ಲೇಖನ
ಮಲ್ಲಿಕಾರ್ಜುನ ಕಡಕೋಳ
ಅಂಜಲಿದೇವಿ
ಅವರು ಎಂಟುಮಂದಿ ಅಕ್ಕತಂಗಿಯರು. ಎಂಟೂ ಮಂದಿಯು ವೃತ್ತಿರಂಗಭೂಮಿ ಅಭಿನೇತ್ರಿಯರು. ಆದವಾನಿ ಸುಭದ್ರಮ್ಮ, ಆದವಾನಿ ಸೀತಮ್ಮ, ಆದವಾನಿ ನಾಗರತ್ನಮ್ಮ… ಹೀಗೆ ಗದಗ ಪ್ರಾಂತ್ಯದ ಸಾಂಸ್ಕೃತಿಕ ಲೋಕದಲ್ಲಿ ಆಗ ಆದವಾನಿ ಸೋದರಿಯರದು ಬಲುದೊಡ್ಡ ಐಕಾನ್ ಹವಾ. ಮೊನ್ನೆಯಷ್ಟೇ ಗಂಗಾವತಿಯಲ್ಲಿ ನಿಧನರಾದ ಜಿ.ಎನ್.ಅಂಜಲಿದೇವಿ (೭೨ ) ಆದವಾನಿ ಸೋದರಿಯರ ಬಳಗದ ಕೊನೆಯ ಕೊಂಡಿ. ಇವರ ತಂದೆ ಆ ಕಾಲದ ಸಂಗೀತ ವಿದ್ವಾಂಸ. ಹೆಸರಾಂತ ಮೃದಂಗ ವಾದಕ. ತಂದೆಯಿಂದ ಬಳುವಳಿಯಾಗಿ ಬಂದುದು ಸಂಗೀತ ಮತ್ತು ರಂಗಭೂಮಿ ಅಭಿನಯ ಕಲೆ. ಅಂಜಲಿದೇವಿಯ ಬಾಳಸಂಗಾತಿ ನೀಲಕಂಠಪ್ಪ ಹಾರ್ಮೋನಿಯಂ ನುಡಿಸುವಲ್ಲಿ, ರಾಗಸಂಯೋಜನೆ ಮಾಡುವಲ್ಲಿ ಸುಪ್ರಸಿದ್ಧರು. ಅಷ್ಟಕ್ಕೂ ಅವರೆಲ್ಲರೂ ವೀರೇಶ್ವರ ಪುಣ್ಯಾಶ್ರಮದ ಗರಡಿಯಲ್ಲಿ ಸಾಮು ತೆಗೆದವರು. ಅಂಜಲಿದೇವಿ ರಂಗಸೇವೆಗೈಯ್ದ ಪಡೇಸೂರ ಕಂಪನಿ, ಚಿತ್ತರಗಿ ಕಂಪನಿ, ಸುಳ್ಳದ ಕಂಪನಿ, ಅರಿಷಿಣಗೋಡಿ ಕಂಪನಿ, ಏಣಗಿ ಬಾಳಪ್ಪ ಕಂಪನಿ.. ಈ ಎಲ್ಲ ನಾಟಕ ಕಂಪನಿ ಹೆಸರುಗಳೇ ಅಭಿನೇತ್ರಿ ಅಂಜಲಿದೇವಿಯ ಔನ್ನತ್ಯಕ್ಕೆ ರಂಗಸಾಕ್ಷಿ. ಕೆಲಕಾಲ ನಾಟಕ ಕಂಪನಿ ಮಾಡಿ ಅಂಜಲಿದೇವಿ ಕೈ ಸುಟ್ಟುಕೊಂಡರು. ದ್ರೌಪದಿ ಪಾತ್ರಕ್ಕೆ ಮನ್ಸೂರು ಸುಭದ್ರಮ್ಮ ರಾಜ್ಯಮಟ್ಟದಲ್ಲಿ ಮಹೋನ್ನತಿ ಸಾಧಿಸಿದರೆ ಅಂಜಲಿದೇವಿ ಗದಗ ಸೀಮೆಯಲ್ಲಿ ಅಂತಹುದೇ ಹೆಸರು ಮಾಡಿದವರು. ಅಷ್ಟಕ್ಕೂ ಅವರದು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕುಟುಂಬ. ಇಟಗಿ ಭೀಮಾಂಬಿಕೆ ಪಾತ್ರದಲ್ಲಿ ತಾದಾತ್ಮ್ಯ ಸಾಧಿಸಿದ ಅವರು ಎಚ್.ಆರ್.ಜಿ. ಕ್ಯಾಂಪಲ್ಲಿ ಭೀಮಾಂಬಿಕೆ ದೇವಸ್ಥಾನವನ್ನೇ ಸ್ಥಾಪಿಸಿದರು. ಕಡೆಗೆ ಭೀಮಾಂಬಿಕೆಯ ಸನ್ನಿಧಿಯಲ್ಲೇ ರಂಗಸಾಯುಜ್ಯ ಕಾಣಬೇಕಾಯಿತು.
ಸಿ. ರಮೇಶ
ನಾಟಕ ಕಂಪನಿಗಳ ವಲಯದಲ್ಲಿ ದಾವಣಗೆರೆ ರಮೇಶ ಎಂತಲೇ ಚಿರಪರಿಚಿತ ಹೆಸರು. ಐವತ್ತೆರಡು, ಸಾಯುವ ವಯಸ್ಸಲ್ಲ. ಖಳನಾಯಕ ಪಾತ್ರಕ್ಕೆ ಹೇಳಿ ಮಾಡಿಸಿದ ಫೇಷಿಯಲ್ ಎಕ್ಸ್ ಪ್ರೆಸೆನ್ ಅಲ್ಲಲ್ಲ ಟ್ಯಾಲೆಂಟ್. ಕಣ್ಣು, ಹುಬ್ಬು, ಹಣೆ, ತಲೆಗೂದಲುಗಳಲ್ಲೇ ಅಭಿನಯದ ಅಮೋಘ ಚತುರತೆ ತೋರುವಲ್ಲಿ ರಮೇಶ ಪರಿಣತ. ಆತ ನಾಯಕ ಪಾತ್ರ ಮಾಡಿದರೂ ಪ್ರೇಕ್ಷಕರಿಗೆ ಖಳನಾಯಕನದೇ ಖಾಸಾ ಕನಸು. ರಮೇಶ ಮಾಡುವ ಹಾಸ್ಯ ಪಾತ್ರದಲ್ಲೂ ವಿಲನ್ ಚಹರೆಗಳ ಹುಡುಕಾಟ ನಡೆಸುವಷ್ಟು ಪ್ರೇಕ್ಷಕರಲ್ಲಿ ಖಳನಾಯಕ ರಮೇಶ್ ಅಭಿನಯ ಪ್ರಭಾವದ ಬೇರುಗಳು. ಶರೀರ ಮತ್ತು ಶಾರೀರ ಎರಡಲ್ಲೂ ರಮೇಶ ಲಕ್ಷಣವಂತ. ಸಿನೆಮಾನಟ ಧೀರೇಂದ್ರ ಗೋಪಾಲ, ವಜ್ರಮುನಿ ಅವರನ್ನು ಆವಾಹಿಸಿಕೊಂಡು ರಮೇಶ ಅಭಿನಯಿಸುತ್ತಿದ್ದರೆ ಪ್ರೇಕ್ಷಕರಿಗೆ ಹಂಡೆಹಾಲು ಕುಡಿದ ಸಂಭ್ರಮ. ” ಅಂಣಾ ನನ್ನೊಳಗಿನ ಕಲಾವಿದ ರಮೇಶನಿಗಿಂತಲೂ ಸಿನಿಮಾ ನಟರನ್ನೇ ನನ್ನ ಮೂಲಕ ನೋಡುವಲ್ಲಿ ಪ್ರೇಕ್ಷಕರು ಇಷ್ಟ ಪಡುತ್ತಾರೆ. ನನಗೆ ಅನ್ನ ನೀಡುವ ಪ್ರೇಕ್ಷಕರು ಮುಖ್ಯ. ಅವರಿಗೆ ನನ್ನೊಳಗಿನ ನಾನು ಯಾವಾಗ ಬೇಕೆಂದು ಬಯಸುತ್ತಾರೋ ಆಗ ಕಲಾವಿದ ಅಪ್ಪಟ ರಮೇಶ ಅಭಿನಯಿಸುತ್ತಾನೆ.” ಹೀಗೆ ನನ್ನೊಂದಿಗೆ ಮಾತಾಡುವಾಗ ಅನೇಕ ಬಾರಿ ಹೇಳುತ್ತಿದ್ದ. ನಿಸ್ಸಂದೇಹವಾಗಿ ರಮೇಶ ಅನುಕರಣೆಯಿಂದಲೇ ಪ್ರಸಿದ್ದಿ ಪಡೆದವರಲ್ಲ. ಅವನೊಳಗೊಬ್ಬ ಅನನ್ಯತೆಯ ನಾಯಕ ನಟನಿದ್ದ. ಆರ್ದ್ರತೆ ತುಂಬಿದ, ಉಕ್ಕುವ ಸಂವೇದನೆಯ ಅಪ್ರತಿಮ ಕಲಾವಿದನಿದ್ದ. ಓರ್ವ ಸಹೃದಯಿ ಸನ್ಮಿತ್ರನಿದ್ದ. ಕಂಪನಿ ಸಾಂಗತ್ಯದ ರೂಢಿಗತ ನಡವಳಿಕೆಗಳನ್ನು ಮೀರದ ದುಃಸಾಧ್ಯತೆಗಳ ನಡುವೆ ರಂಗಕರ್ಮಿ ರಮೇಶನ ಅಕಾಲಿಕ ನಿರ್ಗಮನ ಕಂಪನಿ ನಾಟಕಗಳಿಗೆ ತುಂಬಲಾಗದ ನಷ್ಟವೇ ಸೈ.
ಕೋಗಳಿ ಪಂಪಣ್ಣ
ಈ ಹೆಸರಿನಲ್ಲೇ ಸಾರಸ್ವತದ ಫೀಲಿಂಗ್ಸ್. ಸಂಗೀತ ಮತ್ತು ಸಾಹಿತ್ಯ ಸಮೃದ್ಧಿಯ ತುಳುಕಾಟ. ಕೋಗಳಿ ಎಂಬುದು ಕೋಗಿಲೆಯ ಮತ್ತು ಪಂಪಣ್ಣ ಎಂಬುದು ಪಂಪಕವಿಯ ನೆನಪು ತರಿಸುತ್ತವೆ. ಹೌದು ಪಂಪಣ್ಣನ ರಂಗಬದುಕು ಈ ಮಾತಿಗೆ ಹೆಚ್ಚು ಹತ್ತಿರ. ಅಷ್ಟಕ್ಕೂ ಬಳ್ಳಾರಿ ಜಿಲ್ಲೆಯ ಕೋಗಳಿಯು ಮಹಾಕವಿ ಶಿವಕೋಟಾಚಾರ್ಯರ ಕಾಯಕಭೂಮಿ. ಹುಟ್ಟಿನಿಂದಲೇ ಪೌರಾಣಿಕ ನಾಟಕಗಳಿಗೆಂದೇ ಶರೀರ ಮತ್ತು ಶಾರೀರ ಕಟ್ಟಿಕೊಂಡೇ ಬಂದಂತಹ ರಂಗ ಸಂಪನ್ನತೆ ನಮ್ಮ ಪಂಪಣ್ಣನದು. ಹದಿನಾಲ್ಕನೇ ವಯಸಿಗೆ ಸೀತೆಯ ಪಾತ್ರ. ದಶಕಕಾಲ ಹಲವಾರು ಸ್ತ್ರೀ ಪಾತ್ರಗಳಲ್ಲಿ ಶಹಬ್ಬಾಶಗಿರಿ. ನಂತರ ಪೌರಾಣಿಕ ನಾಟಕಗಳಲ್ಲಿ ಮುನ್ನಡೆ ಸಾಧಿಸಿದ ಪಂಪಣ್ಣ ಹಿನ್ನಡೆಗೆ ತಿರುಗಲಿಲ್ಲ. ವೃತ್ತಿ ನಾಟಕಗಳ ಮೂಲಕ ಗ್ರಾಮೀಣ ರಂಗಭೂಮಿಯ ಭೂಮತ್ವ ಮೆರೆದ ಪಂಪಣ್ಣ ಆಧುನಿಕ ರಂಗಭೂಮಿಯ ಸಂಗ್ಯಬಾಳ್ಯ, ಅಂಗುಲಿಮಾಲ, ಆಮ್ರಪಾಲಿ ಮೊದಲಾದ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದ ಕೃಷ್ಣನ ಪಾತ್ರ ಹೊರತು ಪಡಿಸಿ ಬಾಕಿ ಎಲ್ಲ ಪುರುಷ ಪಾತ್ರಗಳಲ್ಲಿ ಮನೋಜ್ಞ ಅಭಿನಯ. ಗುರುಮುಖೇನ ಸಂಗೀತ ಕಲಿತು ಕಂದಪದ್ಯಗಳನ್ನು ತುಂಬಾ ಸೊಗಸಾಗಿ ಹಾಡುವಲ್ಲಿ ಪರಿಣಿತರು. ಇದು ಯಾರತಪ್ಪು? ಯಾರು ನನ್ನವರು? ಇವನು ಗೆಳೆಯನೇ? ಹೀಗೆ ಪ್ರಶ್ನಾರ್ಥಕ ಚಿಹ್ನೆಹೊತ್ತ ನಾಟಕಗಳ ಮತ್ತು ಗುರುಭಕ್ತಿ ಗೀತಾಂಜಲಿ ಎಂಬ ಕವನ ಸಂಕಲನದ ರಚಯಿತೃ. ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಮೋಘ ಅಭಿನಯ, ಮುನ್ನೂರಿಪ್ಪತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ ಹೆಗ್ಗಳಿಕೆ ಪಂಪಣ್ಣರದು. ಲಾಲಿತ್ಯದ ಮಾತುಗಳ ಈ ವಾಗ್ಮಿ ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರ. ತುಂಬಾ ತಡವಾಗಿ ಪತ್ತೆಯಾದ ಕ್ಯಾನ್ಸರ್ ನಿಂದ ಬಳಲಿ ಎಪ್ಪತ್ತಾರನೇ ಏರುವಯಸ್ಸಲ್ಲಿ ನಿಧನ.
*************************************************************