ಕಾವ್ಯ ಸಂಗಾತಿ
ಮೂಗಪ್ಪ ಗಾಳೇರ
“ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?”


ಬಿದ್ದ ವೈರಿಗಳನ್ನಷ್ಟೇ ಅಲ್ಲ
ಬದ್ಧ ವೈರಿಗಳಿಗೂ ಬೆಚ್ಚಿ ಬೀಳಿಸಿದ್ದ ಬುದ್ಧ
ಮಾಡಿದ್ದು ರಕ್ತ ಹರಿಸುವ ಯುದ್ಧವನಲ್ಲ
ಪ್ರೀತಿ ತುಂಬಿ ಸ್ನೇಹ ಬೆಳೆಸುವ ಧರ್ಮದ ನಡಿಗೆ
ಬುದ್ಧ ನಡೆದ ಹಾದಿ ಉದ್ದಗಲಕ್ಕೂ ಜನಸಸಾಗರವೋ ಜನಸಾಗರ
ನಿಮ್ಮ ಯುದ್ಧದ ಪಿರಿಂಗಿಗಳು
ಆಕಾಶದೆತ್ತರಕ್ಕೆ ಚಿಮ್ಮುತ್ತ ಬೆಂಕಿಯ ಕೆಂಡವನ್ನು ಉಗುಳುತಿದ್ದರೆ
ಬುಧ್ದನ ಉಪದೇಶಗಳು
ಆ ಬೆಂಕಿಯ ಕೆಂಡದಲ್ಲಿ ಶಾಂತಿಯ ತೋಟವನ್ನು ಸೃಷ್ಟಿಸುತ್ತಿವೆ
ಯುದ್ಧ ಗೆದ್ದಿತು ಎನ್ನುವುದಕ್ಕೆ
ನಿಮ್ಮ ಪಿರಿಂಗಿಯ ಮದ್ದು ಗುಂಡುಗಳು ಹರಿಸಿದ ರಕ್ತದ ಚರಿತ್ರೆಗೆ
ಸಡ್ಡು ಹೊಡೆದು ನಿಂತಿದ್ದು
ಮುಗಿಲೆತ್ತರಕ್ಕೂ ಚಿಮ್ಮಿ ಶಾಂತಿ ಮಳೆ ಸುರಿಸಿದ್ದು
ನನ್ನ ಬುದ್ಧನ ಮೌನ ಮತ್ತು ಅಹಿಂಸೆ
ಅಗೋ ಅಲ್ಲೋಡಿ
ನನ್ನ ಬುದ್ಧನ ಮೌನದ ಮಳೆಗೆ
ನಿಮ್ಮ ಪಿರಂಗಿಯ ಅವಶೇಷಗಳು
ಸುಟ್ಟ ಇಟ್ಟಿಗೆಗಳಾಗಿವೆ
ಹೆದರ ಬೇಡಿ ಅವುಗಳಿಗೆ ಒಂದಿಷ್ಟು
ಬುದ್ಧನ ನಾಲ್ಕು ಆರ್ಯ ಸತ್ಯಗಳನ್ನ ಲೇಪಿಸಿದರೆ
ಮತ್ತೆ ಆಕಾಶದೆತ್ತರಕ್ಕೆ ನಿಮ್ಮ ಪಿರಿಂಗಿಗಳು ಸಿಡಿಯಬಹುದು
ಆಗ ಸಿಡಿಯುವ ಪಿರಿಂಗಿಗಳಿಂದ ಸುರಿಯುವುದು ಬೆಂಕಿ ಉಂಡೆಯಲ್ಲ
ನನ್ನ ಬುದ್ಧನ ಶಾಂತಿ ಮತ್ತು ಅಹಿಂಸೆಯ ಮಳೆ
ಆಗ ಯುದ್ಧದಲ್ಲಿ ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?
ಮೂಗಪ್ಪ ಗಾಳೇರ




ಸುಂದರ ಕಲ್ಪನೆ
ಧನ್ಯವಾದಗಳು ಸರ್
ಪ್ರಸ್ತುತ, ಮತ್ತು ಪ್ರಸಕ್ತ, ಕವಿತೆಯ ತಿರುಳು ಚೆನ್ನಾಗಿದೆ, ಶಾಂತಿ ಬಯಸುವ ಮನಗಳು ಹೆಚ್ಚಾಗಲಿ.