ಮೊದಲ ಕವಿತೆಯ ಅನುಭವದ ಸಾರ

ಮೊದಲ ಕವಿತೆಯ ರೋಮಾಂಚನ

ಪೂಜಾ ನಾರಾಯಣ ನಾಯಕ

White Ceramic Teacup With Saucer Near Two Books Above Gray Floral Textile

           ಅದ್ಯಾಕೋ ಗೊತ್ತಿಲ್ಲ ಬಾಲ್ಯದ ದಿನದಿಂದಲೂ ಕನ್ನಡ ಭಾಷೆ ಮತ್ತು ಸಾಹಿತ್ಯ ಮೇಲೆ ಇತರ ಯಾವ ಭಾಷೆಯ ಮೇಲೂ ಇಲ್ಲದ ಒಲವು, ವಾತ್ಸಲ್ಯ, ಕರುಣೆ ಎಲ್ಲಕ್ಕಿಂತ ಹೆಚ್ಚಾಗಿ ಒಂದು ರೀತಿಯ ಗೌರವದ ಭಾವ ನನ್ನಲ್ಲಿ ನೆಲೆಯಾಗಿಬಿಟ್ಟಿದೆ. ಅದೇ ಕಾರಣಕ್ಕೋ ಏನೋ ಕವಿತೆಯನ್ನು ಬರೆಯಬೇಕು ಎನ್ನುವ ಸಣ್ಣ ತುಡಿತ ನನ್ನಲ್ಲಿ ಮೊಳಕೆಯೊಡೆದದ್ದು. ಆದರೆ ಶಾಲಾ-ಕಾಲೇಜಿನ ಪುಸ್ತಕದಲ್ಲಿನ ಕವಿಗಳ ಸಾಹಿತ್ಯದ ಹೊರತಾಗಿ ಬೇರಾವ ಹೆಚ್ಚಿನ ಸಾಹಿತ್ಯದ ಬಗ್ಗೆಯೂ ಗೊತ್ತಿಲ್ಲದ ನನಗೆ ಕಾವ್ಯವನ್ನು ರಚಿಸುವುದು ಹೇಗೆ?  ನನ್ನಿಂದ ರಚಿಸಲು ಸಾಧ್ಯವೇ? ಬರೆದರೂ ಸಹ ಪ್ರಕಟಿಸುವುದು ಹೇಗೆ ಮತ್ತು ಎಲ್ಲಿ? ಎನ್ನುವ ಹಲವಾರು ಪ್ರಶ್ನೆಗಳು ನನ್ನಲ್ಲಿ ಸದಾ ಕಾಡುತ್ತಲೇ ಇರುತ್ತಿದ್ದವು. ಪ್ರಶ್ನೆಗಳೆಲ್ಲ ಮನದಲ್ಲಿ ಗಿರಕಿ ಹೊಡೆಯುತ್ತಲೇ ಇದ್ದರೂ ಕೂಡ ಒಮ್ಮೆಯಾದರೂ ಕವಿತೆಯನ್ನು ಬರೆದೇ ತೀರಬೇಕೆನ್ನುವ ಕೌತುಕತೆ ಮಾತ್ರ ಎಂದಿಗೂ ಇದ್ದೇ ಇತ್ತು.

 ನಾಗಚಂದ್ರ,  ಮುದ್ದಣ,  ಕುಮಾರವ್ಯಾಸರಂತ ಕನ್ನಡದ ಮೇರು ಕವಿಗಳಿಂದ ಹಿಡಿದು ಕುವೆಂಪು, ಬೇಂದ್ರೆ, ಕಾರಂತರಂತಹ ನವೋದಯ ಕವಿಗಳ ಪದ್ಯಗಳನ್ನ ಶಾಲಾ ದಿನಗಳಲ್ಲಿ ಓದುವಾಗ ಅವರ ಅದ್ಭುತ ಕಾವ್ಯ ರಚನಾ ಕ್ರಮ, ಕಾವ್ಯದ ಸೊಬಗು, ಕಾವ್ಯದಲ್ಲಿ ಅಡಕವಾಗಿರುವ ಅತ್ಯದ್ಭುತ ಶಕ್ತಿ, ಅವರು ಕಾವ್ಯಕ್ಕೆ ಶಬ್ದವನ್ನು ಪೋಣಿಸುವ ಗತಿ ಇವೆಲ್ಲವನ್ನೂ ಸಿಂಹಾವಲೋಕನ ಮಾಡಿ ನೋಡಿದಾಗ, ಸೋಜಿಗವೆಂದೆನಗನಿಸಿ ಅಬ್ಬಾ! ಬಹುಶಃ ಇದೆಲ್ಲ ವಾಗ್ದೇವಿಯ ಕೃಪೆಯೇ ಇದ್ದಿರಬೇಕೆಂದುಕೊಳ್ಳುತ್ತಿದ್ದೆ. ಅದೇ ಕ್ಷಣದಲ್ಲಿ ನನ್ನೊಳಗೆ ಕಾವ್ಯದ ಒಂದೆರಡು ಸಾಲು ಮಿನುಗಿದಂತಾಗಿ ನಾನೇಕೆ ಮಿನುಗಿದ ಈ ಭಾವನೆಯ ಸಾಲುಗಳನ್ನು ಬರವಣಿಗೆಯ ರೂಪಕ್ಕೆ ಕೂರಿಸಬಾರದೆಂದೆನಿಸಿ ಪಟ್ಟಿ – ಪೆನ್ನು ಹಿಡಿದು ಎಷ್ಟು ಬಾರಿ ಏನೇನೋ ತೋಚಿದನ್ನು ಗೀಚಿದ್ದಿಲ್ಲ!

ಆದರೆ ಶಾಲಾ-ಕಾಲೇಜು ವಿದ್ಯಾಭ್ಯಾಸದ ನಡುವೆ ಅಷ್ಟೇನು ಕವಿತೆ ಬರೆಯಲು ಸಮಯ ಸಿಗದ ನನಗೆ ಸಮಯ ಸಿಕ್ಕಿದ್ದು ಕೊರೊನಾ ನಿಮಿತ್ತ ಕಾಲೇಜಿಗೆ ರಜೆಕೊಟ್ಟ ನಂತರವೇ. ಹಿಂದಿನ ವರ್ಷ ಸೆಪ್ಟೆಂಬರ್ 3ನೇ ತಾರೀಖು ನಾನು ಬಿಎಸ್ಸಿ ಪ್ರಥಮ ವರ್ಷವನ್ನು  ಓದುತ್ತಿರುವ ಸಂದರ್ಭವದು,   ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯ/ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯ ವಿಷಯವಾಗಿ ನನಗೆ ಅಚಾನಕ್ಕಾಗಿ ಪ್ರಾಧ್ಯಾಪಕರಾದ ಹೊನ್ನಪ್ಪಯ್ಯ ಸರ್ ಪರಿಚಯವಾದರು. ಅವರು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ತಮ್ಮ ಕವಿತೆಯನ್ನು ಫೋಟೋ ಕ್ಲಿಕ್ಕಿಸಿ ನನ್ನ ವಾಟ್ಸಪ್ಗೆ ಕಳುಹಿಸುತ್ತಿರುತ್ತಿದ್ದರು. ಒಮ್ಮೆ ಅವರ ಸಣ್ಣಕತೆ(ಪಾತ್ರ)ಆಲೋಚನೆ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನ ನನಗೆ ಕಳುಹಿಸಿದ್ದರು. ನಾನು ಓದಿ ಚೆನ್ನಾಗಿದೆ ಸರ್ ಇದಕ್ಕೆ ಅಂತಾನೇ ಪ್ರತ್ಯೇಕ ಆ್ಯಪ್ ಇದೆಯೇ ಎಂದು ಕೇಳಿದಾಗ ಅವರು, ಕೆಲವೊಂದು ಇವೆ, ನಿನ್ನದೇನಾದರೂ ಸೃಜನಶೀಲ ಬರವಣಿಗೆಗಳಿದ್ದರೆ ತಿಳಿಸು ಆಲೋಚನೆ ಗ್ರೂಪ್ಗೆ  ಸೇರಿಸೋಣ ಎಂದು ಅವರು ಹೇಳಿದಾಗ  ಹ್ಹೂ ಎಂದು ಆ ದಿನ ಸುಮ್ಮನಾಗಿದ್ದೆ. ರಾತ್ರಿಯೆಲ್ಲಾ ಪೂರ್ತಿ, ಸರ್ ‘ಗ್ರೂಪ್ಗೆ ಸೇರಿಸೋಣ’ ಎಂದು ಹೇಳಿದ ಮಾತೇ ನನ್ನಲ್ಲಿ ಮರುಕಳಿಸಿ ಲಾಗಾ ಹಾಕುತ್ತಿತ್ತು. ಮರುದಿನ ಮುಂಜಾನೆ ಕವಿತೆ & ಪ್ರಕಟಿಸುವ ಬಗ್ಗೆ ಯಾರ ಬಳಿ ಕೇಳುವುದು ಎನ್ನುವ ಪ್ರಶ್ನೆ ತಲೆದೋರಿದಾಗ ತಟ್ಟನೆ ನೆನಪಾಗುವುದು ಹೊನ್ನಪ್ಪಯ್ಯ ಸರ್. ಅವರೋ, ತಮ್ಮ ಕಾವ್ಯ ಮತ್ತು ಬರವಣಿಗೆಯಷ್ಟೇ ಸರಳ ಹಾಗೂ ಸಹೃದಯಿಗಳು. ಎಷ್ಟು ಮುಕ್ತವಾಗಿ ಕವಿತೆ ಮತ್ತು ಪ್ರಕಟಿಸುವ ಪರಿಯ ಬಗ್ಗೆ ಮಕ್ಕಳಿಗೆ ಮಕ್ಕಳದೇ ಆದ ಒಂದು ಸರಳ ಅರ್ಥೈಸಿಕೊಳ್ಳುವ ಶೈಲಿಯಲ್ಲಿ ಇಂಚಿಂಚನ್ನು ಹೇಗೆ ವಿವರಿಸಿ ಹೇಳಿದರೆಂದರೆ, ನನಗೆ ಒಂದು ಆಪ್ತತೆಯ ಚೌಕಟ್ಟಿನಲ್ಲಿ ಸಿಲುಕಿದಂತೆ ಭಾಸವಾಯಿತು.

ಹಾಗೆಯೇ ಒಂದೆರಡು ದಿನದ ತರುವಾಯ ಆಲೋಚನೆ ಸಾಹಿತ್ಯ ಪತ್ರಿಕೆಯ ಬರಹಗಾರ ಕವಿಗಳ ಗುಂಪಿನಲ್ಲಿ ನನ್ನ ಹೆಸರು ಸೇರ್ಪಡೆ ಮಾಡಿದ್ದರು. ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಸಾಹಿತ್ಯ ಲೋಕದಲ್ಲಿ ವಿಶೇಷ ಸ್ಥಾನಮಾನ ಗಿಟ್ಟಿಸಿಕೊಂಡಿರುವ ನೂರಾರು ಬರಹಗಾರ ಕವಿಗಳ ಗುಂಪಿನಲ್ಲಿ ನಾ ಕಾಣದ ಒಂದು ಚಿಕ್ಕ ಚುಕ್ಕಿಯಂತಿದ್ದರೂ, ನನಗೊಂದು ಪುಟ್ಟ ಜಾಗ ಅಲ್ಲಿ ಸಿಕ್ಕಿತಲ್ಲ ಎನ್ನುವ ಖುಷಿಯಲ್ಲಿ ಕಲ್ಪನಾ ಲೋಕಕ್ಕೆ ಜಾರಿದ್ದಂತು ಸುಳ್ಳಲ್ಲ. ಆಲೋಚನೆ ಸಾಹಿತ್ಯ ಬಳಗಕ್ಕೆ ಸೇರಿದ ಮೇಲೆ  ಸಂಗಾತಿ ಸಾಹಿತ್ಯ ಪತ್ರಿಕೆಯ ಪರಿಚಯವೂ ಅಲ್ಲೇ ಆಗಿ ನನ್ನ ಮೊದಲ ಕವನ ‘ಕರುಣಾಮಯಿ’  ಸಂಗಾತಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕವಿತೆ ಪ್ರಕಟವಾದಾಗ, ಕವಿತೆಯನ್ನು ಎಲ್ಲರೊಟ್ಟಿಗೆ ಹಂಚಿಕೊಂಡಾಗ ಎಲ್ಲರ ಉತ್ತೇಜನ ಪೂರ್ವಕ ಮಾತು ನನ್ನಲ್ಲಿ ಹೊಸ ಭರವಸೆಯನ್ನು ನನ್ನೆಡೆಗೆ ಕೈ ಬೀಸಿ ಕರೆದಂತಿತ್ತು.

ಆ ಪದ್ಯದ ನಾಲ್ಕನೇ ಪ್ಯಾರಾ ಇಂತಿದೆ….

ಕೂಡಿಟ್ಟ ಕಾಸಿನಲಿ

ಶಾಲೆಗೆ ಪೀಜು ತುಂಬಿ

ತನ್ನ ಹರುಕು ಸೀರೆಯ ಲೆಕ್ಕಿಸದೆ

ನನಗೊಂದು ಹೊಸ ಅಂಗಿಯ ಕೊಡಿಸಿ

ದೊಡ್ಡ ಅಧಿಕಾರಿಯ ಸ್ಥಾನದಲಿ

ತಾ ಕೂಸ ನೋಡಬೇಕೆಂದು

ಆಸೆಯಿಂದ ಕಾಯುತ್ತ ಕುಳಿತವಳು

ಕರುಣಾಮಯಿ ನನ್ನಮ್ಮ.

ಈ ಸಾಲುಗಳನ್ನು ಹೇಳಿ ಹರ್ಷ ವ್ಯಕ್ತಪಡಿಸಿ ಹಾಗೆಯೇ ಕವಿತೆಯ ಬಗ್ಗೆ, ಕವಿಯ ಕಾವ್ಯದ ವಕ್ರತೆ ಯಾವ ರೀತಿ ಇರಬೇಕು ಎನ್ನುವುದರ ಕುರಿತು ತುಂಬಾ ಸುಶ್ರಾವ್ಯವಾಗಿ, ನನ್ನ ಕಾಲೇಜಿನ ಸಹಪಾಠಿ ನಾಗಶ್ರೀಯ ತಂದೆ ವಿನಾಯಕ ಹೆಗಡೆಯವರು  ಕರೆ ಮಾಡಿ ಹೇಳಿ ನನಗೆ ಪ್ರೇರಣೆ ನೀಡಿದಾಗ, ಮುಂದೆ ನಾ ಇನ್ನೂ ಚೆನ್ನಾಗಿ  ಬರೆಯಬೇಕು ಎನ್ನುವ ಆಸೆ ನನ್ನನ್ನ ತನ್ನೆಡೆಗೆ ಬರಸೆಳೆದಿತ್ತು. ಈ ಎಲ್ಲ ಘಟನೆಗಳು ಎಂದಿಗೂ ಅಚ್ಚಳಿಯದೇ ಉಳಿಯುವಂತವು ಯಾಕೆಂದರೆ ಜೀವನದಲ್ಲಿ ‘ಮೊದಲ’ ಎನ್ನುವಂತಹವೆಲ್ಲ ಎಂದಿಗೂ ರೋಮಾಂಚನವೇ!ಅದಕ್ಕೆ ಕವಿತೆಯೇನು ಹೊರತಾಗಿಲ್ಲ.

**************************

4 thoughts on “ಮೊದಲ ಕವಿತೆಯ ಅನುಭವದ ಸಾರ

  1. ಕವಿತೆ ತೊದಲು ಮೊದಲು ಆಗಿದೆ
    ಮುಂದುವರೆಸಿ ನೀವೆ ಕವಿಯತ್ತಿಯಾಗಿ ಮೊದಲು ಆಗಬಹುದು

Leave a Reply

Back To Top