ಬಾನ್ಸುರಿ ಮತ್ತು ರಾಧೆ

ಕಬ್ಬಿಗರ ಅಬ್ಬಿ – ಸಂಚಿಕೆ -6

920 Bamboo Flute Photos - Free & Royalty-Free Stock Photos from ...

ಭೂಪೇಶ್ವರೀ ರಾಗದ ಆಲಾಪದ ಮಂದ್ರಸ್ಥಾಯಿಯ ಸ್ವರಗಳು, ಸಾಯಂಕಾಲದ ಸಾಂದ್ರತೆಯನ್ನು ಜೇನಿನಂತಾಗಿಸಿ, ಧಾರೆಯೆಷ್ಟು ಎಳೆಯಾದರೂ ಕಡಿಯದಂತೆ, ವಾತಾವರಣವನ್ನು ಆರ್ದ್ರವಾಗಿಸಿತ್ತು.

ಗಾಯಕನ ( ಒ ಎಸ್. ಅರುಣ್‌) ನಾಭಿಯಿಂದ ಹೊರಟ ಸ್ವರಕಂಪನದ ತರಂಗ, ಎದೆಯನ್ನು ಹೊಕ್ಕು, ಭಾವ ಹೀರಿ, ಕಂಠದಿಂದ ಹೊರಹರಿಯುವಾಗ,  ಆಗಷ್ಟೇ ಸೋನೆ ಮಳೆ ನಿಂತು, ವಾತಾವರಣದ ತಂಪೊಳಗೂ ಆರ್ದ್ರ ಭಾವ. ಬಾನ್ಸುರಿಯ ದಪ್ಪ ಬಿದಿರಿನ ರಂಧ್ರಗಳಿಂದ ಸ್ವಾತಂತ್ರ್ಯ ಪಡೆದ ನಾದಸೆಲೆ ಅಂತರಂಗದ ಅಂತರ್ನಾದವೇ ಆಗಿತ್ತು. ತಬಲಾದ ಮೇಲೆ ಹೂಪಕಳೆಗಳು ತಡವಿದಂತೆ ವಾದಕನ ಬೆರಳುಗಳು, ಎದೆಗೆ ಎದೆ ಸೇರಿ ಅನುರಣಿಸಿದ ಸ್ಪಂದನವಾಗಿತ್ತು.

 ಈ ರಾಗವೂ ಹಾಗೇ, ಇದರಲ್ಲಿ ಕೋಮಲ ಧೈವತದ ಸ್ಪರ್ಶ, ದೈವಿಕ ವಿರಹಸ್ವನವನ್ನು ಮನಸ್ಸಿನ ಕೋಣೆಯೊಳಗೆ ತುಂಬಿ, ನಿಧಾನವಾಗಿ ಮುಚ್ಚಿ ಆಸ್ವಾದಿಸುವಾಗ, ಕಣ್ರೆಪ್ಪೆಗಳು ತೆರೆಯಲಾಗದಷ್ಟು, ಹಿತಭಾರವೆನಿಸಿ, ಮಾನಸ ಲೋಕದೊಳಗಿದ್ದೆ.

ಜಯದೇವ ಕವಿ, ‘ಗೀತಗೋವಿಂದ’ ಎದೆಗಿಳಿಸುವಾಗ, ಬಹುದಿನದಿಂದ ಮಿಲನ ಕಾಣದೆ ನೊಂದ,ರಾಧೆಯನ್ನು, ಕೃಷ್ಣ, ಹೃದಯತುಂಬಿ ಆರ್ತ ದನಿಯಲ್ಲಿ ಸಲ್ಲಪಿಸಿ ಆಕೆಯ ಕೋಮಲ ಪ್ರೀತಿಯ ನೋವನ್ನು ಹರಿಸುವ ಸಾಲುಗಳು,

“ಪ್ರಿಯೇ… ಚಾರುಶೀಲೆ.. ಮುಂಚ ಮಯಿ ಮಾನಮ್ ಅನಿದಾನಮ್

ಸಪದಿ ಮದನಾಲಲೋ ದಹತಿ ಮಮ ಮಾನಸಮ್ ದೇಹಿ ಮುಖಕಮಲಮಧುಪಾನಮ್”

(ಚಾರುಶೀಲೇ..ಮನಸ್ಸನ್ನು ದಹಿಸುತ್ತಿರುವನು ಮದನ!,

ಪ್ರಿಯೇ, ದೇಹಿ! ಮುಖಕಮಲ ಮಧುಪಾನಮ್!)

ಈ ಸಾಲುಗಳು ಸಂಗೀತಸ್ವರಗಳಿಗೆ ಹೊತ್ತೊಯ್ಯಲಾಗದಷ್ಟು ಭಾರವಾಗಿ, ಮನತುಂಬುವಾಗ, ಭಾವ ಜೊಂಪು ಎದೆಗಿಳಿದು ವಿರಹದ  ನೋವು ಅದೆಷ್ಟು ಹಿತಕರ ಅನುಭೂತಿ,

ಅಲ್ಲವೇ!.

ಜಯದೇವ ಈ ಅನುಭವ ಸಾಂದ್ರತೆಯಲ್ಲಿ ಬರೆಯುತ್ತಾನೆ!

“ಸ್ಮರಗರಲ ಖಂಡನಮ್ ಮಮ ಶಿರಸಿ ಮಂಡನಮ್ ದೇಹಿ ಪದ ಪಲ್ಲವಮುದಾರಮ್’

ಜ್ವಲತಿ ಮಯಿ ದಾರುಣೋ ಮದನ ಕದನಾನಲೋ

ಹರತು ತಪುದಾಹಿತ ವಿಕಾರಮ್”

“ರಾಧೇ! ಚಾರುಶೀಲೇ, ನಿನ್ನ ಪಾದಗಳನ್ನು, ನನ್ನ ಶಿರಸ್ಸಿನ ಮೇಲಿರಿಸಿ,  ನನ್ನನ್ನು ಜ್ವಲಿಸುತ್ತಿರುವ ಮದನನನ್ನು ತಂಪಾಗಿಸು!”

 ಎಂದು ಅಂಗಲಾಚುವ ಕೃಷ್ಣ!,

ಜಯದೇವನಿಗೆ, ‘ಈ ಸಾಲುಗಳನ್ನು, ತಾನು ಹೇಗೆ ಬರೆದೆ?. ಕೃಷ್ಣ, ದೇವರಲ್ಲವೇ, ಆತನ ತಲೆಯೆಷ್ಟು ಪವಿತ್ರ, ಅದರ ಮೇಲೆ ರಾಧೆಯ ಪಾದ.. ಛೇ,ಇಂತಹ ಆಲೋಚನೆ ನನಗೆ ಹೇಗಾದರೂ ಬಂತು? ‘ ಎಂದು ದುಃಖವಾಗಿ, ಬರೆದ ಸಾಲುಗಳನ್ನು ಅಳಿಸಿ, ಹಾಳೆಗಳನ್ನು, ಪತ್ನಿ, ಪದ್ಮಾವತಿಯ ಕೈಗಿತ್ತು, ಮೀಯಲು ಹೋದನಂತೆ.

ನದಿಯ ತಂಪು ನೀರಿಗನ ಹರಿವಿಗೆ ಮೈಯೊಡ್ಡಿ, ಒಳಹೊರಗೆ ಶುಚಿಯಾಗಿ ಪುನಃ ಬರೆಯಲು ಕುಳಿತರೆ, ಅಳಿಸಿ ಹೋದ ಅಕ್ಷರಗಳು ಹಾಳೆಗಳಲ್ಲಿ ಪುನಃ ಮೊದಲಿನ ಹಾಗೆಯೇ ಬರೆಯಲ್ಪಟ್ಟಿವೆ.

“ಪದ್ಮಾವತೀ!, ಪ್ರಿಯೇ!, ಏನಿದಚ್ಚರಿ..ಈಗ ಅಳಿಸಿ ಹೋಗಿ, ಮಿಂದು ಬರುವಾಗ, ಪುನಃ ಅದೇ ಸಾಲುಗಳು!”

ಪದ್ಮಾವತಿ ಉಲಿಯುತ್ತಾಳೆ,

 “ಸ್ವಾಮೀ, ನೀವೇ ಮಧ್ಯದಲ್ಲಿ ಬಂದು, ಆ ಸಾಲುಗಳನ್ನು ಬರೆದು, ಹೀಗೇ ಇರಲಿ! ಎಂದು ಮೀಯಲು ಹೋದಿರಲ್ಲಾ!”

ಕೃಷ್ಣನೇ ಬಂದು ಅಳಿಸಿದ ಅದೇ ಸಾಲುಗಳನ್ನು, ಬದಲಿಸದೆ ಬರೆದದ್ದು ಮನಸ್ಸಿಗಿಳಿದಾಗ, ಜಯದೇವ, ಭಾವೋತ್ಕರ್ಷ ಅನುಭವಿಸಿ, ಕೃಷ್ಣದರ್ಶನ ಪಡೆದ ಹೆಂಡತಿಯ ಕಾಲು ಮುಟ್ಟಿ ನಮಸ್ಕರಿಸಿ,  ಆ ಕಾವ್ಯಭಾಗದಲ್ಲಿ, ಪದ್ಮಾವತೀರಮಣ ಎಂಬ ಅಂಕಿತವನ್ನೂ ಹಾಕುತ್ತಾನೆ.

Image may contain: 2 people, outdoor | Krishna radha, Radha ...

ಕೃಷ್ಣ ಬದುಕನ್ನು, ಇತರರನ್ನು ತಲಪಿದ ರೀತಿಯೇ ಹಾಗೆ. ರಾಧೆಯ ಪಾದಸ್ಪರ್ಶ ಕೃಷ್ಣನ ತಲೆಯ ಮೇಲೆ, ಆತನನ್ನು ಸಣ್ಣದಾಗಿಸುವುದಿಲ್ಲ. ಆತನ ಆತ್ಮಾನುಯಾಯಿ, ಜಯದೇವ, ತನ್ನ ಹೆಂಡತಿಯ ಪಾದಮುಟ್ಟಿ ನಮಸ್ಕರಿಸಿದ್ದೂ ಆಶ್ಚರ್ಯವೇ?.

ಈ ಅನುಭೂತಿ, ಪ್ರೀತಿ ದೇಹದ ಗಡಿ ದಾಟಿ,ಆತ್ಮಸಂಬಂಧಗಳಿಗೆ ಸ್ವರಸಂಯೋಜನೆ ಮಾಡೋವಾಗ, ಅದರಲ್ಲಿ ತುರೀಯಾವಸ್ತೆಯನ್ನು ಅನುಭವಿಸುವಾಗ, ಪಾದ, ಶಿರಸ್ಸು, ಇತ್ಯಾದಿಗಳು,ಕಾವ್ಯದ ಅಕ್ಷರಗಳಾಗಿ ಮಾತ್ರ ಉಳಿಯುತ್ತವೆ.

ಭಕ್ತಿಯ ಮೂಲದಲ್ಲಿ, ಸಮರ್ಪಣೆಯಿದೆ. ಅದು ಒಂದು  ಚಿಂತನಾ ಮನೋಸ್ಥಿತಿಯಿಂದಲೂ ಉನ್ನತ ಮಟ್ಟದ್ದು.

ರಾಧೆಯ ಪ್ರೀತಿ, ಪಾತ್ರವಿರದ ತೊರೆ! ಅಂತ ಬರೆಯುವ ಹೆಚ್. ಎಸ್ ವೆಂಕಟೇಶ ಮೂರ್ತಿ ಅವರ ಸಾಲುಗಳನ್ನು ನೋಡಿ.

” ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ

ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ “

ರಾಧೆಯ ಪ್ರೀತಿ, ಅದು,ಉಕ್ಕಿ ಹರಿಯುವ ಪ್ರವಾಹ. ಅದರ ಹರಿವಿಗೆ ಸಾಧಾರಣ ನದಿಗಳಿಗೆ ಇರುವಂತೆ, ದಡಗಳಿಲ್ಲ, ನದೀಪಾತ್ರವಿಲ್ಲ. ಉಕ್ಕಿ, ಬೇಕಾದಂತೆ ಹರಿಯುವ, ತಡೆಕಟ್ಟು ಇಲ್ಲದ, ಶಕ್ತಿ ಪ್ರೀತಿಗೆ. ಎಲ್ಲವನ್ನೂ ತನ್ನೊಳಗೆ ಮುಳುಗಿಸಿ, ಆವರಿಸಿ, ಹರಿಯುವ ಮಹಾ ಪ್ರವಾಹ ಅದು.

ಈ ಕವಿತೆಯ ಮೊದಲ ಸಾಲುಗಳಲ್ಲಿ, ಹೆಚ್.ಎಸ್.ವಿ ಅವರು, ರಾಧೆ ಮತ್ತು ಕೃಷ್ಣನ ಪ್ರೀತಿಯ ಬಗ್ಗೆ ಹೀಗೆ ಬರೆಯುತ್ತಾರೆ.

” ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು

ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು”

ಲೋಕದ ಕಣ್ಣು, ಲೌಕಿಕ ಕಣ್ಣು, ಭೌತಿಕ ವ್ಯಾಪಾರೀ ಜಗತ್ತಿನ ಕಣ್ಣಿಗೆ, ರಾಧೆ, ಬರೇ ಒಬ್ಬ ಹೆಣ್ಣು. ಆದರೆ, ಕವಿಗೆ, ಈ ರಾಧೆ, ಪ್ರೀತಿಯ ಕಣ್ಣು.

ಕೃಷ್ಣನ ತೋರುವ, ಪ್ರೀತಿಯು ನೀಡಿದ ಕಣ್ಣು. ಪ್ರೀತಿಯಲ್ಲಿ ಸ್ವಾರ್ಥ ಇರಲ್ಲ. ಪ್ರೀತಿಯಲ್ಲಿ ಕೊಡು ಕೊಳ್ಳುವಿಕೆಯ ಅರ್ಥಶಾಸ್ತ್ರ ಇರಲ್ಲ. ಪ್ರೀತಿಯಲ್ಲಿ ಪ್ರತಿಫಲದ ನಿರೀಕ್ಷೆ ಇರಲ್ಲ. ಶುದ್ಧಾಂತಃಕರಣದ ಅನಿರ್ವಚನೀಯ ಅನುಭೂತಿ ಅದು. ಸಂಪೂರ್ಣ ಸಮರ್ಪಣಾ ಭಾವದ ಅನುಭೂತಿ. ಅಂತಹ ಪ್ರೀತಿಯೇ ಕೃಷ್ಣದರ್ಶನ.

ಆ ದರ್ಶನ,ಆ ಕಣ್ಣು, ಆ ಪ್ರೀತಿ ಯೇ , ರಾಧೆ ಅಂತ ಕವಿ ಹೇಳುವುದು, ಎಷ್ಟು ಗಹನವಾದದ್ದು ಅಲ್ಲವೇ.

” ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ

ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ “

ನಾನು, ನನ್ನವರು, ಎನ್ನುವ ತೊಡಕುಗಳನ್ನು ತೊರೆದು, ಪ್ರೀತಿಸುವ ದಾರಿ ರಾಧೆಯದ್ದು. ಇಲ್ಲಿ, ನಾನು, ನನ್ನವರನ್ನು ತೊರೆಯುವುದು,ಎಂದರೆ ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸಿಯಾಗುವುದಲ್ಲ.

ನಾನು, ಎಂಬ, ನನ್ನವರು ಎಂಬ ಐಡೆಂಟಿಟಿ, ತೊರೆದಾಗ, ಎಲ್ಲವನ್ನೂ, ತಾನಾಗಿ ಕಾಣುವ ದೃಷ್ಟಿ ಪ್ರಾಪ್ತವಾಗುತ್ತೆ, ಎಲ್ಲವನ್ನೂ ಅನ್ ಕಂಡಿಶನಲ್ ಆಗಿ ಪ್ರೀತಿಸುವ ಸಾಧ್ಯತೆ ತೆರೆಯುತ್ತೆ. ಬದುಕನ್ನು ಅರ್ಥಪೂರ್ಣವಾಗಿಸಲು ಇದು ರಾಧೆ ತೋರುವ ದಾರಿ.

ಹೆಚ್ ಎಸ್ ವಿ ಅವರು ಕೃಷ್ಣ,ರಾಧೆಯರ ಬಗ್ಗೆ ಇನ್ನೊಂದು ಇಂಪು ಇಂಚರದ ಹಾಡು ಬರೆದಿದ್ದಾರೆ.

“ಪ್ರೀತಿ ಕೊಟ್ಟ ರಾಧೆಗೆ

ಮಾತು ಕೊಟ್ಟ ಮಾಧವ

ತನ್ನನಿತ್ತ ಕೊಳಲಿಗೆ

ರಾಗ ತೆತ್ತ ಮಾಧವ “

ರಾಧೆ, ಪ್ರೀತಿಯನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಕೊಟ್ಟಾಗ, ಆತ,ಆಕೆಗಿತ್ತ ಭಾಷೆಯಾಗುತ್ತಾನೆ. ರಾಧೆ ಎಂಬ ಕೊಳಲು, ತನ್ನನ್ನು ತಾನೇ ಅರ್ಪಿಸಿ ಕೊಂಡಾಗ, ಕೃಷ್ಣ, ಆ ಕೊಳಲಿನ ದನಿಯಾಗುತ್ತಾನೆ, ರಾಗವಾಗುತ್ತಾನೆ. ಕೊಳಲು ಯಾವುದು, ಸ್ವರ ಯಾವುದು ಎಂಬ ಬೇಧವಿಲ್ಲದ ಸಂಯೋಗ ಅದು.

ಇಲ್ಲಿ, ಇನ್ನೊಂದು ಸುಪ್ತ ಅರ್ಥವಿದೆ. ಕೊಳಲು,ಇಲ್ಲದೆ ರಾಗ ಹೊರಡುವುದೇ?. ಕೃಷ್ಣನೂ ಎಷ್ಟು ಸಮರ್ಪಿತ ಎಂದರೆ, ರಾಧೆಯಿಲ್ಲದೆ, ಪ್ರೀತಿಯಿಲ್ಲದೆ ಕೃಷ್ಣನೂ ಇಲ್ಲ.

Jayadeva - Wikipedia

ಜಯದೇವ ಕವಿಯ ಅಷ್ಟಪದಿಯ ಕೃಷ್ಣ, ರಾಧೆಯ ಪಾದವನ್ನು ತನ್ನ ಶಿರಸ್ಸಿನ ಮೇಲಿರಿಸಿ, ರಾಧೆಯ ಪ್ರೀತಿಗೆ ಸಮರ್ಪಣೆಯಾಗುವ ಕ್ರಿಯೆಯೂ, ಹೆಚ್.ಎಸ್.ವಿ. ಅವರ ಕವಿತೆಯಲ್ಲಿ, ರಾಧೆಯೆಂಬ ಕೊಳಲಿಗೆ, ರಾಗವಾಗಿ ಯುನಿಫಿಕೇಷನ್ ಅನುಭವಿಸುವ  ಕೃಷ್ಣನ ಕ್ರಿಯೆಗೂ ವ್ಯತ್ಯಾಸವಿಲ್ಲ.

******************************

ಲೇಖಕರ ಬಗ್ಗೆ:

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ.

6 thoughts on “ಬಾನ್ಸುರಿ ಮತ್ತು ರಾಧೆ

  1. ವಾಹ್ ಅದ್ಭುತ ! ರಾಧಾ ಕೃಷ್ಣರ ಪ್ರೀತಿಯ ಅನನ್ಯತೆ ಚನ್ನಾಗಿದೆ ಲೇಖನ ಸರ್

    1. ಅನಾಮಿಕ ಅವರೇ. ಹೌದು.
      ಈ ವಸ್ತುವಿನ ಮೇಲೆ ಬರೆಯಲ್ಪಟ್ಟ, ಹಾಡುಗಳು, ಕುಣಿದ ನೃತ್ಯಗಳು, ಅನನ್ಯ.
      ತುಂಬಾ ಧನ್ಯವಾದಗಳು

  2. ನಿಜ ಕೊಳಲ ಗಾನವೆ ಮೋಹಕ . ಇನ್ನು ಆ ಮೋಹನ ನುಡಿಸಿದರೆ ಕೇಳಬೇಕೆ . ಹಾಗೆಯೇ ರಾಧೆ ಶ್ಯಾಮರ ಪ್ರೀತಿಯ ಸಂಕೇತವೂ
    ಕೊಳಲೇ. ಪುತಿನ ಅವರ ಗೋಕುಲ ನಿರ್ಗಮನ ನಾಟಕದಲ್ಲಿ ಈ ಅಂಶ ಸೊಗಸಾಗಿ ರೂಪಿತವಾಗಿದೆ ರಾಧೆಯಗಲಿದ ಕೃಷ್ಣನ ಕೈಯಿಂದ ಕೊಳಲು ಜಾರಿ ಹೋಗುತ್ತದೆ ನಂತರ ಅವನು ಅದನ್ನು ಮುಟ್ಟುವುದಿಲ್ಲ . ಈ ಅನನ್ಯ ಸಂಬಂಧಗಳ ನಂಟಿನ ಗಂಟನ್ನು ನೀವು ಕಟ್ವಿ ಕೊಡುವ ರೀತಿ ಅನನ್ಯ ಅದ್ಭುತ. ತುಂಬಾ ಸುಂದರ ಬರಹ . ಇದನ್ನು ಓದಿದ ಮೇಲೆ ತೀರಾ ಜಾಳು ಎನಿಸಿದರೂ ನನ್ನ ಬೇರೆ ಬೇರೆ ಕವನಗಳ ಎರಡು ಸಾಲುಗಳನ್ನು ಇಲ್ಲಿ ಹಾಕ ಬೇಕೆನಿಸುತ್ತಿದೆ .
    ದಯವಿಟ್ಟು ಕ್ಷಮೆ ಇರಲಿ .

    ಸಾಮಾನ್ಯ ಬಿದಿರ ಕಾಷ್ಟ ನಿನ್ನುಸಿರಿನಿಂದ ಸಜೀವ
    ಆಗಿರಲದೆಷ್ಟು ಪುನೀತವಾಗಿದೆಯೋ ನಿನ್ನಿಂದ ಮಾಧವ
    ನಿರ್ಜೀವ ವೇಣುವಿನಲೂ ರಾಗ ನುಡಿಸಿದೆ ನಿನ್ನ ಶ್ವಾಸ
    ನಿನ್ನ ಒಲವು ಮೂಡಿಸಿದಂತೆ ಈ ರಾಧೆಯಲ್ಲಿ ವಿಶ್ವಾಸ
    ಕೊಳಲು ಕವನ

    ಸದಾ ನೀ ತೋರುತಿಹೆ ಅಮ್ಮನ ಅಕ್ಕರೆ
    ಬರೀ ಮಿತ್ರನಲ್ಲ ನೀ ನನ್ನ ಜೀವದ ಜೀವ
    ಇಡಲಿ ನಮ್ಮೀ ಬಂಧನಕ್ಕೆ ಯಾವುದೇ ಹೆಸರೆ
    ಅರಿಯದು ಈ ಲೋಕ ನಮ್ಮ ಮೈತ್ರಿಯ ಭಾವ
    ಕವನ ಕಣ್ಣಲ್ಲು ನೀನೇ ಕನ್ನಡಿಯಲ್ಲಿ ನೀನೇ

    1. ಸುಜಾತಾ ಅವರೇ.

      ನೀವಂದಂತೆ ರಾಧಾ ಕೃಷ್ಣರ ಪ್ರೇಮ ಅನನ್ಯ. ರಾಧೆ ಅಗಲಿದ ಮೇಲೆ ಕೃಷ್ಣನ ಕೊಳಲು ಕೈಯಿಂದ ಜಾರಿಹೋಗಿ, ನಂತರ ಅದನ್ನು ಆತ ನುಡಿಸಲೇ ಇಲ್ಲ ಎನ್ನುವುದನ್ನು ನೀವು ತಿಳಿಸಿದ್ದು, ನನಗಿ ತಿಳಿದಿರಲಿಲ್ಲ. ಈ ಘಟನೆ ತುಂಬಾ ಸಿಂಬಾಲಿಕ್

      ನಿಮ್ಮ ಕವಿತೆಗಳು ಸುಂದರವಾಗಿವೆ.
      ಧನ್ಯವಾದಗಳು

  3. ಅಲೆಯಲೆಯಾಗಿ ತೇಲಿ ಬರುವ ಕೊಳಲು ಗಾನದಂತೆ ಜಯದೇವ ಹಾಗೂ ವೆಂಕಟೇಶ ಮೂರ್ತಿ ಅವರು ಕವಿತೆಯ ಜಾಡು ಹಿಡಿದು ಹೊರಟ ಲೇಖನ ಆಪ್ತವಾಗಿದೆ.ವಿಜ್ಞಾನಿಯೊಳಗೊಬ್ಬ ಕವಿ,ಲೇಖಕ ಹಾಗೂ ಸಹೃದಯಿ ಇರುವುದು ತಿಳಿದು ಖುಷಿಯಾಯಿತು._ರಾಧೇಶ ತೋಳ್ಪಾಡಿ ಎಸ್.

Leave a Reply

Back To Top