ಕಾವ್ಯ ಸಂಗಾತಿ
ಡಾ.ಕಾಡಜ್ಜಿ ಮಂಜುನಾಥ್
“ನ್ಯಾಯ ಕಣ್ಣು ತೆರೆದಿದೆ”
ಜನಸಾಮಾನ್ಯರ
ಉಸಿರು ನಿಲ್ಲಿಸಿ
ದರ್ಪ ಮೆರೆದ
ನರನ ಮಾತು
ಮೌನವಾಗಿದೆ;
ಹಣದ
ಕಪಿಮುಷ್ಠಿಯಲಿ
ಹಂತಕರ ಸೃಷ್ಟಿಸಿ
ದ್ವೇಷವೆಂಬ ರೋಗದಿ
ಜೀವ ತೆಗೆದ
ಜೀವಿಯ
ಮುಖವಾಡ ಕಳಚಿದೆ;
ತೋಳ್ಬಲದ
ಕತ್ತಿಯ ಅಂಚಿನಲಿ
ಹಣದಾಸೆ ತೋರಿಸಿ
ಕುರ್ಚಿಯ ವ್ಯಾಮೋಹದಿ
ಪ್ರಾಣ ತೆಗೆದ
ವಿನಯದ
ದುರಹಂಕಾರ
ಮಣ್ಣಾಗಿದೆ;
ಕಾನೂನಿನ
ರಕ್ಷಕರೇ
ಅಪರಾಧಿಗಳ
ಆಮಿಷಕ್ಕೆ ಬಲಿಯಾಗಿ
ಸಹಾಯ ಹಸ್ತ
ಚಾಚಿದ
ಮೃಗಗಳ ಮೇಲೆ
ನ್ಯಾಯ ದೇವತೆಯ
ಕಣ್ಣು ಬಿದ್ದಿದೆ;
ಬಾಳಿ ಬದುಕಬೇಕಾದ
ಮುಗ್ದ ಯುವಕನನ್ನು
ದಬ್ಬಾಳಿಕೆಯ
ಕೆಂಡದಲಿ
ಕೊಲೆ ಮಾಡಿದ
ಕಟುಕರನ್ನು
ಕಾರಾಗೃಹ ಕೈಬೀಸಿ
ಕರೆದಿದೆ;
ತೆರೆ ಹಿಂದಿನ
ಕುತಂತ್ರಗಳು ಕರಗಿ
ಹಣ ಅಧಿಕಾರ ಪ್ರಭುತ್ವದ
ಕೈಗಳು
ಕಾನೂನಿನ ಕುಣಿಕೆಗೆ
ಸಿಲುಕಿ
ಸಂವಿಧಾನವು
ತನ್ನ ಅಭೇದ್ಯ
ಶಕ್ತಿಯನ್ನು
ನ್ಯಾಯದ ಚಾಟಿಯಲಿ
ಕರ್ಮವು
ಮರುಕಳಿಸಿದೆ;
ಡಾ.ಕಾಡಜ್ಜಿ ಮಂಜುನಾಥ




ಒಳ್ಳೆಯ ಸಾಂದರ್ಭಿಕ ಕವಿತೆ