ಮೊದಲ ಕವಿತೆಯ ರೋಮಾಂಚನ
-ಶೋಭಾ ನಾಯ್ಕ .ಹಿರೇಕೈ ಕಂಡ್ರಾಜಿ.
ನಾನಾಗ ಶಿಕ್ಷಕರ ತರಬೇತಿ ಪಡೆಯುತ್ತಿದ್ದ ದಿನಗಳು. 99ರ ಕಾಲಘಟ್ಟ. ಹಾಸ್ಟೆಲ್ನಿಂದ ಎಲ್ಲ ಸೋದರಿಯರಿಂದ ಬೀಳ್ಕೊಂಡು ಹೊಸ ಊರು, ಹೊಸ ಸ್ಥಳ, ಹೊಸ ಬಾಡಿಗೆ ಮನೆಯಲ್ಲಿ ಒಂಟಿತನ ಕಾಡಿದಾಗ ನನಗೆ ಈ ಕವಿತೆಗಳ ನಂಟು ಬೆಳೆಯಿತು. ತೋಚಿದ್ದನ್ನು ಗೀಚಲು ಪ್ರಾರಂಭಿಸಿದ್ದು ಆಗಲೇ. ಮತ್ತೆ ಆಗಲೇ ಕಾರ್ಗಿಲ್ ಯುದ್ಧದ ಸಂದರ್ಭ ಕೂಡ. ಗಡಿ ಮತ್ತು ಬಂದೂಕಿನ ಗುಂಡು ನನ್ನನ್ನು ಆಗಲೇ ಕಾಡಲು ಪ್ರಾರಂಭಿಸಿದ್ದು. ಆಗ ಯುದ್ಧದ ಬಗ್ಗೆ ಬರೆದ ಮೊದಲ ಸಾಲುಗಳು ಇಂದಿಗೂ ನೆನಪಿವೆ...
“ಬಂದ ಭಿಕ್ಷುಕರಿಗೆ ಮನೆಯ ಜಗುಲಿಯ ಬಿಟ್ಟು,
ಅಂಗಳವೇ ನಮಗೆ
ಗತಿ ಯಾದ ಸ್ಥಿತಿಯನ್ನು
ಮರೆತಿಲ್ಲ ಸ್ವಾಮಿ”
“ಮೋಸ ಹೋಗಲಾರೆವು ಮತ್ತೆ
ಬೆನ್ನ ಹಿಂದೆ ಇರಿವವಗೆ
ಕಲಿತಿರುವ ಪಾಠವದು
ಮರೆಯದಾಗಿದೆ ನಮಗೆ” ಎಂದು ಬರೆದಿದ್ದೆ….
ಎನ್ನುವಂಥ ಸಾಲುಗಳು ವಿದ್ಯಾರ್ಥಿ ಜೀವನದ ಬಿಸಿ ರಕ್ತದಲ್ಲಿ ಬಂದಿದ್ದು ಅಚ್ಚರಿಯೇನಲ್ಲ. ಆದರೀಗ ಯುದ್ಧದ ಜಾಗದಲ್ಲಿ ಬುದ್ಧ ಬಂದು ತಲುಪಿದ್ದಾನೆ ನನ್ನೊಳಗೆ. ಕ್ರೌರ್ಯದ ಜಾಗದಲ್ಲಿ ಮನುಷ್ಯತ್ವ ,ಮಾನವೀಯತೆ ಮನೆ ಮಾಡಿದೆ. ಯುದ್ಧದ ಜಾಗವನ್ನು ಶಾಂತಿ ಆವರಿಸಿದೆ.
ವಿದ್ಯಾರ್ಥಿ ಜೀವನದ ಹೊತ್ತಿನಲ್ಲೇ ಮತ್ತೊಂದು ಕವಿತೆ ನನ್ನಲ್ಲಿ ಮೂಡಿತ್ತು.
” ನಾನೇ ಗಡಿಯಾಗಿ, ನಾನೇ ಕಾಶ್ಮೀರವಾಗಿ, ನಾನೇ ಕಣಿವೆಯಾಗಿ ಒಂದು ಕವಿತೆ ಬರೆದಿದ್ದೆ” . ಅದು ಪೂರ್ತಿಯಾಗಿ ಮೊದಲ ಕವಿತೆಯ ನೆನಪಾಗಿ ಇನ್ನೂ ನನ್ನ ಡೈರಿ ಪುಟದಲ್ಲಿ ಹಾಗೇ ಉಳಿದಿದೆ. ಮೊದಲು ಒಂದೆರಡು ಪ್ರೇಮ ಕವಿತೆ ಬರೆದ ಕಾರಣಕ್ಕೆ, ಹಾಸ್ಟೆಲ್ ನಲ್ಲಿ ಕವಯತ್ರಿ ಎಂಬ ಪಟ್ಟ ಕೊಟ್ಟು ; ಪಟ್ಟಾಭಿಷೇಕ ನಡೆದಿತ್ತಾದರೂ ಆ ಕವಿತೆಯ ಸಾಲುಗಳು ಇಂದು ನೆನಪಿಗೆ ಬರುತ್ತಿಲ್ಲ. ಹಾಗಾಗಿ ನನ್ನ ಕಾಶ್ಮೀರವೆಂಬ ಬೆಡಗಿಗೆ ಎಂಬ ಕವಿತೆ ನಾ ಮರೆಯದ ನನ್ನ ಮೊದಲ ಕವಿತೆ.
ಆ ಕವಿತೆ ಹೀಗೆ ತನ್ನೊಡಲ ಬಿಚ್ಚಿಕೊಳ್ಳುತ್ತದೆ..
ಕೇಳುತ್ತಲೇ ಇದ್ದೇನೆ
ಎಷ್ಟೋ ವರ್ಷಗಳಿಂದ
ನೀನವರಿಗೆ ಬೇಕಂತೆ
ನೀನಿವರ ಪಾಲಂತೆ !
ಅದಕ್ಕಾಗಿಯೇ ಅಲ್ಲವೇ
ದಿನವೂ ಗುಂಡಿನ ಮಳೆ
ನಿನ್ನ ಮನೆಯಂಗಳದಲ್ಲಿ
ಎಷ್ಟೊಂದು ಕನಸಿದೆಯೋ ನಿನಗೆ
ನೀನಿಷ್ಟ ಪಟ್ಟವರ ಜೊತೆ
ಬದುಕಬೇಕೆಂದು
ಅಲ್ಲಿ ಹಸಿರು
ಹುಟ್ಟಿಸಬೇಕೆಂದು
ಆದರೆ, ನಿನ್ನ ಕೇಳುವವರಾರು?
ನನಗೊಂದೇ ಭಯ
ಅವರಿಬ್ಬರ ಗುಂಡು
ನಿನ್ನೊಡಲನ್ನೇ ಸುಟ್ಟು ಬಿಟ್ಟರೆ
ಹುಟ್ಟಬಹುದೇ ಮತ್ತಲ್ಲಿ ಹಸಿರು ?
ಕುರುಡು ಗಂಡನ
ಕೈಹಿಡಿದು ಮಕ್ಕಳು ಕುರುಡಾದರೆ ನಿನ್ನ ಗತಿ ಏನು?
ಅದಕ್ಕೆ
ಹೇಳಿಬಿಡು ಒಮ್ಮೆ ಮೌನ ಮುರಿದು, ಯಾರು ಬೇಕು ನಿನಗೆ?
ಅವರೋ?
ಇವರೋ ?
ಕವಿತೆ ಬರೆದಾಗ ಸಹಜ ಖುಷಿ, ಸಹಜ ನಿರಾಳ. ಮನದಲ್ಲೊಂದು ಆ ಕ್ಷಣದ ಧನ್ಯತೆ. ಪ್ರೇಮ ಕವಿತೆ ಬರೆವ ವಯಸ್ಸಲ್ಲಿ ಯುದ್ಧ, ಗಡಿ , ದೇಶವೆಂದು ಯೋಚಿಸಿದ್ದಕ್ಕೆ ಈಗಲೂ ಹೆಮ್ಮೆ. ಈ ಕವಿತೆಗಳ ಬರೆದಿಟ್ಟ ಡೈರಿಯನ್ನು ನನ್ನ ಗೆಳತಿಯೊಬ್ಬಳು, ಅವಳ ಗೆಳತಿಗೆ ಕೊಟ್ಟು …. ನಮ್ಮ ಜಿಲ್ಲೆಯ ಹಿರಿಯ ಸಾಹಿತಿಗಳಾದ ವಿಷ್ಣು ನಾಯ್ಕ ಸರ್ ಗೆ ತಲುಪಿಸಿ, ನಿನ್ನೊಳಗೊಬ್ಬ ಸಶಕ್ತ ಕವಿಯತ್ರಿಯಿದ್ದಾಳೆ. ಅವಳಿಗೆ ಹಾಲು, ಹಾರ್ಲಿಕ್ಸು ಕೊಡುತ್ತಿರು. ಅಭಿನಂದನೆಗಳು ನಿನ್ನೊಳಗಿನ ಕವಯತ್ರಿಗೆ ಎಂಬ ಸಾಲುಗಳನ್ನು ಆಶೀರ್ವಾದ ಪೂರ್ವಕ ಎಂಬಂತೆ ಬರೆಸಿಬಂದು ಕೊಟ್ಟ ಆ ಘಳಿಗೆ ನಿಜಕ್ಕೂ ಅವಿಸ್ಮರಣೀಯ. ನಾನು ಕವಯತ್ರಿ ಅಂತ ಅನ್ನಿಸಿತ್ತು ಆ ದಿನ. ಮತ್ತೆ ಆ ದಿನಗಳೆಲ್ಲ ನನಗೆ ಸಮಾಜದ ಆಗು ಹೋಗುಗಳೇ ಕವಿತೆಯ ವಸ್ತು.
ಪ್ರಾರಂಭದ ದಿನದಲ್ಲಿ ಬರೆದ ಮತ್ತೊಂದು ಕವಿತೆಯ ತುಣುಕು.. ಉಗ್ರಗಾಮಿಗಳಿಗಾಗಿ ಬರೆದದ್ದು..
ಬದಲಾಗು ‘
ನೀ ಮೊದಲು ಮೆಟ್ಟಿದ್ದ
ಈ ಮಣ್ಣ ಕಣವನ್ನೇ..
ನೀ ಮೊದಲು ನೋಡಿದ್ದು
ಹೆತ್ತೊಡಲ ಮೊಗವನ್ನೇ..
ನೀ ಮೊದಲು ಕುಡಿದದ್ದು
ತಾಯ ಮೊಲೆ ಹಾಲನ್ನೇ…
ಆದರೂ ನೀನೇಕೆ ಮಗುವಾಗಲಿಲ್ಲ ??
ಎಂಬ ಕವಿತೆ ನನ್ನ ವಿದ್ಯಾರ್ಥಿ ಜೀವನದ ಮೊದ ಮೊದಲ ಕವಿತೆಗಳು. ಮೊದಲ ಕವಿತೆಯ ಪುಳಕ ಬರೆಯಲು ಹೋಗಿ ಕೆಲವು ಕವಿತೆಗಳ ನಿಮ್ಮೆದುರಿಗಿಟ್ಟೆ. ಕಾರಣವಿಷ್ಟೇ..
ಬಹಳ ವರುಷಗಳ ಮೇಲೆ ಹಳೆ ಡೈರಿಯ ಪುಟ ತೆರೆದಾಗ ಇನ್ನೂ ವರೆಗೂ ಎಲ್ಲೂ ಕಾಣಿಸಿ ಕೊಳ್ಳದ ಕವಿತೆಗಳು , ನಮಗೂ ಎಲ್ಲಾದರೂ ಪುಟ್ಟ ಜಾಗ ಕೊಡು, ಅಬ್ಬಲಿಗೆಯಲ್ಲಿ ( ಅವ್ವ ಮತ್ತು ಅಬ್ಬಲಿಗೆ , ನನ್ನ ಮೊದಲ ಸಂಕಲನ ) ನಮ್ನನ್ನೇಕೆ ಬಿಟ್ಟೆ ಎಂದು ಕೇಳಿದ ಇನಿ ದನಿಯ ಮೇಲೆ ಮಮಕಾರದ ಮುದ್ದುಕ್ಕಿತು. ನನ್ನ ಭಾವ ಕೋಶದಲ್ಲಿ ಸದಾ ಹೊಸದಾಗೆ ಇರುವ ಮೊದಲ ಕವಿತೆಗಳು ಕೊಟ್ಟ ಖುಷಿ, ಸಂಭ್ರಮ, ಮತ್ತು ಕವಿ ಎಂಬ ಪಟ್ಟವನ್ನು ನಾ ಎಂದು ಮರೆಯಲಾರೆ.
ಮೊದಲ ಕವಿತೆಯ ಸಂಭ್ರಮ ಚೆನ್ನಾಗಿದೆ..
ಮೊದಲ ತೊದಲು chendide ಗೆಳತಿ.
ಕನ್ನಡ ಕವಯಿತ್ರಿಯರ ಸಾಲಿನಲ್ಲಿ ಶೋಭಾ ನಾಯ್ಕ ಅವರು ಭಿನ್ನವಾಗಿ ನಿಲ್ಲಲು ಕಾರಣ ಅವರ ಕವಿತೆಯ ವಸ್ತು ಮತ್ತು ಧ್ವನಿ. ಯುದ್ಧವಿರೋಧಿ ನಿಲುವು ಹಾಗೂ ತಾಯ್ತನ ಅವರ ಕವಿತೆಗೆ ಬೆಳಕು ಮತ್ತು ಬೆರಗು ತರುವಂಥದ್ದು.ಕನ್ನಡ ಕಾವ್ಯ ಪರಂಪರೆ ಯುದ್ಧ ವಿರೋಧಿಯಾದುದು.ಪಂಪ ಸಹ ಯುದ್ಧ ವಿರೋಧಿ. ಬೇಂದ್ರೆ ,ಕುವೆಂಪು ಯುದ್ಧ ವಿರೋಧಿಗಳೆ ಆಗಿದ್ದರು.ಕವಿ ಎಂದೆಂದಿಗೂ ಜೀವಪರ.ಅಂತ ತುಡಿತ ಶೋಭಾ ನಾಯ್ಕ ಅವರ ಮೊದಲ ಕವಿತೆಗಳಲ್ಲಿ ಕಾಣಬಹುದು.ತಮ್ಮ ವಿಭಿನ್ನ ಶೈಲಿಯ ಕವಿತೆಗಳಿಂದಾಗಿ ಕನ್ನಡ ಕಾವ್ಯ ಇತಿಹಾಸದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಹೆಜ್ಜೆಗಳನ್ನು ಆರಂಭದ ಕವಿತೆಗಳಲ್ಲಿ ಗುರುತಿಸಬಹುದಾಗಿದೆ. ನಿಜ ಹೇಳಬೇಕೆಂದರೆ ಅವ್ವ ಮತ್ತು ಅಬ್ಬಲಿಗೆಯಲ್ಲಿ ಕಾಶ್ಮೀರ ಕುರಿತ ಕವಿತೆ ಸೇರಬೇಕಿತ್ತು.ಅದ್ಹೇಗೋ ತಪ್ಪಿ ಹೋಗಿದೆ. ಮುಂಬರುವ ಅವರ ಸಂಕಲನದಲ್ಲಿ ಬಿಟ್ಟುಹೋದ ಕವಿತೆ ಸೇರಲಿ.
ಸೊಗಸಾದ ಮೊದಲ ಸಾಲುಗಳು..