ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೆಂಡದಂತೆ ಕಾದಿದೆ
ಪಲ್ಲಂಗವಿಂದು ನಲ್ಲ
ಕಾರಣ ಈ ವಿರಹ
ಗ್ರೀಷ್ಮ ಋತುವು ಅಲ್ಲ

ಕದಪು ಕೆಂಪಾಗಿದೆ
ಬಿಸಿ ಉಸಿರು ತಾಗಿ
ನಲ್ಲ ಬಳಿ ಬರಲು
ತೋಳಲಿ ಬಳಸಲು

ನಿನ್ನ ಅನುಪಸ್ಥಿತಿ
ನಿತ್ಯವೂ ಕಾಡುತಿದೆ
ಅತಿಯಾದ ಪ್ರೀತಿಯೇ
ನನ್ನನ್ನು ಕೊಲ್ಲುತಿದೆ

ಒಮ್ಮೊಮ್ಮೆ ಬಿಸಿಗಾಳಿ
ಮಗದೊಮ್ಮೆ ತಂಗಾಳಿ
ಹವೆ ಬಲು ಚಂಚಲ
ಬಂಡೆ ಮಾತ್ರ ಅಚಲ

ಮೈ ಶಾಖ ಹೆಚ್ಚಿಸಿದೆ
ವೈಶಾಖದ ಬಿಸಿಲು
ಒಣಗಿ ಉದುರಿದೆ
ಮರಗಳ ಟಿಸಿಲು

ಊಟದಲಿ ಕೊಂಚವೂ
ತಿಳಿಯುತ್ತಿಲ್ಲ ಸ್ವಾದ
ಬಿಸಿಲ ತಾಪದಿಂದ
ಮೊಗದ ತುಂಬ ಸ್ವೇದ

ಬದುಕೀಗ ನರಕ
ಹೆಚ್ಚಿದೆ ತಾಪಮಾನ
ಕಾದ ಕಾವಲಿ ಭೂಮಿ
ಕಾಣದಾದ ವರುಣ

ತಡೆಯಬಲ್ಲೆ ನಾನು
ಬೇಸಿಗೆಯ ಈ ಧಗೆ
ಸಹಿಸಲಾರೆ ಎಂದೂ
ನಲ್ಲನಾದರೆ ಹಗೆ

ಕೆರೆ ಕುಂಟೆಗಳೀಗ
ನೀರಿಲ್ಲದೇ ಬರಡು
ನಿನ್ನ ಸ್ಪರ್ಶವಿರದೇ
ತನುವಿಂದು ಕೊರಡು

ಅಪರೂಪದ ಮಳೆ
ರಸ್ತೆ ಗುಂಡಿ ತುಂಬಿತು
ಹರುಷದಿಂದ ಮಗು
ಅಲ್ಲಿ ಕುಪ್ಪಳಿಸಿತು


About The Author

Leave a Reply

You cannot copy content of this page

Scroll to Top