ಡಾ.ಸಣ್ಣರಾಮ
ಕಳೆದ ಸಂಚಿಕೆಯಿಂದ…
ಅಕ್ಕ ಕೂಡಲ ಸಂಗಮವನ್ನು ಪ್ರವೇಶಿಸುತ್ತಲೇ ಮತ್ತೊಂದು ಅಗ್ನಿ ಪರೀಕ್ಷೆ ಅವಳಿಗೆ ಕಾದಿತ್ತು. ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭು ಯಾರೇ ಬರಲಿ ಪರೀಕ್ಷಿಸದೇ ಅನುಮತಿಯನ್ನು ಕೊಡುತ್ತಿರಲಿಲ್ಲ. ಶರಣೆ ಅಕ್ಕಮಹಾದೇವಿಯನ್ನು ಕಂಡು ದಿಗ್ಭ್ರಮೆಗೊಂಡ ಅಲ್ಲಮ ಅವಳನ್ನು ಪರೀಕ್ಷಿಸಲು ಮುಂದಾಗಿ
“ಸತಿ ನೀನು ಇತ್ತಲೇಕೆ ಬಂದೆಯವ್ವಾ ಸತಿಯೆಂದರೆ ಮುನಿವರು
ನಮ್ಮ ಶರಣರು ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು
ಇಲ್ಲದಿದ್ದರೆ ತೊಲಗು ತಾಯಿ”
ಅಕ್ಕ; “ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಿಸಿದ್ದೆ ನೋಡಾ”
ಪ್ರಭು: ಕೇಶಿಯೆಂಬ ಸೀರೆಯು ಲಿಂಗಕ್ಕೆ ಮರೆಯಾಯಿತ್ತು. ಅಪಮಾನವೆಂತು ಹರಿಯಿತ್ತು.
ಅಕ್ಕ: ಕಾಯಕರ್ರನೆ ಕಂದಿದರೇನಯ್ಯ ಕಾಯಮಿರ್ರನೆ ಮಿಂಚಿದರೇನಯ್ಯ ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನ ಲಿಂಗವು ಒಲಿದ ಕಾಯ ಹೇಗಿದ್ದರೇನಾಯ್ಯ.
ಪ್ರಭು: ಭಾವ ಶುದ್ಧವಾದಲ್ಲಿ ಸೀರೆಯನುಳಿದು ಕೂದಲು ಮರೆ ಮಾಡುವುದುದೇತಕ್ಕೆ.
ಅಕ್ಕ: ಕಾಮನ ಮುದ್ರೆಯನು ಕಂಡು ನಿಮಗೆ ನೋವಾದೀತೆಂದು ಆಭಾವದಿಂದ ಮುಚ್ಚಿದೆ. ಕಾಯದೊಳು ಅಕಾಯವಾಯಿತ್ತು. ಜೀವದೊಳಗೆ ನಿರ್ಜೀವಾಯಿತ್ತು. ಭಾವದೊಳೆ ನಿರ್ಭಾವವಾಗಿತ್ತು.
ಅಕ್ಕನ ದಿಟ್ಟ ಸ್ಪಷ್ಟ ಅಂತರಂಗ ಬಹಿರಂಗ ಶುದ್ಧಿಯ ಉತ್ತರವನ್ನು ಕೇಳಿದ ಶರಣ ಸಂಕುಲ ಮೂಕವಿಸ್ಮಿತವಾಗುತ್ತದೆ. ಅಲ್ಲಮಪ್ರಭು “ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ ಗುಹೇಶ್ವರ ಲಿಂಗದಲ್ಲಿ ಸಂದಿಲ್ಲದಪ್ಪ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ” ಎಂದರು. ಆ ಕ್ಷಣವೇ ಶರಣರೆಲ್ಲ ತಲೆಬಾಗಿ ಶರಣೊ ಎನ್ನುವರು.
ಅಕ್ಕನ ವ್ಯಕ್ತಿತ್ವ, ವಿಚಾರಧಾರೆಯೇ ಅಂತದ್ದು. ಸ್ತ್ರೀ ಸ್ವಾತಂತ್ರ್ಯವನ್ನು ಮೆರೆದ ಅಂತೆಯೇ ಬದುಕಿದ ಅಕ್ಕ ಸ್ತ್ರೀ ಸ್ವಾತಂತ್ರ್ಯ ಅದಾಗೆಯೇ ಲಭಿಸುವುದಿಲ್ಲ. ಆತ್ಮಬಲದಿಂದ ನಾವಾಗಿಯೇ ಪಡೆದುಕೊಳ್ಳಬೇಕು, ಸಾಧ್ಯವಾದರೆ ಒತ್ತಾಯದಿಂದ ಕಸಿದುಕೊಳ್ಳಬೇಕೆಂಬ ಧೋರಣೆಯ ದಿಟ್ಟ ಮಹಿಳೆ.
ಪಂಚೇಂದ್ರಿಯಗಳೊಳಗೆ
ಒಂದಕ್ಕೆ ಪ್ರಿಯನಾದಡೆ ಸಾಲದೆ?
ಸಪ್ತ ವ್ಯಸನಂಗಳೊಳಗೆ
ಒಂದಕ್ಕೆ ಪ್ರಿಯನಾದಡೆ ಸಾಲದೆ?
ರತ್ನದ ಸಂಕಲೆಯಾದಡೇನು
ಬಂಧನ ಬಿಡುವುದೇ ಚನ್ನಮಲ್ಲಿಕಾಜರ್ುನ…….
ಸಂಸಾರವೆಂಬುದು ರತ್ನದ ಸಂಕಲೆ ಇದ್ದಹಾಗೆ, ಆಕರ್ಷಣೀಯವಾದ ಸಂಸಾರ ಸುಖದೊಳಗೆ ಗಂಡನ ಕಟ್ಟುಕಟ್ಟಲೆಯೊಳಗೆ ಅವನಿಚ್ಛೆಯಂತೆ ಬದುಕುವುದು ಅದೊಂದು ಜೀವನವೇ? ಶತಶತಮಾನಗಳ ಪುರುಷನ ದೌರ್ಜನ್ಯವನ್ನು ಪ್ರಶ್ನಿಸಿ ದಿಕ್ಕರಿಸಿದ ಅಕ್ಕ ಬಿಡುಗಡೆಯ ಬಯಸಿದ ಸ್ವತಂತ್ರ ಪ್ರೇಮಿ. ಸಂಸಾರ ಬಂಧನಕ್ಕೆ ಕಾರಣವಾಗುವ ಪಂಚೇಂದ್ರಿಯ ಮತ್ತು ಸಪ್ತ ವ್ಯಸನಗಳ ನಿಯಂತ್ರಿಸಿಕೊಂಡರೆ ಈ ರತ್ನದ ಸಂಕಲೆಯಿಂದ ಬಿಡುಗಡೆಯನ್ನು ಪಡೆಯಬಹುದು. ಮುಂದುವರೆದು ಅಕ್ಕ ಹೇಳುವುದು,
“ಈ ಸಾವಕೆಡುವ ಗಂಡರನೊಯ್ದು ಒಲೆಯೊಳಗೆ ಇಕ್ಕು ತಾಯಿ”-ಎನ್ನುತ್ತಾಳೆ. ಇದು ಅಕ್ಕನ ಉಗ್ರವಾದ ಪ್ರತಿಭಟನೆ. ಆಧುನಿಕ ಮಹಿಳಾ ವಾದಿಯರನ್ನು ಬೆಚ್ಚಿಬೀಳಿಸುವ ಮಾತುಗಳಿವು.