ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ

(ಹಿಂದಿನ ವಾರದಿಂದ)

ಕಳೆದ ಸಂಚಿಕೆಯಿAದ…

 ಶಿವಮೊಗ್ಗ ಜಿಲ್ಲೆಯ ಚಳವಳಿಗಳು

 ದೈವದ ಪ್ರೇರಣೆ ಎನ್ನುವಂತೆ ಅನಿಮಿಷ ಗುರುಗಳ ದರ್ಶನವನ್ನು ಪಡೆಯುತ್ತಾರೆ. ಅಲ್ಲಮ ಪ್ರಭುವಿನ ಬದುಕಿನಲ್ಲಿ ಕಾಮಲತೆಯ ಪ್ರವೇಶ ಮತ್ತು ಮರಣ, ಅನಿಮಿಷ ಗುರುವಿನ ಸಂದರ್ಶನ ಸಂದರ್ಭಗಳು ಹೊಸ ಸಾಧನೆಯ ದಿಕ್ಕನ್ನು ತೋರಿದವು. ಅವನ ಸಾಧನೆಯಿಂದ ಅದನು ಬಹುದೊಡ್ಡ ಅನುಭಾವಿಯಾಗಿ ಮಾರ್ಪಟ್ಟನು. ಬಸವಣ್ಣನವರ ಕ್ರಾಂತಿಗೆ ಕೈ ಜೋಡಿಸಿದ ಮಹಾ ಸಾಧಕನಾಗಿ ಗುರುತಿಸಿಕೊಂಡು ಕರ್ನಾಟಕದ ಶರಣ ಚಳುವಳಿಯ ಇತಿಹಾಸದಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡನು.

 ಅಲ್ಲಮ ಪ್ರಭುವಿನ ಬದುಕು ಕೇವಲ ಚಿಂತನೆ, ವಚನ ರಚನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಲೋಕದ ಜನರ ಬದುಕನ್ನು ತಿದ್ದಿ ಅವರ ಜೀವನ ಸರಿ ದಾರಿ ತೋರಲು ಶ್ರಮಿಸಿದ. ಅಲ್ಲದೆ ಸಾಧಕರು ಇದ್ದಲ್ಲಿಗೆ ಹೋಗಿ ಅವರಲ್ಲಿದ್ದ ಕುಂದು ಕೊರತೆಗಳನ್ನು ತಿದ್ದಿ ಶರಣ ಚಳುವಳಿಗೆ ಪೂರಕ ಶಕ್ತಿಯಾಗುವಂತೆ ಮಾರ್ಪಡಿಸಿದರು. ದೀನ ದಲಿತರನ್ನು ಸಂತೈಸಿ ಸಮಾಜ ಸೇವೆಗೆ ತೊಡಗಿಸಿಕೊಂಡನು. ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಪೂರ್ಣ ಬೆಂಬಲವಾಗಿ ನಿಂತನು. ಅನುಭವ ಮಂಟಪದ ಅಧ್ಯಕ್ಷನಾಗಿ ವೀರಶೈವ ತತ್ವ-ಚಿಂತನಾ ಮಂಥನ ಸಭೆಗಳನ್ನು ನಿಯಂತ್ರಿಸಿ ಮಹಾಶರಣ ನೆನೆಸಿಕೊಂಡನು.

Image result for photos of  allama prabhu

 ಅಲ್ಲಮಪ್ರಭು ಚಿಂತಕನೆಂತೋ ಹಾಗೆಯೇ ವಚನ ರಚನಾ ಕೌಶಲ್ಯವನ್ನು ಪಡೆದಿದ್ದನು.ಅಂತೆಯೇ ಬೆಡಗಿನ ವಚನಕಾರನೆಂದೇ ಪ್ರಸಿದ್ದಿಯನ್ನು ಪಡೆದವರು. ಅವರ ವಚನಗಳಲ್ಲಿ ನೀತಿ ಇದೆ. ಕಟು ವಿಡಂಬನೆಯಿದೆ, ತತ್ವವಿದೆ, ಬದುಕಿನ ಪೂರ್ಣತೆಯ ಹುಡುಕಾಟವಿದೆ. ಅನುಭವವಿದೆ, ಅವರ ನಿರಾಕಾರ ತತ್ವವಂತು ಚಿಂತಕರನ್ನು ಚಕಿತಗೊಳಿಸುತ್ತದೆ.

 ಸ್ಪಟಿಕದ ದೀಪದಂತೆ ಒಳ ಹೊರಗು ಇಲ್ಲ ನೋಡಾ

 ವಿಗಡ ಚರಿತ್ರಕ್ಕೆ ನಾ ಬೆರಗಾದೆನು

 ನೋಡಿದರೆ ಕಾಣ ಬರುತ್ತದೆ, ಮುಟ್ಟಿದರೆ ಕೈಗೆ ಸಿಲುಕದು

 ಹೊದ್ದಿದರೆ ಸಮೀಪ ಹತ್ತ ಸಾರಿದಡೆ ಅತ್ತತ್ತ ತೋರುತಿದೆ

 ಆಕಾರ ನಿರಾಕಾರವೆ ನುಂಗಿ ಬಯಲು ಸಮಾಧಿಯಲ್ಲಿ ಸಿಲುಕಿತ್ತು

 ನೋಡಾ ಗುಹೇಶ್ವರಾ

 ಈ ವಚನದಲ್ಲಿ ಪ್ರಭುದೇವ ಸೃಷ್ಠಿಯ ಅನಂತತೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸೃಷ್ಟಿ ನಿತ್ಯ ನೂತನವಾದದು, ನಿರಂತರ ಚಲನಾಶೀಲೆ, ಅದರ ಗಹನತೆಯನ್ನು ಅರ್ಥೈಸಿಕೊಳ್ಳಲು ಸಾಧನವಲ್ಲದೆ ಸಾಮಾನ್ಯನಿಗೆ ಸಾಧ್ಯವಿಲ್ಲ. ಸೃಷ್ಟಿಯ ಆಂತರ್ಯ ಸಂಭವಿಸುವ ವಿದ್ಯಮಾನವನ್ನು ಅಲ್ಲಮನಷ್ಟು ಸಶಕ್ತವಾಗಿ ಕಟ್ಟಿಕೊಟ್ಟವರು ವಿರಳ. ಆಕಾಶ-ನಿರಾಕಾರ ಬಯಲು ಸಮಾಧಿ ಈ ಪದಗಳ ಸಂದರ್ಭೋಚಿತ ಬಳಕೆ ವಿದ್ವಾಂಸರನ್ನು ಬೆರಗುಗೊಳಿಸುತ್ತದೆ.

 ಶರಣರು ಇರದ ಲೋಕಕ್ಕೆ ಮಹತ್ವವವನ್ನು ಕೊಟ್ಟವರು, ಪರಲೋಕದ ತಾಪತ್ರಯದಿಂದ ದೂರವಿದ್ದವರು. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಕಂದಾಚಾರವನ್ನು ನೇರ ಮಾತುಗಳಿಂದ ಖಂಡಿಸಿದವರು, ನೇರ ನುಡಿಯ ಅಲ್ಲಮಪ್ರಭು ಅಂತರAಗ ಶುದ್ದಿಗೆ ಅಪಾರ ಮಹತ್ವವನ್ನು ಕೊಟ್ಟವರು.

 ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ,

 ತುಟ್ಟ ತುದಿಯ ಮೇಲು ಗಿರಿಯ ಮೆಟ್ಟಿ ಕೂಗಿದಡಿಲ್ಲ

 ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ

 ನಿಚ್ಚಕ್ಕೆ ನಿಚ್ಚ ನೆನೆವ ಮಾನವ ಅಂದAದಿಗೆ ಅತ್ತಲಿತ್ತ ಹರಿವ ಮನದ

 ಚಿತ್ತದಲಿ ನಿಲಿಸಬಲ್ಲದೆ

 ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು.

 ಭಾರತೀಯ ತತ್ವಜ್ಞಾನ ಇಹಕ್ಕಿಂತ ಪರಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತದೆ. ಪರಲೋಕ ಸಾಧಿಸಲು ಅನೇಕ ಬಗೆಯ ದೈಹಿಕ ಕಸರತ್ತನ್ನು ಆಚರಿಸಲು ಹೇಳುತ್ತದೆ. ಪರಲೋಕ ಇದೆಯೋ ಇಲ್ಲವೋ ಎಂಬುದನ್ನು ಪ್ರಮಾಣಿಸಿ ಹೇಳಿದವರು ಯಾರು ಇಲ್ಲ. ಶರಣರು ಇಹಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟವರು. ಅಲ್ಲಮಪ್ರಭು ಇದನ್ನೇ ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಮನಸ್ಸನ್ನು ನಿಯಂತ್ರಿಸದೆ ಎಷ್ಟು ಲೋಕವನ್ನು ಸುತ್ತಿದರೂ ಪೂರ್ಣತ್ವ ಪ್ರಾಪ್ತವಾಗುವುದಿಲ್ಲ ಎಂದು ಅಲ್ಲಮ ತೀಕ್ಷ÷್ಣವಾಗಿ ಪ್ರತಿಪಾದಿಸಿದ್ದಾರೆ. ಅಲ್ಲಮ ಪ್ರಭು ಒಬ್ಬ ದಾರ್ಶನಿಕ ಶರಣ. ತತ್ವಜ್ಞಾನಿಯಾಗಿ, ಸಂಘಟಕನಾಗಿ, ಸಮಾಜ ಸುಧಾರಕನಾಗಿ, ಬೆಡಗಿನ ವಚನ ರಚನಾಕಾರನಾಗಿ ಅವರ ಕೊಡುಗೆ ಅಪಾರ.

 ಶಿವಶರಣರ ಚಳವಳಿಯಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸರಿಸಮಾನ ಸ್ಥಾನಮಾನಗಳಿದ್ದವು. ಎಂದಿಲ್ಲದ ಮಹಿಳೆಯರು ಶರಣ ಚಳವಳಿಯಲ್ಲಿ ಪಾಲ್ಗೊಂಡು ಅಪರೂಪದ ವಚನಗಳನ್ನು ರಚಿಸಿದ್ದೇ ಇದಕ್ಕೆ ಸಾಕ್ಷಿ. ವಚನಗಾರ್ತಿಯರಲ್ಲಿ ಮಂಚೂಣಿಯಲ್ಲಿ ಕಂಡು ಬರುವವಳು ಅಕ್ಕಮಹಾದೇವಿ. ಅದು ಕವಯಿತ್ರಿಯಾಗಿ, ಮಹಿಳಾವಾದಿಯಾಗಿ ಅಕ್ಕಳ ಬದುಕ ಮಾದರಿಯಾದುದು ಹತ್ತನೆ ಶತಮಾನದಲ್ಲಿ ಕಂತಿ ಎಂಬ ಹೆಸರಿನ ಮಹಿಳೆಯೋರ್ವಳು ಕೆಲವು ಸಾಲುಗಳ ಸಾಹಿತ್ಯವನ್ನು ರಚಿಸಿರಬಹುದೆಂಬುದರ ಊಹೆಯ ಹೊರತಾಗಿ ಅಕ್ಕ ಆದ್ಯ ಕವಯಿತ್ರಿಯಾಗಿ ಸಾಹಿತ್ಯ ಲೋಕಕ್ಕೆ ಸ್ಮರಣೀಯ ಕೊಡುಗೆಯನ್ನು ನೀಡಿದ್ದಾಳೆ. ಕೇವಲ ಕರ್ನಾಟಕ ಮಾತ್ರವಲ್ಲ ಭಾರತೀಯ ಚರಿತ್ರೆಯಲ್ಲಿ ಮಹಿಳಾ ವಾದದ ಪ್ರಾಚೀನತೆಯನ್ನು ಹುಡುಕುತ್ತಾ ಹೋಗುವವರಿಗೆ ಮೊಟ್ಟ ಮೊದಲಿಗೆ ಕಂಡು ಬರುವ ಹೆಸರೇ ಅಕ್ಕಮಹಾದೇವಿ. ಆಧುನಿಕ ಮಹಿಳಾ ವಾದದ ಎಲ್ಲಾ ಗುಣ ಸ್ವಭಾವಗಳು, ಹೋರಾಟಗಳು ಅಕ್ಕನಲ್ಲಿ ಕಂಡು ಬರುತ್ತವೆ. ಅಕ್ಕ ಪುರುಷ ಕೇಂದ್ರಿತ ಎಲ್ಲಾ ಕಟ್ಟು ಕಟ್ಟಲೆಗಳನ್ನು ಒಡೆದು ಛೀದ್ರಗೊಳಿಸಿ 12 ನೇ ಶತಮಾನದ ವೇಳೆಗಾಗಲೇ ಮಹಿಳಾ ಸ್ವಾಭಿಮಾನವನ್ನು ಪ್ರತಿಪಾದಿಸಿದವಳು. ಅವಳ ಬದುಕೇ ಅಷ್ಟು ರೋಚಕ ಸಂಕಥನ.

 ಆಧುನಿಕ ಮಹಿಳಾವಾದವು ಸ್ತ್ರೀಯ ಮೈ-ಮನಸ್ಸುಗಳ ಮೇಲೆ ಪುರುಷನ ಹಕ್ಕನ್ನು ಧಿಕ್ಕರಿಸುತ್ತದೆ. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಸಮಾನತೆ ಮುಕ್ತ ಆಯ್ಕೆಯ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಒಂದೊಮ್ಮೆ ಈ ಹಕ್ಕುಗಳು ಲಭ್ಯವಾಗಿದಿದ್ದರೆ ಅದನ್ನು ಪ್ರತಿಭಟನೆಯ ಮೂಲಕ ಪಡೆದುಕೊಳ್ಳುವ ಹಿಂದೇಟು ಹಾಕಕೂಡದೆಂದು ಪ್ರತಿಪಾದಿಸುತ್ತದೆ. ಈ ಎಲ್ಲಾ ಬಗೆಯ ಪ್ರತಿಭಟನೆಯನ್ನು ಅಂದೇ ಅಕ್ಕಮಹಾದೇವಿ ಮಾಡಿ ತೋರಿದ್ದಳು. ಆದ್ದರಿಂದ ಅಕ್ಕ ಮಹಾದೇವಿ ಆಧುನಿಕರಿಗೆ ಆಧುನಿಕ ಮಹಿಳಾ ಹೋರಾಟಗಾರ್ತಿ ಎಂದರೆ ತಪ್ಪಾಗಲಾರದು.

 ಮೊದಲ ಮಹಿಳಾವಾದಿ ಅಕ್ಕಮಹಾದೇವಿ ಜನಿಸಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ. ಈಗ ಅದು ಉಡುಗಣಿಯಾಗಿದೆ. ತಂದೆ ನಿರ್ಮಲಶೆಟ್ಟಿ ತಾಯಿ ಸುಮತಿ, ಗುರು ಲಿಂಗದೇವರು ಲಿಂಗಧಾರಣೆ ಮಾಡಿದವರು. ಚಿಕ್ಕಂದಿನಿಂದಲೇ ಶಿವಭಕ್ತಳಾದ ಅಕ್ಕಮಹಾದೇವಿ ಲೌಕಿಕ ಜೀವನದಲ್ಲಿ ನಿರಾಶಕ್ತಿಯನ್ನು ಹೊಂದಿದ್ದಳು. ಯೌವನದ ಹೊಸ್ತಿಲಲ್ಲಿ ಅಕ್ಕ ಅಸಾಧಾರಣ ಸೌಂದರ್ಯವತಿಯಾಗಿದ್ದಳು. ಅನಿರಿಕ್ಷಿತ ಸಂದರ್ಭದಲ್ಲಿ ಅಕ್ಕನನ್ನು ಕಂಡ ಕೌಶಿಕ ಮಹಾರಾಜ ಮದುವೆಯಾಗಲು ಬಯಸುತ್ತಾನೆ. ತಂದೆ-ತಾಯಿಯರಿಗೆ ಕೌಶಿಕನನ್ನು ಮದುವೆ ಮಾಡಲು ಇಷ್ಟವಿಲ್ಲದಿದ್ದರೂ ಅವನಿಂದ ತನ್ನ ತಂದೆ ತಾಯಿಗೆ ಆಗಬಹುದಾದ ಹಿಂಸೆಯನ್ನು ಮನಗಂಡು ಷರತ್ತುಬದ್ದ ಮದುವೆಯಾಗಲು ಒಪ್ಪುತ್ತಾಳೆ. ಕೌಶಿಕ ಅಕ್ಕಳ ಷರತ್ತನ್ನು ಒಪ್ಪಿ ಮದುವೆಯಾಗುತ್ತಾನೆ. ಅಕ್ಕಳ ಷರತ್ತನ್ನು ಪಾಲಿಸದ ಕೌಶಿಕ ಅಕ್ಕ ಶಿವಪೂಜೆಯಲ್ಲಿ ನಿರತಳಾಗಿದ್ದಾಗ ಮುಟ್ಟಲು ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಅಕ್ಕಳ ಮುಂದೆ ಎರಡು ಆಯ್ಕೆಗಳಿರುತ್ತವೆ. ಕೌಶಿಕನೊಂದಿಗೆ ಹೊಂದಿಕೊಂಡು ಸಂಸಾರವನ್ನು ಒಪ್ಪಿಕೊಳ್ಳುವುದು, ಇನ್ನೊಂದು ಇಹದ ವೈಭೋಗವನ್ನು ದಿಕ್ಕರಿಸಿ ಸ್ವತಂತ್ರವಾಗಿ ಬದುಕುವುದು. ಅಕ್ಕ ಎರಡನೆಯದ್ದನ್ನೆ ಆಯ್ಕೆ ಮಾಡಿಕೊಳ್ಳುತ್ತಾಳೆ. ಭಕ್ತಿ ಭಂಡಾರಿಯಾಗಿದ್ದ ಅಕ್ಕಮಹಾದೇವಿ ಪರಾಧೀನತೆಯ ಬದುಕನ್ನು ದಿಕ್ಕರಿಸಿ ನಿಲ್ಲುತ್ತಾಳೆ. ಈ ನಿರ್ಧಾರ ಅಕ್ಕಳ ಬದುಕಿನ ಬಹುದೊಡ್ಡ ತಿರುವಾಗಿ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಮಾದರಿಯಾಗಿ ನಿಂತಿದ್ದಾಳೆ. ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ.

 ಹಿಡಿಯದಿರು ತಡೆಯದಿರು ಬಿಡು ಬಿಡು ಕೈಯ ಸೆರಗ

 ಭಾಷೆಯ ಬರೆದುಕೊಟ್ಟು ಸತ್ಯಕ್ಕೆ ತಪ್ಪಿದರೆ

 ಅಘೋರ ನರಕ ವೆಂದರಿಯ- ಎಂದು ಅಕ್ಕಮಹಾದೇವಿ ಪರಿಪರಿಯಾಗಿ ಬೇಡುತ್ತಾಳೆ. ಒಪ್ಪದಿದ್ದಾಗ ತಿರಸ್ಕರಿಸಿ ಉಟ್ಟ ಬಟ್ಟೆಯನ್ನು ಬಿಚ್ಚೊಗೆದು ಕೇಶಾಂಬರಿಯಾಗಿ ಕೂಡಲ ಸಂಗಮಕ್ಕೆ ಹೊರಟು ಬಿಡುತ್ತಾಳೆ.

– ಮುಂದುವರೆಯುತ್ತದೆ…


Leave a Reply

Back To Top