ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಲ್ಪ ಹೊತ್ತು ಇಬ್ಬರೂ ಅಮ್ಮನ ಜೊತೆ ಮಾತನಾಡುತ್ತಾ ಕಾಲ ಕಳೆದರು. ಡಾಕ್ಟರ್ ರೌಂಡ್ಸ್ ಗೆ ಬರುವ ಹೊತ್ತಾಯ್ತು ಎಂದು ವಾರ್ಡಿನ ಆಯಾ ಕೂಗಿ ಹೇಳಿದಾಗ ಅಕ್ಕ-ತಂಗಿ ಇಬ್ಬರೂ ಹೊರಗೆ ನಡೆದರು. ಆಸ್ಪತ್ರೆಯ ಹೊರಾಂಗಣದಲ್ಲಿ ಮೆಟ್ಟಿಲ ಮೇಲೆ ಕುಳಿತು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಕ್ಕ ಇಷ್ಟೊಂದು ಮೌನವಾಗಿರುವುದನ್ನು ನೋಡಿ ಅಮ್ಮನ ಆರೋಗ್ಯದಲ್ಲಿ ಏನೋ ದೊಡ್ಡ ಸಮಸ್ಯೆ ಇರಬಹುದು ಎಂದು ತಂಗಿ ಊಹಿಸಿದಳು. ಆದರೂ ಅಕ್ಕ ಹೇಳುವವರೆಗೂ ಕಾಯ್ದಳು. ಸ್ವಲ್ಪ ಹೊತ್ತಿನ ನಂತರ ಅಕ್ಕನೇ ಮೌನ ಮರಿದಳು…. “ನಿನಗೆ ಗೊತ್ತು ತಾನೆ ಅಮ್ಮನಿಗೆ ಡಯಾಬಿಟಿಸ್ ಇರುವುದು…. ಅದಕ್ಕಾಗಿ ಅಮ್ಮ ನಿರಂತರವಾಗಿ ಇನ್ಸುಲಿನ್ ತೆಗೆದುಕೊಳ್ಳುತ್ತಿರುವುದು….. ಹಾಗೂ ಮೂರು ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಬರುವುದು….ಆದರೆ….. ಅದರ ಜೊತೆಗೆ ಅದ್ಯಾವಾಗ ಬಿ.ಪಿ ಬಂದು ಅಮ್ಮನ ಒಡಲನ್ನು ಸೇರಿತು ಎಂಬುದು ಅಮ್ಮನಿಗೂ ನಮಗೂ ತಿಳಿಯಲಿಲ್ಲ”…. ಎಂದು ಅಲ್ಲಿಗೆ ನಿಲ್ಲಿಸಿ, ತಂಗಿಯ ಮುಖವನ್ನು ಒಮ್ಮೆ ದಿಟ್ಟಿಸಿದಳು. ಅಚ್ಚರಿಯಿಂದ ತಂಗಿ ಅಕ್ಕನ ಮುಖವನ್ನು ನೋಡಿದಳು. ಆಗ ಅಕ್ಕ ‘ಹೌದು’ ಎನ್ನುವಂತೆ ತಲೆ ಆಡಿಸಿದಳು…. “ಮಧುಮೇಹ ಮತ್ತು ರಕ್ತದೊತ್ತಡ ಎರಡೂ ಅಣ್ಣತಮ್ಮಂದಿರು ಇದ್ದಂತೆ ಎಂದು ವೈದ್ಯರು ಹೇಳಿದರು….. ಒಂದು ಬಂದ ನಂತರ ನಿಧಾನವಾಗಿ ಮತ್ತೊಂದು ಜೊತೆಗೂಡುತ್ತದೆ ಎಂದು ಕೂಡ ಹೇಳಿದರು…. ಈಗ ನಮ್ಮ ತಾಯಿಗೆ ಇರುವ ಆರೋಗ್ಯ ಸಮಸ್ಯೆ ಗಂಭೀರವಾದದ್ದು….. 

ಮಧುಮೇಹ ಹಾಗೂ ರಕ್ತದೊತ್ತಡದಿಂದಾಗಿ ನಮ್ಮ ತಾಯಿಯ ಶರೀರದ ಒಳಗಿರುವ ಅಂಗಾಂಗಗಳು, ಎಂದರೆ ಹೃದಯ, ಯಕೃತ್ತು ಮೂತ್ರಪಿಂಡಗಳು ಎಲ್ಲವೂ ಊದಿಕೊಂಡಿವೆ…. ಅವು ಸರಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ… ಹಾಗಾಗಿ ರಕ್ತ ಶುದ್ಧಿ ಆಗುತ್ತಿಲ್ಲ…. ಎಂದು ವೈದ್ಯರು ತಿಳಿಸಿದ್ದಾರೆ…. ಎಂದಳು. 

ಅಕ್ಕ ಹೇಳಿದ ಸಂಗತಿಯನ್ನು ಕೇಳುತ್ತಾ ತಂಗಿಯ ಮುಖ ಬಾಡಿತು…. ಅಕ್ಕಾ ಇದಕ್ಕೆ ಔಷಧೋಪಚಾರಗಳು ಇಲ್ಲವೇ?….ಎಂದು ತಂಗಿ ಕೇಳಿದಾಗ…. ಇಲ್ಲಾ… ಕಣೇ…. ಎಂದವಳ ಧ್ವನಿ ಭಾರವಾಗಿತ್ತು…… ಯಾಕಕ್ಕಾ?…..ಅದು ಹೇಗೆ? ….ಎಂದು ಕೇಳಿದಾಗ…. ಶರೀರದ ಒಳ ಅಂಗಗಳು ವೈಫಲ್ಯವಾದರೆ ಯಾವ ಔಷಧಿಗಳೂ ಪರಿಣಾಮ ಬೀರುವುದಿಲ್ಲ… ತಾತ್ಕಾಲಿಕ ಉಪಶಮನಗಳು ದೊರೆಯುತ್ತವೆ ಅಷ್ಟೇ…. ಆದರೆ ಪೂರ್ಣವಾಗಿ ಗುಣಮುಖವಾಗುವುದಿಲ್ಲ…. ಹಾಗಾಗಿ ವೈದ್ಯರು ಹೇಳಿದರು,”…. ಎಂದು ತನ್ನ ಮಾತನ್ನು ಮುಂದುವರೆಸದೆ ಅರ್ಧಕ್ಕೇ ನಿಲ್ಲಿಸಿ, ತಂಗಿಯ ಮುಖವನ್ನೇ ತದೇಕ ಚಿತ್ತದಿಂದ ನೋಡಿದಳು.‌ ಮುಂದೆ ಮಾತು ಬಾರದೇ ಗಂಟಲು ಕಟ್ಟಿತು. ಕಣ್ಣುಗಳಲ್ಲಿ ಧುತ್ತನೇ ನೀರು ತುಂಬಿಕೊಂಡವು. ತಂಗಿಗೆ ಹೇಗೆ ಹೇಳಲಿ ಇರುವ ಸತ್ಯವನ್ನು? ಅವಳು ಖಂಡಿತಾ ಸಹಿಸಲಾರಳು. ದೇವರೇ ನನಗೊಂದಿಷ್ಟು ಶಕ್ತಿ ಕೊಡು. ನನ್ನಲ್ಲಿರುವ ಶಕ್ತಿ ಉಡುಗಿ ಹೋಗುತ್ತಿದೆ. ಇಂತಹಾ ಘೋರ ಸತ್ಯವನ್ನು ನಾನವಳಿಗೆ ಹೇಗೆ ಹೇಳಲಿ? ಎಂದು ಚಿಂತಾಕ್ರಾಂತಳಾಗಿ ಒಂದು ಕ್ಷಣ ಕಣ್ಣು ಮುಚ್ಚಿದಳು. ಕಣ್ಣುಗಳಲ್ಲಿ ತುಂಬಿದ್ದ ನೀರು ಕೆನ್ನೆಯ ಮೇಲೆ ಇಳಿಯಿತು. 

ತಂಗಿಯು ಕುಳಿತಲ್ಲಿಂದ ನಿಧಾನವಾಗಿ ಎದ್ದು ಬಂದು ಅಕ್ಕನ ಕೆನ್ನೆಯ ಮೇಲೆ ಹರಿದ ಕಣ್ಣೀರನ್ನು ಒರಸಿ, ಅಕ್ಕನ ಮುಖವನ್ನು ಬೊಗಸೆಯಲ್ಲಿ ಹಿಡಿದು…”ಅಕ್ಕಾ ….ಏನಾಯ್ತು ಹೇಳು…. ಕಷ್ಟ ಸುಖ, ನೋವು ನಲಿವು, ಏನೇ ಇರಲಿ ನಾವು ಪರಸ್ಪರ ಹೇಳಿಕೊಂಡು ಮನಸ್ಸನ್ನು ಹಗುರಾಗಿಸಿಕೊಂಡಿದ್ದೇವೆ….. ಒಬ್ಬರಿಗೊಬ್ಬರು ಸದಾ ಜೊತೆಯಲ್ಲಿ ಇದ್ದೇವೆ…. ನೀನು ಇರುವ ಸ್ಥಿತಿಯನ್ನು ಕಂಡು ಪರಿಸ್ಥಿತಿಯ ಗಂಭೀರತೆ ನನಗೂ ಅರ್ಥವಾಗುತ್ತಿದೆ…. ನೀನು ಹೀಗೆ ಮಾತನಾಡದೆ ದುಃಖಿಸುತ್ತಿದ್ದರೆ ನನ್ನ ಮನ ಇನ್ನೂ ವ್ಯಾಕುಲಗೊಳ್ಳುತ್ತದೆ…. ಪರಿಸ್ಥಿತಿ ಏನೇ ಇರಲಿ ಅದನ್ನು ನಾವು ಎದುರಿಸಲೇಬೇಕು…. ದಯವಿಟ್ಟು ಏನಾಯ್ತು ಎಂದು ಹೇಳು ಅಕ್ಕಾ”…. ಎಂದು ತಂಗಿ ಹೇಳಿದಾಗ ಅವಳ ದುಃಖವು ಇನ್ನೂ ಹೆಚ್ಚಾಯಿತು. ತಂಗಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಪಕ್ಕ ಕುಳಿತುಕೊಳ್ಳುವಂತೆ ಸನ್ನೆ ಮಾಡಿ…. “ನೀನು ಈಗ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ…. ವೈದ್ಯರು ಹೇಳಿದಾಗ ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನುಭವವಾಯಿತು… ಈಗ ನಿನಗೆ ಇಂತಹ ಸಂಕಟದ ವಿಷಯವನ್ನು ಹೇಗೆ ಹೇಳಲಿ ಎಂಬುದೇ ನನ್ನ ಯೋಚನೆಯಾಗಿದೆ…. ಆದರೂ ಹೇಳದೇ ಬೇರೆ ದಾರಿ ಇಲ್ಲ”…. ಎಂದಾಗ ತಂಗಿ…._ಅದೇನೇ ಇರಲಿ ಹೇಳು” …ಎಂದಳು….. _ವೈದ್ಯರು ಹೇಳಿದರು…. ನಮ್ಮ ತಾಯಿ ಇನ್ನು ಕೇವಲ ಆರು ತಿಂಗಳಷ್ಟೇ…. ನಮ್ಮೊಂದಿಗೆ ಇರುತ್ತಾರೆ”… ಎಂದಳು.‌ ಅಕ್ಕ ಹೇಳಿದ ಮಾತು ತಂಗಿಗೆ ಸರಿಯಾಗಿ ಅರ್ಥವಾಗಲಿಲ್ಲ…. _ಬಿಡಿಸಿ ಹೇಳಕ್ಕ…. ನನಗೆ ಏನೂ ಅರ್ಥವಾಗುತ್ತಿಲ್ಲ….”ಎಂದಳು.

….”ಅಂದರೆ…. ನಮ್ಮ ತಾಯಿ ಜೀವಂತವಾಗಿರುವುದು ಇನ್ನು ಕೇವಲ ಆರು ತಿಂಗಳು ಮಾತ್ರ….. ಈ ಮಾತನ್ನು ಕೇಳಿದ ತಂಗಿ ಗರಬಡಿದಂತೆ ಅಲುಗಾಡದೆ ಹಾಗೆ ಕುಳಿತುಬಿಟ್ಟಳು. ತನ್ನ ಕಿವಿಗಳನ್ನು ತಾನೆ ನಂಬದಾದಳು. ತಾನು ಕೇಳುತ್ತಿರುವುದು ಏನು? ಅಕ್ಕ ಇದೇನು ಹೇಳುತ್ತಿದ್ದಾಳೆ? ಇದು ನಿಜವಲ್ಲ ಎಂದುಕೊಳ್ಳುತ್ತಾ, ಅಕ್ಕನ ಎರಡೂ ಭುಜಗಳನ್ನು ಹಿಡಿದು ಬಲವಾಗಿ ಅಲುಗಾಡಿಸುತ್ತಾ… “ನೀನು ಏನು ಹೇಳುತ್ತಿರುವೆ? ಸುಮ್ಮನೆ ಏನೇನೋ ಹೇಳಬೇಡ….. ಅಮ್ಮನಿಗೆ ಏನೂ ಆಗಿಲ್ಲ…. ಈಗ ನೋಡು ಸ್ವಲ್ಪ ಹೊತ್ತಿಗೆ ಮುಂಚೆ ನಮ್ಮ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದಳು…. ಏನೋ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಅಷ್ಟೇ…. ವೈದ್ಯರು ಹಾಗೆ ಹೇಳಿರಲಿಕ್ಕಿಲ್ಲ…. ಬಹುಶಃ ನೀನು ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಅನಿಸುತ್ತದೆ…. ಇಷ್ಟು ಬೇಗ ನಮ್ಮನ್ನಗಲಿ ಅಮ್ಮ ಎಲ್ಲಿಗೂ ಹೋಗುವುದಿಲ್ಲ….. ನಿನ್ನ ವಿದ್ಯಾಭ್ಯಾಸ ಮುಗಿದು ನೀನು ಕೆಲಸಕ್ಕೆ ಸೇರಿಕೊಳ್ಳುವುದನ್ನು …. ನಾವೆಲ್ಲರೂ ಸಂತೋಷದಿಂದ ಕಳೆಯುವ ಕಾಲವನ್ನು ಅಮ್ಮ ನೋಡಬೇಕಿದೆ….. ತಂಗಿ ನವೋದಯ ವಿದ್ಯಾಲಯದಿಂದ ಈ ವರ್ಷ 10ನೇ ತರಗತಿ ಮುಗಿಸಿ, ಅವಳು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸುವುದನ್ನು ಅಮ್ಮ ನೋಡಬೇಕಿದೆ…. ದೇವರು ಅಷ್ಟು ನಿಷ್ಕರುಣಿಯಲ್ಲ…. ವೈದ್ಯರನ್ನು ಭೇಟಿಯಾಗಿ ಮತ್ತೊಮ್ಮೆ ಕೇಳು….. ಅಮ್ಮನ ಆರೋಗ್ಯ ಸುಧಾರಿಸಲು ಏನಾದರೂ ಔಷಧೋಪಚಾರ ಇರಬಹುದೇ?….ಸ್ವಲ್ಪಕಾಲವಾದರೂ ಅಮ್ಮ ನಮ್ಮೊಟ್ಟಿಗೆ ಬದುಕಿರಲು ಅವಕಾಶವಿದೆಯೇ ಎಂದು…. ಅಕ್ಕಾ ದಯವಿಟ್ಟು ವೈದ್ಯರನ್ನು ಮತ್ತೊಮ್ಮೆ ಭೇಟಿ ಮಾಡಿ ಕೇಳು ಎಂದು ಬೆಕ್ಕಿ ಬಿಕ್ಕಿ ಅಳುತ್ತಾ ದಂಬಾಲು ಬಿದ್ದಳು.


About The Author

Leave a Reply

You cannot copy content of this page

Scroll to Top