ಕಾವ್ಯಸಂಗಾತಿ
ಡಾ.ಅನ್ನಪೂರ್ಣ ಹಿರೇಮಠ
ಗಜಲ್


ನೀನಿರದ ಏಕಾಂತ ಕೊಲ್ಲುತಿದೆಯೋ ಕಾಂತ
ನೀನಿಲ್ಲದ ಬೇಸರವೇ ಸುಡುತಿದೆಯೋ ಕಾಂತ
ಹೇಳಲಾಗದ ದುಃಖ ತಾನೇ ಬಿಕ್ಕಳಿಸುತಿದೆ ಅಲ್ಲೇ
ಕಕ್ಕುಲತೆಯ ಒಲವು ಸೋರಗುತಿದೆಯೋ ಕಾಂತ
ಒಡಲಾಳದೆ ಕೋಲಾಹಲವೆದ್ದು ವಿರಹದ ಗಾಳಿ
ಮುತ್ತುಗಳಿಲ್ಲದ ಗಲ್ಲ ನಿಲ್ಲದಾಗಿದೆಯೋ ಕಾಂತ
ನೋವು ಸುಡುಗಾಡನೇ ಮೆದ್ದು ಪೆದ್ದಾಗಿದೆ ಬಿದ್ದು
ಸರಸವಿಲ್ಲದ ಸೊಲ್ಲು ಅಡಗೋಗಿದೆಯೋ ಕಾಂತ
ಅದೇನೋ ತಳಮಳ ತಾಪದೆ ಒದ್ದಾಡುತಿದೆ ನೆನಪ
ಅಪ್ಪುಗೆಗಾಗಿ ತನು ತೊಳಲಾಡುತಿದೆಯೋ ಕಾಂತ
ಜೀವಕುಸುಮದಂಬಲ ಹಲುಬಿ ಹಿಂಡುತಿದೆ ಹಿಸುಕಿ
ಹಸಿದ ಕಣ್ಣಂಚಿನ ಕಾತುರ ಕಂಗೆಟ್ಟಿದೆಯೋ ಕಾಂತ
ಅನುಳ ವೇದನೆ ಒಂದೇ ಸವನೆ ಕತ್ತು ಕೊಯ್ಯುತಿದೆ
ಭರವಸೆಯೇ ಮಣ್ಣಾಗಿ ಕೊಳೆಯುತಿದೆಯೋ ಕಾಂತ

ಡಾ ಅನ್ನಪೂರ್ಣ ಹಿರೇಮಠ
