ಧಾರಾವಾಹಿ ಸಂಗಾತಿ-116
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಗಂಭೀರವಾದ ಸುಮತಿಯ ಆರೋಗ್ಯ ಪರಿಸ್ಥಿತಿ

ವೈದ್ಯರು ಮಗಳನ್ನು ಉದ್ದೇಶಿಸಿ….”ಮಗು ನೀನು ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡು ಬಾ”….. ಎನ್ನಲು ಮಗಳು ಸರಿ ಎನ್ನುವಂತೆ ತಲೆಯಾಡಿಸಿ, ವೈದ್ಯರ ಕೊಠಡಿಯಿಂದ ನೇರವಾಗಿ ಪ್ರಯೋಗಾಲಯಕ್ಕೆ ಹೋಗಿ ತಾಯಿಯ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡಳು. ಕೊಠಡಿಗೆ ಬಂದಾಗ ವೈದ್ಯರು ಸುಮತಿಯ ರಕ್ತದೊತ್ತಡವನ್ನು ಪರಿಶೀಲಿಸುತ್ತಿದ್ದರು. ಒಮ್ಮೆ ಪರೀಕ್ಷಿಸಿ ಸಂದೇಹ ಬಂದು ಮತ್ತೆ ಮತ್ತೆ ಪರಿಶೀಲಿಸುತ್ತಿದ್ದರು. ಮಗಳು ಕೊಠಡಿಯ ಒಳಗೆ ಬಂದು ವೈದ್ಯರ ಮೇಜಿನ ಮೇಲೆ ವರದಿಯನ್ನು ಇಟ್ಟಳು. ಸುಮತಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಿದ್ದ ವೈದ್ಯರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು….”ಕಳೆದ ಬಾರಿ ನೀವು ಬಂದಾಗ ನಿಮಗೆ ರಕ್ತದ ಒತ್ತಡವು ಇತ್ತೇ ಸುಮತಿ ಅವರೇ?…ಎಂದು ಕೇಳಿದಾಗ, ಮಗಳು ಅಮ್ಮನ ಹಳೆಯ ಚೀಟಿಗಳನ್ನು ವೈದ್ಯರ ಮುಂದೆ ಹಿಡಿದಳು. ಅವುಗಳನ್ನು ತೆಗೆದುಕೊಂಡು ವೈದ್ಯರು ಪರೀಕ್ಷಿಸಿದರು. ಆದರೆ ಆಗ ರಕ್ತದೊತ್ತಡವು ಸರಿಯಾಗಿಯೇ ಇತ್ತು. ಮೇಜಿನ ಮೇಲೆ ಇದ್ದ ವರದಿಯನ್ನು ತೆಗೆದುಕೊಂಡು ಸೂಕ್ಷ್ಮವಾಗಿ ನೋಡಿದರು. ರಕ್ತ ಮತ್ತು ಮೂತ್ರದಲ್ಲಿ ಸಕ್ಕರೆಯ ಅಂಶ ಎಂದಿಗಿಂತ ಅತಿಯಾಗಿ ಕಂಡಿತು. ವೈದ್ಯರು ಮತ್ತೊಮ್ಮೆ ಸುಮತಿಯ ಹಳೆಯ ಚೀಟಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಕೆಲವು ನಾಲ್ಕು ತಿಂಗಳ ಹಿಂದಿನ ಹಳೆಯ ಚೀಟಿಗಳಾಗಿದ್ದವು. ಹಾಗಾದರೆ ಸುಮತಿ
ಇತ್ತೀಚೆಗೆ ಯಾವುದೇ ಪರಿಶೀಲನೆಗೆ ಒಳಪಟ್ಟಿರಲಿಲ್ಲ ಎನ್ನುವುದು ವೈದ್ಯರಿಗೆ ಮನವರಿಕೆಯಾಯಿತು.
ವಿಷಾದದ ನೋಟ ಸುಮತಿಯೆಡೆಗೆ ಬೀರಿ…. “ಸುಮತಿ ಅವರೇ ನಾಲ್ಕು ತಿಂಗಳಿನಿಂದ ನೀವು ಆಸ್ಪತ್ರೆಗೆ ಬಂದು ಎಂದಿನಂತೆ ಪರಿಶೀಲನೆಯನ್ನು ಮಾಡಿಸಿಕೊಂಡಿಲ್ಲವೇಕೆ?”
ಎಂದು ವೈದ್ಯರು ಕೇಳಲು, ಸುಮತಿ ಮೇಜಿನ ಮೇಲೆ ಇದ್ದ ಚೀಟಿಯನ್ನು ನೋಡುತ್ತಾ….”ಏಕೋ ಬರಲು ಸಾಧ್ಯವಾಗಲಿಲ್ಲ ಸರ್…. ಶಾಲೆಗೆ ಹೋಗಿ ಬರುವುವಾಗ ಬಹಳ ಆಯಾಸವಾಗಿರುತ್ತಿತ್ತು…. ತರಕಾರಿಯನ್ನು ವಾರಕ್ಕೊಮ್ಮೆ ಮಗಳು ಪೇಟೆಯಿಂದ ತಂದುಕೊಡುತ್ತಿದ್ದುದರಿಂದ ನಾನು ಪೇಟೆಯ ಕಡೆಗೆ ಬರಲೇ ಇಲ್ಲ”… ಎಂದಳು. ಅವಳ ಅಸಹಾಯಕ ಪರಿಸ್ಥಿತಿಯನ್ನು ಅರಿತಿದ್ದ ವೈದ್ಯರು ಹೆಚ್ಚಾಗಿ ಏನನ್ನೂ ಹೇಳದೇ…. “ಸುಮತಿಯವರೇ ನೀವು ಕೆಲವು ದಿನಗಳ ಕಾಲ ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ….ನಿಮಗೆ ತುರ್ತು ಚಿಕಿತ್ಸೆಯನ್ನು ನೀಡಬೇಕಾದ ಅಗತ್ಯವಿದೆ”…. ಎಂದು ಹೇಳಿ ಮೇಜಿನ ಮೇಲಿದ್ದ ಬೆಲ್ಲನ್ನು ಒತ್ತಿ ಅಟೆಂಡರ್ ಅನ್ನು ಕರೆದು,….”ಈ ಅಮ್ಮನನ್ನು ಕರೆದುಕೊಂಡು ಹೋಗಿ ವಾರ್ಡಿಗೆ ದಾಖಲು ಮಾಡಪ್ಪ”…. ಎಂದು ಒಂದು ಚೀಟಿಯಲ್ಲಿ ಸುಮತಿಯನ್ನು ದಾಖಲು ಮಾಡುವ ಬಗ್ಗೆ ಬರೆದು ಅಟೆಂಡರ್ ಕೈಲಿ ಕೊಟ್ಟರು. ಮಗಳ ಕಡೆಗೆ ನೋಡುತ್ತಾ… “ಮಗೂ….ಅಮ್ಮನನ್ನು ವಾರ್ಡಿನಲ್ಲಿ ದಾಖಲು ಮಾಡಿ ನನ್ನನ್ನು ಬಂದು ಭೇಟಿ ಮಾಡು…. ಕೆಲವು ಔಷಧಿ ಮಾತ್ರೆಗಳನ್ನು ಬರೆದುಕೊಡುತ್ತೇನೆ…. ಹೊರಗಿನಿಂದ ತರಬೇಕಾಗುತ್ತದೆ”… ಎಂದರು. ಸರಿ ಎನ್ನುವಂತೆ ತಲೆಯಾಡಿಸಿ ಸುಮತಿಯ ಕೈಹಿಡಿದು ಕರೆದುಕೊಂಡು ಅಟೆಂಡರ್ ಹಿಂದೆ ಮಗಳು ನಡೆದಳು.
ಇಬ್ಬರನ್ನೂ ವಾರ್ಡಿಗೆ ಕರೆದುಕೊಂಡು ಹೋದ ಅಟೆಂಡರ್ ವಾರ್ಡನಲ್ಲಿ ಕುಳಿತಿದ್ದ ಡ್ಯೂಟಿ ನರ್ಸ್ಗೆ ವೈದ್ಯರ ಚೀಟಿಯನ್ನು ತೋರಿಸಿ….” ಈ ಯಮ್ಮನನ್ನು ಡಾಕ್ಟರ್ ಇಲ್ಲಿ ಅಡ್ಮಿಟ್ ಮಾಡಲು ಹೇಳಿದ್ದಾರೆ”…. ಎಂದನು. ಚೀಟಿಯನ್ನು ಪರಿಶೀಲಿಸಿದ ನರ್ಸ್, ಅಲ್ಲಿನ ಆಯಮ್ಮನನ್ನು ಕರೆದು…. “ನೋಡು ಇವರಿಗೆ ಇಲ್ಲಿಯೇ ಪಕ್ಕದಲ್ಲಿರುವ ಹಾಸಿಗೆಯನ್ನು ತಯಾರು ಮಾಡು”….ಎಂದು ಹೇಳಿ… “ಸುಮತಿಯವರೇ ಇಲ್ಲಿಯೇ ಇರುವ ಸ್ಟೂಲ್ ಮೇಲೆ ಕುಳಿತುಕೊಳ್ಳಿ…. ಆಯಾ ಹಾಸಿಗೆ ತಯಾರು ಮಾಡಿದ ನಂತರ ಅಲ್ಲಿ ಮಲಗಿಕೊಳ್ಳಿ…. ವೈದ್ಯರ ಸಲಹೆಯಂತೆ ನಿಮಗೆ ಇಂಜೆಕ್ಷನ್ ಕೊಡುವುದಿದೆ”…. ಎಂದು ಹೇಳಿದರು. ಆಯಮ್ಮ ಹಾಸಿಗೆ ರೆಡಿ ಮಾಡಿ ಸುಮತಿಗೆ ಅಲ್ಲಿ ಮಲಗಿಕೊಳ್ಳುವಂತೆ ಹೇಳಿದರು. ಮಗಳು ಸುಮತಿಯನ್ನು ಕರೆದುಕೊಂಡು ಹೋಗಿ ಹಾಸಿಗೆಯ ಮೇಲೆ ಕುಳ್ಳಿರಿಸಿದಳು…. “ಅಮ್ಮಾ ನೀನು ಮಲಗಿ ವಿಶ್ರಾಂತಿ ತೆಗೆದುಕೋ…. ನಾನು ಡಾಕ್ಟರನ್ನು ಭೇಟಿ ಮಾಡಿ ಅವರು ಬರೆದುಕೊಡುವ ಔಷಧಿಯನ್ನು ಹೊರಗಿನ ಮೆಡಿಕಲ್ ಶಾಪಿಗೆ ಹೋಗಿ ಖರೀದಿಸಿ ತರುತ್ತೇನೆ”…. ಎಂದು ಹೇಳಿ, ನರ್ಸ್ ಬಳಿ ಹೋಗಿ ತನ್ನನ್ನು ಡಾಕ್ಟರ್ ಭೇಟಿ ಮಾಡುವಂತೆ ತಿಳಿಸಿದ್ದಾರೆ. ಎಂದು ಹೇಳಿ ಅವರ ಸಮ್ಮತಿ ಪಡೆದು ವಾರ್ಡಿನಿಂದ ಹೊರ ನಡೆದಳು. ವಾರ್ಡ್ ನಿಂದ ಆಚೆ ಬರುವಾಗ ಮನಸ್ಸಿನಲ್ಲಿ ಕೃಷ್ಣನನ್ನು ನೆನೆದು…” ಶ್ರೀ ಕೃಷ್ಣಾ ನನ್ನ ತಾಯಿಗೆ ಯಾವುದೇ ತೊಂದರೆ ಆಗದಿರಲಿ…..ನೀನೊಬ್ಬನೇ ನಮಗೆ ದಿಕ್ಕು… ನಮ್ಮನ್ನು ಸದಾ ಕಾಪಾಡುತ್ತಿರುವವನು ನೀನು…. ಆದಷ್ಟು ಬೇಗ ಅಮ್ಮ ಚೇತರಿಸಿಕೊಳ್ಳುವಂತೆ ಮಾಡು”…. ಎಂದು ಬೇಡಿಕೊಂಡಳು.
ವೈದ್ಯರ ಕೊಠಡಿಯ ಬಳಿ ಬಂದಾಗ ಇನ್ನೂ ಅನೇಕ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಅಲ್ಲಿಯೇ ನಿಂತಿದ್ದ ಅಟೆಂಡರ್ ನನ್ನು… ನಾನು ಈಗ ವೈದ್ಯರನ್ನು ಭೇಟಿ ಮಾಡಬಹುದೇ?…ಎಂದು ಕೇಳಿದಳು. ….”ಒಳಗೆ ವೈದ್ಯರ ಬಳಿ ಕುಳಿತಿರುವ ರೋಗಿ ಹೊರಬಂದ ನಂತರ ನೀನು ಹೋಗಿ ವೈದ್ಯರನ್ನು ಕಾಣಬಹುದು”… ಎಂದನು. ಸ್ವಲ್ಪ ಹೊತ್ತು ಅಲ್ಲಿಯೇ ಬೆಂಚಿನ ಮೇಲೆ ಕುಳಿತಿದ್ದ ಹುಡುಗಿ ಒಳಗಿನಿಂದ ರೋಗಿಯೊಬ್ಬರು ಹೊರಗೆ ಬಂದ ನಂತರ ವೈದ್ಯರ ಕೊಠಡಿಯನ್ನು ಪ್ರವೇಶಿಸಿದಳು. ಸುಮತಿಯ ಮಗಳನ್ನು ಕಂಡ ವೈದ್ಯರು… “ಬಾರಮ್ಮಾ …ಇಲ್ಲಿ ಕುಳಿತುಕೋ…. ಎಂದು ತಮ್ಮ ಮುಂದೆ ಇದ್ದ ಕುರ್ಚಿಯ ಕಡೆಗೆ ಕೈ ಮಾಡಿದರು…. “ನಿನ್ನ ತಾಯಿಯನ್ನು ವಾರ್ಡಿಗೆ ಅಡ್ಮಿಟ್ ಮಾಡಿ ಆಯಿತೇ?…. ಎಂದು ಕೇಳಿದರು. ಹೌದು ಎನ್ನುವಂತೆ ಹುಡುಗಿ ತಲೆಯಾಡಿಸಿದಳು. ಅವಳ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಾ….. “ಮಗೂ ನಿಮ್ಮ ಮನೆಯಲ್ಲಿ ದೊಡ್ಡವರು ಯಾರೂ ಇಲ್ಲವೇ?…. ಎಂದಾಗ…. “ನಮ್ಮ ಮನೆಯಲ್ಲಿ ನಮ್ಮ ತಾಯಿ ನಾನು ಮತ್ತು ಒಬ್ಬಳು ತಂಗಿ ಮಾತ್ರ ಈಗ ಇರುವುದು…. ನನ್ನ ಅಕ್ಕನಿಗೆ ಮದುವೆಯಾಗಿ ಅವರ ಗಂಡನ ಮನೆಯಲ್ಲಿ ಇದ್ದಾರೆ…. ಕೊನೆಯ ತಂಗಿ ದೂರದ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾನೂ ಕೂಡ ಇಲ್ಲಿ ಒಂದು ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ…. ಅಮ್ಮನ ಜೊತೆ ಮನೆಯಲ್ಲಿ ಇರುವುದು ತಂಗಿ ಮಾತ್ರ”…. ಎಂದಳು. ಅವಳು ಹೇಳಿದ ಮಾತನ್ನು ಕೇಳಿದ ವೈದ್ಯರು ಚಿಂತಾಕ್ರಾಂತರಾದರು. ಆದರೂ ವಿಷಯವನ್ನು ಈ ಹುಡುಗಿಗೆ ತಿಳಿಸಲೇಬೇಕಿತ್ತು. ಹಾಗಾಗಿ…. “ನೋಡು ಮಗೂ ….ಕೆಲವು ಮುಖ್ಯವಾದ ವಿಚಾರವನ್ನು ನಿನಗೆ ತಿಳಿಸುವುದಿತ್ತು…. ಹಾಗಾಗಿ ಮನೆಯಲ್ಲಿ ದೊಡ್ಡವರು ಯಾರು ಇಲ್ಲವೇ ಎಂದು ಕೇಳಿದೆ…. ಎಂದರು.




