ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂತು ಎಂದು ಅರಿತ ಹುಡುಗಿ ನಿಧಾನವಾಗಿ ಬೆಂಚಿನ ಮೇಲಿಂದ ಎದ್ದು ತಾಯಿಯನ್ನು ಅಡ್ಮಿಟ್ ಮಾಡಿದ್ದ ವಾರ್ಡಿನ ಕಡೆಗೆ ನಡೆದಳು. ಅವಳು ಒಳಗೆ ಹೋಗಿ ನೋಡಿದಾಗ ಸುಮತಿ ಹಾಸಿಗೆ ಮೇಲೆ ತಲೆ ದಿಂಬಿಗೆ ಒರಗಿ ಕಣ್ಣು ಮುಚ್ಚಿ ಮಲಗಿದ್ದಳು. ತಾಯಿಯ ಬಳಿಗೆ ಬಂದ ಮಗಳು…” ಅಮ್ಮಾ….”ಎಂದು ಮೆಲ್ಲನೆ ಕರೆದಾಗ ಏನನ್ನೋ ಆಲೋಚಿಸುತ್ತಾ ಮಲಗಿದ್ದ ಸುಮತಿ ಕಣ್ಣು ತೆರೆದು ಮಗಳನ್ನು ನೋಡಿದಳು. ಮಗಳ ಮುಖ ಬಾಡಿದ ಹಾಗೆ ಕಂಡಿತು….”ಏನಾಯ್ತು ಮಗಳೇ….. ವೈದ್ಯರು ಏನು ಹೇಳಿದರು?… ಎಂದು ಕಾತುರದಿಂದ ಸುಮತಿ ಕೇಳಿದಾಗ, ತನ್ನ ಮನಸ್ಸಿನ ನೋವು ತಾಯಿಗೆ ತಿಳಿಯದಿರಲಿ ಎಂದು ಸಮಾಧಾನ ಚಿತ್ತ ತಂದುಕೊಂಡು ತಾಯಿಯನ್ನು ನೋಡುತ್ತಾ…. ಏನಿಲ್ಲಮ್ಮ…..ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊಟ್ಟಿದ್ದಾರೆ…. ಸ್ವಲ್ಪ ದಿನ ಇಲ್ಲಿಯೇ ಆಸ್ಪತ್ರೆಯಲ್ಲಿದ್ದು ನೀನು ವಿಶ್ರಾಂತಿ ತೆಗೆದುಕೊಳ್ಳಬೇಕಂತೆ…. ನಿನಗೆ ಬೇಕಾದ ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಇಲ್ಲಿನ ದಾದಿಯರು ಮಾಡುತ್ತಾರೆ…. ಸ್ವಲ್ಪ ಹುಷಾರಾದ ಬಳಿಕ ನೀನು ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ”…. ಎಂದಳು. ಮಗಳು ಹೇಳಿದ ಮಾತುಗಳನ್ನು ಸುಮತಿ ನಂಬಿದರೂ ಕೂಡ ಅವಳ ಕಣ್ಣಿನಲ್ಲಿ ಮಡುಗಟ್ಟಿದ ದುಃಖ, ನೋವು ಸುಮತಿಯ ಕಣ್ಣಿಗೆ ಬೀಳದೇ ಇರಲಿಲ್ಲ. ಎಷ್ಟಾದರೂ ತಾಯಿ ಕರುಳು ಅಲ್ಲವೇ? ಸದಾ ಲವಲವಿಕೆಯಿಂದ ಚಿಗರೆಯಂತೆ ಓಡಾಡುತ್ತಿದ್ದ ಹಸನ್ಮುಖಿಯಾದ ಮಗಳ ಮುಖ ಬಾಡಿ ಬಳಲಿರುವುದು ಸುಮತಿಯ ಕಣ್ಣಿಗೆ ಗೋತರಿಸದೇ ಇರಲಿಲ್ಲ. ಮಗಳ ಮುಖವನ್ನೇ ನೋಡುತ್ತಾ ಏನಾಯ್ತು ಮಗಳೇ …. ನಿನ್ನ ಮನಸ್ಸನ್ನು ಕಾಡುತ್ತಿರುವ ಚಿಂತೆ ಏನೆಂದು ನನ್ನಲ್ಲಿ ಹಂಚಿಕೊಳ್ಳಬಾರದೇ? ….

ಎಂದು ಸುಮತಿ ಕೇಳಿದಾಗ ಮಗಳು…. “ಹಾಗೇನೂ ಇಲ್ಲಮ್…. ಸ್ವಲ್ಪ ಆಯಾಸ ಆಗಿದೆ ಅಷ್ಟೇ…. ನೀನು ಈಗ ನನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟು ಚೆನ್ನಾಗಿ ನಿದ್ರೆ ಮಾಡು… ನಿನಗೆ ಈಗ ವಿಶ್ರಾಂತಿಯ ಅಗತ್ಯವಿದೆ….ನಾನು ಹೊರಗೆ ಹೋಗಿ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಖರೀದಿಸಿ ಬರುತ್ತೇನೆ…. ಎಂದು ಹೇಳುವಾಗ ಅವಳ ಕಣ್ಣು ತುಂಬಿ ಬಂದರೂ ಅದನ್ನು ಮರೆಮಾಚಿ ಬೇಗನೆ ಬಾಗಿಲಿಂದ ಆಚೆ ಹೋದಳು. ಹೊರಗೆ ಬಂದು ಆಸ್ಪತ್ರೆಯ ಮೆಟ್ಟಿಲಿನ ಮೇಲೆ ಕುಳಿತಳು. ಜೋರಾಗಿ ಅಳು ಒತ್ತರಿಸಿ ಬಂದರೂ ಅವಳು ಅಳುವಂತಿರಲಿಲ್ಲ. ಏಕೆಂದರೆ ಸುತ್ತಮುತ್ತಲಿನ ಜನರು ತನ್ನನ್ನು ನೋಡುತ್ತಾರೆ ಎನ್ನುವ ಮುಜುಗರ ಅವಳಗಿತ್ತು. ಒಂದೆರಡು ನಿಮಿಷ ಹಾಗೆಯೇ ಕುಳಿತಿದ್ದವಳು, ಔಷಧಿ ತರಲು ತಡವಾಗಬಾರದೆಂದು ಅಲ್ಲಿಂದ ಎದ್ದು ಆಸ್ಪತ್ರೆಯ ಗೇಟಿನಿಂದ ಆಚೆ ಹೋದಳು. ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿತ್ತು ಔಷಧೀಯ ಅಂಗಡಿ. ಎಸ್ಟೇಟಿನ ಲೆಕ್ಕದಲ್ಲಿ ಆ ಅಂಗಡಿಯಲ್ಲಿ ಔಷಧಿ ಖರೀದಿಸಬಹುದಾಗಿದ್ದುದರಿಂದ ಅಲ್ಲಿಗೆ ಹೋಗಿ ಔಷಧಿಯನ್ನು ಖರೀದಿಸಿ, ನಂತರ ಅನಾಥಾಶ್ರಮಕ್ಕೆ ಹೋಗಿ ತಾಯಿಗೆ ಮಧ್ಯಾಹ್ನಕ್ಕೆ ಬೇಕಾದ ಅಡುಗೆಯನ್ನು ಮಾಡಿ ಆಸ್ಪತ್ರೆಯ ಕಡೆಗೆ ಹೊರಟಳು. ತಾಯಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಲ್ಲಿ ಮನೆಯಲ್ಲಿ ತಂಗಿ ಒಬ್ಬಳೇ ಇದ್ದಳು. ಅವಳಿಗೆ ತಾಯಿ ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿಸಬೇಕಿತ್ತು. ಎಸ್ಟೇಟಿನ ಬಂಗಲೆಯಲ್ಲಿ ಟೆಲಿಫೋನ್ ಇದ್ದ ಕಾರಣ ಸುಮತಿಯ ಎರಡನೇ ಮಗಳು ಅಲ್ಲಿಗೆ ಕರೆ ಮಾಡಿ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ವಿಷಯವನ್ನು ತಂಗಿಗೆ ತಿಳಿಸಿ ಎಂದು ಎಸ್ಟೇಟ್ ಮ್ಯಾನೇಜರ್ ರವರಲ್ಲಿ ವಿನಂತಿಸಿಕೊಂಡಳು. ನಂತರ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರಿಗೆ ತನ್ನ ತಾಯಿಯ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯವನ್ನು ತಿಳಿಸಿದಳು.

ಆ ಹುಡುಗಿಯ ಮನೆಯ ಪರಿಸ್ಥಿತಿಯನ್ನು ಅರಿತಿದ್ದ ಅವರು…. “ನಿನ್ನ ತಾಯಿಯ ಯೋಗ ಕ್ಷೇಮವನ್ನು ಚೆನ್ನಾಗಿ ನೋಡಿಕೋ…. ಏನೇ ಸಹಾಯವಿದ್ದರೂ ನಮಗೆ ತಿಳಿಸು…. ತಾಯಿಗೆ ಬೇಕಾದ ಊಟ ತಿಂಡಿ ಎಲ್ಲವನ್ನೂ ಆಶ್ರಮದಿಂದಲೇ ಮಾಡಿಕೊಂಡು ಹೋಗಮ್ಮ…. ಅವರು ಆಸ್ಪತ್ರೆಯಲ್ಲಿ ಇರುವವರೆಗೂ ನಮ್ಮ ಕೈಲಿ ಆದ ಸಹಾಯವನ್ನು ನಿನಗೆ ಮಾಡುತ್ತೇವೆ”…. ಎಂದರು. ಅವರ ಮಾತು ಕೇಳಿ ಆ ಹುಡುಗಿಯ ಕಣ್ಣುಗಳು ತುಂಬಿದವು….. “ಧನ್ಯವಾದಗಳು ಸರ್…. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ”….. ಎಂದು ಹೇಳಿ ಅವರಿಗೆ ವಂದಿಸಿ, ಅಲ್ಲಿಂದ ಆಸ್ಪತ್ರೆಗೆ ಹೋದಳು. ತಾಯಿಗೆ ಊಟವನ್ನು ಕೊಟ್ಟಳು. ತಾಯಿ ಊಟ ಮಾಡಿದ ನಂತರ ಊಟದ ಡಬ್ಬಿ ಮತ್ತು ತಟ್ಟೆಯನ್ನು ತೊಳೆದಿಟ್ಟಳು. ವಾರ್ಡಿನ ನರ್ಸ್ ಬಂದು ಅವಳಿಂದ ಔಷಧಿಯನ್ನು ಪಡೆದುಕೊಂಡು ಹೋದರು. ಹಾಗೂ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆಯಿಂದ ರೋಗಿಗೆ ಉಚಿತ ಆಹಾರವು ದೊರಕುವುದು ಎಂದು ಮಗಳಿಗೆ ತಿಳಿಸಿದರು. ಮಕ್ಕಳು ಶಾಲೆಯಿಂದ ಹಿಂತಿರುಗುವ ಮುನ್ನ ಆ ಹುಡುಗಿಯು ಅನಾಥಾಶ್ರಮವನ್ನು ತಲುಪಬೇಕಿತ್ತು. ತಾಯಿಯನ್ನು ಅಡ್ಮಿಟ್ ಮಾಡಬೇಕಾಗಿದ್ದ ಕಾರಣ ಅಂದು ಅವಳು ಕಾಲೇಜಿಗೂ ಹೋಗಿರಲಿಲ್ಲ. ತಾಯಿಯ ಜೊತೆ ಸ್ವಲ್ಪ ಹೊತ್ತು ಆಸ್ಪತ್ರೆಯಲ್ಲಿದ್ದು ವಾರ್ಡಿನ ಬಳಿ ಕಾಫಿ ಬಂದಾಗ ತಾಯಿಗೆ ಒಂದು ಲೋಟ ಕಾಫಿಯನ್ನು ಕೊಡಿಸಿ , ತಾನು ರಾತ್ರಿ ಇಲ್ಲಿ ಮಲಗಲು ಬರುವುದಾಗಿ ತಿಳಿಸಿ ಹುಡುಗಿಯು ಅನಾಥಾಶ್ರಮದ ಕಡೆಗೆ ನಡೆದಳು.

ತಾಯಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಂದ ನಂತರ ಇಂದೇಕೋ ತನ್ನ ತಾಯಿಯಿಂದ ಬಹಳ ದೂರ ಬಂದಂತೆ ಅವಳಿಗೆ ಅನಿಸಿತು. ಫಿಸಿಷಿಯನ್ ಹೇಳಿದ ಮಾತುಗಳೇ ಅವಳ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ನನ್ನ ತಾಯಿ ವೈದ್ಯರು ಹೇಳಿದಂತೆ ಬಹಳ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಎಂದಿಗೂ ತನಗಾಗುವ ನೋವನ್ನು ನಮ್ಮ ಮುಂದೆ ತೋರಿಸಿಕೊಂಡಿಲ್ಲ ಹೇಳಿಕೊಂಡಿಲ್ಲ ನನ್ನಮ್ಮ. ದೇವರೇ ವೈದ್ಯರ ಮಾತು ಸುಳ್ಳಾಗಲಿ. ಅಮ್ಮನಿಗೆ ಇದ್ಯಾವುದೂ ತಿಳಿಯುವುದೇ ಬೇಡ. ಈ ಸಂಗತಿಯನ್ನು ಅಕ್ಕನಿಗೆ ಹಾಗೂ ತಂಗಿಗೆ ನಾನು ಹೇಳಲೇಬೇಕಾದ ಅನಿವಾರ್ಯತೆ ಇದೆ. ಸಾಧ್ಯವಾದಷ್ಟೂ ನಾವು ಅಮ್ಮನನ್ನು ಖುಷಿಯಾಗಿಟ್ಟುಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಅವಳ ಆರೈಕೆ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಎಂದು ಯೋಚಿಸುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದವಳಿಗೆ ಇದ್ದಕ್ಕಿದ್ದ ಹಾಗೆ ತನ್ನನ್ನು ಯಾರೋ ಹಿಡಿದೆಳೆದಂತಾಯಿತು….. ಪಕ್ಕಕ್ಕೆ ತಿರುಗಿ ನೋಡಿದರೆ ಯಾರೋ ಅಪರಿಚಿತನೊಬ್ಬ ತನ್ನ ಕೈಹಿಡಿದು ರಸ್ತೆಯ ಬದಿಗೆ ಎಳೆದ. ಹಿಂದೆಯೇ ಕಾರೊಂದು ಬ್ರೇಕ್ ಹಾಕಿ ನಿಂತಿದ್ದು ಕೂಡಾ ಅವಳಿಗೆ ತಿಳಿಯಲಿಲ್ಲ. ಕಾರಿನಲ್ಲಿದ್ದಾತ ಕೋಪದಿಂದ….”ಏ…. ಹುಡುಗೀ….ನಿನಗೆ ಕಣ್ಣು ಕಾಣಿಸುವುದಿಲ್ಲವೇ? ರಸ್ತೆ ಮಧ್ಯೆ ನಡೆಯುತ್ತಿದ್ದೀಯಲ್ಲಾ… ನಿನಗೆ ಜೀವದ ಮೇಲೆ ಆಸೆ ಇಲ್ಲವೇ…. ನೀನು ಸಾಯಲು ನನ್ನ ಕಾರೇ ಬೇಕೆ?…. ಎಂದು ಜೋರಾಗಿ ಹೇಳಿದ.



About The Author

Leave a Reply

You cannot copy content of this page

Scroll to Top