“ಎಚ್ಚರ! ಹಿತ ಶತ್ರುಗಳಿದ್ದಾರೆ !” ಲೇಖನ,ಶುಭಲಕ್ಷ್ಮಿ ಆರ್ ನಾಯಕ

ಕಾಮ ಕ್ರೋಧ, ಲೋಭ ಮೋಹ ಮದ ಮತ್ಸರ ಗಳು ಮನುಷ್ಯನಲ್ಲಿ ತುಂಬಿರುವ ಷಡ್ವೈರಿಗಳು. ಈ  ಗುಣಗಳು ಕೆಲವರಲ್ಲಿ ಅತಿಯಾಗಿ ಇನ್ನು ಕೆಲವರಲ್ಲಿ ಮಿತವಾಗಿ ಮತ್ತೆ ಕೆಲವರಲ್ಲಿ ಪರಿಸ್ಥಿತಿಗನುಗುಣವಾಗಿ ತೋರ್ಪಡಿಸುತ್ತವೆ.
ವೈರತ್ವ ಇದೆ ಎಂದಮೇಲೆ ವೈರಿಗಳೂ ಇದ್ದಾರೆಂದೇ ಅರ್ಥ. ಆದರೆ ಈ ವೈರಿಗಳಲ್ಲಿ ಪ್ರಮುಖವಾಗಿ ಎರಡು ರೀತಿಯ ವೈರಿಗಳನ್ನು ಕಾಣುತ್ತೇವೆ. ಶತ್ರುಗಳು ಹಾಗೂ ಹಿತಶತ್ರುಗಳು.
ಶತ್ರುಗಳನ್ನಾದರೂ ಎದುರಿಸಿ ಗೆಲ್ಲಬಹುದು , ಅವರು ಮಾಡುವ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು, ಕಾದಾಡಬಹುದು, ಹೋರಾಟದಲ್ಲಿ ಗೆಲ್ಲಬಹುದು ಇಲ್ಲಾ ಸೋಲಬಹುದು. ಕಾರಣ ಅವರು ಮಾಡುವ ಎಲ್ಲ ಚಟುವಟಿಕೆಗಳು, ಆಡುವ ಮಾತುಗಳು, ಕುಟಿಲಗಳು ನಮ್ಮ ಕಣ್ಣಿಗೆ ಕಾಣುತ್ತವೆ. ನೇರವಾಗಿ ಅಂತವರೊಂದಿಗೆ ಕಾದಾಡಬಹುದು. ಯುದ್ಧ ಘೋಷಣೆ ಮಾಡಿ ಯುದ್ಧಕ್ಕೆ ಬಂದ ವೈರಿಗಳರೀತಿ.
ಆದರೆ….. ಯುದ್ಧ ಘೋಷಿಸದೇ, ಅಚಾನಕ್ ಆಗಿ ಮೋಸದಿಂದ ನಗುನಗುತ್ತಾ ಬಂದು ಬಾಂಬ್ ಹಾಕಿಬಿಡುವುದು  ಹಿತ ಶತ್ರುಗಳ ನೀತಿ. ಇವರಿಂದ ಸೋಲೇ ವಿನಃ ಗೆಲ್ಲುತ್ತೇವೆ ಎಂಬ ಭರವಸೆ ಬರಲು ಸಾಧ್ಯವಿಲ್ಲ.ಶತ್ರುಗಳಿಗಿಂತ ಹಿತ ಶತ್ರುಗಳು ಬಹಳ ಅಪಾಯಕಾರಿ. ಅವರ ನಡೆ ಹೇಗಿರುತ್ತದೆ ಎಂದರೆ ನಮಗೆ ಹಿತವನ್ನೇ ಮಾಡುವವರಂತೆ  ಕಾಣುವರು. ಆದರೆ ಒಳಗಿನಿಂದ ಬೇಡದ ಮಸಲತ್ತು ಮಾಡಿ ಕೆಡುಹಬೇಕು ಎಂದುಕೊಂಡು ಯಾರ ಅರಿವಿಗೂ ಬಾರದಂತೆ ಕಾಲೆಳೆಯುವವರು.ಬಣ್ಣನೆಯ  ಮಾತು , ಮೃದು ನುಡಿಗಳನ್ನು ಆಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಚಾಣಾಕ್ಷರು ಇವರು! ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುವಲ್ಲಿ ಇವರನ್ನು ಮೀರಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ “ಸಾಗರಿ ಹಾಗೂ ಅವಳ ಗೆಳತಿ ಸುಮಾ  ಸುಮಾರು ಹತ್ತಾರು ವರ್ಷಗಳಿಂದ ಪರಿಚಿತರು. ಒಟ್ಟಿಗೆ, ಒಂದೇ ಶಾಲೆಯಲ್ಲಿ ಓದಿದವರು. ನಂತರ ಕೆಲಸ ಸಿಕ್ಕಿದ ಮೇಲೆ ಸ್ವಲ್ಪ ವರ್ಷ ಬೇರೆ ಬೇರೆಯಾದರೂ  ಮತ್ತದೇ ಗೆಳೆತನದ ಮುಂದುವರಿಕೆ.
ಆದರೆ ಸುಮಾಳಿಗೆಗೊತ್ತಾಗದ ರೀತಿಯಲ್ಲಿ ಸಾಗರಿ ಅವಳ ವಿರುದ್ಧವೇ ಶಾಲಾದಿನಗಳಿಂದಲೂ ಮಾಡುವ ಚಿಕ್ಕ ಚಿಕ್ಕ ಸಂಚುಗಳು ಸುಮಾಳಿಗೆ ಅರಿವಾಗಲಿಲ್ಲ ಅರಿವಾದರೂ ತನ್ನ ಶಾಲಾದಿನಗಳ ಗೆಳತಿ  ಎಂಬ ಕಾರಣಕ್ಕೆ ಸುಮಾ ಮಾತ್ರ ಅವಳನ್ನು ದ್ವೇಷಿಸುತ್ತಿರಲಿಲ್ಲ. ಆದರೆ ಸಾಗರಿಗೆ ಸುಮಾಳೆಂದರೆ ಮೇಲ್ನೋಟಕ್ಕೆ ಮಾತ್ರ ಪ್ರೀತಿ, ಸ್ನೇಹವೆನ್ನುವುದು ಗೊತ್ತಾಗುವಾಗ ಬಹಳ ವರ್ಷಗಳೇ ಕಳೆದು ಹೋಗಿದ್ದವು. ತಡವಾಗಿಯಾದರೂ ಸಾಗರಿಯ ಗೋಮುಖದ ವ್ಯಾಘ್ರಗುಣದ ಅರಿವಾದಾಗ ಸಹವಾಸವೇ ಸಾಕು ಎಂಬ ತೀರ್ಮಾನಕ್ಕೆ ಸುಮಾ ಬರುತ್ತಾಳೆ. ಚಂದದ ಜೀವನ ಸಾಗಿಸುತ್ತಾಳೆ.”

ಈ ಕತೆಯಲ್ಲಿ ಕಂಡುಬರುವ ಸತ್ಯವೆಂದರೆ ನಮ್ಮ ಹಿತ ಶತ್ರುಗಳ ಬಗ್ಗೆ ನಾವು ಅರಿತಾಗ ಅವರಿಂದ ನಾವು ಆದಷ್ಟು ದೂರ ಹೋಗಬೇಕೆ ವಿನಃ ಹತ್ತಿರಕ್ಕಲ್ಲ.

ಕಂಡದ್ದನ್ನಾಡಿದರೆ…..

“ಕಂಡದ್ದನ್ನಾಡಿದರೆ ಕೆಂಡದಂತಹ ಕೋಪ” ವಾದರೂ ಅಡ್ಡಿಯಿಲ್ಲ. ನೇರವಾಗಿ ತಿಳಿಸಿ ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕೇ ಹೊರತು ಪರರ / ನಮ್ಮವರ ಮೇಲಿನ ಅಸೂಯೆಯಿಂದ ಮಿತ್ರರಂತೆ ನಟಿಸಿ ಶತ್ರುವ ಕಾರ್ಯ ಮಾಡಬಾರದು.
ಆದರೆ ಇಂದು ಏನಾಗುತ್ತಿದೆ? ಕಂಡ ಸತ್ಯವನ್ನು, ಪಾಲಿಸಬೇಕಾದ ನಿಯಮಗಳನ್ನು,ತಪ್ಪುಗಳನ್ನು, ಅನ್ಯಾಯಗಳನ್ನು ನೇರವಾಗಿ  ಹೇಳಿದರೆ ನಿಷ್ಠುರವಾಗಿಬಿಡುತ್ತೇವೆ.ಸತ್ಯ ಕಹಿಯಾಗಿರುತ್ತದೆ ಅದನ್ನು ಮಿಥ್ಯವಾದಿಗಳು ಅಥವಾ ಬೆನ್ನಿಗೆ ಚೂರಿ ಹಾಕುವಂತಹ ಹಿತ ಶತ್ರುಗಳು ಒಪ್ಪಲಾರರು. ಈ ಹಿತ ಶತ್ರುಗಳು ಒಂದುರೀತಿಯ ಸೈಲೆಂಟ್ ವಿಷವಿದ್ದಂತೆ. ನಿಧಾನವಾಗಿ ಸಾಯಿಸುವಂತಹವು.
 ಆದರೆ ಒಂದು ಮಾತ್ರ ಸತ್ಯ ನೇರ ನೇರ ಕಾದಾಡಿ ಶತ್ರುಗಳನ್ನು  ಗೆಲ್ಲಬಹುದು ಆದರೆ ಹಿಂದಿನಿಂದ ಬಂದು ಅಥವಾ ನಮ್ಮ ಹಿತಕ್ಕಾಗಿಯೇ ಇವರು ಇರುವವರು ಎಂದುನಟನೆ ಮಾಡುತ್ತ,  ಒಳೊಳಗೇ  ಕತ್ತಿ ಮಸೆದು ಬೆನ್ನಿಗೆ ಆ ಕತ್ತಿಯಿಂದ ಇರಿಯುವವರಿಂದ ತಪ್ಪಿಸಿಕೊಳ್ಳಲು ಬಹಳ ಕಷ್ಟ. ಇವರ ನಡೆ ಹೇಗುರುತ್ತದೆ ಎಂದರೆ ನಾವೊಬ್ಬರೇ ಇರುವಾಗ ನಮ್ಮನ್ನು ಹೊಗಳುವರು. ಆದರೆ ಹತ್ತಾರು ಮಂದಿಯೊಂದಿಗಿರುವಾಗ ಆ ಹೊಗಳಿಕೆಯ ಮಾತುಗಳಾಗಲಿ, ಉಪಕಾರ ಪ್ರಜ್ಞೆಯಾಗಲಿ ಯಕಶ್ಚಿತ್ ಮಾತನಾಡುವ ಗೋಜಿಗೂ ಇವರು ಬರಲಾರರು. ಹಾಗಾಗಿ ಇಂಥವರ ಕುರಿತು ಜಾಗ್ರತೆ ಮಾಡುವುದು, ಮುಖವಾಡ ಧರಿಸಿದ್ದು ಗೊತ್ತಾಗುತ್ತಿದ್ದಂತೆ ಅವರ ಸಂಪರ್ಕದಿಂದ ದೂರ ಹೋಗುವುದೇ ಶ್ರೇಯಸ್ಸು. ನೇರವಾಗಿ ಹೇಳಿ ನಿಷ್ಠುರರಾದರೂಅಡ್ಡಿಯಿಲ್ಲ. ಹೈತೈಷಿಗಳಂತೆ ವರ್ತಿಸುವ ಹಿತಶತ್ರುಗಳಾಗಬಾರದೆಂಬುದು ಆ ಹಿತ ಶತ್ರುಗಳ ಬಗ್ಗೆ ಎಚ್ಚರ ಬೇಕೆಂಬುದೇ ನನ್ನ ಅನುಭವದ ಅಭಿಪ್ರಾಯ.


Leave a Reply

Back To Top