ಮೊದಲ ಕವಿತೆಯ ರೋಮಾಂಚನ
ಎಂ.ಜಿ.ತಿಲೋತ್ತಮೆ
ಕವಿತೆಯೆಂದರೆ ಕೇವಲ ಹಾಳೆ, ಲೇಖನಿ, ಪದ,ಸಾಲು
ವಸ್ತುವಿನ ಆಯ್ಕೆಯಿಂದ ಕೂಡಿರಲು ಸಾಧ್ಯವಿಲ್ಲ. ನಮ್ಮ ಅನುಭವಕ್ಕೆ ಬರುವ ಎಲ್ಲಾ ಭಾವನೆಯನ್ನು ಕವಿತೆಯಲ್ಲಿ ಕಾಣಬಹುದು. ಮಾತಿನಲ್ಲಿಹೇಳಲಾಗದ ಪ್ರೇಮ,ವಿರಹ,ದುಗುಡ,ಹತಾಶೆ, ಹೀಗೆ ಎಲ್ಲವೂ ಕವಿತೆಯಲ್ಲದೇ ಬೇರೆ ಯಾವುದೇ ಮಾರ್ಗ ದಿಂದ ಹೇಳಿಕೊಳ್ಳುವುದು ಸುಲಭವಲ್ಲ. ಕವಿತೆಯ ಹುಟ್ಟು , ಹರಿವು ಅದು ನಾವು ಅಂದುಕೊಂಡ ಶುಭ ಘಳಿಗೆ ಅಥವಾ ಪುರೊಸೊತ್ತಿನ ಸಮಯದಲ್ಲಿ ಮನದ ಭಾವನೆಯ ಕಿಂಡಿಯಿಂದ ನುಗ್ಗಿ ಬರುತ್ತದೆ ಎಂದು ಹೇಳಲಾಗದು. ಅದು ನೀಲಿ ಆಕಾಶದಲ್ಲಿ ಹಾರುವ ಹಕ್ಕಿಯ ಹಾಗೆ ಸ್ವತಂತ್ರತೆ ಬಯಸುತ್ತದೆ. ಕವಿತೆ ಬರೆಯಲು ಏಕಾಂತ ಬೇಕು ಎನ್ನುತ್ತಾರೆ ಆದರೆ ನನಗೆ ನನ್ನ ಒಂಟಿತನದ ಏಕಾಂತತೆಯೆ ನನ್ನಲ್ಲಿರುವ ಕಾವ್ಯ ಹೃದಯ ಹುಡುಕಲು ಸಾಧ್ಯವಾಯಿತು. ನನಗೆ ಸಾಹಿತ್ಯ ಬಗ್ಗೆ ಒಲವು ಸಾಧಾರಣ ಹೈಸ್ಕೂಲು ಮುಗಿಸುವ ಮೊದಲೇ ಮೂಡಿದ್ದರೂ ನನ್ನ ಮೊದಲ ಕವಿತೆ ಹೃದಯದ ತೋಟದಲ್ಲಿ ಅರಳಿ ಸುಗಂಧ ಹಬ್ಬಿಸಿದ್ದು ದ್ವಿತೀಯ ಪಿಯುಸಿ ಮುಗಿಸಿದ ನಂತರವೇ. ನನ್ನ ಬರೆಹಗಳನ್ನು ಮೊದಲು ತೋರಿಸುತ್ತಿದ್ದು ನನ್ನ ಅಕ್ಕನ ಬಳಿ. ಅವಳು ಕನ್ನಡಲ್ಲಿ ಪದವಿ,ಎಂ.ಎ ಮುಗಿಸಿದ್ದು ಮತ್ತು ಕವಿತೆ ಕುರಿತು ಆಸಕ್ತಿಯಿದ್ದ ಕಾರಣವೂ ಇರಬಹುದು ಪ್ರೀತಿಯಿಂದಲೇ ಕೇಳುತ್ತಿದ್ದಳು. ಅವಳ ಸ್ಪೂರ್ತಿದಾಯಕ ನುಡಿಗಳೇ ಬರವಣಿಗಗೆ ಶಕ್ತಿಯಾಯಿತು. ಯಾವ ವಿಷಯ ಕುರಿತು ಕವಿತೆ ಬರೆಯಬೇಕು ಎನ್ನುವಾಗಲೆಲ್ಲ ನನಗೆ ಕೂಡಲೇ ಹೊಳೆಯುವುದು ಅಮ್ಮನ ಕುರಿತು. ಹಾಗೆ ನಾನು ಬರೆದ ಮೊದಲ ಕವಿತೆಯು ಅಮ್ಮನ ಬಗ್ಗೆ.
ಅಮ್ಮ
ಅಮ್ಮ ಎಂದರೆ ..
ನೋವ ಮರೆಸುವ ಮಡಿಲು
ಮಮತೆಯ ಕಡಲು
ಅವಳ ನಿತ್ಯ ಧೈರ್ಯದ ಕಂಗಳಲ್ಲಿ
ಅಳುಕಿನ ಬಡಿತ
ಯಾರಿಗೂ ಕಾಣಲ್ಲ
ಮನೆಗೆ ಸೋರದ ಹೊದಿಕೆಯಾಗಿ
ಎಲ್ಲರ ಕನಸಿಗೆ ಬಣ್ಣ ಬಳಿಯವಳು
ಬಡತನದ ಗಂಜಿಗೆ
ಹೋರಾಟ ಮಾಡವಳು
ಸವೆದ ಹಸ್ತದ ನೋವು
ತುಂಬಿ ತುಳುಕುವ ಸಿರಿತನದ ಕೋಣೆಗೆ
ಆ ಬೆವರು ಕಾಣದು
ಅವಳು
ಬಾಡದ ಹೂವಂತೆ ನವಿರು
ಮುಳಗದ ರವಿಯಂತೆ ಬೆರಗು
ಸಮಯದ ಜೊತೆ ಕುಗ್ಗಿ
ಮತ್ತೆ ತನ್ನ ಹಾದಿಯಲ್ಲಿ ಬೆಳಕಿನ
ಕಿಂಡಿಯಿಂದ ಹಾರುವಾಗ
ಉತ್ಸಾಹ ನಗೆ ಬೀರಿದವಳು
ಕೋಟಿ ದೇವರಿಗೆ ಸೆರಗ ತುದಿಯಲ್ಲಿ
ಹರಿಕೆ ಕಟ್ಟಿ
ನನ್ನ ಹಡೆದವಳು..
ಮುಗಿಯದ ಸಾಲುಗಳಲ್ಲಿ
ಅಮ್ಮ ಮತ್ತೆ ಮತ್ತೆ ನಿನಗೆ ಮಗುವಾಗುವೆ..
ಈ ಕವಿತೆ ಶಶಾಂಕ ಎನ್ನುವ ಮ್ಯಾಗಜಿನಲ್ಲೂ ಪ್ರಕಟವಾಯಿತು. ಪಾಸಾಗುತ್ತೀನೋ ಇಲ್ಲವೋ ಎಂದುಕೊಂಡ ವಿಧ್ಯಾರ್ಥಿಗೆ ರಾಂಕ್ ಬಂದಷ್ಟು ಖುಷಿಯಾಯಿತು. ಅದರ ಸಂಪಾದಕರಾದ ಚಿದಾನಂದ ಕಡಾಲಸ್ಕರ ನಿನಗೆ ಬರೆಯುವ ಸಾಮರ್ಥ್ಯವಿದೆ ಹೀಗೆ ಬರೆಯುತ್ತಾ ಇರೆಂದು ತುಂಬಾ ಪ್ರೋತ್ಸಾಹ ನೀಡಿದ್ದರು. ನಂತರ ಪದವಿ ಓದಿನ ಜೊತೆಗೆ ಅದೇ ಮ್ಯಾಗಜಿನಗಳಿಗೆ ಬರೆಯುವುದು ಹವ್ಯಾಸವಾಯಿತು. ಆಗೆಲ್ಲಾ ಈಗ ಇರುವ ಹಾಗೆ ಮೊಬೈಲ್ ಅಥವಾ ಲ್ಯಾಪ್ಟಾಪ ಉಪಕರಣ ಬಳಿಸಿ ಬರೆದು ಕಳುಹಿಸುವುದು ಅಸಾಧ್ಯವಾದ ಮಾತು . ಹಾಳೆಗಳಲ್ಲೇ ಬರೆದು ಪೊಸ್ಟಗಳ ಮೂಲಕ ಕಳುಹಿಸಬೇಕಿತ್ತು. ಕತೆ,ಕವನ,ಅಂಕಣ,ಕಾದಂಬರಿ ಹೀಗೆ ಸಂಚಿಕೆ ರೂಪದಲ್ಲಿ ಬರೆಯುತ್ತಾ ಹೋದೆ. ಎಷ್ಟೊ ಸಲಹೆ,ತಿದ್ದುಪಡಿಗಳು ಇನ್ನಷ್ಟು ಬರೆಯಲು ಸ್ಪೂರ್ತಿ ನೀಡಿತು. ಬರೆದ ಕವಿತೆಯೆಲ್ಲ ಒಂದೊಂದು ಸಲ ಯಾವುದೋ ಪಟ್ಟಿಯ ಕೊನೆ ಹಾಳೆಯಲ್ಲಿ ಉಳಿದುಕೊಳ್ಳುತ್ತಿತ್ತು. ಇದರಿಂದ ಹೇಗಾದರೂ ಕವನ ಸಂಕಲನ ಹೊರ ತರಬೇಕೆಂಬ ಹಟ ಇನ್ನಷ್ಟು ಹೆಚ್ಚಾಯಿತು. ಮನೆಯಲ್ಲಿ ಸಾಕಷ್ಟು ವಿರೋಧ ಕಂಡು ಬಂದರೂ ಹೆದರದೆ ದ್ವಿತೀಯ ಬಿ.ಎ.ವಿರುವಾಗ ಸಂಕಲನ ಬಿಡುಗಡೆ ಮಾಡಿದೆ. ನನ್ನ ಕವಿತೆಗಳನ್ನು ತಿದ್ದಿ ತೀಡಿ ಹದವಾಗಿ ಮೂಡಿಬರಲು ನನ್ನ ಗುರುಗಳಾದ ಶ್ರೀಧರ ಶೇಟ್ ಶಿರಾಲಿಯವರು ಕಾರಣೀಕರ್ತರು. ಇವೆಲ್ಲ ಮೊದಲ ಕವಿತೆಗೆ ಸಿಕ್ಕ ಪುಟ್ಟ ಪುಟ್ಟ ಫಲಗಳು. ಎಷ್ಟೋ ಭಾರಿ ನನ್ನ ಸ್ನೇಹಿತರು ಕೇಳಿದ್ದಾರೆ ಬಿ.ಎಯಲ್ಲೂ ಇಂಗ್ಲೀಷನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದೀಯ ಹಾಗೆ ಬಿ.ಇಡ್ ನಲ್ಲೂ ಇಂಗ್ಲೀಷನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದೀಯಾ ಈ ಕವಿತೆ ಬರೆಯುವ ಆಸಕ್ತಿ ಹೇಗೆ ಅನ್ನುತ್ತಿದ್ದರು. ಆಗ ನಾನು ಹೇಳಿದ್ದಿಷ್ಟೇ “ಇಂಗ್ಲೀಷ ಜೀವನ ಸಾಗಿಲು ಒಂದು ಭಾಗ .ಈಡೀ ಬದುಕು ತುಂಬಾ ಕನ್ನಡ ತುಂಬಿರುತ್ತೆ. ” ಅದಕ್ಕೆ ಹೇಳುವುದು ಮಾರ್ಡನ್ ಬಟ್ಟೆ ತೊಟ್ಟ ತಕ್ಷಣ ಅವರು ಕೆಟ್ಟು ಹೋಗಿದ್ದಾರೆ ಅಂತ ಹೇಳಿಲಕ್ಕೆ ಆಗಲ್ಲ. ಹಾಗಂತ ಸಂಪ್ರದಾಯ ಬಟ್ಟೆ ತೊಟ್ಟಿದ್ದರೆ ಅಂದ ಮಾತ್ರಕ್ಕೆ ಏನು ತಿಳಿಯದ ಮುಗ್ಧರು ಅಂತ ಪ್ರತಿಪಾದಿಸೋಕ್ಕೆ ಆಗೋದಿಲ್ಲ. ನಾವು ಸಂಪೂರ್ಣವಾಗಿ ತಿಳಿಯದೆ ಯಾವುದರ ಬಗ್ಗೆಯೂ ಜಡ್ಜ ಮಾಡಲಿಕ್ಕೆ ಹೋಗಬಾರದು. ಈಗೀಗ ಒಂದು ಕವಿತೆ ಬರಿಯಬೇಕಾದರೆ ಬಹಳ ಪ್ರಬುದ್ಧವಾಗಿ ಚಿಂತನೆ ಮಾಡಬೇಕು. ವಸ್ತು ಆಯ್ಕೆ ,ಮೆಚ್ಚುಗೆಗೆ ಪಾತ್ರ ವಾಗುವಂತೆ ಬರೀಬೇಕು ಎನ್ನುವ ಆಸೆ ಎಲ್ಲರಲ್ಲಿಯೂ ಇರುವುದು ಸಾಮಾನ್ಯ. ಉದ್ದೇಶ ಮತ್ತು ಚಿಂತನೆ ಇಲ್ಲದಿದ್ದರೆ ಕಾವ್ಯದ ದಿಕ್ಕು ಬದಲಾಗಿ ಬಿಡುತ್ತದೆ. ಮೊದಲ ಕವಿತೆಯೆಂದರೆ ಈ ಮೇಲಿನ ಗುಂಪಿಗೆ ಸೇರಿರುವುದಿಲ್ಲ. ಬೆಳಿಗ್ಗೆಯಿಂದ ಬಿಸಿಲು ಧಗ ಧಗಿಸುತ್ತಿದ್ದರೂ ಬಾನಿಗೆ ಭುವಿ ಮೇಲೆ ಒಮ್ಮಲೆ ಪ್ರೀತಿ ಉಕ್ಕಿ ಬಂದರೆ ಸುರಿಯುವ ಹನಿಯಂತೆ ಗೊತ್ತಗದಂತೆ ಇಳಿದು ಬಿಡುತ್ತದೆ. ಅದಕ್ಕೆ ಹೊತ್ತು, ಸ್ಥಳ, ವಿಷಯ ಬೇಡ. ತೋಚಿದೆಲ್ಲಾ ಗೀಚುತ್ತಾ ಹೋಗುತ್ತೇವೆ. ನಮ್ಮ ಸಮಾನ ವಯಸ್ಕರೇ ಪ್ರಶಂಸಿದರೂ ಪದ್ಮಶ್ರೀ, ಜ್ಞಾನ ಪೀಠ ಪ್ರಶಸ್ತಿ ಸಿಕ್ಕಷ್ಟೇ ಖುಷಿಯಾಗುತ್ತೆ. ಈ ರೀತಿ ನನಗೂ ಆಗಿದೆ. ಎಷ್ಟೋ ಭಾರಿ ಕವಿತೆ ಬರೆದು ಯಾರಾದರೂ ಸಿಕ್ಕರೆ ಅವರಿಗೆ ಹೇಳಿ ಹೇಗಿದೆ ಎಂದು ಕೇಳುವ ಕೌತುಕದಲ್ಲಿ ಇರುತ್ತಿದ್ದೆ. ಈಗ ಓಡಾಡುವ ಹಾಗೆ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್, ಗಳು ಬಳಸುವುದು ಆಗ ಬಹಳ ಅಪರೂಪವೇ. ಹಾಗೇ ಬಳಸಲು ಅಷ್ಟೇ ದೊಡ್ಡ ಮೊಬೈಲ್ ನನ್ನ ಬಳಿ ಇಲ್ಲವಾಗಿತ್ತು. ಹಾಗಾಗಿ ಕವಿತೆ ಕೇಳುಗರನ್ನು ಮುಖಾಮುಖಿಯಾಗಿ ದಾಟಿಸಬೇಕಾಗಿತ್ತು. ನಾನು ಕವಿತೆಗಳನ್ನು ನನದೇ ಡೈರಿಯಲ್ಲೇ ಬರೆದಿಡುತ್ತಿದ್ದೆ. ಚಿಕ್ಕ ಚಿಕ್ಕ ನುಡಿಮುತ್ತುಗಳು, ಹನಿಗಳು ಗೀಚುತ್ತಾ ನಂತರ ದೊಡ್ಡ ಕವಿತೆ ಬರೆಯಲು ಕಲಿತೆ. ಬರೆಯುವುದಕ್ಕಿಂತ ಹೆಚ್ಚು ಓದಬೇಕು. ಓದಿದ್ದಷ್ಟು ಮನಸ್ಸು, ಬುದ್ಧಿ ಹರಿತವಾಗುತ್ತದೆ ಹೀಗೆ ತಿಳಿದವರ ಮಾತುಗಳಿಂದಲೇ ಬರವಣಿಗೆ ಶೈಲಿಗಳು ಬದಲಾಗುತ್ತಾ ಬಂದಿತ್ತು. ಕವಿತೆಯೆಂದರೇನು ಹುಡುಕುತ್ತಾ ಹೊರಟರೆ ಸಿಗುವ ಉತ್ತರ ಪ್ರೀತಿ,ಮಮತೆಯ ಜೋಗುಳ,ನೇರ ಧ್ವನಿ,ಪ್ರತಿಧ್ವನಿ, ಭಾವನೆಗಳ ರೂಪ ಇತ್ಯಾದಿ…. ಅವರವರ ಪಾಲಿಗೆ ಅದು ಬಿಟ್ಟಿದ್ದು. ಕವಿತೆ ಸಾಗರದಷ್ಟು ಪ್ರೀತಿಯ ಹಂಚುತ್ತಿರಬಹುದು ಇಲ್ಲವೇ ಕಂಬನಿ,ಅಸಾಯಕತೆ, ಅಮಾನವೀಯಕ್ಕೆ ಪ್ರತಿಧ್ವನಿಸುವ ಬಲವು ಬರಬಹುದು. ಬೇಂದ್ರೆಯವರು ಹೇಳುವಂತೆ ” ಎಲ್ಲಿಯವರಿಗೂ ಕವಿತೆ ಕೇಳಬೇಕೆಂಬ,ಕುತೂಹಲ,ಜಿಜ್ಞಾಸೆ, ಆ ಸಮಾಜದಲ್ಲಿ ಇರುತ್ತದಯೋ ಅಲ್ಲಿಯವರೆಗೆ ಕವಿಯ ಜೀವನ ,ಕಾವ್ಯ ಸಾರ್ಥಕವಾಗುತ್ತದೆ.” ಬರಹಗಳನ್ನು ವ್ಯಕ್ತಿಯ ವ್ಯಯಕ್ತಿಕ ಜೀವನದಿಂದ ಅಳೆಯಬಾರದು. ಕವಿತೆಗೆ ಸಮಾಜವನ್ನೇ ಬದಲಾಯಿಸುವ ಶಕ್ತಿ ಇದೆ. ಯಾಕೆಂದರೆ ಕೆಲವೊಮ್ಮೆ ವ್ಯಕ್ತಿ ಹೇಳಲು ಹೊರಟುತ್ತಿರುವ ವಿಷಯ ಉತ್ತಮ ವಿಚಾರ ವಾದರೂ ಬದುಕನ್ನು ಅವನ ನಿಲುವಿನ ವಿರೋಧ ಸಂಧಾನಕ್ಕೆ ಒಪ್ಪಿಸುವುದು ಸಮಂಜಸಹವಲ್ಲವೆನ್ನುವುದು ನನ್ನ ಅರಿವು. ಮೊದಲ ಕವಿತೆ ಮಧುರ ಅನುಭವ ಅವರವರ ಪಾಲಿಗೆ ಅದು ಅಮೃತ ಘಳಿಗೆವೆಂದೆ ಹೇಳಬಹುದು.
ಚೆನ್ನಾಗಿದೆ ಮೊದಲ ಕವಿತಾನುಭವ
ಧನ್ಯವಾದ ಗೆಳತಿ
Tum bane chennagide, nimma kavithe Matty neevu tumba ettarakke
Beledu balemaba thotadalli santoshavemba hovagi aralali .I’d u nanna bayake.
ಬಹಳ ಚೆನ್ನಾಗಿದೆ. ಕಡೆಯ ಸಾಲುಗಳಂತೂ ಅರ್ಥಪೂರ್ಣವಾಗಿವೆ. ಅಮ್ಮನ ಕುರಿತ ನಿಮ್ಮ ಮೊದಲ ಕವನವೂ ಸಹ ಪ್ರೌಢವಾಗಿದೆ.
ಧನ್ಯವಾದ ಮೇಡಂ
ಅಮ್ಮನ ಕುರಿತಾದ ಮೊದಲ ಪ್ರಯತ್ನದ ಕವಿತೆ ಸುಂದರ, ಮಾರ್ಮಿಕವಾಗಿದೆ… ಅಭಿನಂದನೆಗಳು..
ಧನ್ಯವಾದಗಳು ನಿಮಗೆ
ಅನುಭವಿಸಿ ಬರೆದದ್ದು, ಚನ್ನಾಗಿದೆ. ಶುಭಾಶಯಗಳು
ಧನ್ಯವಾದಗಳು ಸರ್