ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

    ಯುದ್ಧರಂಗಕ್ಕೆ ಬರಲು ವಿಳಂಬವಾದುದಕ್ಕೆ ಕಾರಣವೇನೆಂದು ಅಬ್ಬರಿಸಿ ಮಗನಲ್ಲಿ ಕೇಳಿದ ಹಂಸಧ್ವಜ. ಉತ್ತಮ ರಾಜನಿಗಿರಬೇಕಾದ ಲಕ್ಷಣವದು. ತನ್ನ ಮಗನನ್ನೂ ಪ್ರಜೆಯಾಗಿ ನೋಡುವ ಭಾವ ಅವನದ್ದು.

    ಸುಧನ್ವ ನಿಜ ವಿಚಾರವನ್ನೇ ಅರುಹಿದ. “ಸಂತಾನವನ್ನು ಬಯಸಿದ ಸತಿಯ ಸತತ ಇಚ್ಛೆಗಳನ್ನು ಪೂರೈಸುವ ಕಾರಣದಿಂದಾಗಿ ತಡವಾಯಿತು” ಎಂದ.

    ಹಂಸಧ್ವಜ ಕೋಪೋದ್ರಿಕ್ತನಾದ. ಕೃಷ್ಣದರ್ಶನದ ಪುಣ್ಯಕಾಲವದು ಪ್ರಾಪ್ತವಾಗಿರಲು ಅನ್ಯವಿಷಯಗಳಿಗೆ ಮನಗೊಟ್ಟ ಸುಧನ್ವನದ್ದು ತಪ್ಪು ಎಂದು ಜರಿದ. ಶಂಖ ಲಿಖಿತರನ್ನು ಬರಹೇಳಿದ. ಅಲ್ಲಿಗೆ ಬಂದರು ಶಂಖ ಲಿಖಿತರು. ಸಮರದ ಸಮಯದಲ್ಲಿ ವಿಳಂಬಗೈದವರನ್ನು ಕಾದ ಎಣ್ಣೆ ಕೊಪ್ಪರಿಗೆಗೆ ಎಸೆಯಬೇಕು ಎಂಬ ಕಟ್ಟಳೆಯನ್ನು ಈಗಾಗಲೇ ಅಳವಡಿಸಿಕೊಂಡಿದ್ದರು ಈ ಪುರೋಹಿತ ಸಹೋದರರು. ಅದೇ ನಿರ್ಧಾರವನ್ನು ತಿಳಿಸಿದರು ಅರಸ ಹಂಸಧ್ವಜನಲ್ಲಿ. “ಕಾದ ಎಣ್ಣೆ ಕೊಪ್ಪರಿಗೆಗೆ ಈ ಸುಧನ್ವನನ್ನು ಎಸೆಯದಿದ್ದರೆ ನಾವು ಈ ಚಂಪಕಾಪುರದಲ್ಲಿ ಇರುವವರಲ್ಲ” ಎಂಬ ನಿಷ್ಠುರದ ನುಡಿಯನ್ನಾಡಿದರು.

   ಅರಸ ತಡಮಾಡಲಿಲ್ಲ. ಆಪ್ತಸಚಿವ ಎನಿಸಿಕೊಂಡ ಸುಮತಿಯನ್ನು ಕರೆದ. “ಸುಧನ್ವನ ಕೈಗಳನ್ನು ಕಟ್ಟಿ ಕುದಿವ ಎಣ್ಣೆಯಲ್ಲಿ ಎಸೆಯಬೇಕು” ಎಂಬ ಆಜ್ಞೆಯನ್ನು ನೀಡಿದ. ಅದನ್ನು ಪೂರೈಸುವ ಹೊಣೆಯನ್ನು ಸುಮತಿಗೆ ನೀಡಿದ. ರಾಜ ಘೋಷಿಸಿದ ಶಿಕ್ಷೆಯನ್ನು ರಾಜಗುವರನಿಗೆ ನೀಡುವುದಕ್ಕಾಗಿ ಸುಧನ್ವನನ್ನು ಸೆಳೆದೊಯ್ದ ಸುಮತಿ.

    ಕೊಪ್ಪರಿಗೆಯನ್ನು ಇರಿಸಿದ. ತೈಲವನ್ನದಕೆ ಸುರಿಸಿದ. ಒಣಕಟ್ಟಿಗೆಗಳನ್ನು ತರಿಸಿದ. ಬೆಂಕಿಯನ್ನು ಉರಿಸಿದ. ಪ್ರಿಯ ರಾಜಗುವರನಿಗೆದುರಾದ ಕಡುಗತಿಗೆ ಮರುಗಿ ಕಣ್ಣೀರ ಹರಿಸಿದ.

    ಸುಧನ್ವ ಸ್ವಭಾವ ಅದಾವ ಬಗೆಯದು ಎನ್ನುವುದರ ಸಂಪೂರ್ಣ ಅರಿವಿತ್ತು ಸುಮತಿಗೆ. “ಪ್ರಿಯ ರಾಜಕುಮಾರ, ನಿನಗೆ ಇಂತಹ ಗತಿ ಒದಗಿತೇ! ಅಯ್ಯೋ! ಕೃಷ್ಣನ ಭಕ್ತ ನೀನು. ಚೆಲುವ ಎನಿಸಿರುವೆ. ತಂದೆ ತಾಯಿಯರ ಬಗೆಗೆ ಅಕ್ಕರೆಯ ಭಾವವನ್ನು ಇಟ್ಟುಕೊಂಡವನು. ನೀತಿ ಅನೀತಿಗಳನ್ನು ತಿಳಿದುಕೊಂಡವನು. ಎಲ್ಲವನ್ನೂ ಅರಿತ ಜ್ಞಾನಿ. ದೈನ್ಯತೆಯಿಂದ ಬಳಿ ಬಂದವರಿಗೆ ದಾನವಿತ್ತು ಸಂತೋಷಿಸುವವನು. ಕೋಮಲ ಕಾಯದವನು. ಸುಖವನ್ನೇ ಬದುಕಿನಲ್ಲಿ ಉಂಡವನು. ಕಷ್ಟವನ್ನು ಕಾಣದವನು. ನಿನ್ನನ್ನು ಈ ಬಿಸಿಬಿಸಿಯಾದ ಎಣ್ಣೆಗೆ ನಾನು ಎಸೆಯುವುದಾದರೂ ಹೇಗೆ! ಇದಾವ ಉಭಯಸಂಕಟ ಒದಗಿತಿಂದು ಎನಗೆ!” ಎಂದು ತಾನೇ ಬಿಸಿಯೆಣ್ಣೆಯ ಕೊಪ್ಪರಿಗೆಯಲ್ಲಿ ಬಿದ್ದಂತೆ ಪ್ರಲಾಪಿಸಿದ ಆ ಆಪ್ತಸಚಿವ ಸುಮತಿ.

    ಸಂಕಟಪಡಬೇಕಾದ ಸುಧನ್ವ ಸಂಪೂರ್ಣ ಸೋತ ಸುಮತಿಯನ್ನು ಸಂತೈಸಿದ. “ನಾನು ಇದುವರೆಗೂ ಧರ್ಮಮಾರ್ಗವನ್ನು ತೊರೆದು ನಡೆದವನಲ್ಲ. ಯುದ್ಧದಲ್ಲಿ ಶತ್ರುಗಳೊಡನೆ ಹೋರಾಡಿ ಮಡಿಯಬೇಕಾಗಿದ್ದ ನನ್ನ ಈ ಶರೀರ ಈ ಎಣ್ಣೆ ಕೊಪ್ಪರಿಗೆಯಲ್ಲಿ ಕೊನೆಗಾಣುವಂತಾಯಿತು ಎನ್ನುವುದಕ್ಕೆ ದುಃಖವಿದೆ ನಿಜ. ಆದರೆ ಕೃಷ್ಣನ ನಾಮಸ್ಮರಣೆಗೆ ಶರಣು ಹೋಗುವೆ. ಅವನು ನನ್ನನ್ನು ಕಾಯುತ್ತಾನೆ ಎಂಬ ಭರವಸೆಯಿದೆ ನನ್ನೊಳಗೆ. ನೀನು ಅಂಜದೆ ಅರಸನ ಆಜ್ಞೆಯನ್ನು ಪೂರ್ಣಗೊಳಿಸು” ಎಂದ ಸುಧನ್ವ.

    ಮಾತನ್ನು ಮನ್ನಿಸಿದ ಸುಮತಿ. ಸುಧನ್ವನನ್ನು ಎತ್ತಿದ ಆತ ಕುದಿಯುತ್ತಿರುವ ಎಣ್ಣೆಯೊಳಗೆ ಅವನನ್ನು ಎಸೆದ. ರಾಜ ಪರಿವಾರದವರೆಲ್ಲಾ ಅಲ್ಲೇ ನೆರೆದಿದ್ದರು. ತಮ್ಮ ದೇಹವೇ ಕುದಿಯಿತೇನೋ ಎನ್ನುವಂತೆ ಮರುಗಿದರು. ಈ ಬಗೆಯ ಸಾವು ಒದಗಿಬಂತೇ ಸುಧನ್ವನಿಗೆ! ಎಂದು ಅಳುಮಳೆಯನ್ನು ಕರೆದರು. ಅದೆಂತು ಈ ಬಗೆಯ ಆಜ್ಞೆ ಕೊಟ್ಟನೋ ಆ ಅರಸ ಎನ್ನುತ್ತಾ ದೊರೆಯ ಕಠಿಣತೆಯ ನೆನೆದು ಕರಗಿದರು.

    ಕುದಿವ ಎಣ್ಣೆಯೊಳಗೆ ಬಿದ್ದ ಸುಧನ್ವ ಅಪ್ಪಿಕೊಂಡದ್ದು ಹರಿನಾಮ ಸ್ಮರಣೆಯನ್ನು. “ಹಿಂದೆ ರಕ್ಷಿಸಿದೆ ಅಸುರಸುತ ಪ್ರಹ್ಮಾದನನ್ನು ನೀ ಅಸುರಾರಿಯೇ. ಅಂದು ಧಾರ್ತರಾಷ್ಟçನ ದುಷ್ಟತೆಯ ಸಹಿಸದೆಯೇ ಸಭಾಪಮಾನದಲ್ಲಿ, ದ್ರುಪದಸುತೆಯ ಮಾನವನ್ನು ಕಾಯ್ದೆ ದುಷ್ಟಸಂಹಾರಕನೇ. ಇಂದು ನನಗೆ ನೀನಲ್ಲದೆ ಬೇರೆ ಇನ್ನಾರೂ ದಿಕ್ಕಿಲ್ಲ. ಕಾಪಾಡಬೇಕು ಎನ್ನನು ಓ ಕರುಣಾಳು ಕೃಷ್ಣಾ!” ಎಂದು ಮನದಲ್ಲಿಯೇ ಕೃಷ್ಣನನ್ನು ಕರೆಯುತ್ತಾ ಶ್ರೀಹರಿಯ ಧ್ಯಾನದಲ್ಲಿದ್ದನು ಸುಧನ್ವ.

    ಕೃಷ್ಣಕೃತ ವಿಸ್ಮಯ ಸಂಭವಿಸಿತು ಆ ಕ್ಷಣದಲ್ಲಿ! ಕೊತಕೊತನೆ ಕುದಿಯುತ್ತಿದ್ದ ಎಣ್ಣೆಯದು ಮೈಗೆ ಸೊಗಸನ್ನಿಕ್ಕುವ, ತನುವಿಗೆ ಸೊಗವನ್ನೀಯುವ ಸಿರಿಗಂಧವಾಯ್ತು ಅವನ ಪಾಲಿಗೆ. ಹೊರಗೆ ನೋಡುತ್ತಿದ್ದವರ ಕಣ್ಣಿಗದು ಕುದಿಕುದಿವ ಎಣ್ಣೆ. ಒಳಗಿದ್ದ ಸುಧನ್ವನ ಪಾಲಿಗದು ತಂಪನ್ನೀಯುವ ಬೆಣ್ಣೆ. ಅವನ ತನುವಿನ ರೋಮಗಳು ಕರಟಿಹೋಗಲಿಲ್ಲ. ಮೊಗದ ಚೆಲುವದು ಮುರುಟಿಹೋಗಲಿಲ್ಲ. ಕೊರಳಲ್ಲಿದ್ದ ತುಳಸಿ ಮಾಲೆಯದು ಬಾಡಲಿಲ್ಲ. ಅದರಲ್ಲಿದ್ದ ಕುಸುಮಗಳು ಮುದುಡಲಿಲ್ಲ. ಒಂದಿಷ್ಟೂ ಕುಂದದ ಅವನ ಮುಖ ನೆನಪಿಸುತ್ತಿತ್ತು ಪೂರ್ಣ ಅರಳಿದ ಅಂಬುಜವನ್ನು. ಹರಿನಾಮವೆಂಬ ಹರಿಗೋಲು ಅವನನ್ನು ಬಿಸಿಯೆಣ್ಣೆಯೆಂಬ ಕಷ್ಟತೊರೆಯಿಂದ ನಿರಾಳತೆಯೆಂಬ ನದಿತಟಕ್ಕೆ ತಲುಪಿಸಿತು.

    ನೋಡುತ್ತಿದ್ದ ಸರ್ವ ಸಜ್ಜನರ ಮೊಗದಲ್ಲಿ ಅಚ್ಚರಿಯ ಭಾವ. ಎಲ್ಲಾ ಜನರು ಬೆರಗಾದರು ಕೃಷ್ಣಮಹಿಮೆಯ ಕಣ್ಣಾರೆ ಕಂಡು.

    ಅಲ್ಲಿಯೇ ಇದ್ದ ಲಿಖಿತನಿಗೆ ಸಂಶಯ ಮೂಡಿತು. ಸುಧನ್ವ ಅಗ್ನಿಸ್ತಂಭನ ವಿದ್ಯೆಯಲ್ಲಿ ಪರಿಣತನಿರಬೇಕು ಎಂಬ ಸಂದೇಹ ಅವನನ್ನು ಕಾಡಿತು. ಎಳನೀರನ್ನು ಎಣ್ಣೆಗೆ ಸುರಿದರೆ ಉರಿ ಇನ್ನಷ್ಟು ಹೆಚ್ಚಾಗುತ್ತದೆ. ಇದವನಿಗೆ ತಿಳಿದಿತ್ತು. ಎಳನೀರನ್ನು ತರಿಸಿದ ಲಿಖಿತ. ಎಣ್ಣೆ ಕೊಪ್ಪರಿಗೆಗೆ ಸುರಿದ. ನಭೋಮಂಡಲವನ್ನೇ ವ್ಯಾಪಿಸುವಂತೆ ಉರಿಯೆದ್ದಿತು. ಆದರೂ ಸುಧನ್ವ ಏನೂ ಆಗದ ರೀತಿಯಲ್ಲಿ ನಗುತ್ತಲೇ ಇದ್ದ…


About The Author

Leave a Reply

You cannot copy content of this page

Scroll to Top