ಧಾರಾವಾಹಿ ಸಂಗಾತಿ-19
ಸವಿತಾದೇಶಮುಖ

ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ

ಭಾಗ-೧೯
*ಜಯದೇವಿ ತಾಯಿಯವರ ಜೀವನ ವೃತ್ತಾಂತ*
(ಅಸಹಾಯಕರು ಒತ್ತಿಟ್ಟ ಆಸ್ತಿ ಹಿಂದಿರುವಿಕೆ)
*ಅಮರವಾಗಲು | ಭ್ರಮೆಯು ನಿಕ್ಕರಿಸಿ
ಸಮರ ಯೋಗ ದೊರೆಬೇಕು -ಮನದ
ತಾಮಸಾದಿ ಗುಣ ಅಳಿಬೇಕು||*
ಈ ಸಾಲುಗಳು ತುಂಬಾ ಆಳವಾದ ತತ್ವವನ್ನು ಒಳಗೊಂಡಿವೆ. ಜಯದೇವಿ ತಾಯಿಯವರ ಚಿಂತನೆ ಎಷ್ಟು ಶುದ್ಧ, ಎಷ್ಟು ಜೀವನಾನುಭವದಿಂದ ಬಂದದ್ದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
“ಅಮರವಾಗಲು ಭ್ರಮೆಯು ನಿಕ್ಕರಿಸಿ”
“ದೈಹಿಕವಾಗಿ ಅಮರವಾಗುವದು ಒಬ್ಬರ ಹೆಸರು, ಕಾರ್ಯ, ಮೌಲ್ಯಗಳು ಕಾಲಾಂತರಕ್ಕೂ ಉಳಿಯಬೇಕು ಎಂಬ ಅರ್ಥ.
“ಭ್ರಮೆಯು ನಿಕ್ಕರಿಸಿ” ….. ಮನಸ್ಸಿನಲ್ಲಿರುವ ಅಜ್ಞಾನ, ಮಿಥ್ಯಾಭಾವನೆಗಳು, ಜೀವನದಲ್ಲಿ ನಾವು ಕಾಣುವ ಬಹುತೇಕ ದುಃಖಗಳಿಗೆ ಕಾರಣ ನಮ್ಮ ಭ್ರಮೆಗಳೇ—ಅಹಂಕಾರ, ಆಸೆ, ಮಮಕಾರ.
“ಸಮರ ಯೋಗ ದೊರೆಬೇಕು – ಮನದ”
ಇಲ್ಲಿ “ಸಮರ” ಇದು ಹೊರಗಿನ ಯುಧ್ಧ ಹಾಗೂ ನಮ್ಮೊಳಗಿನ ಯುದ್ಧ. ವಿರುದ್ಧ ನಡೆಯುವ ಆಂತರಿಕ ಸಮರ.
“ಯೋಗ ದೊರೆಬೇಕು…. ಸಮರದಲ್ಲಿ ಜಯ ಸಾಧಿಸಲು ಮನಸ್ಸು ಶಾಂತವಾಗಿರಬೇಕು, ಏಕಾಗ್ರವಾಗಿರಬೇಕು. “ತಾಮಸಾದಿ ಗುಣ ಅಳಿಬೇಕು”
ತಾಮಸ ಗುಣ ಬೇರೆಯವರಿಗೆ ನೋವು ಕೊಡುವುದು ಅವರ ಆಸ್ತಿಯ ಹಕ್ಕು ಪಡೆಯುವುದು ಇವು ನಮ್ಮನ್ನು ಕೆಳಕ್ಕೆಳೆಯುವ ಕೆಟ್ಟ ಗುಣಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು. ಆಗ ಮಾತ್ರ ಮನಸ್ಸು ಶುದ್ಧವಾಗುತ್ತದೆ.
ತನ್ನೊಳಗಿನ ಕೆಟ್ಟ ಗುಣಗಳ ವಿರುದ್ಧ ಹೋರಾಡಿ, ಶುದ್ಧ ಮನಸ್ಸಿನಿಂದ ಬದುಕಬೇಕು. ಇದೇ ನಿಜವಾದ “ಅಮರತ್ವ”ದ ಮಾರ್ಗ.
ಇದು ಕವಿತೆಯ ಸಾಲುಗಳು ಬದುಕಿಗೆ ದಾರಿ ತೋರಿಸುವ ಮಾರ್ಗಗಳು ಹಾಗೆ ಜಯದೇವಿತಾಯಿಯವರು ಬದುಕಿದರು.
೩೬ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಳ್ಳುವುದು ಯಾವ ಸ್ತ್ರೀಯಿಗೂ ಜೀವನದ ದೊಡ್ಡ ಆಘಾತದ ನೋವನ್ನು ಅನುಭವಿಸಿದ ಜಯದೇವಿ ತಾಯಿಯವರ ಮನಸ್ಸಿನಾಳದಲ್ಲಿ ತುಂಬಿದ ಶೋಕವು ನಂದಿ ಹೋಗುವ ಮುನ್ನವೇ….. ಅನೇಕ ಕಾರ್ಯಗಳನ್ನು ಕೈಕೊಂಡರು…..ಅವರು ಶಾಂತರಾಗಿ ಕುಳಿತುಕೊಳ್ಳಲಿಲ್ಲ…
ಜೀವನ ಇನ್ನೂ ಅನೇಕ ಹೊಣೆಗಾರಿಕೆಗಳನ್ನು ತಮ್ಮ ಕೈಯಲ್ಲಿ ಇಟ್ಟಿದೆ ಎಂಬ ಅರಿವು ಅವರಿಗೆ ಬಹಳ ಸ್ಪಷ್ಟವಾಗಿತ್ತು.ಪತಿ ಬಿಟ್ಟಿದ್ದ ಆಸ್ತಿಪಾಸ್ತಿಗಳು, ಗರ್ಭಶ್ರೀಮಂತಿಕೆ, ಹಾಗೂ ಬಡ್ಡಿ ವ್ಯವಹಾರವು ಮುಖ್ಯವಾಗಿ ಮಕ್ಕಳ ಲಾಲನೆ ಪಾಲನೆ ಬಹು ದೊಡ್ಡ ಹೊಣೆಗಾರಿಕೆಯಾಗಿ ಅವರ ಮುಂದೆ ನಿಂತವು.
ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ದಿಕ್ಕುತೋಚದೆ ಇತರರ ಮೇಲೆ ಅವಲಂಬಿತರಾಗತಾರೆ. ಆದರೆ ಜಯದೇವಿ ತಾಯಿಯವರು ಅದಕ್ಕೆ ವಿರುದ್ಧವಾಗಿ ಸ್ವತಃ ಮುಂದೆ ಬಂದರು.
*ಚಿಂತಿಸುವೆಕೆ ನೀ |ಶಾಂತವಾಗಿರುವ ಮನವೇ
ಎಂಥ ವಿಪತ್ತು ಬಂದರರೂ- ಹೆದರದೆ
ಧೈರ್ಯದಿ ಅಡಿ ಇಡು ಮುಂದೆ||*
ಅಂತ ಹೇಳುತ
ಅವರು ಮನೆಮಠದ ಆರ್ಥಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲು ಪ್ರಾರಂಭಿಸಿದರು.
ಅದರಿಂದಲೇ ಅವರು ಒಂದು ಮಹತ್ವದ ನಿರ್ಧಾರ ಕೈಗೊಂಡರು…… ಭರಾಟೆಯಲ್ಲಿ ನಡೆಯುತ್ತಿದ್ದ ಬಡ್ಡಿ ವ್ಯವಹಾರದಿಂದ ಬಂದ ಹಣ ಮತ್ತೊಬ್ಬರ ಕಣ್ಣೀರಿಗೆ ಕಷ್ಟಕ್ಕೆ ಕಾರಣವಾಗುತ್ತಿರುವುದನ್ನು ಗ್ರಹಿಸಿದರು.
ತಾಯಿಯವರು “ಭ್ರಮೆಯು ನಿಕ್ಕರಿಸಿ, ತಾಮಸಾದಿ ಗುಣ ಅಳಿಬೇಕು” ಎಂದು ಬರೆದ್ದಂತೆ ಬದುಕಿನಲ್ಲಿ ನಡೆದು ತೋರಿಸಿದ ಸತ್ಯ. ಬಡ್ಡಿ ವ್ಯವಹಾರವನ್ನು ನೋಡಿದಾಗ ಅವರ ಮನಸ್ಸು ಒಳಗೆ ಒಳಗೆ ಕದಡಿತು.
ಈ ವ್ಯವಹಾರವನ್ನು ಪೂರ್ತಿಯಾಗಿ ಇಲ್ಲಸಬೇಕು….. ಅಂತ ಪತಿಯಲ್ಲಿ ಬಹಳಷ್ಟು ಸಲ ಕೇಳಿಕೊಂಡಿದ್ದರು ಆದರೆ ಅದರಿಂದ ಹಿಂದೆತಿರುಗುವದು ಅಸಾಧ್ಯವಾದ ಮಾತು ಎನ್ನುತಿದ್ದರು ಪತಿ ಅದರಿಂದಾಗುವ ನಷ್ಟಗಳನ್ನು ಬಹಳಷ್ಟು ಸಲ ಹೇಳಿದ್ದರು.
ಶ್ರೀಮಂತಿಕೆ ಹೆಚ್ಚಿದಂತೆಲ್ಲ ಬಡ್ಡಿಯ ವ್ಯವಹಾರವು ತನ್ನಿಂದತಾನಾಗಿ ಕುದುರಿಕೊಳ್ಳುವುದು ಸಹಜವಾಗಿತ್ತು….. ಇಂತ ಪರಿಸ್ಥಿತಿಯಲ್ಲಿ ಹಿಂದಿರುಗುವುದು ಬಹಳ ಕಠಿಣವಾಗಿರುತ್ತದೆ…. ಏಕೆಂದರೆ ಬಡ್ಡಿಯ ವ್ಯವಹಾರಗಳನ್ನು ನೋಡಿಕೊಂಡು ಹೋಗಲೇ 14 ಮುನಿಮರನ್ನು ಅವರು ನೇಮಿಸಿದ್ದರು….. ಅಂದರೆ ನಾವು ಊಹಿಸಬಹುದು ಅದು ಎಂಥ ದೊಡ್ಡ ಬಡ್ಡಿ ವಹಿವಾಟು ಅಲ್ಲಿ ನಡೆಯುತ್ತಿತ್ತು ಅನ್ನುವುದನ್ನು ಗಮನಿಸಬಹುದಾಗಿದೆ .
ಒಮ್ಮಿಂದ ಒಮ್ಮಲೆ ವ್ಯವಹಾರವನ್ನು ಸ್ಥಗಿತಗೊಳಿಸಲಾಗದಂತ ಸ್ಥಿತಿ ಇತ್ತು ಅನ್ನುವುದು ಖಚಿತವಾಗಿತು.
*ಬಾರೆ ಇಚ್ಛಾಶಕ್ತಿ |ತೋರೆ ಕ್ರಿಯಾ ಶಕ್ತಿ
ಬೀರೆ ಮಂತ್ರಶಕ್ತಿ ಪ್ರಭಾವ -ಆದಿಶಕ್ತಿ
ಪರಾಶಕ್ತಿ ನೀನು ದಾರಿ ತೋರೆ||*
ಅಂತ ಜಯದೇವಿ ತಾಯಿಯವರು ತನ್ನ ಇಚ್ಛಾಶಕ್ತಿ- ಆತ್ಮ ಶಕ್ತಿಯನ್ನೇ ಆದಿಶಕ್ತಿಯನ್ನಾಗಿ ಮಾಡಿಕೊಂಡು ಕ್ಷಣಾರ್ಧದಲ್ಲಿ ಅವರು ಒಂದು ದೊಡ್ಡ ನಿರ್ಧಾರ ಕೈಗೊಂಡರು….ಮನೆಯಲ್ಲಿದ್ದ ಬಡ್ಡಿ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ.ಒಂದು ದಿನ ಎಲ್ಲ ಮುನಿಮರನ್ನು ಕರೆಯಿಸಿ ಒಂದು ಇರ್ತ್ಯಾರ್ಥಕ್ಕೆ ಬಂದರು ….
ಅಡವಿಇಟ್ಟ ಜನರನೇಲ್ಲ ಕರೆಸಿಕೊಂಡರು.
ಯಾರು ಯಾರಿಗೆ ಎಷ್ಟು ಸಾಲವಿದೆ ಎಂಬುದನ್ನು ಲೆಕ್ಕ ಹಾಕಿ, ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕೂಡಿ ಮಾತನಾಡಿದರು.
“ನೀವು ಕೊಟ್ಟಿದ್ದು ನಿಮ್ಮದೇ…
ಇದು ನಿಮ್ಮ ಹಕ್ಕು… ತೆಗೆದುಕೊಳ್ಳಿ…”
ಎಂದು ಹೇಳುತ್ತಾ, ಅವರ ಆಸ್ತಿಯ ಕಾಗದ ಪತ್ರಗಳನ್ನು, ಅಡಿವೆ ಇಟ್ಟ ವಿವಿಧ ರೀತಿಯ ಬಂಗಾರದ ಒಡೆಯ ,ಬೆಳ್ಳಿಯ ಸಾಮಗ್ರಿಗಳು, ತಾಮ್ರದ ಹಿತ್ತಾಳೆಯ ಅಡುಗೆ ಮಾಡುವ ದೊಡ್ಡ ದೊಡ್ಡ ಪಾತ್ರೆಗಳು ಕೂಡ ಇರುತ್ತಿದ್ದವು….ದನ ಕರುಗಳನ್ನು ತಿರುಗಿ ನೀಡಲು ಪ್ರಾರಂಭಿಸಿದರು.
ಎಷ್ಟೋ ಜನರು ಅಮ್ಮ ನಮಗೆ ತಿರುಗಿಕೊಡಲು ನಮ್ಮತ್ರ ದುಡ್ಡ ಇಲ್ಲ ಅಂತ ಕಣ್ಣೀರು ಕರೆದರು…
” ಸರಿ ನಿಮಗೆ ಆದಾಗ ಸಾಧ್ಯವಾದಾಗ ತಂದು ಕೊಡಿ”
ಅಂತ ಹೇಳಿ ಅವರ ಆಸ್ತಿ ತಿರುಗಿಸಿದರು.
ಆ ಕ್ಷಣ ಕಣ್ಣುಗಳು ನಂಬಲಾರದ ಆಶ್ಚರ್ಯ, ಕೃತಜ್ಞತೆಯ ವಾತಾವರಣ ಹರಡಿತು ಕೆಲವರು ಕಣ್ಣೀರಿನಿಂದ ತಾಯಿಯವರ ಪಾದವನ್ನು ತೊಳೆದರೂ…
ಹಿಂತಿರುಗಿಸುವ ಕಾರ್ಯವ ಒಂದು ಮನೆತನದ ಧರ್ಮದ ಪುನರ್ಜನ್ಮವಾಗಿತ್ತು.
ಈ ಕಾರ್ಯದಿಂದ ತಾಯಿಯವರು ತಮ್ಮೊಳಗಿನ “ತಾಮಸ”ವನ್ನು ಅಳಿಸಿ, “ಸಮರ ಯೋಗ”ವನ್ನು ಸಾಧಿಸಿದವರಾಗಿ ಬೆಳಗಿದರು.
ಅವರು ಹೊರಗಿನ ಯುದ್ಧಗಳೊಂದಿಗೆ, ಒಳಗಿನ ಯುದ್ಧವನ್ನು ಗೆದ್ದರು.
ಇದೇ ಕಾರಣಕ್ಕೆ ಅವರು ಅಮರರಾದರು…
ಜನರ ಮನಸ್ಸಿನಲ್ಲಿ, ಆಶೀರ್ವಾದಗಳಲ್ಲಿ, ಮತ್ತು ಅವರ ಮಾಡಿದ ಸತ್ಕಾರ್ಯಗಳಲ್ಲಿ….. ಅಜರಾಮರರಾದರು…!!!
*ಗಳಿಸಿದ ಧನವನು | ಉಳಿಸಬೇಕಾದರೆ ಬಳಿಸಬೇಕಾಗುತ್ತದೆ ಎಚ್ಚರ- ಅಣ್ಣಯ್ಯ ಕಳೆಯಬೇಕಾದ ಅನಾಚಾರದಿ ||*
ಹೌದು ಗಳಿಸಿದ ಧನವನ್ನು ಉಳಿಸಬೇಕಾದರೆ ಬಹಳ ಎಚ್ಚರದಿಂದ ಸಆಚಾರದಿಂದ ಉಳಿಸಿ ಬೆಳೆಸಿಕೊಂಡು ಹೋಗಬೇಕು ಅಂತ ಹೇಳುತ್ತಿದ್ದರು. ಅನಾಚಾರದಿಂದ ಗಳಿಸಿದ ದುಡ್ಡು ನಮ್ಮ ಕೈಗೆ ಎಟುಕದು ಅದು ಮುಂದಿನ ಪೀಳಿಗೆಗೆ ಅನಾಹುತ ಮಾಡುವುದು ಖಚಿತ ಅನ್ನೋದನ್ನ ಯಾವಾಗಲೂ ಜಯದೇವಿ ತಾಯಿಯವರು ಹೇಳುತ್ತಿದ್ದರು.
ತಾಯಿಯವರು ಅದನ್ನು ನೆನಪಿಸಿಕೊಂಡಾಗ ಅವರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು…
“ನಮ್ಮ ಮನೆಯ ಹಿಂದಿನ ದಿನಗಳು ತುಂಬಾ ಐಶ್ವರ್ಯವಾಗಿದ್ದವು… ಆದರೆ ಆ ಐಶ್ವರ್ಯಕ್ಕೆ ನೆರಳಾಗಿ ನಿಂತದ್ದು ಬಡ್ಡಿ ವ್ಯಾಪಾರ,” ಎಂದು ಅವರು ನಿಧಾನವಾಗಿ ಹೇಳುತ್ತಿದ್ದರು. ಅವರ ಗಂಡನ ತಂದೆ, ಅಂದರೆ ಮನೆಯ ಅಜ್ಜ, ಬಡ್ಡಿ ವ್ಯಾಪಾರದಲ್ಲಿ ದೊಡ್ಡ ಹೆಸರು ಮಾಡಿದ್ದರು.
ಆದರೆ ಅದು … ಕಠೋರವಾದ ಮಾರ್ಗವಾಗಿತ್ತು ಧಡೂತಿ ಜನರನ್ನು ಇಟ್ಟುಕೊಂಡು ಬಡವರ ಮನೆ ಬಾಗಿಲು ತಟ್ಟಿಸುತ್ತಿದ್ದರು. ಸಾಲ ತೀರಿಸಲಾಗದವರ ಕಣ್ಣೀರನ್ನು ಲೆಕ್ಕಿಸದೇ, ಅವರ ಆಸ್ತಿಪಾಸ್ತಿಯನ್ನು ಕಸಿದುಕೊಳ್ಳುತ್ತಿದ್ದರು.
ಬಡವರ ಅಳಲು, ತಾಯಿಯರ ನೋವು, ಮಕ್ಕಳ ಭಯದ ನೆರಳು ನಮ್ಮಮನೆಯ ಗೋಡೆಗಳಲ್ಲಿ ಉಳಿದುಕೊಂಡಿದ್ದವೆಂದು…. ತಾಯಿಯವರು ಹೇಳುತ್ತಿದ್ದರು.
“ಅವರು ತಮ್ಮ ಆಸ್ತಿಗಳನ್ನು ಬಿಟ್ಟು ಕೊಡುವಾಗ ಎಷ್ಟೊಂದು ಅಳಲುಗಳ ಶಾಪ ಇತ್ತರೋ ಏನೋ…”
ಕಾಲ ಕಳೆಯಿತು… …..ಅಜ್ಜ ಕೂಡಿಟ್ಟ
ಸಂಪತ್ತಿನ ವೈಭವದಲ್ಲಿ ನಾವೆಲ್ಲ ಇರಬಹುದು. ಆದರೆ ಆ ಪಾಪದ ಶಾಪ ಮನೆಯ ಮೇಲೆ ಹಬ್ಬುತ್ತಲೇ ಹೋಯಿತು.
ಅದರ ಪರಿಣಾಮವಾಗಿ ನನ್ನ ಪತಿ ಹಾಗೂ ಅತ್ತೆಯಂದಿರು ಅನುಭವಿಸಬೇಕಾಯಿತು.
“ನನ್ನ ಗಂಡ ಒಳ್ಳೆಯ ಮನಸ್ಸಿನವರು… ಯಾರಿಗೂ ನೋವು ಕೊಡದವರು…” ಎಂದು ಹೇಳುವಾಗ ತಾಯಿಯವರ ಧ್ವನಿ ನಡುಗುತ್ತಿತ್ತು.
“ಆದರೂ… ಅವರ ಜೀವನ ಬಹಳ ಚಿಕ್ಕದಾಯಿತು… ಬೇಗನೇ ನನ್ನನ್ನು ಬಿಟ್ಟು ಹೋದರು…”
ಅವರು ಹೇಳುತ್ತಿದ್ದಾಗ, ಆ ಸಾವು … ಕುಟುಂಬದ ಮೇಲೆ ಬಿದ್ದ ಪಾಪದ ಪ್ರತಿಫಲ ಎಂಬ ಭಾವನೆ ಮೂಡುತ್ತಿತ್ತು.
“ಬೇರೆಯವರ ಕಣ್ಣೀರಿಂದ ಕಟ್ಟಿದ ಮನೆ, ಒಂದು ದಿನ ತನ್ನವರ ಕಣ್ಣೀರಿಂದಲೇ ಕರಗುತ್ತದೆ…”
ಅವರ ಮಾತಿನಲ್ಲಿ ನೋವು ಇತ್ತು… ಆದರೆ ಅದರಲ್ಲಿ ಒಂದು ದೊಡ್ಡ ಪಾಠವೂ ಇತ್ತು
ಅನ್ಯಾಯದಿಂದ ಬಂದ ಹಣ ಸುಖ ಕೊಡದು…
ಪಾಪದ ಬೀಜ ಯಾವಾಗಲಾದರೂ ಮೊಳೆಯುತ್ತದೆ… ಮತ್ತು ಅದರ ಫಲವನ್ನು ನಿರಪರಾಧಿಗಳೂ ಅನುಭವಿಸಬೇಕಾಗುತ್ತದೆ…ಎನ್ನುವ ಸತ್ಯವನು ಅನೇಕ ಉದಾಹರಣೆಗಳೊಂದಿಗೆ ಹೇಳುತ್ತಿದ್ದರು.
ಅಂತಹ ಉದಾಹರಣೆಗಳಲ್ಲಿ ಒಂದು ಉದಾಹರಣೆಯನ್ನು ತಾಯಿಯವರು ಮೇಲಿಂದ ಮೇಲೆ ಹೇಳುತ್ತಿದ್ದರು
ಅಜ್ಜ ಬಹಳ ಕಾಯಿಲೆ ಇದ್ದಾಗ ಜ್ವರ ಹೆಚ್ಚಾಗಿ ಅವರು ತಾಯಿಯವರನ್ನು ಕರೆದು
“ಅಲ್ಲಿ ಹೊರಗಡೆ ಯಾವುದು ಅಮಾಯಕ ಹೆಣ್ಣುಮಗಳು ನನ್ನನ್ನು ಶಪಿಮಿಸುತ್ತಿರುವಳು… ಅವಳನ್ನು ಇಲ್ಲಿಂದ ಕಳಿಸಿಕೊಡು “ಅನ್ನುತ್ತಿದ್ದರಂತೆ. ತಾಯಿಯವರು ನೋಡಿದರೆ ಅಲ್ಲಿ ಯಾರು ಇರುತ್ತಿರಲಿಲ್ಲ ಆದರೂ ಕೂಡ “ಅವಳು ಇಲ್ಲೇ ಇದ್ದಾಳೆ ಹೇಳು ಅವಳಿಗೆ ಹೋಗಲು ಹೇಳು ನೀನು ಹೇಳಿದರೆ ಮಾತ್ರ ಹೋಗುವಳು ಅವಳಿಗೆ ಬೆದರಿಸಿ ಹೇಳು…..”ಅನ್ನುತ್ತಿದ್ದರಂತೆ.
ಅದೇ ರೀತಿಯಾಗಿ ತಾಯಿಯವರು “ನೀನು ಹೋಗಮ್ಮ ಇಲ್ಲಿಂದ” ಅಂತ ಬೆದರಿಸಿದಂತೆ ನಟಿಸುತ್ತಿದ್ದರಂತೆ ….ಆಗ ಅಜ್ಜ ಸಮಾಧಾನರಾಗಿ
“ನೋಡು ಅವಳು ನಿನಗೆ ಹೆದರಿ ಹೋಗಿಬಿಟ್ಟ ನೋಡು “ಅನ್ನುತ್ತಿದ್ದರಂತೆ … ನಂತರ ಜಯದೇವಿ ತಾಯಿಯವರು ಸಿದ್ದರಾಮೇಶ್ವರನ ಪ್ರಸಾದವನ್ನು ಹಣೆಗಿಟ್ಟು ಮಲಗಿಸುತ್ತಿದ್ದರಂತೆ.
ಇದೆಲ್ಲಾ ಕರ್ಮದ ಫಲಗಳು ಅಂತ ತಾಯಿಯವರು ಹೇಳುತ್ತಿದ್ದರು. ನಾವು ಮಾಡಿದ ಪಾಪ ಪುಣ್ಯಗಳ ಕರ್ಮವನ್ನು ನಮ್ಮ ಮುಂದಿನ ಪೀಳಿಗೆಯು ಭೋಗಿಸಬೇಕಾಗುತ್ತದೆ.
ತಾಯಿಯವರು ಜೀವನವನ್ನು ಕೇವಲ ಘಟನೆಗಳ ಸರಣಿ ಹೇಳುತಿದ್ದರು…. ನಮ್ಮ ಕರ್ಮದ ಹಾದಿ ಎಂದು ಗಾಢವಾಗಿ ನಂಬಿದವರು…
“ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಇರುತ್ತದೆ… ಅದು ನಮ್ಮನ್ನು, ನಮ್ಮ ಮಕ್ಕಳನ್ನೂ ತಟ್ಟುತ್ತದೆ…” ಎಂದು ಅವರು ಮನಸ್ಸು ತುಂಬಿ ಹೇಳುತ್ತಿದ್ದರು.
ಅವರ ಧ್ವನಿಯಲ್ಲಿ… ಅನುಭವದ ಕಿಡಿ ಹೊತ್ತಿತ್ತು…
“ನಾವು ಮಾಡಿದ ಪಾಪ… ನಮ್ಮ ನೆರಳಾಗಿ ನಮ್ಮನ್ನು ಹಿಂಬಾಲಿಸುತ್ತದೆ…ನಾವು ಮಾಡಿದ ಪುಣ್ಯ… ನಮ್ಮ ಮಕ್ಕಳಿಗೆ ದಾರಿಯಾಗಿ ಬೆಳಗುತ್ತದೆ…”
ಅವರು ನಿಧಾನವಾಗಿ ಮುಂದುವರಿಸುತ್ತಿದ್ದರು:
“ಮಕ್ಕಳು ನಮ್ಮ ಸಂಪತ್ತಾದರೆ… ನಮ್ಮ ಕರ್ಮದ ಸಾಲಿಗೂ ವಾರಸುದಾರರಾಗುತ್ತಾರೆ…”
ಈ ಮಾತು ಹೇಳುವಾಗ ಅವರ ಕಣ್ಣುಗಳಲ್ಲಿ ಒಂದು ಗಾಢ ನೋವು ಮೂಡುತ್ತಿತ್ತು…
ನಾವು ಬದುಕುವ ಪ್ರತಿದಿನವೂ ಜಾಗ್ರತೆ ಇರಬೇಕು…” ಎಂದು ಅವರು ಹೃದಯದಿಂದ ಹೇಳುತ್ತಿದ್ದರು…
ಅವರ ಮಾತುಗಳಲ್ಲಿ ಎಚ್ಚರಿಕೆ ಇತ್ತು…ಪ್ರಾರ್ಥನೆ ಇತ್ತು…ಒಂದು ಪಾಠ ಇತ್ತು…
“ನಾವು ಬಿತ್ತಿದ ಬೀಜವೇ ಮರವಾಗಿ ನಮ್ಮ ಮಕ್ಕಳ ಮೇಲೆ ನೆರಳಾಗುತ್ತದೆ…ಅದು ನೆರಳೋ… ಇಲ್ಲ ಬೆಂಕಿಯೋ… ಅದು ನಮ್ಮಕ್ಯೆಯಲ್ಲಿದೆ……ಎಂದು ಯಾವಾಗಲೂ ತಿಳಿ ಹೇಳುತ್ತಿದ್ದರು.
ನೈತಿಕವಾಗಿಯೂ ತಮ್ಮ ಮನೆತನವನ್ನು ಬಲಪಡಿಸಿದರು. ಅವರ ಈ ಕ್ರಮಶೀಲತೆ ಮತ್ತು ಧೈರ್ಯವು ಇತರ ಮಹಿಳೆಯರಿಗೂ ಮಾದರಿಯಾಗಿ ಪರಿಣಮಿಸಿತು.
ಪತಿಯನ್ನು ಕಳೆದುಕೊಂಡ ದುಃಖವನ್ನು ಶಕ್ತಿಯಾಗಿ ಪರಿವರ್ತಿಸಿಕೊಂಡು, ಜಯದೇವಿ ತಾಯಿಯವರು ತಮ್ಮ ಜೀವನವನ್ನು ತಮ್ಮ ಸುತ್ತಲಿನ ಜನರ ಜೀವನವನ್ನೂ ಸುಧಾರಿಸುತ ಮಹಾನ್ ವ್ಯಕ್ತಿತ್ವವಾಗಿ ಬೆಳಗಿದರು.
“ನೀರಿನಂತೆ ನಿರ್ಮಲ | ಹಿರಿದಾದ ಮನವಾಗಿ ಪರರಿಗಾಗಿ ಸವೆದು ತಣಿಬೇಕು -ದೇವನ
ಬರುವಿಗಾಗಿ ದಾರಿ ಕಾಯಬೇಕು ||”
ಎನ್ನುವಂತೆ ಜೀವನವನ್ನು ಸಮರ್ಪಿಸಿಕೊಂಡಿದ್ದರು. (ಮುಂದುವರೆಯುವುದು)
ಸವಿತಾ ದೇಶಮುಖ




