ಕಾವ್ಯಸಂಗಾತಿ
ಲಲಿತಾ ಪ್ರಭು ಅಂಗಡಿ ಮುಂಬೈ
“ಎಂದೊಹಾಡಿದ ಭಾವಕೆ”


ಎಂದೊ ಹಾಡಿದ ಭಾವಕೆ
ಇಂದು ತಾಳತೀಡಿ
ಮಧುರ ನೆನಪು ಕಾಡಿದೆ
ಹೃದಯ ತಂತಿ ಮೀಟಿದೆ
ಸ್ವರ ಭಾವನೆಗಳಿಗೆ
ಆಲಾಪ ಹಚ್ಚಿ ಗುನುಗುತಿದೆ
ಕಟ್ಟಿ ಹಾಕಿದ ಬಿಗಿಗಂಟು
ಸಡಿಲಿಸಿ ಸನಿಹ ಬಂದು
ಸರಿಗಮಪದ ಸವಿಜೇನಿಂದ
ಸನಿದಪ ಹೇಳುತಿದೆ
ಭಾವನೆಗಳಿಗೆ ಬಣ್ಣ ಹಚ್ಚಿ ಹಾಡಬಯಸಿದೆ
ರೆಕ್ಕೆ ಬಿಚ್ಚಿ ಹಾರಾಡಬಯಸಿದ
ನೆನಪಿನ ದೋಣಿಯ ಆ ಹಾಡು
ಕಾಡಿ ಕಾಡಿ ಕುಣಿಯುತಿದೆ
ಗೆಜ್ಜೆಯ ಗುಂಗಿಗೆ
ತಾಳ ಹಾಕಿ ತಕದಿಮಿ ಹೇಳುತಿದೆ
ಹಾಡಿ ಆಲಾಡಿ
ತೇಲಾಡಬಯಸಿದೆ
ಕೊಚ್ಚಿ ಹೋಗುವ ಆಸೆಗಳಿಗೆ
ಆಸರೆಯಾಗಿ ಕೈಹಿಡಿದು
ದಿಕ್ಸೂಚಿಯಂತೆ ಬಾಳ ಬಳ್ಳಿ
ಬೆಳಗುವ ಉತ್ಸಾಹಕೆ
ಮತ್ತೆ ಚಿಗುರಿ ಚೈತ್ರಗೀತೆ ಹಾಡಿದೆ
ಒಣಗಿದರೂ ಕೊಸರಿ ಉಸುರಿಸುವ
ಜೀವನೋತ್ಸಹಕೆ ಪಲ್ಲವಿ ಬರೆದು
ಕತೆಯ ಬದುಕಿಗೆ
ಸುಂಗಧ ತೀಡಿ
ಕಾವ್ಯ ಲಹರಿಯಾಗಿ
ಹಾಡಾಗಿ ಒಡಮೂಡಿದೆ.
ಲಲಿತಾ ಪ್ರಭು ಅಂಗಡಿ.



