“ನೋವು ಮರೆತು ನಕ್ಕಾಗ……”ಸುಮತಿ ಪಿ ಅವರಿಂದ

ಮನುಷ್ಯ ಭಾವನಾ ಜೀವಿ. ಆತನ ಕೆಲವೊಂದು ಭಾವನೆಗಳು ಹೊರನೋಟಕ್ಕೆ ಗೊತ್ತಾಗಿಬಿಡುತ್ತವೆ. ಕೆಲವೊಂದು ಭಾವನೆಗಳು ಅಂತರಂಗದಲ್ಲಿ ಅಡಗಿರುತ್ತವೆ, ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸೂಕ್ಷ್ಮವಾದಂತಹ ಬುದ್ಧಿಶಕ್ತಿ, ಮನಸ್ಸು ಇರಬೇಕು. ಪ್ರೀತಿ ಎಂಬುದು ಪ್ರತಿಯೊಂದು ಜೀವಿಯ ಜೀವಸೆಲೆಯಾಗಿರುತ್ತದೆ. ಈ ಪ್ರೀತಿಗೆ ಕೊರತೆ ಉಂಟಾದಾಗ ಅದು ನಕಾರಾತ್ಮಕವಾದ ಪರಿಣಾಮವನ್ನು ಬೀರಿ, ಭಾವಂತರಂಗವನ್ನು ಕಲಕಿ ಬಿಡುತ್ತದೆ. ಅಂತರಂಗವನ್ನು ಅರಿಯುವುದು ಬಹಳ ಕಷ್ಟ .ಅದು “ಚಿಪ್ಪಿನೊಳಗಿನ ಮುತ್ತಿನಂತೆ” ಬಹಳ ಬೆಲೆ ಬಾಳುವಂತದ್ದು. “ಭಾವನೆಗಳೇ ಇಲ್ಲದ ಬದುಕು ಅದು ಬದುಕಲ್ಲ “ಬದುಕಿನಲ್ಲಿ ಪ್ರೀತಿ ,ಪ್ರೇಮ, ದ್ವೇಷ,ಕೋಪ, ಮತ್ಸರ ಇವುಗಳೆಲ್ಲ ಸಾಮಾನ್ಯ.

ಅಂತರಂಗದ ಭಾವನೆಗಳಿಗೆ ಪೆಟ್ಟಾದಾಗ ಅದನ್ನು ಹತೋಟಿಯಲ್ಲಿ ಇಡುವಂತಹ ಸಾಮರ್ಥ್ಯ ಕೆಲವರಿಗೆ ಮಾತ್ರ ಇರುತ್ತದೆ.ಇನ್ನು ಕೆಲವರು ಅಂತರಂಗದ ಭಾವನೆಗಳಿಗೆ ಪೆಟ್ಟಾದಾಗ ಮಾನಸಿಕ ಸ್ಥೀಮಿತವನ್ನು ಕಳೆದುಕೊಂಡು ಮಾನಸಿಕ ರೋಗಿಗಳಾಗಿ ಬಿಡುತ್ತಾರೆ. ಇನ್ನು ಕೆಲವರು ತಮ್ಮ ಭಾವನೆಗಳಿಗೆ ಪೆಟ್ಟು ಬಿದ್ದಾಗ ನಕಾರಾತ್ಮಕವಾಗಿ ಬೆಳೆದು ಸಮಾಜಘಾತುಕ ಶಕ್ತಿಗಳಾಗುತ್ತಾರೆ. ಹಾಗಾಗಿ ಅಂತರಂಗ ಎನ್ನುವಂತದ್ದು ಭಾವನೆಗಳನ್ನು ಮುಚ್ಚಿಡುವಂತಹ, ಬಚ್ಚಿಡುವಂತಹ, ಪ್ರಧಾನಸ್ಥಳ. ಅಲ್ಲಿ ಅಡಗಿರುವಂತಹ ಭಾವನೆಗಳನ್ನು ಅರ್ಥ ಮಾಡಿಕೊಂಡು ವ್ಯಕ್ತಿಗೆ ಸ್ಪಂಧಿಸಬೆಕಾದರೆ ನಮ್ಮಲ್ಲಿ ಮನಸ್ಸನ್ನು ಅರ್ಥ ಮಾಡಿಕೊಳ್ಳುವಂತಹ ಸಾಮರ್ಥ್ಯ ಇರಬೇಕಾಗುತ್ತದೆ.

ಮನುಷ್ಯ ಹುಟ್ಟಿನಿಂದ ಸಾವಿನ ತನಕ ತನ್ನ ಅಂತರಂಗದಲ್ಲಿ ವಿವಿಧ ಭಾವನೆಗಳನ್ನು ಹುದುಗಿಟ್ಟು ,ಅದಕ್ಕೆ ಪೂರಕವಾದ ಸ್ಪಂದನೆ ಸಿಕ್ಕಿದಾಗ ಖುಷಿಪಟ್ಟು, ಒಳಗೊಳಗೆ ಸಂತೋಷ ಸಂಭ್ರಮ ಪಡುತ್ತಾನೆ .ಇದರಿಂದ ಅವನ ಜೀವನ ಆನಂದ ಮಯವಾಗುತ್ತದೆ. ಅದೇ ಅವನ ಅಂತರಂಗದ ಭಾವನೆಗಳಿಗೆ ಸ್ಪಂದನೆ ಸಿಗದಾಗ ಒಳಗೊಳಗೆ ಕೊರಗಿ ಜೀವನ ಬರಡಾಗಿ ಬಿಡುತ್ತದೆ .

ಬಾಲ್ಯದಲ್ಲಿ ಮಕ್ಕಳು ಪ್ರೀತಿಯನ್ನು ಬಯಸುತ್ತಾರೆ. ಮಗುವಿಗೆ ಪ್ರೀತಿ ಸಿಕ್ಕಿದಾಗ ಅದು ಎಲ್ಲರೊಂದಿಗೆ ಸ್ಪಂದಿಸಲು ಪ್ರಾರಂಭಿಸುತ್ತದೆ. ಆ ಮುಗ್ಧ ಮನದಲ್ಲಿ ದ್ವೇಷ,ಅಸೂಯೆ, ಅಹಂಕಾರ,ಮೋಸ,ಮತ್ಸರದಂತಹ ಯಾವ ಭಾವನೆಗಳೂ ಇರುವುದಿಲ್ಲ.

ಯೌವ್ವನ ಅವಸ್ಥೆಯಲ್ಲಿ ತನ್ನನ್ನು ಇತರರು ಪ್ರೀತಿಸಬೇಕು. ಗೌರವಿಸಬೇಕು, ತಾನು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಎನ್ನುವಂತಹ ಭಾವನೆ ಅಂತರಂಗದೊಳಗಿರುತ್ತದೆ .ಇದು ಕೈಗೂಡಿದಾಗ ಯುವಕರು ಸಮಾಜದ ಶಕ್ತಿಯಾಗಿ ಬೆಳೆಯುತ್ತಾರೆ. ಅದೇ ಯುವಕರ ಈ ರೀತಿಯ ಭಾವಂತರಂಗದ ಭಾವನೆಗಳಿಗೆ ಯಾವುದೇ ಬೆಲೆ ಸಿಗದಿದ್ದಾಗ, ಮನಸ್ಸು ಕೆರಳಿ, ಸಮಾಜಘಾತಕ ಶಕ್ತಿಯಾಗಿ ಬೆಳೆಯಲೂಬಹುದು. ಈ ಹಂತದಲ್ಲಿ ಭಾವಂತರಂಗಕ್ಕೆ ಪೆಟ್ಟು ಬಿದ್ದಾಗ ಸೇಡು, ಪ್ರತಿಕಾರ, ಹೋರಾಟ ,ವಿರೋಧ ಇವೆಲ್ಲವೂ ವ್ಯಕ್ತವಾಗುತ್ತದೆ. “ಮನುಷ್ಯನ ಅಂತರಂಗ ಭಾವನೆಗಳ ಹಂದರ”. ಪ್ರತಿ ಹಂತದಲ್ಲೂ ಅಂತರಂಗದ ಭಾವನೆಗಳನ್ನು ಅರ್ಥಮಾಡಿಕೊಂಡು ಸಾಗಿದರೆ ಮಾತ್ರ ಮನುಷ್ಯನ ಜೀವನ ಸುಗಮ ಜೀವನ.

ಮಧ್ಯ ವಯಸ್ಸಿನ ಹಂತದಲ್ಲಿ, ಮನುಷ್ಯನ ಮನಸ್ಸು ಮಾಗಿರುತ್ತದೆ ಅವನ ಅಂತರಂಗದ ಭಾವನೆಗಳಿಗೂ ಹಿಡಿತವಿರುತ್ತದೆ. ತನ್ನ ಅಂತರಂಗವನ್ನು ತಾನು ಹತೋಟಿಯಲ್ಲಿಟ್ಟುಕೊಂಡು ಮುನ್ನಡೆಯುತ್ತಿರುತ್ತಾನೆ. ಸಾಮರಸ್ಯದಿಂದ ಬದುಕಲು ಹಾತೋರೆಯುತ್ತಾನೆ.

ಇನ್ನೂ ಮುದಿ ವಯಸ್ಸಿನಲ್ಲಿ ಅಂತರಂಗದ ಭಾವನೆ ಮಕ್ಕಳ ಭಾವನೆಯಂತಿರುತ್ತದೆ. ತನಗೆ ಬೇಕಾದದ್ದನ್ನು ದೊರಕಿಸಿ ಕೊಳ್ಳುವಂತಹ ಹಠ,ಸಣ್ಣ ಮಕ್ಕಳ ಹಾಗೆ ಇರುತ್ತದೆ. ಒಟ್ಟಿನಲ್ಲಿ ಮನುಜನ ಭಾವಂತರಂಗವು ವಯಸ್ಸಿಗನುಗುಣವಾದ ವಿವಿಧ ಭಾವನೆಗಳನ್ನು ಮುಚ್ಚಿಟ್ಟು ಅದನ್ನು ಬಚ್ಚಿಟ್ಟು, ನಿಯಂತ್ರಿಸಲು ಪ್ರಯತ್ನ ಮಾಡುತ್ತದೆ. ಕೆಲವೊಮ್ಮೆ ಮುಚ್ಚಿಟ್ಟ ಭಾವನೆಗಳನ್ನು ಹೊರಗೆಡಹಲು ಆಗದೆ, ನಿಯಂತ್ರಿಸಲೂ ಆಗದೆ, ಮರೆವು ಮತ್ತು ನೆನಪುಗಳ ನಡುವೆ ಸಂಘರ್ಷ ಏರ್ಪಟ್ಟು, ವ್ಯಕ್ತಿ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾನೆ.

ಕೆಲವರು ಮೇಲ್ನೋಟಕ್ಕೆ ಒರಟರಂತೆ ಕಂಡರೂ ಅವರ ಅಂತರಂಗ ಬಹಳ ಮೃದುವಾಗಿರುತ್ತದೆ .
ಇತರರ ಭಾವನೆಗೆ ಹೃದಯ ಮಿಡಿಯುತ್ತದೆ.ಮನ ಕರಗುತ್ತದೆ. ಅಂತರಂಗದಲ್ಲಿ ಅವರು ಬಹಳ ಮೃದು ಸ್ವಭಾವದವರಾಗಿರುತ್ತಾರೆ. ಅಂತವರ ಅಂತರಂಗದ ಭಾವನೆಗಳಿಗೆ ಪೆಟ್ಟು ಬಿದ್ದಾಗ ಕೆಟ್ಟದು ಸಂಭವಿಸಿಯೇ ಸಂಭವಿಸುತ್ತದೆ. ಭಾವನೆಗಳು ಬಹಳ ಸೂಕ್ಷ್ಮ. ಅಂತರಂಗದ ಭಾವನೆಗಳನ್ನು ಗೌರವಿಸಿ ಬದುಕುವ ಮನಸ್ಸಾಕ್ಷಿ ನಮ್ಮದಾಗಿರಬೇಕು.

ಮನುಷ್ಯನ ಮನಸ್ಸಿನ ಭಾವನೆಗಳಿಗೆ ಪೆಟ್ಟಾದಾಗ ನೋವಾಗುವುದು ಸಹಜ.ಕೆಲವರು ಅದನ್ನು ತಕ್ಷಣ ಹೊರಹಾಕಿ ಬಿಟ್ಟು,ಹಾಯಾಗಿರುತ್ತಾರೆ .ಆದರೆ ಇನ್ನು ಕೆಲವರು ತನ್ನ ನೋವು ತನ್ನ ಮನಸ್ಸಿನೊಳಗೆ ಸಾಯಲಿ ಎಂದು ನೋವನ್ನು ಮನಸ್ಸಿನೊಳಗೆ ಅದುಮಿಟ್ಟು, ಮಾನಸಿಕ ರೋಗಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ.ಮನಸ್ಸಿನೊಳಗೆ ಇದ್ದಂತಹ ಕೆಲವೊಂದು
ನೋವು ಕಾಲದೊಂದಿಗೆ ಸಾಯದು. ನಾವು ಅದನ್ನು ಎಷ್ಟು ಮರೆಯಬೇಕೆಂದರೂ, ಮರೆತುಬಿಟ್ಟರೂ, ಕೆಲವೊಂದು ಸಂದರ್ಭದಲ್ಲಿ ಮತ್ತೆ ನೆನಪಾಗಿ ಕಾಡತೊಡಗುತ್ತದೆ. ಹಾಗಾಗಿ ಮನಸ್ಸಿನ ನೋವನ್ನು ಮರೆಯುವುದು ಅಷ್ಟು ಸುಲಭವಲ್ಲ.

ಅವಿಭಕ್ತ ಕುಟುಂಬವೊಂದರಲ್ಲಿನ ಹೆಣ್ಮಗಳು ಸ್ಮಿತಾ ಯೌವ್ವನದಲ್ಲಿ ತನ್ನ ತರಗತಿಯಲ್ಲಿ ಓದುತ್ತಿದ್ದ ಸೂರಜ್ ಎಂಬ ಹುಡುಗನೊಬ್ಬನನ್ನು ಪ್ರೀತಿಸಿದಳು. ಅವನು ಕೂಡ ಅಷ್ಟೇ. ಸ್ಮಿತಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನು. ಅವರಿಬ್ಬರ ಪ್ರೀತಿ ಎರಡೂ ಮನೆಯ ಎಲ್ಲರಿಗೂ ಒಪ್ಪಿಗೆಯಾಗಿತ್ತು .ಇನ್ನೇನು ಇಂಜಿನಿಯರಿಂಗ್ ಫೈನಲ್ ಹಂತದಲ್ಲಿ ಓದುತ್ತಿದ್ದ ಅವರಿಬ್ಬರೂ ಕೆಲವೇ ಸಮಯದಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡುವವರಿದ್ದರು .
ಆದರೆ “ನಾವೊಂದು ಬಗೆದರೆ,ದೈವ ಇನ್ನೊಂದು ಬಗೆಯುವುದು”
ಎನ್ನುವಂತೆ ದೈವ ಇಚ್ಛೆ ಬೇರೆಯೇ ಆಗಿತ್ತು.
ಪ್ರೊಜೆಕ್ಟ್ ಸಬ್ಮಿಷನ್ ಗೆ ಹೋದ ಸೂರಜ್ ಹಿಂತಿರುಗಿ ಬರುವಾಗ ಬಸ್ಸು ಆಕ್ಸಿಡೆಂಟ್ ನಲ್ಲಿ ತೀರಿಕೊಂಡ. ಈ ವಿಷಯವು ಸ್ಮಿತಾಳನ್ನು ದಂಗುಬಡಿಸಿತು. ಅವನ ಸಾವನ್ನು
ಸ್ಮಿತಳಿಗೆ ಅರಗಿಸಿಕೊಳ್ಳುವುದೇ ಕಷ್ಟವಾಗತೊಡಗಿತು.ಯಾರಲ್ಲಿಯೂ ಮಾತಿಲ್ಲ,ಕಥೆ ಇಲ್ಲ ಮೌನವಾಗಿಯೇ ಇರತೊಡಗಿದಳು.ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ.ಮನಸ್ಸಿನ ನೋವನ್ನು ಹೊರಹಾಕಲು ಅಳುವುದಿಲ್ಲ.ಇಂತಹ ಪರಿಸ್ಥಿತಿಯಲ್ಲಿ ಎರಡೂ ಕುಟುಂಬದ ಸದಸ್ಯರಿಗೂ ಬಹಳಷ್ಟು ನೋವು ಹಿಂಸೆಯಾಗುತ್ತಿತ್ತು.ಕೊನೆ ಕೊನೆಗೆ ಅವಳು ಮಾನಸಿಕ ರೋಗಿಯಂತೆ ಬಡಬಡಿಸತೊಡಗಿದಳು. ಮನೆಯವರು ಅವಳನ್ನು ಮಾನಸಿಕ ತಜ್ಞರ ಬಳಿ ತೋರಿಸಿದರು. ಅಲ್ಲಿ ನಾಲ್ಕು ತಿಂಗಳು ಅವರ ಆರೈಕೆಯಲ್ಲಿ ಗುಣಮುಖಳಾಗಿ ಸ್ಮಿತಾ ಮನೆಗೆ ಹಿಂತಿರುಗಿದಳು. ಸ್ವಲ್ಪ ದಿನ ಸಹಜವಾಗಿಯೇ ಇದ್ದ ಅವಳು ದಿನ ಕಳೆದಂತೆ ಮತ್ತೆ ಮೌನಕ್ಕೆ ಜಾರುತಿದ್ದಳು. ಆಗ ಮನೆಯವರೆಲ್ಲರಿಗೂ ಮತ್ತೆ ಅವಳು ಮಾನಸಿಕ ರೋಗಿ ಆಗುತ್ತಾಳೋ ಎನ್ನುವ ಭಯ ಕಾಡತೊಡಗಿತ್ತು. ಅವಳ ದೊಡ್ಡಪ್ಪನ ಮಗಳು ಕವಿತಾ ಅದೇ ಊರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳು ಸ್ಮಿತಾಳ ವಿಷಯವನ್ನು ತನ್ನ ಸಹೋದ್ಯೋಗಿ ರಮೇಶನಲ್ಲಿ ಹೇಳಿಕೊಂಡಳು. ಕುತೂಹಲಗೊಂಡ ರಮೇಶ ಕವಿತಾಳ ಜೊತೆಗೆ ಆಗಾಗ ಮನೆಗೆ ಬರಲಾರಂಬಿಸಿದನು, ತಾನು ಸ್ಮಿತಾಳನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತೇನೆಂದು ಅವಳಲ್ಲಿ ಪ್ರೀತಿಯಿಂದ ಮಾತನಾಡಿಸತೊಡಗಿದನು. ಪ್ರತಿ ವಾರ ತನ್ನದೇ ಮನೆ ಎಂಬಂತೆ ಸ್ಮಿತಾಳ ಮನೆಗೆ ಬಂದು ಅವಳನ್ನು ತನ್ನ ಕಡೆಗೆ ಒಲಿಸಿಕೋಳ್ಳಲು ಪ್ರಯತ್ನಿಸಿದನು. ಅವಳನ್ನು ಆತ್ಮೀಯವಾಗಿ ನೋಡಿಕೊಳ್ಳುವುದು. ಹೊರಗೆ ತಿರುಗಾಡಲು ಕರೆದುಕೊಂಡು ಹೋಗುವುದು ,ಮುಂತಾದ ಚಟುವಟಿಕೆಗಳಿಂದ ಅವಳ ಮನಸ್ಸನ್ನು ಗೆದ್ದನು ಎರಡು ವರ್ಷ ಹೀಗೆ ಕಳೆಯುವಷ್ಟರಲ್ಲಿ ಸ್ಮಿತಾ ರಮೇಶನನ್ನು ಹಚ್ಚಿಕೊಳ್ಳತೊಡಗಿದಳು. ಕೊನೆಗೆ ರಮೇಶನಿಲ್ಲದೆ ಅವಳಿಗೆ ಸಮಯ ಕಳೆಯುವುದೇ ಕಷ್ಟವಾಗತೊಡಗಿತು ಅಂತಹ ಸಂದರ್ಭದಲ್ಲಿ ರಮೇಶ ಮನೆಯವರಹ ಒಪ್ಪಿಗೆ ಪಡೆದು ಸ್ಮಿತಾಳ ಮನೆಯವರ ಒಪ್ಪಿಗೆಯನ್ನೂ ಪಡೆದು,ಅವಳನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡನು,ಸ್ಮಿತಾ ಮನಸ್ಸಿನ ನೋವನ್ನೆಲ್ಲ ಮರೆತು ನಗುನಗುತ್ತಲೇ ರಮೇಶನೊಂದಿಗೆ ಬದುಕನ್ನು ಸಾಗಿಸುತ್ತಿದ್ದಳು. ನೋವು ಮರೆತು ಸ್ಮಿತಾಳ ಮನಸ್ಸು ನಕ್ಕಾಗ ಸ್ಮಿತಾಳ ಮನೆಯವರಿಗೂ ಸೂರಜ್ ನ ಮನೆಯವರಿಗೂ ,ರಮೇಶನ ಮನೆಯವರಿಗೋ ತುಂಬಾ ಖುಷಿಯಾಗಿತ್ತು.

“ಮನಸ್ಸಿನ ನೋವಿಗಿಂತ ಬದುಕೆ ದೊಡ್ಡದು”ಎಂದು ಮನಸ್ಸಿಗಾದ ನೋವನ್ನು ಮರೆತು ನಗುನಗುತ್ತಾ ಬಾಳುವುದೇ ಬದುಕು, ಆದರೆ ಈ ರೀತಿ ನಗುನಗುತ್ತಾ ಬಾಳುವ ಕಲೆ ಎಲ್ಲರಿಗೂ ಸಿದ್ಧಿಸದು. ಅದನ್ನು ಸಿದ್ಧಿಸಿಕೊಂಡು ಬದುಕುವುದನ್ನು ಕಲಿತುಕೊಳ್ಳಬೇಕು ಅದುವೇ ಜೀವನ. ನೋವು ಮರೆತು ನಕ್ಕಾಗ, ಜೀವನ ಸಂಧ್ಯಾರಾಗ.


2 thoughts on ““ನೋವು ಮರೆತು ನಕ್ಕಾಗ……”ಸುಮತಿ ಪಿ ಅವರಿಂದ

Leave a Reply

Back To Top