ಸಾವಿಲ್ಲದ ಶರಣರು ಮಾಲಿಕೆ-ಜೇಡರ ದಾಸಿಮಯ್ಯ -ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಜೇಡರ ದಾಸಿಮಯ್ಯ
——————————-
ಜನ್ಮ ಸ್ಥಳ – ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದೇನೂರು
ಕಾಲ ಹನ್ನೆರಡನೆಯ ಶತಮಾನ ಬಸವಣ್ಣನವರ ಹಿರಿಯ ಸಮಕಾಲೀನ
ಮಡದಿ  -ದುಗ್ಗಳೆ
ತಂದೆ – ರಾಮಯ್ಯ
ತಾಯಿ -ಶಂಕರಿ
ವಚನಗಳು -150
ವಚನಾಂಕಿತ –  ರಾಮನಾಥ

   ಜೇಡರ ದಾಸಿಮಯ್ಯ  ಆದ್ಯಪ್ರವರ್ತಕನೆಂದು  ಆದ್ಯ ವಚನಕಾರ ಎಂದು ಗುರುತಿಸಲಾಗುತ್ತದೆಯಾದರೂ, ಜೇಡರ ದಾಸಿಮಯ್ಯನವರಿಗೆ ಕೆಲ ಸಂಶೋಧಕರು ದೇವರ ದಾಸಿಮಯ್ಯ ಎಂದು ಕರೆದಿದ್ದಾರೆ  ಆದರೆ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ . ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ.

ಜನನ
———————–
 ಜೇಡರ ದಾಸಿಮಯ್ಯನವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಬಿ ಗ್ರಾಮದಲ್ಲಿ ರಾಮಯ್ಯ -ಶಂಕರಿ ದಂಪತಿಯ ಪುತ್ರನಾಗಿ, ಚೈತ್ರ ಶುದ್ಧ ಪಂಚಮಿಯಂದು ನೇಕಾರ ಕುಟುಂಬದಲ್ಲಿ ಜನಿಸಿದರು.  ಇವರು ಬಸವಣ್ಣನವರಿಗಿಂತಲೂ ಹಿರಿಯರು ಮತ್ತು ಸಮಕಾಲೀನರು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ .  ಜೇಡರ ದಾಸಿಮಯ್ಯ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನು ಕೂಡಾ ಪಡೆದು ಜ್ಞಾನವಂತರಾದರು. ದಾಸಿಮಯ್ಯನವರು ಯಾವುದನ್ನೂ ಪ್ರಶ್ನಿಸದೆ ಸ್ವೀಕರಿಸುವ ಮನೋಭಾವದವರಲ್ಲ. ಪ್ರಖರ ವೈಚಾರಿಕ ನೆಲೆಗಟ್ಟಿನ ಅಸದೃಶ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು.

ವಿವಾಹ
———————-

ದಾಸಿಮಯ್ಯನವರು ದುಗ್ಗಳೆಯನ್ನು ವಿವಾಹವಾದರು. ದುಗ್ಗಳೆಯನ್ನು ಕುರಿತು ಅವರು ರಚಿಸಿದ ವಚನ ಇಂತಿದೆ:

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
 ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ.

ವಚನ ರಚನೆ
——————————-
ರಾಮನಾಥ ಎಂಬ ಅಂಕಿತದಲ್ಲಿ ಬರೆಯಲಾದ ಇವರ ಸುಮಾರು ೧೫೦ ವಚನಗಳು ದೊರೆತಿವೆಯೆನ್ನಲಾಗಿದೆ.

ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿಯುವಾತ್ಮನು
ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ

ಹೆಣ್ಣು  ಗಂಡಿನ ತಾರತಮ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಅಲ್ಲಗಳೆಯುವ ಪ್ರಯತ್ನ ಇದಾಗಿದೆ
ಮನುಷ್ಯರು ಸಸ್ತನಿಗಳು ( Mammalian ) ಪುರುಷ ಮತ್ತು ಮಹಿಳೆಯ ದೇಹದ ಮೇಲೆ ಮೊಲೆಗಳು ಇರುತ್ತವೆ. ಪುರುಷನಲ್ಲಿ ಅವು ನಿಷ್ಕ್ರಿಯವಾಗಿರುತ್ತವೆ ( Rudimentary organ) ಮಹಿಳೆಯು ತನ್ನ ಯೌವನಾವಸ್ಥೆಗೆ   ಬಂದಾಗ ಅವಳ ದೇಹದಲ್ಲಿ ಮೊಲೆಗಳು ಗೋಚರಿಸುತ್ತವೆ ಮೂಡಿ ಬರುತ್ತವೆ . ಗಡ್ಡ ಮೀಸೆಗಳು ಪುರುಷನಿಗೆ ಮಾತ್ರ ಬರುತ್ತವೆ ಇಂತಹ ದೈಹಿಕ ಭೌತಿಕ ವ್ಯತ್ಯಾಸಗಳಿದ್ದಲ್ಲೆ ಗಂಡು ಹೆಣ್ಣು ಎಂದೆನ್ನಬಹುದಲ್ಲದೆ ? ಮಾನವ ಜೀವಿಗಳಲ್ಲಿರುವ ಸುಳಿವ ಆತ್ಮ , ಹಸಿವು ತೃಷೆ ನಿದ್ದೆ ಬಯಕೆ ಕನಸುಗಳು ಹೆಣ್ಣು ಅಲ್ಲ ಗಂಡು ಅಲ್ಲ ಎಂದಿದ್ದಾರೆ.  

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ

ಒಡಲಿದ್ದವನು ಹಸಿಯುತ್ತಾನೆ ಅದು ನಿಸರ್ಗದತ್ತವಾದ ಗುಣ, ಒಡಲಿದ್ದವ ಹುಸಿಯುವ , ಹಸಿವಿಗಾಗಿ ಮನುಷ್ಯ ಒಮ್ಮೊಮ್ಮೆ ಹುಸಿಯುತ್ತಾನೆ ಸುಳ್ಳು ಹೇಳುತ್ತಾನೆ. ಹೀಗೆ ಒಡಲಿದ್ದವರ ಜರಿಯದೆ, ನೀನು ಒಡಲಿದ್ದವನೆಂದು ಒಮ್ಮೆ ಆಲೋಚಿಸಿ ನೋಡಿದರೆ ಹಸಿವು ಬಡತನದ ಅರಿವಾಗುತ್ತದೆ ಎಂದಿದ್ದಾನೆ.    

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ

ಭೂಮಿ ಇದು ಸೃಷ್ಟಿಕರ್ತನ ದಾನ ಕೊಡುಗೆ , ಭೂಮಿಯ ಮೇಲೆ ಬೆಳೆಯುವ ಬೆಲೆ ಇದು ಕೂಡ ದೇವರ ದಾನ, ಪರಿಸರದಲ್ಲಿ ಉತ್ತಮ ಆಮ್ಲಜನಕ ಹೊಂದಿರುವ ಸುಳಿದು ಸೂಸುವ ಗಾಳಿಯೂ ನಿಮ್ಮ ದಾನ ,ಆದರೆ ದೇವನಿತ್ತ ದಾನವನ್ನು ಮರೆತು ಮನುಷ್ಯನ ಅಲ್ಪ ಸ್ವಲ್ಪ ಸಹಾಯಕ್ಕೆ ಅವರನ್ನೇ ಹೊಗಳುವ ಕುನ್ನಿಗಳನ್ನು ನಂಬುವದಿಲ್ಲ ಎಂದಿದ್ದಾರೆ.  

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.

ಕಡೆಗೀಲಿಲ್ಲದ ಬಂಡಿಯನ್ನು ಸವಾರಿ ಮಾಡಬಹುದೇ ? ಸಾಧ್ಯವಿಲ್ಲ ,ಕಡೆಗೀಲು ಬಂಡೆಗೆ ಆಧಾರ, ಕೀಲು ಬಂಡಿಯನ್ನು ನಡೆಸುವ ಪೂತ ಸಾಧನ ಅದಿಲ್ಲದೆ ಬಂಡಿ ಮುಂದೆ ಸಾಗುವದಿಲ್ಲ. ಕಡುದರ್ಪವೇರಿದ ಒಡಲೆಂಬ ಬಂಡಿಗೆ ,ಭಕ್ತರ ನಡೆ ನುಡಿಗಡಣವೇ ಕಡೆಗೀಲು ಎಂದೆನ್ನುತ್ತಾರೆ.      

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.

ಶರಣ ಧರ್ಮ ಇದು ದಾಂಪತ್ಯ ಧರ್ಮ,ಸನ್ಯಾಸಿಗಳಲ್ಲದ್ದು ಗಂಡ ಹೆಂಡತಿಯೂರು ಕೂಡಿ ಮಾಡುವ ಕಾರ್ಯಗಳು ಶಿವನಿಗೆ ಹಿತವೆನಿಸುತ್ತದೆ. ಒಂದು ವೇಳೆ ಸತಿ ಪತಿಯಯರು ಒಮ್ಮನಸ್ಸಿನಿಂದ ಮಾಡದ ಭಕ್ತಿ ಅಮೃತದಲ್ಲಿ ವಿಷವ ಬೆರೆಸಿದಂತೆ ಎಂದೆನ್ನುತ್ತಾರೆ ಜೇಡರ ದಾಸಿಮಯ್ಯ.  

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ

ಜೇಡರ ದಾಸಿಮಯ್ಯ ತನ್ನ ಪ್ರೀತಿಯ ಮಡದಿ ದುಗ್ಗಳೆಯ ಬಗ್ಗೆ ಬರೆದ ವಚನವಿದು ,ಬಂದುದನರಿದು ಬಳಸುವಳು,ಬದುಕಿನಲ್ಲಿ ಬರುವ ಪ್ರತಿ ಘಳಿಗೆ ಕ್ಷಣಗಳನ್ನು ಅರಿತು ಅದರಂತೆ ಬದುಕನ್ನು ಬಳಸುವಳು , ಬಂದ ಸಿರಿ ಭೋಗ ಕಷ್ಟ ಸುಖವನ್ನು ಅನುಭವಿಸುವಳು. ಇಷ್ಟೆಲ್ಲ ನೋವು ಸಂಕಟ ಇದ್ದರೂ ಸಹಿತ ಅದನ್ನು ಬಾಹ್ಯವಾಗಿ ತೋರದೆ ಬಂಧು  ಬಳಗವನ್ನು ಆದರೆ ಆತಿಥ್ಯಕ್ಕೆ ಒಳಪಡಿಸಿ ಪ್ರೀತಿಸಿ ಮೆರೆಸುವಳು ,ಅಂತಹ ಮಾನವೀಯ ಮೌಲ್ಯಗಳನ್ನು ಹೊಂದಿದ
ದುಗ್ಗಳೆ ತನ್ನ ಕೈ ಹಿಡಿದ ಸತಿ ಎಂದು ಅಭಿಮಾನದಿಂದ ಹೇಳುತ್ತಾನೆ  

ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಸುವರ್ಣದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇದ್ದಡೆ
ಕರವಿಡಿದೆತ್ತಿಕೊಂಬ ನಮ್ಮ ರಾಮನಾಥನು

ಸೃಷ್ಟಿಕರ್ತನು ಭಕ್ತರನ್ನು ತಿರಿದು ತಿನ್ನುವಂತೆ ಮಾಡುವನು, ಬಂಗಾರವನ್ನು ಒರೆಗೆ ಹಚ್ಚಿ ನೋಡುವಂತೆ ನೋಡುತ್ತಾನೆ,ಶ್ರೀಗಂಧದ ಕೊರಡಿನ ಸುವಾಸನೆಗೆ ಅದನ್ನು  ಕಲ್ಲಿನ ಮೇಲೆ ಅರೆದು ನೋಡುತ್ತಾನೆ. ಕಬ್ಬಿಣ ಸಿಹಿಯನ್ನು ನೋಡಲು ಅದನ್ನು ಗಾಣಕ್ಕೆ ಹಾಕಿ ರಸವನ್ನು ತೆಗೆಯುವಂತೆ ಕಬ್ಬನ್ನು ಅರೆದು ನೋಡುತ್ತಾನೆ, ಇಂತಹ ಪರೀಕ್ಷೆಗಳಿಗೆ ಬೆದರದೆ ಬೆಚ್ಚದೆ ಇದ್ದರೆ ಭಕ್ತನ ಕೈ ಹಿಡಿದು ತನ್ನಂತೆ ಮಾಡುವ ಎನ್ನುತ್ತಾರೆ.      

 ಇಂತಹ ಅನೇಕ ವಚನಗಳಲ್ಲಿ ತೋರಿದ ಜನಪರ ಕಾಳಜಿ ಇಂದಿಗೂ ಆನ್ವಯಿಕ. ಶಿವ ಜಗತ್ತನ್ನೇ ವ್ಯಾಪಿಸಿಕೊಂಡಂತೆ, ಜಗತ್ತೇ ಶಿವನ ರೂಪ ಎಂಬ ನಿಲುವಿನೊಂದಿಗೆ, “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನವಯ್ಯ. ಎಂದೆನ್ನುವ ದಾಸಿಮಯ್ಯನಲ್ಲಿ ಈ ಲೋಕವನ್ನು ನೋಡುವ ಕ್ರಮ ಹೊಸತನದಿಂದ ಕೂಡಿದೆ.

ದೇವರ ದಾಸಿಮಯ್ಯ ಮಾತು ಜೇಡರ ದಾಸಿಮಯ್ಯ  ಬೇರೆ ಬೇರೆ*
———————————————————————————-
ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ  ಬೇರೆ ಬೇರೆ .ಇತ್ತೀಚೆಗೆ ಕರ್ನಾಟಕ ಸರಕಾರವು ಆದ್ಯ ವಚನಕಾರ ದೇವರ ದಾಸಿಮಯ್ಯನ ಜಯಂತಿಗೆ    ಲಕ್ಷಾಂತರ  ಹಣ ಕೊಟ್ಟು ರಾಜ್ಯದಲ್ಲಿ  ದೇವರ ದಾಸಿಮಯ್ಯನವರ ಜಯಂತಿಯನ್ನು ಆಚರಿಸುವದು ಹಾಸ್ಯಾಸ್ಪದ .

    ದೇವರ ದಾಸಿಮಯ್ಯ  11 ನೆಯ ಶತಮಾನದ ಶಿವ ಭಕ್ತ ,ಇಮ್ಮಡಿ ಜಯಸಿ೦ಹ ಮಡದಿ ಸುಗ್ಗಲೆ ಇವಳಿಗೆ ಶಿವಬೋಧ ದೀಕ್ಷೆ ನೀಡಿ ಅವಳನ್ನು  ಶೈವ  ಧರ್ಮದ ಅನುಯಾಯಿಯನ್ನಾಗಿ ಮಾಡಿದರು.ದೇವರ ದಾಸಿಮಯ್ಯ ಅಪ್ಪಟ ಸನ್ಯಾಸಿಗಳು ಮತ್ತು ಯಾವುದೇ ವಚನ ರಚನೆ ಮಾಡಿಲ್ಲಾ . ಆತನು ವೃತ್ತಿಯಿಂದ ಕೃಷಿಕನೆಂದು  ತಿಳಿದು ಬರುತ್ತದೆ.ಆತನು ವಚನಕಾರನಲ್ಲ .

     ಜೇಡರ ದಾಸಿಮಯ್ಯ ಮತ್ತು ದುಗ್ಗಳೆ 12 ಶತಮಾನದ ಬಸವಾದಿ  ಪ್ರಮಥರ ಸಮಕಾಲೀನರು .ಇಬ್ಬರೂ ವಚನಕಾರರು ,ಇವರಿಬ್ಬರ ಬಗ್ಗೆ ಬಸವಣ್ಣ ಆದಿಯಾಗಿ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಜೇಡರ ದಾಸಿಮಯ್ಯ ಮತ್ತು  ಮಡದಿ  ದುಗ್ಗಳೆ ಇವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.ಅದೇ ರೀತಿ ಜೇಡರ ದಾಸಿಮಯ್ಯ ಮತ್ತು ದುಗ್ಗಳೆ ,12 ನೇಯ ಶತಮಾನದ ಬಸವಾದಿ  ಪ್ರಮಥರ ಬಗ್ಗೆ ತಮ್ಮ ಅನೇಕ ವಚನಗಳಲ್ಲಿ ಉಲ್ಲೇಖ ಮಾಡಿದ್ದಾರೆ. ವ್ರತ್ತಿಯಲ್ಲಿ ನೇಯ್ಗೆ ಕೆಲಸ ಮಾಡುವ ನೇಕಾರರು. ಇದರ ಬಗ್ಗೆ    ಡಾ ಎಂ ಎಂ ಕಲ್ಬುರ್ಗಿ ಅವರು ೪೦ ವರ್ಷಗಳ ಹಿಂದೆಯೇ ಈ ವಿಷಯವನ್ನು ಸಂಶೋದನೆಯ ಮೂಲಕ ಬಹಿರಂಗಗೊಳಿಸಿದ್ದಾರೆ.
ಡಾ ಎಚ ದೇವಿರಪ್ಪ,ಡಾ ಎಚ ಚಂದ್ರಶೇಖರ , ಡಾ ಎಂ ಚಿದಾನಂದ ಮೂರ್ತಿ  ಡಾ ಎಂ ಎಂ ಕಲಬುರ್ಗಿ ಮುಂತಾದ ಅನೇಕ ಸಂಶೋದಕರು ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ  ಇಬ್ಬರೂ  ಬೇರೆ ಬೇರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ಜೇಡರ ದಾಸಿಮಯ್ಯನ ವಚನ ಅಂಕಿತ -ರಾಮನಾಥ ಮತ್ತು ದುಗ್ಗಳೆ ಇವರ ವಚನಾಂಕಿತ ದಾಸಯ್ಯ ಪ್ರಿಯ ರಾಮನಾಥ.
ವಸ್ತು ಸ್ಥಿತಿ   ಹೀಗಿದ್ದರೂ ವಚನಕಾರನಲ್ಲದ    ದೇವರ ದಾಸಿಮಯ್ಯನವರಿಗೆ ಆದ್ಯ ವಚನಕಾರ ಪಟ್ಟ ಕಟ್ಟಿ ಅವರು ರಚಿಸದ ವಚನಗಳಿಗೆ ಮಾಲಕರನ್ನಾಗಿ,
ಕರ್ನಾಟಕ ಸರಕಾರ ಮಾಡಿದ್ದು ಘೋರ ಅಪರಾಧ .ಅಷ್ಟೆ ಅಲ್ಲ   ಜೇಡರ ದಾಸಿಮಯ್ಯನವರ   ಮಡದಿ  ದುಗ್ಗಳೆಯನ್ನು ದೇವರ ದಾಸಿಮಯ್ಯನವರ ಮಡದಿ ಅಂತಾ ಹೇಳಿ ಜೇಡರ ದಾಸಿಮಯ್ಯನವರ ಮತ್ತು ಮಡದಿ  ದುಗ್ಗಳೆಯ ಚರಿತ್ರೆಗೆ ಮಸಿ ಬಳೆಯುವ ಕೆಲಸ ಮಾಡಿದ್ದಾರೆ.
ಡಾ ಎಂ ಚಿದಾನಂದ ಮೂರ್ತಿ -ಈ ದಿಶೆಯಲ್ಲಿ ಪ್ರತಿಭಟಿಸಿದ್ದು ಸೂಕ್ತ ಮತ್ತು ಸ್ತುತ್ಯಾರ್ಹ

ಇಂದು ಬಹುತೇಕ ಸಂಶೋಧಕರು   ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ  ಇಬ್ಬರೂ  ಬೇರೆ ಬೇರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
      ಜೇಡರ ದಾಸಿಮಯ್ಯನವರ  ಮತ್ತು ಮಡದಿ  ದುಗ್ಗಳೆಯವರ ದಾರ್ಶನಿಕ ಮತ್ತು ಪವಿತ್ರ ಜೀವನದ ಜೊತೆ ಚೆಲ್ಲಾಟವಾಡುವ ಕೆಲಸ ಮೊದಲು ನಿಲ್ಲಲಿ.ಸರಕಾರವೂ ಕೂಡಾ ಇಂತಹ ಸಮಯದಲ್ಲಿ ಸಮಾಜವನ್ನು ಒಡೆಯುವ  ಕೆಲ ಶಕ್ತಿಗಳಿಗೆ ಕಡಿವಾಣ ಹಾಕಿ ,ತಜ್ಞ ಸಮಿತಿ ರಚಿಸಿ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರ ಜೀವನ ಚರಿತ್ರೆಯ ನಿರ್ಧರಿಸಬೇಕು. ಇಂತಹ ವಿವಾದಗಳು ಕೊನೆಗೊಳ್ಳಲಿ ನಮ್ಮ ವ್ಯಕ್ತಿ ಪ್ರತಿಷ್ಟೆಗೆ  ಶರಣರ ಜೀವನವನ್ನು ಬೀದಿಗೆ ತರುವದು ತರವಲ್ಲ. ಮತ್ತೆ  ಇದೆ ತಪ್ಪನ್ನು  ಎಲ್ಲಾ ಸರಕಾರಗಳು  ಮರಕಳಿಸುತ್ತಿವೆ.  ಕಾರಣ ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಒಂದೇ ಎಂದು ಹೇಳುವ ಕೆಲ ಕುಲಗೆಟ್ಟ ಸಾಹಿತಿಗಳು ಈಗಲೂ ಉಂಟು ಸಮಾರಂಭದ ಮಧ್ಯೆ ಗೊಂದಲ ಎಬ್ಬಿಸಿದ ಡಾ ಎಂ ಚಿದಾನಂದಮೂರ್ತಿ ಅವರನ್ನು ವಿಧಾನ ಸಭೆಯ ಬ್ಯಾಂಕ್ವೆಟ ಹಾಲಿನಿಂದ ಹೊರ ತಳ್ಳಲಾಯಿತು .ಸತ್ಯ ಹೇಳಿದವನಿಗೆ  ಅಪಮಾನ  ಸರಕಾರದಿಂದ ನಡೆಯಿತು.

ಕಾರಣ ಜನರನ್ನು ತಪ್ಪು ದಾರಿಗೆ ನೂಕುವ ಲಿಂಗಾಯತ ಧರ್ಮದಲ್ಲಿನ ನೇಕಾರ ಸಮಾಜವನ್ನು ಓಲೈಸುವ ನೆಪದಲ್ಲಿ ಚರಿತ್ರೆಗೆ ಮಸಿ ಬಳಿಯುವ ಕಾರ್ಯವನ್ನು ಸರಕಾರ ಮಾಡಬಾರದು.
ಸಾಮಾಜಿಕ ಜಾಲತಾಣಗಳಲ್ಲಿ ಶರಣರ ಬಗ್ಗೆ ವಚನಗಳ ಬಗ್ಗೆ ಲೇಖನ ಬಂದಾಗ ಅದನ್ನು ಓದದೇ ಅದರ ಸತ್ಯಾ  ಸತ್ಯತೆ ವಿವೇಚಿಸದೆ ಇಂತಹ ಲೇಖನಗಳನ್ನು ಆಕಾರ  ಮಾಡುವ ಪ್ರವೃತ್ತಿ ಅಪಾಯಕಾರಿಯಾಗಿದೆ. ಅರಿವು ಅಧ್ಯಯನ ಗಟ್ಟಿಗೊಂಡಾಗ ಮಾತ್ರ ಇತಿಹಾಸ ಚರಿತ್ರೆಗೆ ನ್ಯಾಯ ಒದಗಿಸಬಹುದು .

ಆಕರಗಳು –
————————-

 1 http://lingayatreligion.com/K/Sharanaru/JedaraDaasimayya.htm
 2 http://devaradasimayya.blogspot.in/2010/12/blog-post.html#.WZW1wVEjHIU
 3 “ಆರ್ಕೈವ್ ನಕಲು”. Archived from the original on 2017-08-05. Retrieved 2017-08-17.
4 ವಚನಸಂಚಯ ಯೋಜನೆ
5 ವಚನ ಸಂಪುಟ

—————————————————————————————————

One thought on “ಸಾವಿಲ್ಲದ ಶರಣರು ಮಾಲಿಕೆ-ಜೇಡರ ದಾಸಿಮಯ್ಯ -ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

  1. ಜೇಡರ ದಾಸಿಮಯ್ಯನವರ ಸಂಪೂರ್ಣ ವಿವರ ದೊಂದಿಗೆ….ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎನ್ನುವ ಪ್ರಜ್ಞಾಪೂರ್ವಕ ಲೇಖನ ಎಲ್ಲರ ಕಣ್ ತೆರೆಸಲು ಅನುಕೂಲವಾಗಿದೆ ಮತ್ತು ಇಂದಿನ ಪರಿಸ್ಥಿತಿಯಲ್ಲಿ ಇಂತಹ ಲೇಖನಗಳು ಹೆಚ್ಚು ಪ್ರಸ್ತುತವಾಗುತ್ತವೆ…. ಸರ್

    ಸುಧಾ ಪಾಟೀಲ
    ಬೆಳಗಾವಿ

Leave a Reply

Back To Top