ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೀಣಾ-ವಾಣಿ

“ಬದುಕಿನ ಬಣ್ಣಗಳ ಅರಿವು” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಬದುಕಿನ ಬಣ್ಣಗಳ ಅರಿವು” ಸದಾ ಕಾಲೇಜು, ಸ್ನೇಹಿತರು, ಪ್ರೀತಿಸಿದ ಹುಡುಗಿ ಎಂದು ಬಿಂದಾಸ್ ಆಗಿ ಓಡಾಡುತ್ತಿದ್ದ ಮೊಮ್ಮಗನನ್ನು ಕಂಡು ಆತನ ಅಜ್ಜಿ ತಾತನಿಗೆ ತುಸು ಹೆಚ್ಚೇ ಬೇಸರವಾಗಿತ್ತು. ಅವರ ಏಕೈಕ ಪುತ್ರ ಮತ್ತು ಸೊಸೆ ಅಪಘಾತದಲ್ಲಿ ತೀರಿಹೋದ ಮೇಲೆ ಇರುವ ಒಬ್ಬ ಮೊಮ್ಮಗನನ್ನು ಅತ್ಯಂತ ಪ್ರೀತಿಯಿಂದ ಜೋಪಾನ ಮಾಡುತ್ತಿದ್ದ ಅವರು ತಮ್ಮ ವೃದ್ಧಾಪ್ಯವನ್ನು ಸಂಪೂರ್ಣವಾಗಿ ಆತನನ್ನು ಬೆಳೆಸುವುದರಲ್ಲಿ ಕಳೆದಿದ್ದರು. ಒಳ್ಳೆಯ ಅಂಕಗಳನ್ನು ಗಳಿಸುವಲ್ಲಿ ಅವನೇನು ಹಿಂದೆ ಬಿದ್ದಿರಲಿಲ್ಲ, ನಿಜ ಆದರೆ ಕಾಲೇಜು ಕಟ್ಟೆ ಹತ್ತಿದ ಮೇಲೆ ಸದಾ ಸ್ನೇಹಿತರ ಹಿಂಡಿನೊಂದಿಗೆ ಅಲೆಯುತ್ತಿದ್ದ ಆತ ಮನೆಗೆ ಬರುವುದು ರಾತ್ರಿ ಮಲಗಲು ಮಾತ್ರ ಎಂಬಂತೆ ಆಗಿದ್ದು ಸದಾ ಆತನ ನಿರೀಕ್ಷೆಯಲ್ಲಿ ಇರುತ್ತಿದ್ದ ಅಜ್ಜಿ ತಾತನಿಗೆ ಇದರಿಂದ ಬೇಸರವಾಗಿತ್ತು. ತಮ್ಮ ಜೀವಿತದ ಬಹುಕಾಲವನ್ನು ಮೊಮ್ಮಗನ ಹಿಂದೆ ಮುಂದೆ ಓಡಾಡಿ ಆತನಿಗೆ ತಾಯಿ, ತಂದೆ ಇಲ್ಲದ ನೋವು ಬಾರದಂತೆ ಸಾಕಿ ಸಲಹಿದ ಅವರಿಗೆ ಇದೀಗ ಮೊಮ್ಮಗ ತಮ್ಮನ್ನು ಕಡೆಗಣಿಸುತ್ತಿದ್ದಾನೆ ಎಂಬ ಭಾವ. ಅದು ಎರಡನೇ ಪಿಯುಸಿಯ ಕಾಲ. ಕಳೆದ ವರ್ಷ ಅತ್ಯಂತ ಕಡಿಮೆ ಅಂಕಗಳನ್ನು ತೆಗೆದುಕೊಂಡು ಜಸ್ಟ್ ಪಾಸ್ ಆಗಿದ್ದ ಆತನಿಗೆ ಆ ದಿನ ಅಜ್ಜಿ ಮನೆಯಲ್ಲಿಯೇ ಇರಲು ಹೇಳಿದ್ದರು. ಐದು ನಿಮಿಷದಲ್ಲಿ ಬರುತ್ತೇನೆ ಎಂದು ಹೋದವನು ಸ್ನೇಹಿತರ ಜೊತೆಯಲ್ಲಿ ಸಿನಿಮಾ ನೋಡಿ ಹೋಟೆಲಿನಲ್ಲಿ ತಿಂದು ಮನೆಗೆ ಬಂದಾಗ ಸಂಜೆಯ ಆರು ಗಂಟೆ ಆಗಿತ್ತು. ಮನೆಯ ಕರೆ ಗಂಟೆಯನ್ನು ಆತ ಒತ್ತಿದ ಕೂಡಲೇ ಅಜ್ಜ ಬಾಗಿಲು ತೆರೆದರು. ಇನ್ನೇನು ಆತ ಒಳಗೆ ಬರಬೇಕು ಎನ್ನುವಷ್ಟರಲ್ಲಿ ಅಜ್ಜಿ ಬಾಗಿಲಿಗೆ ಅಡ್ಡಲಾಗಿ ನಿಂತು “ಈ ಮನೆಯಲ್ಲಿ ಇನ್ನು ನಿನಗೆ ಜಾಗವಿಲ್ಲ, ಹೊರಟು ಹೋಗು” ಎಂದು ಹೇಳಿದರು. ಅಜ್ಜಿಯ ಮಾತುಗಳು ಅರ್ಥವಾದರೂ ಏನೂ ತೋಚದೆ ಆತ ಕಕ್ಕಾಬಿಕ್ಕಿಯಾಗಿ ನಿಂತಿರುವುದನ್ನು ನೋಡಿದ ಅಜ್ಜ ಅಜ್ಜಿಯ ಹೆಗಲ ಮೇಲೆ ಕೈ ಇಟ್ಟು ಆಕೆಗೆ ಸಮಾಧಾನ ಮಾಡಲು ನೋಡಿದರು. ಕೂಡಲೇ ಪತಿಯ ಕೈಯನ್ನು ಕೊಸರಿದ ಆಕೆ ಹಿಂದೆ ಸರಿದು ಆತನಿಗೆ ಈ ಮನೆಯಲ್ಲಿ ಜಾಗ ಇಲ್ಲ…..ಇದೇ ಕೊನೆಯ ಮಾತು ಎಂದು ಹೇಳಿ ಆತನ ಮುಖಕ್ಕೆ ರಾಚುವಂತೆ ಬಾಗಿಲನ್ನು ಹಾಕಿಕೊಂಡು ಒಳಗೆ ಹೊರಟು ಹೋದರು. ಒಮ್ಮಿಂದೊಮ್ಮೆಲೆ ಎಲ್ಲವನ್ನು ಕಳೆದುಕೊಂಡ ಹತಾಶ ಭಾವ ಮೊಮ್ಮಗನನ್ನು ಆವರಿಸಿತು. ಮುಂದೇನು ಎಂದು ತೋಚದೆ ಇದ್ದರೂ ನಿಧಾನವಾಗಿ ಮನೆಯ ಮೆಟ್ಟಿಲಿಳಿದು ರಸ್ತೆಗೆ ಬಿದ್ದನು. ಹಾಗೆ ನಡೆಯುತ್ತಾ ಮುಂದೆ ಹೋಗುವಾಗ ತಾನು ಕಾಯಂ ಆಗಿ ಸ್ನೇಹಿತರ ಜೊತೆ ಕೂಡುತ್ತಿದ್ದ ದೂರದ ರಸ್ತೆಯಂಚಿನ ಆಲದ ಮರದ ಬಳಿ ಸಾರಿದನು. ನಿಧಾನವಾಗಿ ಕಾಲೆಳೆದುಕೊಂಡು ಹೋಗಿ ಅಲ್ಲಿ ಆತ ಕುಳಿತಾಗ ಆತನ ಒಂದಿಬ್ಬರು ಸ್ನೇಹಿತರು ಮಾತನಾಡುತ್ತಾ ಅಲ್ಲಿಗೆ ಬಂದರು. ಈತನ ಜೋತು ಬಿದ್ದ ಮುಖವನ್ನು ನೋಡಿ ಏನಾಯ್ತು ಬ್ರೋ? ಯಾಕೆ ಹೀಗೆ ಕುಳಿತಿದ್ದೀಯಾ? ಮನೆಯಲ್ಲಿ ಏನಾದರೂ ಪ್ರಾಬ್ಲಮ್ಮಾ? ಎಂದು ಕೇಳಿದರು. ಕೂಡಲೇ ಯುವಕ “ಅಜ್ಜಿ ನನ್ನನ್ನು ಮನೆಯಿಂದ ಹೊರಗೆ ಹಾಕಿದರು.. ಎಲ್ಲಿ ಹೋಗಬೇಕೆಂದು ನನಗೆ ತೋಚುತ್ತಿಲ್ಲ. ನನಗೆ ಒಂದೆರಡು ದಿನಗಳ ಕಾಲ ನಿಮ್ಮ ಯಾರದಾದರೂ ಮನೆಯಲ್ಲಿ ಇರೋಕೆ ಅವಕಾಶ ಕೊಡ್ತೀರಾ? ಎಂದು ಅವರಿಬ್ಬರನ್ನು ಕೇಳಿದ. ಪರಸ್ಪರ ಮುಖ ನೋಡಿಕೊಂಡ ಅವರಲ್ಲಿ ಒಬ್ಬ ಸ್ನೇಹಿತ ಇಲ್ಲ ಕಣೋ ನಮ್ಮ ಮನೆಯಲ್ಲಿ ಜಾಗ ಸಾಲೋದಿಲ್ಲ… ಅದು ಅಲ್ದೆ ನನ್ನ ಅಪ್ಪ ಅಮ್ಮ ಒಪ್ಪಲ್ಲ ಎಂದು ಹೇಳಿದ. ಮತ್ತೊಬ್ಬ ಆತನ ಮಾತಿಗೆ ಗೋಣು ಹಾಕುತ್ತಾ“ಸಾರಿ ಕಣೋ ನಮ್ಮನೇಲೂ ಬಹುಶಃ ಇದೇ ಕಥೆ. ಬೆಟರ್ ನೀನು ನಿಮ್ಮ ಅಜ್ಜಿ ಹತ್ರ ಹೋಗಿ ಸಾರಿ ಕೇಳು… ಅವರು ನಿನ್ನನ್ನು ಕ್ಷಮಿಸುತ್ತಾರೆ” ಎಂದು ಈತನ ಮನೆಯ ಹಿನ್ನೆಲೆ ಗೊತ್ತಿದ್ದ ಅವರು ಆತನಿಗೆ ಹೇಳಿದರು. ಆಯ್ತು ಎಂದು ನಿಟ್ಟುಸಿರಿಟ್ಟ ಆತ ತಾನು ಸದಾ ತನ್ನ ಗರ್ಲ್ ಫ್ರೆಂಡ್ ಜೊತೆ ಕೂಡುತ್ತಿದ್ದ ಕೆಫೆಯತ್ತ ಹೆಜ್ಜೆ ಹಾಕಿದ. ಆತನ ಕರೆಯ ಮೇರೆಗೆ ಅಲ್ಲಿಗೆ ಬಂದಿದ್ದ ಗರ್ಲ್ ಫ್ರೆಂಡ್ ಈತನ ಪೇಲವ ಮುಖವನ್ನು ನೋಡಿ ಏನಾಯಿತು ಎಂದು ಕೇಳಿದಳು. ಮನೆಯಲ್ಲಿ ನಡೆದ ವಿಷಯವನ್ನು ಆಕೆಗೆ ಹೇಳಿದ ಆತಕೆಲ ದಿನಗಳ ಕಾಲ ನಿನ್ನ ಮನೆಯಲ್ಲಿ ನನ್ನನ್ನು ಇರಿಸಿಕೊಳ್ಳುತ್ತೀಯಾ? ಎಂದು ಕೇಳಿದಾಗ ತುಸು ಗಾಬರಿ ಬಿದ್ದ ಆಕೆ ನನ್ನ ಪಾಲಕರನ್ನು ಕೇಳಿ ಹೇಳುತ್ತೇನೆ ಎಂದು ಹೇಳಿದಳು. ನಂತರ ಅವರಿಬ್ಬರೂ ಆಕೆಯ ಮನೆಯೆಡೆ ನಡೆದರು. ಆತನನ್ನು ಮನೆಯ ಹೊರಗೆ ಗೇಟ್ ನ ಬಳಿ ನಿಲ್ಲಿಸಿದ ಆಕೆ ಮನೆಯ ಒಳಗೆ ಹೋಗಿ ತನ್ನ ಅಪ್ಪ ಅಮ್ಮನಿಗೆ ವಿಷಯವನ್ನು ತಿಳಿಸಿ ಆತನಿಗೆ ಕೆಲ ದಿನಗಳ ಕಾಲ ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ಕೇಳಿದಳು. ಪಾಲಕರು ಒಪ್ಪಲಿಲ್ಲ. ಆಕೆ ಮನೆಯ ಹೊರಗೆ ಬಂದು ಗೇಟಿನ ಬಳಿ ನಿಂತಿದ್ದ ಯುವಕನಿಗೆ “ಸಾರಿ ಕಣೋ… ನನ್ನ ಅಪ್ಪ ಅಮ್ಮ ಒಪ್ತಾ ಇಲ್ಲ ನಾನು ನಿನಗೆ ಯಾವ ರೀತಿನೂ ಸಹಾಯ ಮಾಡೋಕೆ ಆಗುತ್ತಿಲ್ಲ. ಐ ಯಾಮ್ ರಿಯಲಿ ಸಾರಿ ಏನೂ ತಿಳ್ಕೋಬೇಡ” ಎಂದು ಹೇಳಿದಳು.ನಿಟ್ಟುಸಿರಿಟ್ಟ ಆತ ನನ್ನ ಪರಿಸ್ಥಿತಿಯೇ ಹಾಗೆ ಇರುವಾಗ ನೀನಾದರೂ ಏನು ಮಾಡ್ತೀಯಾ? ಇರಲಿ ಬಿಡು ಹೊರಡುತ್ತೇನೆ ಎಂದು ಹೇಳಿ ತನ್ನ ಮನೆಯ ಕಡೆ ನಡೆದನು. ಮನೆಗೆ ಹೋಗಲು ಆತನಿಗೆ ಮನಸ್ಸು ಇರಲಿಲ್ಲ ಆದರೆ ಅನಾಯಾಸವಾಗಿ ಆತನ ಕಾಲುಗಳು ಮನೆಯ ಹತ್ತಿರ ಇರುವ ಪಾರ್ಕಿನ ಬಳಿ ಆತನನ್ನು ಕರೆದೊಯ್ದವು. ಪಾರ್ಕಿನ ಕಲ್ಲು ಬೆಂಚೊಂದರ ಮೇಲೆ ಕುಳಿತ ಆತನಿಗೆ ತಾನು ಚಿಕ್ಕಂದಿನಲ್ಲಿ ಅಜ್ಜ ಅಜ್ಜಿಯರ ಜೊತೆ ಈ ಪಾರ್ಕಿಗೆ ಬಂದು ಆಟವಾಡುತ್ತಿದ್ದುದು ಅವರ ಕೈ ಹಿಡಿದು ವಾಕಿಂಗ್ ಮಾಡುತ್ತಿದ್ದುದು, ಕಣ್ಣಾಮುಚ್ಚಾಲೆ ಆಡುತ್ತಿದ್ದುದು ಎಲ್ಲವೂ ಒಂದರ ಹಿಂದೆ ಒಂದರಂತೆ ಮೆರವಣಿಗೆ ಹೊರಟವು. ಮಗ ಮತ್ತು ಸೊಸೆಯನ್ನು ಕಳೆದುಕೊಂಡ ಅಪಾರ ದುಃಖದ ನಡುವೆಯೂ ಅಜ್ಜಿ ತಾತ ತನಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದು ನೆನಪಾಗಿ ದುಃಖ ಒತ್ತರಿಸಿ ಬಂತು. ಜೋರಾಗಿ ಬಿಕ್ಕಿ ಬಿಕ್ಕಿ ಆತ ಅಳುತ್ತಿರುವಾಗ ಹೆಗಲ ಮೇಲೆ ಕೈಯೊಂದು ಬಿತ್ತು. ತಲೆಯೆತ್ತಿ ನೋಡಿದಾಗ ಅಲ್ಲಿ ಅಜ್ಜ ನಿಂತಿದ್ದರು. ಮೊಮ್ಮಗನನ್ನು ಗಟ್ಟಿಯಾಗಿ ತಬ್ಬಿದ ಅಜ್ಜ ಬೇಸರವಾಯಿತೆ ? ಎಂದು ಕೇಳಿದರು. ಇಲ್ಲ ಅಜ್ಜ, ನೀವು ನನಗಾಗಿ ಅದೆಷ್ಟು ಕಷ್ಟಪಟ್ಟಿರಿ… ಆದರೆ ಅದರ ಅರಿವಿಲ್ಲದ ನಾನು ನಿಮ್ಮಿಬ್ಬರ ಮನಸ್ಸನ್ನು ನೋಯಿಸಿದೆ, ಅದನ್ನು ನೆನೆದು ದುಃಖವಾಯಿತು ಎಂದು ಹೇಳಿದಾಗ ಆತನ ಹೆಗಲ ಮೇಲೆ ಮೆಲುವಾಗಿ ತಟ್ಟಿದ ಅಜ್ಜ ನಡೆ ಮನೆಗೆ ಹೋಗೋಣ ಎಂದು ಹೇಳಿದರು. ಅಯೋಮಯನಾಗಿ ಯುವಕ “ಅಜ್ಜಿ ಬೈತಾರೆ…ನಾನು ಬರಲ್ಲ” ಎಂದು ಹೇಳಿದಾಗ “ಬಾ ಬಾ ನಿನ್ನ ಅಜ್ಜಿ ನಿನಗಿಂತಲೂ ನೋಯುತ್ತಿದ್ದಾಳೆ” ಎಂದು ಹೇಳಿ ಅಜ್ಜ ಆತನ ಕೈ ಹಿಡಿದು ಮನೆಯೆಡೆ ನಡೆದರು. ಅಜ್ಜಿಗೆ ಏಕೆ ನೋವಾಗಿದೆ ಎಂದು ಕುತೂಹಲದಿಂದ ಅಜ್ಜನನ್ನು ಹಿಂಬಾಲಿಸಿದ ಯುವಕ. ಮನೆಯ ಬಾಗಿಲನ್ನು ತೆಗೆಸಲು ಕರೆಗಂಟೆ ಒತ್ತಲೇ ಬೇಕಾಗಿರಲಿಲ್ಲ. ತೆರೆದ ಬಾಗಿಲ ಮುಂದೆ ಗಲ್ಲಕ್ಕೆ ಕೈಕೊಟ್ಟು ಕುಳಿತ ಅಜ್ಜಿಯ ಮ್ಯಾನವದನ ಮೊಮ್ಮಗನ ಮುಖ ನೋಡುತ್ತಲೇ ನೂರು ಕ್ಯಾಂಡಲ್ ಬಲ್ಬು ಬೆಳಗಿದಂತೆ ಆಯಿತು. ಓಡಿಬಂದು ಮೊಮ್ಮಗನನ್ನು ತಬ್ಬಿದ ಆಕೆ ಎಲ್ಲಿ ಹೋಗಿದ್ದೆ ನೀನು? ಎಂದು ಆಕ್ಷೇಪಿಸಿದಳು. ತಪ್ಪಾಯ್ತು ಅಜ್ಜಿ! ನನಗೆ ಈಗ ನಿಜವಾಗಿಯೂ ನನ್ನ ತಪ್ಪಿನ ಅರಿವಾಗಿದೆ…. ಹರೆಯದ ಹುಮ್ಮಸ್ಸಿನಲ್ಲಿ ಯಾರು ನನ್ನವರು, ನನಗಾಗಿ ಮಿಡಿಯುವವರು ತಮ್ಮ ಬದುಕಿನ ಸುಖ ಸಂತೋಷಗಳನ್ನು ನನ್ನಲ್ಲಿ ಕಾಣುವರು ಎಂಬುದರ ಅರಿವಿಲ್ಲದೆ ಸ್ನೇಹಿತರು, ಮೋಜು ಮಸ್ತಿಗಳಲ್ಲಿ ಮುಳುಗಿ ನಿಮ್ಮನ್ನು ಕಡೆಗಣಿಸಿಬಿಟ್ಟಿದ್ದೆ.ಇಂದು ನೀನು ನನ್ನನ್ನು ಮನೆಯಿಂದ ಹೊರಗೆ ಹಾಕದೆ ಹೋಗಿದ್ದರೆ ನನಗೆ ನನ್ನ ತಪ್ಪಿನ ಅರಿವಾಗುತ್ತಿರಲಿಲ್ಲ. ಯಾರು ನನ್ನವರು ಎಂಬುದರ ಅರಿವು ನನಗೀಗ ಆಗಿದೆ. ಇನ್ನು ಮುಂದೆ ಯಾವತ್ತೂ ಇಂತಹ ತಪ್ಪು ಮಾಡುವುದಿಲ್ಲ. ನನ್ನನ್ನು ನೀವಿಬ್ಬರೂ ಕ್ಷಮಿಸಿಬಿಡಿ ಎಂದು ಅವರಿಬ್ಬರ ಕಾಲಿನ ಮೇಲೆ ಬಿದ್ದನು. ನಿಧಾನವಾಗಿ ಆತನನ್ನು ಮೇಲಕ್ಕೆತ್ತಿದ ಅಜ್ಜಿ “ಕಂದ ಬದುಕಿನಲ್ಲಿ ನಮಗೆ ಸ್ವಾತಂತ್ರ್ಯ ಇರುವಷ್ಟೇ ಜವಾಬ್ದಾರಿಗಳು ಇರುತ್ತವೆ. ಬಹಳಷ್ಟು ಬಾರಿ ಸ್ವಾತಂತ್ರ್ಯವನ್ನು ಅನುಭವಿಸುವುದಕ್ಕಿಂತ ಹೆಚ್ಚು ಜವಾಬ್ದಾರಿಯನ್ನು ನಾವು ಹೊರಬೇಕಾಗುತ್ತದೆ. ಸ್ನೇಹಿತರ ಒಡನಾಟ ತಪ್ಪಲ್ಲ ಆದರೆ ಎಲ್ಲವೂ ಇತಿಮಿತಿಯಲ್ಲಿ ಇರಬೇಕು. ಈ ಪಾಠವನ್ನು ನಿನಗೆ ಕಲಿಸಲೆಂದೇ ನಾನು ನಿನ್ನನ್ನು ಮನೆಯಿಂದ ಹೊರಗೆ ಹಾಕಿದ್ದು. ಆದರೆ ಇದರಿಂದ ನಿನಗೆ ಎಷ್ಟು ದುಃಖವಾಯಿತೋ ಅದರ ಹತ್ತು ಪಟ್ಟು ಹೆಚ್ಚು ದುಃಖ ನನಗಾಗಿದೆ ಎಂದರೆ ನೀನು ನಂಬಲೇಬೇಕು. ನೀನಿಲ್ಲದೆ ನಮಗೆ ಬದುಕೇ ಇಲ್ಲ, ನಿನ್ನ ಸಂತಸದಲ್ಲಿ ನಮ್ಮ ಬದುಕಿನ ಸಾರ್ಥಕತೆ ಅಡಗಿದೆ” ಎಂದು ಅಜ್ಜಿ ಹೇಳಿದಾಗ ಹೌದೆಂಬಂತೆ ಅಜ್ಜ ತಲೆ ಆಡಿಸಿದರು. ಅಜ್ಜಿಯ ತೊಡೆಯ ಮೇಲೆ ತಲೆ ಆನಿಸಿದ ಮೊಮ್ಮಗ“ನಾನು ಕೂಡ ಇನ್ನು ಮುಂದೆ ಸರಿಯಾದ ಹಾದಿಯಲ್ಲಿ ಸಾಗುತ್ತೇನೆ ಏನಾದರೂ ತಪ್ಪು ಮಾಡಿದರೆ ಕಿವಿ ಹಿಂಡಿ ಬುದ್ದಿ ಕಲಿಸಲು ನೀವಿಬ್ಬರು ಹಿಂಜರಿಯಬೇಡಿ” ಎಂದು ಹೇಳಿದಾಗ ಎಲ್ಲರೂ ಜೋರಾಗಿ ನಕ್ಕು ಆ ನಗುವಿನ ಮಂಜುಳ ದನಿ ಮನೆಯೆಲ್ಲ ತುಂಬಿತು. ಎಷ್ಟು ಸುಂದರವಾದ ಕಥೆಯಲ್ಲವೇ ಸ್ನೇಹಿತರೆ! ಎಷ್ಟೋ ಬಾರಿ ಬದುಕಿನ ನಾಗಾಲೋಟದಲ್ಲಿ ಹರೆಯದ ಹುಮ್ಮಸ್ಸಿನಲ್ಲಿ ನಾವು ನಮ್ಮವರನ್ನು ಕಡೆಗಣಿಸಿ ಮುಂದೆ ಸಾಗುತ್ತೇವೆ. ನಮ್ಮ ಬದುಕಿನಲ್ಲಿ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವುದು ನಮ್ಮ ಹೆತ್ತವರು, ಒಡಹುಟ್ಟಿದವರು, ಸಂಗಾತಿ ಮತ್ತು ಮಕ್ಕಳು ಮಾತ್ರ. ಉಳಿದೆಲ್ಲರಿಗೂ ಗೌರವವನ್ನು ನೀಡುವ ನಾವು ಕುಟುಂಬದ ಸದಸ್ಯರನ್ನು ಮಾತ್ರ ಅಸಡ್ಡೆಯಿಂದ ಕಾಣುತ್ತೇವೆ. ಮುಂಜಾನೆ ಮನೆಯನ್ನು ಬಿಟ್ಟು ಅದೆಷ್ಟೆ ಊರು ಸುತ್ತಿ ನಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಅಂತಿಮವಾಗಿ ಮತ್ತೆ ನಾವು ಬರುವುದು ನಮ್ಮ ಮನೆಗೆಯೇ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ನಮ್ಮ ಕುಟುಂಬದ ಸದಸ್ಯರೊಂದಿಗೆ ಮಾತ್ರ. ತಡವಾಗಿಯಾದರೂ ಸರಿ ನಮ್ಮವರು ನಮಗೆ ಬೇಕೇ ಬೇಕು ಎಂಬುದನ್ನು ಅರಿತು ನಾವು ಅವರಿಗೆ ಬೇಕಾಗುವಂತೆ ವರ್ತಿಸುವ, ಅವರೊಂದಿಗೆ ಸೌಹಾರ್ದಯುತವಾಗಿ ಬಾಳುವ ಎಂದು ಆಶಿಸುವ ವೀಣಾ ಹೇಮಂತ್ ಗೌಡ ಪಾಟೀಲ್

“ಬದುಕಿನ ಬಣ್ಣಗಳ ಅರಿವು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ-“ಹಳ್ಳಿಯಿಂದ ದಿಲ್ಲಿ ದರ್ಬಾರಕ್ಕೆ ಹೋದ ಶ್ರೀ ಬಸಪ್ಪ ದಾನಪ್ಪ ಜತ್ತಿ”

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ- “ಹಳ್ಳಿಯಿಂದ ದಿಲ್ಲಿ ದರ್ಬಾರಕ್ಕೆ ಹೋದ ಶ್ರೀ ಬಸಪ್ಪ ದಾನಪ್ಪ ಜತ್ತಿ” ಒಬ್ಬ ಹಳ್ಳಿಯ ಸಾಧಾರಣ ಲಿಂಗಾಯತ ವ್ಯಾಪಾರಸ್ಥ ಮನೆತನದಲ್ಲಿ ಹುಟ್ಟಿ ಭಾರತದ ಪರಮೋಚ್ಚ ಅಧ್ಯಕ್ಷ ಸ್ಥಾನಕ್ಕೆ ಹೋದ ಅಪ್ರತಿಮ ರಾಜಕೀಯ ಮುತ್ಸದ್ಧಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಸಪ್ಪ ದಾನಪ್ಪ ಜತ್ತಿ ಅವರ ಬದುಕು ಒಂದು ಸಂಘರ್ಷವೇ ಆಗಿದೆ. ಒಂದು ಅವಿಸ್ಮರಣೀಯ ಪ್ರಸಂಗ _______________________ ಸಾವಳಗಿ ಇವತ್ತಿನ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಒಂದು ಪುಟ್ಟ ಗ್ರಾಮ. ಆ ಊರಿನಲ್ಲಿ ದಾನಪ್ಪ ಎಂಬ ವ್ಯಾಪಾರಿ ಮನೆತನದ ಮಧ್ಯಮ ವರ್ಗದ ವ್ಯಕ್ತಿ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಶಿಷ್ಯರಾಗಿದ್ದರು. ಒಂದು ದಿನ ದಾನಪ್ಪನವರು ತಮ್ಮ ಕಿಡಿಗೇಡಿ ಬಾಲಕ ಬಸಪ್ಪನನ್ನು ಕರೆದು ಕೊಂಡು ಅಥಣಿಯ ಶ್ರೀ ಗಚ್ಚಿನ ಮಠಕ್ಕೆ ಪರಮ ಪೂಜ್ಯರ ದರ್ಶನಕ್ಕೆ ಹೋದರು.  ಪರಮ ಪೂಜ್ಯ ಶ್ರೀ ಅಥಣಿಯ ಮುರುಗೇಂದ್ರ ಶಿವಯೋಗಿಗಳು ಲಿಂಗ ಪೂಜೆ ಮುಗಿಸಿ ಮಠದ ಆವರಣದಲ್ಲಿ ಭಕ್ತರ ದರ್ಶನ ನೀಡಲು ಬಂದು ಕುಳಿತು ಕೊಳ್ಳುತ್ತಾರೆ. ಆಗ ಮಠದಲ್ಲಿ ಆಡುತ್ತಿದ್ದ ಬಾಲಕ ಓಡಿ ಹೋಗಿ ಪರಮ ಪೂಜ್ಯ ಶ್ರೀ ಅಥಣಿಯ ಮುರುಗೇಂದ್ರ ಶಿವಯೋಗಿಗಳ ತೊಡೆಯ ಮೇಲೆ ಕುಳಿತು ಕೊಳ್ಳುತ್ತಾನೆ. ಮಗನ ಶಿಕ್ಷಣ ಮತ್ತು ವಿದ್ಯೆಗಾಗಿ ಪೂಜ್ಯ ಶ್ರೀ ಶಿವಯೋಗಿಗಳ ಆಶೀರ್ವಾದಕ್ಕಾಗಿ ಬಂದ ಶ್ರೀ ದಾನಪ್ಪನಿಗೆ ಒಂದು ರೀತಿಯ ಮುಜುಗರ ಉಂಟಾಗಿತ್ತು. ಅವಸರದಲ್ಲಿ ಓಡಿ ಹೋಗಿ ಶ್ರೀಗಳ ತೊಡೆಯ ಮೇಲೆ ಕುಳಿತ ಬಾಲಕ ಬಸಪ್ಪನನ್ನು ಕರೆದು ಕೊಳ್ಳಲು ಹೋದಾಗ  ಪರಮ ಪೂಜ್ಯ ಶ್ರೀ ಅಥಣಿಯ ಮುರುಗೇಂದ್ರ ಶಿವಯೋಗಿಗಳು ದಾನಪ್ಪ ಇರಲಿ ಬಿಡು ಈ ಹುಡುಗ ಮುಂದ ದಿಲ್ಲಿ ದರ್ಬಾರದಾಗ ಮೆರೆತನ ಎಂದು ಆಶೀರ್ವಾದ ಮಾಡಿದರಂತೆ. ಬಾಲ್ಯದಲ್ಲಿಯೇ ಇಂತಹ ಮಹಾತ್ಮರ ಕೃಪೆಗೆ ಒಳಗಾದ ಬಾಲಕ ಬಸಪ್ಪ ದಾನಪ್ಪ ಜತ್ತಿ ಎಂಬ ಹಳ್ಳಿಯ ಹುಡುಗ ಸಾವಳಗಿ ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ಜಮಖಂಡಿ ನಗರ ಸಭೆ ಅಧ್ಯಕ್ಷ ನಂತರ ಮುಂಬೈ ಸರಕಾರದಲ್ಲಿ ಬೇರೆ ಬೇರೆ ಖಾತೆ ನಿರ್ವಹಣೆ ಉಪಮುಖ್ಯಮಂತ್ರಿ ಸಂಸದೀಯ ಸಚಿವ ಕಾರ್ಯದರ್ಶಿ ರಾಜ್ಯ ವಿಂಗಡಣೆ ಆದ ಮೇಲೆ    ಕರ್ನಾಟಕ ರಾಜ್ಯ ಸರ್ಕಾರದ ಹಲವು ಖಾತೆ ಮತ್ತು  ಮುಖ್ಯ ಮಂತ್ರಿ ಎರಡು ರಾಜ್ಯಗಳ ಗವರ್ನರ್ ಕೊನೆಗೆ ರಾಜ್ಯ ಸಭಾ ಸದಸ್ಯ ಉಪರಾಷ್ಟ್ರಪತಿ ಹಂಗಾಮಿ ರಾಷ್ಟ್ರಪತಿ ಆಗಿ ಉತ್ತರ ಕರ್ನಾಟಕದ ಅಪರೂಪದ ಪ್ರಬುದ್ಧ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಂದು ಹೆಸರು ವಾಸಿಯಾದರು. ಡಾ ಬಸಪ್ಪ ದಾನಪ್ಪ ಜತ್ತಿ _________________________ ( ಬಿ.ಡಿ.ಜತ್ತಿ) (ಸೆಪ್ಟೆಂಬರ್ 10,1912 – ಜೂನ್ 7, 2002) – ಭಾರತದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಇವತ್ತಿನ  ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ.  ವಿಜಯಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಹತ್ತಿರದ ಕುರಗೊಡ(ತಾಯಿಯ ಊರು) ಎಂಬ ಚಿಕ್ಕ ಗ್ರಾಮದಲ್ಲಿ 1912ರ ಸೆಪ್ಟಂಬರ್ 10ರಂದು ಜನಿಸಿದರು. ತಂದೆ ದಾನಪ್ಪ ಜತ್ತಿ, ತಾಯಿ ಭಾಗವ್ವ. ದಾನಪ್ಪ ಜತ್ತಿಯವರು ಒಬ್ಬ ವ್ಯಾಪಾರಿ, ಅವರ ಮೂವರು ಗಂಡುಮಕ್ಕಳಲ್ಲಿ ಬಸಪ್ಪನವರು ಒಬ್ಬರು.ಗ್ರಾಮವು ಅಂದು ಮುಂಬೈ ಪ್ರಾಂತದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು.  ತಂದೆ ದಾನಪ್ಪ, ತಾಯಿ ಭಾಗವ್ವ- ಇಬ್ಬರೂ ಶ್ರಮ ಜೀವಿಗಳು, ದೈವ ಭಕ್ತರು, ಗುರು ಹಿರಿಯರಲ್ಲಿ ಅಪಾರ ಗೌರವುಳ್ಳವರು. ಇವರ ಸದ್ಗುಣಗಳು ಬಸಪ್ಪನವರಿಗೆ ಬಳುವಳಿಕೆಯಾಗಿ ಬಂದವು. ವಿದ್ಯಾಭ್ಯಾಸ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸದ ಅನಂತರ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ವ್ಯಾಸಂಗಮಾಡಿ ಕಲಾ ಪದವಿಯನ್ನು   ಮುಂದೆ   ಲಾ ಕಾಲೇಜಿನಲ್ಲಿ ಎಲ್‍ಎಲ್.ಬಿ. ಪದವಿಯನ್ನೂ ಗಳಿಸಿ (1940) ಜಮಖಂಡಿಯಲ್ಲಿ ವಕೀಲರಾಗಿ ಜೀವನ ಆರಂಭಿಸಿದರು (1940-45). 1948ರಲ್ಲಿ ಜಮಖಂಡಿಯು ಮುಂಬಯಿಗೆ ಸೇರಿದ ನಂತರ ಮತ್ತೆ ಕಾನೂನು ವೃತ್ತಿಗೆ ವಾಪಸಾದರು ವೃತ್ತಿಯಲ್ಲಿ ವಕೀಲರು 1940 ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಬಸಪ್ಪನವರು 10 ವರ್ಷದ ಬಾಲಕನಾಗಿದ್ದಾಗಲೇ 5 ವರ್ಷದ ಬಾಲಕಿ ಸಂಗವ್ವಳೊಂದಿಗೆ ವಿವಾಹವಾಯಿತು.  ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಯ ಹೊಣೆ ತಮ್ಮ ಮೇಲೆ ಬಿದ್ದುದರಿಂದ, ಬಸಪ್ಪನವರು ಕಾನೂನು ಶಿಕ್ಷಣವನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಕುಟುಂಬದ ಹೊಣೆಯ ಜೊತೆಗೆ ತಮ್ಮ ಹಳ್ಳಿಯ ಸಾರ್ವಜನಿಕ ಸಮಸ್ಯೆಗಳನ್ನು ಬಿಡಿಸುವ ಹೊಣೆಯನ್ನೂ ವಹಿಸಿಕೊಂಡರು.ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಅದನ್ನು ಮುನ್ನಡೆಸಿದರು. ಇದು ಅವರ ಸಮಾಜ ಸೇವಾ ಕಾರ್ಯದ ಮೊದಲ ಹಂತ. ಗಾಂಧೀಜಿಯವರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಜಾಗರೂಕರಾಗಿರುತ್ತಿದ್ದರು. ಸುಧೀರ್ಘ ರಾಜಕೀಯ ಅನುಭವ ______________________ ಮುಂಬಯಿ ರಾಜ್ಯ ಶಾಸನ ಸಭೆಗೆ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಒಂದೇ ವಾರದಲ್ಲಿ ಅವರನ್ನು ಸಂಸದೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. 1952ರ ಸಾರ್ವತ್ರಿಕ ಚುನಾವಣೆಯಾದ ನಂತರ ಜತ್ತಿಯವರನ್ನು ಮುಂಬಯಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕಾರ್ಮಿಕ ಮಂತ್ರಿಯನ್ನಾಗಿ ನೇಮಿಸಲಾಯಿತು. ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರ ಜತ್ತಿಯವರು ಮೈಸೂರಿ ಶಾಸನಸಭೆಯ ಅಧ್ಯಕ್ಷರೂ ಮತ್ತು ಭೂ ಸುಧಾರಣಾ ಸಮಿತಿಯ ಅಧ್ಯಕ್ಷರೂ ಆಗಿದ್ದರು. 3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಮರು ಚುನಾಯಿತರಾದರು.  1962ರಲ್ಲಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಯಾದರು. ಅದೇ ಕ್ಷೇತ್ರದಿಂದ ನಾಲ್ಕನೆಯ ಶಾಸನಸಭೆಗೆ ಮರು ಚುನಾವಣೆಯಲ್ಲಿ ಆಯ್ಕೆಯಾದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾದರು. ನಂತರ ಅವರು ರಾಷ್ಟ್ರ ರಾಜಕಾರಣಕ್ಕೆ ತೊಡಗಿಸಿಕೊಂಡು 1968ರಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡರು. 1973ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ, ನಂತರ 1974ರಲ್ಲಿ ಭಾರತದ ಉಪರಾಷ್ಟ್ರಾಧ್ಯಕ್ಷರಾಗಿ 1980ರ ವರೆಗೆ ಸೇವೆ ಸಲ್ಲಿಸಿದರು. ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು ರಾಜಕೀಯ “ಜಟ್ಟಿ”ಎಂದು ಜತ್ತಿ ಹೆಸರು ಗಳಿಸಿದ್ದಾರೆ. ಜಮಖಂಡಿಯ ಪೌರಸಭೆಯ ಸದಸ್ಯರಾಗಿ ಎರಡುಬಾರಿ ಆಯ್ಕೆ ಹೊಂದಿದರಲ್ಲದೆ ಅದರ ಅಧ್ಯಕ್ಷರಾಗಿಯೂ ಇದ್ದರು (1940-45). ಜಮಖಂಡಿ ಸಂಸ್ಥಾನದ ಪ್ರಜಾ ಪರಿಷತ್ತಿನ ಪ್ರಮುಖ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಜಮಖಂಡಿಯಲ್ಲಿ ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಯಾದಾಗ ಮಂತ್ರಿಮಂಡಳ ರಚಿಸುವ ಹೊಣೆ ಇವರದಾಯಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಸಂಸ್ಥಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಕ್ಷಿಣ ಸಂಸ್ಥಾನಗಳ ಒಕ್ಕೂಟರಚನೆಯ ಪ್ರಯತ್ನಗಳು ನಡೆದಿದ್ದುವು. ಜತ್ತಿಯವರು ಜಮಖಂಡಿ ಸಂಸ್ಥಾನಿಕರ ಮನವೊಲಿಸಿ ಭಾರತ ಒಕ್ಕೂಟದಲ್ಲಿ ಆ ಸಂಸ್ಥಾನ ವಿಲೀನಗೊಳ್ಳುವಂತೆ ಮಾಡಲು ಶ್ರಮಿಸಿದರು. ವಿಲೀನಗೊಂಡ ಪ್ರದೇಶಗಳ ಪ್ರನಿನಿಧಿಯಾಗಿ ಜತ್ತಿಯವರು ಮುಂಬಯಿ ವಿಧಾನಸಭೆಗೆ ನಾಮಕರಣ ಹೊಂದಿದರು ಮತ್ತು ಅಲ್ಲಿಯ ಮುಖ್ಯಮಂತ್ರಿ ಬಿ.ಜಿ ಖೇರರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು (1948). 1952ರ ಚುನಾವಣೆಯಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾಗಿ ಆ ರಾಜ್ಯದ ಆರೋಗ್ಯ ಮತ್ತು ಕಾರ್ಮಿಕ ಉಪಮಂತ್ರಿಯಾದರು. 1956ರಲ್ಲಿ ರಾಜ್ಯ ಪುನರ್ರಚನೆಯಾದ ಅನಂತರ ಜತ್ತಿಯವರು ನೂತನ ಮೈಸೂರು ರಾಜ್ಯದ (ಈಗ ಕರ್ನಾಟಕ) ಭೂಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು.  ರಾಜ್ಯದ ಭೂಸುಧಾರಣಾ ಕಾಯಿದೆಗಳಿಗೆ ಜತ್ತಿ ಸಮಿತಿಯ ವರದಿ ತಳಹದಿಯಾಯಿತು.  1957 ಮತ್ತು 1967ರ ಚುನಾವಣೆಗಳಲ್ಲಿ ಅವರು ರಾಜ್ಯವಿಧಾನಸಭೆಗೆ ಆಯ್ಕೆಯಾದರು. ಮುಖ್ಯಮಂತ್ರಿಯಾಗಿ ಆಯ್ಕೆ 1958ರ ಜತ್ತಿಯವರು ಮೈಸೂರಿನ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿಯಾದರು. ಅನಿರೀಕ್ಷಿತವಾಗಿ ಬಂದ ಹೊಣೆಯನ್ನು ಜತ್ತಿಯವರು ದಕ್ಷತೆಯಿಂದ ನಿರ್ವಹಿಸಿದರು.  1962ರ ಚುನಾವಣೆಗಳ ಅನಂತರ ರಚಿತವಾದ ಶ್ರೀ ಎಸ್  ನಿಜಲಿಂಗಪ್ಪನವರ  ಮಂತ್ರಿಮಂಡಲದಲ್ಲಿ ಶ್ರೀ ಜತ್ತಿಯವರು ಹಣಕಾಸಿನ ಮಂತ್ರಿಯಾದರು-1965ರ ವರೆಗೆ ಆ ಹುದ್ದೆಯಲ್ಲಿದ್ದರು.  ಅನಂತರ 1968ರ ವರೆಗೆ ಅವರು ಆಹಾರ ಮಂತ್ರಿಯಾಗಿದ್ದರು. ಒರಿಸ್ಸಾದಲ್ಲಿ  1973-74ರಲ್ಲಿ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಾಗ ಜತ್ತಿಯವರು ಅದರ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಉಪರಾಷ್ಟ್ರಪತಿ ಮತ್ತು ಹಂಗಾಮಿ ರಾಷ್ಟ್ರಪತಿ 1977 ಫೆಬ್ರವರಿ 11ರಿಂದ ಜುಲೈ 25 1977ರ ವರೆಗೂ ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿದ್ದರು ಹಾಗೂ 5ನೇ ಉಪ ರಾಷ್ಟ್ರಪತಿಗಳಾಗಿದ್ದರು. ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು ಪ್ರಧಾನಿ ಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ, ಶ್ರೀ ಎಸ್ ನಿಜಲಿಂಗಪ್ಪನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ ನೀಲಂ ಸಂಜೀವ ರೆಡ್ಡಿಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ. ಅಧ್ಯಾತ್ಮ ಒಲವು ___________________ ಬಸವೇಶ್ವರರ ಉಪದೇಶ ಮತ್ತು ವಿಚಾರಗಳ ಪ್ರಚಾರದ ಉದ್ದೇಶದಿಂದ ರಚಿತವಾಗಿರುವ ಬಸವ ಸಮಿತಿಗೆ ಜತ್ತಿಯವರು ಪ್ರಾರಂಭದಿಂದಲೂ ಅಧ್ಯಕ್ಷರಾಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ಅವರು ಆಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡವರು. ಬಸವ ಸಮಿತಿಯು 1964 ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರಿಂದ ಸ್ಥಾಪನೆಗೊಂಡು, 12 ನೇ ಶತಮಾನದ ಬಸವಣ್ಣವರ ಹಾಗು ಅವರ ಸಮಕಾಲೀನ ಶರಣರ ತತ್ವ ಸಂದೇಶಗಳನ್ನು ಪ್ರಪಂಚದಾದ್ಯಂತ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತದ ಮಾಜಿ ರಾಷ್ಟ್ರಪತಿ ಡಾ|| ಬಸಪ್ಪ ದಾನಪ್ಪ ಜತ್ತಿ ಅವರು ಬಸವಣ್ಣವರ ಹಾಗೂ ಶರಣರ ತತ್ವಗಳನ್ನು, ಶರಣ ಸಂಸ್ಕೃತಿಯನ್ನು ಶರಣರ ಸಮಾನತೆಯ ತತ್ವವನ್ನು ಸಾರುವ ಉದ್ದೇಶದಿಂದ 1964 ರಾಲಿ  ಬಸವ ಸಮಿತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ಪಕ್ಷ, ಜಾತಿ ಭೇದವಿಲ್ಲದೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಸವ ಸಂದೇಶಗಳನ್ನು ಹಾಗೂ ಶರಣರ ತತ್ವಗಳನ್ನು ಪ್ರಚಾರ ಮಾಡುತ್ತಿದೆ. ಬಸವ ಸಮಿತಿಯು ಶರಣರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮತ್ತು ಎಲ್ಲಾ ಮಾನವರ ಕಲ್ಯಾಣಕ್ಕಾಗಿ (ಉದ್ಧಾರಕ್ಕಾಗಿ) ಶರಣರ ಕೊಟ್ಟ ಸಂದೇಶಗಳನ್ನು ಕಲುಷಿತಗೊಳಿಸದೆ ಇಂದಿನ ಆಧುನಿಕ ಸಮಾಜಕ್ಕೆ ಒಪ್ಪುವಂತೆ ನವೀಕರಿಸುವ ಉದ್ದೇಶ ಹೊಂದಿದೆ. ಅನ್ನದಾನಯ್ಯಪುರಾಣಿಕ,ಕೆ.ಎಂ.ನಂಜಪ್ಪ,ವೈ.ಸಿ.ಬಸಪ್ಪ,ಗಂಗಪ್ಪ,ಬಿ.ಎಸ್.ಶಂಕರಪ್ಪಶೆಟ್ಟಿ, ಡಾ ಡಿ ಸಿ ಪಾವಟೆ ಮೊದಲಾದ ಗಣ್ಯರ ಜೊತೆಗೂಡಿ, ಮಾನ್ಯ ಶ್ರೀ ಎಸ್ ನಿಜಲಿಂಗಪ್ಪನವರ ಮಾರ್ಗದರ್ಶನದಲ್ಲಿ  ಬೆಂಗಳೂರಿನಲ್ಲಿ ಅಖಿಲ ಭಾರತ ಬಸವ ಸಮಿತಿ ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ ಅನ್ನದಾನಯ್ಯ ಪುರಾಣಿಕ ನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ. ಇಂದು ಡಾ ಅರವಿಂದ ಜತ್ತಿ ಅವರು ಬಸವ ಸಮಿತಿ ಅಧ್ಯಕ್ಷರಾಗಿ ಶರಣರ ವಚನಗಳನ್ನು ರಾಷ್ಟ್ರೀಯ ಇತರ ಭಾಷೆಗಳಿಗೆ ಮತ್ತು ಫ್ರೆಂಚ್ ಇಂಗ್ಲಿಷ್ ಐರಿಶ್ ಜರ್ಮನಿ ಚೀನೀ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದಾರೆ. ನಿರ್ವಹಿಸಿದ ಪ್ರಮುಖ  ಹುದ್ದೆಗಳು ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದೇವೆ. ಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯ (1943) ಮುಂಬಯಿ ವಿಧಾನಸಭೆಯ ಶಾಸಕ (1949) ಮುಂಬಯಿ ರಾಜ್ಯದ

ಸಾವಿಲ್ಲದ ಶರಣರು ಮಾಲಿಕೆ-“ಹಳ್ಳಿಯಿಂದ ದಿಲ್ಲಿ ದರ್ಬಾರಕ್ಕೆ ಹೋದ ಶ್ರೀ ಬಸಪ್ಪ ದಾನಪ್ಪ ಜತ್ತಿ” Read Post »

ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಅಂಕಣ ಸಂಗಾತಿ ಭಾರತದ ಮಹಿಳಾ ಮುಖ್ಯಮಂತ್ರಿಗಳು ಸುರೇಖಾ ರಾಠೋಡ್ ಪಂಜಾಬ್ ನ ಮೊದಲ ಮಹಿಳಾ ಮುಖ್ಯಮಂತ್ರಿ ರಾಜೇಂದ್ರ ಕೌರ್ ಭಟ್ಟಾಲ್(ಅಧಿಕಾರಾವಧಿ 21/11/1996 ರಿಂದ 12/02/1997, 83 ದಿನಗಳು) ಪಂಜಾಬ್ ನ ಮೊದಲ ಮಹಿಳಾ ಮುಖ್ಯಮಂತ್ರಿ ರಾಜೇಂದ್ರ ಕೌರ್ ಭಟ್ಟಾಲ್(ಅಧಿಕಾರಾವಧಿ 21/11/1996 ರಿಂದ 12/02/1997, 83 ದಿನಗಳು) ರಾಜೆಂದ್ರ ಕೌರ್ ಇವರು 30 ಸೆಪ್ಟೆಂಬರ್ 1945 ರಲ್ಲಿ ಪಂಜಾಬ್ ನ ಲಾಹೋರ್ನಲ್ಲಿ ಜನಿಸಿದರು. ಇವರ ತಂದೆ ಹೀರಾಸಿಂಗ್ ಭಟ್ಟಲ್.  ತಾಯಿ ಹರ್ನಾಮ ಕೌರ್. ಇವರು ಸಂಗ್ರೂರ ಜಿಲ್ಲೆಯ ಲೆಹಗ್ರಾ ಗ್ರಾಮದಲ್ಲಿ ಚಂಚಲಿ ವಾಲಾದ ಲಾಲ್ಸಿಂಗ್ ಸಿದ್ದು ಅವರನ್ನು ವಿವಾಹವಾದರು. ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗು.  ರಾಜೇಂದ್ರ ಕೌರ್ ಅವರು 1994ರಲ್ಲಿ  ಚಂಡಿಘಡದಲ್ಲಿ ರಾಜ್ಯ ಶಿಕ್ಷಣ ಸಚಿವರಾದರು. ಇವರು ಹರ್ಚರಣಸಿಂಗ್ ಅವರ ರಾಜೀನಾಮೆಯ ನಂತರ 21.11.1996 ರಂದು ಪಂಜಾಬ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರು ಮುಖ್ಯಮಂತ್ರಿ ಆಗಿದ್ದಾಗ ಸಣ್ಣ ರೈತರಿಗೆ ಕೊಳವೆಬಾವಿ ನೀರಾವರಿಗೆ ಸಂಬಂಧಿಸಿದ ಉಚಿತ ವಿದ್ಯುತ್ ಅನುದಾನವನ್ನು ಒದಗಿಸುವ ಹಲವು ಯೋಜನೆಗಳನ್ನು ಜಾರಿಗೆ ತಂದರು. ಹಾಗೇಯೆ ಇವರು ತಮ್ಮ ಅಧಿಕಾರ ಅವಧಿಯಲ್ಲಿ ಜನಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದರು.  1997ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋತಿದ್ದಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ನಂತರ ಮೇ ತಿಂಗಳಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ವಿಧಾನಸಭಾ ಶಾಸನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ 12/02/ 1997 ರಿಂದ 10/10/1998 ವರೆಗೆ ಕಾರ್ಯನಿರ್ವಹಿಸಿದರು. ನಂತರ 6/01/2004 ರಿಂದ 1/03/ 2007 ರವರೆಗೆ ಪಂಜಾಬ್ ನ ಎರಡನೆಯ ಉಪಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದರು. ಇವರು 1992 ರಿಂದ ಲೆಹ್ರಾ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಗೆದ್ದಿದ್ದಾರೆ. ಸುರೇಖಾ ರಾಠೋಡ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-23 ಗಲಭೆಗಳು ಬಂದ್ಗಳು ಇತ್ಯಾದಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೩ ನಾವು ವಿಭಾಗಿಯ ಕಚೇರಿಗೆ ವರ್ಗವಾಗಿ ಬಂದ ಸಮಯವೇ ಸರಿ ಇರಲಿಲ್ಲವೋ ಏನೋ ಡಿಸೆಂಬರ್ ೧೯೯೧ಲ್ ರಲ್ಲಿ ಕಾವೇರಿ ವಿವಾದ ಆರಂಭವಾಯಿತು. ಇಡೀ ತಿಂಗಳು ಗಲಭೆ . ಕನ್ನಡ ಚಳುವಳಿಯ ಜನಗಳು ಆಫೀಸಿಗೆ ನುಗ್ಗಿ ಕಚೇರಿಯನ್ನು ಬಂದ್ ಮಾಡಿಸುತ್ತಿದ್ದರು. ಸರಿ ನಂತರ ಅಲ್ಲಿಂದ ಮತ್ತೆ ಮನೆಯ ಕಡೆ ಪಯಣ. ಅಷ್ಟು ಹೊತ್ತಿಗೆ ಬಸ್ ಗಳ ಓಡಾಟ ನಿಂತು ಹೋಗಿರುತ್ತಿತ್ತು .ಆಟೋಗಳು ವಿಪರೀತ ದುಡ್ಡು ಕೇಳುತ್ತಿದ್ದರು. ಆದರೂ ಹೆಚ್ಚು ಜನರನ್ನು ಕೂಡಿಸಿಕೊಂಡು ಹೋಗುತ್ತಿದ್ದುದರಿಂದ ಎಲ್ಲರೂ ಸೇರುವ ಒಂದು ಕಾಮನ್ ಪ್ಲೇಸ್ ತನಕ ಆಟೋದಲ್ಲಿ ಬಂದು ಅಲ್ಲಿಂದ ಮುಂದೆ ನಟರಾಜ ಸರ್ವಿಸ್. ಒಂದು ರೀತಿಯ ಶಿಕ್ಷೆಯೇ ಸರಿ. ಆದರೆ ಆಫೀಸಿಗೆ ಬಂದು ಹಾಜರಾತಿಗೆ ಸಹಿ ಹಾಕದಿದ್ದಲ್ಲಿ ಅಂದು ಬಂದ್ ಇದ್ದರೂ ಸಹ ರಜೆ ಕೊಡಬೇಕಿತ್ತು . ಹೆಚ್ಚು ರಜೆಗಳು ಇರುತ್ತಿರಲ್ಲವಾದ್ದರಿಂದ ಕಷ್ಟಪಟ್ಟು ಹೇಗಾದರೂ ಬಂದು ಆಫೀಸ್ ಬಂದ್ ಆದ ನಂತರ ವಾಪಸ್ ಹೋಗುತ್ತಿದ್ದೆವು. ನಮ್ಮ ವಿಭಾಗೀಯ ಕಚೇರಿ ಹಾಗೂ ಶಾಖೆ ಎರಡು ಎರಡೂ ನಗರದ ಹೃದಯ ಭಾಗದಲ್ಲಿ ಇದ್ದುದರಿಂದ ಯಾವುದೇ ಒಂದು ಗಲಭೆ ಆದರೂ ಶಾಖೆಗಳು ಮುಚ್ಚುತ್ತಿದ್ದುದು ಗ್ಯಾರಂಟಿ. ಮುಖ್ಯವಾಗಿ ಡಿಸೆಂಬರ್ 1991ರಲ್ಲಿ ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಾದ್ಯಂತ ತೀವ್ರವಾಗಿ ಭುಗಿಲೆದ್ದವು, ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಆದೇಶಗಳ ವಿರುದ್ಧ ನಡೆದ ಪ್ರತಿಭಟನೆಗಳಿಂದ ಪ್ರಾರಂಭವಾಗಿ, ತಮಿಳರ ಮೇಲೆ ಹಿಂಸಾಚಾರ, ಆಸ್ತಿಪಾಸ್ತಿ ಹಾನಿ ಮತ್ತು ತಮಿಳರು ರಾಜ್ಯ ತೊರೆಯುವ ಪರಿಸ್ಥಿತಿಗೆ ಕಾರಣವಾಯಿತು, ಇದು ರಾಜ್ಯದ ಇತಿಹಾಸದ worst riots ಎಂದು ಕರೆಯಲ್ಪಟ್ಟಿತು. ಗಲಾಟೆಗಳಿಗೆ ಕಾರಣ ಕಾವೇರಿ ನ್ಯಾಯಮಂಡಳಿ ಆದೇಶ. ಭಾರತ ಸರ್ಕಾರ ನೇಮಿಸಿದ ಕಾವೇರಿ ಜಲ ವಿವಾದ ನ್ಯಾಯಮಂಡಳಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಆದೇಶಿಸಿತ್ತು, ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು.ನ್ಯಾಯಮಂಡಳಿಯ ಆದೇಶದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ನಿರಾಕರಿಸಿದಾಗ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು.ಮೈಸೂರು, ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ನಗರಗಳಲ್ಲಿ ತಮಿಳರ ಮೇಲೆ ಗುಂಪುಗಳ ದಾಳಿಗಳು ನಡೆದವು. ತಮಿಳು ಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಯಿತು.ಸಾವಿರಾರು ತಮಿಳು ಕುಟುಂಬಗಳು ಭಯದಿಂದ ಕರ್ನಾಟಕವನ್ನು ತೊರೆದರು.ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ್ ಪ್ರತಿಭಟನೆಗಳು ಹಿಂಸಾಚಾರಕ್ಕೆ ಕಾರಣವಾದವು. ಪೊಲೀಸರ ಗುಂಡೇಟು ಸೇರಿದಂತೆ ಹಲವು ಸಾವುಗಳು ಸಂಭವಿಸಿದವು (ಅಂದಾಜು 28 ಜನರು ಮೈಸೂರಿನಲ್ಲಿ).ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸುಮಾರು ಒಂದು ತಿಂಗಳ ಕಾಲ ಮುಚ್ಚಬೇಕಾಯಿತು.ಆರ್ಥಿಕ ನಷ್ಟ: ಆಸ್ತಿಪಾಸ್ತಿ ನಷ್ಟ ಅಂದಾಜು 19 ಕೋಟಿ ರೂ. ಇತ್ತು.ಈ ಗಲಾಟೆಗಳು ಕಾವೇರಿ ವಿವಾದದ ಉದ್ವಿಗ್ನತೆಯನ್ನು ಮತ್ತು ಕನ್ನಡಿಗರು ಹಾಗೂ ತಮಿಳರ ನಡುವಿನ ಸಂಬಂಧದಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ತೋರಿಸಿಕೊಟ್ಟವು. ನಮಗೂ ಆ ಡಿಸೆಂಬರ್ ತಿಂಗಳಲ್ಲೇ 6 _ 7 ದಿನ ಕಚೇರಿಗಳನ್ನು ಮುಚ್ಚಿಸಿದ್ದರು. ನಂತರದ 1993 ಡಿಸೆಂಬರ್ ನಲ್ಲಿ ಬಾಬರಿ ಮಸೀದಿ ಪ್ರಕರಣ ಸಂಬಂಧ ಮೈಸೂರಿನಲ್ಲಿ ಕೋಮು ಗಲಭೆಗಳು ಆರಂಭವಾದವು ನಮ್ಮ ಕಚೇರಿಗಳಿದ್ದ ನಜರ್ಬಾದ್ ಏರಿಯಾ ಸೂಕ್ಷ್ಮ ಪ್ರದೇಶ ಎಂಬ ಹೆಸರು ಪಡೆದಿತ್ತು. ಅಲ್ಲಿ ಮುಸ್ಲಿಂ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿತ್ತು ಹೆಚ್ಚು ಕಡಿಮೆ 27 ದಿನ ಕರ್ಫ್ಯೂ ಜಾರಿಯಲ್ಲಿತ್ತು. ಕರ್ಫ್ಯೂ ಹಾಕಿದ ವಿಷಯ ಮೊದಲೇ ಗೊತ್ತಿದ್ದ ಸಮಯದಲ್ಲಿ ಶಾಖೆಗೆ ಹೋಗುತ್ತಲೇ ಇರಲಿಲ್ಲ. ಕೆಲವೊಮ್ಮೆ ಕರ್ಫ್ಯೂ ಮುಂದುವರಿಸಿದ ವಿಷಯ ತಿಳಿಯದೆ ನಮ್ಮ ಏರಿಯಾಗಳ ಕಡೆ ಕರ್ಫ್ಯೂ ಜಾರಿಯಲ್ಲಿ ಇಲ್ಲದೆ ಇದ್ದಾಗ ಬಸ್ ಗಳು ಸಹ ಓಡಾಡುತ್ತಿದ್ದುದರಿಂದ ಶಾಖೆಗೆ ಹೋಗುತ್ತಿದ್ದೆವು. ದಾರಿಯಲ್ಲೇ ಪೊಲೀಸರು ತಡೆದು ಬೈದು ವಾಪಸ್ಸು ಕಳಿಸುತ್ತಿದ್ದರು ಅಲ್ಲದೆ ಒಂದು ರೀತಿಯ ಭಯ ಮಿಶ್ರಿತ ವಾತಾವರಣ. ಕೋಮುಗಲಭೆ ಅಂದರೆ ಹಾಗೆಯೇ. ಆಗ ಇಡೀ ಮೈಸೂರು ಪ್ರಕ್ಷುಬ್ಧ. ಹೊರಗೆ ಓಡಾಡಲು ಭಯ ಉಂಟಾಗುವ ಪರಿಸ್ಥಿತಿ. ಆ ಬಾರಿ ಎಂದು  ಅರೆ ಮಿಲಿಟರಿ ಹಾಗೂ ಮಿಲಿಟರಿ ಪಡೆಗಳನ್ನು ಸಹ ಕರೆಸಿಬಿಟ್ಟಿದ್ದರಿಂದ ಓಡಾಡುವ ದಾರಿಯಲ್ಲಿ ಸೈನಿಕರನ್ನು ಕಾಣುವಂತೆ ಆಗಿತ್ತು .ಇದು ಅಪರೂಪದ ಸಂಗತಿ ಆದ್ದರಿಂದ ಅವರ ಕಡೆ ಭಯದಿಂದಲೇ ನೋಡಿಕೊಂಡು ಹೋಗಬೇಕಾಗಿತ್ತು. ನನಗೆ ಇನ್ನೂ ಚೆನ್ನಾಗಿ ನೆನಪಿದೆ ಡಿಸೆಂಬರ್ 6 ನಮ್ಮ ತಾಯಿಯ ಹುಟ್ಟುಹಬ್ಬ .ಅಂದು ಸಂಜೆ ಅದಕ್ಕಾಗಿಯೇ ಜಾಮೂನ್ ಮತ್ತು ಸಿಹಿ ಅಡಿಗೆ ಮಾಡಿದ್ದರು ಟಿವಿ ನೋಡುತ್ತಾ ಊಟ ಮಾಡುವಾಗ ಬಾಬರಿ ಮಸೀದಿ ಧ್ವಂಸದ ದೃಶ್ಯಗಳನ್ನು ನೋಡುತ್ತಾ ಊಟ ಮಾಡಿದೆವು .ಆದರೆ ಮಾರನೆಯ ದಿನದಿಂದ ಮೈಸೂರಿನಲ್ಲಿ ನಡೆದ ಆ ಹಿಂಸಾಚಾರ ಮತ್ತು ಭಯದ ವಾತಾವರಣ ನೆನೆಸಿಕೊಂಡಾಗ ಈಗಲೂ ಮನಸ್ಸಿಗೆ ಒಂದು ರೀತಿಯ ಕಸಿವಿಸಿ ಉಂಟಾಗುತ್ತದೆ. ಆಗ ನಮ್ಮ ಬಳಿ ದ್ವಿಚಕ್ರ ವಾಹನಗಳು ಇಲ್ಲದಿದ್ದರಿಂದ ಬಸ್ ನಲ್ಲಿಯೇ ಓಡಾಟ ಹೋಗುತ್ತಾ ಬಸ್ ಸಿಕ್ಕಿದರು ಬರುವ ವೇಳೆಗೆ ಬಸ್ ಓಡಾಟ ನಿಂತು ಹೋಗಿರುತ್ತಿತ್ತು ಹಾಗಾಗಿ ಹೆಚ್ಚಿನ ಅಂಶ ನಡೆದೆ ಮನೆ ಸೇರುತ್ತಿದ್ದೆವು. ಆ ದಿಕ್ಕಿನಲ್ಲಿ ಹೋಗುವ ಎಲ್ಲರೂ ಒಟ್ಟಾಗಿ ನಡೆಯುವುದು ಅಂದಿನ ದಿನಗಳ ಸಾಮಾನ್ಯ ಪದ್ಧತಿಯಾಗಿ ಹೋಗಿತ್ತು. ಈ ನಡೆಯುವ ಕಷ್ಟಕ್ಕಾಗಿಯೇ ಬಂದಾದರೂ ಕಚೇರಿ ಬಂದ್ ಆಗುವುದು ಬೇಡಪ್ಪ ಎನ್ನಿಸಿ ಬಿಡುತ್ತಿತ್ತು ಮುಂದೆ ನಮ್ಮದೇ ದ್ವಿಚಕ್ರವಾಹನಗಳಲ್ಲಿ ಹೋಗುವಾಗ ರಜೆ ಸಿಕ್ಕಿದ ಖುಷಿ ಇರುತ್ತಿತ್ತು. ಇನ್ನು ಕಚೇರಿಯ ಕೆಲಸದ ವಿಷಯಕ್ಕೆ ಬಂದರೆ ನನ್ನ ಜೊತೆ ಸಹಾಯಕರಾಗಿದ್ದ ರಾಮನ್ ಅವರು ಉನ್ನತ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿ ವರ್ಗವಾಗಿ ಹೋದರು ಈ ಹಿಂದೆ ಹೇಳಿದಂತೆ ವಿದ್ಯಾರಣ್ಯ ಅವರು ಹೋದಾಗಿನಿಂದ ನಮ್ಮ ವಿಭಾಗದಲ್ಲಿ ಉನ್ನತ ಶ್ರೇಣಿ ಸಹಾಯಕರು ಇರಲಿಲ್ಲ ಈಗ ಸತ್ಯನಾರಾಯಣ ಎನ್ನುವವರು ಸೋಮವಾರಪೇಟೆಯಿಂದ ವರ್ಗವಾಗಿ ಬಂದರು ಅಲ್ಲದೆ ರಾಮನ್ ಅವರ ಜಾಗಕ್ಕೆ ಸುಧಾ ಎನ್ನುವವರು ಸಿಎ ಬ್ರಾಂಚ್ ನಿಂದ ವರ್ಗವಾಗಿ ಬಂದರು. ಈ ವೇಳೆಗಾಗಲೇ ಎಸ್ಎಂಎಸ್ ಗೋಪಾಲನ್ ಅವರು ನನಗೆ ಒಳ್ಳೆಯ ಮಾರ್ಗದರ್ಶನ ನೀಡಿ ಚೆನ್ನಾಗಿ ತರಬೇತಿ ಕೊಟ್ಟುಬಿಟ್ಟಿದ್ದರು. ಒಳ್ಳೆ ಶಾಲೆಯ ಪರೀಕ್ಷೆಗೆ ಓದುವಂತೆ ಇಲಾಖೆಯ ಸುತ್ತೋಲೆಗಳನ್ನು ಚೆನ್ನಾಗಿ ಮನನ ಮಾಡಿಕೊಂಡಿರುತ್ತಿದ್ದೆ. ಹಾಗೆಲ್ಲ ಹೊಸ ಹೊಸ ಪ್ಲಾನ್ ಗಳು ಬಂದಾಗ ವಲಯ ಕಛೇರಿಯಿಂದ ಸುತ್ತೋಲೆಗಳು ಬರುತ್ತಿದ್ದವು ಹಾಗೆ ವಿಭಾಗಕ್ಕೆ ಸಂಬಂಧಿಸಿದ ಏನಾದರೂ ತಿದ್ದುಪಡಿಗಳು ಬದಲಾವಣೆಗಳು ಸಹ ಸುತ್ತೋಲೆಗಳ ಮೂಲಕವೇ ಬರುತ್ತಿತ್ತು ಇಲ್ಲಿ ಅವುಗಳನ್ನು ನಾವು ಮತ್ತೆ ಟೈಪ್ ಮಾಡಿಸಿ ಸೈಕ್ಲೋ ಸ್ಟೈಲ್ ಮಾಡಿ ಪ್ರತಿಗಳನ್ನು ಮಾಡಿ ಶಾಖಾ ಕಚೇರಿಗಳಿಗೆ ಕಳಿಸಿಕೊಡುತ್ತಿದ್ದೆವು. ವಿಭಾಗಿಯ ಕಚೇರಿಯ ಕ್ರಮ ಸಂಖ್ಯೆಗಳು ಸಹ ಸುತ್ತೋಲೆಗಳಲ್ಲಿ ಇರುತ್ತಿದ್ದವು. ಇವೆಲ್ಲ ಸಂಖ್ಯೆಗಳನ್ನು ನನ್ನ ನೆನಪಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಯಾರಾದರೂ ಫೋನ್ ಮಾಡಿ ಕೇಳಿದಾಗ ಅಲ್ಲಲ್ಲೇ ಮಾರ್ಗದರ್ಶನ ನೀಡುವಷ್ಟು ಹೊಸ ವ್ಯವಹಾರ ವಿಭಾಗದಲ್ಲಿ ಪಳಗಿ ಬಿಟ್ಟಿದ್ದೆ .ಇದಕ್ಕೆಲ್ಲ ನಮ್ಮ ಆಡಳಿತಾಧಿಕಾರಿಗಳವರೇ ಕಾರಣ. ತಮಗೆ ತಿಳಿದ ಎಲ್ಲಾ ವಿಷಯಗಳು ನಮಗೆ ತಿಳಿಸಿಕೊಟ್ಟು ಸಹಾಯ ಮಾಡುತ್ತಿದ್ದರು. ಸಹಾಯಕ ವಿಭಾಗಾಧಿಕಾರಿಗಳಾಗಿದ್ದ ಆಚಾರ್ಯ ಅವರು ಸಹ ನಿವೃತ್ತಿ ಹೊಂದಿ ವಿ ನರಸಿಂಹನ್ ಎನ್ನುವ ಅಧಿಕಾರಿಗಳು ಆ ಜಾಗಕ್ಕೆ ಬಂದಿದ್ದರು. ಅವರು ಸಹ ಆಗ ಫೆಲೋ ಶಿಪ್ ಮಾಡಿದ ಕೆಲವೇ ಜನಗಳಲ್ಲಿ ಒಬ್ಬರು. ತುಂಬಾ ವಿಷಯ ತಿಳಿದುಕೊಂಡಿದ್ದರು. ಆದರೆ ಮಾತೃ ಭಾಷೆ ತಮಿಳು ಆದ್ದರಿಂದ ಕನ್ನಡದಲ್ಲಿ ವ್ಯವಹರಿಸಲು ಸ್ವಲ್ಪ ತೊಡಕು ಇತ್ತು .ಹಾಗಾಗಿ ಯಾರದೇ ಫೋನ್ಗಳು ಬಂದರೆ ನನ್ನನ್ನು ಅಥವಾ ಆಡಳಿತ ಅಧಿಕಾರಿಗಳನ್ನು ಕರೆಯುತ್ತಾ ಇದ್ದರು. ನಾನು ವಿಭಾಗೀಯ ಕಚೇರಿಗೆ ಬಂದ 3-4 ತಿಂಗಳಲ್ಲಿ ಅಲ್ಲಿನ ಶೀಘ್ರ ಲಿಪಿಕಾರ್ತಿ ಸುವರ್ಣ ಅವರು ಹೆರಿಗೆ ರಜೆಗೆ ಹೋಗಿದ್ದರು ಅಲ್ಪಕಾಲದ ರಜೆ ಆದ್ದರಿಂದ ಅವರ ಜಾಗಕ್ಕೆ ಬೇರೆಯವರನ್ನು ಕೊಟ್ಟಿರಲಿಲ್ಲ ನನಗೆ ಬೆರಳಚ್ಚು ಬರುತ್ತಿದ್ದುದರಿಂದ ನಾನೇ ಆ ಜಾಗದ ಕೆಲಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೆ. ಉಕ್ತಲೇಖನ ಕೊಡುವ ಪ್ರಮೇಯಗಳು ಅಷ್ಟೇನೂ ಬರುತ್ತಿರಲಿಲ್ಲ. ವಿಷಯ ಹೇಳಿದರೆ ಸಾಕು ನಾನೇ ಪತ್ರಗಳನ್ನು ಡ್ರಾಫ್ಟ್ ಮಾಡಿ ಟೈಪ್ ಮಾಡಿ ಕೊಟ್ಟು ಬಿಡುತ್ತಿದ್ದೆ.  ಆಗ ಸೈಕ್ಲೊ ಸ್ಟೈಲ್ ಅಂದರೆ ಕಲ್ಲಚ್ಚು ಪ್ರತಿಗಳ ಕಾಲ ಈಗಿನ ಹಾಗೆ ಜೆರಾಕ್ಸ್ ಹೆಚ್ಚು ಉಪಯೋಗದಲ್ಲಿ ಇರಲಿಲ್ಲ ಕಾರ್ಬನ್ ಶೀಟ್ ಇರುವ ಸೈಕ್ಲೋ ಸ್ಟೈಲ್ ಶೀಟ್ ಗಳಲ್ಲಿ ಟೈಪ್ ಮಾಡಿ ಕೊಟ್ಟರೆ ಅದನ್ನು ಸಹಿ ಮಾಡಿ ಕೊಟ್ಟ ನಂತರ ಹೆಚ್ಚಿನ ಪ್ರತಿಗಳನ್ನು ಕಲ್ಲಚ್ಚು ಯಂತ್ರದಲ್ಲಿ ತೆಗೆದು ಕೊಡುತ್ತಿದ್ದರು. ಈಗ ಪ್ರತಿಯೊಂದಕ್ಕೂ ಜೆರಾಕ್ಸ್ ಬಂದಿದೆ ಕಾಗದದ ಪ್ರತಿಗಳ ಬಳಕೆಯೂ ಕಡಿಮೆಯಾಗಿದೆ ಎಲ್ಲವೂ ಕಂಪ್ಯೂಟರ್ಗಳಲ್ಲಿಯೇ. ನಾವು ನೋಡ ನೋಡುತ್ತಿದ್ದಂತೆಯೇ ಎಷ್ಟೆಲ್ಲಾ ಬದಲಾವಣೆಗಳಿಗೆ ಸಾಕ್ಷಿಯಾದೆವಲ್ಲ ಎನಿಸುತ್ತದೆ. ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗೆ ಪರಿಶೀಲನೆಗೆಂದು ಹೋಗುವುದು ಒಂದು ಕ್ರಮ .ಆಗ ಅದಕ್ಕೆ ಕ್ವಾಲಿಟಿ ಕಂಟ್ರೋಲ್ ಎಂಬ ಪಾರಭಾಷಿಕ ಪದ ಇತ್ತು. ಈಗ ಅದನ್ನು ಕ್ವಾಲಿಟಿ ಮ್ಯಾನೇಜ್ಮೆಂಟ್ ಅನಾಲಿಸಿಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಒಬ್ಬರು ಅಧಿಕಾರಿ ಹಾಗೂ ಮತ್ತೊಬ್ಬರು ಉನ್ನತ ದರ್ಜೆ ಸಹಾಯಕರು ಅಥವಾ ಸಹಾಯಕರು ಅವರೊಂದಿಗೆ ಹೋಗುವುದು ವಾಡಿಕೆ. ಈವರೆಗೆ ರಾಮನ್ ಅವರು ಇದುದರಿಂದ ಅವರೇ ಎಲ್ಲಾ ಕಡೆಗೂ ಹೋಗುತ್ತಿದ್ದರು ನನಗೂ ವಿಭಾಗದ ಎಲ್ಲಾ ವಿಷಯಗಳು ಅಷ್ಟು ಚೆನ್ನಾಗಿ ತಿಳಿದಿರಲಿಲ್ಲ ಹಾಗಾಗಿ ನಾನು ಹೋಗಲು ಆಗಿರಲಿಲ್ಲಈಗ ರಾಮನ್ ಅವರು ಹೋದ ಮೇಲೆ ನಾನೇ ಸೀನಿಯರ್ ಆದ್ದರಿಂದ ಅಲ್ಲದೆ ಗೋಪಾಲನ್ ಸರ್ ಅವರಿಗೆ ನನ್ನ ಮೇಲೆ ತುಂಬಾ ನಂಬಿಕೆ ಇರುವುದರಿಂದ ನನ್ನನ್ನು ಅವರೊಂದಿಗೆ ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಬರಲು ಹೇಳುತ್ತಿದ್ದರು ಆದರೆ ತುಂಬಾ ದೂರದ ಕಡೆಗಳಿಗೆ ನನಗೆ ಹೋಗಲು ಆಗುತ್ತಿರಲಿಲ್ಲ ಹಾಗಾಗಿ ಶ್ರೀರಂಗಪಟ್ಟಣ ನಂಜನಗೂಡು, ಮೈಸೂರಿನ ವಿವಿಧ ಶಾಖೆಗಳು ಕೆ ಆರ್ ನಗರ ಹುಣಸೂರು ಹಾಗೂ ಕೊಳ್ಳೇಗಾಲ ಒಂದು ಬಾರಿ ಚಾಮರಾಜನಗರಕ್ಕೂ ಸಹ ಹೋಗಿದ್ದ ನೆನಪು ಈ ರೀತಿ ಅವರೊಂದಿಗೆ ಹೋಗುತ್ತಿದ್ದೆ. ಅಲ್ಲಿ  ಆಯಾಯಾ ಅವಧಿಯಲ್ಲಿ ವಿತರಿಸಿದ ಪಾಲಿಸಿಗಳ ಕಡತಗಳನ್ನು ತರಿಸಿ ಸರಿಯಾದ ರೀತಿಯಲ್ಲಿ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು. ಏನಾದರೂ ತಪ್ಪುಗಳು ಇದ್ದಲ್ಲಿ ಅವುಗಳನ್ನು ಬರೆದುಕೊಂಡು ಹೋಗುವುದು ಮತ್ತು ಅಲ್ಲಿಯೇ ನಡೆಯುತ್ತಿದ್ದ ಚರ್ಚೆಗಳಲ್ಲಿ ಅವುಗಳನ್ನು ಹೇಳಿ ತಿದ್ದಿಕೊಳ್ಳಲು ಹೇಳುತ್ತಿದ್ದೆವು. ವಾಪಸ್ಸು ಬಂದ ನಂತರ ಅದರ ಬಗ್ಗೆ ಒಂದು ವರದಿಯನ್ನು ತಯಾರಿಸಿ ವಿಭಾಗಿಯ ಅಧಿಕಾರಿಗಳ ಗಮನಕ್ಕೆ ತಂದು ಶಾಖೆಗೆ ಕಳುಹಿಸಿ ಕೊಡುತ್ತಿದ್ದೆವು.ಈ ರೀತಿ ತಿಂಗಳಲ್ಲಿ ನಾಲ್ಕು ಅಥವಾ ಐದು ದಿನಗಳು ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಹೋಗುತ್ತಿದ್ದು ಮಾಮೂಲಿ ಗಿಂತ ಸ್ವಲ್ಪ ಬೇಗನೆ ಹೊರಡಬೇಕಿತ್ತು ಹಾಗೂ ಬರುವುದು ಸಹ ತಡವಾಗುತ್ತಿತ್ತು ಆದರೆ ಈ ರೀತಿಯ ಟೂರ್ಗಳಿಗೆ ಪ್ರವಾಸ ಭತ್ಯೆ ಕೊಡುತ್ತಿದ್ದರಿಂದ ಅದು ಒಂದು ರೀತಿಯ ಆಕರ್ಷಣೆ .ಬಸ್ ಚಾರ್ಜ್ ಮಾತ್ರ ಖರ್ಚು ಮಾಡಿದರೆ ಬಸ್ ಚಾರ್ಜ್ ನೊಂದಿಗೆ ಒಂದು ದಿನದ ಪ್ರಯಾಣ ಭತ್ಯೆ ಸಿಗುತ್ತಿತ್ತು. ಆಗ ಒಂದು ದಿನಕ್ಕೆ ನೂರು ರೂಪಾಯಿಗಳ ವರೆಗೂ ಪ್ರವಾಸ ಭತ್ಯೆ ಸಿಗುತ್ತಿತ್ತು. ಈ ರೀತಿ ಮನಸ್ಸಿಗೆ ಒಂದು ರೀತಿ ಖುಷಿ ಕೊಡುವ ಕೆಲಸ. ದಿನಗಳು ಉರುಳುತ್ತಿದ್ದದು ಗೊತ್ತಾಗುತ್ತಲೇ ಇರಲಿಲ್ಲ. ಮುಂದಿನ ವಾರ,ಇಲಾಖಾ ಪರೀಕ್ಷೆಗಳು ಸುಜಾತಾ ರವೀಶ್

Read Post »

You cannot copy content of this page

Scroll to Top