“ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ”ಸಣ್ಣ ಕಥೆ,ವೀಣಾ ಹೇಮಂತ್ರ ಗೌಡ ಪಾಟೀಲರಿಂದ
ಕಥಾ ಸಂಗಾತಿ ವೀಣಾ ಹೇಮಂತ್ರ ಗೌಡ ಪಾಟೀಲ “ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ” ನಸುಕಿನ 5:ರ ಸಮಯ. ಮಾಡಿದ ಎಲ್ಲಾ ಅಡುಗೆಗಳನ್ನು ಒಂದೆಡೆ ಜೋಡಿಸಿದ ಸುಮಾಳ ಬೆನ್ನು ನೋವಿನಿಂದ ಮುಲುಗುಟ್ಟುತ್ತಿದ್ದರೆ ದೇಹ ಒಲೆಯ ಝಳದ ಜೊತೆಗೆ ಜ್ವರದ ತಾಪದಿಂದ ಕಾಯುತ್ತಿತ್ತು. ಅಡುಗೆ ಮನೆಯ ಬಾಗಿಲಲ್ಲಿ ಬಂದು ನಿಂತ ಅತ್ತೆ ರಮಾ ಬಾಯಿ ಎಲ್ಲ ಕೆಲಸ ಮುಗಿಯಿತೆ? ಎಂದು ಬಿಗುಮಾನದಿಂದ ಕೇಳಿದರು. ತಲೆಯೆತ್ತದೆ ಗೋಣಾಡಿಸಿದ ಸೊಸೆ ಸುಮಳನ್ನು ನೋಡಿ ಅವರ ಅತ್ತೆತನದ ಹಮ್ಮು ಸಂತೃಪ್ತಿಗೊಂಡಿತು.ತುಸು ದರ್ಪದ ಧ್ವನಿಯನ್ನು ಹೆಚ್ಚಿಸಿ ಬರಿ ಇಡ್ಲಿ ವಡೆ ಚಟ್ನಿ ಸಾಂಬಾರ್ ಸಾಲುವುದಿಲ್ಲ ಒಂದಷ್ಟು ಕೇಸರಿಬಾತ್ ಹಾಗೂ ಉಪ್ಪಿಟ್ಟು ಕೂಡ ಮಾಡಿಬಿಡು ಸುಮಾ ಎಂದು ಹೇಳಿದರು. ಈಗಾಗಲೇ ದೇಹವೆಲ್ಲಾ ಬಿಸಿಯಾಗಿ ಬೆನ್ನು ಹೊಡೆತದಿಂದ ಒದ್ದಾಡುತ್ತಿದ್ದ ಸುಮಾಳ ಮುಖದಲ್ಲಿ ವ್ಯಂಗ್ಯದ ನಗು ಮೂಡಿತು. ಮನದಲ್ಲಿ ನಿಶ್ಚಯ ಮಡುಗಟ್ಟಿತು. ಆಯ್ತು ಎಂದು ತಲೆ ಆಡಿಸಿದ ಆಕೆ ಡಬ್ಬದಿಂದ ರವೆಯನ್ನು ತೆಗೆದು ಹುರಿಯಲು ಆರಂಭಿಸಿದಳು. ರವೆಯ ಕಣಗಳು ನಿಧಾನವಾದ ಉರಿಗೆ ಹದವಾಗಿ ಹುರಿಯಲ್ಪಟ್ಟು ಘಮ್ಮನೆಯ ಸುವಾಸನೆಯನ್ನು ಹೊರಡಿಸಿದ್ದರೆ ಅಸಹನೆಯನ್ನು ಮೂಡಿಸುವ ಕಳೆದ ನಾಲ್ಕು ವರ್ಷಗಳ ಆಕೆಯ ವೈವಾಹಿಕ ಬದುಕಿನ ಪುಟಗಳು ಒಂದೊಂದಾಗಿ ಮೊದಲಿನಿಂದ ತೆರೆಯಲು ಆರಂಭಿಸಿದ್ದವು.ಜಿಲ್ಲಾ ಕೇಂದ್ರವೊಂದರ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಮುಖ್ಯ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಳನ್ನು ನೋಡಲು ಬಂದ ಸುದೀಪ್ ಗೆ ಮೆಚ್ಚುಗೆಯಾದದ್ದು ಆಕೆಯ ಸ್ಳಿಗ್ಧ ಸೌಂದರ್ಯವಾದರೆ ಅತ್ಯಂತ ಸೌಮ್ಯ ಮುಖಭಾವವನ್ನು ಕಂಡ ಸುದೀಪನ ತಾಯಿ ತನ್ನ ತಾಳಕ್ಕೆ ತಕ್ಕಂತೆ ಯುವತಿಯನ್ನು ಕುಣಿಸಬಹುದು ಎಂಬ ಭಾವ ಒಪ್ಪಿಗೆ ಸೂಸಲು ಕಾರಣವಾಗಿತ್ತು. ತಾಯಿ ಮತ್ತು ಮಗನ ಮಾತಿಗೆ ಎದುರಾಡದ ತಂದೆ ತಮ್ಮ ಸಮ್ಮತಿಯನ್ನು ಸೂಚಿಸಿದರು.ಇರುವುದರಲ್ಲಿಯೇ ಚೆನ್ನಾಗಿ ಮದುವೆ ಮಾಡಿಕೊಟ್ಟ ಸುಮಳ ಪಾಲಕರು ತಮ್ಮ ತಲೆಯ ಮೇಲಿನ ಹೊರೆ ಇಳಿದ ಭಾವವನ್ನು ಅನುಭವಿಸಿದರು. ತಾಯಿಯ ತವರುಮನೆಯಿಂದ ಬಂದು ಒಂದು ತುಂಬಿಟ್ಟ ಸೇರನ್ನು ಒದ್ದು ಬಲಗಾಲಿಟ್ಟು ಮನೆಯನ್ನು ಪ್ರವೇಶಿಸಿದ ಸೊಸೆಯ ಕೈಯಿಂದ ಕುಟುಂಬಕ್ಕೆ ಸಂಬಂಧಿಸಿದ ತಿಜೋರಿಯಲ್ಲಿ ಸುಮಾಳ ಆಸ್ತಿ ಪತ್ರ ಹಾಗೂ ಒಡವೆಗಳನ್ನು ಇಸಿದುಕೊಂಡು ಆಕೆಯ ಅತ್ತೆ ಭದ್ರಪಡಿಸಿದರು. ಮಧುಚಂದ್ರದ ಅವಧಿ ಮುಗಿಯುವ ಮೊದಲೇ ಸುಮಾಳ ಹರಿವಿಗೆ ಬಂದದ್ದು ಆಕೆಯ ಪತಿ ತನ್ನ ತಾಯಿಯ ಮಾತನ್ನು ತೆಗೆದುಹಾಕುವುದಿಲ್ಲ ಎಂಬುದರ ಅರಿವಾಗಿತ್ತು. ಮಾವ ಕೂಡ ಕೋಲೆ ಬಸವನಂತೆ ತಲೆಯಾಡಿಸುವುದು ಆಕೆಯ ಅರಿವಿಗೆ ಬಂದಿತ್ತು. ಸ್ವಭಾವತಃ ಮೆದುವಾಗಿದ್ದ ಸುಮಾ ತನ್ನ ಮನೆಯ ಪರಿಸ್ಥಿತಿಗಿಂತ ಅಷ್ಟೇನೂ ಭಿನ್ನವಾಗಿಲ್ಲದ ಗಂಡನ ಮನೆಗೆ ಸಹಜವಾಗಿಯೇ ಒಗ್ಗಿಕೊಂಡಳು. ಆದರೆ ದಿನ ದಿನಕ್ಕೆ ಅತ್ತೆಯ ಕಠಿಣತೆ ಹೆಚ್ಚಾಗುತ್ತಾ ಹೋಯಿತು ಹಾಗೂ ಗಂಡ ತಾಯಿಯೊಂದಿಗೆ ಹೊಂದಿಕೊಂಡು ಹೋಗು, ತಾಯಿ ಹೇಳಿದಂತೆ ಕೇಳು,ಅಮ್ಮನ ಮನಸ್ಸಿಗೆ ಬೇಸರವಾಗದಂತೆ ನೋಡಿಕೋ ಎಂದು ಹೇಳುವುದನ್ನು ಕೇಳಿ ಆಕೆಗೆ ಬೇಸರವಾಗತೊಡಗಿತು. ಅದರಲ್ಲೂ ಅತ್ತೆ ತನ್ನನ್ನು ಮನೆಯಲ್ಲಿ ಎಲ್ಲರ ಸೇವೆ ಮಾಡುವ ಸೇವಕಿ ಎಂಬಂತೆ ಬಿಂಬಿಸತೊಡಗಿದಾಗ ಆಕೆಯ ಬೇಸರ ನೋವಿಗೆ ಎಡೆ ಮಾಡಿಕೊಟ್ಟಿತು. ದಿನಗಳೆದಂತೆ ಅತ್ತೆಯ ದರ್ಪ, ಮಾವನ ಕಾಠಿಣ್ಯ ಹಾಗೂ ಗಂಡನ ನಿಷ್ಕ್ರಿಯತೆ ಆಕೆಯಲ್ಲಿ ಒಂದು ಬಗೆಯ ಬೇಸರವನ್ನು ಉಂಟು ಮಾಡಿ, ಆಕೆ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಳು. ಇದರ ಜೊತೆಗೆ ಮಕ್ಕಳಾಗದೇ ಇರುವುದು ಆಕೆಯ ಬೇಸರವನ್ನು ಮತ್ತಷ್ಟು ಹೆಚ್ಚಿಸಿತ್ತು.ಕೆಲ ತಿಂಗಳುಗಳ ಹಿಂದೆ ತವರಿಗೆ ಹೋದ ಆಕೆ ತನ್ನೊಂದಿಗೆ ಓದುತ್ತಿದ್ದ ತನ್ನ ಆತ್ಮೀಯ ಸ್ನೇಹಿತೆಯೊಂದಿಗೆ ಈ ಕುರಿತು ನೋವನ್ನು ತೋಡಿಕೊಂಡಾಗ ಸ್ನೇಹಿತೆ ಹೇಳಿದ ಮಾತುಗಳು ಆಕೆಯ ಕಣ್ಣಿಗೆ ಕಟ್ಟಿದ ಪರದೆಯನ್ನು ಕೊಂಚ ತೆರೆಯಿತು.ತನ್ನ ತಾಯಿಯ ತವರು ಮನೆಯಿಂದ ತನಗೆ ದೊರೆತ ಆಸ್ತಿಯ ಕಾಗದ ಪತ್ರಗಳು, ಒಡವೆ ವಸ್ತುಗಳು ಅತ್ತೆಯ ಅಲಮಾರಿಯಲ್ಲಿ ಇರುವುದು ಹಾಗೂ ಆಕೆ ಅದನ್ನು ತಮ್ಮ ಕುಟುಂಬಕ್ಕೆ ಕೊಡುಗೆಯಾಗಿ ಬಂದದ್ದು ಎಂದು ಹೇಳುವ ಮೂಲಕ ಅದನ್ನು ಕುಟುಂಬದ ಆಸ್ತಿಯಾಗಿ ಪರಿಗಣಿಸುತ್ತಿರುವುದು ತಪ್ಪು ಎಂಬುದು ಆಕೆಗೆ ಅರಿವಾಯಿತು.ಮರಳಿ ಬಂದ ನಂತರ ಅದೊಂದು ಬಾರಿ ಚಿನ್ನದ ಒಡವೆಗಳನ್ನು ಸಂಬಂಧಿಕರ ಮನೆಯ ಮದುವೆಗೆ ಹೋದಾಗ ಅತ್ತೆಯ ತಿಜೋರಿಯ ಸೇಫ್ ನಿಂದ ಹೊರ ತೆಗೆದು ಉಪಯೋಗಿಸಿ ಮರಳಿ ಎತ್ತಿಡುವಾಗ ತನ್ನೆಲ್ಲ ಶೈಕ್ಷಣಿಕ ಕಾಗದ ಪತ್ರಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಸ್ತಿಯ ಪತ್ರಗಳನ್ನು ಹಾಗೂ ಒಡವೆಗಳನ್ನು ಸುಮಾ ಎತ್ತಿಟ್ಟುಕೊಂಡಳು. ಇಂದು ಅತ್ತೆಯ ಕಾಠಿಣ್ಯದ ಆಜ್ಞೆಗಳು ಆಕೆಯ ಮನಸ್ಸಿನಲ್ಲಿ ಹರಳುಗಟ್ಟುತ್ತಿದ್ದ ಯೋಚನೆಗಳಿಗೆ ಅಂತಿಮ ಸ್ವರೂಪವನ್ನು ನೀಡಿದವು ಅಂತೆಯೇ ಕೇಸರಿಬಾತ್ ಮತ್ತು ಉಪ್ಪಿಟ್ಟನ್ನು ಮಾಡಿ ಪೂರೈಸಿ ಎಲ್ಲವನ್ನು ಒಂದೆಡೆ ಟೇಬಲ್ ಮೇಲೆ ಜೋಡಿಸಿ ಇಟ್ಟ ಆಕೆ ಅದರ ಬಳಿ ತಾನು ಮನೆ ಬಿಟ್ಟು ಹೋಗುತ್ತಿರುವುದಾಗಿ ಬರೆದ ಕಾಗದವೊಂದನ್ನು ಇಟ್ಟಳು.ತೀವ್ರ ಆಯಾಸದಿಂದ ತನ್ನ ಕೋಣೆಗೆ ಬಂದ ಆಕೆ ಸ್ನಾನ ಮಾಡಿ ಆರಾಮದಾಯಕ ಉಡುಪೊಂದನ್ನು ಧರಿಸಿ ಒಂದಷ್ಟು ಬಟ್ಟೆಗಳನ್ನು, ಹಾಗೂ ಒಳಉಡುಪುಗಳನ್ನು ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಅವಶ್ಯಕ ಕಾಗದ ಪತ್ರಗಳನ್ನು ಜೋಡಿಸಿಟ್ಟುಕೊಂಡು ದೇವರ ಕೋಣೆಗೆ ಬಂದು ದೀಪವನ್ನು ಮುಡಿಸಿ ದೇವರಿಗೆ ನಮಸ್ಕರಿಸಿ ದೃಢ ನಿರ್ಧಾರದಿಂದ ತನ್ನ ಬ್ಯಾಗಿನೊಂದಿಗೆ ಮನೆಯ ಹೊರಗೆ ಕಾಲಿಟ್ಟಳು.ಮನೆಯ ಬಾಗಿಲನ್ನು ದಾಟಿ ರಸ್ತೆಗೆ ಬರುತ್ತಿದ್ದಂತೆಯೇ ಎದುರಿಗೆ ಕಂಡ ಆಟೋವೊಂದನ್ನು ಕೂಗಿ ಕರೆದ ಆಕೆ ಢವಗುಡುತ್ತಿದ್ದ ಎದೆಯ ಬಡಿತವನ್ನು ಸ್ಥಿಮಿತಕ್ಕೆ ತರಲು ಪ್ರಯತ್ನಿಸುತ್ತಾ ಅದರಲ್ಲಿ ಕುಳಿತು ರೈಲು ನಿಲ್ದಾಣಕ್ಕೆ ಹೋಗುವಂತೆ ನಿರ್ದೇಶಿಸಿ ಹಿಂದಕ್ಕೊರಗಿ ಕುಳಿತುಕೊಂಡಳು.ಇತ್ತ ಮನೆಯಲ್ಲಿ ಆಕೆಯ ಸುಳಿವಿರದೆ ಮನೆಯ ಎಲ್ಲೆಡೆ ಹುಡುಕಲು ಆರಂಭಿಸಿದರು. ಟೇಬಲ್ ನ ಮೇಲಿದ್ದ ಕಾಗದವನ್ನು ಓದಿದ ಮಾವ ನಖಶಿಖಾಂತ ಬೆವೆತರೆ ಅತ್ತೆ ಕ್ರೋಧದಿಂದ ತಪ್ತಳಾದಳು.ಗಂಡ ಆಕೆಗೆ ಕರೆ ಮಾಡಿದ. ಕರೆಯನ್ನು ಆಕೆ ಸ್ವೀಕರಿಸಿದ ಕೂಡಲೇ ‘ಎಲ್ಲಿರುವೆ ಸುಮಾ, ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದಾರೆ’ ಎಂದು ಕೇಳಿದ. ನಾನು ಮನೆ ಬಿಟ್ಟು ಹೊರಟಿದ್ದೇನೆ. ನಿಮಗೆ ಬೇಕಾದ ಅಡುಗೆಯನ್ನು ಮಾಡಿ ಟೇಬಲ್ ಮೇಲೆ ಇಟ್ಟಿದ್ದೇನೆ ಎಂದು ಅತ್ಯಂತ ಶಾಂತವಾಗಿ ಆಕೆ ಹೇಳಿದಳು.‘ಮನೆಗೆ ಅಷ್ಟೊಂದು ಜನ ಬರುತ್ತಿದ್ದಾರೆ ಅಂತಹದರಲ್ಲಿ ಮನೆಯ ಸೊಸೆಯಾಗಿ ನೀನೇ ಇಲ್ಲವೆಂದರೆ ಹೇಗೆ ?’ ಎಂದು ಸುದೀಪ್ ಕೇಳಿದ. ನಿಮಗೆ ಬೇಕಾಗಿರುವುದು ಮನೆಯ ಸೊಸೆಯಲ್ಲ ಕೇವಲ ಕೆಲಸದಾಕೆ. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಆ ಮನೆಯ ಸೊಸೆಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಕೆಲಸದವಳಾಗಿ ಬದುಕಿದ್ದೆ ಎಂಬುದು ನಿಮಗಿಂತ ಚೆನ್ನಾಗಿ ಬೇರೆ ಯಾರಿಗೆ ಗೊತ್ತು ? ಎಂದು ಆಕೆ ತುಸು ತೀಕ್ಷ್ಣವಾಗಿ ಹೇಳಿದಳು. ಆಕೆಯ ಧ್ವನಿಯಲ್ಲಿದ್ದ ತೀಕ್ಷ್ಣತೆ ಹಾಗೂ ಗಟ್ಟಿತನವನ್ನು ಗುರುತಿಸಿದ ಆಟೋ ಡ್ರೈವರ್ ಜೋರಾಗಿ ಕೇಳಿಸುತ್ತಿದ್ದ ಸ್ಪೀಕರ್ ನ ಕಿವಿಯನ್ನು ಮೆಲ್ಲನೆ ತಿರುವಿ ನಂತರ ತನ್ನ ಆಟೋ ನಿಲ್ಲಿಸಿ ‘ಮೇಡಂ, ಎಲ್ಲಿಗೆ ಹೋಗಬೇಕು? ಎಂದು ತಗ್ಗಿದ ದನಿಯಲ್ಲಿ ಕೇಳಿದ.ಕೂಡಲೇ ಎಚ್ಚೆತ್ತು ಸುಮಾ ‘ರೈಲ್ವೇ ಸ್ಟೇಷನ್ ಗೆ ನಡೆಯಿರಿ ಅಣ್ಣ ‘ ಎಂದು ಹೇಳಿದಳು. ಸ್ಟೇಷನ್ ಗೆ ಬಂದ ಆಕೆ ಮೈಸೂರಿಗೆ ತೆರಳುವ ರೈಲನ್ನು ಏರಿ ಕುಳಿತಳು. ಅತ್ತೆಯ ಮನೆಯ ಯಾವೊಬ್ಬ ಸದಸ್ಯರ ಫೋನ್ ಕರೆಯನ್ನು ಆಕೆ ಸ್ವೀಕರಿಸಲಿಲ್ಲ…. ಗಂಡನದ್ದು ಕೂಡ.ರೈಲು ಮೈಸೂರನ್ನು ತಲುಪಿದಾಗ ಆಟೋ ಏರಿದ ಆಕೆತನ್ನ ಚಿಕ್ಕಮ್ಮನ ಮನೆಗೆ ಬಂದು ಬಾಗಿಲು ತಟ್ಟಿದಳು. ಬಾಗಿಲನ್ನು ತೆರೆದ ಚಿಕ್ಕಮ್ಮ ಈಕೆಯನ್ನು ನೋಡಿದ ಕೂಡಲೇ ಆಶ್ಚರ್ಯದಿಂದ ನಿಂತಳು. ನಾನು ಮತ್ತೆ ಮರಳಿ ಗಂಡನ ಮನೆಗೆ ಹೋಗಲು ಸಿದ್ದವಿಲ್ಲ ಚಿಕ್ಕಮ್ಮ ಎಂದು ಹೇಳಿದಾಗ ಅಕ್ಕನ ಮಗಳನ್ನು ಮೆದುವಾಗಿ ತಬ್ಬಿ ಒಳಗೆ ಕರೆದೊಯ್ದ ಚಿಕ್ಕಮ್ಮ ಆಕೆಗೆ ಸಾಂತ್ವನ ಹೇಳಿ ಮುಖ ತೊಳೆದು ಬರಲು ಹೇಳಿ ಬಿಸಿ ತಿಂಡಿಯನ್ನು ಹಾಕಿ ಕೊಟ್ಟರು. ತಿಂಡಿಯನ್ನು ತಿನ್ನುತ್ತಲೇ ನಡೆದ ವಿಷಯವನ್ನು ಆಕೆ ಹೇಳಿದಳು.ಅಂದು ಅವರ ಕುಟುಂಬದ ವಾಟ್ಸಪ್ ಗುಂಪಿನಲ್ಲಿಆ ದಿನ ಮುಂಜಾನೆ ಸುಮಳ ಅತ್ತೆಯ ಮನೆಯಲ್ಲಿ ನಡೆದ ವಿಷಯದ ಚರ್ಚೆ ಆಗಲಾರಂಭಿಸಿತು. ಕುಟುಂಬದ ಹಿರಿಯರು ಮನೆಯ ವಿಷಯವನ್ನು ಹೀಗೆ ಹೊರಗೆ ತರುವ ಅವಶ್ಯಕತೆ ಇದೆ ಎಂಬಂತೆ ಗುಂಪಿನಲ್ಲಿ ಚರ್ಚಿಸಿದಾಗ ಸುಮಾಳ ಮುಖದಲ್ಲಿ ವಿಷಾದದ ಕಿರುನಗೆ ಮೂಡಿತು. ಮನೆಯ ನಾಲ್ಕು ಗೋಡೆಗಳ ಒಳಗೆ ಈ ಕುರಿತು ಚರ್ಚಿಸಲು ಮನೆಯವರು ತಯಾರಿರಲಿಲ್ಲವಾದ ಕಾರಣ ಮನೆಯ ಸಮಸ್ಯೆ ನಾಲ್ಕು ಜನರಿಗೆ ತಿಳಿಯುವಂತೆ ಮಾಡಬೇಕಾಯಿತು ಎಂದು ಬರೆದ ಆಕೆ ಅದನ್ನು ಗುಂಪಿನಲ್ಲಿ ಹಂಚಿಕೊಂಡಳು.. ಎಲ್ಲರ ಬಾಯಿಗೆ ಬೀಗ ಬಿದ್ದಂತಾಯಿತು.ಮುಂದಿನ ಎರಡು ದಿನಕ್ಕೆ ಮೈಸೂರಿಗೆ ಬಂದಿಳಿದ ಸುದೀಪ್ ಆಕೆಯ ಮನವೊಲಿಸಲು ಪ್ರಯತ್ನಿಸಿದ. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ತನ್ನ ತಾಯಿಯ ಕುರಿತು ಮಾತ್ರ ಯೋಚಿಸಿದ್ದ ಪತಿಯನ್ನು ನಂಬಲು ಸುಮ ಸಿದ್ಧವಿರಲಿಲ್ಲ. ನಿರಾಶನಾಗಿ ಹಿಂದಿರುಗಿದ ಪತಿ. ಮತ್ತೆ ಒಂದು ವಾರದ ಬಳಿಕ ಮರಳಿ ಬಂದ. ಆತನ ಮುಖದಲ್ಲಿ ಗಾಂಭೀರ್ಯವಿತ್ತು. ಕೇವಲ ಒಂದೇ ವಾರದಲ್ಲಿ ಹತ್ತು ವರ್ಷ ಹೆಚ್ಚು ವಯಸ್ಸಾದಂತೆ ತೋರುತ್ತಿದ್ದ ಆತ ಈ ಬಾರಿ ಆಕೆಯನ್ನು ಮರಳಿ ಬಾ ಎಂದು ಅಂಗಲಾಚಲಿಲ್ಲ. ಬದಲಾಗಿ ತಾನು ತಮ್ಮಿಬ್ಬರ ಕುರಿತು ಮಾತನಾಡಿದ್ದು ಇನ್ನು ಮುಂದೆ ಆಕೆಯ ಎಲ್ಲ ಚಟುವಟಿಕೆಗಳಿಗೆ ಬೆಂಬಲವಾಗಿ ನಿಲ್ಲುವ, ಆಕೆಗೆ ಬೇಕಾದ ಎಲ್ಲಾ ಅಗತ್ಯ ಸಹಾಯಗಳನ್ನು ನೀಡುವುದಾಗಿ ಹೇಳಿದ. ಆಕೆಗೆ ತನ್ನೊಂದಿಗೆ ಬಾಳಲು ಇಷ್ಟವಿಲ್ಲ ಎಂದಾದರೆ ವಿಚ್ಛೇದನ ನೀಡಲು ಕೂಡ ಸಿದ್ದ ಎಂದು ಹೇಳಿದ.‘ ನನಗೆ ಯೋಚಿಸಲು ಕೊಂಚ ಸಮಯ ಬೇಕು’ ಎಂದಷ್ಟೇ ಹೇಳಿದ ಆಕೆಯ ಮಾತನ್ನು ಗೌರವಿಸಿ ಮರಳಿ ಊರಿಗೆ ಹೊರಟು ಹೋದ. ಒಂದೆರಡು ವಾರಗಳು ಕಳೆದ ಬಳಿಕ ತನ್ನ ಚಿಕ್ಕಮ್ಮನ ಸಹಾಯದಿಂದ ಆಕೆ ಉದ್ಯೋಗಸ್ಥ ಜನರಿಗೆ ಕ್ಯಾರಿಯರ್ ಊಟ ತಲುಪಿಸುವ ಕೆಲಸವನ್ನು ಆರಂಭಿಸಿದಳು. ಮೊದಲ ವಾರ ಕೇವಲ ಎಂಟು ಜನರಿಂದ ಆರಂಭವಾದ ಆಕೆಯ ಕ್ಯಾರಿಯರ್ ಊಟದ ಸರ್ವಿಸ್ ಕೆಲವೇ ವಾರಗಳಲ್ಲಿ 40 ರಿಂದ 50 ಜನರಿಗೆ ವಿಸ್ತಾರವಾಯಿತು. ಕೈಯಲ್ಲಿ ಎರಡರಿಂದ ಮೂರು ಆಳುಗಳನ್ನು ಕೆಲಸಕ್ಕೆ ಇಟ್ಟುಕೊಂಡ ಆಕೆ ಇದೀಗ ತುಸು ದೊಡ್ಡ ಪ್ರಮಾಣದಲ್ಲಿ ಮನೆಯ ಹಿಂಭಾಗದಲ್ಲಿ ಶೆಡ್ ಹಾಕಿಸಿ ಅಲ್ಲಿ ರುಚಿ ಹಾಗೂ ಶುಚಿಗೆ ಹೆಸರಾದ ಪುಟ್ಟ ಕ್ಯಾರಿಯರ್ ಸರ್ವಿಸನ್ನು ಆರಂಭಿಸಿದರು.ಪ್ರತಿ ಶನಿವಾರ ಸಾಯಂಕಾಲ ಬರುತ್ತಿದ್ದ ಸುದೀಪ ಸಲಹೆ ಸೂಚನೆಗಳನ್ನು ಹಾಗೂ ಸಹಾಯ ಸಹಕಾರಗಳನ್ನು ನೀಡುತ್ತಿದ್ದ. ತಾನೇ ಲಿಸ್ಟ್ ಮಾಡಿಕೊಂಡು ಆಕೆಯ ಕೇಟರಿಂಗ್ ಕೆಲಸಕ್ಕೆ ಬೇಕಾಗುವ ಪದಾರ್ಥಗಳನ್ನು ತಂದು ಕೊಡುತ್ತಿದ್ದ… ಆದರೆ ಅವರಿಬ್ಬರ ಮಧ್ಯದಲ್ಲಿ ಇದ್ದುದು ದಾಂಪತ್ಯವಲ್ಲ ಕೇವಲ ಸ್ನೇಹ ಭಾವ. ಇದೀಗ ಆತನಲ್ಲಿ ಪತಿಯ ಜವಾಬ್ದಾರಿಯ ಅರಿವು ಮೂಡಿದ್ದು ಜೀವನಪೂರ್ತಿ ಆಕೆಗಾಗಿ ಕಾಯಲು ಆತ ಸಿದ್ದನಿದ್ದ. ಸರಿಸುಮಾರು ಆರು ತಿಂಗಳ ನಂತರ ತನ್ನ ನೌಕರಿಗೆ ವರ್ಗಾವಣೆ ಮಾಡಿಸಿಕೊಂಡು ಆತ ಮೈಸೂರಿಗೆ ಬಂದು ನೆಲೆಸಿದ…. ಈಗಲೂ ಕೂಡ ಆತನಲ್ಲಿ ಈ ಹಿಂದೆ ತಾವು ನಡೆದುಕೊಂಡ ರೀತಿಯ ಕುರಿತು ಪಶ್ಚಾತ್ತಾಪದ ಭಾವವಿದ್ದು, ಇನ್ನು ಮುಂದೆ ಆಕೆಗೆ ನೋವಾಗದಂತೆ ಬದುಕಬೇಕು ಎಂಬ ನಿರ್ಧಾರ ಕೂಡ ಇತ್ತು.ಅದೊಂದು ದಿನ ಆಕೆಯ ಅತ್ತೆ ಮಾವ ಬಂದು ಇಳಿದರು. ಅವರಿಬ್ಬರ ಮುಖದಲ್ಲಿ ಸೋತು ಹೋದ ಭಾವವಿತ್ತು. ಕೊನೆಗೂ ನೀನು ನಿನ್ನ ಹಟ ಸಾಧಿಸಿದೆ ಎಂದು ಅತ್ತೆ ಹೇಳಿದಾಗ ನಸುನಕ್ಕ ಸುಮತಿ ಒಳ್ಳೆಯತನವನ್ನು ಕೈಲಾಗದತನ ಎಂದು ತಿಳಿದುಕೊಳ್ಳುವುದು ತಪ್ಪು ಅತ್ತೆ, ನಾವು ಹಿರಿಯರಿಗೆ ಕೊಡುವ ಗೌರವವನ್ನು ಅವರು ಭಯ, ಹೆದರಿಕೆ ಎಂದು ಭಾವಿಸಬಾರದು. ದಾಂಪತ್ಯದಲ್ಲಿ ಗಂಡ ಹೆಚ್ಚು ಹೆಂಡತಿ ಕಡಿಮೆ ಎಂಬ ಭಾವ ಎಂದಿಗೂ ಬೇಡ… ಅವರಿಬ್ಬರೂ ಪರಸ್ಪರರಿಗೆ ಪೂರಕವಾಗಿ ಬದುಕಬೇಕು. ಒಬ್ಬರು ಕೇವಲ ಪಡೆಯುವ ಹಾಗೂ ಮತ್ತೊಬ್ಬರು ಕೊಟ್ಟು ಬರಿದಾಗುವ ಪ್ರಕ್ರಿಯೆ ದಾಂಪತ್ಯದಲ್ಲಿ ಖಂಡಿತವಾಗಿಯೂ
“ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ”ಸಣ್ಣ ಕಥೆ,ವೀಣಾ ಹೇಮಂತ್ರ ಗೌಡ ಪಾಟೀಲರಿಂದ Read Post »








