಸ ವ್ಯಕ್ತಪಡಿಸುತ್ತದೆ. ಇಲ್ಲಿ ಕೋಗಿಲೆ, ವಸಂತನಿಗೆ ರೂಪಕ. ವಸಂತ ಪ್ರಕೃತಿಗೆ ಪ್ರತಿಮೆ. ಹಾಗೆ ಕೋಗಿಲೆಗೆ ಸ್ವರ ಬಂದಿದೆ ಎಂದರೆ ಪ್ರಾಕೃತಿಕ ಸಮತೋಲನ ವಾಪಸ್ಸಾಗಿದೆ ಅಂತ. ಉಬ್ಬಸ ಕಳೆದ ನಿಸರ್ಗ ಅನ್ನುವಾಗ, ಇದೇ ಧ್ವನಿ. ಸಾಧಾರಣವಾಗಿ ವಾತಾವರಣ ಕಲುಷಿತಗೊಂಡಾಗ ಉಬ್ಬಸ. ವಾತಾವರಣ ನಿರ್ಮಲವಾದಾಗ,ಪ್ರಕೃತಿಯ ಉಬ್ಬಸ ಕಳೆದಿದೆ. “ಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ !” ಎಡೆಬಿಡದೆ ಸಂಭ್ರಮದಿಂದ ತಳಿರುಮೆದ್ದ ಕೋಗಿಲೆ ಸ್ವರದೌತಣ ಕೊಡುತ್ತೆ. ನೀವೆಲ್ಲಾ ಗಮನಿಸಿರಬಹುದು, ಕೊರೊನಾ ಲಾಕ್ ಡೌನ್ ನಲ್ಲಿ, ಮನುಷ್ಯ ಬಂದಿಯಾದಾಗ, ನಿಸರ್ಗಕ್ಕೆ ಸ್ವಾತಂತ್ರ್ಯ ದಿನದ ಸಂಭ್ರಮ. ಯಾಕೆ ಹೀಗೆ?. ಮನುಷ್ಯ ತಾನು ಮತ್ತು ಪ್ರಕೃತಿಯ ನಡುವೆ ಗೋಡೆ ಕಟ್ಟಿ, ಉಳಿದೆಲ್ಲಾ ಜೀವಸಂಕುಲಗಳನ್ನು ನಿಕೃಷ್ಟವಾಗಿ ನೋಡಿ, ಇಟ್ಟಿಗೆ ಪಟ್ಟಣ ಕಟ್ಟಿದ. ಆ ಪಟ್ಟಣ, ಪಶ್ಚಿಮ ಘಟ್ಟದ ಸಾಲುಗಳಲ್ಲಿ ನಡೆಯುತ್ತಿರುವ ಗುಡ್ಡಕುಸಿತದಡಿಯಲ್ಲಿ ಭೂಗರ್ಭದಲ್ಲಿ ಪಳೆಯುಳಿಕೆಯಾಗುತ್ತಿದೆ . ಕೊರೊನಾದಂತಹ ಕಣ್ಣಿಗೆ ಕಾಣಿಸದ ವೈರಾಣು ದಾಳಿಗೆ ಸಿಕ್ಕಿ ಸ್ತಬ್ಧವಾಗಿದೆ. ಭಾರತೀಯ ಜೀವನಶೈಲಿ ಹೀಗಿತ್ತೇ?. ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ || (ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಅವೆಲ್ಲವೂ ಈಶನಿಂದ ಆವೃತವಾದದ್ದು. ಅದನ್ನು ಯಾವತ್ತೂ ನಿನ್ನದಾಗಿಸಿಕೊಳ್ಳಲು ಪ್ರಯತ್ನಿಸಬೇಡ. ಯಾವ ಸಂಪತ್ತನ್ನೂ ಬಯಸಬೇಡ) ಜಗತ್ತಿನ ಕಣ ಕಣದಲ್ಲಿ, ಜೀವವಿರಲಿ ನಿರ್ಜೀವ ವಸ್ತುವಾಗಿರಲಿ,ಎಲ್ಲದರಲ್ಲೂ ಈಶನನ್ನು ಕಾಣುವ ಆ ಮೂಲಕ ನಮ್ಮನ್ನೇ ಕಾಣುವ ದರ್ಶನ ನಮ್ಮದು.ನಮಗೆ ಸ್ವಾತಂತ್ರ್ಯ ಹೇಗೆ ಇಷ್ಟವೋ, ಹಾಗೆಯೇ ಉಳಿದ ಜೀವಜಾಲದ ಸ್ವಾತಂತ್ರ್ಯವನ್ನು ಗೌರವಿಸಿ ಸಹಬಾಳ್ವೆ , ಉಸಿರಿನಷ್ಟೇ ಸಹಜವಾಗಲಿ. ******************************** ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

ಬೆಳಕಿನ ರೋಚಕತೆ ನೀಡುವ ಬೆಳದಿಂಗಳು. ಪುಸ್ತಕ- ಬೆಳದಿಂಗಳು ಕವಿ- ಗುರು ಹಿರೇಮಠ ವಿಶ್ವೃಷಿ ಪ್ರಕಾಶನ ಬೆಲೆ-೧೨೦/- ಗುರು ಹಿರೇಮಠ ತುಮಕೂರು ಟು ಹೊಸ್ಪೇಟ್ ಎಂದೇ ನನಗೆ ಪರಿಚಯವಾದವರು. ಮೃದು ಮಾತಿನ ಅಷ್ಟೇ ನಾಚಿಕೆ ಸ್ವಭಾವದ ಹುಡುಗ. ಯಾವಾಗ ಎದುರಿಗೆ ಸಿಕ್ಕರೂ ಒಂದು ನಗೆಯ ಹೊರತಾಗಿ ಬೇರೆ ಮಾತು ಆಡಲು ಬರುವುದೇ ಇಲ್ಲವೇನೋ ಎಂಬಷ್ಟು ಮೌನಿ. ಅವರ ಚುಟುಕುಗಳ ಸಂಕಲನ ಬೆಳದಿಂಗಳು ಓದಿದಾಗ ಅವರ ಮೌನಕ್ಕೊಂದು ಅರ್ಥ ದೊರಕಿತು ನನಗೆ. ಹೇಳಬೇಕಾದುದ್ದನ್ನೆಲ್ಲ ಚುಟುಕಾಗಿ ಮೂರು ನಾಲ್ಕು ಸಾಲುಗಳಲ್ಲಿ ಹೇಳಿ ನಿರುಮ್ಮಳವಾಗಿ ಬಿಡುವ ಗುರುವಿಗೆ ಬಹುಶಃ ಮಾತು ಮಣಭಾರ ಎನ್ನಿಸಿರಬಹುದು.. ಹೀಗಾಗಿಯೇ ಮೌನ ಸಾಮ್ರಾಜ್ಯದ ಚಕ್ರವರ್ತಿ ಅವರು. ಇಷ್ಟಾಗಿಯೂ ನಾನು ಕಂಡAತೆ ಸ್ನೇಹಿತರನ್ನು ತುಂಬಾ ನಂಬುವ ಸ್ವಭಾದ ಗುರು  ಪ್ರೀತಿಸುವವರನ್ನು ನಂಬುತ್ತೇನೆ. ದ್ವೇಷಿಸುವವರನ್ನು  ಪ್ರೀತಿಸುತ್ತೇನೆ ಹೋಗುವ ದಾರಿಯಲ್ಲಿ ನನ್ನೆದೆಯ ಹೂವುಗಳು ನೀವು ಎಂದು ಬರೆದರೆ ಅದರಲ್ಲಿ ಅಚ್ಚರಿಯೇನಿದೆ?  ಪ್ರೀತಿಸುವವರನ್ನು ನಂಬುವುದು ಸಹಜ. ಎಲ್ಲರೂ ತಮ್ಮನ್ನು ಪ್ರೀತಿಸುವವರನ್ನು ನಂಬಿಯೇ ನಂಬುತ್ತಾರೆ. ಅದೇನೂ ವಿಶೇಷವಲ್ಲ.  ಆದರೆ ದ್ವೇಷಿಸುವವರನ್ನು ಪ್ರೀತಿಸುವುದು ಮಾತ್ರ ಬಹುದೊಡ್ಡ ವಿಷಯ. ಹಾಗೆ ದ್ವೇಷಿಸುವವರನ್ನೂ ಪ್ರೀತಿಸುವುದು ಸಾಧಾರಣ ಜನರಿಗೆ ದಕ್ಕುವ ಮಾತಲ್ಲ. ಹೀಗಾಗಿಯೇ ಈ ಪ್ರೀತಿಸುವವರನ್ನು ಹಾಗೂ ದ್ವೇಷಿಸುವವರನ್ನು ತಾನು ಹೋಗುವ ದಾರಿಯಲ್ಲಿ  ಸಿಗುವ ತನ್ನೆದೆಯ ಹೂವುಗಳು ಎನ್ನುತ್ತಾರೆ. ಬದುಕು ತೀರಾ ಚಿಕ್ಕದು. ದ್ವೇಷಿಸುವವರನ್ನು ತಿರುಗಿ ನಾವೂ ದ್ವೇಷಿಸುತ್ತಲೇ ಹೋದರೆ ಇಡೀ ಜೀವನಪೂರ್ತಿ ದ್ವೇಷಿಸುತ್ತಲೇ ಇರಬೇಕಾಗುತ್ತದೆ. ಪ್ರತಿ ಮಾತಿಗೂ ಒಂದು ಎದುರುತ್ತರ ಕೊಡುತ್ತಲೇ ಹೋದರೆ ಮಾತು ಮುಗಿಯುವುದಾದರೂ ಯಾವಾಗ? ಹೀಗಾಗಿಯೇ ದ್ವೇಷಿಸುವವರನ್ನು ಪ್ರೀತಿಸಿಬಿಟ್ಟರೆ ನಾವು ನಿರುಮ್ಮಳವಾಗಿರಬಹುದು. ಕಿuಚಿಟiಣಥಿ oಜಿ meಡಿಛಿಥಿ is ಣತಿiಛಿe bಟesseಜ  ಎಂದು ಶೇಕ್ಸ್ಫೀಯರ್ ಹೇಳುತ್ತಾನೆ. ದ್ವೇಷಕ್ಕೆ ಪ್ರತಿಯಾಗಿ ದ್ವೇಷಿಸಿದರೆ ನಮ್ಮ ನಿರಾಳ ಮನಸ್ಥಿತಿಯನ್ನು ನಾವೇ ನಾಶಮಾಡಿಕೊಂಡAತೆ. ಹೀಗಾಗಿಯೇ ಜಗದ ಎಲ್ಲ ನೋವಿಗೂ ಪ್ರೀತಿಯೊಂದೇ ಔಷಧ. ಜಗದ ಎಲ್ಲ ದ್ವೇಷಕ್ಕೂ ಪ್ರೀತಿಯೇ ಮುಲಾಮು. ಕವಿಯ ಮಾನವೀಯತೆಯ ಪರಿಚಯವಾಗಲು ಈ ಎರಡು ಸಾಲು ಸಾಕು.            ನಾನು ಕಡಲೂರಿನವಳು. ಜಗದ ಸೃಷ್ಟಿ ಕಡಲಲ್ಲಿಯೇ ಆದದ್ದು ಎಂದು ಬಲವಾಗಿ ನಂಬಿದವು. ಜಗದ ಅಂತ್ಯವೂ ಕಡಲಿಂದಲೇ ಆಗುತ್ತದೆ ಎಂದೂ ಮತ್ತೆ ಮತ್ತೆ ಹೇಳುತ್ತಿರುವವಳು. ಕಡಲ ಉಪ್ಪು ನೀರು ನಮಗೆ ಅಮೃತಕ್ಕೆ ಸಮಾನ. ನಾನು ಚಿಕ್ಕವಳಿರುವಾಗಲೆಲ್ಲ ಹೊಟ್ಟೆ ಕೆಟ್ಟರೆ, ತಲೆ ನೋವು ಬಂದರೆ ಉಪ್ಪು ನೀರು ಕುಡಿಸುತ್ತಿದ್ದರು. ಒಂದೋ ವಾಂತಿಯಾಗಿ ಎಲ್ಲವೂ ಹೊಟ್ಟೆಯಿಂದ ಹೊರಹೋಗಬೇಕು, ಅಥವಾ ಉಪ್ಪುನೀರು ಎಲ್ಲವನ್ನೂ ಜೀರ್ಣಿಸಬೇಕು. ಹೀಗಾಗಿ ಎಷ್ಟೋ ಸಲ ನನ್ನ ಮಕ್ಕಳು ಚಿಕ್ಕವರಿರುವಾಗಲೂ ಉಪ್ಪುನೀರಿನ ಔಷಧವೇ ನನ್ನನ್ನು ಸಂಕಟದಿAದ ಪಾರು ಮಾಡಿದ್ದು.    ನಾಲ್ಕು ತಿಂಗಳಿನ ಪುಟ್ಟ ಮಗುವನ್ನು ಕೈಲಿಟ್ಟುಕೊಂಡು ಊರಲ್ಲೇ ಗಂಜಿ ಉಂಡುಕೊAಡು ಸುಖವಾಗಿ ಶಾಲೆಗೆ ಹೋಗಿ ಬರಬಹುದಾದ ಅವಕಾಶವನ್ನು ಬಿಟ್ಟುಕೊಟ್ಟು, ಅನುದಾನಿತ ಶಾಲೆ ಬೇಡ ನನಗೆ ಎನ್ನುತ್ತ ಮನೆಯವರೆಲ್ಲ ಅಸಮಧಾನಕ್ಕೆ ಕಾರಣವಾಗಿ ಬೆಳ್ತಂಗಡಿಯ ಗೊಂಡಾರಣ್ಯವಾದ ಕೊಯ್ಯೂರಿಗೆ ಸರಕಾರಿ ನೌಕರಿ ಮಾಡುತ್ತೇನೆ ಎಂದು ಹೊರಟಿದ್ದೆ. ಏನೂ ಅರಿಯದ ಬೊಮ್ಮಟೆಯಂತಹ ಮಗು ಮಧ್ಯರಾತ್ರಿ ಎದ್ದು ಅತ್ತಾಗಲೆಲ್ಲ ನನಗೆ ತಳಮಳ. ನಾನೇ ಮದುವೆ ಆಗುವವರೆಗೂ ಅಮ್ಮನ ಹೊಟ್ಟೆಗೆ ಕೈಯ್ಯಿಟ್ಟು ಮಲುಗುತ್ತಿದ್ದವಳು. ಈಗ ಈ ಮಗುವನ್ನು ಸಂಭಾಳಿಸುವ ಅಮ್ಮನಾಗಿದ್ದೆ. ಆಗೆಲ್ಲ ನನಗೆ ನೆನಪಾಗುತ್ತಿದ್ದುದು ಒಂದೇ. ನೀರು ಬೆಚ್ಚಗೆ ಮಾಡಿ ಒಂದು ಚಿಟಿಕೆ ಉಪ್ಪು ಹಾಕಿ ಕದಡಿ ಚಮಚದಲ್ಲಿ ನಾಲ್ಕಾರು ಹನಿ ಕುಡಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಮಗು ಅಳುವುದನ್ನು ನಿಲ್ಲಿಸಿ ಮಲಗಿದರೆ ನನಗೆ ಏನೋ ದೊಡ್ಡ ಮಹತ್ಸಾಧನೆ ಮಾಡಿದ ಸಮಾಧಾನ. ರುಚಿ ನೀಡುವ ಉಪ್ಪಿನಲ್ಲಿ ಸಕಲ ಜೀವರಾಶಿಗಳ ಕಣ್ಣೀರಿದೆ ಆದರೆ ಇಲ್ಲಿ ಗುರು ಉಪ್ಪಿಗೆ ಬೇರೆಯದ್ದೇ ಅರ್ಥ ನೀಡಿದ್ದಾರೆ. ಉಪ್ಪುಪ್ಪಿನ ಕಣ್ಣೀರಿಗೆ ಹೋಲಿಸಿದ್ದಾರೆ. ಬದುಕಿನ ವಿವಿಧ ಅರ್ಥಗಳನ್ನು ಹಿಡಿದಿಡುವುದೇ ನಿಜವಾದ ಕವಿಯ ಸಾಧನೆ. ನಮಗೆಲ್ಲ ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದೆನಿಸಿದರೆ ಗುರು ಉಪ್ಪನ್ನು ಕಣ್ಣೀರಿಗೆ ಸಮೀಕರಿಸಿ ಹೊಸತೇ ಆದ ಆಯಾಮವನ್ನು ನೀಡಿದ್ದಾರೆ.    ಯಶಸ್ಸು ಸುಲಭವಾಗಿ ದಕ್ಕುವಂತಹುದ್ದಲ್ಲ. ಒಂದು ಗುರಿಯನ್ನು ತಲುಪಲು ವಹಿಸಬೇಕಾದ ಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಯಶಸ್ಸಿಗೆ ಹತ್ತಾರು ದಾರಿಗಳಿರುವುದಿಲ್ಲ. ಬೇಗ ಹೋಗಿ ಯಶಸ್ಸನ್ನು ಪಡೆಯಲು ಯಾವ ಒಳದಾರಿಯೂ ಇರುವುದಿಲ್ಲ. ಇರುವುದು ಒಂದೇ ದಾರಿ. ಅದು ಸತತ ಪರಿಶ್ರಮ. ಏರುವ ಎತ್ತರಕ್ಕೆ ಒಂದೇ ದಾರಿ ಬೀಳಲು ನೂರು ದಾರಿ ಆದರೆ ಯಶಸ್ಸಿನ ಶಿಖರವನ್ನು ಹತ್ತಿದರೂ ಅದರಿಂದ ಕೆಳಗೆ ಬೀಳಲು ಬೇಕಷ್ಟು ದಾರಿಗಳಿರುತ್ತವೆ. ನಮ್ಮದೇ ವ್ಯಸನಗಳು ನಮ್ಮನ್ನು ದಾರಿ ತಪ್ಪಿಸಿ ಯಶಸ್ಸಿನ ಶಿಖರದಿಂದ ಒಮ್ಮೆಲೆ ಕೆಳಗೆ ಬೀಳಿಸಬಲ್ಲದು. ನಮ್ಮ ಒಂದು ತಪ್ಪು ಹೆಜ್ಜೆಯೂ ನಮ್ಮನ್ನು ಪ್ರಪಾತದ ಕಡೆ ತಳ್ಳುವ ಚಕ್ರವಾಗಿರಬಹುದು.  ಆದರೂ ಈ ಜಗತ್ತು ಪ್ರೇಮಮಯ. ಪ್ರೇಮವೊಂದಿದ್ದರೆ ಸಾಕು, ಜಗತ್ತಿನ ನೂರಾರು ಸಂಕಷ್ಟಗಳನ್ನು ಸುಲಭವಾಗಿ ಜಯಿಸಬಹುದು. ಪ್ರೇಯಸಿಯ ಒಂದು ನಗು ಇಡೀ ಜಗತ್ತನ್ನೇ ಗೆಲ್ಲುವ ಪ್ರೇರಕ ಶಕ್ತಿಯಾಗಬಲ್ಲದು. ನಿನ್ನ ನಗು ಕಂಡ ಕ್ಷಣ ಕಡಲಿನ ಮುತ್ತುಗಳೆಲ್ಲ ಹೂವಾಗಿ ಅರಳಿದವು ಎನ್ನುವ ಕವಿಯಲ್ಲಿನ ತಾಜಾ ಭಾವನೆಗಳು ನಮ್ಮನ್ನು ಜೀವನ್ಮುಖಿಯಾಗಿಸುವುದರಲ್ಲಿ ಸಂಶಯವೇ ಇಲ್ಲ.  ಈ ಪ್ರೇಮದ ಪರಿಯನ್ನೊಮ್ಮೆ ಗಮನಿಸಿ. ಯಾರೋ ನಡೆದ ದಾರಿಯಲ್ಲಿ ನಾ ನಡೆಯುತ್ತಿದ್ದೆ ಸುಮ್ಮನೆ ಒಮ್ಮೆ ದಾರಿ ಬದಲಿಸಿದೆ! ನೀ ಸಿಕ್ಕೆ ಬದುಕು ದಕ್ಕಿತು ಒಂದು ಪ್ರೇಮ ಬದುಕನ್ನು ನಮ್ಮ ತೆಕ್ಕೆಗೆ ನೀಡಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗಿರುವ ಈ ಸಾಲುಗಳನ್ನು ನೋಡಿ. ಸರಳವಾದ ಕೆಲವೇ ಶಬ್ಧಗಳಲ್ಲಿ ಈ ಭಾವ ನಮ್ಮನ್ನು ಇಡೀ ಜಗತ್ತಿನ ಪ್ರೇಮದ ರಹದಾರಿಯಲ್ಲಿ ನಿಲ್ಲಿಸುತ್ತದೆ. ಪಡೆದದ್ದು ಇಷ್ಟೇ ಅತ್ತ ನೀನು, ಇತ್ತ ನಾನು ದಡವಾಗಿ ಪ್ರೀತಿಯ ನದಿ ಎಂದೂ ಬತ್ತುವುದಿಲ್ಲ ಹೀಗಾಗಿ ಪ್ರೀತಿಯಲ್ಲಿ ಏನು ಪಡೆದೆ ಎಂದರೆ ಎಂದೂ ಬತ್ತದ ಪ್ರೀತಿಯನ್ನು ಪಡೆಯುವುದು ಮಾತ್ರ ಪ್ರೇಮದ ಕೊನೆಯ ಗುರಿಯಾಗಿರುತ್ತದೆ. ಪ್ರೇಮನದಿಯ ಎರಡು ದಡಗಳಲ್ಲಿ ಪ್ರೇಮಿಗಳಿಬ್ಬರೂ ನಿಂತುಕೊAಡರೆ ಆ ನದಿ ಎಂದಿಗೂ ಬತ್ತಬಾರದು. ಅಂತಹ ಪ್ರೇಮವನ್ನು ಪಡೆದರೆ ಜೀವನ ಸಾರ್ಥಕ ಎನ್ನುವ ಭಾವ ಕವಿಯಲ್ಲಿದೆ. ಅದಕ್ಕೆಂದೇ ಕವಿ ಬೆಳದಿಂಗಳು ಸೋತಿದೆ ಅವಳ ಹೆಸರಿಗೆ ಆ ಹೆಸರಲ್ಲಿ ನನ್ನ ಬದುಕಿನ ಉಸಿರಿದೆ ಎನ್ನುತ್ತಾರೆ. ಪ್ರೇಮದ ಸಾಫಲ್ಯವೇ ಹಾಗೆ. ಪ್ರೇಮಿಯ ಹೆಸರನ್ನು ಜಪಿಸುತ್ತ ಅದನ್ನೇ ಉಸಿರಾಡುವುದರಲ್ಲಿಯೇ ಬದುಕಿನ ಔನತ್ಯವನ್ನು ಕಾಣುವುದು ಪ್ರತಿ ಪ್ರೇಮಿಯ ಆಶಯವಾಗಿರುತ್ತದೆ. ಹೀಗೆಂದೇ ಪ್ರೇಮದಲ್ಲಿ ಬಿದ್ದ ಕಾಲೇಜು ವಿದ್ಯಾರ್ಥಿಗಳ ನೋಟ್‌ಬುಕ್‌ನ ಕೊನೆಯ ಹಾಳೆಯನ್ನು ಗಮನಿಸಿ. ಅಲ್ಲಿ ಕೇವಲ ಪ್ರೇಮಿಯ ಹೆಸರನ್ನೇ ಸಾವಿರ ಸಲ ಬರೆದಿರುತ್ತಾರೆ. ಕವಿ ಕೂಡ ತನ್ನವಳ ಹೆಸರಿಗೆ ಬೆಳದಿಂಗಳೂ ಸೋಲುತ್ತದೆ ಎನ್ನುತ್ತಾರೆ. ಕವಿಗೂ ವಿರಹ ಕಾಡುತ್ತದೆ. ವಿರಹವಿಲ್ಲದ ಪ್ರೇಮ ಈ ಜಗದಲ್ಲಿ ಇದ್ದೀತೆ? ಪ್ರತಿ ಪ್ರೇಮಕ್ಕೂ ವಿರಹ ಕಾಡಿದರೆ ಮಾತ್ರ ಆ ಪ್ರೇಮಕ್ಕೊಂದು ಅಧಿಕೃತತೆ ದಕ್ಕಿದ ಹಾಗೆ. ಪ್ರತಿ ಪ್ರೇಮದಲ್ಲಿಯೂ ಒಂದು ಮುನಿಸಿರುತ್ತದೆ, ಜಗಳವಿರುತ್ತದೆ. ಕೊನೆಗೆ ಪ್ರೇಮಿ ಕೈಕೊಟ್ಟು ಹೋದಳೆಂದು ಪರಿತಪಿಸುವ ಉಪಖ್ಯಾನವಿರುತ್ತದೆ. ಪ್ರೀತಿಯೊಂದಿಗೆ ಸ್ನೇಹ ಮಾಡಿಕೊಂಡವಳು ಮೊದಲೇ ಮೋಸದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ತಿಳಿಯಲಿಲ್ಲ ಎನ್ನುತ್ತ ವಿರಹದ ಮಾತನಾಡುತ್ತಾರೆ. ಬದುಕಿನ ಬಣ್ಣಗಳನ್ನು ಹಂಚಿಕೊAಡವಳು. ಬದುಕಿನಲ್ಲಿರುವ ಕಾಮನಬಿಲ್ಲನ್ನು ಬಣ್ಣಗಳನ್ನು ತನಗಾಗಿ ತಂದವಳು ಬಣ್ಣಗಳ ಜೊತೆಗೆ ಬಣ್ಣ ಬದಲಿಸಿದಳು ಎಂದು ವಿಷಾದ ಪಡುತ್ತಾರೆ. ಬಣ್ಣಗಳ ಜೊತೆಗೆ ಆಟವಾಡುವುದನ್ನು ಕಲಿಸಿದವಳು ಬಣ್ಣ ಬದಲಿಸಿ ಹೋದಳು ಆದರೂ ಮೋಸ ಮಾಡಿ ಹೋದವಳ ಬಗ್ಗೆ ಬೇಸರವಿಲ್ಲ. ಅವಳ ಮೇಲಿನ ಪ್ರೇಮ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಪ್ರೇಮವೆಂದರೆ ನಂಬಿಕೆ ಎಂದು ಮೊದಲೇ ಹೇಳಿದವರು ಈಗ ನಂಬಿಕೆಯನ್ನು ಕೊಂದವಳ ಬಗೆಗೂ ಮತ್ತದೇ ನಂಬಿಕೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ನಂಬಿಕೆಯನ್ನು ಕೊಂದವಳ ಜೊತೆಗೆ ನAಬಿಕೆಯಿAದ ಬದುಕಿರುವ ಹೆಮ್ಮೆ ನನ್ನದಾಗಲಿ ಎನ್ನುತ್ತ ನಂಬಿಕೆಯನ್ನು ತಾನು ಕಳೆದುಕೊಳ್ಳದ ನಿಶ್ಚಯ ಮಾಡುತ್ತಾರೆ. ಪ್ರೀತಿಗಿಂತ ಮೊದಲೇ ಮೋಸವನ್ನೂ ತನ್ನೊಂದಿಗೆ ತಂದಿದ್ದಾಳೆAದು ಆರೋಪಿಸುವ ಕವಿಗೆ ಆಕೆ ತನ್ನನ್ನು ಬಿಟ್ಟು ಹೋದರೆ ಏನು ಮಾಡುವುದೆಂಬ ಭಯವಿದೆ. ಆಕೆಯನ್ನು ಕಳೆದುಕೊಳ್ಳಲಂತೂ ಸಾಧ್ಯವಿಲ್ಲ. ಹೊರಟು ಹೋದಳು ನನ್ನಲ್ಲಿರುವ ಬೆಳಕನ್ನು ಕೊಂದು ಅವಳ ನೆರಳೇ ದಾರಿ ತೋರಿಸುತ್ತಿದೆ ಕತ್ತಲೆಯಲ್ಲಿ ಎನ್ನುತ್ತ ಅವಳ ನೆನಪು, ನೆರಳು ಜೀವನದ ಕತ್ತಲಿನಲ್ಲೂ ದಾರಿ ತೋರುವ ಬೆಳಕಾಗುವ ಕುರಿತು ತುಂಬು ನಂಬಿಕೆಯ ಮಾತನಾಡುತ್ತಾರೆ. ಒಟ್ಟಿನಲ್ಲಿ ಬದುಕು ಅವಳ ಅವಳೊಂದ ಸಾಗಬೇಕೆನ್ನುವುದು ಕವಿ ಆಶಯ.                    ಎಲ್ಲವನ್ನೂ ಅಥೆಂಟಿಕ್ ಆಗಿ ಹೇಳುವ ಕವಿ ಸಾವಿನ ಬಗ್ಗೆ ಮಾತನಾಡದಿದ್ದರೆ ನಡೆದೀತು ಹೇಗೆ? ಹೀಗಾಗಿ ಬದುಕಿನ ನಶ್ವರತೆಯನ್ನು ಕತ್ತಲೆಗೆ ಹೋಲಿಸುತ್ತಾರೆ. ಕತ್ತಲೆಯ ಬದುಕು, ಬೆಳಕಿನ ಸಾವಿನ ರೂಪಕ ಇಲ್ಲ ಆಧ್ಯಾತ್ಮದ ಕೊನೆಯ ಹಂತವನ್ನು ನೆನಪಿಸುತ್ತದೆ. ನಾನು ಕತ್ತಲೆಯಲ್ಲಿ ಬದುಕಿದರೂ ಸಾವು ಬೆಳಕಿನಲ್ಲಿ ಬರಲಿ ವ್ಯಾವಹಾರಿಕ ಜಗತ್ತನ್ನು ತೊರೆದು ಅಲೌಕಿಕ ಜಗತ್ತನ್ನು ಸಾಮಕೇತಿಕವಾಗಿ ಪ್ರತಿನಿಧಿಸುವ ಕತ್ತಲಿನ ಬದುಕು ಮತ್ತು ಬೆಳಕಿನ ಸಾವು ಸಾವಿರಾರು ವರ್ಷಗಳ ಜ್ಞಾನವನ್ನು ಕೇವಲ ನಾಲ್ಕೇ ಸಾಲಿನಲ್ಲಿ ಕಣ್ಣೆದುರು ತೆರೆದಿಡುವ ಅದ್ಭುತ ಇದು. ಅಷ್ಟಾದರೂ ನಾವು ಎಷ್ಟೊಂದು ಸಾವನ್ನು ನೋಡುತ್ತೇವೆ. ಕಣ್ಣೆದುರಿಗೇ ಅದೆಷ್ಟೋ ಜನ ಪತಪತನೆ ಉದುರಿ ಬೀಳುತ್ತಿರುವ ಕಾಲಘಟ್ಟ ಇದು. ಸಾವಿನ ಲೆಕ್ಕಾಚಾರವನ್ನು ಬೆರಳೆಣಿಕೆಯಲ್ಲಿ ಮುಗಿಸಿ, ಸಾವಿರಗಟ್ಟಲೆ ಲೆಕ್ಕದಲ್ಲಿ ಎಣಿಸುತ್ತಿರುವ ಈ ಕೊರೋನಾ ಕಾಲದಲ್ಲಿ ಯಮ ಕೂಡ ಸಾವಿಗೆ ಕಣ್ಣೀರು ಹಾಕುತ್ತಿದ್ದಾನೆಯೇ? ಗೊತ್ತಿಲ್ಲ. ಆದರೆ ಪ್ರತಿ ಸಾವಿನ ಎದುರು ಯಮ ಅತ್ತಿದ್ದು ಯಾರ ಕಣ್ಣಿಗೂ ಕಾಣಿಸಲಿಲ್ಲ ಎನ್ನುವ ಕವಿಯ ಕಲ್ಪನೆ ಅದ್ಭುತವಾಗಿದೆ. ಇದ್ದರೂ ಇರಬಹುದು ಬಿಡಿ. ದಿನವೊಂದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ, ಕೆಲವೊಂದು ದಿನ ಲಕ್ಷದ ಎಣಿಕೆಯಲ್ಲಿ ಸಾವಿನ ಲೆಕ್ಕಾಚಾರ ಕಂಡಿದೆ ಈ ಜಗತ್ತು. ಜನರ ಮರಣದ ಪ್ರಮಾಣ ಆ ಯಮನಿಗೂ ದಿಗಿಲು ಹುಟ್ಟಿಸಿರಬಹುದು. ಆದರೆ ಸಾವಿಗೊಂದು ಗೌರವ ಕೊಡುತ್ತಿದ್ದೇವೆಯೇ? ಅದೂ ಇಲ್ಲ. ಕೊರೋನಾದಿಂದಾಗಿ ಸಾವುಗಳೆಲ್ಲ ಕೇವಲ ಬೀದಿ ಬದಿಯ ಹೆಣಗಳಷ್ಟೇ ಆಗಿಹೋಗುತ್ತಿರುವ ಈ ದುರಂತದ ಸಮಯದಲ್ಲಿ ಸಾವನ್ನು ಕುರಿತು ಮಾತನಾಡುವುದೇ ಅಪರಾಧ ಎನ್ನಿಸಿಬಿಡುತ್ತದೆ. ಸಾವಿನ ಮಾತು ಬಿಡಿ. ಬದುಕಿರುವವರನ್ನೇ ಮುಟ್ಟಿಸಿಕೊಳ್ಳಲು ನಾವು ಹಿಂದೇಟು ಹಾಕುತ್ತಿದ್ದೇವೆ. ಪರಸ್ಪರರನ್ನು ಭೇಟಿಯಾಗಲು ಅದೆಷ್ಟು ಮುಜುಗರ ಈಗ. ಅನಾವಶ್ಯಕವಾಗಿ ನಾವೀಗ ಯಾರೊಂದಿಗೂ ಮಾತನಾಡಲಾರೆವು. ಪಕ್ಕದ ಮನೆಯವರೊಂದಿಗೆ ಹರಟೆ ಹೊಡೆಯಲಾರೆವು. ಯಾಕೆಂದರೆ ಯಾರಿಗೆ ಗೊತ್ತು, ಅವರ ಮನೆಯ ಯಾವ ಸದಸ್ಯ ಹೊರಹೋಗಿ ಕೊರೋನಾ ಅಂಟಿಸಿಕೊAಡು ಬಂದಿದ್ದಾನೆಯೋ ಎಂಬ ಭಯ. ಇದರ ನಡುವೆ ಸಾವಿರಗಟ್ಟಲೆ ಹೆಣ ಸಂಪಾದಿಸುವ ಸಾವು ಮಾತ್ರ ಥೇಟ್ ರ‍್ಯಾದಿ ಕಳೆದುಕೊಂಡ ಭಿಕಾರಿ. ಅದೆಷ್ಟೋ ಕೋಟಿಗಳ ಒಡೆಯನಾದ ಮುಂಬೈನ ಒಬ್ಬ ಕೊರೋನಾದಿಂದ ಸತ್ತ ನಂತರ ಅವನ ಹೆಣವನ್ನು ಮನೆಯ ಗೇಟಿನ ಎದುರು ಬಿಸಾಡಿ ಹೋಗಿದ್ದಂತಹ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಾಗ ಈ ಸಾವು ಅದೆಷ್ಟು ಭೀಕರ ಎನ್ನಿಸಿಬಿಟ್ಟಿದ್ದಂತೂ ಸುಳ್ಳಲ್ಲ. ಹೀಗಾಗಿ ಈ ಸಂದರ್ಭದಲ್ಲಿ ನಾನು ಹೋದಮೇಲೆ ಇನ್ನೂ ಇರಬೇಕಿತ್ತು ಎನ್ನುವ ನಿಮ್ಮ ನಂಬಿಕೆಯೇ ಸಾರ್ಥಕ ಬದುಕಿನ ಕವಿತೆ ನಾವು ಸತ್ತ ನಂತರ ನಮ್ಮನ್ನು ಕ್ಷಣಮಾತ್ರವಾದರೂ ನೆನಪಿಸಿಕೊಂಡು ಇನ್ನೂ ಇರಬೇಕಿತ್ತು ಎಂದು ಯಾರಾದರೂ ಮನಃಪೂರ್ವಕವಾಗಿ ಅಂದುಕೊAಡರೆ ಅದೇ ದೊಡ್ಡ ಶೃದ್ಧಾಂಜಲಿ. ಇದರ ಹೊರತಾಗಿ ಮಾಡುವ ಯಾವ ಧಾರ್ಮಿಕ ಶ್ರಾದ್ಧ, ತಿಥಿಗಳೂ ನನ್ನನ್ನು ಈ ಇಹಲೋಕದಿಂದ ಮುಕ್ತಗೊಳಿಸಲಾರದು.    ಕವಿತೆ ಬರೆಯುವುದು ಎಂದರೆ ಮರ‍್ನಾಲ್ಕು ಪುಟದ ಗದ್ಯ ಕವನ ಬರೆಯುವ ನನ್ನಂಥವರಿಗೆ ನಾಲ್ಕೇ ಸಾಲಿನಲ್ಲಿ ಹೇಳಬೇಕಾದುದ್ದನ್ನೆಲ್ಲ ಓದುಗರೆದೆಗೆ ದಾಟಿಸುವುದು ಒಂದು ಅಚ್ಚರಿಯ ವಿಷಯವೇ ಸರಿ.

ಬಾಗಿಲುಗಳ ಆಚೀಚೆ ಬಾಗಿಲುಗಳ ಆಚೀಚೆ ಏನೆಲ್ಲ ಇರಬಹುದು! ಹುಟ್ಟಿದ ಭಾವನೆಗಳನ್ನೆಲ್ಲ ಹುಷಾರಾಗಿ ನಿರ್ವಹಿಸುವ ಮನಸ್ಸಿನಂತೆಯೇ ಬಾಗಿಲುಗಳು ಕೂಡಾ. ಅಗತ್ಯಕ್ಕೆ, ಅವಶ್ಯಕತೆಗೆ ಅನುಗುಣವಾಗಿ ತೆರೆದುಕೊಳ್ಳುವ ಒಂದೊಂದು ಬಾಗಿಲಿಗೂ ಅದರದೇ ಆದ ಪುಟ್ಟ ಹೃದಯವೊಂದು ಇರಬಹುದು; ಆ ಹೃದಯದ ಬಡಿತಗಳೆಲ್ಲವೂ ಮನೆಯೊಳಗಿನ ಮೌನವನ್ನೋ, ಅಂಗಡಿಗಳ ವ್ಯವಹಾರವನ್ನೋ, ಸಿನೆಮಾ ಹಾಲ್ ನ ಕತ್ತಲೆಯನ್ನೋ, ರಸ್ತೆಯೊಂದರ ವಾಹನಗಳ ವೇಗವನ್ನೋ ತಮ್ಮದಾಗಿಸಿಕೊಳ್ಳುತ್ತ ಏರಿಳಿಯುತ್ತಿರಬಹುದು. ಹೀಗೆ ಎಲ್ಲ ಪ್ರಾಪಂಚಿಕ ನೋಟ-ಅನುಭವಗಳನ್ನು ತಮ್ಮದಾಗಿಸಿಕೊಳ್ಳುವ ಬಾಗಿಲುಗಳಿಗೆ ಒಮ್ಮೊಮ್ಮೆ ಕೃಷ್ಣ-ರಾಧೆಯರ, ಶಿವ-ಪಾರ್ವತಿಯರ ಹೃದಯಗಳೂ ಅಂಟಿಕೊಂಡು ಈ ಬಾಗಿಲು ಎನ್ನುವ ವಿಸ್ಮಯದ ಜಗತ್ತು ವಿಸ್ತರವಾಗುತ್ತ ಹೋಗುತ್ತದೆ. ಅವರವರ ಕಲ್ಪನೆಗಳಿಗನುಸಾರವಾಗಿ ತೆರೆದುಕೊಳ್ಳುವ ಆ ಜಗತ್ತಿನಲ್ಲಿ ವೆಲ್ ಕಮ್ ಎಂದು ಸ್ವಾಗತಿಸುವ ಡೋರ್ ಮ್ಯಾಟ್ ನಿಂದ ಹಿಡಿದು ನೀಳವಾದ ಬಳ್ಳಿಯ ನೇಯ್ಗೆಗಳ ಫ್ಲೋರ್ ಕುಷನ್ ಗಳವರೆಗೂ ಹೊಸಹೊಸ ಸ್ಪರ್ಶಗಳು ನಿಲುಕುತ್ತವೆ; ಚುಕ್ಕಿಯಿಟ್ಟು ಎಳೆದ ರಂಗೋಲಿಯ ಸಾಲುಗಳ ಮಧ್ಯೆ ಹುಟ್ಟಿದ ಹೂವೊಂದು ಡಿಸೈನರ್ ಬ್ಲೌಸ್ ಗಳನ್ನು ಅಲಂಕರಿಸುತ್ತದೆ; ತೋರಣದೊಂದಿಗೆ ತೂಗುವ ಮಲ್ಲಿಗೆ ಮಾಲೆಯ ಗಂಧ ಗಾಳಿ ಹರಿದಲ್ಲೆಲ್ಲ ಹರಿದು ಹೃದಯಗಳನ್ನು ಅರಳಿಸುತ್ತದೆ.           ಈ ಹೃದಯಗಳಿಗೂ ಬಾಗಿಲುಗಳಿಗೂ ಒಂದು ರೀತಿಯ ವಿಶಿಷ್ಟವಾದ ಸಂಬಂಧವಿರುವಂತೆ ಭಾಸವಾಗುತ್ತದೆ. ಈ ಸಂಬಂಧವನ್ನು ಮನುಷ್ಯ ಸಹಜವಾದ ರಾಗ-ದ್ವೇಷಗಳನ್ನೊಳಗೊಂಡ ಎಲ್ಲ ಭಾವನೆಗಳೂ ಒಂದಿಲ್ಲೊಂದು ರೂಪದಲ್ಲಿ ಸಲಹುತ್ತಿರುತ್ತವೆ. ಸಂಜೆಯ ಸಮಯದಲ್ಲೊಮ್ಮೆ ಬಾಲ್ಯವನ್ನು ಸುಂದರವಾಗಿ ರೂಪಿಸಿದ ಪ್ರೈಮರಿಯ ಅಥವಾ ಹೈಸ್ಕೂಲಿನ ಅಂಗಳದಲ್ಲಿ ಹೋಗಿ ನಿಂತರೆ ಮುಚ್ಚಿದ ಬಾಗಿಲುಗಳ ಹಿಂದಿರುವ ಅದೆಷ್ಟೋ ಬಗೆಬಗೆಯ ಭಾವನೆಗಳು ಹೃದಯವನ್ನು ತಾಕುತ್ತವೆ. ಮನೆಯಿಂದ ಶಾಲೆಯವರೆಗಿನ ದೂರವನ್ನು ಇದ್ದೂ ಇಲ್ಲದಂತಾಗಿಸಿದ ಗೆಳತಿಯರ ಗುಂಪು, ಪೇಪರಿನಲ್ಲಿ ಸುತ್ತಿ ಕಂಪಾಸು ಬಾಕ್ಸಿನಲ್ಲಿ ಭದ್ರವಾಗಿಟ್ಟಿದ್ದ ಎರಡೇ ಎರಡು ಪೆಪ್ಪರಮೆಂಟುಗಳನ್ನು ಶರ್ಟಿನ ಮಧ್ಯದಲ್ಲಿಟ್ಟು ಎಂಜಲು ತಾಗದಂತೆ ಚೂರು ಮಾಡಿ ಎಲ್ಲರಿಗೂ ಹಂಚುತ್ತಿದ್ದ ಎರಡನೇ ಕ್ಲಾಸಿನ ಹುಡುಗ, ಮಾರ್ಕ್ಸ್ ಕಾರ್ಡುಗಳಿಂದ ಹಿಡಿದು ಶಾಲೆಯ ಜಾತಕವನ್ನೆಲ್ಲ ಬಚ್ಚಿಟ್ಟುಕೊಂಡಿರುತ್ತಿದ್ದ ದೊಡ್ಡದೊಡ್ಡ ಕೀಗೊಂಚಲುಗಳ ಕಬ್ಬಿಣದ ಕಪಾಟು, ತೆರೆದ ಕಿಟಕಿಯ ಬಾಗಿಲುಗಳಿಂದ ನುಸುಳಿ ನೋಟ್ ಬುಕ್ ನ ಪುಟಗಳನ್ನು ನೆನೆಸುತ್ತಿದ್ದ ಮಳೆಹನಿಗಳು, ಹೀಗೆ ಮುಚ್ಚಿದ ಬಾಗಿಲಾಚೆಗಿನ ನೆನಪುಗಳೆಲ್ಲವೂ ವಿಧವಿಧದ ಭಾವನೆಗಳನ್ನು ಹೊತ್ತು ಅಂಗಳಕ್ಕಿಳಿಯುತ್ತವೆ. ಆ ಎಲ್ಲ ಭಾವನೆಗಳನ್ನು ಹೊತ್ತ ಹೃದಯ ಭಾರವಾಗುವುದು ಅಥವಾ ಹೃದಯದ ಭಾರವನ್ನೆಲ್ಲ ಅಂಗಳದಲ್ಲಿಳಿಸಿ ಹಗುರವಾಗುವುದು ಅವರವರ ಗ್ರಹಿಕೆಗಳನ್ನು ಅವಲಂಬಿಸಿರುವಂಥದ್ದು.           ಈ ಗ್ರಹಿಕೆ ಎನ್ನುವುದು ಕೆಲವೊಮ್ಮೆ ಯಾವ ತರ್ಕಕ್ಕೂ ನಿಲುಕದೆ ತನ್ನ ಪಾಡಿಗೆ ತಾನು ವಿಹರಿಸುತ್ತ, ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತದೆ. ದೇವರ ಕುರಿತಾಗಿ ಒಬ್ಬೊಬ್ಬರ ಗ್ರಹಿಕೆಯೂ ಒಂದೊಂದು ತೆರನಾದದ್ದು. ಭಕ್ತಿರಸವನ್ನೇ ಗ್ರಹಿಕೆಯ ಅಂತಸ್ಸಾರವನ್ನಾಗಿಸಿಕೊಂಡ ಭಕ್ತನೊಬ್ಬ ತನ್ನ ದೈನಂದಿನ ಚಟುವಟಿಕೆಗಳೆಲ್ಲವನ್ನೂ ಬೇಸರವಿಲ್ಲದೆ ದೇವರಿಗೆ ಅರ್ಪಿಸಬಹುದು; ತನ್ನೆಲ್ಲ ಗ್ರಹಿಕೆಗಳ ಮೇಲೆ ನಿಯಂತ್ರಣ ಸಾಧಿಸಿದವನಿಗೆ ದೇವರ ಪರಿಕಲ್ಪನೆ ಕೇವಲ ನೆಮ್ಮದಿಯ ವಿಷಯವಾಗಿರಬಹುದು; ನಾಸ್ತಿಕನಿಗೆ ದೇವರು ಎನ್ನುವುದೊಂದು ಮೂರ್ಖತನದ ಆಲೋಚನೆಯೆನ್ನಿಸಬಹುದು. ಆದರೆ ದೇವಸ್ಥಾನದ ಗರ್ಭಗುಡಿಯ ಮುಚ್ಚಿದ ಬಾಗಿಲುಗಳ ಎದುರು ನಿಂತು ಬಾಗಿಲುಗಳು ತೆರೆಯುವ ಸಮಯಕ್ಕಾಗಿ ಕಾದುನಿಂತಾಗ, ವಿಚಿತ್ರವಾದ ಭಯ-ಭಕ್ತಿಗಳೆರಡೂ ಕೂಡಿದ ಭಾವನೆಯೊಂದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಹಾಗೆ ಕಾದುನಿಂತ ಸಮೂಹದಲ್ಲಿ ಹೊಸದಾಗಿ ಮದುವೆಯಾದ ಜೋಡಿಯೊಂದು ನಸುನಾಚಿ ನಿಂತಿರುತ್ತದೆ; ಹರಕೆ ಹೊತ್ತು ಮಗುವನ್ನು ಪಡೆದ ತಾಯಿಯೊಬ್ಬಳು ಮಗುವಿನೊಂದಿಗೆ ಕೈ ಜೋಡಿಸಿ ನಿಂತಿರುತ್ತಾಳೆ; ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ಔಷಧಿಗಳ ಕೈಚೀಲದೊಂದಿಗೆ ಕಳವಳದಲ್ಲಿಯೇ ಕಾಯುತ್ತಿರುತ್ತಾನೆ; ನಾಸ್ತಿಕನಾದ ಪತ್ರಿಕಾ ವರದಿಗಾರನೊಬ್ಬ ದೇವಸ್ಥಾನದ ಬಗ್ಗೆ ವರದಿಯೊಂದನ್ನು ಬರೆಯಲು ದೇವರ ಮುಖದರ್ಶನಕ್ಕಾಗಿ ಅದೇ ಸಾಲಿನಲ್ಲಿ ನಿಂತಿರುತ್ತಾನೆ. ಎಲ್ಲ ನಿರೀಕ್ಷೆಗಳ ಏಕೈಕ ಉತ್ತರವೆನ್ನುವಂತೆ ತೆರೆದುಕೊಳ್ಳುವ ಬಾಗಿಲುಗಳು ಎಲ್ಲರಿಗೂ ಅವರವರಿಗೆ ಬೇಕಾದ ಸಮಾಧಾನವನ್ನು ಒದಗಿಸುತ್ತವೆ. ಮುಚ್ಚಿದ ಬಾಗಿಲುಗಳ ಹಿಂದೆ ಇದ್ದ ದೇವರು ಮುಂಭಾಗದಲ್ಲಿ ಕಾಯುತ್ತಿದ್ದವರೊಂದಿಗೆ ಮುಖಾಮುಖಿಯಾಗಿ ಎಲ್ಲರ ಮನಸ್ಸಿನ ತಲ್ಲಣಗಳನ್ನೂ ತನ್ನದಾಗಿಸಿಕೊಳ್ಳುತ್ತಾನೆ.           ಹೀಗೆ ಎಲ್ಲರ ತಲ್ಲಣಗಳನ್ನು ತಣಿಸುವ, ಕಳವಳಗಳನ್ನು ಕಡಿಮೆ ಮಾಡುವ, ಸಮಾಧಾನದ ಸಾಧನಗಳಾಗುವ ಬಾಗಿಲುಗಳು ತಮ್ಮ ಹೃದಯದ ಭಾರವನ್ನೆಂದೂ ಇನ್ನೊಬ್ಬರಿಗೆ ವರ್ಗಾಯಿಸುವುದಿಲ್ಲ. ಗಾಳಿಯೊಂದಿಗೆ ಬಾಗಿಲವರೆಗೂ ತಲುಪುವ ಮಳೆಯ ನೀರು ಒಳಗಿಳಿಯದಂತೆ ತನ್ನೆಲ್ಲ ಶಕ್ತಿಯನ್ನೂ ಬಳಸಿ ತಡೆಹಿಡಿಯುವ ಬಾಗಿಲು ಮನೆಯೊಳಗಿನ ಜೀವಗಳನ್ನು ಬೆಚ್ಚಗಿಡುತ್ತದೆ; ಕೊರೆವ ಚಳಿಯನ್ನು, ಬೇಸಿಗೆಯ ಸೆಕೆಯನ್ನು ತನ್ನದಾಗಿಸಿಕೊಂಡು ತನ್ನನ್ನು ನಂಬಿದವರ ನಂಬಿಕೆಯನ್ನು ಕಾಪಾಡುತ್ತ ದೇವನೊಬ್ಬನ ಇರುವಿಕೆಯ ಸಾಕ್ಷಾತ್ಕಾರವನ್ನು ಗಟ್ಟಿಗೊಳಿಸುತ್ತದೆ. ನಂಬಿಕೆಯ ಪರಿಕಲ್ಪನೆಯೂ ಬಾಗಿಲುಗಳೊಂದಿಗೆ ತನ್ನದೇ ಆದ ಸಂಬಂಧವನ್ನು ಬೆಳಸಿಕೊಂಡಿದೆ. ರಾತ್ರಿಯಾಯಿತೆಂದು ಕದ ಮುಚ್ಚುವ ಪ್ರತಿ ಮನಸ್ಸಿನಲ್ಲಿಯೂ ಬೆಳಗು ಮೂಡಿ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಕೆಲಸ ಮಾಡಿದರೆ, ನಗರದ ಬಾಡಿಗೆ ಮನೆಯಲ್ಲಿನ ಗೃಹಿಣಿಯೊಬ್ಬಳು ಗಂಡನನ್ನು ಕೆಲಸಕ್ಕೆ ಕಳುಹಿಸಿ ಬಾಗಿಲು ಮುಚ್ಚಿ ಸಂಜೆ ಆತ ಮನೆಗೆ ಬರುವ ನಂಬಿಕೆಯಲ್ಲಿಯೇ ತರಕಾರಿ ಹೆಚ್ಚುತ್ತಾಳೆ; ಮಗುವನ್ನು ಹತ್ತಿಸಿಕೊಂಡ ಸ್ಕೂಲ್ ವ್ಯಾನಿನ ಬಾಗಿಲಿನೊಂದಿಗೆ ಮಗುವಿನ ಭವಿಷ್ಯದ ನಂಬಿಕೆಯೊಂದು ಚಲಿಸಿದರೆ, ದಿನಸಿಯಂಗಡಿಯ ಬಾಗಿಲು ತೆರೆವ ಹುಡುಗನೊಬ್ಬ ಗಿರಾಕಿಗಳನ್ನು ನಂಬಿಕೊಂಡು ಅಗರಬತ್ತಿಯನ್ನು ಹಚ್ಚುತ್ತಾನೆ; ಮಲ್ಟಿಪ್ಲೆಕ್ಸ್ ನ ಎಸಿ ಥಿಯೇಟರಿನ ಬಾಗಿಲುಗಳು ಯಾರೋ ಸಮುದ್ರದಂಚಿಗೆ ಕೂತು ಬರೆದ ಕಥೆಯನ್ನು ನಂಬಿಕೊಂಡರೆ, ಬಂಗಾರದಂಗಡಿಯ ಬಾಗಿಲುಗಳು ಇನ್ಯಾರದೋ ಮದುವೆಯನ್ನು ನಂಬಿಕೊಂಡು ತೆರೆದುಕೊಳ್ಳುತ್ತವೆ. ಹೀಗೆ ನೇರ ಸಂಬಂಧವೂ ಇಲ್ಲದ, ಪರಿಚಯವೂ ಇಲ್ಲದ ಅದೆಷ್ಟೋ ನಂಬಿಕೆಗಳನ್ನು ಬಾಗಿಲುಗಳು ಅರಿವಿಲ್ಲದೆಯೇ ಸಲಹುತ್ತಿರುತ್ತವೆ.           ಸಂಬಂಧಗಳನ್ನು ಬಾಗಿಲುಗಳು ಪೊರೆಯುವ ರೀತಿಯೂ ವಿಶಿಷ್ಟವಾದದ್ದು. ಹೆರಿಗೆ ಆಸ್ಪತ್ರೆಯ ಮುಚ್ಚಿದ ಬಾಗಿಲುಗಳು ತೆರೆಯುತ್ತಿದ್ದಂತೆಯೇ, ಮಗುವಿನ ಅಳುವೊಂದು ಅಪ್ಪ-ಮಗುವಿನ ಸಂಬಂಧವನ್ನು ಹುಟ್ಟುಹಾಕುತ್ತದೆ. ಹಾಗೆ ಹುಟ್ಟಿದ ಸಂಬಂಧ ಮನೆಯ ಬಾಗಿಲನ್ನು ಹಾದು, ಶಾಲೆಯ ಬಾಗಿಲನ್ನು ತಲುಪಿ, ಕಾಲೇಜು-ಯೂನಿವರ್ಸಿಟಿಗಳ ಕದ ತಟ್ಟಿ, ಹೊಸಹೊಸ ಸಂಬಂಧಗಳೊಂದಿಗೆ ಬೆಸೆದುಕೊಳ್ಳುತ್ತ ಹೊಸತನವನ್ನು ಕಂಡುಕೊಳ್ಳುತ್ತದೆ. ಅಳುತ್ತಲೇ ಮಗಳನ್ನು ಗಂಡನ ಮನೆಯ ಬಾಗಿಲಿಗೆ ಕಳುಹಿಸಿಕೊಡುವ ಅಪ್ಪ, ನಗುನಗುತ್ತ ಸೊಸೆಯನ್ನು ತೆರೆದ ಬಾಗಿಲಿನಿಂದ ಸ್ವಾಗತಿಸುತ್ತಾನೆ. ಹೀಗೆ ಹೆರಿಗೆ ಆಸ್ಪತ್ರೆಯ ಬಾಗಿಲಿನಿಂದ ಹೊರಬಂದ ಮಗುವಿನ ಅಳು ಸಂತೋಷವನ್ನು ಹಂಚಿ, ಬೆಳವಣಿಗೆ-ಬದಲಾವಣೆಗಳನ್ನು ತನ್ನದಾಗಿಸಿಕೊಳ್ಳುತ್ತ, ಸಂಬಂಧಗಳಿಗೊಂದು ಹೊಸ ಸ್ವರೂಪವನ್ನು ಒದಗಿಸುತ್ತದೆ. ಆಫೀಸಿನ ಕೊಟೇಷನ್, ಪ್ರೊಜೆಕ್ಟ್ ಗಳ ಗೌಪ್ಯತೆಯನ್ನು ಕಾಪಾಡಲು ತಾವಾಗಿಯೇ ಮುಚ್ಚಿಕೊಳ್ಳುವ ಬಾಗಿಲುಗಳ ಆಚೀಚೆ ಅಕ್ಕ-ತಮ್ಮಂದಿರು, ಜೀವದ ಗೆಳತಿಯರು, ಸಿಗರೇಟಿಗೆ ಜೊತೆಯಾಗುವ ಸ್ನೇಹಿತರು ವಯಸ್ಸು ಮರೆತು ಒಂದಾಗುತ್ತಾರೆ; ಲಿವ್ ಇನ್ ಸಂಬಂಧಗಳು, ದಾಂಪತ್ಯಗಳು, ಭಗ್ನಪ್ರೇಮಗಳು ಎಲ್ಲವುಗಳಿಗೂ ಬಾಗಿಲುಗಳು ತೆರೆದ ಹೃದಯದಿಂದ ಸ್ಪಂದಿಸುತ್ತವೆ. ರೆಸ್ಟ್ ರೂಮಿನ ಮುಚ್ಚಿದ ಬಾಗಿಲುಗಳ ಹಿಂದೆ ಉದ್ದನೆಯ ಕನ್ನಡಿಯ ಮುಂದೆ ಲಿಪ್ ಸ್ಟಿಕ್ ಸರಿಮಾಡಿಕೊಳ್ಳುತ್ತ ನಿಂತ ಹುಡುಗಿಯೊಬ್ಬಳು ವೀಕೆಂಡ್ ಪಾರ್ಟಿಯ ಬಗ್ಗೆ ಯೋಚಿಸಿದರೆ, ಕ್ಯಾಂಟೀನಿನ ಅಡುಗೆಮನೆಯ ಬಾಗಿಲಿನ ಹಿಂದೆ ಮಸಾಲೆದೋಸೆ ರೆಡಿಯಾಗುತ್ತಿರುತ್ತದೆ. ಶಿಫ್ಟ್ ಮುಗಿದು ಫ್ಲೋರಿನ ಲೈಟುಗಳೆಲ್ಲ ತಾವಾಗಿಯೇ ಆರಿಹೋದ ಮೇಲೂ ಬಾಗಿಲುಗಳು ಮಾತ್ರ ಡ್ರಾದಲ್ಲಿನ ಡಾಕ್ಯುಮೆಂಟುಗಳನ್ನು, ಮೀಟಿಂಗ್ ರೂಮಿನ ಮಾತುಕತೆಗಳನ್ನು ಜತನದಿಂದ ಕಾಪಾಡುತ್ತ ಮುಂದಿನ ಪಾಳಿಗಾಗಿ ಕಾಯುತ್ತಿರುತ್ತವೆ. ಆಚೀಚೆ ಸರಿದಾಡುವ ಶಾಪಿಂಗ್ ಮಾಲ್ ನ ಗಾಜಿನ ಬಾಗಿಲುಗಳ ಹಿಂದೆ ಅತ್ತರಿನ ಬಾಟಲಿಯೊಂದು ಗಿಫ್ಟಾಗಿ ಸಂಬಂಧಗಳನ್ನು ಸಲಹಿದರೆ, ಬ್ರ್ಯಾಂಡೆಡ್ ಚಪ್ಪಲಿಯೊಂದು ಪಾದಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತದೆ; ವಿದೇಶದ ಕನಸು ಹೊತ್ತ ಕಾರ್ಪೊರೇಟ್ ಉದ್ಯೋಗಿಯೊಬ್ಬ ಟ್ರಾವೆಲ್ ಬ್ಯಾಗ್ ಖರೀದಿಸಿದರೆ, ನಿವೃತ್ತ ಪ್ರಾಧ್ಯಾಪಕರೊಬ್ಬರು ಪುಸ್ತಕದಂಗಡಿಯ ಬಾಗಿಲನ್ನು ತಲುಪುತ್ತಾರೆ. ಹೀಗೆ ಹೊಸ ಸಂಬಂಧಗಳಿಗೆ ತೆರೆದುಕೊಳ್ಳುತ್ತ, ಮುಗಿದುಹೋದ ಸಂಬಂಧಗಳ ನೆನಪುಗಳನ್ನು ನವೀಕರಿಸುತ್ತ, ಅಗತ್ಯಬಿದ್ದಾಗ ಗುಟ್ಟುಗಳನ್ನು ಕಾಪಾಡುತ್ತ, ತಮ್ಮ ಕರ್ತವ್ಯಗಳನ್ನೆಲ್ಲ ಚಾಚೂತಪ್ಪದೆ ನಿರ್ವಹಿಸುವ ಬಾಗಿಲುಗಳ ಆಚೀಚೆ ಬದುಕುಗಳು ನಿರಾಯಾಸವಾಗಿ ಕಾಲು ಚಾಚುತ್ತವೆ. ******************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಯಾಕೀ ಪುನರುಕ್ತಿ? ಅಭಿಮಾನಿ ಓದುಗರೊಬ್ಬರು ಪತ್ರ ಬರೆದು ತಮ್ಮ ಪ್ರತಿಕ್ರಿಯೆ ತಿಳಿಸಲು ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟದ್ದು ತಪ್ಪಾಯಿತು. ಅವರು ಯಾವಾಗೆಂದರೆ ಆವಾಗ ಸಣ್ಣಸಣ್ಣ ವಿಚಾರಕ್ಕೆಲ್ಲ ಕರೆಯಲಾರಂಭಿಸಿದರು. ಪ್ರತಿಸಲವೂ ಅರ್ಧ ತಾಸು ಕಮ್ಮಿಯಿಲ್ಲದ ಮಾತು. ನಿಜವಾದ ಸಮಸ್ಯೆ ಸಮಯದ್ದಾಗಿರಲಿಲ್ಲ. ಅವರು ಒಂದೇ ಅಭಿಪ್ರಾಯವನ್ನು ಬೇರೆಬೇರೆ ಮಾತುಗಳಲ್ಲಿ ಹೇಳುತ್ತಿದ್ದರು. ಸೂಚ್ಯವಾಗಿ ಹೇಳಿನೋಡಿದೆ. ಮುಟ್ಟಿದಂತೆ ಕಾಣಲಿಲ್ಲ. ಫೋನು ಎತ್ತಿಕೊಳ್ಳುವುದನ್ನು ನಿಲ್ಲಿಸಿದೆ. ಕಡೆಗೆ ನಂಬರ್ ಬ್ಲಾಕ್ ಮಾಡಬೇಕಾಯಿತು. ಮತ್ತೊಬ್ಬ ನಿವೃತ್ತ ಶಿಕ್ಷಕರು ಸಜ್ಜನರು ಹಾಗೂ ಶಿಷ್ಯವತ್ಸಲರು. ಹಿಂದೆಂದೊ ನಡೆದದ್ದನ್ನು ಇಸವಿ ದಿನ ಸಮಯ ಸಮೇತ ನೆನಪಿಟ್ಟಿದ್ದವರು. ಶಿಷ್ಯರು ಭೇಟಿಯಾಗಲು ಹೋದಾಗೆಲ್ಲ ಹಿಂದೆ ಹೇಳಿದ್ದನ್ನು ಹೊಸದಾಗೆಂಬಂತೆ ಹೇಳುತ್ತಿದ್ದರು. ನಿವೃತ್ತರಿಗೆ ಹೆಚ್ಚು ಟೈಮಿರುವುದರಿಂದ ವಿಷಯವನ್ನು ಚೂಯಿಂಗ್ ಗಮ್ಮಿನಂತೆ ಎಳೆದೆಳೆದು ವಿವರಿಸುವ ಕುಶಲತೆ ಗಳಿಸಿಕೊಂಡಿರುತ್ತಾರೆ. ನಮ್ಮ ನಂಟರಲ್ಲೂ ಇಂಥ ಒಬ್ಬರಿದ್ದಾರೆ. ಅವರು ಮನೆಗೆ ಆಗಮಿಸುತ್ತಾರೆಂದರೆ ಆತಂಕದಿಂದ ಕಿವಿಗೆ ಇಟ್ಟುಕೊಳ್ಳಲು ಅರಳೆ ಪಿಂಡಿ ಹುಡುಕುತ್ತಿದ್ದೆವು. ಅವರು ಝಂಡಾ ಹಾಕಿರುವಾಗ ಇಡೀ ದಿನ ಏನಾದರೊಂದು ವಿಷಯ ತೆಗೆದು ಸುದೀರ್ಘ ಮಾತಾಡುತ್ತಿದ್ದರು. ಹಳ್ಳಿಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಸಂಚಿಯೇ ಅವರಲ್ಲಿರುತ್ತಿತ್ತು. ಸಮಸ್ಯೆಯೆಂದರೆ, ಬೆಳಿಗ್ಗೆ ಹೇಳಿದ್ದನ್ನೇ ಸಂಜೆಗೂ ನಿರೂಪಿಸುತ್ತಿದ್ದರು. ಅವರಿದ್ದ ಸ್ಥಳದಲ್ಲಿ ಅವರ ಭಾವನೆ ಚಿಂತನೆ ಅನುಭವ ಹಂಚಿಕೊಳ್ಳಲು ಜನರೇ ಇರುತ್ತಿರಲಿಲ್ಲ. ಹೊಸಬರು ಸಿಕ್ಕರೆ ಅವರಿಗೆ ಹತ್ತುನಾಲಗೆ ಬಂದಂತಾಗುತ್ತಿತ್ತು. ಈ ಪುನರುಕ್ತಿ ವೈಯಕ್ತಿಕ ಸ್ವಭಾವದಿಂದಲ್ಲ, ಸನ್ನಿವೇಶದಿಂದ ಹುಟ್ಟಿದ್ದು. ಪುನರುಕ್ತಿಯ ಸದ್ಗುಣ ಶಿಕ್ಷಕರಲ್ಲೂ ಇರುವುದುಂಟು. ಒಂದು ಗಂಟೆ ತರಗತಿ ನಿರ್ವಹಿಸಲು ಬೇಕಾದ ಸಿದ್ಧತೆಯಿಲ್ಲದೆ ಕೈಬೀಸಿಕೊಂಡು ಆಗಮಿಸುವ ಇವರು, ಒಂದೆರಡು ಪಾಯಿಂಟುಗಳನ್ನೇ ವಿವಿಧ ಬಗೆಯಲ್ಲಿ ದೋಸೆಯಂತೆ ಮಗುಚಿ ಹಾಕುವರು. ಇವರ ಕ್ಲಾಸಿನಲ್ಲಿ ಹತ್ತುನಿಮಿಷ ಹೊರಗೆದ್ದು ಹೋಗಿ ಬಂದರೆ ಬಹಳ ಲುಕ್ಸಾನಿಲ್ಲ. ಇವರ ಪುನರುಕ್ತಿಗೆ ಕ್ಷಮೆಯಿಲ್ಲ. ಇದು ಸನ್ನಿವೇಶದಿಂದಲ್ಲ, ಕರ್ತವ್ಯಗೇಡಿತನದಿಂದ ಬಂದಿದ್ದು. ಕೆಲವು ಶಿಕ್ಷಕರು ಜೋಕುಗಳನ್ನು ಪುನರುಕ್ತಿಸುವುದುಂಟು. ವಿದ್ಯಾರ್ಥಿಗಳು ನಗುವುದು ಜೋಕಿಗಲ್ಲ, ಈ ವರ್ಷ ಎಷ್ಟನೇ ಸಲ ಬಂದಿದೆ ಎಂದು ಲೆಕ್ಕಹಾಕಿ. 24 ಇಂಟು 7 ಟಿವಿಗಳದ್ದೂ ಇದೇ ಕಷ್ಟ. ಒಂದೇ ಸುದ್ದಿಯನ್ನು ಹತ್ತಾರು ಬಗೆಯಲ್ಲಿ ತೋರಿಸುತ್ತ ಪ್ರಾಣ ತಿನ್ನುತ್ತಿರುತ್ತಾರೆ. ಅವರಿಗೆ ದಿನದ ಸುದೀರ್ಘ ಕಾಲವನ್ನು ತುಂಬುವ ಅನಿವಾರ್ಯತೆ.ಕೆಲವು ಊರುಗಳಲ್ಲಿ ನಿಲಯದ ಕಲಾವಿದರು ವಾಗ್ ಭಯೋತ್ಪಾದಕರೆಂದು ಹೆಸರಾಗಿದ್ದಾರೆ. ಅವರು ಒಳ್ಳೆಯ ವಾಗ್ಮಿಗಳೇ. ಮೊದಲ ಸಲ ಕೇಳುವವರಿಗೆ ಅವರ ವಾಕ್ಪಟುತ್ವ ಇಷ್ಟವೂ ಆಗುತ್ತದೆ. ಸ್ಥಳೀಯರ ಪಾಡು ಬೇರೆ. ಸದರಿಯವರ ಭಾಷಣದ ಸರದಿ ಬಂದಾಗ ಅವರಿಗೆ ಪ್ರಾಣಸಂಕಟ. ಅವರು ಭಾಷಣ ತಪ್ಪಿಸಿಕೊಳ್ಳುವ ಅನಂತ ತಂತ್ರಗಳನ್ನು ಹುಡುಕಿಕೊಂಡಿರುತ್ತಾರೆ ಕೂಡ. ಕೆಲವು ವಾಗ್ಮಿಗಳ ನೆನಪಿನ ಶಕ್ತಿಯೇ ಲೋಕದ ಪಾಲಿಗೆ ಶಾಪ. ಸಣ್ಣಸಣ್ಣ ವಿವರಗಳನ್ನು ನೆನಪಿಟ್ಟು ಹೇಳುವರು. ಟಿವಿಗಳಲ್ಲಿ ಕಾಣಿಸಿಕೊಳ್ಳುವ ನಗೆಹಬ್ಬದ ಕಲಾವಿದರಿಗೆ ಇದು ಬೃಹತ್ ಸಮಸ್ಯೆ. ಮಾತು ಪುನರುಕ್ತಿಯಾಗುತ್ತಿದೆ, ಬೇಸರ ತರಿಸುತ್ತಿದೆ ಎಂಬ ಆತ್ಮವಿಮರ್ಶೆ ಹೇಳುಗರಲ್ಲಿಲ್ಲದೆ ಹೋದರೆ ಕೇಳುಗರಾದರೂ ಏನು ಮಾಡಬೇಕು? ಪುನರುಕ್ತಿ ಮಾತಿಗಿಂತ ಬರೆಹದಲ್ಲಿ ದೊಡ್ಡಶಾಪ. ಒಮ್ಮೆ ನನ್ನದೊಂದು ಲೇಖನದಲ್ಲಿ 500 ಪದಗಳನ್ನು ತೆಗೆದು ಚಿಕ್ಕದಾಗಿಸಲು ಸಾಧ್ಯವೇ ಎಂದು ಸಂಪಾದಕರು ಸೂಚಿಸಿದರು. ಅಭಿಮಾನ ಭಂಗವಾಗಿ ಬೇಸರಿಸಿಕೊಂಡು ಕಡಿಮೆಗೊಳಿಸಿದೆ. ಇಳಿಸಿದ ಬಳಿಕ ಗೊತ್ತಾಯಿತು, 500 ಪದಗಳನ್ನು ಅನಗತ್ಯವಾಗಿ ಬಳಸಿದ್ದೆನೆಂದು. ಪುನರುಕ್ತಿ ಕ್ಲೀಷೆಗಳ ತಾಯಿ ಕೂಡ. ನಮ್ಮ ರಾಜಕಾರಣಿಗಳ ಬಾಯಲ್ಲಿ `ಷಡ್ಯಂತ್ರ’ ಎಂಬ ಪದ ಎಷ್ಟು ಸವೆದುಹೋಗಿದೆ? `ಎಲ್ಲರ ಚಿತ್ತ ದೆಹಲಿಯತ್ತ’ ಎಂಬ ಪ್ರಾಸಬದ್ಧ ವಾಕ್ಯ ಮೊದಲಿಗೆ ಚಂದವಾಗಿ ಕಂಡಿತ್ತು. ಅದನ್ನು ಮಾಧ್ಯಮಗಳು ಹೇಗೆ ಉಜ್ಜಿದವು ಎಂದರೆ, ಈಗದನ್ನು ಓದುವಾಗ ಯಾವ ಭಾವನೆಯೂ ಸ್ಫುರಿಸುವುದಿಲ್ಲ. ನನ್ನ ಸಹಲೇಖಕರೊಬ್ಬರು ನನ್ನದೊಂದು ಬರೆಹದಲ್ಲಿದ್ದ `ಅಮಾಯಕ’ ಎಂಬ ಪದಕ್ಕೆ ಪ್ರತಿಕ್ರಿಯಿಸುತ್ತ, ಮಾಧ್ಯಮಗಳು ಅತಿಯಾಗಿ ಬಳಸಿ ಸವೆಸಿರುವ ಪದಗಳಲ್ಲಿ ಇದೂ ಒಂದೆಂದು ಎಚ್ಚರಿಸಿದರು. ದೋಷ ಭಾಷೆಯದಲ್ಲ; ಬರೆಯುವವರ ಶಬ್ದದಾರಿದ್ರ್ಯದ್ದು. ವಿಚಾರಗಳನ್ನು ಪುನರುಕ್ತಿ ಮಾಡುವುದು ವೈಚಾರಿಕ ಬಡತನದ ಸಂಕೇತ ಕೂಡ. ಕಡಿಮೆ ಮಾತಲ್ಲಿ ಹೆಚ್ಚು ಅರ್ಥ ಹೊರಡಿಸಬಲ್ಲ ಕವಿ ಪಂಪ ತನ್ನನ್ನು `ಹಿತಮಿತ ಮೃದುವಚನ ಚತುರ’ನೆಂದು ಬಣ್ಣಿಸಿಕೊಂಡನು. ಶರಣರ ಮತ್ತು ಸರ್ವಜ್ಞನ ವಚನಗಳ ರೂಪವಿನ್ಯಾಸವೇ ಅತಿಮಾತುಗಳಿಂದ ತನ್ನನ್ನು ಪಾರುಗೊಳಿಸಿಕೊಂಡಿತು. ಈ ಮಾತನ್ನು ಷಟ್ಪದಿಗೆ ಸಾಂಗತ್ಯಕ್ಕೆ ಹೇಳುವಂತಿಲ್ಲ. ಅಲ್ಲಿನ ವಾಚಾಳಿತನ ಹಾಡಿಕೆಯಲ್ಲಿ ಮುಚ್ಚಿಹೋಗುತ್ತದೆ. ಸಂಕ್ಷಿಪ್ತವಾಗಿ ಬರೆಯುವುದು ಪುನರುಕ್ತಿ ಮತ್ತು ಶಿಥಿಲತೆ ತಡೆಯುವ ಒಂದು ಒಳೋಪಾಯ. ಒಂದೇ ವಿಚಾರವನ್ನು ಹಲವು ಕೃತಿಗಳಲ್ಲಿ ಬೇರೆಬೇರೆ ತರಹ ಬರೆದರೆ ಜಾಣ ಓದುಗರಿಗೆ ತಿಳಿದುಬಿಡುತ್ತದೆ. ಅಡಿಗರು ರಮ್ಯ ಸಂಪ್ರದಾಯದಲ್ಲಿ ಬರೆಯುತ್ತ ಬೇಸತ್ತು `ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು’ ಎಂದು ದುಗುಡಿಸಿದರು; `ನನ್ನ ನುಡಿಯೊಳಗೆ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’ ಎಂದೂ ನುಡಿದರು. ತಾವೇ ಕಂಡುಕೊಂಡ ಭಾಷೆಯಲ್ಲಿ ಅಭಿವ್ಯಕ್ತಿಸಲು ಬಯಸುವ ಎಲ್ಲರಿಗೂ ಪುನರುಕ್ತಿ ಶಾಪವಾಗಿ ಕಾಡುತ್ತದೆ. ಇದರ ಒದ್ದಾಟ ಲಂಕೇಶರ ಪತ್ರಿಕಾ ಟಿಪ್ಪಣಿಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ವಾಗ್ಮಿಗಳಿಗೆ ಅವರ ಹಿಂದಿನ ಭಾಷಣವೇ ಎದುರಾಳಿ; ಸೂಕ್ಷ್ಮ ಲೇಖಕರಿಗೆ ಹಿಂದಣ ಯಶಸ್ವೀ ಕೃತಿಯೇ ಹಗೆ. ಅವು “ಭಿನ್ನವಾಗಿ ಮಾತಾಡಲು ಬರೆಯಲು ಸಾಧ್ಯವೇ ನಿನಗೆ?” ಎಂದು ಸವಾಲು ಹಾಕುತ್ತಿರುತ್ತವೆ. ಸವಾಲನ್ನು ಎತ್ತಿಕೊಂಡರೆ ಹೊಸಸೃಷ್ಟಿ; ಇಲ್ಲದಿದ್ದರೆ ಹಳತನ್ನೇ ಹೊಸತೆಂಬ ಭ್ರಮೆಯಲ್ಲಿ ಒದಗಿಸುವ ಕರ್ಮ. ಎಲ್ಲ ದೊಡ್ಡ ಬರೆಹಗಾರಲ್ಲಿ ಜೀವನದರ್ಶನವೊಂದು ಪುನರುಕ್ತಿ ಪಡೆಯುತ್ತ ಬಂದಿರುತ್ತದೆ- ಕುವೆಂಪು ಅವರಲ್ಲಿ ವಿಶ್ವಮಾನವ ತತ್ವ, ಬೇಂದ್ರೆಯವರಲ್ಲಿ ಸಮರಸ ತತ್ವ, ಕಾರಂತರಲ್ಲಿ ಜೀವನತತ್ವ, ತೇಜಸ್ವಿಯವರಲ್ಲಿ ವಿಸ್ಮಯತತ್ವ ಇತ್ಯಾದಿ. ಈ ಮೂಲತತ್ವವು ಕಾಲಕಾಲಕ್ಕೆ ಒಳಗಿಂದಲೇ ಬೆಳೆಯುತ್ತಲೂ ಬಂದಿರುತ್ತದೆ. ಹೀಗಾಗಿ ಅದು ಶಾಪವಲ್ಲ. ಆದರೆ ಇದೇ ಲೇಖಕರು ತಮ್ಮ ಕೊನೆಗಾಲದಲ್ಲಿ ಈ ತತ್ವವನ್ನು ವಿಸಕನಗೊಳಿಸದೆ, ಸ್ಟೀರಿಯೊ ರೆಕಾರ್ಡಿನಂತೆ ಪುನರುಕ್ತಿಸುವ ಕಷ್ಟಕ್ಕೆ ಸಿಕ್ಕಿಕೊಳ್ಳುವುದುಂಟು.ಸರ್ಕಸ್ ಮಾಡುವವರಿಂದ ಹಿಡಿದು ಪೂಜಾರಿಕೆ, ಪಾಠ, ವ್ಯಾಪಾರ, ಡ್ರೈವಿಂಗ್, ಅಡುಗೆ, ಕಛೇರಿ ಕೆಲಸ ಮಾಡುವವರಿಗೆ ಒಂದೇ ನಮೂನೆಯ ಕೆಲಸವನ್ನು ದಿನವೂ ಮಾಡುತ್ತ ಏಕತಾನೀಯ ಜಡತೆ ಆವರಿಸುತ್ತದೆ. ಅವರು ಪುನರಾವರ್ತನೆಯನ್ನು ಹೇಗೆ ನಿಭಾಯಿಸುತ್ತಾರೆ? ಬಹುಶಃ ಅದಕ್ಕೆ ಅನಿವಾರ್ಯತೆಯಲ್ಲಿ ಹೊಂದಿಕೊಂಡಿರುತ್ತಾರೆ. ಸತತ ತರಬೇತಿಯಿಂದ ಪಡೆದ ಪರಿಣತಿಯೇ ಅಲ್ಲಿ ಸಿದ್ಧಿಯಾಗಿ ನಿಂತುಬಿಟ್ಟಿರುತ್ತದೆ. ಆದರೆ ಸೃಜನಶೀಲರು ಪುನರಾವರ್ತನೆಯ ಇಕ್ಕಟ್ಟು ಬಂದಾಗ ಪ್ರತಿಸಲವೂ ವಿಭಿನ್ನತೆ ತೋರಲು ಹೋರಾಡುತ್ತಾರೆ. ತಾವೇ ಕಟ್ಟಿದ ಚೌಕಟ್ಟುಗಳನ್ನು ಮುರಿಯುತ್ತಾರೆ. ತಲ್ಲಣಿಸುತ್ತಾರೆ.ಆಡಿದ್ದನ್ನೇ ಆಡುವವರ ಮಾತು-ಬರೆಹ ಬೋರು ಹೊಡೆಸಬಹುದು. ಅದು ಅಪಾಯವಲ್ಲ. ಆದರೆ ಭಾಷೆ, ಧರ್ಮ, ಸಮುದಾಯ, ದೇಶ, ಸಿದ್ಧಾಂತದ ನೆಲೆಯಲ್ಲಿ ವಿದ್ವೇಷ ಹುಟ್ಟಿಸುವ ರಾಜಕಾರಣದ ಪುನರುಕ್ತಿಗಳು ಅಪಾಯಕರ. ಇಲ್ಲಿ ಪುನರುಕ್ತಿ ಅರೆಸತ್ಯವನ್ನು ಪೂರ್ಣಸತ್ಯವೆಂದು ಸಮೂಹವನ್ನು ನಂಬಿಸುತ್ತದೆ. ಈ ಮನಶ್ಶಾಸ್ತ್ರೀಯ ಪ್ರಯೋಗವನ್ನು ಜರ್ಮನಿಯ ಫ್ಯಾಸಿಸ್ಟರು ಮಾಡಿದರು. ಇದಕ್ಕಾಗಿ ಹಿಟ್ಲರನ ಪ್ರಚಾರ ಮಂತ್ರಿ ಗೊಬೆಲ್ಸ್ ಪ್ರಸಿದ್ಧನಾಗಿದ್ದ. ಜಾಹಿರಾತುಗಳು ಪುನರುಕ್ತಿಯಾಗುವುದು ಇದೇ ತಂತ್ರದಿಂದ. ತತ್ವಪದಗಳಲ್ಲಿ, ಜನಪದ ಹಾಡುಗಳಲ್ಲಿ ಪಲ್ಲವಿಯಾಗಿ ಬರುವ ಪುನರುಕ್ತಿಗೆ ಬೇರೆ ಆಯಾಮವಿದೆ. ಪ್ರತಿ ಖಂಡ ಮುಗಿದ ಬಳಿಕ ಬರುವ ಪಲ್ಲವಿ ಹೊಸಹೊಸ ಅರ್ಥಗಳನ್ನು ಹೊಳೆಸುತ್ತದೆ. `ಬಿದಿರೇ ನೀನಾರಿಗಲ್ಲದವಳು’-ಶರೀಫರ ಈ ಪಲ್ಲವಿ ಗಮನಿಸಬೇಕು. ಹಾಡಿನ ಪ್ರತಿಹೋಳಿನ ಬಳಿಕ ಬರುತ್ತ ಇದು ನವೀನ ಅರ್ಥಗಳನ್ನು ಹುಟ್ಟಿಸುತ್ತ ಬೆರಗುಗೊಳಿಸುತ್ತದೆ. ಹಿಂದುಸ್ತಾನಿ ಸಂಗೀತದಲ್ಲೂ ಒಂದೇ ಚೀಸನ್ನು ಬೇರೆಬೇರೆ ಲಯವಿನ್ಯಾಸದಲ್ಲಿ ಅಭಿವ್ಯಕ್ತಿಸಲಾಗುತ್ತದೆ. ಪ್ರತಿಯೊಂದೂ ಸ್ವರವಿನ್ಯಾಸವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ-ಕರೆಗೆ ಅಪ್ಪಳಿಸುವ ಕಡಲ ಅಲೆಯಂತೆ, ಮರದಕೊಂಬೆ ಗಾಳಿಗೆ ಅಲುಗಿದಂತೆ, ಹಕ್ಕಿ ಹಾಡಿದಂತೆ. ಪ್ರತಿಭಾವಂತ ಗಾಯಕರು ಧ್ವನಿಮುದ್ರಿತ ಯಂತ್ರದಂತೆ ಒಂದೇ ತರಹ ಹಾಡುವುದಿಲ್ಲ. ನಮಗೆ ಪ್ರಿಯವಾದ ಹಾಡು, ಧ್ವನಿಮುದ್ರಣದಲ್ಲಿ ಅದೆಷ್ಟನೆಯ ಸಲವೊ ಕೇಳುವಾಗ ಕೂಡ, ಪುನರುಕ್ತಿ ಎನಿಸದೆ ಹೊಸದೇ ಅನುಭವ ಕೊಡುವುದು; ಹೊಸದೇ ಭಾವ ಹೊಳೆಸುವುದು. ಹಾಡು ಅದೇ. ಕೇಳುವವರ ಮನಸ್ಥಿತಿ ಬೇರೆಯಾಗಿದೆ. ನಮಗೆ ಪ್ರಿಯರಾದವರ ಮುಖವನ್ನು ಎಷ್ಟು ಸಲ ನೋಡಿದರೂ, ಅವರ ಮಾತನ್ನು ಅದೆಷ್ಟು ಸಲ ಆಲಿಸಿದರೂ ಏಕತಾನ ಎನಿಸುವುದಿಲ್ಲ. ಎಳೆಯ ಕಂದನ ಮೊಗವನ್ನು ಕನ್ನಡಿಯಂತೆ ಹಿಡಿದು ತಾಯಿ ದಣಿಯುವಳೇ? ನೋಡುವ ತಾಯಭಾವವೂ ನೋಟಕ್ಕೆ ವಸ್ತುವಾಗಿರುವ ಕೂಸಿನ ಭಾವವೂ ಪರಸ್ಪರ ಬದಲಾಗುತ್ತ ಜೀವಂತಿಕೆ ಸೃಷ್ಟಿಸುತ್ತವೆ. `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಅದೆಷ್ಟು ಸಲ ಓದಿರುವೆನೊ? ಹಳತೆನಿಸಿಲ್ಲ. ವಯಸ್ಸು ಅಭಿರುಚಿ ಆಲೋಚನಕ್ರಮ ಅನುಭವ ಬದಲಾದಂತೆ, ಹಿಂದೆ ಓದಿದ್ದು ಕೇಳಿದ್ದು, ಹೊಸ ಅನುಭವ ಮತ್ತು ಚಿಂತನೆಯಲ್ಲಿ ಬಂದು ಕೂಡಿಕೊಳ್ಳುತ್ತದೆ. ಪುನರುಕ್ತಿ ಸೃಜನಶೀಲವಾಗಿದ್ದಾಗ ಯಾಂತ್ರಿಕವಾಗಿರುವುದಿಲ್ಲ. ಹಿಂದೆ ಕೇಳಿದ ಹಾಡು ಸ್ಮತಿಯಿಂದ ಎದ್ದುಬರುವಾಗ ಹೊಸಜನ್ಮವನ್ನು ಪಡೆದಿರುತ್ತದೆ. ಪ್ರತಿವರ್ಷವೂ ಚಿಗುರುವ ಮರ ಹೊಸತನದಲ್ಲಿ ಕಾಣಿಸುವುದಕ್ಕೆ ಕಾರಣ, ಮರ ಮಾತ್ರವಲ್ಲ, ಅದನ್ನು ನೋಡುವ ಕಣ್ಣೂ ಸಹ. ********************************* ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

ಅನುವಾದಿತ ಕೃತಿ ಪ್ರಪಂಚ ಪ್ರವೇಶ ಮೊದಲ ನುಡಿ ಅನುವಾದವೆಂಬ ಪದದ ಸರಿಯಾದ ಅರ್ಥ ತಿಳಿಯದವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಎರಡು ಭಾಷೆಗಳು ತಿಳಿದಿದ್ದರೆ ಸಾಕು ಅನುವಾದ ತಾನೇ ತಾನಾಗಿ ಆಗುತ್ತದೆ ಎಂದು ತಿಳಿಯುವವರಿದ್ದಾರೆ. ಅನುವಾದವೆಂದರೆ ಅದೊಂದು ಯಾಂತ್ರಿಕವಾದ ಕೆಲಸವೆಂದು ಹೇಳುವವರಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಾಷೆಯ ಮಹತ್ವವೇನು, ಅನುವಾದದ ಮಹತ್ವವೇನು, ಅನುವಾದಕ/ಕಿಯಲ್ಲಿ ಇರಬೇಕಾದ ಪ್ರತಿಭೆಯೇನು, ಪಾಂಡಿತ್ಯವೇನು, ಗುಣಗಳೇನು, ಸೃಜನಶೀಲತೆಯೇನು-ಈ ಯಾವುದರ ಗೊಡವೆಯೂ ಇಲ್ಲದೆ ಸಾಹಿತ್ಯಲೋಕದಲ್ಲಿ ಅನುವಾದಕರಿಗೆ ಮೂಲ ಲೇಖಕರ ನಂತರದ ಸ್ಥಾನ ಕೊಡುವ ಹುನ್ನಾರ ಎಂದಿನಿಂದಲೂ ನಡೆಯುತ್ತಲೇ ಬಂದಿದೆ. ಅನುವಾದದ ಉದ್ದೇಶ ಮತ್ತು ಮಹತ್ವಗಳೇನು ಎಂಬುದರ ಬಗ್ಗೆ ಒಮ್ಮೆ ಚಿಂತಿಸಿದರೆ ಸಾಹಿತ್ಯದ ಸಂದರ್ಭದಲ್ಲಿ ಅನುವಾದಕರ ಅಗತ್ಯವೆಷ್ಟಿದೆ ಎಂಬುದನ್ನು ಮನಗಾಣ ಬಹುದು.ಜಗತ್ತಿನ ಉದ್ದಗಲಕ್ಕೂ ಹರಡಿರುವ ಸಾವಿರಾರು ಭಾಷೆಗಳನ್ನು ಪರಿಗಣಿಸಿದಾಗ ಇಂದಿನ ಸಂಪರ್ಕ ಸಮೃದ್ಧಿಯ ಜಾಗತೀಕರಣದ ಸಂದರ್ಭದಲ್ಲಂತೂ ಅನುವಾದಕರು ಆಮ್ಲಜನಕದಷ್ಟು ಅಗತ್ಯವಾಗಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಒಂದು ಭಾಷೆಯಲ್ಲಿ ಬಂದ ಸಾಹಿತ್ಯವನ್ನು ಓದುವ ಓದುಗರು ತಮ್ಮ ಭಾಷೆಗಷ್ಟೆ ಸೀಮಿತರಾದರೆ ಅವರ ಜ್ಞಾನವು ಸಂಕುಚಿತಗೊಳ್ಳುತ್ತದೆ. ಜಗತ್ತಿನ ಇತರ ಮಾನವರನ್ನೂ ಇತರ ಸಂಸ್ಕತಿ ಮತ್ತು ಜೀವನಕ್ರಮಗಳನ್ನೂ ಸಾಹಿತ್ಯ ಕೃತಿಗಳ ಮೂಲಕ ತಿಳಿದುಕೊಂಡಾಗ ಮಾತ್ರ ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರಗೊಂಡು ನಾವು ಬೌದ್ಧಿಕವಾಗಿ ಬೆಳೆಯಲು ಸಾಧ್ಯ. ಇದು ಅನುವಾದಗಳ ಮೂಲಕವೇ ಆಗಬೇಕಷ್ಟೆ. ಹೀಗೆ ಹೇಳುವಾಗ ನನಗೆ ನನ್ನ ಆರಂಭಿಕ ಅನುವಾದಿತ ಕೃತಿಯನ್ನು ತ್ರಿಶೂರಿನಲ್ಲಿ ಬಿಡುಗಡೆ ಮಾಡುತ್ತ ಮಲೆಯಾಳದ ಮಹಾನ್ ಲೇಖಕ ಶ್ರೀ ಎಂ.ಟಿ.ವಾಸುದೇವನ್ ನಾಯರ್ ಹೇಳಿದ ಮಾತುಗಳು ನೆನಪಾಗುತ್ತವೆ : ‘ಯಾವುದೇ ಸಾಹಿತ್ಯದ ಓದುಗರು ತಮ್ಮ ಭಾಷೆಗಷ್ಟೇ ಸೀಮಿತರಾಗಿದ್ದರೆ ಅವರು ಬಾವಿಯೊಳಗಿನ ಕಪ್ಪೆಗಳಾಗುತ್ತಾರೆ. ವೈವಿಧ್ಯತೆಯಿಂದ ತುಂಬಿದ ಈ ಜಗತ್ತಿನಲ್ಲಿ ನಾವು ಇತರರ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಹಾಗೆ ತಿಳಿದುಕೊಳ್ಳುವ ಮನಸ್ಸು ನಮಗಿರಬೇಕು .ನಾವು ನಮ್ಮ ಮನಸ್ಸಿನ ಕಿಟಿಕಿ ಬಾಗಿಲುಗಳನ್ನು ಹೊಸ ಗಾಳಿ ಮತ್ತು ಬೆಳಕುಗಳಿಗಾಗಿ ಸದಾ ತೆರೆದಿಡಬೇಕು. ಇದು ಅನುವಾದಗಳನ್ನು ಓದುವ ಮೂಲಕ ಸಾಧ್ಯ ‘ ಎಂದು. ಅನುವಾದಕರಿಗೆ ಭಾಷೆಯ ಸಂಪೂರ್ಣ ಜ್ಞಾನದ ಜತೆಗೆ ಆ ಭಾಷೆಯನ್ನಾಡುವ ಜನರ ಸಂಸ್ಕೃತಿ, ಆಚಾರ ವಿಚಾರಗಳು, ಅವರಾಡುವ ವಿಶಿಷ್ಟ ನುಡಿ , ನುಡಿಗಟ್ಟು ಮತ್ತು ಗಾದೆಮಾತುಗಳು, ಅಲ್ಲಿನ ಭೌಗೋಳಿಕ ಪರಿಸರ, ಜನರ ಸ್ವಭಾವ, ವರ್ತನೆ-ಹೀಗೆ ನೂರಾರು ವಿಚಾರಗಳ ಆಳವಾದ ಅರಿವಿರಬೇಕು. ಅದಕ್ಕಾಗಿ ಅನುವಾದಕರಾಗ ಬಯಸುವವರಲ್ಲಿ ಅವಲೋಕನ ಮತ್ತು ಚಿಂತನ ಗುಣಗಳು ಸದಾ ಸಕ್ರಿಯವಾಗಿರಬೇಕು. ತಾವು ಅನುವಾದಿಸುವ ಎರಡು ಭಾಷೆಗಳ ಮೇಲಿನ ಪ್ರಭುತ್ವವನ್ನು ಮೊನಚುಗೊಳಿಸುವ ಆಸಕ್ತಿ ಮತ್ತು ಪರಿಶ್ರಮಗಳತ್ತ ಅವರ ಗಮನವಿರಬೇಕು. ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ಅನುವಾದಕರ ಅಗತ್ಯ ಎಂದಿಗಿಂತ ಹೆಚ್ಚು ಗುರುತಿಸಲ್ಪಟ್ಟಿದೆ..ಅದೇ ರೀತಿ ಸಾಕಷ್ಟು ಕೃತಿಗಳೂ ಅನುವಾದಗೊಳ್ಳುತ್ತಿವೆ.ಕುವೆಂಪು ಭಾಷಾ ಭಾರತಿ, ಭಾರತೀಯ ಭಾಷಾ ಸಂಸ್ಥಾನ, ಕೇಂದ್ರ ಸಾಹಿತ್ಯ ಅಕಾಡೆಮಿ, ಮತ್ತು ಇನ್ನೂ ಅನೇಕ ಖಾಸಗಿ ಪ್ರಕಾಶನ ಸಂಸ್ಥೆಗಳು ಅನುವಾದಿತ ಕೃತಿಗಳನ್ನು ಹೊರತರುತ್ತಿವೆ. ನಾನು ಈ ಅಂಕಣದಲ್ಲಿ ನನ್ನ ಗಮನ ಸೆಳೆದ ಕೆಲವು ಅನುವಾದಿತ ಕೃತಿಗಳ ಸ್ಥೂಲ ಪರಿಚಯವನ್ನಷ್ಟೇ ಮಾಡುತ್ತೇನೆ. ಅವುಗಳ ರಕ್ಷಾಪುಟ ಮತ್ತು ಪ್ರಕಟಣಾ ವಿವರಗಳನ್ನು ನೀಡುವ ಮೂಲಕ ನೀವು ಅವುಗಳನ್ನು ಸಂಪಾದಿಸಿ ಓದುವ ಆಸಕ್ತಿ ತೋರಿಸಬೇಕೆಂಬುದು ನನ್ನ ಈ ಅಂಕಣದ ಉದ್ದೇಶ. ************************************* ಲೇಖಕರ ಬಗ್ಗೆ:- ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು 80ರ ದಶಕದ ಆಚೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಫಿಲಾಸಫಿಗಳ ಗುಂಗು ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯೂಜಿ ಮುಂತಾದವರು ಪ್ರಚಾರಕ್ಕೆ ಬಂದರು. ಇವರೆಲ್ಲ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೆ ಆ ಹೆಸರುಗಳನ್ನು ಕೇಳಿದರೆ ಕಿರಿಕಿರಿಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು.ಈಗಲೂ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಕೆಲವರು ಗಾಂಧಿಯನ್ನೂ ಹೀಗೇ ಬಳಸುತ್ತ, ಬೆದಕುತ್ತ ತಮ್ಮ ಬರವಣಿಗೆಗೆ ಬಳಸುತ್ತ ಆ ಅಂಥವರ ಹೆಸರನ್ನೇ ಮತ್ತೆ ಮತ್ತೆ ಹೇಳುತ್ತ ನಿಜಕ್ಕೂ ಬೆನ್ನೆಲುಬಾಗಿಟ್ಟುಕೊಳ್ಳಬೇಕಿದ್ದ ಆ ಹಿರೀಕರ ಆದರ್ಶಗಳು ಕನಸುಗಳೂ ಮರೆಯಾಗಿ ಕೇವಲ ಹೆಸರೇ ಮೆರೆಯತೊಡಗಿದ್ದನ್ನೂ ನಾವು ಬಲ್ಲೆವು. ಈ  ಇಂಥ ಕಾರಣಕ್ಕೇ  ಅಂಥ ಸಾಹಿತಿಗಳೂ ಅವರು ಬರೆದ ಸಾಹಿತ್ಯವೂ ಶಾಶ್ವತವಾಗಿ ನಿಲ್ಲಲಿಲ್ಲ. ಬರಿಯ ಸಿದ್ಧಾಂತಗಳನ್ನು ನಂಬಿದ ಸಾಹಿತ್ಯಕೃತಿಗಳು ಕಣ್ಮರೆಯಾಗುವುದು ಸಹಜ ಮತ್ತು ಸ್ವಾಭಾವಿಕ. ಇಂಥದೇ ಪ್ರಯೋಗಗಳು ನವೋದಯದ ಕಾಲದಲ್ಲೂ ನಡೆದದ್ದಕ್ಕೆ ಪುರಾವೆಗಳಿವೆ. ನವ್ಯದಲ್ಲಂತೂ ಪದ್ಯ ಎಂದರೆ ಪ್ರಾಸದ ಹಂಗಿಲ್ಲದ, ಅಲಂಕಾರದ ಕಷ್ಟ ಬೇಕಿಲ್ಲದ ಗದ್ಯದ ಗಟ್ಟಿ ಸಾಲು ಎಂಬ ಹುಂಬ ವ್ಯಾಖ್ಯೆಯನ್ನು ಯಾರೋ ಕೆಲವರು ಹೇಳಿದ್ದನ್ನೇ ನಂಬಿ ಗದ್ಯದ ಸಾಲನ್ನು ತುಂಡು ತುಂಡಾಗಿಸಿ ಬೇಕಾದಂತೆ ತಿರುಚಿದ ಉದಾಹರಣೆಗಳೂ ಇವೆ. ಈ ಇಂಥದೇ ಕಳೆಯನ್ನು ಬಂಡಾಯದ ಅದ್ಭುತ ಬೆಳೆಯಲ್ಲೂ, ದಲಿತ ಧ್ವನಿಯ ಸ್ಪಷ್ಟತೆಯ ನಡುವೆ ರೂಕ್ಷತೆಯನ್ನೂ ಕಂಡಿದ್ದೇವೆ. ಇದು ಕಾಲದಿಂದ ಕಾಲಕ್ಕೆ ಕವಿತೆಯ ರೀತಿ ಬದಲಾಗುವುದರ ಮತ್ತು ಕಾವ್ಯದ ರಸಗ್ರಹಣದ ಸ್ವರೂಪದ ಬದಲಾವಣೆ. ಸದ್ಯದ ಕಾವ್ಯದ ಹರಿಯುವಿಕೆಯಲ್ಲಿ ತೀವ್ರತೆ ಇದೆಯೇ? ಬದುಕನ್ನು ಸಾಹಿತ್ಯ ಬಿಂಬಿಸುತ್ತದೆ ಎನ್ನುವ ವ್ಯಾಖ್ಯೆಯ ಪುನರ್ಮನನ ಹೇಗೆ ಸಾಧ್ಯವಿದೆ? ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡಿರುವ ಈ ಅಂಕಣದ ಮೂಲ ಉದ್ದೇಶವೇ ವರ್ತಮಾನದ ಕಾವ್ಯ ಕ್ರಿಯೆಯ ಸಂಕೀರ್ಣತೆಗಳನ್ನು ಸಾಮಾನ್ಯ ಓದುಗನ ದೃಷ್ಟಿಯಿಂದ ನೋಡುವುದಾಗಿದೆ. ಬರಿಯ ಹೇಳಿಕೆಗಳು ಕಾವ್ಯವಾಗುವುದಿಲ್ಲ ಮತ್ತು ಕನಿಷ್ಠ ರೂಪಕವೊಂದನ್ನು ಟಂಕಿಸದ ಯಾರೂ ಕವಿಯಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕನ್ನಡದ ಮನಸ್ಸುಗಳು ಈಗಾಗಲೇ ಸ್ಪಷ್ಟಪಡಿಸಿವೆ. ರಸಗ್ರಹಣದ ಮೂಲ ಉದ್ದೇಶವೇ ತನಗಿರುವ ಅರಿವನ್ನು ಪರಿಷ್ಕೃತಗೊಳಿಸಿ ತಾಜಾ ಪ್ರತಿಮೆಗಳ ಮೂಲಕ ಹೇಳುವ ಪ್ರಯತ್ನ. ಫೇಸ್ಬುಕ್ ಎಂಬ ಸಾಮಾಜಿಕ ಮಾಧ್ಯಮದ ಮೂಲಕವೆ ತಮ್ಮ ಕವಿತೆಗಳನ್ನು ಪ್ರಕಟಿಸುತ್ತಿರುವ ಹಲವರು ನಮ್ಮ ನಡುವೆ ಇದ್ದಾರೆ. ಬಹಳ ವರ್ಷಗಳಿಂದ ಕವಿತೆಯನ್ನು ಬರೆಯುವ ಅಭ್ಯಾಸವಿದ್ದವರೂ ಪತ್ರಿಕೆಗಳಲ್ಲಿ ಅವನ್ನು ಪ್ರಕಟಿಸುವ “ಜಾಣ್ಮೆ” ಮತ್ತು “ಕಲೆ”ಗಳ ಅರಿವು ಇಲ್ಲದೆ ಡೈರಿಗಳ ಪುಟಗಳಲ್ಲೇ ತಮ್ಮ ಕವಿತೆಯನ್ನು ಅಡಗಿಸಿ ಇಟ್ಟುಕೊಂಡಿದ್ದವರು ಫೇಸ್ಬುಕ್ಕಿನಲ್ಲಿ ಪ್ರಕಟಿಸಿ “ಭಾರ” ಕಳೆದುಕೊಳ್ಳುತ್ತಿದ್ದಾರೆ. ಅಂಥ ಹಲವರ ರಚನೆಗಳು ನಿಜಕ್ಕೂ ಚೆನ್ನಾಗಿರುತ್ತವೆ. ಆದರೆ ಫೇಸ್ಬುಕ್ ಪುಟಗಳು ಕ್ಷಣಕ್ಷಣಕ್ಕೂ ಹೊಸ ಹೊಸ ಬರಹ, ಫೋಟೋ, ಕವಿತೆ, ಸ್ಟೇಟಸ್ಸುಗಳ ಮೆರವಣಿಗೆ ಆಗಿರುವುದರಿಂದ ನಿಜಕ್ಕೂ ಅದ್ಭುತ ಎಂದೆನಿಸುವ ಸಾಲುಗಳು ಕೂಡ ಭರಪೂರ ಪೇಜುಗಳ ನಡುವೆ ಮಾಯವಾಗುವುದೂ ಸಹಜ. ಶ್ರೀ ಎನ್.ಡಿ.ರಾಮಸ್ವಾಮಿ ಮೇಲೆ ಹೇಳಿದ ಆ ಅಂಥ ಹಲವರ ಪೈಕಿ ಒಬ್ಬರು. ವೃತ್ತಿಯಿಂದ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿರುವುದರಿಂದ ಸಹಜವಾಗಿ ಛಾಸರಿನಿಂದ ಶೇಕ್ಸ್ ಪಿಯರನವರೆಗೆ, ಡಾಂಟೆಯಿಂದ ಆಫ್ರಿಕದ ಕಪ್ಪು ಹಾಡಿನವರೆಗೂ ಅವರ ಓದು ತೆರೆದೇ ಇರುತ್ತದೆ. ಆದರೆ ಎಲ್ಲ ಉಪನ್ಯಾಸಕರೂ ಕವಿಗಳಾಗುವುದಿಲ್ಲ. ಕವಿತೆಯನ್ನು ಪಾಠ ಮಾಡುವಾಗ ಮಾತ್ರ ಕವಿತೆಯನ್ನು ಬ್ರೌಸು ಮಾಡುವ ಶಿಕ್ಷಕರೂ ಇದ್ದಾರೆ. ಆದರೆ ಎನ್.ಡಿ.ಆರ್ ಅಪವಾದ. ಇನ್ನೇನು ಮೂರು ವರ್ಷಗಳಷ್ಟೇ ನಿವೃತ್ತಿಗೆ ಬಾಕಿ ಇರುವ ಅವರು ಅದೆಷ್ಟು ವರ್ಷಗಳಿಂದ ಪದ್ಯದ ಮೊರೆ ಹೋಗಿದ್ದರೋ ಏನೋ ಫೇಸ್ಬುಕ್ಕಿನಲ್ಲಿ ನಿತ್ಯವೂ ಅವರ ಪದ್ಯ ಪ್ರಕಟ ಆಗುತ್ತಲೇ ಇರುತ್ತದೆ. ಮೊನ್ನೆ ಫೇಸ್ಬುಕ್ ಪುಟದಲ್ಲಷ್ಟೇ ಬರೆಯುವ ಮತ್ತೊಬ್ಬ ಅನುವಾದಕರು ಇವರ ಪದ್ಯವನ್ನು ತೆಲುಗು ಭಾಷೆಗೆ ಅನುವಾದಿಸಿದ್ದರು ಎಂದರೆ ಇವರ ಪದ್ಯಗಳ ಝಳ ಕಡಿಮೆಯದೇನೂ ಅಲ್ಲ. ಸಾಹಿತ್ಯದಲ್ಲಿ ಆಸಕ್ತಿ ಇರುವ ಇಂಗ್ಲಿಷ್ ಉಪನ್ಯಾಸಕರಿಗೆ ಇರುವ ಮತ್ತೊಂದು ಲಾಭವೆಂದರೆ ಅವರು ಕನ್ನಡದ ಮಹತ್ವದ ಲೇಖಕರನ್ನು ಸುಲಭವಾಗಿ ಒಳಗೊಳ್ಳುವ ಸೌಲಭ್ಯ. ಏಕೆಂದರೆ ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳು ಬಹುತೇಕ ಒಟ್ಟಿಗೇ ಇರುವುದರಿಂದ ಭಾಷಾ ಶಿಕ್ಷಕರುಗಳ ಮಾತಿನ ನಡುವೆ text ಬಗ್ಗೆ ಮಾತು ಸಹಜವೇ ಆಗಿರುವುದರಿಂದ ಗ್ರಹಿಕೆ ಸೂಕ್ಷ್ಮತೆ ಇದ್ದವರು ಗೆದ್ದಿರುತ್ತಾರೆ. ಎನ್.ಡಿ.ಆರ್ ಪದ್ಯಗಳ ಮೂಲ ಪುರಾತನ ನವ್ಯದ ಶಾಲೆ. ಪ್ರತಿಮೆಗಳೂ ರೂಪಕಗಳೂ ಇಲ್ಲದ ಬರಿಯ ಕನಸುಗಳು ಅವರ ಪದ್ಯಗಳಲ್ಲಿ ವಿರಳಾತಿ ವಿರಳ. ಏನನ್ನು ಹೇಳುವುದಕ್ಕೂ ಪ್ರತಿಮೆ ಮತ್ತು ರೂಪಕಗಳ ಮೊರೆ ಹೋಗುವ ಅವರ ಕವಿತೆಗಳಿಗೆ ಒಮ್ಮೊಮ್ಮೆ ಈ ಭಾರವೇ ಜಾಸ್ತಿಯಾಗಿ ಮೂಲದಲ್ಲಿ ಅವರೇನು ಹೇಳ ಹೊರಟಿದ್ದರೋ ಆ ಅಂಶವೇ ಮರೆಯಾಗುವುದೂ ಉಂಟು. ಉದಾಹರಣೆಗೆ; ಅಕ್ಷಿ ನಕ್ಷತ್ರವಾದದ್ದು ಏಕೆ? ಎದೆಯೊಳಗೆ ಪುಟ್ಟ ಕಾರಂಜಿ ಶಬ್ದ,ಶಬ್ದಕ್ಕೂ ಪುಳಕ ಜೀವ ಸೆಲೆ ಕಡಲಾಗಿ,! ಇಲ್ಲಿ ಶಬ್ದಾಡಂಬರದ ನಡುವೆ ಅಕ್ಷಿ ಅಂದರೆ “ಕಣ್ಣು” ಪುಳಕ ಹುಟ್ಟಿಸುವ ಜೀವಸೆಲೆಯಾಗಿದೆ ಎನ್ನುವುದನ್ನು ಹೇಳುತ್ತಲೇ, “ಮೀಟುತ್ತಿದೆ ಕನಸುಗಳ ಉಡವನ್ನ” ಅನ್ನುವಾಗ ಈ ಪದ್ಯ ಮತ್ತೆಲ್ಲಿಗೋ ತುಯ್ಯುತ್ತಿದೆ ಅಂತ ಭಾವಿಸಿದರೆ, “ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ” ಎಂದು ಮುಕ್ತಾಯ ಆಗುವಾಗ ಈ ಕವಿತೆ ಹೇಳಿದ್ದಾದರೂ ಏನನ್ನು ಎನ್ನುವ ಗೊಂದಲ ಸಹಜ. “ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ ಅದು ಇದೆ ಇದು ಇದೆ ಎಲ್ಲ ಇದೆ” ಎಂದು ಆರಂಭವಾಗುವ ಪದ್ಯ ಈ ನೆಲದ ಘಮವನ್ನೋ ಅಥವ ಭಾಷೆಯ ಬೆಡಗನ್ನೋ ಹೊಗಳುತ್ತಿದೆ ಅಂದುಕೊಂಡರೆ ” ಏಕಲವ್ಯ ಜಗದೇಕ ವೀರನಾಗಿದ್ದು ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು!” ಎಂದು ರೂಪುಗೊಂಡರೆ ಮತ್ತೊಂದು ಜಿಗಿತಕ್ಕೆ ತುಯ್ದು “ಲಕ್ಷ್ಮಣ ಹಣ್ಣ ಬಿಟ್ಟು ಓಡಿದ್ದು ಕೋದಂಡ ಹಣ್ಣ ಜತಯೇ ಓಡಿದ್ದು” ಎಂದು ಹೇಳುತ್ತ ಕಡೆಗೆ ಪದ್ಯ “ಮುಗಿಲ ಅಟ್ಟದಲ್ಲೇ ಇರಲಿ ಕೈ ಚಾಚಿದರಷ್ಟೇ ಹಣ್ಣು!” ಎಂದು ಕೊನೆ ಮುಟ್ಟಿದಾಗ ಓಹ್ ಈ ಕವಿ ಹೆಣ್ಣನ್ನು ಕುರಿತು ಹೇಳಲು ಏನೆಲ್ಲ ಪದ ಭಂಡಾರವನ್ನೇ ಸೂರೆಗೊಂಡರಲ್ಲ ಎನ್ನಿಸುತ್ತದೆ. ರಾಮಾಯಣ, ಭಾರತದ ಪಾತ್ರಗಳೆಲ್ಲ ಕಣ್ಣ ಮುಂದೆ ಸರಿದು ಹೋಗುತ್ತವೆ, ಸವೆದ ದಾರಿಯ ಕುರುಹಾಗುತ್ತವೆ “ಬುದ್ಧ ಗುರುವಿನ ಕಣ್ಣಿಗೆ ಧೂಳು ಬಿದ್ದು ಧಾರಾಕಾರ ಕಣ್ಣೀರು ನೋವು,ನವೆ” ಎಂದು ಸುರುವಾಗುವ ಕವಿತೆ ಬುದ್ಧನೂ ಅನುಭವಿಸಿದ ಸಾಮಾನ್ಯ ನೋವನ್ನು ತೆರೆದಿಡುತ್ತಲೇ ” ಓಡಿದ,ಓಡಿದ ಧೂಳುಗಳು ಬಿಡದೆ ಹಿಂಬಾಲಿಸಿದ್ದು ಕಣ್ಣ ಮುಚ್ಚಿ ಓಡಿದ!” ಎಂದು ಹೇಳುವಾಗ ಕಣ್ಣಿಗೆ ಬಿದ್ದದ್ದು  ಧೂಳಲ್ಲ,  ಬದುಕಿನ ಸತ್ಯಗಳು ಎಂದು ಗೊತ್ತಾಗುತ್ತದೆ. ಮುಂದುವರೆದಂತೆ,  “ಈಗ ಬುದ್ದನ ಕಣ್ಣು ಸ್ಪಷ್ಟ, ಎಲ್ಲವೂ ನಿಖರವಾಗಿ ಕಂಡು ಬೆರಗು!” ಎನ್ನುವಾಗ ಬುದ್ಧನ ಜ್ಞಾನೋದಯವನ್ನು ಬೆರಗಿನಿಂದ ಕಂಡಿರಿಸಿದ ಕವಿತೆ ಆಗಿ ಮಾರ್ಪಾಡಾಗುತ್ತದೆ. ಶಬ್ದಗಳು ಚಿನ್ನದ ಅದಿರಾದಾಗ ಬದುಕ ಹೊಲ ಬಂಗಾರವಾಗಿತ್ತ ಶಬ್ದಗಳು ಪ್ರೀತಿಯ ಮೊಗ್ಗಾದಾಗ ಬದುಕು ಮಲ್ಲಿಗೆ ತೋಟವಾಗಿತ್ತ! ಎಂದೂ ಹೇಳಬಲ್ಲ ಈ ಕವಿಯ ಬಳಿ ಶಬ್ದ ಭಂಡಾರದ ಸಂದೂಕ ಇದ್ದೇ ಇದೆ ಈ ಕವಿ ಬದುಕಿನ ನಶ್ವರತೆಯನ್ನು ಕೂಡ ಬಿಡುಬೀಸಾಗಿ ಹೇಳಬಲ್ಲರೆಂಬುದಕ್ಕೆ ನೋಡಿ; “ಸಂತೆಯಲಿ ಮೀನು ಮಾರುವ ಸೊಪ್ಪು,ಸದೆ ಮಾರುವ ಜಾಗದಲಿ ಮಾತುಗಳದೇ ಕಾರುಬಾರು ಗಟ್ಟಿಯಾಗಿ,ಕರ್ಕಶವಾಗಿ ಕಂಚಿನ ಕಂಠದಲಿ ಕೂಗಾಟ!” ಯೆಸ್, ಮುಂದಕ್ಕೆ ಇಣುಕಿದರೆ, “ಮೌನಕ್ಕೆ ಜಳಕ ಮಾಡಿಸಿ ಹೊಸ ಅಂಗಿ ತೊಡಿಸಿ ಕಥೆ,ಕವನ,ಹೇಳುತ್ತಾ ಹೋದರೆ ಸಿಡಿ ಮಿಡಿ ಗೊಂಡು ಉಗಿಯುತ್ತಿತ್ತು!” ಎಂದು ಕುತೂಹಲ ಹುಟ್ಟಿಸುತ್ತಾರೆ. ಆದರೆ ಪದ್ಯ ಕೊನೆಯಾಗುವುದು ಹೀಗೆ; “ಮೌನದ ಗೆಳೆತನ ದುಬಾರಿ ಖಿನ್ನತೆ, ಸಿಡುಕು, ಕೋಪ,ಕುದಿತ,ಮಿದಿತದ ಹೊಂಡವಾದದ್ದು!”. ಈಗ ಹೇಳಿ, ಈ ಪದ್ಯ ಬದುಕಿನ ನಶ್ವರತೆಯನ್ನು ಹೇಳುತ್ತಿದೆಯೋ ಅಥವ ಶಬ್ದದ ಆಡಂಬರದಲ್ಲಿ ಮೌನದ ಮಹತ್ತನ್ನು ಹುಡುಕುವ ಯತ್ನ ಮಾಡುತ್ತಿದೆಯೋ? ಈ ಪರಿಗೆ ಒಯ್ಯವ ಪದ್ಯಕ್ಕೆ ಆಗಾಗ ಲಿಫ್ಟ್ ಕೊಡುವುದರಲ್ಲಿ ಇವರು ಸಿದ್ದ ಹಸ್ತರೇ! “ಈ ಕನ್ನಡಿಯಲಿ ಅದೆಷ್ಟು ಮುಖ ಯುಧಿಷ್ಟರನೂ  ನಿಂತಿದ್ದ ಕಿಮ್ ಮಹಾಶಯನೂ ನಿಂತಿದ್ದ ರಂಗದಲಿ ವೇಷ ಕಟ್ಟಿ”. ಎಂದು ಆರಂಭಗೊಂಡ ಪದ್ಯ ದಾಟುತ್ತ ದಾಟುತ್ತ “ಇವನೂ ಬಿಳಿ ಬಟ್ಟೆಯಲಿ ಚಿತ್ರ ಬಿಡಿಸಿದ್ದು ನೆತ್ತರ ಬಣ್ಣದಲಿ” ಎಂದು ಮತ್ತೊಂದು ಲಿಫ್ಟ್ ಪಡೆದಾಗ ಗೊಂದಲ. ಪದ್ಯ ಹೆಚ್ಚಿಸಿದ ಗೊಂದಲದಲ್ಲಿ ” ಇವನು ಶಿಶುಪಾಲನ ಕೊನೆ ತಮ್ಮ ನಂದನನಿಗೂ ಬೆಂಕಿ ಇಟ್ಟೇ ತೀರುವೆನೆಂದ!” ಎಂದು ಕೊನೆಯಾಗುವಾಗ ಈ ಕವಿ ಕಾಣಿಸಿದ ಬೆಳಕ ಝಳಕ್ಕೆ ಕಣ್ಣು ಕುಕ್ಕುವ ಶಕ್ತಿ ಇದ್ದೇ ಇದೆ ಎನ್ನುವುದಕ್ಕೆ ಸಾಕ್ಷಿ. ಆದರೆ ಪುರಾಣ ಪ್ರತಿಮೆಗಳ ಮೂಲಕವೇ ಏನೆಲ್ಲವನ್ನೂ ಕಟ್ಟುವ ಈ ಕವಿಯ ರಚನೆಗಳು ಆಧುನಿಕ ಮನಸ್ಥಿತಿಯ ಮತ್ತು ಪುರಾಣ ಪ್ರತಿಮೆಗಳ ಮೂಲ ಆಶಯವೇ ತಿಳಿಯದವರಿಗೆ ಗೊಂದಲ ಮತ್ತು ಶಬ್ದಾಡಂಬರದ ಹಾಗೆ ಕಂಡರೆ ತಪ್ಪೇನಲ್ಲ. “ತಳ ಇರದ ದೋಣಿಯಲಿ ಮಹಾ ಯಾನ ಆಸೆ ಎಂಬು ಹುಟ್ಟು ಒಂದರಗಳಿಗೆಯೂ ಬಿಡದೆ” ಈ ಸಾಲುಗಳು ಹುಟ್ಟಿಸುವ ತಳಮಳಗಳ ಲೆಕ್ಕ ಸುಲಭಕ್ಕೆ ಸಿಕ್ಕದ್ದು. ಮುಂದುವರೆದಂತೆ ” ಯುದ್ದದ ದಿರಸು ಕವಚ,ಕತ್ತಿ ತಿವಿದಲ್ಲದೇ ಮುಂದೆ ಹಾದಿ,ಹೆಜ್ಜೆ!” ಎಂದು ಆಕ್ಷೇಪಿಸುವ ಈ ಕವಿ ನಿಜಕ್ಕೂ ಏನನ್ನು ಹೇಳಲು ಹವಣಿಸುತ್ತಿದ್ದಾರೆ ಎನ್ನುವುದೇ ಕುತೂಹಲಕ್ಕೆ ದಾರಿ ಮಾಡುತ್ತದೆ. ಇನ್ನೂ ಏನೆಲ್ಲವನ್ನೂ ಹೇಳುತ್ತ ಈ ಕವಿಯ ಕವಿತೆಗಳನ್ನು ಡಿಸೆಕ್ಟ್ ಮಾಡುತ್ತ ಹೋಗಬಹುದು. ಆದರೆ ಪುರಾಣ ಪ್ರತಿಮೆಗಳ ಭಾರದಲ್ಲಿ ಇವರ ನಿಜದ ಆಶಯಗಳೇ ಸುಸ್ತು ಪಡುತ್ತಿವೆ ಎನ್ನುವದಂತೂ ನಿಜ. “ಇಲ್ಲಿ ಗಂಗೆಯಿದೆ ಗಾಂಗೇಯನ ಶರಶಯ್ಯೆ ಇದೆ ಅರ್ಜುನ ದಾಹಕ್ಕೆ ತಳಾ ತಳ ಸೀಳಿ ಗಂಗೆ ತರಬೇಕು!” ಎಂಬ ಭರವಸೆಯ ಕ್ಷೀಣ ದನಿಯೂ ಇವರಿಗೆ ದಕ್ಕಿರುವುದರಿಂದಲೇ ಇವರು ಪದ್ಯ ಪೋಸ್ಟ್ ಮಾಡುತ್ತಿದ್ದಂತೆಯೇ ಬೀಳುವ ಲೈಕುಗಳು ಈ ಕವಿಯು ಮತ್ತಷ್ಟು ಮಗದಷ್ಟು ಪುರಾಣ ಪ್ರತಿಮೆಗಳನ್ನು ಉಜ್ಜುಜ್ಜಿ ಹೊಳಪು ಪೇರಿಸುವಂತೆ ಮಾಡಿವೆ. ಶ್ರೀ ಎನ್. ಡಿ. ರಾಮಸ್ವಾಮಿ ಯಾವತ್ತೋ ತಮ್ಮ ಸಂಕಲನ ತರಬಹುದಿತ್ತು. ಪ್ರತಿಮೆ ರೂಪಕಗಳ ಅರಿವೇ ಇಲ್ಲದ ಸ್ವ ಮರುಕಗಳನ್ನೇ ಕಾವ್ಯವೆಂದು ಬಿತ್ತುತ್ತಿರುವರ ನಡುವೆ ಎನ್ ಡಿ ಆರ್ ಪುರಾಣದ ಪಾತ್ರಗಳ ಮೂಲಕವೇ ಬದುಕನ್ನು ಅರಿಯುವ ರೀತಿಯಿಂದ ಬಹು ಭಿನ್ನಾವಾಗಿ ಕಾಣುತ್ತಾರೆ ಮತ್ತು ವಿಭಿನ್ನವಾಗಿಯೇ ಉಳಿಯುತ್ತಾರೆ ಅವರ ೧೫ ಪದ್ಯಗಳನ್ನು ಒಟ್ಟು ಮಾಡಿ ಇಲ್ಲಿ ಪೋಣಿಸಿದ್ದೇನೆ. ಸುಮ್ಮನೇ ಕಣ್ಣಾಡಿಸುತ್ತ ಹೋದಂತೆ ಮತ್ತೆಲ್ಲಿಗೋ ಮತ್ಯಾವುದೋ ಪರಿಜಿಗೆ ಒಯ್ಯುವ ಈ ಪದ್ಯಗಳ ಝಳ ನಿಮಗೂ ಮುಟ್ಟಲಿ. ಎನ್.ಡಿ.ಆರ್. ಕವಿತೆಗಳು 1. ಅಕ್ಷಿ ನಕ್ಷತ್ರವಾದದ್ದು ಏಕೆ? ಎದೆಯೊಳಗೆ ಪುಟ್ಟ ಕಾರಂಜಿ  ಶಬ್ದ,ಶಬ್ದಕ್ಕೂ ಪುಳಕ ಜೀವ ಸೆಲೆ ಕಡಲಾಗಿ,!  ಹರಿಯುತ್ತಿದೆ ಝರಿ ಜುಳು,ಜುಳು ನಿನಾದವೆಲ್ಲ ಅಲೌಕಿಕದ ಹುನ್ನಾರವೆ? ಮೀಟುತ್ತಿದೆ ಕನಸುಗಳ ಉಡವನ್ನ!  ತಳ ಕಂಡ ಬದುಕ ಸೆಲೆ ಉನ್ಮತ್ತ,ಉನ್ಮೀಲನದ ಗಾಳಿಪಟ ಇಲ್ಲಿಲ್ಲ ಭಾವಗಳ ಹಕ್ಕಿ  ಪರಿಧಿಯ ಸೀಳಿ !  ಹಂಚಿ ಕೊಂಡ ಕನಸುಗಳು ಆಯಾತ ನಿರ್ಯಾತವಾಗುತ್ತಿವೆ ಈ ಸೇತುವೆಗೆ  ಬದುಕ ಎರಡೂ ಹೊಳೆ ಕಾಯುತ್ತಲೇ!  ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ ಈ ಸೇತುವೆ ಎಂದಿಗಾದರೂ ಒಮ್ಮೆ ದಕ್ಕಿದರೆ? 2. ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ ಅದು ಇದೆ ಇದು ಇದೆ ಎಲ್ಲ ಇದೆ ಹೂವು,ಹಾಸಿಗೆ,ಚಂದ್ರ,ಚಂದನ ನಗು,ಉತ್ಸಾಹ ,ಹುರುಪು,ಕನಸು ಹೊಳೆಯಂತೆ ಕಾದಿದೆ ! ಇಳಿಯ ಬೇಕು ಕನಸುಗಳ ಹೊಳೆಗೆ ಜಿಗಿ,ಜಿಗಿದು ಬಾಚಲು ಬೇಕು ಹಣ್ಣ ಗೊಂಚಲಿನ ಪರಿ ಹರಡಿದ್ದು ಬೇಕಾದ ಮಾಗಿದ ಹಣ್ಣೇ ಕಿತ್ತು! ಏಕಲವ್ಯ ಜಗದೇಕ ವೀರನಾಗಿದ್ದು ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು! ಬಾಚಿದ್ದು ಯಾವನೂ ಮುಟ್ಟದ ಹಣ್ಣು! ಸುಧಾಮ ಯಾವ

ದಿಕ್ಸೂಚಿ

ಸೋಲಿನ ಸುಳಿಯಲ್ಲೇ ಗೆಲುವಿನ ತುದಿಯಿದೆ! ಎಷ್ಟೆಲ್ಲ ಅನುಭವಗಳ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಿದರೂ ಗೆಲುವು ಮಿಂಚಿನಂತೆ ಅರೆಗಳಿಗೆ ಮಿಂಚಿ ಮಾಯವಾಗುತ್ತದೆ.ಇಲ್ಲಿ ಎಲ್ಲದರಲ್ಲೂ ಒತ್ತಡ. ಯಾವುದೂ ಸರಳ ರೇಖೆಯಲ್ಲಿ ಸಿಗುವುದಿಲ್ಲ. ಎಲ್ಲವನ್ನೂ ವಕ್ರ ರೇಖೆಯ ಕಾಣದ ತಿರುವುಗಳಲ್ಲಿ  ಶ್ರಮ ಹಾಕಿಯೇ ಪಡೆಯಬೇಕು.ಕೆಲವೊಮ್ಮೆ ಶ್ರಮ ಹಾಕಿದರೂ ಮುಖ ಎತ್ತಿಯೂ ನೋಡದೇ, ಬೆನ್ನು ತೋರಿಸಿ ನಗುತ್ತದೆ. ಕೈಗೆ ಸಿಗದೇ ಓಡಿ ಬಿಡುತ್ತದೆ ಗೆಲುವು! ಒಮ್ಮೊಮ್ಮೆ ನನಗೇ ತಿಳಿಯದಂತೆ ಮೇಲಕ್ಕೆತ್ತರಿಸಿ ಕೂರಿಸುತ್ತದೆ. ಮತ್ತೊಮ್ಮೆ ನಿರೀಕ್ಷಿಸಿದರೂ ಕೈಗೆ ಸಿಗದೇ ಕೆಳಕ್ಕೆ ಎಸೆದು ಬಿಡುತ್ತದೆ. ಹೆದರಿಸಿ  ಬೆನ್ನಲ್ಲಿ ಬೆವರಿಳಿಸಿದ ಸೋಲಿನ ಘಟನೆಗಳನ್ನು ನೆನದಾಗಲೊಮ್ಮೆ ಗೆಲುವಿನ ರುಚಿಯ ಆಸೆಯೇ ಬೇಡ ಎಂದೆನಿಸಿ ಬಿಡುತ್ತದೆ.ಸೋಲಿನ ಸಹವಾಸ ಸಾಕಾಗಿ ಒಮ್ಮೆ ಸರಿದು ನಿಂತು ಬದುಕಿನ ಕಪಾಳಕ್ಕೆ ಬಾರಿಸಲೇ ಎನಿಸುವಷ್ಟು ಕೋಪ ನೆತ್ತಿಗೇರುತ್ತದೆ. ಆದರೆ, ಎಷ್ಟೇ ಆಗಲಿ ಬದುಕು ನನ್ನದೇ ಅಲ್ಲವೇ? ಅದಕ್ಕೆ ನೋವಾದರೆ ಮರಳಿ ನನಗೂ ನೋವಾಗುವುದಲ್ಲವೇ? ಎನ್ನುತ್ತ ಹಲ್ಲು ಕಿತ್ತ ಹಾವಿನಂತೆ ಬಲಹೀನನಾಗಿ ಬಿಡುತ್ತೇನೆ. ಸೋಲಿನ ಮಡುವಿನಲ್ಲಿ ಬಿದ್ದು ಒದ್ದಾಡುವಾಗ ಈ ಕ್ಷಣವೇ ನನ್ನನ್ನು ನನ್ನ ಬಂಧು ಬಾಂಧವರು ಶವ ಪೆಟ್ಟಿಗೆಯಲ್ಲಿಟ್ಟು ಕೈ ತೊಳೆದುಕೊಳ್ಳಬಾರದೇ ಎಂದೆನಿಸದೇ ಇರದು. ಸೋಲು ಕಂಡಾಗ ಜೊತೆಗಿದ್ದವರು ದೂರವಾಗುವರು.ಕೆಲಸಕ್ಕೆ ಬಾರದವನು, ಕೈಲಾಗದವನು,ಎಂದು ಚುಚ್ಚು ಮಾತುಗಳಲ್ಲೇ ಚುಚ್ಚುವರು. ಇದೆಲ್ಲ ಏನು ಅಂತಿರೇನು? ಸಾಲು ಸಾಲು ಸೋಲುಂಡ ಜೀವಿಗಳ ಸ್ವಗತ. ಅಷ್ಟಕ್ಕೂ ಗೆಲುವು ಎಂದರೇನು? ಸೋಲಿನ ಸುಳಿಯಲ್ಲೇ ಇರುವ ಗೆಲುವಿನ ತುದಿ ಹಿಡಿಯಲು ಕುತೂಹಲ ಅಲ್ಲವೇ? ಹಾಗಾದರೆ ಮುಂದಿನ ಸಾಲುಗಳಿಗೆ ಕಣ್ಣು ಹಾಯಿಸಿ. ಗೆಲುವು ಎಂದರೇನು? ಗೆಲುವನ್ನು ವ್ಯಾಖ್ಯಾನಿಸುವುದು ಜೀವನವನ್ನು ಪುಟವೊಂದರಲ್ಲಿ ಹಿಡಿದಿಟ್ಟಷ್ಟೇ ಕಠಿಣ. ಹಾಗೆ ನೋಡಿದರೆ ಗೆಲುವು ಅನ್ನೋದು ಅವರವರ ಭಾವಕ್ಕೆ ಬಿಟ್ಟದ್ದು. ಕೆಲವರಿಗೆ ಹಣದೊಡೆಯರಾಗುವುದು ಗೆಲುವಾದರೆ, ಇನ್ನೂ ಕೆಲವರಿಗೆ ಆಟೋಟಗಳಲ್ಲಿ ಚಾಂಪಿಯನ್ ಆಗುವುದು. ತಾವು ದಾಖಲಿಸಿದ ದಾಖಲೆಗಳನ್ನು ತಾವೇ ಮುರಿಯುವುದು. ಇತರರ ಹೆಸರಲ್ಲಿರುವ ದಾಖಲೆಯನ್ನು ಸರಿಗಟ್ಟುವುದು.ಉದ್ಯಮಿಯಾಗುವುದು, ಸ್ವ ಉದ್ಯೋಗ, ಸರಕಾರಿ ನೌಕರಿ ಇನ್ನೂ ಹತ್ತು ಹಲವು.ಈಗ ನಮ್ಮ ಹತ್ತಿರ ಏನಿದೆಯೋ [ಮನೆ, ಶಿಕ್ಷಣ, ಹಣ, ಉದ್ಯೋಗ] ಅಷ್ಟನ್ನು ಪಡೆಯುವ ಕನಸು ಕಾಣುತ್ತಿರುವವರಿಗೆ ಅವುಗಳನ್ನೆಲ್ಲ ಪಡೆಯುವುದೇ ಗೆಲುವು.ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗೆಲುವು ಎಲ್ಲ ಕಾಲಕ್ಕೂ ಎಲ್ಲರಿಗೂ ಸಾಮಾನ್ಯವಾಗಿರುವುದಲ್ಲ. ವಯೋಮಾನ ಸ್ಥಿತಿ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವಂಥದು. ಅರ್ಲ್ ನೈಟಿಂಗೇಲ್‌ರ ಪ್ರಕಾರ  ‘ಅರ್ಹ ಅಥವಾ ಯೋಗ್ಯವಾದ ಗುರಿಯನ್ನು ಪ್ರಗತಿಪೂರ್ವಕವಾಗಿ ಸಾಧಿಸುವ ಪರಿಯೇ ಯಶಸ್ಸು’ ನೂರಾರು ಚಿಂತೆ ಕೋಟಲೆಗಳ ಮೀರಿ ಎದ್ದು ನಿಲ್ಲುವುದು ಯಶಸ್ಸು. ದೊಡ್ಡ ದೊಡ್ಡ ಕನಸು ಕಾಣುವುದು ಗೆಲುವಲ್ಲ. ಅವುಗಳು ನನಸಾಗುವವರೆಗೆ ಬೆನ್ನು ಹತ್ತುವುದು ಗೆಲುವು. ಅಂದ ಹಾಗೆ ಸೋಲಿನ ಸುಳಿಯಲ್ಲೇ ಗೆಲುವಿದೆ. ಅದ್ಹೇಗೆ ಅಂತಿರೇನು? ಸೋಲಿನ ಸಹವಾಸವೇ ಸಾಕಪ್ಪಾ ಎಂದು ಸೋಲನ್ನಪ್ಪಿಕೊಳ್ಳುವಾಗ ಎರಡು ಹೆಜ್ಜೆ ಮುಂದಿಟ್ಟರೆ ಸಾಕು ಗೆಲುವು  ತಾನಾಗಿಯೇ ನಮ್ಮ ಕೈ ಹಿಡಿಯುತ್ತದೆ. ಬನ್ನಿ ಸೋಲಿನ ಸುಳಿಯಲ್ಲಿ ಗೆಲುವು ಹೇಗೆ ಅಡಗಿದೆ ನೋಡೋಣ. ಬೇರು ಕಿತ್ತೊಗೆಯಿರಿ ಸೋಲನ್ನು, ಬೇಡ ಬೇಡವೆಂದರೂ ಕಾಲಿಗೆ ತೊಡರಿಸಿಕೊಳ್ಳುವ ಕಸದ ಬಳ್ಳಿಯೆಂದು ತಿಳಿಯುವುದು ತಪ್ಪು.    ಉಪಾಯವಿಲ್ಲದೇ ತಂತ್ರಗಳಿಲ್ಲದೇ ಕೈ ಹಾಕಿದರೆ, ಕೈ ಹಾಕಿದ ಕೆಲಸ ಕೈಗೂಡುವುದಿಲ್ಲ.ಸೋಲಿನ ಎದೆಯೊಳಗೆ ಇಣುಕಿ ನೋಡಬೇಕು. ಆಗ ಅದು ತನ್ನ ಅಂತರಾಳದ ನೋವನ್ನು ಬಿಚ್ಚಿಡುತ್ತದೆ.ಇತರರ ಗೆಲುವು ಕಂಡು ಹೊಟ್ಟೆ ಕಿಚ್ಚು ಹೆಚ್ಚಾಯಿತೇ ಹೊರತು ನಿನ್ನ ಗುರಿಯ ಕಿಚ್ಚು ಹೆಚ್ಚಾಗಲಿಲ್ಲ ಎಂದು ಅಳುತ್ತದೆ. ಸೋತೆನೆಂದು ನಿರಾಸೆಯಿಂದ ಕೈ ಚೆಲ್ಲಿ ಕುಳಿತಿಯೇ ಹೊರತು ನಾ ಹೊತ್ತು ತಂದ ಪಾಠವನ್ನು ಆಸೆಯಿಂದ ಸ್ವೀಕರಿಸಲೇ ಇಲ್ಲ. ಕೊರತೆ ಇರುವುದು ನಿನ್ನಲ್ಲಿಯೇ ಹೊರತು ನನ್ನಲ್ಲಲ್ಲ ಎಂದು ಬಿಕ್ಕುತ್ತದೆ. ಹಾಗಾದರೆ ನಾವು ಸೋಲು ತನ್ನ ಬೆನ್ನ ಮೇಲೆ ಹೊತ್ತು ತಂದಿರುವ ಪಾಠವನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು ಎಂದಂತಾಯಿತು. ಸೋಲಿನ ಕುರಿತಾಗಿರುವ ಹತಾಶೆ ನಿರಾಶೆಯ ಬೇರುಗಳನ್ನು ಹುಡುಕಿ ಅವುಗಳನ್ನು ಬೇರು ಸಮೇತ ಕಿತ್ತೊಗೆಯಬೇಕು. ಸೋಲೇ ಗೆಲುವಿನ ಸೋಪಾನವೆಂದು  ಯಾವ ಅಂಶಗಳ ಕೊರತೆಯಿಂದ ಸೋತೆ ಎಂದು ಆತ್ಮಾವಲೋಕನ ಮಾಡಿಕೊಂಡು ಮುನ್ನುಗ್ಗಬೇಕು.ಆಗ ಗೆಲುವು ಒಂದು ಹೆಜ್ಜೆ ಸನಿಹ ಬರುವುದು. ತಪ್ಪುಗಳ ಪಟ್ಟಿ ಮಾಡಿ  ‘ಮಾನವ ಯಶಸ್ಸಿನಿಂದ ಕಡಿಮೆ ಕಲಿಯುತ್ತಾನೆ. ವೈಫಲ್ಯತೆಯಿಂದ ಹೆಚ್ಚು ಕಲಿಯುತ್ತಾನೆ.’ಎನ್ನುತ್ತಾರೆ ಪ್ರಾಜ್ಞರು. ಕಂಡ ಸೋಲಿನಲ್ಲಿ ಮಾಡಿದ ಮುಖ್ಯ ತಪ್ಪುಗಳನ್ನು ಪಟ್ಟಿ ಮಾಡಿ ಒಂದು ವರದಿಯನ್ನು ಹೆಣೆಯಬೇಕು. ಅದನ್ನು ಸ್ಪಷ್ಟವಾಗಿ ಒಂದೆಡೆ ಬರೆದು ಮುಂದಿನ ಸಲ ಈ ತಪ್ಪುಗಳಾಗದಂತೆ ಜಾಗರೂಕತೆ ವಹಿಸಬೇಕು. ಹೊಸ ತಪ್ಪುಗಳಾದರೆ ಗಾಬರಿಯಿಂದ ಪ್ರಯತ್ನಿಸುವುದನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಇನ್ನೂ ಚೆನ್ನಾಗಿ ಮಾಡುವುದಾದರೆ ಹೇಗೆ ಮಾಡಬಹುದು ಎನ್ನುವ ಯೋಜನೆ ಹಾಕಿಕೊಂಡು ಮುನ್ನುಗ್ಗಬೇಕು. ಸಣ್ಣ ತೊರೆಗಳು ಮಹಾನ ಸಮುದ್ರಗಳಾಗುತ್ತವೆ. ತಪ್ಪುಗಳನ್ನು ಮರುಕಳಿಸದಂತೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಗೆಲುವಿನ ಇತಿಹಾಸ ನಿರ್ಮಾಣವಾಗುತ್ತದೆ. ಗುರಿಗೆ ಗುರಿ ಇಡಿ ಮಂಡಿಯೂರಿ ಕುಳಿತು ದೇವರನ್ನು ಬೇಡಿದರೆ ಸಿಗುವುದಿಲ್ಲ ಗೆಲುವು.ಯಾರ‍್ಯಾರನ್ನೋ ಒಲಿಸಿಕೊಳ್ಳಲು ಹೋಗುವುದರಲ್ಲಿಲ್ಲ. ಎಲ್ಲರಿಗೂ ಬೇಕಾದ ವ್ಯಕ್ತಿ ನಾ ಆದರೆ ಅದೇ ಗೆಲುವೆಂದು ಎಲ್ಲರನ್ನೂ ತೃಪ್ತಿ ಪಡಿಸಲು ನೋಡಿದರೆ ಸೋಲಿನ ಸುಳಿಯಿಂದ ಹೊರ ಬರಲಾಗುವುದಿಲ್ಲ. ಇದನ್ನೇ ಬಿಲ್ ಕಾಸ್ಟಿ ಹೀಗೆ ಹೇಳಿದ್ದಾನೆ.”ಯಶಸ್ಸಿನ ಕೀಲಿ ಕೈ ಯಾವುದೋ ನನಗೆ ತಿಳಿಯದು. ಆದರೆ ಎಲ್ಲರನ್ನೂ ತೃಪ್ತಿ ಪಡಿಸಲು ಯತ್ನಿಸುವುದು ವಿಫಲತೆಯ ಕೀಲಿಕೈ ಎಂಬುದನ್ನು ಮಾತ್ರ ನಾನು ಚೆನ್ನಾಗಿ ಬಲ್ಲೆ.” ಇಟ್ಟುಕೊಂಡ ಗುರಿಗೆ ಗುರಿ ಇಟ್ಟು ಹೊಡೆದರೆ, ಸೋಲು ನಿಮ್ಮನ್ನು ಬಿಟ್ಟು ಹೋಗಲು ಬೇಸರಿಸಿಕೊಳ್ಳುವುದಿಲ್ಲ. ಗುರಿಗೆ ಬೇಕಾದ ಕೆಲಸ ಕಾರ್ಯಗಳ ಯೋಜನೆ ರೂಪಿಸಿ ಮಾಡಲೇ ಬೇಕೆಂದು ಮನಸ್ಸಿಗೆ ಹಟ ಹಿಡಿಯುವಂತೆ ಮಾಡಿ.ಇಲ್ಲದಿದ್ದರೆ ಮನಸ್ಸು ಅನಗತ್ಯ ಕೆಲಸಗಳ ಸುತ್ತುವರೆದು ಅಗತ್ಯವಾದುದನ್ನು ಮಾಡಲು ಅಡಚಣೆ ಉಂಟು ಮಾಡುತ್ತದೆ. ಮನದ ತುಡಿತವು ಇಲಿಯನ್ನೂ ಹುಲಿಯಾಗಿಸಬಲ್ಲದು. ನಿರಂತರ ಪ್ರಯತ್ನಿಸಿ ಸೋತಾಗ ಹಗಲು ರಾತ್ರಿ ಸಾಲು ಸಾಲು ಸೋಲುಗಳನ್ನು ಅವುಚಿ ಹಿಡಿದುಕೊಂಡು ಕಣ್ಣೀರಿಡುವಾಗ ಗೆಲುವಿನ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನಲ್ಲಿ ಚಲಿಸುತ್ತವೆ ಎನ್ನುವುದನ್ನು ಮರೆಯಬಾರದು.ಹೇಳದಿದ್ದರೂ ಮಾಡುವವರು ಹೆಚ್ಚಿನ ಸಂಬಳ ಪಡೆಯುತ್ತಾರೆ ಎಂಬುವುದನ್ನು ನೆನಪಿಡಬೇಕು. ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸಿಗುವ ಸಮಯ ಹೆಚ್ಚು ಕಡಿಮೆ ತಡವಾಗಬಹದು. ಒಂದೊಂದು ಸೋಲಿನಿಂದಲೂ ಮಾರಕವಾದ ಅಂಶಗಳನ್ನು ತ್ಯಜಿಸಬೇಕು. ಪೂರಕ ಅಂಶಗಳತ್ತ ಚಿತ್ತ ದೃಢವಾಗಿಸಿ, ಬಿಡದೇ ಪ್ರಯತ್ನಿಸಬೇಕು. ಆಕಾಶದೆತ್ತರಕ್ಕೆ ಬೆಳೆದು ನಿಂತ ಹೆಮ್ಮರಗಳನ್ನು ಸಹ ಅನೇಕ ಹೊಡೆತಗಳಿಂದ ನೆಲಕ್ಕೆ ಉರಳಿಸಬಹುದು.ಅಂದರೆ ಯಶಸ್ಸಿಗೆ ಒಂದರ ಮೇಲೊಂದರಂತೆ ಪ್ರಯತ್ನಗಳು ಬೇಕಾಗುತ್ತವೆ. “ಬಹುತೇಕ ಜನರು ಯಶಸ್ಸಿನ ಬಾಗಿಲವರೆಗೆ ಬಂದು, ತಮ್ಮ ಪ್ರಯತ್ನ ಬಿಟ್ಟು ಬಿಡುತ್ತಾರೆ. ಹೌದು, ವಿಜಯದ ಗುರಿ ಒಂದು ಗಜ ದೂರವಿರುವಾಗ, ಕೇವಲ ಒಂದು ಅಡಿ ಇರುವಾಗ ಯತ್ನ ಬಿಟ್ಟು ಬಿಡುತ್ತಾರೆ.’ಎನ್ನುತ್ತಾರೆ ಎಚ್. ರಾಸ್. ಪೆರಾಟ್. ಕೊನೆಯ ಹೆಜ್ಜೆಯವರೆಗೂ ಪ್ರಯತ್ನಿಸಿ ಸೋಲಿನ ಸುಳಿಯಲ್ಲೇ ಅಡಗಿದ ಗೆಲುವು ತಂತಾನೇ ಹರಿದು ಬರುತ್ತದೆ. ************************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಮುಖಾಮುಖಿ

“ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ” “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ನಾಗರೇಖಾ ಗಾಂವಕರ್ ನಾಗರೇಖಾ ಗಾಂವ್ಕರ್ ಅಂಕೋಲಾ ತಾಲೂಕಿನ ಆಡ್ಲೂರು ಗ್ರಾಮದವರು. ನಾಗರೇಖಾ ಅವರು ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಾಭಾಷಾ ಉಪನ್ಯಾಸಕಿ. ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧,೨ ನ್ನು ಸಹ ಪ್ರಕಟಿಸಿದ್ದಾರೆ. ಕತೆಗಳನ್ನು ಸಹ ಬರೆಯುವ ಇವರು, ಕೆಲ ಕತಗಳಿಗೆ ಬಹುಮಾನ ಸಹ ಪಡೆದಿದ್ದಾರೆ. ಕನ್ನಡ ಕವಿಗಳ ಕವಿತೆಗಳನ್ನು ಆಂಗ್ಲಭಾಷೆಗೆ ತರ್ಜಿಮೆ ಮಾಡುವಲ್ಲಿ ಸಹ ಈಚೆಗೆ ತೊಡಗಿಕೊಂಡಿದ್ದಾರೆ. ಕನ್ನಡ ಕಾವ್ಯ ಜನಪರವಾಗಿ, ಮಹಿಳಾ ಜಗತ್ತಿನ ಕುರಿತು ಸ್ಪಂದಿಸುತ್ತಲೇ ಬಂದಿದೆ. ಸಮಾಜದ ಪ್ರತಿಬಿಂಬವೇ ಆಗಿರುವ ಸಾಹಿತ್ಯ, ನೋವಿಗೆ ಸಾಂತ್ವಾನ ಹೇಳಿದೆ. ದುಃಖಕ್ಕೆ ಮಿಡಿದಿದೆ. ಅನ್ಯಾಯವನ್ನು ಪ್ರತಿಭಟಿಸಿದೆ. ತಾಯಿಯಂತೆ ಪ್ರೀತಿ,ವಾತ್ಯಲ್ಯಗಳನ್ನು ನೀಡಿದೆ. ಕಾವ್ಯ ಅಮೃತಕ್ಕೆ ಹಾರುವ ಗರುಡ ಎಂಬ ಮಾತಿದೆ. ಕಾವ್ಯದ ದಿಕ್ಕು ದಿಶೆಗಳನ್ನು ಕನ್ನಡ ಕಾವ್ಯ ಜಗತ್ತು ನಿರಂತರವಾಗಿ ತನ್ನ ದಾರಿಯನ್ನು ಹುಡುಕುತ್ತಾ ಸಾಗಿದೆ. ಈ ಸಲ ಸಂಗಾತಿ ವೆಬ್ ನೊಂದಿಗೆ ನಾಗರಾಜ್ ಹರಪನಹಳ್ಳಿ ಅವರ ಜೊತೆ ಮುಖಾಮುಖಿಯಾಗಿದ್ದಾರೆ ಕವಯಿತ್ರಿ ನಾಗರೇಖಾ ಗಾಂವ್ಕರ್. …… ಪ್ರಶ್ನೆ : ಕವಿತೆ ಏಕೆ ಬರೆಯುತ್ತೀರಿ? ಉತ್ತರ : ಬದುಕಿಗೆ ಜೀವಂತಿಕೆಯನ್ನು ತುಂಬುವಂತಹ ಎಷ್ಟೆಷ್ಟೋ ಪ್ರಯತ್ನಗಳಿವೆ. ಭಾವ ಜೀವಿಯಾದವ ಸಂವೇದನೆಗಳ ತಾಕಲಾಟದಲ್ಲಿ ವೈಯಕ್ತಿಕ ದರ್ಶನಗಳ ಕಂಡುಕೊಳ್ಳುವತ್ತ ಹಾಗೂ ಅದನ್ನು ಒಡಮೂಡಿಸುವಲ್ಲಿ ಇದೊಂದು ಮಾರ್ಗ ಹಿಡಿಯುವುದಿದೆ. ಹಾಗಾಗಿ ಕವಿತೆ ನನ್ನನ್ನು ಜೀವಂತವಾಗಿಡುವಲ್ಲಿ ಸಹಕರಿಸುತ್ತದೆ. ಯಾಂತ್ರಿಕ ಬದುಕಿನ ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ. ನಾನು ಯಾರಿಗಾಗಿ ಬರೆಯುತ್ತೇನೆ ಅಂತಾ ಟಾಲಸ್ಟಾಯ್ ಬಹಳ ವಿಷಾದದಿಂದ ಕೇಳಿಕೊಂಡಿದ್ದನಂತೆ. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ನಾನು ಹೇಳಬಯಸುವುದಿಷ್ಟೇ! ದ್ವಂದ್ವಗಳನ್ನು ಮೀರಲು, ನನ್ನ ನಾನು ಕಳೆದುಕೊಳ್ಳಲು, ನಿರಾಳವಾಗಲು ಕವಿತೆಗಳನ್ನು ಬರೆದದ್ದು ಇದೆ. ಬರೆಯುತ್ತಿರುವೆ. ಕವಿತೆ ಹುಟ್ಟುವ ಕ್ಷಣ ಯಾವುದು? ಕವಿತೆ ಹುಟ್ಟುವುದು ಕೂಡಾ ಅತೀವ ವಿಷಾದದ ನೆರಳಲ್ಲಿ, ದುಃಖದ ಪರಮಾವಧಿಯಲ್ಲಿ ಇಲ್ಲವೇ ಸಂತೋಷದ ಉತ್ತುಂಗದಲ್ಲಿ. ಅದು ವೈಯಕ್ತಿಕ ಸಂದರ್ಭವೇ ಆಗಿರಬಹುದು ಇಲ್ಲ ಸಾಮಾಜಿಕ ಸಾಂಸ್ಕೃತಿಕ ನೆಲೆಗಳಲ್ಲಿ ಉಂಟಾದ ವಿಪ್ಲವದ ಸಂದರ್ಭವೇ ಆಗಿರಬಹುದು. ಪ್ರಕೃತಿಯಲ್ಲಿ ಮೈ ಮರೆತಾಗ,ಅನ್ಯಾಯ ಕಂಡಾಗ, ಅಸಹಾಯಕತೆ ಉಂಟಾದಾಗ, ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ, ಕವಿತೆ ಹುಟ್ಟುತ್ತದೆ. ಕವಿತೆಗಳ ವಸ್ತು, ವ್ಯಾಪ್ತಿ, ಹೆಚ್ಚಾಗಿ ಯಾವುದು? ಕವಿತೆ ಆ ಸಮಯದ ಫಲ. ಆದರೂ ಬಾಲ್ಯದ ನೆನಪುಗಳು ನನ್ನ ಬಹಳ ಕಾಡಿವೆ. ಸಮೃದ್ಧವಾದ ಜೀವನಾನುಭವ ಕೊಟ್ಟ ದಿನಗಳವು ಅವು. ಹಾಗಾಗಿ ಆ ನೆನಪುಗಳು ಮಧ್ಯ ವಯಸ್ಸಿನಲ್ಲಿ ನಿಂತು ನೋಡಿದಾಗ ಅಲ್ಲಿಗೂ ಇಲ್ಲಿಗೂ ಇರುವ ಅಗಾಧ ವ್ಯತ್ಯಾಸ, ದೃಷ್ಟಿಕೋನಗಳ ವೈರುಧ್ಯಗಳು ಅನುಭವಗಳು ಎಲ್ಲ ಭಿನ್ನ ವಿಭಿನ್ನವಾಗಿ ಕವಿತೆಗಳಲ್ಲಿ ಮೂಡಿದ್ದಿದೆ. ಹಾಗೇ ಸುತ್ತಲಿನ ಸಮಾಜದ ಓರೆಕೋರೆಗಳು ಅನ್ಯಾಯದ ನಡೆಗಳು, ಬಂಡಾಯವನ್ನು ಮನದಲ್ಲಿ ಮೂಡಿಸಿದಾಗ, ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆ ಸಂಗತಿಗಳು ಕವಿತೆಯ ವಸ್ತುವಾಗಿವೆ. ಸಮಕಾಲೀನ ಜೀವನದಲ್ಲಿ ದೌರ್ಜನ್ಯವನ್ನು, ನೋವನ್ನು ವ್ಯಕ್ತಪಡಿಸುವುದು ಮಹಿಳಾ ಕವಿತೆಗಳ ಗುರಿಯಾಗಿರದೇ ಸಮಾನ ಗುಣಮಟ್ಟದ ಕಾವ್ಯ ಕಟ್ಟುವ ದಿಶೆಯಲ್ಲಿ ನನ್ನ ಒಲವಿದೆ. ಪ್ರೀತಿಯ ಕವಿತೆಗಳು, ಪ್ರಕೃತಿಯ ಕುರಿತಾದ ಕವಿತೆಗಳು, ಸಾಮಾಜಿಕ ಅಸಮಾನತೆಯ ಕುರಿತಾಗಿ ಕೆಲವು ಕವಿತೆಗಳ ಬರೆದಿರುವೆ. ಕವಿತೆಗಳಲ್ಲಿ ಬಾಲ್ಯ ಇಣುಕಿದೆಯಾ? ಬಾಲ್ಯದ ನೆನೆಪುಗಳು, ಅದು ಎದೆಯೊಳಗೆ ಎಂದೂ ಮಾಸದ ನೆನೆಪುಗಳ ಮಾಲೆಯಾಗಿ ಇದ್ದದ್ದು, ಕಳೆದುಕೊಂಡ ಹೆತ್ತವರ ನೆನೆಪು, ಅವರುಂಡ ನೋವಿನ ದಿನಗಳ ನೆನಪು ನನ್ನ ಕವಿತೆಗಳಿಗೆ ವಸ್ತುವಾಗಿದೆ. ಆದರೆ ಬದುಕನ್ನು ಒಳಗೊಳ್ಳುವ ಸಾರ್ವಕಾಲಿಕ ಜೀವನ ಸತ್ಯಗಳ ಬಿಂಬಿಸುವ ಕವಿತೆಗಳ ಹುಟ್ಟಿಗೂ, ತುರ್ತು ಕಾಲಕ್ಕೆ, ಆ ಕ್ಷಣದ ತೀವ್ರತೆಗೆ ಹುಟ್ಟುವ ಕವಿತೆಗಳಿಗೂ ಒಂದು ಅವ್ಯಕ್ತ ಭಾವದ ತುಡಿತ ಇದ್ದೇ ಇರುತ್ತದೆ. ಹಾಗಾಗಿ ನನ್ನ ಕವಿತೆಗಳು ನಿರ್ದಿಷ್ಟ ಪ್ರಕಾರದಲ್ಲಿ ಗುರುತಿಸಿಕೊಳ್ಳುವಲ್ಲಿ ಸೋತಿವೆ ಎಂಬ ಬೇಸರವಿದೆ ನನಗೆ. ಆದರೂ ಬದುಕು ಎಲ್ಲ ಅನುಭವಗಳ ಮೂಲಕವೇ ಸಾಗುವುದರಿಂದ ಅನುಭವ ಜನ್ಯ ಅಭಿವ್ಯಕ್ತಿಯಾಗಿ ಕವಿತೆ ಹುಟ್ಟಿದೆ. ಆದರೆ ಅದು ಕೇವಲ ಅನುಭವವನ್ನು ಮಾತ್ರ ಕಡೆಯುವ ಕೋಲಲ್ಲ. ಅದರೊಳಗೆ ನಿಗೂಢತೆಗೆ ತೆರೆದುಕೊಳ್ಳಬೇಕು. ವಸ್ತು, ಅರ್ಥವನ್ನು ದಾಟಿ ಅಗಮ್ಯದೆಡೆಗೆ ಸಾಗಬೇಕು. ಅಂತಹ ಕೆಲವೇ ಕೆಲವು ಕ್ಷಣಗಳ ನಾನು ಅನುಭವಿಸಿದ್ದೇನೆ. ಮತ್ತು ಏಲಿಯಟ್ ಹೇಳುವ “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ಈ ಮಾತನ್ನು ನಾನು ಬಹಳವಾಗಿ ಒಪ್ಪುವೆ. ಎಲ್ಲ ಕವಿತೆಗಳ ವಸ್ತುವು ನನ್ನ ಅನುಭವವೇ ಆಗಬೇಕೆಂದಿಲ್ಲ. ಪ್ರಸ್ತುತ ರಾಜಕಾರಣದ ಬಗ್ಗೆ ? ನೋಡಿ ರಾಜಕಾರಣ ಪದಕ್ಕೆ ಎಷ್ಟು ಅನರ್ಥ ಬಂದಿದೆ, ಅದು ಅಪಭ್ರಂéಶಕ್ಕೆ ಒಳಗಾಗಿದೆ. ಇವತ್ತು ಸಾಮಾನ್ಯ ಭಾಷೆಯಲ್ಲಿ ಅವನು ಬಹಳ ರಾಜಕಾರಣ ಮಾಡುತ್ತಾನೆ ಎಂದು ಯಾರಾದರೂ ಹೇಳಿದರೆ ಅವನೇನೋ ಕುತಂತ್ರ ಮಾಡುತ್ತಿದ್ದಾನೆ ಎಂದು ಅರ್ಥೈಸಿಕೊಳ್ಳಲಾಗುತ್ತದೆ.. ಹಾಗಾಗಿ ನನಗೆ ರಾಜಕೀಯ ಅದರ ದೊಂಬರಾಟಗಳ ಬಗ್ಗೆ ತೀವ್ರ ನಿರಾಸಕ್ತಿ, ಅಷ್ಟೇ ಅಲ್ಲ ಜಿಗುಪ್ಸೆ ಕೂಡಾ. ದೇಶದ ಒಳಿತನ್ನು ಉದ್ಧಾರವನ್ನು ಮೂಲಧ್ಯೇಯವಾಗಿಸಿಕೊಂಡ ರಾಜಕೀಯ ನಾಯಕರು ಇಂದು ವಿರಳಾತೀವಿರಳ. ಭಾರತದಲ್ಲಿ ಸ್ವಜನ ಹಿತಾಸಕ್ತಿಯೇ ನಾಯಕರ ಮುಖ್ಯ ಧ್ಯೇಯ. ಅದೂ ಪಕ್ಷಾತೀತವಾದ ಪರಂಪರೆಯಾಗಿ ನಮ್ಮಲ್ಲಿದೆ. ಕೊಳೆತು ನಾರುತ್ತಿರುವ ರಾಜಕಾರಣದ ಬಗ್ಗೆ ಕವಿತೆ ಕಟ್ಟಿ ಅದನ್ನು ವಿಡಂಬಿಸುವ ಕವಿತೆಗಳು ಪುಂಖಾನುಪುಂಖವಾಗಿ ಬರುತ್ತಿವೆ. ಆದರೂ ಪದಗಳು ಸೋತಿವೆ. ಹಾಗಿದ್ದೂ ಅಂತಹ ಕವಿತೆಗಳು ತುತರ್ುಕಾಲದ ಕವಿತೆಗಳಾಗಿ ನಾನೂ ಬರೆದಿದ್ದಿದೆ, ಧರ್ಮ ದೇವರು ವಿಚಾರದಲ್ಲಿ ನಿಲುವು ? ವಿಗ್ರಹ ಆರಾಧನೆ, ನಂಬಿಕೆ, ನಾಮಸ್ಮರಣೆ, ಭಯ ಇವು ಯಾವುದೂ ಇಲ್ಲದಂತೆ ಮನಸ್ಸು ಸ್ವಚ್ಛವಾಗಿದ್ದಾಗ ಕಾಲಾತೀತವಾದ, ಶಾಶ್ವತವಾದ ದೇವರೆಂದು ಕರೆಯಬಹುದಾದ ಸತ್ಯ ಕಾಣಿಸುತ್ತದೆ. ಇದನ್ನು ಕಾಣಲು ಅಪಾರವಾದ ಒಳನೋಟ, ತಿಳುವಳಿಕೆ, ತಾಳ್ಮೆ ಬೇಕು. ಧರ್ಮವೆಂದರೆ ಏನು ಎಂದು ಅನ್ವೇಷಿಸುವವರು ದಿನದಿನವೂ ಅನ್ವೇಷಿಸುತ್ತಲೇ ಇರುವವರು ಮಾತ್ರ ನಿಜದ ಧರ್ಮ ಅರಿಯಬಲ್ಲರು ಎಂದು ಜಿಡ್ಡು ಕೃಷ್ಣಮೂರ್ತಿ ಹೇಳುತ್ತಾರೆ. ಆದರೆ ಅಂತಹ ಒಳನೋಟ ಇನ್ನು ಪಡೆಯದ ನಾನು ಆಸ್ತಿಕ ಮನಸ್ಥಿತಿಯಲ್ಲಿ ಸಂಸ್ಕೃತಿಯ ನೆರಳಲ್ಲಿ ಇದ್ದು, ಸಾರ್ಥಕ ಬದುಕಿಗೆ ಬೇಕಾದ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವಂತಹ ಆಚರಣೆಗಳಲ್ಲಿ ಒಲವಳ್ಳವಳು. ಅಲ್ಲದೇ ನಮ್ಮದೇ ಆದ ಒಂದು ಸಂಸ್ಕೃತಿಯ ಉಳಿವು ಬೇಕೆನ್ನುವ ನಿಟ್ಟಿನಲ್ಲಿ ಪರಂಪರೆಯನ್ನು ಬೆಳೆಸಿಕೊಂಡು ಹೋಗುವುದು ಉತ್ತಮ. ನಕಾರಾತ್ಮಕ ಧೋರಣೆ ವೈಚಾರಿಕತೆ ಆಗುವುದಿಲ್ಲ. ಆದರೆ ಮೌಢ್ಯದಿಂದ ಕೂಡಿದ ಸಂಪ್ರದಾಯಗಳಿಗೆ ನನ್ನ ವಿರೋಧವಿದೆ. ಇಂತಹುಗಳೆಲ್ಲ ಹೆಚ್ಚಾಗಿ ರೂಢಿಗತವಾಗಿ ಬಂದ ಸಂಪ್ರದಾಯಗಳು. ಪರಂಪರೆಗೂ ಸಂಪ್ರದಾಯಕ್ಕೂ ವ್ಯತ್ಯಾಸಗಳು ಬಹಳ ಇವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ? ನಮ್ಮಲ್ಲಿ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಇದೆ. ನಮ್ಮದೇ ಆದ ಜೀವನ ವಿಧಾನವಿದೆ. ಆದರೂ ಇನ್ನೊಂದು ಬಗೆಯಲ್ಲಿ ಪ್ರಕ್ಷುಬ್ಧ ಸಾಂಸ್ಕೃತಿಕ ವಾತಾವರಣವನ್ನು ಅನುಭವಿಸುತ್ತಿದ್ದೇವೆ. ಆದರೂ ವಿವಿಧತೆ ಇದ್ದಲ್ಲಿ ಸಹಜವಾದ ಭಿನ್ನತೆ ಇದು. ಏಕಮುಖ ಸಂಚಲನೆಯನ್ನು ಕಂಡುಕೊಳ್ಳಲಾಗದ, ಭಿನ್ನತೆಯಲ್ಲಿಯೇ ಏಕತೆಯನ್ನು ಹೊಂದಬೇಕಾದ ರೀತಿಯನ್ನ ಪ್ರತಿಪಾದಿಸುವತ್ತ ನಾವೆಲ್ಲ ಮನಸ್ಸು ಮಾಡಬೇಕಾಗಿದೆ. ಸಾಹಿತ್ಯ ವಲಯದ ರಾಜಕಾರಣ ಹೇಗಿದೆ? ಇತ್ತೀಚೆಗೆ ಸಾಹಿತ್ಯ ವಲಯದ ರಾಜಕಾರಣ ರಾಜಕೀಯದ ರಾಜಕಾರಣಕ್ಕಿಂತ ತೀರಾ ಕೆಳಮಟ್ಟದ್ದು ಮತ್ತು ಅಪಾಯಕಾರಿ ನಿಲುವಿನದು. ಸಮಾನತೆ ಸಹಬಾಳ್ವೆಯ ಸ್ವಸ್ಥ ಸಮಾಜ ನಿಮರ್ಾಣ ಮಾಡಬೇಕಾದ ಜವಾಬ್ದಾರಿ ಮರೆತು ಪಂಥಗಳಲ್ಲಿ ಮೈಮರೆತು, ಪರಸ್ಪರ ಕೆರಚಾಟ, ಕೆಸರಾಟದಲ್ಲಿ ತೊಡಗಿದಂತಿದೆ. ಜಾತಿ ಪಂಥಗಳ ಮೇಲಾಟ ಇಲ್ಲೂ ಢಾಳಾಗಿ ಕಾಣುತ್ತಿದೆ. ದೇಶದ ಚಲನೆಯ ಬಗ್ಗೆ ಏನನಿಸುತ್ತದೆ…? ಈ ದೇಶ ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಆದರೆ ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ಸದೃಢ ಸಮಾಜವನ್ನು, ಪ್ರಜಾಪ್ರಭುತ್ವದ ಬುನಾದಿ ಮೇಲೆ ನಿಂತ ಆಡಳಿತ ವ್ಯವಸ್ಥೆಯನ್ನು ಪೋಷಿಸುವ ಅಗತ್ಯವಿದೆ. ನೆಚ್ಚಿನ ಕವಿಗಳು ಕನ್ನಡ ಮತ್ತು ಇಂಗ್ಲೀಷನಲ್ಲಿ? ನನ್ನ ಇಷ್ಟದ ಕವಿ ಕುವೆಂಪು, ನವೋದಯದ ಕಾಲದಲ್ಲೂ ಬಂಡಾಯದ ದನಿ, ಹಾಗೇ ಕವಿ ಸುಬ್ರಾಯ ಚೊಕ್ಕಾಡಿಯವರು, ಮಹಿಳಾ ಕವಯತ್ರಿಯರಲ್ಲಿ ಮಾಲತಿ ಪಟ್ಟಣಶೆಟ್ಟಿ, ವೈದೇಹಿ, ಲಲಿತಾ ಸಿದ್ದಬಸವಯ್ಯ ಇವರೆಲ್ಲರ ಕವಿತೆಗಳು ಇಷ್ಟ.ಇಂಗ್ಲೀಷ ಸಾಹಿತ್ಯದಲ್ಲಿ ನನ್ನ ಮೆಚ್ಚಿನ ಕವಯತ್ರಿ ಎಮಿಲಿ ಡಿಕನ್ಸನ್- ಬದುಕಿನುದ್ದಕ್ಕೂ ಮುಂಚೂಣಿಗೆ ಬರೆದೇ ಎಲೆಮರೆಯ ಕಾಯಾಗಿಯೇ ಕಾವ್ಯ ಕಟ್ಟಿದ ಆಕೆ ಸತ್ತ ನಂತರ ಇಂದಿನ ಬಹುತೇಕ ಯುವ ಮನಸ್ಸುಗಳ ಮನಸ್ಸನ್ನು ಸೆರೆಹಿಡಿದದ್ದು. ಸಾವನ್ನು ಸಂಭ್ರಮಿಸಿದವಳು ಆಕೆ. ಹಾಗೇ ಜಾನ್ ಕೀಟ್ಸ್, ಡಿ ಎಚ್ ಲಾರೆನ್ಸ್ ಮತ್ತು ಡಬ್ಲೂ ಬಿ ಯೇಟ್ಸ್ ಕೂಡಾ ನೆಚ್ಚಿನ ಕವಿಗಳು ಸಾಹಿತ್ಯದ ಬಗ್ಗೆ ಕನಸುಗಳೇನು? ಸಾಹಿತ್ಯ ಬದುಕಿನ ಹಾದಿಗೆ ಒಂದಿಷ್ಟು ಬಲವನ್ನು ನೀಡುವಂತದ್ದು, ಶೋಷಿತ ವರ್ಗದ ದನಿ ಹಾಗೂ ಮಹಿಳಾ ದನಿ ಸಾಹಿತ್ಯದಲ್ಲಿ ಗಟ್ಟಿಯಾಗಲಿ, ಅದಕ್ಕೆ ತಕ್ಕ ಬೆಂಬಲ ಸಿಗಲಿ. ಇನ್ನು ನನ್ನ ಮಟ್ಟಿಗೆ ಅಂತರಂಗದ ತುಮುಲಗಳ ಇಡಿಯಾಗಿ ತೆರೆದುಕೊಳ್ಳಲು, ನಿಸೂರಾಗಲು ಇರುವ ಸಾಧನವಾಗಿ, ಸ್ನೇಹಿತೆಯಾಗಿ, ಕವಿತೆ ಕೈಹಿಡಿದಿದೆ. ಬರೆದದ್ದೆಲ್ಲ ಬೆಲ್ಲವೇ ಆಗಿಲ್ಲ. ಆದರೆ ಬದುಕನ್ನು ವಿಕಸನಗೊಳಿಸಿದೆ. ಜೀವನವನ್ನು ಸಂಭ್ರಮಿಸಲು ಕಲಿಸಿದೆ. ನೋವಿಗೆ ಮುಲಾಮಾಗಿದೆ. ಕನಸಿಗೆ ತೈಲವನ್ನೆರೆದಿದೆ. ರಾಗದ್ವೇಷಗಳಿಗೆ ಶಾಯಿಯಾಗಿದೆ.ಕವಿತೆಯಲ್ಲಿ ನನಗೆ ವಿಶ್ವಾಸವಿದೆ. ಈಚೆಗೆ ಓದಿದ ಕೃತಿಗಳ ಬಗ್ಗೆ ಹೇಳಿ ಎಚ್ ಎಸ್ ರಾಘವೇಂದ್ರರಾವ್ ಅನುವಾದಿಸಿರುವ ಜಿಡ್ಡು ಕೃಷ್ಣಮೂರ್ತಿಯ ಸಂಸ್ಕೃತಿ ಸಂಗತಿ. ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಕನ್ನಡಕ್ಕೆ ಅನುವಾದಿಸಿರುವ ಮರಾಠಿ ಸಾಹಿತಿ ವಿ.ಸ ಖಾಂಡೇಕರರ ಆತ್ಮಕಥನ ಒಂದು ಪುಟದ ಕಥೆ ಹಾಗೂ ಪ್ರತಿಭಾ ನಂದಕುಮಾರರ ಅನುದಿನದ ಅಂತರಗಂಗೆ ಇದಿಷ್ಟು ಇತ್ತೀಚೆಗೆ ಓದಿದ ಕೃತಿಗಳು. ನಿಮಗೆ ಇಷ್ಟದ ಕೆಲಸ ಓದು ಬರಹದ ಜೊತೆಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವುದು, ಬಾಲ್ಯದಲ್ಲಿ ತೋಟ ಗದ್ದೆ ಹಳ್ಳ ಕೊಳ್ಳ ಇಲ್ಲಿಯೇ ನನ್ನ ಬದುಕಿನ ಕನಸುಗಳು ಚಿಗುರಿದ್ದು. ಹಾಗೇ ಅಡುಗೆ ಮಾಡುವುದು, ಮನೆಯನ್ನು ಒಪ್ಪ ಓರಣಗೊಳಿಸುವುದು. ನಿಮ್ಮ ಇಷ್ಟದ ಸಿನೇಮಾ ? ಇದೇ ಅಂತ ಹೇಗೆ ಹೇಳಲಿ. ಕುಬಿ ಮತ್ತು ಇಯಾಲ್, ಸರಕಾರಿ ಪ್ರಾಥಮಿಕ ಶಾಲೆ ಕಾಸರಗೋಡು, ಹೀಗೇ ಸುಮಾರು ಇವೆ. ಮರೆಯಲಾಗದ ಘಟನೆ ಮೊದಲ ಬಾರಿ ಊರು ಬಿಟ್ಟು ನೌಕರಿಗೆ ಹೋದಾಗ ಹೊಸ ಸ್ಥಳದಲ್ಲಿ ಕಂಡ ಕಸದ ತೊಟ್ಟಿಯಲ್ಲಿ ಎಸೆದ ನವಜಾತ ಹೆಣ್ಣು ಶಿಶುವನ್ನು ನೋಡಿದ್ದು, ಸುತ್ತಮುತ್ತ ಹತ್ತಾರು ದೌರ್ಜನ್ಯಗಳ ಕಂಡಿದ್ದಿದೆ. ಹೆತ್ತವರ ಸಾವನ್ನು ನೋಡಿದ್ದಿದೆ. ಸಂಬಂಧಿಗಳ ಅಕಾಲ ಮರಣ ನೆನಪಾದರೆ ನೋವು ಮಡುಗಟ್ಟುತ್ತದೆ ಇವೆಲ್ಲ ಸದಾ ನೆನಪಿನಲ್ಲಿ ಉಳಿಯುವಂತಹವು. ******************************************* ********************************************* ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಕಬ್ಬಿಗರ ಅಬ್ಬಿ – ಸಂಚಿಕೆ -7 ಕಾವ್ಯ, ವಾಸ್ತವ ಮತ್ತು ‌ವಿಜ್ಞಾನಗಳು ಮುಖಾಮುಖಿಯಾದಾಗ ಕಾವ್ಯ, ವಾಸ್ತವ ಮತ್ತು ‌ವಿಜ್ಞಾನಗಳು  ಮುಖಾಮುಖಿಯಾದಾಗ ಓಹ್! ನಮಸ್ಕಾರ ಸಾರ್!.. ಬನ್ನಿ..ಬನ್ನಿ.. ಹೀಗೆ ಬನ್ನಿ! ಇದೇ ನೋಡಿ! ನಮ್ಮ ಕವಿಗಳ ಮನೆಯ ಡ್ರಾಯಿಂಗ್ ರೂಂ,  ಎಷ್ಟು ವಿಶಾಲವಾಗಿದೆ ಅಲ್ವಾ. ಕೆಲವೇ ಕೆಲವು ಪೀಠೋಪಕರಣಗಳು, ಅವರಿವರು ಬಂದಾಗ, ಮುಖಕ್ಕೆ ಮುಖ ಕೊಟ್ಟು ಮಾತಾಡಲು, ಕೆಲವೊಮ್ಮೆ ಮುಖವಾಡ ತೊಟ್ಟು ಮಾತಾಡಲೂ. ಸ್ವರಗಳು ಕಂಪಿಸುವ ಮಾತುಗಳು, ಸ್ವರಗಳು ಸರೀಸೃಪದ ಹಾಗೆ ಹರಿದಾಡುವ ಮಾತುಗಳು, ಹಾವಿನಂತೆ ಬುಸುಗುಟ್ಟುವ ಮಾತುಗಳು, ಏರು ಸ್ವರ, ತಗ್ಗು ಸ್ವರದ ಬೆನ್ನೇರಿ ಥಳತಳಿಸುವ ಮಾತುಗಳು ಸಾಮಾನ್ಯವೇ. ಮಾತುಗಳು,  ಮಾತುಗಳು ಖಡ್ಗ ಹಿಡಿದು ಕಾದಿ ಮಾತು ಮಾತನ್ನು ತುಂಡರಿಸಿ ತುಂಡು ತುಂಡಾಗಿ ಮಾತುಗಳು ಕಸದ ಬುಟ್ಟಿ ಸೇರಿಯೋ ಅಥವಾ ಕಣ್ಣೀರಾಗಿ ಹರಿದೋ, ಕೊನೆಗೆ ಒಂದೇ ದೊಡ್ಡ ಮಾತು ಉಳಿದಂತೆ ಭಾಸವಾಗುತ್ತದೆ. ಮಾತುಗಳು ಮುಖಾಮುಖಿಯಾದವೆಂದರೆ, ಅಲ್ಲಿ ಯುದ್ಧವೇ ನಡೆಯಬೇಕೆಂದಿಲ್ಲ. ಮಾತುಗಳು ಪ್ರಣಯೋನ್ಮತ್ತ ಕಾಳಿಂಗಸರ್ಪಗಳ ಹಾಗೆ ಒಂದಕ್ಕೊಂದು ಸುತ್ತಿ  ಆಟವಾಡಿ, ಶಾಂತವಾಗಿ ಮಾತುಗಳು ಮೊಟ್ಟೆಯಿಟ್ಟು, ಕಾವು ಕೊಟ್ಟು ಹತ್ತಾರು ಮರಿಗಳಾಗಿ ಹರಿದಾಡುತ್ತವೆ. ಕೆಲವೊಮ್ಮೆ ಮಾತುಗಳು ಗಂಟಲೊಳಗೇ ಇಂಗಿ, ಮೌನ ಮೌನಕ್ಕೇ ಮುಖವಾಗುವುದೂ ಇದೆ. ಈ ಡ್ರಾಯಿಂಗ್ ರೂಂ ನಲ್ಲಿ, ಒಂದು ಕುರ್ಚಿ, ಟೇಬಲ್ಲು. ಆ ಕುರ್ಚಿಯಲ್ಲಿ ಕುಳಿತು, ರಾತ್ರೆ –  ಜಗತ್ತು ಮಲಗಿದಾಗ,  ಕಿಟಿಕಿಯಲ್ಲಿ ಇಣುಕುವ ಆಗಸದತ್ತ  ಕಣ್ಣು ನೆಟ್ಟರೆ, ಕೆಲವೊಮ್ಮೆ ತಾರೆಗಳ ಮಾತುಗಳು ಇಳಿದು ಬಂದು, ಮನಸ್ಸೊಳಗೆ ಆವಿಷ್ಕರಿಸುತ್ತವೆ. ಕೆ. ವಿ. ತಿರುಮಲೇಶ್ ಅವರ “ಮುಖಾಮುಖಿ” ಕವಿತೆಯಲ್ಲಿ ಒಂದು ದಷ್ಟ ಪುಷ್ಟ ಬೆಕ್ಕು,ಕವಿಯ ಡ್ರಾಯಿಂಗ್ ರೂಮ್ ಗೆ ನುಗ್ಗುತ್ತೆ.  ಅವರದ್ದೇ ಸಾಲುಗಳು ಹೀಗಿವೆ. “ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು ಹಠಾತ್ತನೆ ನಿಂತಿತು.  ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು. ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ. ತುಸು ಅಸಮಾಧಾನದಿಂದ ನನ್ನ ಕಡೆ ನೋಡಿತು. ನಮ್ಮ ಕಣ್ಣುಗಳು ಪರಸ್ಪರ ನಟ್ಟು ಯಾರು ಮೊದಲು ಮುಖ ತಿರುಗಿಸುವುದು ಎಂಬ ಒಂದು ವಿಧ ಅಘೋಷಿತ ಯುದ್ಧದಲ್ಲಿ ಇಬ್ಬರೂ ತೊಡಗಿದೆವು. ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ ಎಂದು ನನಗೆ ಗೊತ್ತಿರಲಿಲ್ಲ.” ಬಂದದ್ದು ಬೆಕ್ಕು.‌ ಪೀಚು ಪೀಚು ಬೆಕ್ಕಲ್ಲ,  ದಷ್ಟಪುಷ್ಟ ಬೆಕ್ಕು. ಅದು ಮನುಷ್ಯನ ಡ್ರಾಯಿಂಗ್ ರೂಂಗೆ ಬಂದದ್ದು ಪ್ರಾಣಿ ಮನುಷ್ಯನ ಮುಖಾಮುಖಿ ಎಂಬುದು ನೇರವಾದ ಅರ್ಥ. ಆಮೇಲೆ ಮನುಷ್ಯ ಮತ್ತು ಪ್ರಾಣಿಯ ಅಘೋಷಿತ ದೃಷ್ಟಿಯುದ್ಧ,ಕವಿತೆಯುದ್ದಕ್ಕೂ. ಈ ಕವಿತೆಯಲ್ಲಿ ಬಂದದ್ದು ನಿಜವಾದ ಬೆಕ್ಕು ಎಂದೇ ಅದರ ಅರ್ಥವೇ?. ಮನುಷ್ಯನ ಡ್ರಾಯಿಂಗ್ ರೂಂ, ಮನುಷ್ಯನ ಮನಸ್ಸು. ಆ ಮನಸ್ಸೊಳಗೆ ಒಂದು ಪ್ರಾಣಿ ಪ್ರಜ್ಞೆಯಿದೆ. ಮನುಷ್ಯ ಮೂಲತಃ ಪ್ರಾಣಿಯೇ ಆದ್ದರಿಂದ, ಅದು ದಷ್ಟಪುಷ್ಟ ಪ್ರಾಣಿ ಪ್ರಜ್ಞೆ.  ಮನುಷ್ಯನ ಮನಸ್ಸೊಳಗೆ, ವಿಕಸಿತ,ಚಿಂತನಶೀಲ, ವಿವೇಚನಾಶೀಲ ಪ್ರಜ್ಞೆಯೂ ಇದೆ. ಅದು ಕವಿ. ಈ ಎರಡೂ ಪ್ರಜ್ಞೆಯೊಳಗೆ ನಡೆಯುವ ದೃಷ್ಟಿ ಯುದ್ಧ ಈ ಕವಿತೆಯಾಗಬಹುದು. ಮೂರನೆಯದಾಗಿ, ಡ್ರಾಯಿಂಗ್ ರೂಂ, ಹೆಸರೇ ಹೇಳುವಂತೆ ಹೊಸ ಹೊಸ ಡ್ರಾಯಿಂಗ್ ಬರೆಯಲು ಉಪಯೋಗಿಸುವ ಕೋಣೆ. ಯಾವುದೇ ಹೊಸತನ್ನು ಬರೆಯುವಾಗ, ಹಳೆಯ, ವಿಚಾರಗಳು,ಹೊಸತನ್ನು ವಿರೋಧಿಸುತ್ತವೆ. ಬೆಕ್ಕು,ಪ್ರಾಣಿ, ಅದು ಮನುಷ್ಯನ ಹಳತು. ಡ್ರಾಯಿಂಗ್ ರೂಂ ನಲ್ಲಿ ಹೊಸತರ ಅನ್ವೇಷಣೆಯಲ್ಲಿ ತೊಡಗಿದಾಗ ದಷ್ಟ ಪುಷ್ಟವಾದ ( well established) ಬೆಕ್ಕು, ಹೊಸ ಡ್ರಾಯಿಂಗ್ ನ್ನು (ಚಿತ್ರ ಬಿಡಿಸುವುದನ್ನು) ವಿರೋಧಿಸುತ್ತೆ. ಹಾಗೆ ನಡೆಯುವುದು ದೃಷ್ಟಿಯುದ್ಧ. ವಿಚಾರಗಳ ಒಂದಕ್ಕೊಂದು ಮುಖಾಮುಖಿ, ವರ್ತಮಾನ ಸಂಧಿಯಲ್ಲಿ, ಭೂತ ಭವಿಷ್ಯಗಳ ಮುಖಾಮುಖಿ. ಇನ್ನೂ ಹತ್ತು ಹಲವು ದೃಷ್ಟಿಯುದ್ಧ ನಮಗೆ ದಿನಾಲೂ ಅನುಭವಗ್ರಾಹ್ಯವಾಗುತ್ತೆ. “ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ ಎಂದು ನನಗೆ ಗೊತ್ತಿರಲಿಲ್ಲ.” ಮುಖಾಮುಖಿಯ ಮುಖ್ಯ ಅಂಗ, ಕಣ್ಣು. ಕಣ್ಣು ಎಂದರೆ, ನೋಟ, ಒಳನೋಟ. ಕಣ್ಣಿನ ಮೂಲಕ ನಾವು ನೋಡುವುದು ಎಂದರೆ, ನಮ್ಮ ಬದುಕಿನಲ್ಲಿ ನಂಬಿದ, ಅಳವಡಿಸಿದ ಸಿದ್ಧಾಂತದ,ಸಂಪ್ರದಾಯದ ಮೂಲಕ ನೋಡುವುದು ತಾನೇ. ಮುಖಾಮುಖಿಯಾದ ಬೆಕ್ಕಿನ ಕಣ್ಣು, ನಿಶ್ಚಲವಾಗಿ ದೃಷ್ಟಿಯುದ್ಧಕ್ಕೆ ಅಣಿಯಾಗಿ ನಿಂತಾಗ, ಆ ಕಣ್ಣುಗಳು ಸ್ಥಿರವಾದ, ಅಚಲಾಗಿ ನಂಬಿದ, ಬದಲಾಗಲು ನಿರಾಕರಿಸುವ ಸಿದ್ಧಾಂತವೇ?. ತಿರುಮಲೇಶ್ ಅವರ ಅನನ್ಯ ಕವಿತೆ ಮುಖಾಮುಖಿಯ ಹಂದರ, ಕವಿಯ ಡ್ರಾಯಿಂಗ್ ರೂಂ ನೊಳಗೆ ನಡೆಯುವ ಬೆಕ್ಕು ಮತ್ತು ವ್ಯಕ್ತಿಯ ನಡುವಿನ ದೃಷ್ಟಿಯುದ್ಧ.  ಹಾಗಂತ, ಈ ಮುಖಾಮುಖಿಯನ್ನು ಪ್ರಾಣಿ ಮತ್ತು ಮನುಷ್ಯನ ನಡುವೆ ನಡೆಯುವ ಡೈನಾಮಿಕ್ಸ್ ಗೆ ಮಾತ್ರ ಸೀಮಿತ ಗೊಳಿಸಿದರೆ, ನಮ್ಮ ಕಣ್ಣು ಕೂಡಾ, ಕವಿ ಹೇಳಿದ, ಬೆಕ್ಕಿನ ನಿಶ್ಚಲ ಕಣ್ಣುಗಳ ಹಾಗೆ ಸ್ಥಿರವೂ, ಸೀಮಿತವೂ ಆಗುತ್ತವೆ. ಮುಖಾಮುಖಿ ಎಂಬ ಒಂದು ಸಹಜಕ್ರಿಯೆ, ನಮ್ಮ ಮನಸ್ಸೊಳಗೆ, ಮನಸ್ಸು ಮನಸ್ಸುಗಳ ನಡುವೆ, ಹಳೆ-ಹೊಸ ಜನರೇಶನ್ ಗಳ ನಡುವೆ, ಸಿದ್ಧಾಂತಗಳ ನಡುವೆ, ಕ್ರಿಯೆ-ಪ್ರತಿಕ್ರಿಯೆಗಳ ನಡುವೆ, ವೈರಸ್ಸು ಮತ್ತು ಬಿಳಿ ರಕ್ತ ಕಣಗಳ ನಡುವೆ, ಮಿಸೈಲು-ಮಿಸೈಲುಗಳ ನಡುವೆ, ತಾರೆಯೊಳಗೆ ನಿರಂತರ ನಡೆಯುವ ಗುರುತ್ವಾಕರ್ಷಣ ಶಕ್ತಿ ಮತ್ತು ಪರಮಾಣು ಸಂಯೋಗದಿಂದ ಉತ್ಪನ್ನವಾದ ಉಷ್ಣಚೈತನ್ಯದ ನಡುವೆ, ಮತ್ತು ನನ್ನ ಅರಿವಿಗೆ ಮೀರಿದ ನೂರಾರು ಪ್ರಕ್ರಿಯೆಗಳಲ್ಲಿ ನಡೆಯುತ್ತಲೇ ಇರುತ್ತೆ.  ಹೈದರಾಬಾದ್ ನ ಕನ್ನಡ ಕವಿ, ಪ್ರಹ್ಲಾದ ಜೋಶಿಯವರ ಕವನ, ” ಕವಿ – ಕವಿಪತ್ನಿ ಯರ ಸಂವಾದ ” ಇಂತಹ ಒಂದು ಸಾತ್ವಿಕ ಮುಖಾಮುಖಿಯ, ಕಣ್ಣಿಗೆ ಕಣ್ಣಿಟ್ಟು ನೋಡುವ,ಅವಲೋಕಿಸುವ ಕವನ. ಈ ಕವಿತೆಯಲ್ಲಿ, ಕವಿ ಮತ್ತು ಕವಿ ಪತ್ನಿಯರ ಸಂಭಾಷಣೆಯೇ ಕವಿತೆಯ ತಂತ್ರ. ಕವಿತೆಯಲ್ಲಿ  ಮನೆಯಾಕೆ, ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ತರಲು ಕವಿಯನ್ನು ಮಾರ್ಕೆಟ್ ಗೆ ಕಳುಹಿಸುತ್ತಾಳೆ. ಕವಿ ಮಾರ್ಕೆಟ್ ನಿಂದ ವಾಪಸ್ ಬಂದಾಗ, ಕವಿ ತೊಟ್ಟ ಬಿಳಿ ಬಟ್ಟೆ ಪೂರಾ ಮಣ್ಣು ಮಣ್ಣಾಗಿದ್ದನ್ನು ನೋಡಿ ತನ್ನ ಸಾತ್ವಿಕ ಅಸಹನೆಯನ್ನು ಪ್ರಕಟಿಸುವುದೇ ಮೊದಲ ಪ್ಯಾರಾ. ” ಕವಿಯ ಪತ್ನಿ : ಏನಾಗ್ಯದ ನೋಡರ‍್ಯಾ ಸ್ವಲ್ಪನ ಅದನ ಮೈಮ್ಯಾಲೆ ಖಬರ ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣೂ ಬಾರಾ ಹಿಂಗ್ಯಾಕ ರಮರಾಡಿ ಮಾಡ್ಕೊಂಡು ಬಂದ್ರಿ ಎಲ್ಲಾ ನನ್ನ ಹಣೇಬಾರಾ ಗೊತ್ತಾಯ್ತು ನನಗ ಖಯಾಲಿಯೊಳಗ ಇದ್ದಿರಬೇಕು ನೆಲ ನೋಡದ ಆಕಾಶ ನೋಡ್ತಿರಬಹುದು ಅಥವಾ ಯಾವುದರ ಹೂವು ಕಂಡಿರಬೇಕು ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು ತೆರೆದು ಕಲ್ಪನಾಲೋಕ ಹೊಕ್ಕು ಅದ್ರೊಳಗ ನೀವು ವಿಹಾರ ಮಾಡಿರಬೇಕು ನಾ ಕೊಟ್ಟ ಸಾಮಾನಿನ ಪಟ್ಟಿ ಥಟ್ಟನೆ ನೆನಪಾಗಿ ಸರ‍್ರನೆ ನೀವು ಭೂಮಿಗೆ ಇಳಿದಿರಬೇಕು ಸಿಗದೆ ಕಕ್ಕಾಬಿಕ್ಕಿಯಾಗಿ ರಾಡಿಯೊಳಗ ಜಾರಿ ಬಿದ್ದಿರಬೇಕು ಏನು ಮಾಡಲಿ ಎಲ್ಲ ನನ್ನ ಹಣೇಬಾರಾ ಎಷ್ಟು ಹಚ್ಚಿದ್ದೆ ಸಾಬೂಣು ಬಾರಾ” ಇಲ್ಲಿ ಕವಿ ಪತ್ನಿ , ನೆಲ ಕಚ್ಚಿ ನಿಂತು, ಮನೆ ನಡೆಸುವ, ಜವಾಬ್ದಾರಿ ಹೊತ್ತವಳು. ಹಸಿವೆಯಾದರೆ, ಊಟ ಬಡಿಸಬೇಕು ತಾನೇ. ಕವಿತೆ, ಹಾಡು, ಭಾವನೆ ಬಡಿಸಿದರೆ ಹೊಟ್ಟೆ ತುಂಬಲಾರದು. ಆಕೆ ಒಂದು,ಸಾತ್ವಿಕ, ಸಾಂಸಾರಿಕ,  ಭೌತಿಕ ಪ್ರಜ್ಞೆಗೆ ಪ್ರತಿಮೆ. “ಸ್ವಲ್ಪನ ಅದನ ಮೈಮ್ಯಾಲೆ ಖಬರ ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣೂ ಬಾರಾ ಹಿಂಗ್ಯಾಕ ರಮರಾಡಿ ಮಾಡ್ಕೊಂಡು ಬಂದ್ರಿ ಎಲ್ಲಾ ನನ್ನ ಹಣೇಬಾರಾ” ಎಂತಹ ಸಾತ್ವಿಕ, ಸಾಂಸಾರಿಕ, ವಾಸ್ತವ ಪ್ರಜ್ಞೆ. ಗಂಡನ ಬಟ್ಟೆ,ಸಾಬೂನು ಹಚ್ಚೀ ಹಚ್ಚೀ ತಿಕ್ಕಿ ತೊಳೆದು ಗಂಡನ ರೂಪಕ್ಕೆ ಸ್ವಚ್ಛತೆಯನ್ನು ಹೊಳಪನ್ನೂ ಕೊಟ್ಟರೆ, ಆತ ಮಣ್ಣು ಮೆತ್ತಿ ರಮರಾಡಿ ಮಾಡ್ಕೊಂಡು ಬರಬೇಕೇ. ಎಲ್ಲಾ ನನ್ನ ಹಣೇಬರಹ ಎನ್ನುವ ಆಕೆ ಹಳ್ಳಿಯ,ಮುಗ್ಧ ಪ್ರಜ್ಞೆ. “ಗೊತ್ತಾಯ್ತು ನನಗ ಖಯಾಲಿಯೊಳಗ ಇದ್ದಿರಬೇಕು ನೆಲ ನೋಡದ ಆಕಾಶ ನೋಡ್ತಿರಬಹುದು ಅಥವಾ ಯಾವುದರ ಹೂವು ಕಂಡಿರಬೇಕು ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು ತೆರೆದು ಕಲ್ಪನಾಲೋಕ ಹೊಕ್ಕು ಅದ್ರೊಳಗ ನೀವು ವಿಹಾರ ಮಾಡಿರಬೇಕು” ಆಕೆ, ಕವಿಯ ಕಲ್ಪನಾ ಸಾಮ್ರಾಜ್ಯದ ಪರಿಚಯ ಕೊಡುವ ಸಾಲುಗಳಿವು. ಈ ಸಾಲುಗಳಲ್ಲಿ ಕವಿಯ ಪ್ರಜ್ಞೆ ನೆಲೆ ನಿಂತಿರುವ, ಭಾವ ಜಗತ್ತು, ಕಲ್ಪನಾ ಜಗತ್ತು ಆಕೆಯ ಮಾತುಗಳಲ್ಲಿ ಪ್ರಕಟವಾಗುತ್ತೆ. ಅದು ನಿಜವೂ ತಾನೇ. “ಸರ‍್ರನೆ ನೀವು ಭೂಮಿಗೆ ಇಳಿದಿರಬೇಕು ಸಿಗದೆ ಕಕ್ಕಾಬಿಕ್ಕಿಯಾಗಿ ರಾಡಿಯೊಳಗ ಜಾರಿ ಬಿದ್ದಿರಬೇಕು” ಕವಿಯ ಕಾವ್ಯಜಗತ್ತಿನಿಂದ ವಾಸ್ತವ ಜಗತ್ತಿಗೆ ಆತ ಜಾರಿ ಬಿದ್ದು ಅಂಗಿ ಕೊಳೆಯಾಗಿರಬಹುದು ಎಂದು ಆಕೆಯ ಅಂಬೋಣ. ಈ ಪ್ಯಾರಾದಲ್ಲಿ, ಕವಿ ಪತ್ನಿಯ, ವಾಸ್ತವ,ಸಾಂಸಾರಿಕ,ಭೌತಿಕ ಪ್ರಜ್ಞೆ ಮತ್ತು ಕವಿಯ ಭಾವನಾತ್ಮಕ, ಕಲ್ಪನಾ ಪ್ರಜ್ಞೆಗಳ ನಡುವೆ ಮುಖಾಮುಖಿ ಸಂಭವಿಸಿದೆ. ಈ ಸಂವಾದದಲ್ಲಿ ಈ ಎರಡೂ ಪ್ರಜ್ಞೆಗಳು,ಅತ್ಯಂತ ಸಾತ್ವಿಕವಾಗಿ ತಾಕಲಾಡುತ್ತವೆ. ಆಕೆ ಕವಿಯನ್ನು ಭಾವನೆಯ ಲೋಕದಿಂದ ಸಾಬೂನು ಹಾಕಿ ತೊಳೆದು ಪುನಃ ವಾಸ್ತವಕ್ಕೆ  ತರುವ ಪ್ರಯತ್ನ ಮಾಡುತ್ತಲೇ, ಮಾಡುತ್ತಲೇ ಇರುತ್ತಾಳೆ. ಮುಂದಿನ ಪ್ಯಾರಾದಲ್ಲಿ ಕವಿ, ಸಾಮಾನು ತರಲು ಹೋದಾಗ ರಸ್ತೆಯಲ್ಲಿ,  ತನ್ನ ಮತ್ತು  ನೀಲ್ ಆರ್ಮ್‌ಸ್ಟ್ರಾಂಗ್ ನ ( ಚಂದ್ರನ ಮೇಲೆ ಮೊದಲು ಕಾಲಿಟ್ಟ ವ್ಯೋಮಯಾತ್ರಿ) ನಡುವಿನ  ಸಂಭಾಷಣೆಯನ್ನು ಹೆಂಡತಿಗೆ ವಿವರಿಸುತ್ತಾನೆ. ಚಂದ್ರನ ಬಗ್ಗೆ ಕವಿಗಳ ವರ್ಣನೆ ಕೇಳಿ ಚಂದಿರನ ಮೇಲೆ ಕಾಲಿಟ್ಟ ವ್ಯೋಮಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಗೆ  ಅಲ್ಲಿ ,ಬರೇ ಮಣ್ಣು ಕಂಡು ಭ್ರಮನಿರಸನವಾದಾಗ ಆತನ ಪ್ರತಿಕ್ರಿಯೆ, ಕವಿಯತ್ತ, ಹೇಗಿರಬಹುದು?  ಕವಿತೆಯ ಸಾಲುಗಳು ಹೀಗಿವೆ. “ಕವಿ: ಸುಮ್ಮನಾಗು ಮಾರಾಯ್ತಿ, ಗುಟ್ಟಾಗಿ ಹೇಳ್ತೀನಿ ರಟ್ಟಾದರ ನಮ್ಮರ‍್ಯಾದಿ ಪ್ರಷ್ನಿ ಹೊಂಟಿದ್ದೆ ಹಿಡಿದು ನಂದಾರಿ ನೀನಂದದ್ದು ನೆನಪಿನೊಳಗಿಟ್ಟು ಕವಿತೆ ರಚಿಸುವ ಗೀಳು ಬಿಟ್ಟು ಸೀದಾ ರಸ್ತೆ ಮ್ಯಾಲೆ ನನ್ನ ಕಣ್ಣು ನೆಟ್ಟು ಮಾಡಲಿಲ್ಲ ಕವಿತೆಗೆ ವಿಷಯ ಹುಡುಕೊ ಉಸಾಬರಿ ಅರಳಿದರೆ ಅರಳಲಿ ಎಂದೆ ಹೂವು ಕೆರಳಿದರೆ ಕೆರಳಲಿ ಭಾವ ಇದ್ದರೆ ಇರಲಿ ರಮ್ಯ ಸೂರ‍್ಯಾಸ್ತ ಇಂದಿನದೇನಲ್ಲ ಅದು ನಾಳೆ ಇಲ್ಲವೆಂದಿಲ್ಲ ಮುಗಿಯಲಿ ಮೊದಲು ಬಂದ ಕೆಲಸ ಅಂತ ಸಾಗಿದ್ದೆ ಆಗ ಎಲ್ಲಿಂದಲೋ ಬಂದ ತುಂಟ ಪೋರ ಬಿರ ಬಿರ ನಡೆದರೂ ಬಂದ ಹತ್ತಿರ ಬಂದವನೆ ಎಸೆದ ತನ್ನ ಮುಷ್ಠಿಯೊಳಗಿನ ಮಣ್ಣು ನಂಬಲಾರದಾದವು ನನ್ನ ಕಣ್ಣು ತಬ್ಬಿಬಾಗಿ ಕೇಳಿದೆ ಪೋರನ ನಾನೇನು ಮಾಡಿದೆ ಎಂದು ಕೊಳೆ ಮಾಡಿದಿ ನಾ ಧರಿಸಿದ ಉಡುಪು ಏನು ಹೇಳಲಿ ನನ್ನ ಮನೆಯಾಕೆಗೆ ಸಾಬೂನಿನ ಜೊತೆ ಶುಭ್ರ ಪ್ರೀತಿಯನು ಹಚ್ಚಿ ಹೇಗೆ ಹೋಗಬೇಕು ಕಲೆ ಅಂದರ ಏನನಬೇಕು ತುಂಟ ಪೋರ “ಇರಲಿ ಕಡೀತನ ಈ ಕಲೆ ಕವಿ ಅಲ್ಲವೆ ನೀವು – ಕಲ್ಪನೆಯ ಕುದುರೆಯನೇರಿ ಇಲ್ಲದನು ಬಣ್ಣಿಸುವ ಕಲೆ ಅಲ್ಲವೆ ನಿಮಗೆ ಕರಗತ ಹೊಗಳಲಿಲ್ಲವೆ ನೀವು ಚಂದಿರನ ಸತತ ಸುಂದರಿಯರ ನೋಡಿ ಇಂದುಮುಖಿ ಎಂದಿರಿ ಕಾವ್ಯಗಳ ಪುಟಗಳಲಿ ತುಂಬಿಸಿದಿರಿ ಚಂದಿರ ಬೆಳದಿಂಗಳು ಕರ್ನೈದಿಲೆಗಳಿಂದ ನೀವು ಹೇಳಿದ್ದು ಕೇಳಿ ಬಾಯಾಗ ನೀರೂರಿ ಹೋದೆ ಅಲ್ಲೀತನಕ ಆಸ್ವಾದಿಸಲು ಸೌಂದರ್ಯ ಆದರ ಅಲ್ಲಿ ಸಿಕ್ಕಿದ್ದೇನು ನಿನ್ನ ಮ್ಯಾಲೆ ಎಸೆದ ಮಣ್ಣು” ಅಂತ ಅನಬೇಕ ಬಿಡಲಿಲ್ಲ ನಾನು, ಕೇಳಿದೆ ನೀ ಇರೋದು ಎಲ್ಲೆ ನಿನ್ನ ಹೆಸರೇನು ಅಂದರ “ ನನ್ನ ಹೆಸರು ನೀಲ್  ಆರ್ಮ್‌ಸ್ಟ್ರಾಂಗ್” ಅಂತ ಹೇಳಿ ಓಡ ಬೇಕ ಮಿಂಚಿನ ವೇಗದಾಗ ಸಿಗದ್ಹಾಂಗ ಕೈಗೆ ಆದದ್ದು ಹೇಳ ಬ್ಯಾಡ ಮಾರಾಯ್ತಿ ಯಾರಿಗೂ ಮನಸಿನಾಗೇ ಇಟ್ಕೋ ಮರ‍್ಯಾದಿ ಪ್ರಷ್ನಿ” ,ಇಲ್ಲಿ ನಮಗೆ ಕವಿಯ,ಕಾವ್ಯಪ್ರಜ್ಞೆ ಮತ್ತು, ವ್ಯೋಮಯಾತ್ರಿಯ ಭೌತಿಕ ವೈಜ್ಞಾನಿಕ ಪ್ರಜ್ಞೆಯ ನಡುವಿನ ಮುಖಾಮುಖಿ

ಹೆಣ್ಣೊಡಲಾಳದ ನೋವಿನ ದನಿಗಳು ಅಂಕಣ ಬರಹ ಊರ ಒಳಗಣ ಬಯಲುಲೇಖಕಿ-ವಿನಯಾಪ್ರಕಾಶಕರು- ಛಂದ ಪುಸ್ತಕಬೆಲೆ-೪೦/-              ನಮ್ಮ ಮನೆಯಿಂದ ಒಂದುವರೆ ಕಿ.ಮಿ ಹೋದರೆ ಗಂಗಾವಳಿ ನದಿ ಸಮುದ್ರಕ್ಕೆ ಸೇರುವ ಸ್ಥಳ ಬರುತ್ತದೆ. ಅಲ್ಲಿಯೇ ಸ್ವಲ್ಪ ಹಿಂದೆ ಗಂಗಾವಳಿ ನದಿಯನ್ನು ದಾಟಿಸುವ ಸ್ಥಳವಿದೆ. ಮೊದಲೆಲ್ಲ ದೋಣಿಯಲ್ಲಿ ದಾಟಿಸುತ್ತಿದ್ದರು. ಈಗ ದೊಡ್ಡದೊಂದು ಬಾರ್ಜು ಬಂದಿದೆ. ಮಕ್ಕಳಿಗೆ ಒಂದು ಚಂದದ ಅನುಭವವಾಗಲೆಂದು ಕೆಲವೊಮ್ಮೆ ಅಲ್ಲಿಂದ ಬಾರ್ಜಿನಲ್ಲಿ ದಾಟಿ ಸಮೀಪದ ಮಾಸ್ಕೇರಿ ಎಂಬ ಊರಿಗೆ ಹೋಗಿ ಬರುವುದೂ ಇದೆ. ಕೆಲವೊಮ್ಮೆ ಅಲ್ಲಿಂದ ಒಂದೆರಡು ಕಿ.ಮಿ ದೂರ ಇರುವ ಗೋಕರ್ಣಕ್ಕೂ ಹೋಗಿ ಬರುವುದಿದೆ. ಮೊದಲ ಕಥೆಯನ್ನು ಓದುತ್ತಲೇ ಮತ್ತೆ ಇದೆಲ್ಲವನ್ನೂ ನೆನಪಿಸಿ, ಒಮ್ಮೆ ಮಾಸ್ಕೇರಿಗೆ ಹೋಗಬೇಕು ಎನ್ನುವ ಭಾವ ಹುಟ್ಟಿಸಿದ ಪುಸ್ತಕ ವಿನಯಾ ಒಕ್ಕುಂದರವರ ಊರೊಳಗಣ ಬಯಲು ಎನ್ನುವ ಕಥಾ ಸಂಕಲನ. ಮೊದಲ ಕಥೆ ಒಬ್ಬ ಹುಡುಗಿ ತನ್ನದೇನೂ ತಪ್ಪಿಲ್ಲದೇ ಹುಡುಗನ ಬರೀ ಬಾಯಿ ಮಾತಿನ ತೆವಲಿಗೆ ಬಲಿಯಾಗಿ ಇಡೀ ಹದಿಹರೆಯ ಹಾಗು ಯೌವ್ವನದ ದಿನಗಳನ್ನು ಅಂಜುತ್ತ, ಉಳಿದವರ ಅನುಮಾನದ ದೃಷ್ಟಿಗೆ ಪಕ್ಕಾಗಿ ನೋಯುತ್ತ ನವೆದ ಕಥೆಯಿದೆ. ಹದಿಮೂರು ವರ್ಷದ ಹುಡುಗಿಯನ್ನು ಅದಾವ ಕಾರಣಕ್ಕಾಗಿ ತನ್ನ ಪ್ರಿಯತಮೆ ಎಂದು ಸುದ್ದಿ ಹಬ್ಬಿಸಿದ ಎಂಬುದು ಕೊನೆಗೂ ಅರ್ಥವಾಗುವುದಿಲ್ಲ. ಅದೆಷ್ಟೋ ವರ್ಷಗಳ ನಂತರ ಪುನಃ ದೋಣಿ ದಾಟಲು ಬಂದವಳು ಅಕಸ್ಮಾತಾಗಿ ಅವನನ್ನು ಕಂಡು ಹಳೆಯದ್ದನ್ನೆಲ್ಲ ನೆನಪಿಸಿಕೊಂಡು ಬರೆಯುವ ಪತ್ರ ಈ ಕಥೆ. ಇಲ್ಲಿ ಬರುವ ಹಲವಾರು ಮನೆಗಳ ಹೆಸರುಗಳು ಅದೆಷ್ಟು ಆಪ್ತವೆಂದರೆ ನಾನೇ ಆ ಜಾಗದಲ್ಲಿ ಇದ್ದೆನೇನೋ ಎಂಬ ಭಾವ. ಗಾಂವಕರ ಮನೆಯ ಯಾರು ಹೀಗೆ ಮಾಡಿದ್ದು ಎಂಬ ಊಹೆ, ಒಟ್ಟಿನಲ್ಲಿ ಕಥೆ ಎಂಬುದು ಕಥೆಯಾಗಷ್ಟೇ ಉಳಿಯದೇ ಇದು ನನ್ನದೇ ಬದುಕಿನ ಒಂದುಚಭಾಗ ಎನ್ನಿಸುವಂತಾಗಿದ್ದಕ್ಕೆ ಕಾರಣವೂ ಇದೆ. ಮಾಸ್ಕೇರಿಯ ಗಾಂವಕರ ಮನೆತನ ಒಂದು ಪ್ರತಿಷ್ಟೆಯ ಮನೆತನವಷ್ಟೇ ಅಲ್ಲ ಅದು ನನ್ನ ಅಪ್ಪನ ಅಜ್ಜಿ ಮನೆಯೂ ಹೌದು. ನನ್ನ ಅಜ್ಜಿಯನ್ನು ಮದುವೆಯ ಸಮಯದಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಕರೆತಂದಿದ್ದರಂತೆ ಎಂದು ಅಪ್ಪ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹೀಗಾಗಿ ಇಲ್ಲಿ ಬರುವ ಪಾತ್ರಗಳೆಲ್ಲ ನನಗೆ ಹತ್ತಿರದ್ದು ಎಂದು ಅನ್ನಿಸಲು ಪ್ರಾರಂಭವಾಗಿದ್ದು. ಅಷ್ಟೇ ಅಲ್ಲ, ನನ್ನ ಚಿಕ್ಕಪ್ಪನ ಮಗಳು ಭಾರತಿಗೂ ಇದು ಅಜ್ಜಿ ಮನೆಯಾದ್ದರಿಂದ ನಮ್ಮಿಬ್ಬರ ಅಡೆತಡೆಯಿಲ್ಲದ ಅದೆಷ್ಟೋ ಮಾತುಗಳಲ್ಲಿ ಮಾಸ್ಕೇರಿಯ ವಿಷಯ ಆಗಾಗ ಬಂದು ಹೋಗುತ್ತಿರುತ್ತದೆ. ಆ ಕಾಲದಲ್ಲೇ ಕಾಶಿ ವಿದ್ಯಾಪೀಠದಲ್ಲಿ ಓದಿ ಶಾಸ್ತ್ರಿ ಪದವಿ ಪಡೆದ ಅಪರೂಪದ ಮಹಾನುಭಾವರಲ್ಲಿ ಆಕೆಯ ಅಜ್ಜ ಕೂಡ ಒಬ್ಬರು. ಇದೆಲ್ಲವೂ ಈ ಕಥೆಯನ್ನು ಓದಿದ ನಂತರ ನೆನಪು ಮರುಕಳಿಸಿ ಕಥೆ ಓದುತ್ತಿದ್ದೇನೆಯೋ ಅಥವಾ ಸಿನೇಮಾ ನೋಡುತ್ತಿದ್ದೇನೆಯೋ ಎಂಬ ಭಾವ ಹುಟ್ಟಿಸಿದ್ದು ಸುಳ್ಳಲ್ಲ.     ಅಮ್ಮನ ಕವನ ಸಂಕಲನ ಬಿಡುಗಡೆಗೆ ಬಾ ಎಂದ ವಿನಯರವರು ನನಗೆ ಈಗಲೂ ನೆನಪಾಗುತ್ತಾರೆ. ನಮ್ಮೂರ ಕಡೆಗಳಲ್ಲಿ ಗೌರಮ್ಮ ಅಕ್ಕೋರೆಂದರೆ ಕರಕುಶಲವಸ್ತುಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು ಎಂದೇ ಪರಿಚಿತ. ಅವರ ಮನೆಗೆ ಹೋದವಳು ಹುಲ್ಲಿನಲ್ಲಿ ಮಾಡಿದ ಬೀಸಣಿಗೆಯನ್ನು ನನಗೆ ಬೇಕು ಎನ್ನುತ್ತ ತೆಗೆದುಕೊಂಡು ಬಂದಿದ್ದೆ. ಈಗಲೂ ಮನೆಯ ಬಾಗಿಲಿನಲ್ಲಿರುವ ಆ ಬೀಸಣಿಕೆ ನೋಡಿದಾಗಲೆಲ್ಲ ಗೌರಮ್ಮಕ್ಕನ ನೆನಪು ಮತ್ತು ಅದರ ಜೊತೆಜೊತೆಯಾಗಿಯೇ ಬರುವ ವಿನಯಾ ನೆನಪು.          ಹದಿಮೂರು ವರ್ಷದ ಹುಡುಗಿಯನ್ನು ತನ್ನ ಪ್ರಿಯತಮೆ ಎಂದು ಬಿಂಬಿಸಲು ಹೊರಟವನು ತನ್ನ ಅದೇ ವಯಸ್ಸಿನ ತಮ್ಮನನ್ನು ಪುಟ್ಟ ಮಗುವಂತೆ ನೋಡಿಕೊಳ್ಳುತ್ತ, ಬಸ್ ಹತ್ತಿಸಿ ಶಾಲೆಗೆ ಬಿಡುತ್ತಾನೆ. ಹೆಣ್ಣಾದರೆ ಆಕೆ ಹದಿಮೂರಕ್ಕೇ ದೊಡ್ಡವಳಾದ ಲೆಕ್ಕವೇ ಎಂದು ಕೇಳುವ ಪ್ರಶ್ನೆ ಇಂದಿನ ಜಗತ್ತಿಗೆ ಹಿಡಿದ ಕೈಗನ್ನಡಿಯಂತಿದೆ. ಹತ್ತು ಹನ್ನೆರಡು ವಯಸ್ಸಿಗೆ ಮೈನೆರೆದು ಬಿಡುವ ಇಂದಿನ ಹುಡುಗಿಯರು ಸಹಜವಾಗಿಯೇ ತಮ್ಮ ಬಾಲ್ಯವನ್ನು ಕಳೆದುಕೊಂಡು ಬಿಡುವ ಕ್ರೂರ ನೆನಪುಗಳ ಮಾಲೆಯೂ ಇಲ್ಲಿದೆ. ಯಾಕೆಂದರೆ ತನಗೆ ಗೊತ್ತಿಲ್ಲದ ಪ್ರೇಮಿಯೊಬ್ಬ ತನ್ನ ಮನೆಯೆದುರು ಸುಳಿದಾಡುವಾಗ ಚಿಕ್ಕಪ್ಪ ಎನ್ನಿಸಿಕೊಂಡವನೂ ಕೂಡ ಏನಿರಬಹುದು ಎಂಬುದನ್ನು ಇವಳ ಬಳಿಯೂ ಕೇಳದೆ, ಯೋಚಿಸುವ ವ್ಯವಧಾನವೂ ಇಲ್ಲದಂತೆ ಸಾರಾಸಗಟಾಗಿ ‘ತೀಟೆಯಿದ್ದರೆ ನನ್ನ ಸಂಗಡ ಬಾರೆ’ ಎಂದು ಬಿಡುವುದು ಅದೆಷ್ಟು ಅಸಹ್ಯದ ಪರಮಾವಧಿ, ಆಡಾಡುತ್ತಲೇ ಹೇಳಿದ ಮಾತಿರಬಹುದು ಎಂದು ಸಮಾಧಾನ ಹೇಳಿಕೊಳ್ಳಬಹುದಾಗಿದ್ದರೂ ವರಸೆಯಲ್ಲಿ ಮಗಳೇ ಆಗಬೇಕಿದ್ದವಳಿಗೆ ಆಡುವ ಮಾತೇ ಇದು ಎಂದು ನಿಬ್ಬೆರಗಾಗುವಂತೆ ಮಾಡುತ್ತದೆ. ಗಂಡಸರ ಕಾಮವಾಂಛೆಗೆ ಯಾರಾದರೇನು ಎಂಬ ಮಾತಿಗೆ ಪುರಾವೆ ನೀಡುವಂತಿದೆ.   ಎರಡನೆಯ ಕಥೆ ಊರ ಒಳಗಣ ಬಯಲು ಕೂಡ ಮಾಸ್ಕೇರಿಯ ಆವರಣದ್ದೇ. ಊರು ಬಿಟ್ಟು ಹೋಗಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾದ ಕಥಾನಾಯಕ ತನ್ನ ತಂದೆ ಪಾಂಡುರಂಗ ಗಾಂವಕರರ ಹೆದರಿಕೆಯಿಂದಾಗಿ ಊರಿಗೆ ಬಂದರೂ ಮನೆಗೆ ಹೋಗಲಾಗದೇ ಹಿಂದಿರುಗುವ ಕಥೆಯಿದ್ದರೂ ಅದು ಒಂದು ಊರು ನಿಧಾನವಾಗಿ ತನ್ನ ಹಳೆಯ ಬಾಂಧವ್ಯವನ್ನು ಮರೆಯುವ ಕಥೆಯನ್ನು ಹೇಳುತ್ತಲೇ, ಅಂದು ಜಾತಿ ಕಾರಣಕ್ಕಾಗಿ ಮಾಪಿಳ್ಳೆಯರ ಹುಡುಗಿಯನ್ನು ಬೆನ್ನಟ್ಟಿ ಹೋಗಿದ್ದನ್ನು ವಿರೋಧಿಸಿ ಜಗಳವಾಡಿದ್ದ ಊರಿನ ಹಿಂದಿನ ಗುನಗನ ಮಗನಾಗಿದ್ದವ, ಪ್ರಸ್ತುತ ಶಾಂತಿಕಾ ಪರಮೇಶ್ವರಿಯ ಗುನಗ ‘ಹಿರೀ ಸೊಸೆಯನ್ನು ಮನೆ ತುಂಬಿಸಿಕೊಳ್ಳದೇ ಕಿರಿ ಸೊಸೆಯನ್ನು ತುಂಬಿಸಲಾಗದು ಎಂದು ದೇವಿಯ ಅಪ್ಪಣೆ’ ಕೊಡಿಸುವುದಾಗಿ ಹೇಳುವುದು, ದೋಣಿ ದಾಟಿಸುವವನೂ ಕೂಡ ಪಾಂಡೊಡೆದಿರು ಮಗನನ್ನು ಒಪ್ಪಿ ಕೊಂಡರೇನೋ, ಹಂಗಾದ್ರೆ ಸಾಕು ಎಂದು ಹಾರೈಸುವುದು ಇನ್ನೂ ಉಳಿದಿರುವ ಮಾನವೀಯತೆಯ ಪ್ರೀತಿಯನ್ನು ನೆನಪಿಸುತ್ತದೆ. ಮನೆ ಎಂದರೆ ಅದು ಕೇವಲ ತನ್ನೊಬ್ಬನ ಮನೆಯಲ್ಲ, ಇಡೀ ಊರನ್ನೂ ಒಳಗೊಂಡಿದ್ದು ಎನ್ನುವ ಮಾತು ಒಮ್ಮೆ ಎದೆಯನ್ನು ಹಸಿಯಾಗಿಸುತ್ತದೆ.    ಮೂರನೆಯ ಕಥೆ ಕಡಿತನಕ ಕಾಯುವ ಅಭಿಮಾನದಲ್ಲಿ ಹೆಣ್ಣು ಅನುಭವಿಸುವ ಅಸ್ಥಿರತೆಯನ್ನು ತೀರಾ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಅತ್ತೆ, ಸೊಸೆ ಗಂಗಮ್ಮ, ಹಾಗೂ ಅವಳ ಮಗಳು ಕರಿಶ್ಮಾ ಆದ ಕರಿಯಮ್ಮ ಹೀಗೆ ಮೂರು ತಲೆಮಾರಿನ ಹೆಣ್ಣುಗಳು ಅನುಭವಿಸುವ ಯಾತನೆಯನ್ನು ಕಾಣಬಹುದು. ಮಾವ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ತನ್ನೆಲ್ಲ ಗದ್ದೆಯನ್ನೂ ಮಾರಿ, ಅತ್ತೆಯ  ಬಂಗಾರವನ್ನೂ ಊರಿನ ವೇಶ್ಯೆಗೆ ಸುರಿದವನು. ಅವನೆಲ್ಲ ಆಟಾಟೋಪವನ್ನು ಸೋದರ ಸೊಸೆಯಾಗಿ ಕಣ್ಣಾರೆ ಕಂಡವಳು, ನಂತರ ಅವನ ಮಗನನ್ನು ಮದುವೆಯಾಗಿ ತಾನೂ ಜವಾಬ್ಧಾರಿ ಇಲ್ಲದ ಗಂಡನನ್ನು ನಿಭಾಯಿಸಿದವಳು. ಬೆಳದಿಂಗಳಿಂದ ಕಡ ತಂದಂತಹ ದಂತದ ಗೊಂಬೆ ಮಗಳನ್ನು ಓದಿಸಿ ಮದುವೆ ಮಾಡಿ ನಿಶ್ಚಿಂತಳಾಗಿರುವ ಗಂಗಕ್ಕ, ಮಗಳು ಅಲ್ಲಿಯೂ ಮನೆಯೊಳಗಿನ ಕೈದಿ. ಹುಟ್ಟಿದ ಮಗನನ್ನು ಓದಿಸಿ, ಈಗಿನ ಟ್ರೆಂಡ್‌ಗೆ ತಯಾರು ಮಾಡಲೆಂದು ದೂರದ ಡೆಹರಾಡೂನ್ ಸ್ಕೂಲ್‌ಗೆ ಹಾಕಿ ಅಮ್ಮ ಮಗನ ಬಾಂಧವ್ಯವನ್ನೇ ಕಸಿದು ಬಿಡುವ ಅಪ್ಪ, ನಂತರ ಟ್ಯೂಷನ್‌ಗೆಂದು ಬರುವು ಹುಡುಗರ ಮೇಲೂ ಅನುಮಾನ ಪಟ್ಟು, ಆಕೆ ಪ್ರಾಣ ಕಳೆದುಕೊಳ್ಳುವಂತೆ ಮಾಡುತ್ತಾನೆ.    ನಾಲ್ಕನೆಯ ಕಥೆಯಂತೂ ತೀರಾ ತಿಳಿಯದ ಆಳಕ್ಕೆ ನನ್ನನ್ನು ನೂಕಿದ ಕಥೆ ಎಲ್ಲ ಆರಾಮ. ಹೇಳಲಾಗದ ಅದೆಂತಹುದ್ದೋ ಬಾಲ್ಯದ ನೆನಪುಗಳನ್ನೆಲ್ಲ ಗಬರಾಡಿ ಎದುರಿಗಿಟ್ಟ ಕಥೆಯಿದು. ಸಾವಿತ್ರಿ ಟೀಚರ್ ಯಾಕೆ ತಮ್ಮ ಸಹೋದ್ಯೋಗಿ ಪ ನಾ ಮಾಗೋಡರಿಗೆ ಎಲ್ ಐ ಸಿ ನಾಮಿನೇಟ್ ಮಾಡಿದರು? ಆಯಿ ಎಂದು ಕರೆಯುತ್ತಿದ್ದ ಹುಡುಗ ಯಾರು? ಮೇದಾರ ಸರ್ ಯಾರು ಎಂಬೆಲ್ಲ ಪ್ರಶ್ನೆಗಳು ಬಗೆಹರಿಯುವುದೇ ಇಲ್ಲ. ನಮ್ಮ ಬಾಲ್ಯದಲ್ಲೂ ಇಂತಹ ಹತ್ತಾರು ಪ್ರಶ್ನೆಗಳು ಹುಟ್ಟಿ ಈಗಲೂ ಕಾಡುತ್ತಿರುವ ವಿಷಯಗಳು ಹಾಗೆಯೇ ಇದ್ದಿರಬಹುದು, ಅದು ಶಿಕ್ಷಕರಾಗಿರಬಹುದು, ಸುತ್ತ ಮುತ್ತಲಿನ ಯಾರೋ ಸಂಬಂಧಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ದೂರದಲ್ಲಿ ಕೇಳಿದ ಯಾರದ್ದೋ ಕತೆಯೇ ಆಗಿರಬಹುದು,  ಇಂತಹ ಹಲವಾರು ಪ್ರಶ್ನೆಗಳು ನಮ್ಮೆದೆಯ ಒಂದು ಮೂಲೆಯಲ್ಲಿ ಹಾಗಿಯೇ ಬೆಚ್ಚಗೆ ಮಲಗಿರುತ್ತದೆ. ಅಂತಹ ಪ್ರಶ್ನೆಗಳೆಲ್ಲ ನನ್ನೆದುರಿಗೂ ಧುತ್ತನೆ ಎದುರು ನಿಂತಂತಾಗಿ ತಲ್ಲಣಿಸುವಂತಾಗಿದ್ದು ಸುಳ್ಳಲ್ಲ. ನೋಯದವರೆತ್ತ ಬಲ್ಲರೋ ಎನ್ನುವ ಕಥೆಯ ತವರು ಮನೆಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ ಅಂಜನಿ ಆಸ್ತಿಯನ್ನೆಲ್ಲ ಕೊಡುತ್ತೇನೆಂದರೆ ನಿರಾಕರಿಸಿ ಸಾವನ್ನಪ್ಪುವ ಬಗೆ ಒಂದು ಕ್ಷಣ ಕೊರಳು ಹಿಡಿದಂತಾಗುತ್ತದೆ. ಅಂಜನಿಯನ್ನು ಮದುವೆಯಾಗಬೇಕಾಗಿದ್ದ ಅನಿಲ, ‘ಮೋಸ ಮಾಡುಕೆ ನಾ ಏನ ಅದರ ಮೈ ಮುಟ್ಟಿನೆ’ ಎಂದು ಒಂದಿಷ್ಟೂ ಅಳುಕಿಲ್ಲದೇ ಹೇಳಿ, ಮೈ ಮುಟ್ಟಿದರೆ ಮಾತ್ರ ತಪ್ಪು ಎಂಬಂತೆ ನಡೆದುಕೊಳ್ಳುವ ಭಾವ ಮತ್ತೊಮ್ಮೆ ಈ ಸಮಾಜz, ಇಲ್ಲಿನ ಗಂಡಸರ ರೀತಿನೀತಿಯ ಬಗ್ಗೆ, ಅವರು ಯೋಚಿಸುವ ಬಗೆಯ ಕುರಿತು ತಿರಸ್ಕಾರ ಹುಟ್ಟುವಂತೆ ಮಾಡಿ ಬಿಡುತ್ತದೆ. ದಣಿವು ಕಾಡುವ ಹೊತ್ತು ಕಥೆಯಲ್ಲಿ ಒಂದಿಷ್ಟು ಗೊಂದಲ ಕಾಣಿಸುತ್ತದೆ. ಕಥೆಯ ಮೊದಮೊದಲು ಯಾರಿಗೆ ಏನಾಗಿದ್ದು ಎಂಬುದು ತಿಳಿಯದೇ ಕೊನೆಗೆ ಹೆಡ್ಮಾಸ್ತರರ ಹೆಂಡತಿ ತೀರಿ ಹೋಗಿದ್ದು, ಇತ್ತ ಗಂಡ ಯಾರು ಸತ್ತರೇನು ಉಳಿದವು ಆತನನ್ನು ಬದುಕಿಸುತ್ತವೆ ಎಂಬಂತೆ ಮಾತನಾಡಿದ್ದು ಎಲ್ಲವೂ ಬದುಕು ಇಷ್ಟೇನೇ ಎಂಬಂತೆ ಮಾಡಿಬಿಡುತ್ತದೆ. ಸ್ವಯ ಕಥೆಯಲ್ಲಿ ಯಾವುದೋ ಗರ್ಜಿಗೆ ದೂರಾದ ಗಂಡ ಹೆಂಡಿರ ಮನದ ಮಾತುಗಳಿವೆ. ಊರೆಲ್ಲ ಸುತ್ತುವ ಗಂಡಸಿಗೆ ಮನೆಯ ಹೆಂಡತಿ ನೆನಪಾಗುವುದು ತಾನು ಹಾಸಿಗೆ ಹಿಡಿದಾUಲೇ. ಆದೇ ಹೆಣ್ಣು ತಿರಸ್ಕಾರವ ನುಂಗಿ, ಗಂಡ ಹಾರಿದ ಬೇಲಿ ಎದುರಿಗೇ ಇದ್ದರೂ ಮಾತನಾಡದವಳು. ಎಲ್ಲಿಯೂ ಉಳಿದ ಹೆಂಗಸರಂತೆ ನಮ್ಮವರು ಎನ್ನದೇ, ನಿಮ್ಮನ್ನೋರು ಎನ್ನುತ್ತ ಕೊನೆಗೆ ತನ್ನ ಗಂಡ ಹೋಗುತ್ತಿದ್ದ ಮನೆಯವಳಿಗೂ ನಿಮ್ಮಣ್ಣೋರು ಎಂದು ಹೇಳಿ ನಕ್ಕುಬಿಡುವ ಪರಿ  ಸಾಧಾರಣಕ್ಕೆ ದಕ್ಕುವಂತಹುದ್ದಲ್ಲ. ಇಬ್ಬರ ಮನದ ಮಾತು ನಮ್ಮೊಳಗಿನ ಆಳವನ್ನು ಕೆದರಿ ಗಾಯವಾಗಿಸುತ್ತದೆ. ಕ್ಷಮೆಯಿರಲಿ ಕಂದಾ ಕಥೆಯಲ್ಲಿ ಶಿಕ್ಷಕಿಯೊಬ್ಬಳು ಎದುರಿಸಿದ ಸಾಮಾಜಿಕ ಬಂಧದ ಕಥೆಯಿದೆ. ಮಕ್ಕಳಂತೆ ಕಾಣುವ ವಿದ್ಯಾರ್ಥಿಗಳಲ್ಲಿ ಈ ಸಮಾಜ ಜಾತಿ ವಿಷಬೀಜವನ್ನು ಬಿತ್ತುವಾಗ,  ಆ ಮಕ್ಕಳ ಕುರಿತು ಶಿಕ್ಷಕಿಯ ಮೇಲೇ ಇಲ್ಲ ಸಲ್ಲದ ಸಂಬಂಧದ ಆರೋಪ ಹೊರಿಸುವಾಗ ಶಿಕ್ಷಕಿ ಅಸಹಾಯಕಳಾದ ಕಥೆ ಇಲ್ಲಿದೆ. ಜಾಣೆಯಾಗಿರು ಮಲ್ಲಿಗೆ ಕಥೆಯಲ್ಲಿ ದೊಡ್ಡವಳಾಗುವ ಮಗಳ ವೇದನೆಯಿದೆ. ಅಲ್ಲಿ ಬರುವ ಕಥೆ ಕೂಡ ತೀರಾ ರೂಪಕದಲ್ಲಿದ್ದು ಕಪ್ಪು ಬಣ್ಣದ ಕಾಲುವೆ ಹರಿದು ಬಾವಿಯಾಗುವಂತೆ ಹೇಳುತ್ತದೆ. ಕೊನೆಯ ಕಥೆ ಹತ್ತು ವರ್ಷದ ಹಿಂದೆ ಮತ್ತೂರ ತೇರಿನಲಿ ಕಥೆಯಲ್ಲಿ ‘ನೋಡಿದರೆ ತನ್ನಂತೆ ಕಾಣುವ ಮೊಬೈಲ್ ಸೆಟ್ ಎಂದು ತಂದೆ’ ಎಂದಿದ್ದು ನಂತರ ಅದು ಬೇಸರವಾಗಿದೆ ಬದಲಾಯಿಸುವೆ ಎಂದಾಗ ತನ್ನನ್ನೇ ಬದಲಾಯಿಸುವೆ ಎಂದಂತಾಗಿ ಅವಳು ನಡುಗುವುದು, ಮತ್ತು ಆತ ಹೇಳಿದ ಮಾತಿಗೆ ಅರ್ಥ ಹಚ್ಚುತ್ತ ಸಮಾಧಾನ ಮಾಡಿಕೊಳ್ಳುವ ಕೆಲಸದಲ್ಲಿ ಅವಳು ತಲ್ಲೀನಳಾಗುವುದು ಎಲ್ಲರ ಮನೆಯ ಕಥೆಯನ್ನೇ ನೆನಪಿಸುತ್ತದೆ.    ಇಲ್ಲಿರುವ ಹೆಚ್ಚಿನ ಕಥೆಗಳು ನನಗೆ ತೀರಾ ಆಪ್ತವಾಗುವುದಕ್ಕೆ ಕಾರಣ ಅದು ನಮ್ಮೂರಿನ ಸುತ್ತ ಮುತ್ತಲ ಹಳ್ಳಿಗಳ ಹೆಸರನ್ನು ಒಳಗೊಂಡಿದ್ದು. ಮಾಸ್ಕೇರಿ, ಹೊನ್ನೆಬೈಲು, ಅಗಸೂರು, ದೇವರಭಾವಿ, ಸಗಡಗೇರಿ, ತೊರ್ಕೆಗಳು ನನ್ನದೇ ಅವಿಭಾಜ್ಯ ಅಂಗಗಳಾಗಿರುವ ಊರುಗಳು. ಇನ್ನು ಹೆಚ್ಚಿನ ಕಥೆಗಳ ಭಾಷೆಗಳಂತೂ ನನ್ನದೇ ಆಡುಭಾಷೆ. ಹೀಗಾಗಿ ಈ ಕಥೆಗಳಲ್ಲೆಲ್ಲ ನಾನೇ ಭಾಗವಾಗಿದ್ದೇನೆ ಎಂದುಕೊಳ್ಳುತ್ತಲೇ ಓದಿದ್ದೇನೆ.    ಅಂದಹಾಗೆ ಇಡೀ ಕಥೆ ಹೆಣ್ಣಿನ ಸುತ್ತ ಸುತ್ತುತ್ತದೆ. ಹೆಣ್ಣಿನ ಜೀವನದ ಆಗುಹೋಗುಗಳು ಇಲ್ಲಿನ ಪ್ರಧಾನ ವಿಷಯಗಳು. ಹೆಣ್ಣಿನ ಕಷ್ಟಗಳ ಅರಿವು ಅವಳಿಗಷ್ಟೇ ಇರಲು ಸಾಧ್ಯ. ಇಡೀ ಸಂಕಲನ ಹೆಣ್ತನದ ಮೂಸೆಯಲ್ಲಿ ಅದ್ದಿ ತೆಗೆದಂತಿದೆ. ಜೀವನದ ಹತ್ತಾರು ಅನುಭವಗಳು, ನೋವು ನಲಿವುಗಳನ್ನು ಹೆಣ್ಣಿನ ದೃಷ್ಟಿಯಲ್ಲಿ ನೋಡುವುದನ್ನು ಇಲ್ಲಿನ ಕಥೆಗಳು ನಮಗೆ ಕಲಿಸಿಕೊಡುತ್ತವೆ. ಹತ್ತಿರದವರು ಎಂದುಕೊಂಡವರೇ ಹೆಣ್ಣನ್ನು ಬಳಸಿಕೊಳ್ಳುವ ಪರಿ ಮೈ ನಡುಗಿಸುತ್ತದೆ. ಮೊದಲ ಕಥೆಯ ಸುಧಾಕರನಂತೆ ಇದೇ ಎಂದು ನಿಖರವಾಗಿ ತೋರಿಸಲಾಗದ ಆದರೆ ಜೀವಮಾನವಿಡೀ ನೋವನುಭವಿಸುವ ಹಾನಿಯನ್ನು ಮಾಡಿ

Back To Top