ಕಾವ್ಯ ಸಂಗಾತಿ
ರೇಖಾಪ್ರಕಾಶ್
“ಹೆಣ್ಣಿನ ಅಂತರಂಗ”


ಉಮ್ಮಳಿಸಿ ಬರುವ ದುಃಖಕ್ಕೆ,
ಎದೆಗಪ್ಪಿಕೊಂಡು ಸಾಂತ್ವನ ಹೇಳುವವರಿಲ್ಲ ಇಲ್ಲಿ,
ಅವಕಾಶ ಸಿಕ್ಕಿತೆಂದು ಬಿಗಿದಪ್ಪಲು ಬರುವವರೆ ಎಲ್ಲ
ಮನದ ನೋವಿಗೆ ಮುಲಾಮು ಸವರುವವರಿಲ್ಲ ಇಲ್ಲಿ
ಮದ್ದರೆಯುವ ನೆಪದಲ್ಲಿ
ಮನವ ಕಲಕಿ ರಾಡಿ ಎಬ್ಬಿಸಿದವರೇ ಹೆಚ್ಚು
ಮುರಿದ ಮನಸ್ಸುಗಳ
ಮರು ಜೋಡಿಸುವವರಿಲ್ಲ ಇಲ್ಲಿ
ಜೋಡಿಸುವ ನೆಪದಲ್ಲಿ ಸೂಜಿಯಿಂದ ಚುಚ್ಚಿ ನೋಯಿಸಿದವರೇ ಹೆಚ್ಚು
ನಿಜ! ನಿನ್ನೊಲವಲ್ಲಿ ನಾ ಬಂಧಿಯಾಗಲಿಲ್ಲ
ಉಸಿರುಗಟ್ಟುವಂತೆ ಬಿಗಿದಪ್ಪಿದ ಆ….
ಆಲಿಂಗನವ ಒಲವೆಂದೊಪ್ಪಲಿ ಹೇಗೆ?
ಹೆಣ್ಣಿನ ಅಂತರಾಳವನ್ನರಿಯದವನು
ಆತ್ಮಸಖನೇಗಾಗುವನು?
ಎದೆಯೊಳಗೆ ನಡೆಯುವ
ತುಮುಲಗಳೊಂದಿಗೆ
ಸ್ಪರ್ದಿಸಲಾಗದೆ
ಒಳಗೊಳಗೇ ನೊಂದು, ಬೆಂದು, ಕುದ್ದು, ಆವಿಯಾಗಿ
ಹಿಂಗಿದ ಕಂಬನಿಯ ಗೆರೆಗಳು ಮುಖದಲ್ಲಿ ಮೂಡಿಸಿದ್ದು ಪ್ರೇತಕಳೆ
ಹಾ!…. ಕಣ್ಣಿಂದ ಸುರಿದದ್ದು ಬರೀ ಕಂಬನಿಯಲ್ಲ
ನೋವಿನ, ಅಸಹಾಯಕತೆಯ
ರಕ್ತ ಕಣ್ಣೀರು
ಸ್ವಾರ್ಥವೇ ತುಂಬಿರುವ ಈ ಜಗದೊಳಗೆ
ನಿಸ್ವಾರ್ಥ ಪ್ರೀತಿಯ ನೀರೀಕ್ಷಿಸಿದ
ಮೂರ್ಖಳು ನಾನು
ಮೂರ್ಖರ ದಿನದಂದು ಶುಭಾಶಯ ಕೋರಿಬಿಡಿ ಎನಗೊಂದು.
ರೇಖಾಪ್ರಕಾಶ್




Very nice and meaningful. Thank you Madam
Hard reality with deep approach… Nice
Soul stirring .
ವಾಸ್ತವದ ಪ್ರತಿಬಿಂಬ ಈ ಕವಿತೆ. ಪ್ರೀತಿ ಮತ್ತು ಕಾಳಜಿಯ ಹೆಸರಿನಲ್ಲಿ ನಡೆಯುವ ನಾಟಕಗಳನ್ನು ಸರಿಯಾಗಿಯೇ ಪತ್ತೆಹಚ್ಚಿದ್ದೀರಿ.