ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-122 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಅಮ್ಮನ ಅನಾರೋಗ್ಯದ ಬಗ್ಗೆ ದೊಡ್ಡಕ್ಕನಿಗೆ ತಿಳಿಸುವ ಸಮಯ ವಿಷಯ ತಿಳಿದ ನಂತರ ಖಂಡಿತ ತಂಗಿ ಹೀಗೆಲ್ಲಾ ಪ್ರತಿಕ್ರಿಯಿಸಿವಳು ಎಂಬುದು ಮೊದಲೇ ತಿಳಿದಿದ್ದ ಅಕ್ಕನಿಗೆ ದುಃಖ ಉತ್ತರಿಸಿ ಬಂದರೂ, ತಾನು ಕೂಡಾ ಅಳುತ್ತಾ ಕುಳಿತರೆ, ತಂಗಿಯನ್ನು ಸಮಾಧಾನ ಪಡಿಸುವವರು ಯಾರು? ಎಂದು ಯೋಚಿಸುತ್ತಾ, ತಂಗಿಯ ತಲೆಯನ್ನು ನಿಧಾನವಾಗಿ ಸಾಂತ್ವನ ಪಡಿಸುವಂತೆ ನೇವರಿಸಿದಳು. ಅವಳು ಅತ್ತು ಸಮಾಧಾನವಾಗುವರೆಗೂ ಹಾಗೆ ನೇವರಿಸುತ್ತಾ ಏನೂ ಮಾತನಾಡದೇ ಕುಳಿತಿದ್ದಳು. ಅವಳು ಸ್ವಲ್ಪ ಸಮಾಧಾನಗೊಂಡಳು ಎಂದು ಅರಿತ ಮೇಲೆ…. “ನಿನ್ನ ನೋವು, ಸಂಕಟ ಏನೆಂದು ನನಗೆ ಅರ್ಥವಾಗುತ್ತದೆ…. ದಯವಿಟ್ಟು ನಿನ್ನನ್ನು ನೀನು ಸಮಾಧಾನಪಡಿಸಿಕೋ…. ನಾವಿಬ್ಬರೂ ಈಗ ಮಾನಸಿಕವಾಗಿ ಗಟ್ಟಿಯಾಗಬೇಕಿದೆ…. ನಮ್ಮ ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಜೊತೆ ಬೇರೆ ಯಾರೂ ಇಲ್ಲ…. ಅಕ್ಕನಿಗೆ ಅವಳದಾದ ಕುಟುಂಬವಿದೆ…. ಎಲ್ಲಾ ಜವಾಬ್ದಾರಿಯನ್ನು ಅಕ್ಕನಿಗೆ ಹೊರಿಸಲು ಸಾಧ್ಯವಿಲ್ಲ…. ನಮ್ಮಿಬ್ಬರ ಕೈಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಪ್ರಯತ್ನ ಮಾಡೋಣ…. ವೈದ್ಯರು ಹೇಳಿದ್ದರು ಡಯಾಲಿಸಿಸ್ ಚಿಕಿತ್ಸೆ ಕೊಡಿಸಿದರೆ, ಅಮ್ಮ ಇನ್ನೂ ಸ್ವಲ್ಪ ದಿನ ಅಮ್ಮ ಜೀವಂತವಾಗಿರಬಹುದು…. ಅಮ್ಮನ ಎಲ್ಲಾ ನೋವು ಸಂಕಟಗಳು ಸ್ವಲ್ಪ ದಿನದ ಮಟ್ಟಿಗಾದರೂ ಸುಧಾರಿಸಬಹುದು….. ನೋಡೋಣ…ಹೇಗೆ ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳುತ್ತೇನೆ….. ಎಂದಳು. ಅಕ್ಕನ ಮಾತನ್ನು ಕೇಳಿದಾಗ ತಂಗಿಯ ಮುಖವರಳಿತು. ….”ಹಾಗೆಯೇ ಮಾಡುವ ಅಕ್ಕಾ….. ನಮ್ಮಿಂದ ಆಗಿದ್ದನ್ನು ನಾವು ಮಾಡೋಣ…. ನಮಗೆ ಆಶ್ರಯ ಕೊಟ್ಟಿರುವ ಎಸ್ಟೇಟ್ ನವರು ಮೊದಲಿಂದಲೂ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ…. ಅವರು ಖಂಡಿತಾ ನಮಗೆ ಸಹಾಯ ಮಾಡುತ್ತಾರೆ… ಹಾಗಾಗಿ ನಾವು ಮಾಡಬೇಕಾಗಿದ್ದು ಏನು ಎಂಬುದನ್ನು ಕೇಳಿ ತಿಳಿದುಕೋ…. ಎಂದಳು. ಸರಿ ಎನ್ನುವಂತೆ ಅಕ್ಕ ತಯಾರಿಸಿದಳು…. “ಈಗ ಡಾಕ್ಟರ್ ರೌಂಡ್ಸ್ ಮುಗಿಸಿರುತ್ತಾರೆ…. ನಡಿ ವಾರ್ಡಿಗೆ ಹೋಗೋಣ…. ಮೊದಲು ನಿನ್ನ ಕಣ್ಣುಗಳನ್ನು ಒರೆಸಿಕೊ…. ನಮಗೆ ತಿಳಿದಿರುವ ವಿಷಯ ಅಮ್ಮನಿಗೆ ಗೊತ್ತಾಗುವುದು ಬೇಡ….. ಅಮ್ಮ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ… ಆದಷ್ಟೂ ಅಮ್ಮನ ಮುಂದೆ ನಾವು ಖುಷಿಯಿಂದ ಇರುವಂತೆ ನಟಿಸೋಣ…. ಇದಲ್ಲದೇ ನಮಗೆ ಬೇರೆ ದಾರಿ ಇಲ್ಲ….. ಅಮ್ಮನಿಗೆ ಈ ವಿಷಯಗಳು ತಿಳಿದರೆ, ಖಂಡಿತಾ ಪೂರ್ತಿ ಕುಸಿದು ಹೋಗುತ್ತಾಳೆ…. ನಾವೆಲ್ಲರೂ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸಕ್ಕೆ ಸೇರಿ ನಂತರ ನಾವು ಮದುವೆಯಾಗುವುದನ್ನು ನೋಡಬೇಕು…. ಖುಷಿಯಿಂದ ಮೊಮ್ಮಕ್ಕಳನ್ನು ಮುದ್ದಾಡಬೇಕು…. ಅವರೊಂದಿಗೆ ಕಾಲ ಕಳೆಬೇಕು….ಎನ್ನುವ ತನ್ನಾಸೆಯ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾಳೆ…. ಅಮ್ಮನಿಗೆ ಏನೂ ಆಗಿಲ್ಲ… ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ಆಶಯವನ್ನು ಅಮ್ಮನ ಮನಸ್ಸಿನಲ್ಲಿ ತುಂಬೋಣ…. ಯಾವುದೇ ಕಾರಣಕ್ಕೂ ತನ್ನ ಆರೋಗ್ಯ ಸ್ಥಿತಿ ಈ ರೀತಿ ಇದೆ ಎಂದು ತಿಳಿಯುವುದು ಬೇಡ….. ಎಂದು ಅಕ್ಕ ಹೇಳಿದಾಗ ‘ಸರಿ’ ಎನ್ನುವಂತೆ ತಲೆಯಾಡಿಸುತ್ತಾ ದುಪ್ಪಟ್ಟಾದಿಂದ ಕಣ್ಣುಗಳನ್ನು ಮತ್ತು ಮುಖವನ್ನು ಒರೆಸಿ, ಆದಷ್ಟೂ ತಾನು ನಗುನಗುತ್ತಿರುವಂತೆ ಇರುವ ಪ್ರಯತ್ನ ಮಾಡಿದಳು. ತಂಗಿಯನ್ನು ನೋಡಿ ಮುಗುಳ್ನಕ್ಕು ಅವಳ ಹೆಗಲ ಮೇಲೆ ಕೈ ಹಾಕುತ್ತಾ…._ ಬಾ ನಡಿ ಹೋಗೋಣ”…. ಎಂದಳು ಈಗ ನಾನು ಅತ್ತಿರೋದು ಕಾಣೋದಿಲ್ಲವಲ್ಲವೇ? ಎಂಬಂತೆ ಪ್ರಶ್ನಾರ್ಥಕವಾಗಿ ಅಕ್ಕನನ್ನು ನೋಡಿದಳು ತಂಗಿ. ‘ಇಲ್ಲ’ ಎನ್ನುವಂತೆ ತಲೆ ಆಡಿಸಿದಳು, ಇಬ್ಬರೂ ವಾರ್ಡಿಗೆ ತೆರಳಿದಾಗ, ನರ್ಸ್ ತಾಯಿಗೆ ಚುಚ್ಚುಮದ್ದನ್ನು ಚುಚ್ಚುತ್ತಿರುವುದು ಕಂಡಿತು. ಅಮ್ಮ ನೋವಿನಿಂದ ಮುಖ ಹಿಂಡಿದ್ದು ಕಂಡಾಗ, ಇಬ್ಬರ ಎದೆಯಲ್ಲೂ ಏನೋ ಹರಿತವಾದದ್ದು ಚುಚ್ಚಿದ ಅನುಭವವಾಯಿತು. ಆದರೂ ತೋರಗೊಡದೆ…. “ಅಮ್ಮಾ ….ಡಾಕ್ಟರ್ ಏನು ಹೇಳಿದರು?… ಎಂದು ಇಬ್ಬರೂ ಕೇಳಿದಾಗ…. “ಏನೂ ತೊಂದರೆ ಇಲ್ಲ….ಇನ್ನೂ ಕೆಲವು ದಿನಗಳು ನಾನು ಇಲ್ಲಿಯೇ ಇರಬೇಕೆಂದು ಹೇಳಿದ್ದಾರೆ”… ಎಂದು ಹೇಳುತ್ತಾ ಸುಮತಿ ಇಬ್ಬರೂ ಮಕ್ಕಳ ಮುಖವನ್ನು ನೋಡಿದಳು. ಮಕ್ಕಳಿಬ್ಬರ ಕಣ್ಣುಗಳು ಅತ್ತು ಊದಿಕೊಂಡಿರುವಂತೆ ಅವಳಿಗೆ ಅನಿಸಿತು….. “ಏನಾಯ್ತು ಮಕ್ಕಳೇ?…. ನಿಮ್ಮಿಬ್ಬರ ಕಣ್ಣುಗಳು ಏಕೆ ಊದಿಕೊಂಡಿವೆ?…. ಎಂದು ಕೇಳಿದಾಗ,….”ಇಲ್ಲಮ್ಮಾ…. ಹಾಗೇನೂ ಇಲ್ಲ…. ನಿನಗೆ ಹಾಗೆ ಅನಿಸಿದೆಯಷ್ಟೇ”….. ಎಂದು ತಂಗಿ ಹೇಳಿದಾಗ, …. “ನೀನು ಯಾವಾಗ ಸುಳ್ಳು ಹೇಳುವುದನ್ನು ಕಲಿತುಕೊಂಡೆ?…. ನಿಜ ಹೇಳಿ….ಅದೇನಿದ್ದರೂ ನನಗೆ ತಿಳಿಸಿ” …. ಎಂದಳು ತುಸುಕೋಪದಿಂದ. …”ಏನಿಲ್ಲಮ್ಮಾ…. ಅವಳು ಸುಳ್ಳು ಹೇಳಿಲ್ಲ…. ನಮಗೇನೂ ಆಗಿಲ್ಲ…. ನಿನಗೆ ಹಾಗೆ ಅನಿಸುತ್ತಿದೆ ಅಷ್ಟೇ….. ನಾವು ಹೊರಗೆ ಕುಳಿತಿದ್ದಾಗ ಗಾಳಿಯಲ್ಲಿ ಏನೋ ಕಸ ಬಂದು ತಂಗಿಯ ಕಣ್ಣಿಗೆ ಬಿತ್ತು…. ಅವಳು ಹಣ್ಣುಗಳನ್ನು ಉಜ್ಜಿಕೊಂಡಳು…. ಹಾಗಾಗಿ ಅವಳ ಕಣ್ಣುಗಳು ಹಾಗಿವೆ”…. ಎಂದಳು….. “ಹಾಗಾದರೆ ನಿನ್ನ ಕಣ್ಣು?”…. ತುಸು ಏರು ಧ್ವನಿಯಲ್ಲಿ ಸುಮತಿ ಪ್ರಶ್ನಿಸಿದಾಗ…. “ನಾನು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲಮ್ಮಾ…. ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ರಾತ್ರಿ ಹೆಚ್ಚು ಸಮಯ ಓದುತ್ತಾ ಕುಳಿತಿದ್ದೆ… ಹಾಗಾಗಿ ನನ್ನ ಕಣ್ಣುಗಳು ಊದಿಕೊಂಡಿವೆ…. ಸುಮ್ಮನೆ ಏನೇನೋ ಆಲೋಚಿಸಿ ತಲೆಕೆಡಿಸಿಕೊಳ್ಳಬೇಡ”… ಎಂದಳು ತಂಗಿಯನ್ನು ನೋಡುತ್ತಾ. ತಂಗಿ ‘ಹೌದು’ ಎನ್ನುವಂತೆ ತಲೆ ಆಡಿಸಿದಳು. ಇಬ್ಬರೂ ಮಕ್ಕಳು ಕೊಟ್ಟ ಉತ್ತರ ಯಾಕೋ ಸರಿ ಇಲ್ಲ ಎಂದು ಸುಮತಿಗೆ ಅನಿಸಿತು. ಆದರೆ ಇನ್ನೂ ವಾದ ಮಾಡುವುದು ಬೇಡ ಎಂದು ಸುಮ್ಮನಾದಳು. ತಂಗಿ ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಮತ್ತು ಅಕ್ಕನ ಜೊತೆ ಕಾಲ ಕಳೆದಳು. ಇದರ ನಡುವೆ…. “ಅಕ್ಕಾ ….ದೊಡ್ಡಕ್ಕನಿಗೆ ಅಮ್ಮನ ಅನಾರೋಗ್ಯದ ವಿಷಯ ತಿಳಿಸಿದ್ದೀಯಾ? ಎಂದು ಕೇಳಿದಳು….. “ಇಲ್ಲ ಕಣೇ…. ಹೇಳಬೇಕು…. ಒಂದು ಕೆಲಸ ಮಾಡುತ್ತೀಯಾ? ನಾವು ಇಲ್ಲಿ ಯಾವುದಾದರೂ ಹೋಟೆಲ್ನಲ್ಲಿ ಊಟ ಮಾಡಿಕೊಳ್ಳೋಣ…. ಅಮ್ಮನಿಗೆ ಆಸ್ಪತ್ರೆಯಿಂದ ಊಟ ಸಿಗುತ್ತದೆ…. ಅಮ್ಮನಿಗೆ ಊಟ ಕೊಟ್ಟು, ನಂತರ ಹೊರಗೆ ಹೋಗಿ ನಾವು ಊಟ ಮಾಡೋಣ…. ನಂತರ ನೀನು ಅಕ್ಕನ ಮನೆಗೆ ಹೋಗಿ, ಅಮ್ಮ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂಬುದನ್ನು ತಿಳಿಸು… ಎಂದಳು. ತಂಗಿ ಸರಿ ಎನ್ನುವಂತೆ ತಲೆಯಾಡಿಸಿದಳು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-121 ಒಬ್ಬ ಅಮ್ಮನ ಕಥೆ ರುಕ್ಮಿಣಿನಾಯರ್ ಅಮ್ಮನ ಆರೋಗ್ಯದ ಸತ್ಯ ಅರಿತತಂಗಿಯ ಗೋಳಾಟ ಸ್ವಲ್ಪ ಹೊತ್ತು ಇಬ್ಬರೂ ಅಮ್ಮನ ಜೊತೆ ಮಾತನಾಡುತ್ತಾ ಕಾಲ ಕಳೆದರು. ಡಾಕ್ಟರ್ ರೌಂಡ್ಸ್ ಗೆ ಬರುವ ಹೊತ್ತಾಯ್ತು ಎಂದು ವಾರ್ಡಿನ ಆಯಾ ಕೂಗಿ ಹೇಳಿದಾಗ ಅಕ್ಕ-ತಂಗಿ ಇಬ್ಬರೂ ಹೊರಗೆ ನಡೆದರು. ಆಸ್ಪತ್ರೆಯ ಹೊರಾಂಗಣದಲ್ಲಿ ಮೆಟ್ಟಿಲ ಮೇಲೆ ಕುಳಿತು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಕ್ಕ ಇಷ್ಟೊಂದು ಮೌನವಾಗಿರುವುದನ್ನು ನೋಡಿ ಅಮ್ಮನ ಆರೋಗ್ಯದಲ್ಲಿ ಏನೋ ದೊಡ್ಡ ಸಮಸ್ಯೆ ಇರಬಹುದು ಎಂದು ತಂಗಿ ಊಹಿಸಿದಳು. ಆದರೂ ಅಕ್ಕ ಹೇಳುವವರೆಗೂ ಕಾಯ್ದಳು. ಸ್ವಲ್ಪ ಹೊತ್ತಿನ ನಂತರ ಅಕ್ಕನೇ ಮೌನ ಮರಿದಳು…. “ನಿನಗೆ ಗೊತ್ತು ತಾನೆ ಅಮ್ಮನಿಗೆ ಡಯಾಬಿಟಿಸ್ ಇರುವುದು…. ಅದಕ್ಕಾಗಿ ಅಮ್ಮ ನಿರಂತರವಾಗಿ ಇನ್ಸುಲಿನ್ ತೆಗೆದುಕೊಳ್ಳುತ್ತಿರುವುದು….. ಹಾಗೂ ಮೂರು ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಬರುವುದು….ಆದರೆ….. ಅದರ ಜೊತೆಗೆ ಅದ್ಯಾವಾಗ ಬಿ.ಪಿ ಬಂದು ಅಮ್ಮನ ಒಡಲನ್ನು ಸೇರಿತು ಎಂಬುದು ಅಮ್ಮನಿಗೂ ನಮಗೂ ತಿಳಿಯಲಿಲ್ಲ”…. ಎಂದು ಅಲ್ಲಿಗೆ ನಿಲ್ಲಿಸಿ, ತಂಗಿಯ ಮುಖವನ್ನು ಒಮ್ಮೆ ದಿಟ್ಟಿಸಿದಳು. ಅಚ್ಚರಿಯಿಂದ ತಂಗಿ ಅಕ್ಕನ ಮುಖವನ್ನು ನೋಡಿದಳು. ಆಗ ಅಕ್ಕ ‘ಹೌದು’ ಎನ್ನುವಂತೆ ತಲೆ ಆಡಿಸಿದಳು…. “ಮಧುಮೇಹ ಮತ್ತು ರಕ್ತದೊತ್ತಡ ಎರಡೂ ಅಣ್ಣತಮ್ಮಂದಿರು ಇದ್ದಂತೆ ಎಂದು ವೈದ್ಯರು ಹೇಳಿದರು….. ಒಂದು ಬಂದ ನಂತರ ನಿಧಾನವಾಗಿ ಮತ್ತೊಂದು ಜೊತೆಗೂಡುತ್ತದೆ ಎಂದು ಕೂಡ ಹೇಳಿದರು…. ಈಗ ನಮ್ಮ ತಾಯಿಗೆ ಇರುವ ಆರೋಗ್ಯ ಸಮಸ್ಯೆ ಗಂಭೀರವಾದದ್ದು…..  ಮಧುಮೇಹ ಹಾಗೂ ರಕ್ತದೊತ್ತಡದಿಂದಾಗಿ ನಮ್ಮ ತಾಯಿಯ ಶರೀರದ ಒಳಗಿರುವ ಅಂಗಾಂಗಗಳು, ಎಂದರೆ ಹೃದಯ, ಯಕೃತ್ತು ಮೂತ್ರಪಿಂಡಗಳು ಎಲ್ಲವೂ ಊದಿಕೊಂಡಿವೆ…. ಅವು ಸರಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ… ಹಾಗಾಗಿ ರಕ್ತ ಶುದ್ಧಿ ಆಗುತ್ತಿಲ್ಲ…. ಎಂದು ವೈದ್ಯರು ತಿಳಿಸಿದ್ದಾರೆ…. ಎಂದಳು.  ಅಕ್ಕ ಹೇಳಿದ ಸಂಗತಿಯನ್ನು ಕೇಳುತ್ತಾ ತಂಗಿಯ ಮುಖ ಬಾಡಿತು…. ಅಕ್ಕಾ ಇದಕ್ಕೆ ಔಷಧೋಪಚಾರಗಳು ಇಲ್ಲವೇ?….ಎಂದು ತಂಗಿ ಕೇಳಿದಾಗ…. ಇಲ್ಲಾ… ಕಣೇ…. ಎಂದವಳ ಧ್ವನಿ ಭಾರವಾಗಿತ್ತು…… ಯಾಕಕ್ಕಾ?…..ಅದು ಹೇಗೆ? ….ಎಂದು ಕೇಳಿದಾಗ…. ಶರೀರದ ಒಳ ಅಂಗಗಳು ವೈಫಲ್ಯವಾದರೆ ಯಾವ ಔಷಧಿಗಳೂ ಪರಿಣಾಮ ಬೀರುವುದಿಲ್ಲ… ತಾತ್ಕಾಲಿಕ ಉಪಶಮನಗಳು ದೊರೆಯುತ್ತವೆ ಅಷ್ಟೇ…. ಆದರೆ ಪೂರ್ಣವಾಗಿ ಗುಣಮುಖವಾಗುವುದಿಲ್ಲ…. ಹಾಗಾಗಿ ವೈದ್ಯರು ಹೇಳಿದರು,”…. ಎಂದು ತನ್ನ ಮಾತನ್ನು ಮುಂದುವರೆಸದೆ ಅರ್ಧಕ್ಕೇ ನಿಲ್ಲಿಸಿ, ತಂಗಿಯ ಮುಖವನ್ನೇ ತದೇಕ ಚಿತ್ತದಿಂದ ನೋಡಿದಳು.‌ ಮುಂದೆ ಮಾತು ಬಾರದೇ ಗಂಟಲು ಕಟ್ಟಿತು. ಕಣ್ಣುಗಳಲ್ಲಿ ಧುತ್ತನೇ ನೀರು ತುಂಬಿಕೊಂಡವು. ತಂಗಿಗೆ ಹೇಗೆ ಹೇಳಲಿ ಇರುವ ಸತ್ಯವನ್ನು? ಅವಳು ಖಂಡಿತಾ ಸಹಿಸಲಾರಳು. ದೇವರೇ ನನಗೊಂದಿಷ್ಟು ಶಕ್ತಿ ಕೊಡು. ನನ್ನಲ್ಲಿರುವ ಶಕ್ತಿ ಉಡುಗಿ ಹೋಗುತ್ತಿದೆ. ಇಂತಹಾ ಘೋರ ಸತ್ಯವನ್ನು ನಾನವಳಿಗೆ ಹೇಗೆ ಹೇಳಲಿ? ಎಂದು ಚಿಂತಾಕ್ರಾಂತಳಾಗಿ ಒಂದು ಕ್ಷಣ ಕಣ್ಣು ಮುಚ್ಚಿದಳು. ಕಣ್ಣುಗಳಲ್ಲಿ ತುಂಬಿದ್ದ ನೀರು ಕೆನ್ನೆಯ ಮೇಲೆ ಇಳಿಯಿತು.  ತಂಗಿಯು ಕುಳಿತಲ್ಲಿಂದ ನಿಧಾನವಾಗಿ ಎದ್ದು ಬಂದು ಅಕ್ಕನ ಕೆನ್ನೆಯ ಮೇಲೆ ಹರಿದ ಕಣ್ಣೀರನ್ನು ಒರಸಿ, ಅಕ್ಕನ ಮುಖವನ್ನು ಬೊಗಸೆಯಲ್ಲಿ ಹಿಡಿದು…”ಅಕ್ಕಾ ….ಏನಾಯ್ತು ಹೇಳು…. ಕಷ್ಟ ಸುಖ, ನೋವು ನಲಿವು, ಏನೇ ಇರಲಿ ನಾವು ಪರಸ್ಪರ ಹೇಳಿಕೊಂಡು ಮನಸ್ಸನ್ನು ಹಗುರಾಗಿಸಿಕೊಂಡಿದ್ದೇವೆ….. ಒಬ್ಬರಿಗೊಬ್ಬರು ಸದಾ ಜೊತೆಯಲ್ಲಿ ಇದ್ದೇವೆ…. ನೀನು ಇರುವ ಸ್ಥಿತಿಯನ್ನು ಕಂಡು ಪರಿಸ್ಥಿತಿಯ ಗಂಭೀರತೆ ನನಗೂ ಅರ್ಥವಾಗುತ್ತಿದೆ…. ನೀನು ಹೀಗೆ ಮಾತನಾಡದೆ ದುಃಖಿಸುತ್ತಿದ್ದರೆ ನನ್ನ ಮನ ಇನ್ನೂ ವ್ಯಾಕುಲಗೊಳ್ಳುತ್ತದೆ…. ಪರಿಸ್ಥಿತಿ ಏನೇ ಇರಲಿ ಅದನ್ನು ನಾವು ಎದುರಿಸಲೇಬೇಕು…. ದಯವಿಟ್ಟು ಏನಾಯ್ತು ಎಂದು ಹೇಳು ಅಕ್ಕಾ”…. ಎಂದು ತಂಗಿ ಹೇಳಿದಾಗ ಅವಳ ದುಃಖವು ಇನ್ನೂ ಹೆಚ್ಚಾಯಿತು. ತಂಗಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಪಕ್ಕ ಕುಳಿತುಕೊಳ್ಳುವಂತೆ ಸನ್ನೆ ಮಾಡಿ…. “ನೀನು ಈಗ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ…. ವೈದ್ಯರು ಹೇಳಿದಾಗ ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನುಭವವಾಯಿತು… ಈಗ ನಿನಗೆ ಇಂತಹ ಸಂಕಟದ ವಿಷಯವನ್ನು ಹೇಗೆ ಹೇಳಲಿ ಎಂಬುದೇ ನನ್ನ ಯೋಚನೆಯಾಗಿದೆ…. ಆದರೂ ಹೇಳದೇ ಬೇರೆ ದಾರಿ ಇಲ್ಲ”…. ಎಂದಾಗ ತಂಗಿ…._ಅದೇನೇ ಇರಲಿ ಹೇಳು” …ಎಂದಳು….. _ವೈದ್ಯರು ಹೇಳಿದರು…. ನಮ್ಮ ತಾಯಿ ಇನ್ನು ಕೇವಲ ಆರು ತಿಂಗಳಷ್ಟೇ…. ನಮ್ಮೊಂದಿಗೆ ಇರುತ್ತಾರೆ”… ಎಂದಳು.‌ ಅಕ್ಕ ಹೇಳಿದ ಮಾತು ತಂಗಿಗೆ ಸರಿಯಾಗಿ ಅರ್ಥವಾಗಲಿಲ್ಲ…. _ಬಿಡಿಸಿ ಹೇಳಕ್ಕ…. ನನಗೆ ಏನೂ ಅರ್ಥವಾಗುತ್ತಿಲ್ಲ….”ಎಂದಳು. ….”ಅಂದರೆ…. ನಮ್ಮ ತಾಯಿ ಜೀವಂತವಾಗಿರುವುದು ಇನ್ನು ಕೇವಲ ಆರು ತಿಂಗಳು ಮಾತ್ರ….. ಈ ಮಾತನ್ನು ಕೇಳಿದ ತಂಗಿ ಗರಬಡಿದಂತೆ ಅಲುಗಾಡದೆ ಹಾಗೆ ಕುಳಿತುಬಿಟ್ಟಳು. ತನ್ನ ಕಿವಿಗಳನ್ನು ತಾನೆ ನಂಬದಾದಳು. ತಾನು ಕೇಳುತ್ತಿರುವುದು ಏನು? ಅಕ್ಕ ಇದೇನು ಹೇಳುತ್ತಿದ್ದಾಳೆ? ಇದು ನಿಜವಲ್ಲ ಎಂದುಕೊಳ್ಳುತ್ತಾ, ಅಕ್ಕನ ಎರಡೂ ಭುಜಗಳನ್ನು ಹಿಡಿದು ಬಲವಾಗಿ ಅಲುಗಾಡಿಸುತ್ತಾ… “ನೀನು ಏನು ಹೇಳುತ್ತಿರುವೆ? ಸುಮ್ಮನೆ ಏನೇನೋ ಹೇಳಬೇಡ….. ಅಮ್ಮನಿಗೆ ಏನೂ ಆಗಿಲ್ಲ…. ಈಗ ನೋಡು ಸ್ವಲ್ಪ ಹೊತ್ತಿಗೆ ಮುಂಚೆ ನಮ್ಮ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದಳು…. ಏನೋ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಅಷ್ಟೇ…. ವೈದ್ಯರು ಹಾಗೆ ಹೇಳಿರಲಿಕ್ಕಿಲ್ಲ…. ಬಹುಶಃ ನೀನು ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಅನಿಸುತ್ತದೆ…. ಇಷ್ಟು ಬೇಗ ನಮ್ಮನ್ನಗಲಿ ಅಮ್ಮ ಎಲ್ಲಿಗೂ ಹೋಗುವುದಿಲ್ಲ….. ನಿನ್ನ ವಿದ್ಯಾಭ್ಯಾಸ ಮುಗಿದು ನೀನು ಕೆಲಸಕ್ಕೆ ಸೇರಿಕೊಳ್ಳುವುದನ್ನು …. ನಾವೆಲ್ಲರೂ ಸಂತೋಷದಿಂದ ಕಳೆಯುವ ಕಾಲವನ್ನು ಅಮ್ಮ ನೋಡಬೇಕಿದೆ….. ತಂಗಿ ನವೋದಯ ವಿದ್ಯಾಲಯದಿಂದ ಈ ವರ್ಷ 10ನೇ ತರಗತಿ ಮುಗಿಸಿ, ಅವಳು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸುವುದನ್ನು ಅಮ್ಮ ನೋಡಬೇಕಿದೆ…. ದೇವರು ಅಷ್ಟು ನಿಷ್ಕರುಣಿಯಲ್ಲ…. ವೈದ್ಯರನ್ನು ಭೇಟಿಯಾಗಿ ಮತ್ತೊಮ್ಮೆ ಕೇಳು….. ಅಮ್ಮನ ಆರೋಗ್ಯ ಸುಧಾರಿಸಲು ಏನಾದರೂ ಔಷಧೋಪಚಾರ ಇರಬಹುದೇ?….ಸ್ವಲ್ಪಕಾಲವಾದರೂ ಅಮ್ಮ ನಮ್ಮೊಟ್ಟಿಗೆ ಬದುಕಿರಲು ಅವಕಾಶವಿದೆಯೇ ಎಂದು…. ಅಕ್ಕಾ ದಯವಿಟ್ಟು ವೈದ್ಯರನ್ನು ಮತ್ತೊಮ್ಮೆ ಭೇಟಿ ಮಾಡಿ ಕೇಳು ಎಂದು ಬೆಕ್ಕಿ ಬಿಕ್ಕಿ ಅಳುತ್ತಾ ದಂಬಾಲು ಬಿದ್ದಳು. ರುಕ್ಮಿಣಿ ನಾಯರ್

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅಕ್ಕ ತಂಗಿಯರ ಪರಸ್ಪರ ಸಾಂತ್ವಾನದ ಕ್ಷಣಗಳು ಸುಮತಿಯ ಅನುಪಸ್ಥಿತಿಯಲ್ಲಿ ಮೂರನೇ ಮಗಳು ತಾಯಿಯ ಬದಲು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಾಲೆ ಹೋಗುತ್ತಿದ್ದಳು. ತೋಟದ ಶಾಲೆಯ ಮಕ್ಕಳಿಗೆ ಯಾರಾದರೂ ಹೋಗಿ ಅಕ್ಷರಾಭ್ಯಾಸ ಮಾಡಿಸಲೇ ಬೇಕಾದ ಅನಿವಾರ್ಯತೆ ಇತ್ತು. ಒಂದು ದಿನ ಶಾಲೆಗೆ ರಜೆಯಾದರೂ ಕೂಡಾ ಮರುದಿನ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಮಕ್ಕಳು ಶಾಲೆಗೆ ಬರದೇ ಹೋದರೆ ತಿಂಗಳ ಸಂಬಳ ಎಲ್ಲಿ ತಪ್ಪಿ ಹೋಗುವುದೋ ಎನ್ನುವ ಭಯ. ಸಂಬಳದಿಂದ ಬರುವ ಹಣದಲ್ಲಿ ತಿಂಗಳು ಪೂರ್ತಿ ಸುಮತಿಯ ಕುಟುಂಬ ಕಳೆಯಬೇಕಿತ್ತು. ಎರಡನೇ ಮಗಳು ಕೆಲಸ ಮಾಡುತ್ತಿದ್ದರೂ ಅವಳಿಗೆ ಬರುವ ಸಂಬಳವೂ ಕಡಿಮೆ ಇತ್ತು. ಈಗ ಸುಮತಿ ಆಸ್ಪತ್ರೆಯಲ್ಲಿ ಇರುವುದರಿಂದ ಖರ್ಚುಗಳು ಸ್ವಲ್ಪ ಹೆಚ್ಚಿತ್ತು. ಸರಕಾರಿ ಆಸ್ಪತ್ರೆ ಆದ್ದರಿಂದ ಅಲ್ಲಿ ವಾರ್ಡ್ ಗೆ ಹಣ ಕಟ್ಟುವ ಅಗತ್ಯ ಇರಲಿಲ್ಲ. ಮಾತ್ರೆ ಔಷಧಿಗಳು ಅಲ್ಲಿಯೇ ಸಿಗುತ್ತಿದ್ದವು. ಹೊರಗಿನಿಂದ ತರಬೇಕೆಂದಿದ್ದರೆ ಎಷ್ಟೇಟಿನ ಲೆಕ್ಕದಲ್ಲಿ ಮೆಡಿಕಲ್ ಸ್ಟೋರ್ ನಿಂದ ಖರೀದಿಸಬಹುದಿತ್ತು. ಆದರೆ ಇನ್ನುಳಿದ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಗುರುವಾರ ಶಾಲೆಗೆ ರಜೆ ಇದ್ದ ಕಾರಣ ಮೂರನೇ ಮಗಳು ಸುಮತಿಯನ್ನು ನೋಡಲು ಆಸ್ಪತ್ರೆಗೆ ಬಂದಳು. ಇನ್ನೂ ಹದಿನಾರರ ಹರೆಯದ ಹುಡುಗಿ ತೋಟದ ನಿರ್ಜನವಾದ ದಾರಿಯಲ್ಲಿ ಒಬ್ಬಳೇ ಶಾಲೆಗೆ ಹೋಗಿ ಬರಬೇಕಿತ್ತು. ಸುಮತಿ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ಮನೆಯಲ್ಲಿಯೂ ಕೂಡ ಅವಳೊಬ್ಬಳೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮತಿಯ ಮಕ್ಕಳು ಧೈರ್ಯವಂತರು. ಅನಿವಾರ್ಯತೆಗಳಲ್ಲಿ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಲು ಶಕ್ತರಾಗಿದ್ದರು. ಜೀವನದಲ್ಲಿ ಅವರು ಅನುಭವಿಸಿದ ಕಷ್ಟಗಳು ಆವರಿಗೆ ವಿಧಿ ಒಡ್ಡಿರುವ ಸವಾಲುಗಳನ್ನು ಎದುರಿಸಿ ಬದುಕುವ ಪಾಠ ಕಲಿಸಿತ್ತು. ಆದರೂ ಭಯ, ಆತಂಕ, ಒಂಟಿತನ ಇವೆಲ್ಲವೂ ಕಾಡುತ್ತಿದ್ದರೂ ಆ ಹುಡುಗಿ ಧೈರ್ಯವಾಗಿ ಶಾಲೆಗೆ ಹೋಗಿ ಬಂದು ತಾಯಿಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಳು. ಇದೀಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ತಾಯಿಯನ್ನು ಕಂಡು ಅವಳ ಮನಸ್ಸು ವಿಹ್ವಲಗೊಂಡಿತು. ಕಾಲೇಜಿನಿಂದ ಆಸ್ಪತ್ರೆಗೆ ಬಂದಾಗ, ತನ್ನ ತಂಗಿ ತಾಯಿಯನ್ನು ನೋಡಲು ಬಂದಿರುವುದು ಅಕ್ಕನಿಗೆ ತಿಳಿದು ಸಂತೋಷದ ಜೊತೆಗೆ ದುಃಖವೂ ಆಯಿತು. ವೈದ್ಯರು ತಾಯಿಯ ಬಗ್ಗೆ ತಿಳಿಸಿರುವ ಸಂಗತಿಯನ್ನು ತಂಗಿಗೆ ಹೇಳಲೇ ಬೇಕಿತ್ತು. ಇವಳಿಗೆ ಅವಳು, ಅವಳಿಗೆ ಇವಳು ಸದಾ ಸಾಂತ್ವನ ನೀಡಿ, ಪರಸ್ಪರರನ್ನು ಕಾಳಜಿವಹಿಸುತ್ತಿದ್ದರು. ಇಬ್ಬರೂ ಅಕ್ಕತಂಗಿಯರಂತಿರದೇ ಆತ್ಮೀಯ ಗೆಳತಿಯರಂತೆ ಅನ್ಯೋನ್ಯವಾಗಿದ್ದರು. ಹಾಗಾಗಿ ಏನೇ ಇದ್ದರೂ ಮುಚ್ಚು ಮರೆ ಇಲ್ಲದೇ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೂ ಇಂತಹಾ ಖೇದಕರ ಸಂಗತಿಯನ್ನು ತಿಳಿಸಲು ಅಕ್ಕನಿಗೆ ಕಷ್ಟವಾಯಿತು…… ಇನ್ನು ನಮ್ಮ ತಾಯಿ ಬದುಕಿರುವುದು ಕೇವಲ ಆರು ತಿಂಗಳ ಮಾತ್ರ…. ಅಮ್ಮ ತುಂಬಾ ಗಂಭೀರ ಸ್ಥಿತಿಯಲ್ಲಿರುವಳು…. ಒಂದೊಂದು ದಿನ ಕಳೆಯುತ್ತಿದ್ದಂತೆ ಅವಳು ನಮ್ಮಿಂದ ದೂರವಾಗುತ್ತಿದ್ದಾಳೆ… ಎನ್ನುವ ಸತ್ಯವನ್ನು ನಾನು ಹೇಗೆ ತಂಗಿಗೆ ಹೇಳಲಿ? ಎಂಬ ಆಲೋಚನೆಯಲ್ಲಿ ಇದ್ದಳು. ಸುಮತಿಯ ಮೂರನೇ ಮಗಳು ತನ್ನ ತಾಯಿ ಮತ್ತು ಅಕ್ಕನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಳು. ತಾಯಿಯ ಮುಖದಲ್ಲಿ ಭರವಸೆಯ ಛಾಯೆ ಇದ್ದರೆ, ಅಕ್ಕನ ಮುಖದಲ್ಲಿ ನಿರಾಶೆಯ ಛಾಯೆ ಮನೆ ಮಾಡಿತ್ತು. ಸದಾ ಹಸನ್ಮುಖಿಯಾದ ಅಕ್ಕ ಗಂಭೀರವಾದ ವಿಚಾರವಿಲ್ಲದೆ ಹೀಗೆ ಚಿಂತಾಕ್ರಾಂತಳಾಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ತಂಗಿಗೆ ತಿಳಿದಿತ್ತು. ಆದರೂ ತಾಯಿಯ ಎದುರು ಏನನ್ನೂ ಕೇಳುವುದು ಸೂಕ್ತವಲ್ಲ ಎಂದುಕೊಂಡು…. “ಅಮ್ಮಾ ….ಈಗ ಹೇಗಿದ್ದೀಯಾ?….ಮೊನ್ನೆ ನೀನು ಮನೆಯಿಂದ ಹೊರಟಾಗ ತುಂಬಾ ದಣಿದಿದ್ದೆ…. ಈಗ ನಿನ್ನ ಆಯಾಸ ಕಡಿಮೆಯಾಯಿತೇ? ಮನೆಯಲ್ಲಿ ನೀನು ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದೆ…. ಈಗ ಹೇಗಿದೆ?…. ಊಟ ಸೇರುತಿದೆಯೇ?…. ಎಂದು ತಾಯಿಯನ್ನು ಕೇಳಿದಳು. ಅದಕ್ಕೆ ಸುಮತಿ ಈಗ ಸ್ವಲ್ಪ ಪರವಾಗಿಲ್ಲ ಮಗಳೇ….. ವೈದ್ಯರ ಮೇಲ್ನೋಟದಲ್ಲಿ, ದಾದಿಯರ ಶುಶ್ರೂಷೆಯಲ್ಲಿ ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ…. ಜೊತೆಗೆ ನಿಮ್ಮಿಬ್ಬರ ಪ್ರೀತಿ ಮತ್ತು ಕಾಳಜಿ ನನಗೆ ಔಷಧವಲ್ಲವೇ? ….. ಅದಿರಲಿ ನೀನು ಹೇಗಿದ್ದೀಯಾ?….. ನಿನ್ನನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಅನಿವಾರ್ಯ ಪರಿಸ್ಥಿತಿ ಬಂತು…. ನನಗೆ ತಿಳಿದಿರಲಿಲ್ಲ ಹೀಗೆ ಕೂಡಲೇ ನನ್ನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡುತ್ತಾರೆ ಎಂಬುದು…. ವೈದ್ಯರು ಪರಿಶೀಲನೆ ನಡೆಸಿ ಮನೆಗೆ ಕಳುಹಿಸುತ್ತಾರೆ ಎಂದು ತಿಳಿದಿದ್ದೆ…. ಇಲ್ಲಿಗೆ ಬಂದ ಕೂಡಲೇ ನನ್ನನ್ನು ವೈದ್ಯರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ, ಇಲ್ಲಿ ದಾಖಲಾಗುವಂತೆ ತಿಳಿಸಿದರು…. ನಿನ್ನ ಅಕ್ಕ ಕೂಡ ಕೂಡಲೇ ನನ್ನನ್ನು ಇಲ್ಲಿಗೆ ದಾಖಲಿಸಿದಳು”….. ಎಂದಾಗ,…. “….ಅಮ್ಮಾ ….ಅಕ್ಕ ಆ ದಿನವೇ ನನಗೆ ಈ ಎಲ್ಲಾ ವಿಷಯವನ್ನು ತಿಳಿಸಿದ್ದಾಳೆ…. ನೀನು ಹೆಚ್ಚು ಯೋಚಿಸಿ ಆಯಾಸ ಪಡಬೇಡ…. ನಾನು ಅಲ್ಲಿ ಚೆನ್ನಾಗಿದ್ದೇನೆ…. ಅಲ್ಲಿ ಸುತ್ತಲೂ ನಮಗೆ ಪರಿಚಿತರಲ್ಲವೇ ಇರುವುದು? ಹಾಗಾಗಿ ಯಾವುದೇ ತೊಂದರೆ ಇಲ್ಲ…. ದಿನವೂ ನಾನು ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಬರುತ್ತಿದ್ದೇನೆ…. ನೀನು ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಡ…. ನಿನ್ನ ಜೊತೆ ಸದಾ ನಾನು ಮತ್ತು ಅಕ್ಕ ಇದ್ದೇವೆ…. ಎಂದಳು. ಮಗಳ ಮಾತನ್ನು ಕೇಳಿದ ಸುಮತಿ ಎದ್ದು ಕುಳಿತು, ಇಬ್ಬರನ್ನೂ ತನ್ನ ಅಕ್ಕಪಕ್ಕದಲ್ಲಿ ಬಂದು ಕುಳಿತುಕೊಳ್ಳುವಂತೆ ಸೂಚಿಸಿದಳು.ತಾಯಿಯ ಅಣತಿಯಂತೆ ಇಬ್ಬರೂ ಅಕ್ಕಪಕ್ಕ ಬಂದು ಕುಳಿತರು. ಸುಮತಿ ಮಕ್ಕಳಿರಿಬ್ಬರನ್ನೂ ತೋಳಿಂದ ಬಳಸಿ …. ಮಕ್ಕಳೇ ಈ ಅಮ್ಮನನ್ನು ಕ್ಷಮಿಸಿ…. ಈ ವಯಸ್ಸಿಗೇ ನಿಮ್ಮನ್ನು ಹಲವಾರು ಕಷ್ಟಗಳಿಗೆ ದೂಡಿದೆ.‌ ನನ್ನಿಂದ ನಿನ್ನ ವಿಧ್ಯಾಭ್ಯಾಸ ಕೂಡಾ ಮೊಟಕುಗೊಂಡಿತು…..ಎನ್ನುತ್ತಾ ಮೂರನೇ ಮಗಳ ಭುಜವನ್ನು ಹಿಡಿದು ತನ್ನಡೆಗೆ ಆನಿಸಿಕೊಂಡು ಸುಮತಿ ಹೇಳಿದಳು….. “ಅಮ್ಮಾ …..ಅದಕ್ಕಾಗಿ ನೀನೇನೂ ಬೇಸರಗೊಳ್ಳಬೇಡ…. ಎಸ್ ಎಸ್ ಎಲ್ ಸಿ ವರೆಗೂ ಓದಿದ್ದೇನೆ…. ಅಕ್ಕ ಈಗ ಪದವಿ ತರಗತಿಯಲ್ಲಿ ಓದುತ್ತಿದ್ದಾಳೆ…. ತಂಗಿ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾವು ವಿದ್ಯೆಯನ್ನು ಕರೆಯಲಿ ಎಂದು ನೀನು ಮಾಡಿದ ತ್ಯಾಗ ಅಷ್ಟಿಷ್ಟಲ್ಲ”…. ಎಂದು ಹೇಳುತ್ತಾ, ನೀನೇಕೆ ಹೀಗೆ ಮಂಕಾಗಿರುವೆ ಎಂಬಂತೆ ಪ್ರಶ್ನಾರ್ಥಕವಾಗಿಅಕ್ಕನನ್ನು ನೋಡಿದಳು. ಅವಳ ಮುಖವು ಮ್ಲಾನವಾಗಿತ್ತು. ಕಣ್ಣುಗಳಲ್ಲಿ ಕಂಡೂ ಕಾಣದಂತೆ ಕಣ್ಣೀರಿನ ಪಸೆಯಿತ್ತು. ರುಕ್ಮಿಣಿ ನಾಯರ್

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-119 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಒಳತೋಟಿ ಹೇಗೋ ಸಾವರಿಸಿಕೊಂಡು ಕಾರಿನಲ್ಲಿ ಕುಳಿತಿದ್ದ ಮಹಾನುಭಾವರಿಗೆ ವಂದಿಸಿ ಕ್ಷಮೆ ಯಾಚಿಸಿದಳು. ನಂತರ ಹೇಗೋ ಯಾಂತ್ರಿಕವಾಗಿ ರಸ್ತೆಯನ್ನು ದಾಟಿ ಅಲ್ಲಿಂದ ನೇರವಾಗಿ ಅನಾಥಾಶ್ರಮಕ್ಕೆ ಬಂದಳು.  ಅನಾಥಾಶ್ರಮಕ್ಕೆ ಬಂದಾಗ ಮಕ್ಕಳೆಲ್ಲರೂ ಅದಾಗಲೇ ಶಾಲೆಯಿಂದ ಬಂದಿದ್ದರು. ಅವಳ ಜೊತೆಗೆ ಸಹಾಯಕ್ಕಾಗಿ ಹೊಸದಾಗಿ ಬಂದ ಅವಳದೇ ವಯಸ್ಸಿನ ಹುಡುಗಿಯು ಇವಳನ್ನು ಕಂಡೊಡನೆ ಹತ್ತಿರ ಬಂದು…. ಏನಾಯ್ತು?…. ನಿನ್ನ ಮುಖ ಪೂರ್ತಿ ಕಳೆಗುಂದಿದೆ…. ಮಧ್ಯಾಹ್ನದ ಊಟ ಮಾಡಿಲ್ಲವೇ? ಎಂದು ಕೇಳಿದಳು. ಇಲ್ಲವೆಂಬಂತೆ ತಲೆ ಆಡಿಸಿ ತನ್ನ ರೂಮಿನೊಳಗೆ ಹೋದಳು. ಆ ಹುಡುಗಿ ಆಕೆಯನ್ನು ಹಿಂಬಾಲಿಸಿ ಬಂದಳು. ಅವಳ ಹೆಗಲ ಮೇಲೆ ಕೈಯಿಟ್ಟು…. ಏನಾಯ್ತು ಹೇಳು…. ಬಂದಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ….. ಇಷ್ಟೊಂದು ಹತಾಶಳಾಗಿ ನಿನ್ನನ್ನು ಕಂಡಿದ್ದೇ ಇಲ್ಲ…. ಏನಾಯ್ತು…. ಎಂದು ಕೇಳಲು, ಅಲ್ಲಿಯವರೆಗೂ ಅವಳು ತಡೆಹಿಡಿದಿದ್ದ ಮನಸ್ಸಿನ ಭಾರ ಒಮ್ಮೆಲೆ ಹೊರಗೆ ಬರುತ್ತಿರುವಂತೆ ಅವಳಿಗನಿಸಿತು. ಇವಳು ಆ ಹುಡುಗಿಯ ಹೆಗಲ ಮೇಲೆ ತಲೆ ಇಟ್ಟಳು. ಅವಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆದರೆ ಕಣ್ಣಿನಿಂದ ಒಂದು ಹನಿ ನೀರೂ ಆಚೆ ಬರಲಿಲ್ಲ. ಅಳಬೇಕೆಂದು ಪ್ರಯತ್ನ ಪಟ್ಟರೂ ಅಳು ಗಂಟಲಲ್ಲಿ ಉಳಿದು ಹೋಯಿತು. ಅವಳ ಆ ಸ್ಥಿತಿಯನ್ನು ಗಮನಿಸಿದಾಗ ಪರಿಸ್ಥಿತಿಯು ಗಂಭೀರವಾಗಿದೆ ಎಂಬುದು ಅವಳ ಜೊತೆಗಿದ್ದ ಹುಡುಗಿಗೆ ಅರ್ಥವಾಯಿತು. ಒಂದು ಲೋಟ ನೀರು ತರುವಂತೆ ಮಕ್ಕಳಿಗೆ ಹೇಳಿ ಆ ಹುಡುಗಿಯು ಇವಳನ್ನು ಅಲ್ಲಿದ್ದ ಬೆಂಚಿನ ಮೇಲೆ ಕುಳ್ಳಿರಿಸಿದಳು.  “….ಏನಾಯ್ತು ಹೇಳು”…. ಎಂದಾಗ, ವೈದ್ಯರು ಹೇಳಿದ ಅಷ್ಟೂ ವಿಷಯಗಳನ್ನು ಆ ಹುಡುಗಿಗೆ ತಿಳಿಸಿದಳು. ಆ ಹುಡುಗಿಯು ಕೊಡಗಿನ ನಿವಾಸಿಯಾಗಿದ್ದಳು. ಹಾಸನದಲ್ಲಿ ದಾದಿಯರ ತರಬೇತಿಗೆಂದು ಬಂದವಳಾಗಿದ್ದಳು. ಆ ವರ್ಷದ ಅಡ್ಮಿಶನ್ ಅವಧಿ ಮುಗಿದಿದ್ದ ಕಾರಣ ಸ್ವಲ್ಪ ದಿನ ಅನಾಥಾಶ್ರಮದಲ್ಲಿ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು.‌ ಮುಂದಿನ ವರ್ಷದ ನರ್ಸಿಂಗ್ ತರಬೇತಿಗೆ ಸೇರಲು ತೀರ್ಮಾನಿಸಿದ್ದಳು. ಈ ಹುಡುಗಿಯು ಬಂದಿದ್ದು ಸುಮತಿಯ ಮಗಳಿಗೆ ಬಹಳ ಸಹಾಯಕವಾಗಿತ್ತು. ಅಡುಗೆಯ ಕೆಲಸವನ್ನು ಚೆನ್ನಾಗಿ ಬಲ್ಲವಳಾಗಿದ್ದ ಅವಳು ರುಚಿಕರವಾದ ಅಡುಗೆಯನ್ನು ಮಾಡಿ ಸುಮತಿಯ ಮಗಳಿಗೂ ಅನಾಥಾಶ್ರಮದ ಮಕ್ಕಳಿಗೂ ಉಣ ಬಡಿಸುತ್ತಿದ್ದಳು. ಬಹಳ ಬೇಗ ಇಬ್ಬರೂ ಸ್ನೇಹಿತೆಯರಾಗಿ ಬಿಟ್ಟಿದ್ದರು. ಅಲ್ಲದೆ ಅನಾಥಾಶ್ರಮದ ಮೇಲೆ ಇರುವ ಕಟ್ಟಡದ ವನಿತಾ ಹಾಸ್ಟಲ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ಯುವತಿಯರು ಕೂಡಾ ಸುಮತಿಯ ಮಗಳಿಗೆ ಸ್ನೇಹಿತೆಯರಾಗಿದ್ದರು. ಕೆಲವೊಮ್ಮೆ ಅಪರೂಪಕ್ಕೆ ಹಾಸ್ಟೆಲ್ ಗೆ ಹೋಗಿ ಅವರೊಂದಿಗೆ ಸಮಯ ಕಳೆಯುತ್ತಿದ್ದಳು. ಸುಮತಿಯ ಮಗಳು ಮಧುರವಾಗಿ ಹಾಡುಗಳನ್ನು ಹಾಡುತ್ತಿದ್ದ ಕಾರಣ ಆ ಯುವತಿಯರೆಲ್ಲರಿಗೂ ಬಹಳ ಇಷ್ಟವಾಗಿದ್ದಳು. ಅವಳ ತಾಯಿಯ ಆರೋಗ್ಯ ಸರಿ ಇಲ್ಲದಿರುವುದು ಆ ಯುವತಿಯರಿಗೂ ತಿಳಿದಿತ್ತು. ಹಾಗಾಗಿ ಸುಮತಿಯ ಮಗಳನ್ನು ಕಂಡು ಮಾತನಾಡಿಸಿಕೊಂಡು ಹೋಗಲು ಆ ಯುವತಿಯರು ಅನಾಥಾಶ್ರಮದ ಒಳಗೆ ಬಂದರು.  ಸುಮತಿಯ ಮಗಳ ಸ್ಥಿತಿಯನ್ನು ಕಂಡು ಹಾಗೂ ಅವಳ ಮಾತುಗಳನ್ನು ಆಲಿಸಿ, ಅವಳ ತಾಯಿಗೆ ಗಂಭೀರವಾದ ಸಮಸ್ಯೆ ಇರುವುದನ್ನು ಮನಗಂಡರು. ಸಾಧ್ಯವಾದಷ್ಟು ಸಾಂತ್ವನ ಹೇಳಿ, ಮೇಲಿನ ಹಾಸ್ಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಅವಳಿಗೆ ಹಣ್ಣಿನ ಪಾನಕವನ್ನು ಕೊಟ್ಟರು. ಎಲ್ಲರ ಸಾಂತ್ವನದ ಮಾತುಗಳು ಮತ್ತು ಕಾಳಜಿ ಅವಳಿಗೊಂದಿಷ್ಟು ಸಮಾಧಾನವನ್ನು ಕೊಟ್ಟಿತು.  ಅವಳ ಜೊತೆಗಿದ್ದ ಹುಡುಗಿಯಂತೂ ಅವಳ ಬಲಗೈಯಂತೆ ಅವಳಿಗೆ ಸಹಾಯ ಮಾಡುತ್ತಿದ್ದಳು. ಸುಮತಿಗೆ ರಾತ್ರಿ ಊಟಕ್ಕೆ ಬೇಕಾದ ಅಡುಗೆಯನ್ನು ಮಾಡಿ ಸ್ಟೀಲ್ ಡಬ್ಬಿಯಲ್ಲಿ ತುಂಬಿ, ತನ್ನ ಸ್ನೇಹಿತರಿಗೂ ಊಟ ಬಡಿಸಿ ಸ್ವಲ್ಪವಾದರೂ ತಿನ್ನುವಂತೆ ಬಲವಂತ ಮಾಡಿದರು. ಅವಳ ಕಾಳಜಿಯನ್ನು ನೋಡಿ ಊಟ ಸೇರದಿದ್ದರೂ ಒಂದೆರಡು ತುತ್ತು ತಿಂದು, ರಾತ್ರಿ ತಾಯಿಯ ಜೊತೆ ಆಸ್ಪತ್ರೆಯಲ್ಲಿ ಮಲಗಲು ಹೊರಟಳು. ತನಗೆ ಸಹಾಯಕಿ ಹಾಗೂ ಸ್ನೇಹಿತೆ ಅನಾಥಾಶ್ರಮದಲ್ಲಿ ಇರುವುದರಿಂದ ಅವಳಿಗೆ ಮಕ್ಕಳ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಹಾಗೂ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರು ಅನುಮತಿಯನ್ನು ನೀಡಿದ್ದರಿಂದ ಸ್ವಲ್ಪ ನಿರಾಳವಾಗಿದ್ದಳು. ಅನಾಥಾಶ್ರಮದಿಂದ ಹೊರಟವಳು ಬೇಗ ಬೇಗನೆ ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದಳು. ಅಲ್ಲಿ ಬಂದಾಗ ತನ್ನ ದಾರಿಯನ್ನೇ ಕಾಯುತ್ತಿದ್ದ ಸುಮತಿಯನ್ನು ಕಂಡಳು. ಇನ್ನೂ ಹದಿನಾರರ ಹರೆಯದ ಮೂರನೇ ಮಗಳು ಒಬ್ಬಳೇ ಊರಲ್ಲಿರುವುದರಿಂದ ಸುಮತಿ ಚಿಂತಾಕ್ರಾಂತಳಾಗಿದ್ದಳು. ಮಂಗಳೊಂದಿಗೆ ತನ್ನ ಮನದ ದುಗುಡವನ್ನು ಹೇಳಿಕೊಂಡಳು.  ಅಕ್ಕ ಪಕ್ಕದಲ್ಲಿ ಮನೆಗಳಿದ್ದರೂ ಹೆಣ್ಣು ಮಗಳು ಒಬ್ಬಳೇ ಅಲ್ಲಿರುವಳಲ್ಲ ಎನ್ನುವ ಚಿಂತೆ ಸುಮತಿಯ ಮನಸ್ಸನ್ನು ಕೊರೆಯುತ್ತಿತ್ತು. ತಾಯಿಯ ಚಿಂತೆಯನ್ನು ಅರಿತು ಮಗಳು…. ಅಮ್ಮಾ …..ಹಾಗೆಲ್ಲ ಚಿಂತಿಸಬೇಡ…. ಅವಳು ಧೈರ್ಯವಂತಳು….ಅವಳು ಅಲ್ಲಿದ್ದು ಶಾಲೆಗೆ ಹೋದರೆ ತಾನೇ ನಿನ್ನ ತಿಂಗಳಿನ ಸಂಬಳ ನಮಗೆ ಸಿಗುವುದು…. ಆ ಸಂಬಳ ಇರದಿದ್ದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ ಅಲ್ಲವೇ?…. ಎಂದು ಕೇಳಿದಳು. ಮಗಳು ಹೇಳಿದ ಮಾತು ಅಕ್ಷರಶಃ ಸತ್ಯವೆಂದು ಸುಮತಿಗೆ ತಿಳಿದಿದೆ ಆದರೂ ಒಳ ಮನಸ್ಸಿಗೆ ಸಮಾಧಾನವೇ ಇರಲಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ನರ್ಸ್ ಸುಮತಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ತಾಯಿಗೆ ರಾತ್ರಿ ಊಟವನ್ನು ಕೊಟ್ಟು, ನರ್ಸ್ ಕೊಟ್ಟ ಗುಳಿಗೆಗಳನ್ನು ನುಂಗಿಸಿ, ಮಲಗಲು ಹೇಳಿ ಪ್ರೀತಿಯಿಂದ ತಲೆಯನ್ನು ಸವರಿ…. “ಅಮ್ಮಾ …..ನಾನು ಇಲ್ಲಿಯೇ ವಾರ್ಡಿನ ಹೊರಗೆ ಆಸ್ಪತ್ರೆಯ ಉದ್ಯಾನದ ಕಾರಂಜಿಯ ನಡುವೆ ಇರುವ ವಿದ್ಯುತ್ ದೀಪದ ಬೆಳಕಿನಲ್ಲಿ ನನ್ನ ಪಠ್ಯಪುಸ್ತಕಗಳನ್ನು ಓದುತ್ತಿರುತ್ತೇನೆ…. ಇನ್ನೇನು ವಾರ್ಷಿಕ ಪರೀಕ್ಷೆಯು ಹತ್ತಿರ ಬರುತ್ತಿದೆ…. ಎಂದಳು. ಸುಮತಿ ಮಗಳ ಮುಖವನ್ನು ಒಮ್ಮೆ ನೋಡಿದಳು. ನನ್ನ ಮಕ್ಕಳಿಗೆ ಈ ಚಿಕ್ಕ ವಯಸ್ಸಿಗೆ ಎಷ್ಟೊಂದು ಜವಾಬ್ದಾರಿಗಳು? ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ಏಕೆ ಇಂತಹಾ ಒಳ್ಳೆಯ ಮಕ್ಕಳನ್ನು ಹುಟ್ಟಿಸಿದೆ ದೇವರೇ. ನನ್ನ ಮಕ್ಕಳು ಜೀವನದ ಪ್ರತಿಯೊಂದು ಹಂತದಲ್ಲೂ ಒಂದಲ್ಲ ಒಂದು ರೀತಿಯ ಕಷ್ಟಕರ ಸವಾಲುಗಳನ್ನು ಎದುರಿಸುತ್ತಾ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ನಾನೇ ಕಾರಣ ಎಂದು ಸುಮತಿ ವ್ಯಥೆ ಪಟ್ಟಳು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-118 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಮಗಳ ನೋವು ಅರ್ಥಮಾಡಿಕೊಂಡ ತಾಯಿ ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂತು ಎಂದು ಅರಿತ ಹುಡುಗಿ ನಿಧಾನವಾಗಿ ಬೆಂಚಿನ ಮೇಲಿಂದ ಎದ್ದು ತಾಯಿಯನ್ನು ಅಡ್ಮಿಟ್ ಮಾಡಿದ್ದ ವಾರ್ಡಿನ ಕಡೆಗೆ ನಡೆದಳು. ಅವಳು ಒಳಗೆ ಹೋಗಿ ನೋಡಿದಾಗ ಸುಮತಿ ಹಾಸಿಗೆ ಮೇಲೆ ತಲೆ ದಿಂಬಿಗೆ ಒರಗಿ ಕಣ್ಣು ಮುಚ್ಚಿ ಮಲಗಿದ್ದಳು. ತಾಯಿಯ ಬಳಿಗೆ ಬಂದ ಮಗಳು…” ಅಮ್ಮಾ….”ಎಂದು ಮೆಲ್ಲನೆ ಕರೆದಾಗ ಏನನ್ನೋ ಆಲೋಚಿಸುತ್ತಾ ಮಲಗಿದ್ದ ಸುಮತಿ ಕಣ್ಣು ತೆರೆದು ಮಗಳನ್ನು ನೋಡಿದಳು. ಮಗಳ ಮುಖ ಬಾಡಿದ ಹಾಗೆ ಕಂಡಿತು….”ಏನಾಯ್ತು ಮಗಳೇ….. ವೈದ್ಯರು ಏನು ಹೇಳಿದರು?… ಎಂದು ಕಾತುರದಿಂದ ಸುಮತಿ ಕೇಳಿದಾಗ, ತನ್ನ ಮನಸ್ಸಿನ ನೋವು ತಾಯಿಗೆ ತಿಳಿಯದಿರಲಿ ಎಂದು ಸಮಾಧಾನ ಚಿತ್ತ ತಂದುಕೊಂಡು ತಾಯಿಯನ್ನು ನೋಡುತ್ತಾ…. ಏನಿಲ್ಲಮ್ಮ…..ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊಟ್ಟಿದ್ದಾರೆ…. ಸ್ವಲ್ಪ ದಿನ ಇಲ್ಲಿಯೇ ಆಸ್ಪತ್ರೆಯಲ್ಲಿದ್ದು ನೀನು ವಿಶ್ರಾಂತಿ ತೆಗೆದುಕೊಳ್ಳಬೇಕಂತೆ…. ನಿನಗೆ ಬೇಕಾದ ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಇಲ್ಲಿನ ದಾದಿಯರು ಮಾಡುತ್ತಾರೆ…. ಸ್ವಲ್ಪ ಹುಷಾರಾದ ಬಳಿಕ ನೀನು ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ”…. ಎಂದಳು. ಮಗಳು ಹೇಳಿದ ಮಾತುಗಳನ್ನು ಸುಮತಿ ನಂಬಿದರೂ ಕೂಡ ಅವಳ ಕಣ್ಣಿನಲ್ಲಿ ಮಡುಗಟ್ಟಿದ ದುಃಖ, ನೋವು ಸುಮತಿಯ ಕಣ್ಣಿಗೆ ಬೀಳದೇ ಇರಲಿಲ್ಲ. ಎಷ್ಟಾದರೂ ತಾಯಿ ಕರುಳು ಅಲ್ಲವೇ? ಸದಾ ಲವಲವಿಕೆಯಿಂದ ಚಿಗರೆಯಂತೆ ಓಡಾಡುತ್ತಿದ್ದ ಹಸನ್ಮುಖಿಯಾದ ಮಗಳ ಮುಖ ಬಾಡಿ ಬಳಲಿರುವುದು ಸುಮತಿಯ ಕಣ್ಣಿಗೆ ಗೋತರಿಸದೇ ಇರಲಿಲ್ಲ. ಮಗಳ ಮುಖವನ್ನೇ ನೋಡುತ್ತಾ ಏನಾಯ್ತು ಮಗಳೇ …. ನಿನ್ನ ಮನಸ್ಸನ್ನು ಕಾಡುತ್ತಿರುವ ಚಿಂತೆ ಏನೆಂದು ನನ್ನಲ್ಲಿ ಹಂಚಿಕೊಳ್ಳಬಾರದೇ? …. ಎಂದು ಸುಮತಿ ಕೇಳಿದಾಗ ಮಗಳು…. “ಹಾಗೇನೂ ಇಲ್ಲಮ್…. ಸ್ವಲ್ಪ ಆಯಾಸ ಆಗಿದೆ ಅಷ್ಟೇ…. ನೀನು ಈಗ ನನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟು ಚೆನ್ನಾಗಿ ನಿದ್ರೆ ಮಾಡು… ನಿನಗೆ ಈಗ ವಿಶ್ರಾಂತಿಯ ಅಗತ್ಯವಿದೆ….ನಾನು ಹೊರಗೆ ಹೋಗಿ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಖರೀದಿಸಿ ಬರುತ್ತೇನೆ…. ಎಂದು ಹೇಳುವಾಗ ಅವಳ ಕಣ್ಣು ತುಂಬಿ ಬಂದರೂ ಅದನ್ನು ಮರೆಮಾಚಿ ಬೇಗನೆ ಬಾಗಿಲಿಂದ ಆಚೆ ಹೋದಳು. ಹೊರಗೆ ಬಂದು ಆಸ್ಪತ್ರೆಯ ಮೆಟ್ಟಿಲಿನ ಮೇಲೆ ಕುಳಿತಳು. ಜೋರಾಗಿ ಅಳು ಒತ್ತರಿಸಿ ಬಂದರೂ ಅವಳು ಅಳುವಂತಿರಲಿಲ್ಲ. ಏಕೆಂದರೆ ಸುತ್ತಮುತ್ತಲಿನ ಜನರು ತನ್ನನ್ನು ನೋಡುತ್ತಾರೆ ಎನ್ನುವ ಮುಜುಗರ ಅವಳಗಿತ್ತು. ಒಂದೆರಡು ನಿಮಿಷ ಹಾಗೆಯೇ ಕುಳಿತಿದ್ದವಳು, ಔಷಧಿ ತರಲು ತಡವಾಗಬಾರದೆಂದು ಅಲ್ಲಿಂದ ಎದ್ದು ಆಸ್ಪತ್ರೆಯ ಗೇಟಿನಿಂದ ಆಚೆ ಹೋದಳು. ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿತ್ತು ಔಷಧೀಯ ಅಂಗಡಿ. ಎಸ್ಟೇಟಿನ ಲೆಕ್ಕದಲ್ಲಿ ಆ ಅಂಗಡಿಯಲ್ಲಿ ಔಷಧಿ ಖರೀದಿಸಬಹುದಾಗಿದ್ದುದರಿಂದ ಅಲ್ಲಿಗೆ ಹೋಗಿ ಔಷಧಿಯನ್ನು ಖರೀದಿಸಿ, ನಂತರ ಅನಾಥಾಶ್ರಮಕ್ಕೆ ಹೋಗಿ ತಾಯಿಗೆ ಮಧ್ಯಾಹ್ನಕ್ಕೆ ಬೇಕಾದ ಅಡುಗೆಯನ್ನು ಮಾಡಿ ಆಸ್ಪತ್ರೆಯ ಕಡೆಗೆ ಹೊರಟಳು. ತಾಯಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಲ್ಲಿ ಮನೆಯಲ್ಲಿ ತಂಗಿ ಒಬ್ಬಳೇ ಇದ್ದಳು. ಅವಳಿಗೆ ತಾಯಿ ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿಸಬೇಕಿತ್ತು. ಎಸ್ಟೇಟಿನ ಬಂಗಲೆಯಲ್ಲಿ ಟೆಲಿಫೋನ್ ಇದ್ದ ಕಾರಣ ಸುಮತಿಯ ಎರಡನೇ ಮಗಳು ಅಲ್ಲಿಗೆ ಕರೆ ಮಾಡಿ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ವಿಷಯವನ್ನು ತಂಗಿಗೆ ತಿಳಿಸಿ ಎಂದು ಎಸ್ಟೇಟ್ ಮ್ಯಾನೇಜರ್ ರವರಲ್ಲಿ ವಿನಂತಿಸಿಕೊಂಡಳು. ನಂತರ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರಿಗೆ ತನ್ನ ತಾಯಿಯ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯವನ್ನು ತಿಳಿಸಿದಳು. ಆ ಹುಡುಗಿಯ ಮನೆಯ ಪರಿಸ್ಥಿತಿಯನ್ನು ಅರಿತಿದ್ದ ಅವರು…. “ನಿನ್ನ ತಾಯಿಯ ಯೋಗ ಕ್ಷೇಮವನ್ನು ಚೆನ್ನಾಗಿ ನೋಡಿಕೋ…. ಏನೇ ಸಹಾಯವಿದ್ದರೂ ನಮಗೆ ತಿಳಿಸು…. ತಾಯಿಗೆ ಬೇಕಾದ ಊಟ ತಿಂಡಿ ಎಲ್ಲವನ್ನೂ ಆಶ್ರಮದಿಂದಲೇ ಮಾಡಿಕೊಂಡು ಹೋಗಮ್ಮ…. ಅವರು ಆಸ್ಪತ್ರೆಯಲ್ಲಿ ಇರುವವರೆಗೂ ನಮ್ಮ ಕೈಲಿ ಆದ ಸಹಾಯವನ್ನು ನಿನಗೆ ಮಾಡುತ್ತೇವೆ”…. ಎಂದರು. ಅವರ ಮಾತು ಕೇಳಿ ಆ ಹುಡುಗಿಯ ಕಣ್ಣುಗಳು ತುಂಬಿದವು….. “ಧನ್ಯವಾದಗಳು ಸರ್…. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ”….. ಎಂದು ಹೇಳಿ ಅವರಿಗೆ ವಂದಿಸಿ, ಅಲ್ಲಿಂದ ಆಸ್ಪತ್ರೆಗೆ ಹೋದಳು. ತಾಯಿಗೆ ಊಟವನ್ನು ಕೊಟ್ಟಳು. ತಾಯಿ ಊಟ ಮಾಡಿದ ನಂತರ ಊಟದ ಡಬ್ಬಿ ಮತ್ತು ತಟ್ಟೆಯನ್ನು ತೊಳೆದಿಟ್ಟಳು. ವಾರ್ಡಿನ ನರ್ಸ್ ಬಂದು ಅವಳಿಂದ ಔಷಧಿಯನ್ನು ಪಡೆದುಕೊಂಡು ಹೋದರು. ಹಾಗೂ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆಯಿಂದ ರೋಗಿಗೆ ಉಚಿತ ಆಹಾರವು ದೊರಕುವುದು ಎಂದು ಮಗಳಿಗೆ ತಿಳಿಸಿದರು. ಮಕ್ಕಳು ಶಾಲೆಯಿಂದ ಹಿಂತಿರುಗುವ ಮುನ್ನ ಆ ಹುಡುಗಿಯು ಅನಾಥಾಶ್ರಮವನ್ನು ತಲುಪಬೇಕಿತ್ತು. ತಾಯಿಯನ್ನು ಅಡ್ಮಿಟ್ ಮಾಡಬೇಕಾಗಿದ್ದ ಕಾರಣ ಅಂದು ಅವಳು ಕಾಲೇಜಿಗೂ ಹೋಗಿರಲಿಲ್ಲ. ತಾಯಿಯ ಜೊತೆ ಸ್ವಲ್ಪ ಹೊತ್ತು ಆಸ್ಪತ್ರೆಯಲ್ಲಿದ್ದು ವಾರ್ಡಿನ ಬಳಿ ಕಾಫಿ ಬಂದಾಗ ತಾಯಿಗೆ ಒಂದು ಲೋಟ ಕಾಫಿಯನ್ನು ಕೊಡಿಸಿ , ತಾನು ರಾತ್ರಿ ಇಲ್ಲಿ ಮಲಗಲು ಬರುವುದಾಗಿ ತಿಳಿಸಿ ಹುಡುಗಿಯು ಅನಾಥಾಶ್ರಮದ ಕಡೆಗೆ ನಡೆದಳು. ತಾಯಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಂದ ನಂತರ ಇಂದೇಕೋ ತನ್ನ ತಾಯಿಯಿಂದ ಬಹಳ ದೂರ ಬಂದಂತೆ ಅವಳಿಗೆ ಅನಿಸಿತು. ಫಿಸಿಷಿಯನ್ ಹೇಳಿದ ಮಾತುಗಳೇ ಅವಳ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ನನ್ನ ತಾಯಿ ವೈದ್ಯರು ಹೇಳಿದಂತೆ ಬಹಳ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಎಂದಿಗೂ ತನಗಾಗುವ ನೋವನ್ನು ನಮ್ಮ ಮುಂದೆ ತೋರಿಸಿಕೊಂಡಿಲ್ಲ ಹೇಳಿಕೊಂಡಿಲ್ಲ ನನ್ನಮ್ಮ. ದೇವರೇ ವೈದ್ಯರ ಮಾತು ಸುಳ್ಳಾಗಲಿ. ಅಮ್ಮನಿಗೆ ಇದ್ಯಾವುದೂ ತಿಳಿಯುವುದೇ ಬೇಡ. ಈ ಸಂಗತಿಯನ್ನು ಅಕ್ಕನಿಗೆ ಹಾಗೂ ತಂಗಿಗೆ ನಾನು ಹೇಳಲೇಬೇಕಾದ ಅನಿವಾರ್ಯತೆ ಇದೆ. ಸಾಧ್ಯವಾದಷ್ಟೂ ನಾವು ಅಮ್ಮನನ್ನು ಖುಷಿಯಾಗಿಟ್ಟುಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಅವಳ ಆರೈಕೆ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಎಂದು ಯೋಚಿಸುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದವಳಿಗೆ ಇದ್ದಕ್ಕಿದ್ದ ಹಾಗೆ ತನ್ನನ್ನು ಯಾರೋ ಹಿಡಿದೆಳೆದಂತಾಯಿತು….. ಪಕ್ಕಕ್ಕೆ ತಿರುಗಿ ನೋಡಿದರೆ ಯಾರೋ ಅಪರಿಚಿತನೊಬ್ಬ ತನ್ನ ಕೈಹಿಡಿದು ರಸ್ತೆಯ ಬದಿಗೆ ಎಳೆದ. ಹಿಂದೆಯೇ ಕಾರೊಂದು ಬ್ರೇಕ್ ಹಾಕಿ ನಿಂತಿದ್ದು ಕೂಡಾ ಅವಳಿಗೆ ತಿಳಿಯಲಿಲ್ಲ. ಕಾರಿನಲ್ಲಿದ್ದಾತ ಕೋಪದಿಂದ….”ಏ…. ಹುಡುಗೀ….ನಿನಗೆ ಕಣ್ಣು ಕಾಣಿಸುವುದಿಲ್ಲವೇ? ರಸ್ತೆ ಮಧ್ಯೆ ನಡೆಯುತ್ತಿದ್ದೀಯಲ್ಲಾ… ನಿನಗೆ ಜೀವದ ಮೇಲೆ ಆಸೆ ಇಲ್ಲವೇ…. ನೀನು ಸಾಯಲು ನನ್ನ ಕಾರೇ ಬೇಕೆ?…. ಎಂದು ಜೋರಾಗಿ ಹೇಳಿದ.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-116 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಗಂಭೀರವಾದ ಸುಮತಿಯ ಆರೋಗ್ಯ ಪರಿಸ್ಥಿತಿ ವೈದ್ಯರು ಮಗಳನ್ನು ಉದ್ದೇಶಿಸಿ….”ಮಗು ನೀನು ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡು ಬಾ”….. ಎನ್ನಲು ಮಗಳು ಸರಿ ಎನ್ನುವಂತೆ ತಲೆಯಾಡಿಸಿ, ವೈದ್ಯರ ಕೊಠಡಿಯಿಂದ ನೇರವಾಗಿ ಪ್ರಯೋಗಾಲಯಕ್ಕೆ ಹೋಗಿ ತಾಯಿಯ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡಳು. ಕೊಠಡಿಗೆ ಬಂದಾಗ ವೈದ್ಯರು ಸುಮತಿಯ ರಕ್ತದೊತ್ತಡವನ್ನು ಪರಿಶೀಲಿಸುತ್ತಿದ್ದರು. ಒಮ್ಮೆ ಪರೀಕ್ಷಿಸಿ ಸಂದೇಹ ಬಂದು ಮತ್ತೆ ಮತ್ತೆ ಪರಿಶೀಲಿಸುತ್ತಿದ್ದರು. ಮಗಳು ಕೊಠಡಿಯ ಒಳಗೆ ಬಂದು ವೈದ್ಯರ ಮೇಜಿನ ಮೇಲೆ ವರದಿಯನ್ನು ಇಟ್ಟಳು. ಸುಮತಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಿದ್ದ ವೈದ್ಯರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು….”ಕಳೆದ ಬಾರಿ ನೀವು ಬಂದಾಗ ನಿಮಗೆ ರಕ್ತದ ಒತ್ತಡವು ಇತ್ತೇ ಸುಮತಿ ಅವರೇ?…ಎಂದು ಕೇಳಿದಾಗ, ಮಗಳು ಅಮ್ಮನ ಹಳೆಯ ಚೀಟಿಗಳನ್ನು ವೈದ್ಯರ ಮುಂದೆ ಹಿಡಿದಳು. ಅವುಗಳನ್ನು ತೆಗೆದುಕೊಂಡು ವೈದ್ಯರು ಪರೀಕ್ಷಿಸಿದರು. ಆದರೆ ಆಗ ರಕ್ತದೊತ್ತಡವು ಸರಿಯಾಗಿಯೇ ಇತ್ತು. ಮೇಜಿನ ಮೇಲೆ ಇದ್ದ ವರದಿಯನ್ನು ತೆಗೆದುಕೊಂಡು ಸೂಕ್ಷ್ಮವಾಗಿ ನೋಡಿದರು. ರಕ್ತ ಮತ್ತು ಮೂತ್ರದಲ್ಲಿ ಸಕ್ಕರೆಯ ಅಂಶ ಎಂದಿಗಿಂತ ಅತಿಯಾಗಿ ಕಂಡಿತು. ವೈದ್ಯರು ಮತ್ತೊಮ್ಮೆ ಸುಮತಿಯ ಹಳೆಯ ಚೀಟಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಕೆಲವು ನಾಲ್ಕು ತಿಂಗಳ ಹಿಂದಿನ ಹಳೆಯ ಚೀಟಿಗಳಾಗಿದ್ದವು. ಹಾಗಾದರೆ ಸುಮತಿ ಇತ್ತೀಚೆಗೆ ಯಾವುದೇ ಪರಿಶೀಲನೆಗೆ ಒಳಪಟ್ಟಿರಲಿಲ್ಲ ಎನ್ನುವುದು ವೈದ್ಯರಿಗೆ ಮನವರಿಕೆಯಾಯಿತು.  ವಿಷಾದದ ನೋಟ ಸುಮತಿಯೆಡೆಗೆ ಬೀರಿ…. “ಸುಮತಿ ಅವರೇ ನಾಲ್ಕು ತಿಂಗಳಿನಿಂದ ನೀವು ಆಸ್ಪತ್ರೆಗೆ ಬಂದು ಎಂದಿನಂತೆ ಪರಿಶೀಲನೆಯನ್ನು ಮಾಡಿಸಿಕೊಂಡಿಲ್ಲವೇಕೆ?” ಎಂದು ವೈದ್ಯರು ಕೇಳಲು, ಸುಮತಿ ಮೇಜಿನ ಮೇಲೆ ಇದ್ದ ಚೀಟಿಯನ್ನು ನೋಡುತ್ತಾ….”ಏಕೋ ಬರಲು ಸಾಧ್ಯವಾಗಲಿಲ್ಲ ಸರ್…. ಶಾಲೆಗೆ ಹೋಗಿ ಬರುವುವಾಗ ಬಹಳ ಆಯಾಸವಾಗಿರುತ್ತಿತ್ತು…. ತರಕಾರಿಯನ್ನು ವಾರಕ್ಕೊಮ್ಮೆ ಮಗಳು ಪೇಟೆಯಿಂದ ತಂದುಕೊಡುತ್ತಿ‌ದ್ದುದರಿಂದ ನಾನು ಪೇಟೆಯ ಕಡೆಗೆ ಬರಲೇ ಇಲ್ಲ”… ಎಂದಳು. ಅವಳ ಅಸಹಾಯಕ ಪರಿಸ್ಥಿತಿಯನ್ನು ಅರಿತಿದ್ದ ವೈದ್ಯರು ಹೆಚ್ಚಾಗಿ ಏನನ್ನೂ ಹೇಳದೇ…. “ಸುಮತಿಯವರೇ ನೀವು ಕೆಲವು ದಿನಗಳ ಕಾಲ ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ….ನಿಮಗೆ ತುರ್ತು ಚಿಕಿತ್ಸೆಯನ್ನು ನೀಡಬೇಕಾದ ಅಗತ್ಯವಿದೆ”…. ಎಂದು ಹೇಳಿ ಮೇಜಿನ ಮೇಲಿದ್ದ ಬೆಲ್ಲನ್ನು ಒತ್ತಿ ಅಟೆಂಡರ್ ಅನ್ನು ಕರೆದು,….”ಈ ಅಮ್ಮನನ್ನು ಕರೆದುಕೊಂಡು ಹೋಗಿ ವಾರ್ಡಿಗೆ ದಾಖಲು ಮಾಡಪ್ಪ”…. ಎಂದು ಒಂದು ಚೀಟಿಯಲ್ಲಿ ಸುಮತಿಯನ್ನು ದಾಖಲು ಮಾಡುವ ಬಗ್ಗೆ ಬರೆದು ಅಟೆಂಡರ್ ಕೈಲಿ ಕೊಟ್ಟರು. ಮಗಳ ಕಡೆಗೆ ನೋಡುತ್ತಾ… “ಮಗೂ….ಅಮ್ಮನನ್ನು ವಾರ್ಡಿನಲ್ಲಿ ದಾಖಲು ಮಾಡಿ ನನ್ನನ್ನು ಬಂದು ಭೇಟಿ ಮಾಡು…. ಕೆಲವು ಔಷಧಿ ಮಾತ್ರೆಗಳನ್ನು ಬರೆದುಕೊಡುತ್ತೇನೆ…. ಹೊರಗಿನಿಂದ ತರಬೇಕಾಗುತ್ತದೆ”… ಎಂದರು. ಸರಿ ಎನ್ನುವಂತೆ ತಲೆಯಾಡಿಸಿ ಸುಮತಿಯ ಕೈಹಿಡಿದು ಕರೆದುಕೊಂಡು ಅಟೆಂಡರ್ ಹಿಂದೆ ಮಗಳು ನಡೆದಳು.  ಇಬ್ಬರನ್ನೂ ವಾರ್ಡಿಗೆ ಕರೆದುಕೊಂಡು ಹೋದ ಅಟೆಂಡರ್ ವಾರ್ಡನಲ್ಲಿ ಕುಳಿತಿದ್ದ ಡ್ಯೂಟಿ ನರ್ಸ್ಗೆ ವೈದ್ಯರ ಚೀಟಿಯನ್ನು ತೋರಿಸಿ….” ಈ ಯಮ್ಮನನ್ನು ಡಾಕ್ಟರ್ ಇಲ್ಲಿ ಅಡ್ಮಿಟ್ ಮಾಡಲು ಹೇಳಿದ್ದಾರೆ”…. ಎಂದನು.‌ ಚೀಟಿಯನ್ನು ಪರಿಶೀಲಿಸಿದ ನರ್ಸ್, ಅಲ್ಲಿನ ಆಯಮ್ಮನನ್ನು ಕರೆದು…. “ನೋಡು ಇವರಿಗೆ ಇಲ್ಲಿಯೇ ಪಕ್ಕದಲ್ಲಿರುವ ಹಾಸಿಗೆಯನ್ನು ತಯಾರು ಮಾಡು”….ಎಂದು ಹೇಳಿ… “ಸುಮತಿಯವರೇ ಇಲ್ಲಿಯೇ ಇರುವ ಸ್ಟೂಲ್ ಮೇಲೆ ಕುಳಿತುಕೊಳ್ಳಿ…. ಆಯಾ ಹಾಸಿಗೆ ತಯಾರು ಮಾಡಿದ ನಂತರ ಅಲ್ಲಿ ಮಲಗಿಕೊಳ್ಳಿ…. ವೈದ್ಯರ ಸಲಹೆಯಂತೆ ನಿಮಗೆ ಇಂಜೆಕ್ಷನ್ ಕೊಡುವುದಿದೆ”…. ಎಂದು ಹೇಳಿದರು. ಆಯಮ್ಮ ಹಾಸಿಗೆ ರೆಡಿ ಮಾಡಿ ಸುಮತಿಗೆ ಅಲ್ಲಿ ಮಲಗಿಕೊಳ್ಳುವಂತೆ ಹೇಳಿದರು. ಮಗಳು ಸುಮತಿಯನ್ನು ಕರೆದುಕೊಂಡು ಹೋಗಿ ಹಾಸಿಗೆಯ ಮೇಲೆ ಕುಳ್ಳಿರಿಸಿದಳು…. “ಅಮ್ಮಾ ನೀನು ಮಲಗಿ ವಿಶ್ರಾಂತಿ ತೆಗೆದುಕೋ…. ನಾನು ಡಾಕ್ಟರನ್ನು ಭೇಟಿ ಮಾಡಿ ಅವರು ಬರೆದುಕೊಡುವ ಔಷಧಿಯನ್ನು ಹೊರಗಿನ ಮೆಡಿಕಲ್ ಶಾಪಿಗೆ ಹೋಗಿ ಖರೀದಿಸಿ ತರುತ್ತೇನೆ”…. ಎಂದು ಹೇಳಿ, ನರ್ಸ್ ಬಳಿ ಹೋಗಿ ತನ್ನನ್ನು ಡಾಕ್ಟರ್ ಭೇಟಿ ಮಾಡುವಂತೆ ತಿಳಿಸಿದ್ದಾರೆ. ಎಂದು ಹೇಳಿ ಅವರ ಸಮ್ಮತಿ ಪಡೆದು ವಾರ್ಡಿನಿಂದ ಹೊರ ನಡೆದಳು. ವಾರ್ಡ್ ನಿಂದ ಆಚೆ ಬರುವಾಗ ಮನಸ್ಸಿನಲ್ಲಿ ಕೃಷ್ಣನನ್ನು ನೆನೆದು…” ಶ್ರೀ ಕೃಷ್ಣಾ ನನ್ನ ತಾಯಿಗೆ ಯಾವುದೇ ತೊಂದರೆ ಆಗದಿರಲಿ…..ನೀನೊಬ್ಬನೇ ನಮಗೆ ದಿಕ್ಕು… ನಮ್ಮನ್ನು ಸದಾ ಕಾಪಾಡುತ್ತಿರುವವನು ನೀನು…. ಆದಷ್ಟು ಬೇಗ ಅಮ್ಮ ಚೇತರಿಸಿಕೊಳ್ಳುವಂತೆ ಮಾಡು”…. ಎಂದು ಬೇಡಿಕೊಂಡಳು. ವೈದ್ಯರ ಕೊಠಡಿಯ ಬಳಿ ಬಂದಾಗ ಇನ್ನೂ ಅನೇಕ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಅಲ್ಲಿಯೇ ನಿಂತಿದ್ದ ಅಟೆಂಡರ್ ನನ್ನು… ನಾನು ಈಗ ವೈದ್ಯರನ್ನು ಭೇಟಿ ಮಾಡಬಹುದೇ?…ಎಂದು ಕೇಳಿದಳು. ….”ಒಳಗೆ ವೈದ್ಯರ ಬಳಿ ಕುಳಿತಿರುವ ರೋಗಿ ಹೊರಬಂದ ನಂತರ ನೀನು ಹೋಗಿ ವೈದ್ಯರನ್ನು ಕಾಣಬಹುದು”… ಎಂದನು. ಸ್ವಲ್ಪ ಹೊತ್ತು ಅಲ್ಲಿಯೇ ಬೆಂಚಿನ ಮೇಲೆ ಕುಳಿತಿದ್ದ ಹುಡುಗಿ ಒಳಗಿನಿಂದ ರೋಗಿಯೊಬ್ಬರು ಹೊರಗೆ ಬಂದ ನಂತರ ವೈದ್ಯರ ಕೊಠಡಿಯನ್ನು ಪ್ರವೇಶಿಸಿದಳು. ಸುಮತಿಯ ಮಗಳನ್ನು ಕಂಡ ವೈದ್ಯರು… “ಬಾರಮ್ಮಾ …ಇಲ್ಲಿ ಕುಳಿತುಕೋ…. ಎಂದು ತಮ್ಮ ಮುಂದೆ ಇದ್ದ ಕುರ್ಚಿಯ ಕಡೆಗೆ ಕೈ ಮಾಡಿದರು…. “ನಿನ್ನ ತಾಯಿಯನ್ನು ವಾರ್ಡಿಗೆ ಅಡ್ಮಿಟ್ ಮಾಡಿ ಆಯಿತೇ?…. ಎಂದು ಕೇಳಿದರು. ಹೌದು ಎನ್ನುವಂತೆ ಹುಡುಗಿ ತಲೆಯಾಡಿಸಿದಳು. ಅವಳ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಾ….. “ಮಗೂ ನಿಮ್ಮ ಮನೆಯಲ್ಲಿ ದೊಡ್ಡವರು ಯಾರೂ ಇಲ್ಲವೇ?…. ಎಂದಾಗ…. “ನಮ್ಮ ಮನೆಯಲ್ಲಿ ನಮ್ಮ ತಾಯಿ ನಾನು ಮತ್ತು ಒಬ್ಬಳು ತಂಗಿ ಮಾತ್ರ ಈಗ ಇರುವುದು…. ನನ್ನ ಅಕ್ಕನಿಗೆ ಮದುವೆಯಾಗಿ ಅವರ ಗಂಡನ ಮನೆಯಲ್ಲಿ ಇದ್ದಾರೆ…. ಕೊನೆಯ ತಂಗಿ ದೂರದ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾನೂ ಕೂಡ ಇಲ್ಲಿ ಒಂದು ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ…. ಅಮ್ಮನ ಜೊತೆ ಮನೆಯಲ್ಲಿ ಇರುವುದು ತಂಗಿ ಮಾತ್ರ”…. ಎಂದಳು. ಅವಳು ಹೇಳಿದ ಮಾತನ್ನು ಕೇಳಿದ ವೈದ್ಯರು ಚಿಂತಾಕ್ರಾಂತರಾದರು. ಆದರೂ ವಿಷಯವನ್ನು ಈ ಹುಡುಗಿಗೆ ತಿಳಿಸಲೇಬೇಕಿತ್ತು. ಹಾಗಾಗಿ…. “ನೋಡು ಮಗೂ ….ಕೆಲವು ಮುಖ್ಯವಾದ ವಿಚಾರವನ್ನು ನಿನಗೆ ತಿಳಿಸುವುದಿತ್ತು…. ಹಾಗಾಗಿ ಮನೆಯಲ್ಲಿ ದೊಡ್ಡವರು ಯಾರು ಇಲ್ಲವೇ ಎಂದು ಕೇಳಿದೆ…. ಎಂದರು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-115 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಆರೋಗ್ಯದಲ್ಲಿ ವ್ಯತ್ಯಾಸ ಲೋಟದ ತುಂಬಾ ನೀರನ್ನು ತುಂಬಿಕೊಂಡು ಬಂದು ಆ ಹುಡುಗಿ ಸುಮತಿಯ ಕೈಕೆ ಕೊಟ್ಟಳು. ಸುಮತಿ ನೀರನ್ನು ಗಟಗಟನೆ ಕುಡಿದಳು ಆದರೆ ಒಮ್ಮೆಲೇ ವಾಕರಿಕೆ ಬಂದಂತಾಗಿ ಮುಖ ಕಿವುಚಿಕೊಂಡಳು. ಒಂದೇ ಸಮನೆ ನೀರನ್ನು ಕುಡಿದಿದ್ದಕ್ಕಾಗಿ ತಾಯಿಗೆ ಹೀಗೆ ಆಗುತ್ತಿರಬೇಕು ಎಂದು ಮಗಳು ತಾಯಿಯ ಬೆನ್ನನ್ನು ಮೆತ್ತಗೆ ಸವರಿದಳು. ಸುಮತಿಯ ಪರಿಸ್ಥಿತಿಯನ್ನು ಕಂಡು ಮಗಳಿಗೆ ಒಳಗೊಳಗೆ ಏನೋ ಚಿಂತೆ. ಅಮ್ಮನಿಗೆ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಮಗಳಿಗೆ ಅನಿಸಿತು. ಸುಮತಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದಳು. ಮುಖ ಸ್ವಲ್ಪ ಊದಿರುವಂತೆ ಕಾಣಿಸಿತು. ಕಣ್ಣಿನ ಸುತ್ತಲೂ ಸ್ವಲ್ಪ ಬಾತು ಕೊಂಡಂತೆ ಇದೆ. ಕೈಕಾಲು ಸಹ ಸ್ವಲ್ಪ ಊದಿಕೊಂಡಿದೆ. ಆದಷ್ಟು ಬೇಗ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ತೀರ್ಮಾನಿಸಿ.,…. ಅಮ್ಮ ನಾನು ಬೇಗ ಸ್ನಾನ ಮುಗಿಸಿ ಬರುತ್ತೇನೆ…. ಎಂದು ಹೇಳಿ, ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಕರೆದು….”ಬೇಗ ತಿಂಡಿ ಮಾಡಿ, ನಾನು ನನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಬೇಕಿದೆ”…. ಎಂದಳು. ಮಕ್ಕಳು ಸರಿ ಎಂದು ತಲೆ ಆಡಿಸಿ ತಿಂಡಿ ಮಾಡಲು ಅಡುಗೆ ಮನೆಗೆ ಹೋದರು. ಅಡುಗೆಯವರು ಊರಿಗೆ ಹೋಗಿದ್ದ ಕಾರಣ ಸದ್ಯಕ್ಕೆ ಮಕ್ಕಳೇ ತಿಂಡಿ ಮಧ್ಯಾಹ್ನಕ್ಕೆ ಅಡುಗೆ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಸುಮತಿ ಮಗಳು ಸಹಾಯ ಕೂಡ ಸಹಾಯ ಮಾಡುತ್ತಿದ್ದಳು. ಮನಸ್ಸಿನಲ್ಲಿ ಸ್ವಲ್ಪ ಆತಂಕವನ್ನು ತುಂಬಿಕೊಂಡೇ ಮಗಳು ಬೇಗನೆ ಸ್ನಾನ ಮುಗಿಸಿದಳು. ಅನಾಥಾಶ್ರಮದ ಮಕ್ಕಳು ತಾಯಿ ಮಗಳು ಇಬ್ಬರಿಗೂ ಚಪಾತಿ ಟೊಮೇಟೊ ಚಟ್ನಿ ಮಾಡಿ ತಿನ್ನಲು ಕೊಟ್ಟರು. ಸುಮತಿಗೆ ಹೆಚ್ಚು ನಡೆಯಲು ಸಾಧ್ಯವಿಲ್ಲ ಎಂದು ಮಗಳಿಗೆ ಅನಿಸಿತು. ಅನಾಥಾಶ್ರಮದ ಹುಡುಗನೊಬ್ಬನನ್ನು ಕರೆದು ದಾರಿಯಲ್ಲಿ ಹೋಗುವ ಯಾವುದಾದರೂ ಆಟೋರಿಕ್ಷಾವನ್ನು ನಿಲ್ಲಿಸಿ ಅನಾಥಾಶ್ರಮ ಅಂಗಳಕ್ಕೆ ಕರೆದುಕೊಂಡು ಬರುವಂತೆ ಹೇಳಿದಳು. ಸ್ವಲ್ಪ ಹೊತ್ತಿನಲ್ಲೇ ಆಟೋ ಬಂದಿತು. ತಾಯಿಯನ್ನು ಕರೆದುಕೊಂಡು ಮಗಳು ಆಟೋ ಹತ್ತಿದಳು. ದೊಡ್ಡ ಮಕ್ಕಳನ್ನು ಉದ್ದೇಶಿಸಿ…. “ಎಲ್ಲರಿಗೂ ತಿಂಡಿಯನ್ನು ಕೊಟ್ಟು ರೆಡಿಯಾಗಿ, ಬಾಗಿಲಿಗೆ ಬೀಗ ಹಾಕಿಕೊಂಡು ಹತ್ತಿರದಲ್ಲಿರುವ ಡಮ್ ಅಂಡ್ ಢಫ್ ಶಾಲೆಯ ಮೇಲ್ವಿಚಾರಕರ ಕೈಲಿ ಕೀಲಿಯನ್ನು ಕೊಟ್ಟು ಶಾಲೆಗೆ ಹೋಗಿ”…. ಎಂದು ತಿಳಿಸಿದಳು. ಹತ್ತಿರದಲ್ಲಿಯೇ ಸಕಲೇಶಪುರದ ಸರ್ಕಾರಿ ಆಸ್ಪತ್ರೆ ಇದ್ದ ಕಾರಣ ಆಟೋ ಬೇಗನೆ ಆಸ್ಪತ್ರೆಯನ್ನು ತಲುಪಿತು. ಸುಮತಿಯನ್ನು ಆಟೋದಿಂದ ನಿಧಾನವಾಗಿ ಇಳಿಸಿ, ಆಸ್ಪತ್ರೆಯ ವರಾಂಡದ ಬೆಂಚಿನ ಮೇಲೆ ಕುಳ್ಳಿರಿಸಿ, ಕಂಪೌಂಡರ್ ಹತ್ತಿರ ಹೋಗಿ ಚೀಟಿಯನ್ನು ಬರೆಸಿಕೊಂಡು ಬಂದಳು. ನಂತರ ಸುಮತಿಯ ಕೈ ಹಿಡಿದು ನಿಧಾನವಾಗಿ ನಡೆಸಿಕೊಂಡು ಫಿಜಿಷಿಯನ್ ವೈದ್ಯರ ಕೊಠಡಿಯ ಬಳಿಗೆ ಹೋದಳು. ಅಲ್ಲಿಯೇ ಇದ್ದ ಬೆಂಚಿನ ಮೇಲೆ ಸುಮತಿಗೆ ಕುಳಿತುಕೊಳ್ಳಲು ಹೇಳಿ ಸರತಿಯ ಸಾರಿನಲ್ಲಿ ತಾನು ನಿಂತಳು. ಅಟೆಂಡರ್ ಕರೆದಾಗ ತಾಯಿಯನ್ನು ನಿಧಾನವಾಗಿ ಎಬ್ಬಿಸಿ ಒಳಗೆ ಕರೆದುಕೊಂಡು ಹೋದಳು. ಸುಮತಿಯನ್ನು ಕಂಡ ಕೂಡಲೇ ವೈದ್ಯರು…. “ಏನು ಸುಮತಿಯವರೇ ಹೇಗಿದ್ದೀರಾ?… ಎಂದು ಕೇಳಿದರು. ಸುಮತಿ ವೈದ್ಯರ ಮುಖವನ್ನು ನೋಡಿದಳು. ಅವಳಿಗೆ ವೈದ್ಯರ ಮುಖ ಅಸ್ಪಷ್ಟವಾಗಿ ಕಾಣಿಸಿತು. ಕನ್ನಡಕವನ್ನು ತೆಗೆದು ಸೀರೆಯ ಸರಗಿನಿಂದ ಒರಸಿಕೊಂಡು ಪುನಃ ಹಾಕಿಕೊಂಡಳು… “ಸರ್ ಕೆಲವು ದಿನಗಳಿಂದ ನನ್ನ ಆರೋಗ್ಯ ಸರಿ ಇಲ್ಲ…. ತುಂಬಾ ಆಯಾಸವಾಗುತ್ತಿದೆ… ಏನನ್ನೂ ತಿನ್ನಲು ಸಾಧ್ಯವಾಗುತ್ತಿಲ್ಲ…. ಆಹಾರವನ್ನು ತಿಂದರೆ, ನೀರು ಕುಡಿದರೆ ವಾಂತಿ ಬರುವ ಹಾಗೆ ಆಗುತ್ತಿದೆ”…. ಎಂದಳು. ಸುಮತಿಯನ್ನು ಪರಿಶೀಲಿಸಿದ ವೈದ್ಯರು ಮಗಳನ್ನು ನೋಡುತ್ತಾ…. “ನಾನು ಕೆಲವು ರಕ್ತ ಪರೀಕ್ಷೆ ಹಾಗೂ ಎಕ್ಸರೇ ಪರೀಕ್ಷೆಗೆ ಈ ಚೀಟಿಯಲ್ಲಿ ಬರೆದು ಕೊಡುತ್ತೇನೆ…. ಅಮ್ಮನನ್ನು ಕರೆದುಕೊಂಡು ಹೋಗಿ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಅವುಗಳ ವರದಿಯನ್ನು ತಂದು ನನಗೆ ತೋರಿಸಮ್ಮ”….. ಎಂದು ಹೇಳಿದರು. ಮಗಳು…”ಸರಿ ಸರ್”…. ಎಂದು ಹೇಳುತ್ತಾ ಸುಮತಿಯ ಕೈ ಹಿಡಿದುಕೊಂಡು ನಿಧಾನವಾಗಿ ನಡೆಸಿಕೊಂಡು ರಕ್ತ ಪರೀಕ್ಷೆ ಕೇಂದ್ರದ ಬಳಿಗೆ ಕರೆದುಕೊಂಡು ಹೋದಳು. ರಕ್ತ ಪರೀಕ್ಷೆ ಮಾಡಿಸಿದ ನಂತರ ಎಕ್ಸರೇ ಪರೀಕ್ಷೆ ಮಾಡುವಲ್ಲಿಗೆ ಕರೆದುಕೊಂಡು ಹೋದಳು. ಎಕ್ಸರೇ ಪರೀಕ್ಷಿಸುವಾತ ಎಕ್ಸರೇ ಯಂತ್ರದ ಮುಂದೆ ಸುಮತಿಯನ್ನು ನಿಲ್ಲಿಸಿ, ಪರೀಕ್ಷೆ ಮಾಡಲು ಪ್ರಾರಂಭಿಸಿದರು…. “ಅಮ್ಮಾ ನೀವು ಸೀರೆಯ ಸೆರಗಲ್ಲಿ ಏನನ್ನು ಇಟ್ಟುಕೊಂಡಿದ್ದೀರಿ?…. ಅದನ್ನು ಮಗಳ ಕೈಗೆ ಕೊಡಿ”…. ಎಂದರು. ಆತನ ಮಾತನ್ನು ಕೇಳಿ ಸುಮತಿ…” ಸರ್ ನನ್ನ ಕೈಲಿ ಏನೂ ಇಲ್ಲ”… ಎಂದಳು. ಎಕ್ಸರೇ ಪರೀಕ್ಷಿಸುವಾತ ಸಂಶಯ ಬಂದು ಮತ್ತೆ ಪರೀಕ್ಷಿಸಿದನು. ಏಕೆ ಏನೋ ಅಡ್ಡ ಇರುವಂತೆ ಕಾಣಿಸುತ್ತಿದೆಯಲ್ಲಾ ಎಂದುಕೊಳ್ಳುತ್ತಾ ಮತ್ತೆ ಮತ್ತೆ ಪರೀಕ್ಷಿಸಿದನು. ಎಕ್ಸರೇ ಪರೀಕ್ಷೆ ಮುಗಿದ ನಂತರ ಸ್ವಲ್ಪ ಹೊತ್ತು ಅಲ್ಲಿಯೇ ಹೊರಗೆ ಕಾದು ಕುಳಿತುಕೊಳ್ಳಲು ಹೇಳಿದರು. ಎಕ್ಸರೇ ಪರೀಕ್ಷಿಸುವಾತ ಹೇಳಿದ ಮಾತೇ ಮಗಳ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಆತ ಏಕೆ ಹಾಗೆ ಹೇಳಿರಬಹುದು? ಎಂದು ಯೋಚಿಸುತ್ತಾ ತಾಯಿಯ ಕೈ ಮೇಲೆ ಕೈ ಇಟ್ಟು…. ಏನು ಇರೋದಿಲ್ಲ ಅಮ್ಮಾ…. ಎಂದು ಹೇಳಿ, ಆತ ಏಕೆ ಹಾಗೆ ಹೇಳಿರಬಹುದು? ಎಂದು ಆಲೋಚಿಸುತ್ತಾ ಕುಳಿತಳು. ಸ್ವಲ್ಪ ಹೊತ್ತು ಕಾದು ಕುಳಿತ ನಂತರ ಎಕ್ಸರೇ ವರದಿ ಬಂದಿತು. ಆತ ಮಗಳನ್ನು ಒಳಗೆ ಕರೆದು…. “ಆದಷ್ಟು ಬೇಗ ನಿನ್ನ ಅಮ್ಮನ ವರದಿಯನ್ನು ವೈದ್ಯರಿಗೆ ತೋರಿಸು… ಹೆಚ್ಚು ತಡ ಮಾಡಬೇಡ”…. ಎಂದು ಹೇಳಿದರು. ಅವರು ಹೇಳಿದ ಮಾತಿನಿಂದ ಮಗಳಿಗೆ ಆತಂಕವಾಯಿತು. ಎಕ್ಸರೇ ಪರೀಕ್ಷಿಸುವವನ ಮುಖವನ್ನು ನೋಡಿದಳು…. “ನಾನು ಇಲ್ಲಿ ಏನನ್ನು ಹೇಳಲು ಸಾಧ್ಯವಿಲ್ಲ…. ಬೇಗ ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸು ಅವರು ಎಲ್ಲವನ್ನೂ ನಿಮಗೆ ತಿಳಿಸುತ್ತಾರೆ”…. ಎಂದರು. ಅವರು ಹೇಳಿದ ಮಾತನ್ನು ಕೇಳಿ ಆತಂಕದಿಂದಲೇ ತಾಯಿಯ ಕೈಯನ್ನು ಹಿಡಿದು ನಿಧಾನವಾಗಿ ಎಬ್ಬಿಸಿ ವೈದ್ಯರ ಕೊಠಡಿಯ ಬಳಿಗೆ ಕರೆದುಕೊಂಡು ಹೋದಳು. ಅಟೆಂಡರ್ ಕೈಲಿ ವರದಿಯನ್ನು ಕೊಟ್ಟಾಗ ಆತ ಆ ವರದಿಯನ್ನು ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದನು. ಅಟೆಂಡರ್ ಹೊರಗೆ ಬಂದು ತಾಯಿ ಮಗಳು ಇಬ್ಬರನ್ನೂ ವೈದ್ಯರು ಕರೆಯುತ್ತಿದ್ದಾರೆ ಎಂದು ತಿಳಿಸಿದನು. ಇಬ್ಬರೂ ವೈದ್ಯರ ಕೊಠಡಿಯ ಒಳಗೆ ಪ್ರವೇಶಸಿದರು. ಒಳಗೆ ಹೋದಾಗ ವೈದ್ಯರು ಎಕ್ಸರೇ ಫಿಲಂ ಅನ್ನು ಕೂಲಂಕುಶವಾಗಿ ಪರೀಕ್ಷಿಸಿ ನೋಡುತ್ತಿದ್ದರು.ತಾಯಿ ಮತ್ತು ಮಗಳು ಒಳಗೆ ಬಂದಾಗ ಕುಳಿತುಕೊಳ್ಳುವಂತೆ ಹೇಳಿ, ಸುಮತಿಯನ್ನು ಉದ್ದೇಶಿಸಿ…. “ಸುಮತಿ…ಯಾವಾಗನಿಂದ ನಿಮಗೆ ಅಸ್ವಸ್ಥತೆ ಅನಿಸುತ್ತಿತ್ತು? ಎಂದು ಕೇಳಿದರು…. “ಬಹಳ ದಿನಗಳಿಂದ ನನ್ನನ್ನು ಸ್ವಲ್ಪ ಅಸ್ವಸ್ಥತೆ ಕಾಡುತ್ತಿದೆ…. ನಿಮ್ಮ ಸೂಚನೆಯಂತೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದೇನೆ…. ಕೆಲವೊಮ್ಮೆ ಊಟದಲ್ಲಿ ಪಥ್ಯ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ”…. ಎಂದಳು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-114 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ತಳಮಳ ಮಕ್ಕಳಿಗೆ ಊಟವನ್ನು ಬಡಿಸಿ ನಂತರ ತಾನು ತಟ್ಟೆಯಲ್ಲಿ ಅನ್ನ-ಸಾರು, ಹೀರೇಕಾಯಿ ಪಲ್ಯವನ್ನು ಬಡಿಸಿಕೊಂಡು ಅನ್ನಕ್ಕೆ ಸಾರನ್ನು ಹಾಕಿ ಕಲಸಿ ಪಲ್ಯ ಸೇರಿಸಿ ಮೂವರಿಗೂ ಒಂದೊಂದು ತುತ್ತು ತಿನಿಸಿ ತಾನು ಊಟ ಮಾಡಿದಳು. ಅಮ್ಮ ಊಟ ಮಾಡುವ ಮುನ್ನ ಅಮ್ಮನ ಕೈಯಿಂದ ಒಂದೊಂದು ತುತ್ತು ತಿನ್ನುವುದೆಂದರೆ ಮಕ್ಕಳಿಗೆ ಪಂಚಪ್ರಾಣ. ಸುಮತಿ ಮಾಡುತ್ತಿದ್ದ ಅಡುಗೆಯೂ ಅಷ್ಟೇ ರುಚಿಕರವಾಗಿರುತ್ತಿತ್ತು. ಒಮ್ಮೊಮ್ಮೆ ಮನೆಯಲ್ಲಿ ಏನೂ ಇಲ್ಲದಿದ್ದಾಗ ಒಣ ಮೆಣಸಿನಕಾಯಿಯನ್ನು ಕೆಂಡದ ಮೇಲೆ ಹಾಕಿ ಸುಟ್ಟು ಈರುಳ್ಳಿಯನ್ನು ಸಣ್ಣ ಸಣ್ಣದಾಗಿ ಹೆಚ್ಚಿ ಹುಣಸೆಹಣ್ಣನ್ನು ಸೇರಿಸಿ ಸ್ವಲ್ಪ ಉಪ್ಪು ಹಾಕಿ ಕಿವುಚಿ ಅಮ್ಮ ಮಾಡವ ಗೊಜ್ಜು ಬಹಳ ರುಚಿಕರವಾಗಿರುತ್ತದೆ ಎಂದು ಹೇಳುತ್ತಾ ಮಕ್ಕಳು ಬೆರಳುಗಳನ್ನು ಚಪ್ಪರಿಸಿ ನೆಕ್ಕುತ್ತಾ ಆಸ್ವಾದಿಸುತ್ತಿದ್ದರು. ಊಟದ ನಂತರ ಮಕ್ಕಳು ಚಾಪೆ ಹಾಸಿ ಸುಮತಿಯ ಕೈಯನ್ನು ದಿಂಬಾಗಿಸಿಕೊಂಡು ಮಲಗಿ ಅಮ್ಮ ಹೇಳುವ ಕಥೆಯನ್ನು ಕೇಳುತ್ತಾ ಮಕ್ಕಳು ನಿದ್ರೆಗೆ ಜಾರಿದರು. ಸುಮತಿ ಬೆಳಗ್ಗೆ ಬೇಗನೆ ಎದ್ದು ತಿಂಡಿ ಮಾಡಿದಳು. ಭಾನುವಾರ ಬೆಳಗ್ಗೆ ಸುಮತಿಯ ಜೊತೆ ಮೂವರು ಮಕ್ಕಳು ಶಾಲೆಗೆ ಹೊರಟರು. ಮಕ್ಕಳು ಬಂದರೆ ಸುಮತಿಗೆ ಸ್ವಲ್ಪ ನಿರಾಳವಾಗಿರುತ್ತಿತ್ತು. ತೋಟದ ಕೂಲಿ ಕೆಲಸಗಾರರ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಮಕ್ಕಳು ಅವಳಿಗೆ ನೆರವಾಗುತ್ತಿದ್ದರಿಂದ ಅಷ್ಟು ಆಯಾಸವಾಗುತ್ತಿರಲಿಲ್ಲ. ಶಾಲೆಗೆ ಹೊರಡುವ ಮುನ್ನ ಮಧ್ಯಾಹ್ನದ ಊಟಕ್ಕೆ ಬೇಕಾದ ಬುತ್ತಿ ತುಂಬಿಕೊಳ್ಳುತ್ತಿದ್ದರು. ಅಲ್ಲಿನ ಬಂಗಲೆಯ ಮೇಲ್ವಿಚಾರಕ ಬಂಗಲೆಯ ಸುತ್ತಲಿರುವ ಹಣ್ಣಿನ ಗಿಡಗಳಿಂದ ಹಣ್ಣುಗಳನ್ನು ಕಿತ್ತು ತಂದು ಕೊಡುವರು.. ಆ ಹಣ್ಣುಗಳನ್ನು ಶಾಲೆಯ ಮಕ್ಕಳಿಗೂ ಕೊಟ್ಟು ಸುಮತಿ ಮತ್ತು ಮಕ್ಕಳು ತಿನ್ನುತ್ತಿದ್ದರು.  ಸಂಜೆ ಹೊತ್ತಿಗೆ ಶಾಲೆಯಿಂದ ಹೊರಟು ಮಾತನಾಡುತ್ತಾ ಅಮ್ಮನ ಕೈಹಿಡಿದು ಮಕ್ಕಳು ಜೊತೆಗೆ ನಡೆಯುವರು. ದಾರಿ ಹೋಕರಿಗೆ ಈ ತಾಯಿ ಮಕ್ಕಳ ಬಾಂಧವ್ಯ ಕಂಡು ಸಂತಸವಾಗುತ್ತಿತ್ತು. ಸುಮತಿ ಟೀಚರಿಗೆ ಹಣ ಐಶ್ವರ್ಯ ಇಲ್ಲದಿದ್ದರೇನು, ಮಕ್ಕಳು ಆಕೆಗೆ ನೆರಳಾಗಿ ಇರುವರು ಎಂದು ಹೇಳಿಕೊಳ್ಳುತ್ತಿದ್ದರು. ಮಕ್ಕಳೊಂದಿಗೆ ಮಾತನಾಡುತ್ತಾ ನಡೆದರೆ ಸುಮತಿಗೆ ದಾರಿ ಸಾಗುವುದು ತಿಳಿಯುತ್ತಿರಲಿಲ್ಲ. ಮನೆ ತಲುಪಿದ ಮೇಲೆಯೂ ಮಕ್ಕಳು ಸುಮತಿಯ ಹಿಂದೆ ಮುಂದೆ ಸುಳಿದಾಡುತ್ತಾ ಕೀಟಲೆ ಮಾಡುತ್ತಾ ನಗಿಸುತ್ತಾ ಕಾಲ ಕಳೆಯುವರು. ಮಾರನೇ ದಿನ ಬೇಗನೆ ಎದ್ದು ಮಗಳು ಹೊರಡಲು ಅನುವಾದಳು. ವಾರಕ್ಕೊಮ್ಮೆ ಮಗಳು ಬರುವಾಗ ಎಷ್ಟು ಸಂಭ್ರಮಿಸುತ್ತಿದ್ದಳೋ ಅವಳನ್ನು ಕಳುಹಿಸಿಕೊಡುವಾಗ ಸುಮತಿಗೆ ಅಷ್ಟೇ ಸಂಕಟವಾಗುತ್ತಿತ್ತು. ಹೀಗೆ ಕೆಲವು ತಿಂಗಳುಗಳು ಕಳೆದವು. ಸುಮತಿಗೆ ಈಗ ಮೊದಲಿಗಿಂತ ಆಯಾಸ ಹೆಚ್ಚಾಗುತ್ತಿತ್ತು. ಒಂದು ದಿನ ಸುಮತಿ ಬೆಳಗಿನ ಬಸ್ಸಿನಲ್ಲಿ ಎರಡನೇ ಮಗಳು ಕೆಲಸ ಮಾಡುತ್ತಿದ್ದ ಅನಾಥಾಶ್ರಮದ ಕಡೆಗೆ ಹೊರಟಳು. ಮೂರನೇ ಮಗಳು ಬಸ್ಸು ಹತ್ತಲು ಅಮ್ಮನಿಗೆ ಸಹಾಯ ಮಾಡಿದಳು. ಸುಮತಿಯ ಬದಲಿಗೆ ಶಾಲೆಗೆ ಹೋಗಬೇಕಾಗಿದ್ದ ಕಾರಣ ಅವಳು ತಾಯಿಯೊಂದಿಗೆ ಸಕಲೇಶಪುರಕ್ಕೆ ಹೊರಡಲಿಲ್ಲ. ಒಂದು ದಿನವೂ ಶಾಲೆಯ ಕೆಲಸ ತಪ್ಪಿಸುವಂತೆ ಇರಲಿಲ್ಲ. ತಪ್ಪಿದರೆ ಎಲ್ಲಿ ಕೆಲಸ ಕೈಬಿಟ್ಟು ಹೋಗುವುದೋ ಎನ್ನುವ ಭಯ ಸುಮತಿಯನ್ನು ಸದಾ ಕಾಡುತ್ತಿತ್ತು. ವರಮಾನಕ್ಕೆ ಇದೊಂದೇ ಮಾರ್ಗವಿತ್ತು. ಎರಡನೇ ಮಗಳು ಈಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅವಳಿಗೆ ಸಿಗುವ ಸಂಬಳದಿಂದ ಮನೆಯ ಪೂರ್ತಿ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಧ್ಯವಾಗುತ್ತಿರಲಿಲ್ಲ.  ಅದೂ ಅಲ್ಲದೇ ಇತ್ತೀಚೆಗೆ ಕೆಲವು ತಿಂಗಳುಗಳಿಂದ ತಾನೇ ಅವಳು ಕೆಲಸಕ್ಕೆ ಹೋಗುತ್ತಿರುವುದು. ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾಳೆ. ಹಾಗಾಗಿ ನನ್ನ ಬದಲು ಈ ಮಗಳಾದರೂ ಶಾಲೆಗೆ ಹೋಗಲೇಬೇಕು ಎಂದು ಆಲೋಚಿಸಿ ಮೂರನೇ ಮಗಳನ್ನು ಶಾಲೆಗೆ ಹೋಗುವಂತೆ ತಿಳಿಸಿದಳು. ಸಕಲೇಶಪುರ ನನಗೆ ಗೊತ್ತಿಲ್ಲದ ಊರಲ್ಲ. ಮಗಳು ಕೆಲಸ ಮಾಡುತ್ತಿರುವ ಅನಾಥಾಶ್ರಮ ಹುಡುಕುವುದು ಕಷ್ಟವೇನಲ್ಲ ಎಂದೂ ಮಗಳಿಗೆ ತಿಳಿಸಿದಳು. ಆದರೆ ಸಕಲೇಶಪುರದ ಬಸ್ ನಿಲ್ದಾಣ ಬಂದಾಗ ಬಸ್ಸಿಂದ ಕೆಳಗಿಳಿಯಲು ಸುಮತಿ ಬಹಳ ಕಷ್ಟ ಪಡಬೇಕಾಯಿತು. ಒಂದೊಂದು ಹೆಜ್ಜೆ ಇಡುವುದೂ ಅವಳಿಗೆ ಕಷ್ಟಕರವೆನಿಸುತ್ತಿತ್ತು. ಬಸ್ ನಿಲ್ದಾಣದಿಂದ ಮಗಳು ಇರುವ ಅನಾಥಾಶ್ರಮದ ಬಳಿಗೆ ಹೋಗಲು ಹೆಚ್ಚು ದೂರವೇನೂ ಇರಲಿಲ್ಲ. ಎಂದಿಲ್ಲದ ಇಂದೇಕೋ ಅವಳ ಕಣ್ಣುಗಳಿಗೆ ಎಲ್ಲವೂ ಮಸುಕಾಗಿ ಕಾಣುತ್ತಿತ್ತು. ತಡವರಿಸುತ್ತಾ ಹೇಗೋ ಮಗಳು ವಾಸವಿದ್ದ ಅನಾಥಾಶ್ರಮದ ಬಾಗಿಲ ಮುಂದೆ ಬಂದು ನಿಂತಳು. ತಲೆ ಸುತ್ತು ಬಂದಂತೆ ಅನುಭವವಾಯಿತು. ಅಲ್ಲಿಯೇ ಮೆಟ್ಟಿಲ ಮೇಲೆ ಕುಳಿತಳು. ಸ್ವಲ್ಪ ಸುಧಾರಿಸಿದ ನಂತರ ಮೆಲ್ಲನೆ ಎದ್ದು ಬಾಗಿಲನ್ನು ತಟ್ಟಿದಳು. ಅನಾಥಾಶ್ರಮದ ಮಕ್ಕಳಲ್ಲಿ ಒಬ್ಬ ಹುಡುಗಿ ಬಂದು ಬಾಗಿಲು ತೆರೆದಳು…. ಯಾರು ನೀವು? ಯಾರು ಬೇಕಿತ್ತು ನಿಮಗೆ? ಎಂದು ಕೇಳಿದಳು. ಆ ಹುಡುಗಿಯ ಮುಖ ಸುಮತಿಗೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ತನ್ನ ಮಗಳ ಹೆಸರನ್ನು ಹೇಳಿ…”ಅವರು ಇಲ್ಲಿದ್ದಾರೆಯೇ”…. ಎಂದು ಕೇಳಿದಳು. ಒಳಗೆ ಕುಳಿತು ಆಶ್ರಮಕ್ಕೆ ಬೇಕಾದ ದಿನಸಿಗಳ ಪಟ್ಟಿಯನ್ನು ಮಾಡುತ್ತಿದ್ದ ಸುಮತಿಯ ಎರಡನೇ ಮಗಳು ಅಮ್ಮನ ಧ್ವನಿ ಕೇಳಿದಂತಾಗಿ ಎದ್ದು ಹೊರಗೆ ಬಂದಳು.  ಓಹ್!! ಅಮ್ಮ ಬಂದಿದ್ದಾಳೆ…. ಎಂದು ಹೇಳುತ್ತಾ ಕೋಣೆಯಿಂದ ಹೊರ ಬಂದ ಮಗಳ ಮುಖದಲ್ಲಿ ಮಂದಹಾಸ ಮೂಡಿತು. ಆದರೆ ಮರುಕ್ಷಣವೇ ಅವಳ ಹಣೆಯಲ್ಲಿ ಗೆರೆಗಳು ಮೂಡಿದವು. ಅಮ್ಮ ಏಕೆ ಇಷ್ಟು ಬೆಳಗ್ಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾಳೆ? ನಾನು ಮನೆಗೆ ಹೋಗಿ ಬಂದು ಒಂದೆರಡು ದಿನಗಳಷ್ಟೇ ಆಗಿವೆ ಎಂದುಕೊಳ್ಳುತ್ತಾ ಅಚ್ಚರಿಯಿಂದ ಅಮ್ಮನನ್ನು ಒಮ್ಮೆ ನೋಡಿದಳು. ಓಡು ನಡಿಗೆಯಲ್ಲಿ ಸುಮತಿಯ ಬಳಿ ಬಂದು ಕೈಹಿಡಿದುಕೊಂಡು, … “ನಾನು ಇಲ್ಲೇ ಇರುವುದು…. ಅಮ್ಮ ಒಳಗೆ ಬಾ”…. ಎಂದಳು. ಮಗಳ ಧ್ವನಿ ಕೇಳಿ ಸುಮತಿ ಅವಳೆಡೆಗೆ ನೋಡಿದಳು. ಅವಳ ಮುಖ ಅಸ್ಪಷ್ಟವಾಗಿ ಕಂಡಿತು. ಕಣ್ಣುಗಳು ಹನಿಗೂಡಿದವು. ಮಗಳ ಕೈ ಹಿಡಿದು ತಡವರಿಸುತ್ತಾ ಅನಾಥಾಶ್ರಮದ ಒಳಗೆ ಹೆಜ್ಜೆ ಇಟ್ಟಳು. ಕುತೂಹಲದಿಂದ ಯಾರಿರಬಹುದೆಂದು ನೋಡಲು ಅನಾಥಾಶ್ರಮದ ಮಕ್ಕಳೆಲ್ಲ ಅಲ್ಲಿ ಬಂದು ಸೇರಿದರು….”ಇವರು ನನ್ನ ತಾಯಿ”…. ಎಂದು ಮಕ್ಕಳಿಗೆ ಪರಿಚಯಿಸಿದಳು. ಮಕ್ಕಳೆಲ್ಲರೂ….”ನಮಸ್ತೆ ಅಮ್ಮಾ”….ಎಂದು ಕೈ ಮುಗಿದರು. ಸುಮತಿ ಮುಗುಳ್ನಕ್ಕಳಷ್ಟೇ, ಮಾತನಾಡಲು ಅವಳಿಂದ ಸಾಧ್ಯವಾಗಲಿಲ್ಲ. ಇದನ್ನರಿತ ಮಗಳು ತನ್ನ ಕೋಣೆಯ ಕಡೆಗೆ ಅಮ್ಮನನ್ನು ಕರೆದುಕೊಂಡು ಹೋದಳು. ಸುಮತಿಯ ಕೈಗಳು ನಡುಗುತ್ತಿದ್ದವು. ಬಾಯಿ ಒಣಗಿತ್ತು. ಏನೋ ಹೇಳಲು ಮುಂದಾದಳು ಆದರೆ ಧ್ವನಿ ಗಂಟಲಿನಿಂದ ಆಚೆ ಬರಲಿಲ್ಲ. ಅಮ್ಮನ ಈ ಸ್ಥಿತಿಯನ್ನು ಕಂಡು ಮಗಳಿಗೆ ತುಂಬಾ ಗಾಬರಿಯಾಯಿತು. ಮೂರು ಬೆಂಚುಗಳನ್ನು ಸೇರಿಸಿ ಮಂಚದಂತೆ ಮಾಡಿಕೊಂಡಿದ್ದ ಹಾಸಿಯ ಮೇಲೆ ಅಮ್ಮನನ್ನು ಕುಳ್ಳಿರಿಸಿ, ಒಬ್ಬ ಹುಡುಗಿಯನ್ನು ಕರೆದು ಸ್ವಲ್ಪ ನೀರನ್ನು ತರುವಂತೆ ತಿಳಿಸಿದಳು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-113 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಎರಡನೇ ಮಗಳು ತನ್ನ ಬಟ್ಟೆ ಬರೆ ಪುಸ್ತಕಗಳು ಹಾಗೂ ತನಗೆ ಅತ್ಯವಶ್ಯಕವಾಗಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಅನಾಥಾಶ್ರಮಕ್ಕೆ ಹೊರಡಲು ಅನುವಾದಳು. ಸುಮತಿ ಹಾಗೂ ಮೂರನೇ ಮಗಳು ಒಲ್ಲದ ಮನಸ್ಸಿನಿಂದ ಅವಳನ್ನು ಬೀಳ್ಕೊಟ್ಟರು.  ಏಕೋ ಮಗಳನ್ನು ಬೀಳ್ಕೊಡುವಾಗ ಸುಮತಿಯ ಮನಸ್ಸು ಬಹಳ ಭಾರವಾಯಿತು. ಏನೋ ಅವ್ಯಕ್ತವಾದ ನೋವೊಂದು ಅವಳ ಹೃದಯವನ್ನು ಹಿಂಡಿತು….”ವಾರಕ್ಕೊಮ್ಮೆ ನಾನು ಬರುತ್ತೇನೆಲ್ಲವೇ ಅಮ್ಮಾ …. ವಾರದಲ್ಲಿ ಒಂದು ದಿನ ನಿಮ್ಮ ಜೊತೆ ಕಳೆಯುತ್ತೇನೆ….ದಯವಿಟ್ಟು ನೊಂದುಕೊಳ್ಳದೆ ನಸುನಗುತ್ತಾ ನನ್ನನ್ನು ಕಳುಹಿಸಿ ಕೊಡು”…. ಎಂದು ಮಗಳು ಹೇಳಿದಾಗ, ಅವಳನ್ನು ಅಪ್ಪಿ, ಹಣೆಗೊಂದು ಹೂಮುತ್ತನ್ನು ಕೊಟ್ಟಳು. ತಂಗಿಯು ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಸ್ವಲ್ಪ ಹೊತ್ತು ಹಾಗೇ ನಿಂತು ಬಿಟ್ಟಳು. ಗೇಟಿನ ಬಳಿ ಡ್ರೈವರ್ ಬಂದು….”ಬಾ ಮಗು ಹೊರಡೋಣ”…. ಅಮ್ಮ ಅಲ್ಲಿ ಕಾಯುತ್ತಿದ್ದಾರೆ… ಎಂದು ಹೇಳಲು, ಮಗಳು ಅವರ ಜೊತೆ ಹೊರಟಳು. ಮೆಟ್ಟಿಲುಗಳನ್ನು ಏರುತ್ತಾ ಅಮ್ಮನನ್ನು, ತಂಗಿಯನ್ನು ನೋಡಿ ಕೈಬೀಸಿದಳು. ಮಗಳು ಹೊರಟು ಹೋದ ನಂತರ ಸುಮತಿ ಮನೆ ಒಳಗೆ ಬಂದು ಕೆಲವು ನಿಮಿಷಗಳ ಕಾಲ ಸುಮ್ಮನೆ ಕುಳಿತುಬಿಟ್ಟಳು. ಮೂರನೇ ಮಗಳು ಸುಮತಿಯ ಪಕ್ಕ ಬಂದು ಕುಳಿತು ಹೆಗಲ ಮೇಲೆ ಕೈ ಇಟ್ಟು ತಾಯಿಗೆ ಸಮಾಧಾನ ಮಾಡುವಂತೆ ಹೆಗಲನ್ನು ತಟ್ಟಿದಳು. ದಿನಗಳು ಉರುಳಿದವು. ನಾಲ್ಕನೇ ಮಗಳು ಬೇಸಿಗೆ ರಜೆಯಲ್ಲಿ ಮನೆಗೆ ಬಂದಳು.  ಅವಳು ಬಂದ ಮೇಲೆ ಮೂರನೇ ಮಗಳು ಲವಲವಿಕೆಯಿಂದ ಇರುವಂತೆ ಆಯ್ತು. ಸುಮತಿಯ ಜೊತೆ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಶಾಲೆಯ ಕೆಲಸದಲ್ಲಿ ಮತ್ತು ಮನೆಯ ಕೆಲಸಗಳಲ್ಲಿ ಸುಮತಿಗೆ ಸಹಾಯ ಮಾಡುತ್ತಿದ್ದರು. ಇತ್ತೀಚೆಗೆ ಯಾಕೋ ಸುಮತಿ ಇನ್ನೂ ಹೆಚ್ಚು ಬಳಲಿದಂತೆ ತೋರುತ್ತಿದ್ದಳು. ಶನಿವಾರ ಸಂಜೆಯಾದರೆ ಬಸ್ಸು ಬರುವ ವೇಳೆಗೆ ಮಗಳನ್ನು ಕಾಯುತ್ತಾ ಗೇಟಿನ ಬಳಿ ಇರುವ ಕಲ್ಲಿನ ಮೆಟ್ಟಿಲಿನ ಮೇಲೆ ಕುಳಿತುಕೊಳ್ಳುವಳು…. “ಅಮ್ಮಾ….ಅಕ್ಕ ಇಲ್ಲಿಗೇ ಬರುತ್ತಾಳಲ್ಲವೇ?…. ಮತ್ತೇಕೆ ನೀನು ಅಲ್ಲಿ ಗೇಟಿನ ಬಳಿ ಕುಳಿತಿರುವೆ…. ಬಾ ಒಳಗೆ”…. ಎಂದರೂ ಕೇಳದೇ ಸಂಜೆಯ ಬಸ್ಸು ಬರುವುದನ್ನೇ ಕಾಯುತ್ತಾ ಕುಳಿತುಕೊಳ್ಳುವಳು. ಬಸ್ಸು ಬರುವುದು ಕೊಂಚ ತಡವಾದರೂ ಚಡಪಡಿಸುವಳು. ಎಷ್ಟು ಬೇಗ ಮಗಳನ್ನು ನೋಡುವೆನೋ ಎನ್ನುವ ಕಾತರದಲ್ಲಿ ಅವಳ ಕಣ್ಣುಗಳು ಕಾಯುತ್ತಿದ್ದವು. ಬಸ್ಸು ಬಂದು ನಿಂತ ಕೂಡಲೇ ಎದ್ದು ನಿಂತು ಜನರು ಇಳಿಯುದನ್ನೇ ನೋಡುತ್ತಾ, ಮಗಳು ಇಳಿದು ಬಂದ ಕೂಡಲೇ ಅವಳನ್ನು ಅಪ್ಪಿಕೊಂಡು ಅವಳೊಂದಿಗೆ ನಿಧಾನವಾಗಿ ಮೆಟ್ಟಿಲು ಇಳಿಯುವಳು. ಅಕ್ಕ ಬಂದಿದ್ದು ತಿಳಿದುಕೊಡಲೆ ತಂಗಿಯರು ಒಳಗಿನಿಂದ ಓಡೋಡಿ ಬಂದು ಖುಷಿಯಿಂದ ಅಕ್ಕನನ್ನು ಅಪ್ಪಿಕೊಳ್ಳುತ್ತಿದ್ದರು. ಅವಳು ಸಕಲೇಶಪುರದಿಂದ ಬರುವಾಗ ತಂಗಿಯರಿಗಾಗಿ ತಿಂಡಿ ಮತ್ತು ಅಮ್ಮನಿಗೆ ಹಣ್ಣುಗಳನ್ನು ತರುವಳು. ಅವಳು ಬಂದಳೆಂದರೆ ಮನೆಯಲ್ಲಿ ಹಬ್ಬದಂತೆ ಸಂಭ್ರಮ ಪಡುವರು.  ರಾತ್ರಿ ಎಲ್ಲಾ ನಿದ್ರೆ ಮಾಡದೆ ನಾಲ್ವರೂ ಕುಳಿತು ಮಾತನಾಡುವರು. ಅವಳ ಕೆಲಸದ ಬಗ್ಗೆ, ಅವಳ ಓದಿನ ಬಗ್ಗೆ ಕೇಳಿ ತಿಳಿದುಕೊಳ್ಳುವರು. ಇವಳು ಕೂಡ ಎಲ್ಲರ ದಿನಚರಿಗಳನ್ನು ಕೇಳಿ ತಿಳಿದುಕೊಳ್ಳುವಳು. ಅಮ್ಮ ಇತ್ತೀಚೆಗೆ ಕ್ಷೀಣಿಸುತ್ತಿರುವುದನ್ನು ಗಮನಿಸಿ….. ಏಕಮ್ಮಾ… ಏನಾಯ್ತು?… ನಾನು ನಾಡಿದ್ದು ಹೊರಡುವಾಗ ನನ್ನ ಜೊತೆ ಬನ್ನಿ…. ನಾನು ಆಸ್ಪತ್ರೆಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ…. ಎಂದರೆ, ನನಗೇನೂ ಆಗಿಲ್ಲಪ್ಪಾ…. ಸ್ವಲ್ಪ ಆಯಾಸ ಇದೆ ಅಷ್ಟೇ…, ಎಂದಿನಂತೆ ಪಥ್ಯದಲ್ಲಿದ್ದೇನೆ… ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ನನಗೇನಾಗಿದೆ? ನೀವು ಮೂವರೂ ನನ್ನ ಜೊತೆ ಇದ್ದರೆ ಅದೇ ನನಗೆ ಸ್ವರ್ಗ…. ಅದಕ್ಕಿಂತ ಹೆಚ್ಚಿನದು ನನಗೇನು ಬೇಡ…. ಎನ್ನುವಳು ಸುಮತಿ. ಅವಳ ತಂಗಿ….ಹೌದು ಅಕ್ಕ… ಅಮ್ಮ ಈ ನಡುವೆ ಮೊದಲಿನಂತೆ ಲವಲವಿಕೆಯಿಂದ ಇಲ್ಲ….ಯಾಕೋ ತುಂಬಾ ಆಯಾಸವಾದಂತೆ ಕಾಣಿಸುತ್ತಾರೆ…. ಶಾಲೆಗೆ ಹೋಗುವಾಗಲೂ ಅಷ್ಟೇ, ಇಲ್ಲಿಂದ ಅಷ್ಟು ದೂರ ಹೋಗಬೇಕು…. ನಾವು ಅಲ್ಲೇ ಇದ್ದಿದ್ದರೆ ಚೆನ್ನಾಗಿತ್ತು…. ಅಮ್ಮ ಅಷ್ಟೊಂದು ದೂರ ನಡೆದುಕೊಂಡು ಹೋಗಿ ಬರುವುದು ಕಷ್ಟವಾಗುತ್ತಿದೆ… ಅಲ್ಲಿ ಗುಡ್ಡ ಹತ್ತಿ ಬರುವಾಗ ಉಸಿರಾಡಲು ತುಂಬಾ ಕಷ್ಟಪಡುತ್ತಾರೆ…. ಸ್ವಲ್ಪ ಹೊತ್ತು ಅಲ್ಲಿ ದೇವಸ್ಥಾನದ ಆ ಮಾವಿನ ಮರದ ನೆರಳಲ್ಲಿ ಕುಳಿತು ದಣಿವಾರಿಸಿಕೊಂಡು ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾರೆ”…. ಎಂದು ತಂಗಿ ಹೇಳಿದ್ದನ್ನು ಕೇಳಿ ಅವಳ ಮುಖ ಬಾಡಿತು…. ಇನ್ನೂ ಸ್ವಲ್ಪ ದಿನ ಅಷ್ಟೇ… ನನ್ನ ಓದು ಮುಗಿಯಲಿ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸಿಗುತ್ತದೆ…. ಅಮ್ಮನನ್ನು ಕೆಲಸಕ್ಕೆ ಕಳುಹಿಸುವುದು ಬೇಡ….ನಿಮ್ಮೆಲ್ಲರನ್ನು ನಾನು ನೋಡಿಕೊಳ್ಳುತ್ತೇನೆ….. ಎಷ್ಟೊಂದು ವರ್ಷಗಳಿಂದ ಅಮ್ಮ ಕಷ್ಟ ಪಟ್ಟು ದುಡಿದು ನಮ್ಮನ್ನು ಸಾಕುತ್ತಿದ್ದಾರೆ.  ಈಗ ನೀನು ಅಮ್ಮನ ಜೊತೆ ಇರುವುದು ನನಗೆ ದೊಡ್ಡ ಸಮಾಧಾನ…. ಅಮ್ಮನ ಸಹಾಯಕ್ಕೆ ಜೊತೆಗೆ ನೀನಿರುತ್ತೀಯ ಎನ್ನುವ ಧೈರ್ಯ….. ಇನ್ನೂ ಒಂದೆರಡು ವರ್ಷಗಳಷ್ಟೇ…. ನನ್ನ ಡಿಗ್ರಿ ಮುಗಿಯಲಿ….. ಸರ್ಕಾರಿ ಕೆಲಸ ಸಿಗಲಿ ಎಂದು ನಾನು ಕಾಯುವುದಿಲ್ಲ…. ಯಾವುದಾದರೂ ಸಣ್ಣ ಸಂಸ್ಥೆಯಲ್ಲಿ ಕಡಿಮೆ ಸಂಬಳ ಸಿಕ್ಕರೂ ಸೇರಿಕೊಳ್ಳುತ್ತೇನೆ…. ನಂತರ ನೀನು ಕಾಲೇಜಿಗೆ ಹೋಗುವೆಯಂತೆ…. ಕೆಲವು ವರ್ಷಗಳಲ್ಲಿ ನೀನೂ ದುಡಿಯಲು ಪ್ರಾರಂಭಿಸುತ್ತೀಯಾ…. ಆಗ ಅಮ್ಮನಿಗೆ ಸಂಪೂರ್ಣ ವಿಶ್ರಾಂತಿ ಸಿಕ್ಕಂತಾಗುತ್ತದೆ….. ಇವಳೂ ಕೂಡ ನವೋದಯ ಶಾಲೆಯಲ್ಲಿ ಪಿಯುಸಿ ಯವರೆಗೂ ವಿದ್ಯಾಭ್ಯಾಸ ಮುಗಿಸಿ ಬಂದರೆ, ನಂತರ ಇವಳ ಮುಂದಿನ ವಿದ್ಯಾಭ್ಯಾಸಕ್ಕೆ ನಾವಿಬ್ಬರೂ ಇರುತ್ತೇವೆ…. ಎಂದು ಮಗಳು ಹೇಳಿದಾಗ, ಸುಮತಿ ಮೂವರು ಮಕ್ಕಳನ್ನು ಅಪ್ಪಿಕೊಂಡು,….”ನೀವಿರುವಾಗ ನನಗೇನು ಚಿಂತೆ ಮಕ್ಕಳೇ….. ನನ್ನ ಕೈಲಿ ಆಗುವರೆಗೂ ನಾನು ದುಡಿಯುತ್ತೇನೆ…. ನಿಮ್ಮ ಈ ಮಾತುಗಳನ್ನು ಕೇಳಿ ನನ್ನ ಹೃದಯ ಹಗುರವಾಯಿತು…. ಇಷ್ಟು ವರ್ಷ ಕಷ್ಟಪಟ್ಟಿದ್ದು ಸಾಕಾಗಿದೆ…. ನಿಮ್ಮ ಕಾಲದಲ್ಲಾದರೂ ಒಂದಿಷ್ಟು ನೆಮ್ಮದಿಯಿಂದ ಕಳೆಯುವಂತಾದರೆ ಸಾಕು…. ಬನ್ನಿ ಎಲ್ಲರೂ ಊಟ ಮಾಡೋಣ…. ನಿಮಗೆಲ್ಲರಿಗೂ ಇಷ್ಟವಾದ ಅಡುಗೆಯನ್ನು ಮಾಡಿದ್ದೇನೆ”…. ಎಂದು ಹೇಳಿ ಸುಮತಿ ಅಡುಗೆ ಮನೆಯ ಕಡೆ ನಡೆದಳು. ಮೂವರು ಹೆಣ್ಣುಮಕ್ಕಳೂ ಅಮ್ಮನನ್ನು ಹಿಂಬಾಲಿಸಿದರು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-112 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅನಾಥಾಶ್ರಮದ ಕೆಲಸಕ್ಕೆ ಹೊರಟ ಮಗಳು ಬಂಗಲೆಯಿಂದ ಇಬ್ಬರೂ ಮನೆಗೆ ಬಂದ ನಂತರ ಮೂರನೇ ಮಗಳ ಜೊತೆಗೆ ಕುಳಿತು ಅಮ್ಮ ಹೇಳಿದ ವಿಷಯದ ಬಗ್ಗೆ ಚರ್ಚಿಸಿದರು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅನಾಥಾಶ್ರಮದ ಮಕ್ಕಳ ಮೇಲ್ವಿಚಾರಣೆ ನನ್ನ ಮಗಳಿಂದ ಸಾಧ್ಯವೇ? ಕಲಿಸುವ ವಿಷಯದಲ್ಲಿ ಎರಡು ಮಾತಿಲ್ಲ. ಅವಳು ಖಂಡಿತ ಅಲ್ಲಿನ ಮಕ್ಕಳ ಶಾಲೆಯ ಪಠ್ಯ ವಿಷಯಗಳ ಕಲಿಕೆಯ ಸಹಾಯಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ. ಅದರಲ್ಲಿ ನನಗೆ ಸಂಶಯವಿಲ್ಲ. ಆದರೆ ಅಲ್ಲಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಮಕ್ಕಳ ವಿಷಯದಲ್ಲಿ ಕಟ್ಟುನಿಟ್ಟಾಗಿ ಇರಲು ನನ್ನ ಮಗಳು ಸಮರ್ಥಳೇ? ಈ ಚಿಕ್ಕ ಹುಡುಗಿಯ ಮಾತನ್ನು ಅಲ್ಲಿನ ಮಕ್ಕಳು ಅನುಸರಿಸಿಯಾರೇ? ಆ ಮಕ್ಕಳ ನಡುವೆ ಈಕೆಯು ಕೂಡ ಮಕ್ಕಳಂತೆ ಅಲ್ಲವೇ? ಅಲ್ಲಿನ  ಖರ್ಚು- ವೆಚ್ಚ, ಉಳಿತಾಯ ಇತರೆ ವಿಷಯಗಳ ಬಗ್ಗೆ ಇವಳಿಗೆ ಯಾವುದೇ ಅರಿವಿಲ್ಲ. ಅಮ್ಮ ಹೇಳಿದಂತೆ ಅವಳಿಗೆ ಸಹಾಯಕ್ಕಾಗಿ ಅಲ್ಲಿ ಎಲ್ಲರೂ ಇರುತ್ತಾರೆ. ಅವಳು ಕೂಡ ಅಲ್ಲಿ ಇದ್ದುಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಬಹುದು ಎಂದು ಹೇಳಿದ್ದಾರೆ. ಮೂರು ವರ್ಷದ ಪದವಿ ತರಗತಿಯನ್ನು ಮುಗಿಸಿದ ನಂತರ ಅವಳಿಗೆ ಯಾವುದಾದರೂ ಒಳ್ಳೆಯ ಕೆಲಸ ಸಿಗಬಹುದು. ಬಿ ಎಡ್ ತರಬೇತಿ ಪಡೆದು ಹೈ ಸ್ಕೂಲ್ ಶಿಕ್ಷಕಿಯೂ ಆಗಬಹುದು. ಅಲ್ಲದೇ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಟೈಪಿಂಗ್ ಸಹ ಕಲಿತಿದ್ದಾಳೆ. ನಮಗೂ ಈಗ ಹಣದ ಅಗತ್ಯವಿದೆ. ಇವಳಿಗೊಂದು ಒಳ್ಳೆಯ ಕೆಲಸ ಸಿಕ್ಕರೆ ಮುಂದೆ ನಾವು ಒಳ್ಳೆಯ ದಿನಗಳನ್ನು ನೋಡಬಹುದು.  ನನಗೆ ಸಹಾಯ ಮಾಡುವುದಕ್ಕಾಗಿ ನನ್ನ ಮಕ್ಕಳು ಯಾವುದೇ ರೀತಿಯ ಕೆಲಸವನ್ನು ಮಾಡಲು ತಯಾರಿದ್ದಾರೆ. ಹೈಸ್ಕೂಲ್ ಹಂತದಲ್ಲಿರುವಾಗಲೇ ತಮಗೆ ರಜೆ ಇದ್ದಾಗ ಕಾಫಿ ತೋಟಕ್ಕೆ ಹೋಗಿ, ಕಾಫಿ ಹಣ್ಣುಗಳನ್ನು ಕೊಯ್ದು ತಮಗೆ ಸಾಧ್ಯವಾದಷ್ಟು ಹಣವನ್ನು ಗಳಿಸಿ ನನ್ನ ಕೈಲಿಟ್ಟಿದ್ದಾರೆ. ನಾವು ಓದುತ್ತಿರುವ ಮಕ್ಕಳು ಎನ್ನುವ ಅಹಂಭಾವವಿಲ್ಲದೆ ಸೊಂಟಕ್ಕೆ ಗೋಣಿ ಚೀಲವನ್ನು ಕಟ್ಟಿ, ನಾನು ತುಂಬಿಸಿಕೊಟ್ಟ ಊಟದ ಬುತ್ತಿಯನ್ನು ತೆಗೆದುಕೊಂಡು ಹೋಗಿ, ಹಣ್ಣು ಕೊಯ್ಯುವ ಅಭ್ಯಾಸ ಇಲ್ಲದಿದ್ದರೂ ಕೂಲಿ ಕೆಲಸಗಾರರ ಜೊತೆ ಸೇರಿ ಹುಮ್ಮಸ್ಸಿನಿಂದ ನನ್ನ ಮೂವರು ಮಕ್ಕಳೂ ಅವರ ಜೊತೆ ಹಣ್ಣುಗಳನ್ನು ಕೊಯ್ದು ದೊಡ್ಡ ಚೀಲದಲ್ಲಿ ತುಂಬಿಸಿ ಟ್ರ್ಯಾಕ್ಟರ್ ಗೆ ಹಾಕಿ, ಕಾಫಿ ಕಣದಲ್ಲಿ ಅವರ ಚೀಲಗಳನ್ನು ಗುರುತಿಸಿ ತೆಗೆದು ಅದನ್ನು ತೂಕ ಹಾಕಿಸಿ, ಪಲ್ಪರ್ ಮಾಡುವಲ್ಲಿಗೆ ತೆಗೆದುಕೊಂಡು ಹೋಗಿ ಕೊಟ್ಟು ಸಂಬಳವನ್ನು ಪಡೆದು ಖುಷಿಯಿಂದ ತಮ್ಮ ಸಂಪಾದನೆಯನ್ನು…. ‘ಅಮ್ಮಾ…..ನೋಡು…. ನಾವೆಷ್ಟು ಸಂಪಾದನೆ ಮಾಡಿದ್ದೇವೆ…. ಎಂದು ಕಣ್ಣರಳಿಸಿ ಸಂತೋಷದಿಂದ ನನ್ನ ಕೈಲಿಟ್ಟಿದ್ದಾರೆ….. ಒಂದು ಬಿಡಿಗಾಸನ್ನು ಕೂಡಾ ನಮಗಾಗಿ ಕೊಡಿ ಎಂದು ಆ ಮಕ್ಕಳು ಕೇಳಿಲ್ಲ….”ಬೇಡ ಮಕ್ಕಳೇ ನಿಮಗಿದು ಅಭ್ಯಾಸವಿಲ್ಲದ ಕೆಲಸ…. ನೀವಿನ್ನೂ ಚಿಕ್ಕವರು…..ತೋಟದ ಗಿಡಗಳ ನಡುವೆ ಇಳಿಜಾರಿನಲ್ಲಿ ಕೂಡ ಇಳಿದು ಹಣ್ಣುಗಳನ್ನು ಕೊಯ್ಯಬೇಕು…. ನಿಮ್ಮಿಂದ ಇದು ಸಾಧ್ಯವಾಗದು…. ಎಂದು ನಾನು ಹೇಳಿದಾಗ…. ಏನು ಆಗೋದಿಲ್ಲ ಅಮ್ಮಾ… ಅಲ್ಲಿ ಕೆಲಸ ಮಾಡುವ ಕೆಲಸಗಾರರು ನಮಗೆ ಪರಿಚಿತರಲ್ಲವೇ?…. ರೈಟರ್ ಕೂಡ ಹೇಗೆ ಹಣ್ಣುಗಳನ್ನು ಕೊಯ್ಯಬೇಕೆಂದು ನಮಗೆ ತಿಳಿಸುತ್ತಾರೆ”…. ಎಂದು ಹೇಳಿ ನನ್ನ ಸಮ್ಮತಿಯನ್ನು ಪಡೆದುಕೊಂಡು ಹಣ್ಣು ಕೊಯ್ಯುವ ಕೆಲಸಕ್ಕೆ ಕೂಡ ಹೋಗಿದ್ದಾರೆ. ಆದರೆ ಅನಾಥಾಶ್ರಮದ ಕೆಲಸ ಹೆಚ್ಚು ಜವಾಬ್ದಾರಿಯುತವಾದದ್ದು. ಇದನ್ನು ನಿಭಾಯಿಸಲು ನನ್ನ ಈ ಮಗಳ ಕೈಲಿ ಸಾಧ್ಯವೇ? ಇವಳಿಂದೇನಾದರೂ ಪ್ರಮಾದವಾದರೆ ಕಷ್ಟವಲ್ಲವೇ? ನಾನು ‘ಹೂಂ’ ಅಂದರೆ ಇವಳು ಖಂಡಿತ ಈ ಕೆಲಸಕ್ಕೆ ಹೋಗುತ್ತಾಳೆ. ನೋಡೋಣ ಅವಳ ತೀರ್ಮಾನ ಏನೆಂದು ಎಂದು ಯೋಚಿಸುತ್ತಾ…. ಮಗಳೇ, ನೀನು ಅಮ್ಮ ಹೇಳಿದ ಈ ಕೆಲಸವನ್ನು ಮಾಡಬಲ್ಲೆಯೇ? ನಿನ್ನಿಂದ ಇದು ಸಾಧ್ಯವೇ? ಎಂದು ಸುಮತಿ ಕೇಳಿದಾಗ…. ಅಮ್ಮಾ …ಸ್ವಲ್ಪ ದಿನ ಹೋಗಿ ಅಲ್ಲಿ ಇದ್ದು ಕೆಲಸ ಮಾಡಿ ನೋಡುತ್ತೇನೆ…. ಸಾಧ್ಯವಾದರೆ ಮುಂದುವರೆಸುತ್ತೇನೆ… ಇಲ್ಲದಿದ್ದರೆ ಆ ಕೆಲಸವನ್ನು ಬಿಟ್ಟು ಬಂದು ಇಲ್ಲಿ ನಿನ್ನ ಜೊತೆ ಇರುತ್ತೇನೆ….. ನನ್ನ ಡಿಗ್ರಿ ಮುಗಿದ ಕೂಡಲೇ ಯಾವುದಾದರೂ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಸೇರಿಕೊಂಡು ನಿನ್ನ ಜವಾಬ್ದಾರಿಯನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎನ್ನುವ ಹಂಬಲ ನನಗೆ ಇದೆ ಅಮ್ಮ…. ನಾನು ಅನಾಥಾಶ್ರಮಕ್ಕೆ ಹೋಗುತ್ತೇನೆ …. ಹೇಗಿದ್ದರೂ ಅದು ನಾನು ಕಳೆದ ಪರಿಸರವಲ್ಲವೇ? ವಾರಕ್ಕೊಮ್ಮೆ ಬಂದು ನಿನ್ನನ್ನು ನೋಡಬಹುದಲ್ಲವೇ?…. ಎಂದಾಗ ಸುಮತಿ ಮಗಳನ್ನು ಅಪ್ಪಿಕೊಂಡಳು. ಅವಳ ಕಣ್ಣುಗಳು ತುಂಬಿ ಬಂತು. ಈ ಮಗಳು ನನ್ನ ಜೊತೆ ಇದ್ದಿದ್ದೇ ಕಡಿಮೆ. ಇವಳಿಗೆ ನಾಲ್ಕುವರೆ ವರ್ಷವಿದ್ದಾಗ ಅನಾಥಾಶ್ರಮಕ್ಕೆ ಸೇರಿದ ಹುಡುಗಿ, ಎಂಟನೇ ತರಗತಿಯಿಂದ 10ನೇ ತರಗತಿವರೆಗೂ ನನ್ನ ಹಿರಿಯ ಮಗಳ ಮನೆಯಲ್ಲಿದ್ದಳು. ಈಗ ಒಂದೆರಡು ವರ್ಷದಿಂದ ನನ್ನ ಜೊತೆ ಇದ್ದಾಳಷ್ಟೇ…. ಹೆಣ್ಣು ಮಕ್ಕಳು ಹೇಗಿದ್ದರೂ ಮುಂದೆಯಾದರೂ ನನ್ನನ್ನಗಲಿ ಇನ್ನೊಬ್ಬರ ಮನೆಗೆ ಹೋಗಬೇಕಾದವರೇ…. ಆದರೆ ಅಲ್ಲಿಯವರೆಗೂ ನನ್ನ ಜೊತೆಗಿರುವ ಅದೃಷ್ಟವಿಲ್ಲವೇ ದೇವರೇ?…. ಮಗಳ ಜೊತೆ ಇದ್ದು ಆಸೆ ಪೂರೈಸಿಲ್ಲ…. ಇಷ್ಟು ಬೇಗ ಮತ್ತೊಮ್ಮೆ ಅಗಲಿಕೆಯೇ? ಎಂದು ತನ್ನಲ್ಲೇ ಸ್ವಗತ ಹೇಳಿಕೊಂಡಳು. ತನ್ನ ಮಗಳನ್ನು ಅನಾಥಾಶ್ರಮದಲ್ಲಿ ಕೆಲಸಕ್ಕೆ ಕಳುಹಿಸದೆ ಬೇರೆ ದಾರಿ ಇರಲಿಲ್ಲ. ಅಕ್ಕನ ತೀರ್ಮಾನ ಕೇಳಿದಾಗ ತಂಗಿಗೆ ಬಹಳ ದುಃಖವಾಯಿತು. ಏಕೆಂದರೆ ಅಕ್ಕ ಎಂದರೆ ಅವಳಿಗೆ ಬಹಳ ಪ್ರೀತಿ. ಅಕ್ಕನ ಜೊತೆ ಕಾಲ ಕಳೆಯುವುದೆಂದರೆ ಅವಳಿಗೆ ಎಲ್ಲಿಲ್ಲದ ಸಂತೋಷ. ಅಕ್ಕನ ಜೊತೆ ಕಳೆದ ಕ್ಷಣಗಳು ಅವಳ ಅತ್ಯಂತ ಸಂತೋಷದ ಸಮಯವಾಗಿದ್ದವು. ಕೊನೆಯ ತಂಗಿಯು ಜೊತೆಯಲ್ಲಿಲ್ಲ ಅವಳು ದೂರದ ನವೋದಯ ಶಾಲೆಯಲ್ಲಿ ಓದುತ್ತಿರುವಳು. ವಾರ್ಷಿಕ ರಜೆ ಇದ್ದಾಗ ಮಾತ್ರ ಮನೆಗೆ ಬರುವಳು. ಈಗ ಅಕ್ಕ ಅನಾಥಾಶ್ರಮದ ಮೇಲ್ವಿಚಾರಕಿ ಹಾಗೂ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾಳೆ. ತಾಯಿಯ ಜೊತೆ ಇರುವುದೆಂದರೆ ಅವಳಿಗೆ ಸಂತೋಷದ ವಿಚಾರವೇ, ಆದರೂ ಸಣ್ಣ ವಯಸ್ಸಿನಿಂದ ಅಕ್ಕನ ಜೊತೆ ಅಕ್ಕನ ಪ್ರೀತಿಯಲ್ಲಿ ಕಳೆದ ಅವಳಿಗೆ ಈಗ ಅವಳು ಮತ್ತೆ ದೂರ ಹೋಗುತ್ತೇನೆ ಎಂದಾಗ ಸಂಕಟವಾಯಿತು. ಆದರೂ ಅವಳಿಗೂ ತಮ್ಮ ಮನೆಯ ಪರಿಸ್ಥಿತಿಯ ಅರಿವಿದ್ದ ಕಾರಣ ಏನೂ ಮಾತನಾಡದೆ ಸಮ್ಮತಿ ಸೂಚಿಸಿದಳು. ಸುಮತಿ ಬಂಗಲೆಗೆ ಹೋಗಿ ಅಮ್ಮನನ್ನು ಭೇಟಿ ಮಾಡಿ, ನನ್ನ ಮಗಳು ಅನಾಥಾಶ್ರಮದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದಾಳೆ ಎನ್ನುವ ವಿಚಾರವನ್ನು ಅಮ್ಮನಿಗೆ ತಿಳಿಸಿದಳು. ವಿಷಯ ತಿಳಿದು ಅಮ್ಮನಿಗೆ ಸಂತೋಷವಾಯಿತು. ಶಾಲೆ ಪ್ರಾರಂಭವಾಗುವ ಮೊದಲೇ ಆದಷ್ಟು ಬೇಗ ಮುಂದಿನ ವಾರವೇ ಅಲ್ಲಿಗೆ ಹೋಗುವ ತಯಾರಿಯನ್ನು ಮಾಡಿಕೊಳ್ಳಲು ಮಗಳಿಗೆ ತಿಳಿಸಲು ಅಮ್ಮ ಸುಮತಿಗೆ ಹೇಳಿದರು.

Read Post »

You cannot copy content of this page

Scroll to Top