ಉದಾಹರಣೆ

ಕಥೆ

ಮಧುರಾ ಕರ್ಣಮ್

ಎಲ್ಲ ಸರಿ ಇದ್ದವರು ಸುಮ್ಮನಿರಲಾಗದೇ ಮೈಮೇಲೆ ಇರುವೆ ಬಿಟ್ಕೊಂಡು ತುರಸ್ಕೋತಾರಂತೆ. ಹಾಗಾಗಿದೆ ನನ್ನ ಕತೆ. ನೀವು ಹೇಳಿದ್ರೆ ನಂಬ್ತೀರೋ ಇಲ್ಲವೋ, ಜನಕ್ಕೆ ನೂರೆಂಟು ತಾಪತ್ರಯಗಳು. ವೃದ್ಧರಿಗಂತೂ ಸಾವಿರದೆಂಟಂದ್ರೂ ಪರವಾಗಿಲ್ಲ. ಅಪರೂಪಕ್ಕೆ ನನಗೆ ತೊಂದರೆಗಳೇ ಇಲ್ಲದಂತಿದ್ದೆ. ‘ತೊಂದರೆಗಳು ನಾವು ನೋಡುವ ದೃಷ್ಟಿಯಲ್ಲಿರುತ್ತವೆ ಬಿಡಿ. ಆದ್ರೂನೂ ನನಗೆ ಒಂದೇ ಒಂದು ಕೊರತೆ ಅನಿಸಿದ್ದು ನನ್ನ ಪತ್ನಿ ಜಾನ್ಹವಿ, ಜಾನೂ ಇಲ್ಲದ್ದು. ಕೈಹಿಡಿದವಳು ಕೈಬಿಟ್ಟು ನಡೆದು ಆಗಲೇ ಹತ್ತು ವರ್ಷಗಳಾಗಿದ್ದವು. ಅದನ್ನು ಬಿಟ್ಟರೆ ಮೂರು ಜನ ಮಕ್ಕಳು ತಮ್ಮ ಪತ್ನಿಯರು, ಮಕ್ಕಳೊಂದಿಗೆ ಆರಾಮವಾಗಿದ್ದಾರೆ. ಮುವರೂ ಸಾಫ್ಟವೇರೇ. ಹಿರಿಯವ ಮುಕುಲ್ ಕಂಪನಿಯೊಂದರಲ್ಲಿ ಎ.ವಿ.ಪಿ. ಆಗಿದ್ದಾನೆ. ಎರಡನೆಯವ ನಕುಲ್ ಸಾಫ್ಟವೇರ್ ಜೊತೇನೆ ಅಮೆರಿಕಾ ಸೇರಿದ್ದಾನೆ. ಕೊನೆಯವ ಬಕುಲ್ ಮುಂಬಯಿ ಸೇರಿಕೊಂಡಿದ್ದಾನೆ. ಸೊಸೆಯಂದಿರು ಮೂವರು ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಒಳ್ಳೆಯವರೇ. ನನ್ನ ತಂಟೆಗೇನೂ ಬರುವದಿಲ್ಲ. ನಾನು ಎಂದಿಗೂ ಅವರು ಧರಿಸುವ ಬಟ್ಟೆ, ಮಾಡುವ ಖರ್ಚು ಶಾಪಿಂಗ್ಗಳ ಉಸಾಬರಿ ಮಾಡುವದಿಲ್ಲ.

            ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವಂತೆ, ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ಕಾಲೇಜಿಗೆ ಮಣ್ಣು ಹೊತ್ತು ಪೋಸ್ಟಲ್ ಡಿಪಾರ್ಟಮೆಂಟಿಗೆ ಸೇರಿದ್ದೆ. ಮಕ್ಕಳ ಓದಿಗೆಂದು ಪುಣೆಗೆ ಬಂದವರು ಅಲ್ಲೇ ನೆಲೆ ನಿಂತೆವು. ಜೀವನವೂ ನಿಧಾನವಾಗಿ ಪುಣೇರಿ ಧಾಟಿಯಲ್ಲೇ ಬದಲಾಗತೊಡಗಿತ್ತು. ಅವಶ್ಯಕ ವಿಷಯಗಳ ಬಗ್ಗೆ ಮಾತ್ರ ಮಾತು, ಚರ್ಚೆ ಇತ್ಯಾದಿ. ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರ ಆರಿಸಿಕೊಂಡರು. ಹಾಗೇ ಪತ್ನಿಯರನ್ನೂ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೆಂದಳು ಜಾನ್ಹವಿ. ಯಾವಾಗಲೋ ಒಮ್ಮೆ ಹೋಗಿ ಬರುತ್ತಿದ್ದ ಧಾರವಾಡದ ನಂಟು ಪೂರ್ತಾ ಕಡಿಮೆಯಾಯಿತು.

            ಲಕ್ಷ್ಮಿ ರೋಡಿನ ಈ ಚಾಳದಲ್ಲಿ ನಲವತ್ತು ವರ್ಷಗಳ ಹಿಂದೆ ನಾವು ಹೊಸದಾಗಿ ಬಂದಾಗ ವಾಸಿಸಲಾರಂಭಿಸಿದ ಮನೆಯಲ್ಲೇ ಇಂದಿಗೂ ನಮ್ಮ ವಾಸ. ಹಳೆಯ ಮನೆಗಳು. ಅರವತ್ತು ರೂಪಾಯಿಗಳ ಬಾಡಿಗೆ. ಆಗಲೋ ಈಗಲೋ ಎನ್ನುವಂತಿದ್ದರೂ ಇನ್ನೂ ಏನೂ ಆಗಿಲ್ಲ. ನನ್ನ ಹಣೆಬರಹದಂತೆ ಗಟ್ಟಿಮುಟ್ಟಾಗಿವೆ. ಹಿಂದೆಯೇ ತುಳಸಿ ಬಾಗ. ಪುಣೆಯ ಖ್ಯಾತ ಮಾರುಕಟ್ಟೆ. ಅಲ್ಲಿ ಸದಾ ಸಂತೆಯೇ. ರಾತ್ರಿ ಹನ್ನೊಂದು ಗಂಟೆಯಲ್ಲೂ ಬೇಕಾದ್ದು ಸಿಗುತ್ತಿತ್ತು. ಆದರೆ ವ್ಯಾಪಾರಿಗಳ ಗಲಾಟೆ, ಚಿಕ್ಕ ಚಿಕ್ಕ ಖೋಲಿಗಳ ಮನೆ ಮಕ್ಕಳು ದೊಡ್ಡವರಾದಂತೆ ಅವರಿಗೆ ಹಿಡಿಸಲಿಲ್ಲ. ಮುಕುಲ್ ‘ಸಾರ್ಗೇಟ್’ನಲ್ಲಿ ದೊಡ್ಡ ಮನೆ ಮಾಡಿದ. ನಮ್ಮನ್ನೂ ಅಲ್ಲಿಗೇ ಕರೆದ. ಯಾಕೋ ಚಾಳ ಬಿಟ್ಟು ಹೋಗಲು ಮನಸ್ಸೊಪ್ಪಲಿಲ್ಲ. ಆದರೆ ಮೂರೂ ಮಕ್ಕಳ ಮದುವೆ, ಹೆಂಡಿರ ಸೀಮಂತ, ಮೊಮ್ಮಕ್ಕಳ ಜಾವಳ ಇತ್ಯಾದಿಗಳು ಈ ಗುಬ್ಬಿಗೂಡಿನಲ್ಲೇ ನಡೆದವು. ನಕುಲ್ ಹೆಂಡತಿಯೊಂದಿಗೆ ಅಮೆರಿಕಾ ಸೇರಿದವ ಆಗಾಗ್ಗೆ ಬಂದು ಹೋಗುತ್ತಾನೆ. ಬಕುಲ್ ಮುಂಬೈನಲ್ಲೇ ಓನರ್ಶಿಪ್ ಮೇಲೆ ಫ್ಲಾಟ್ ಕೊಂಡು ಆರಾಮವಾಗಿದ್ದಾನೆ.

            ಮೊಮ್ಮಕ್ಕಳನ್ನು ಕಂಡ ಕೆಲವೇ ದಿನಗಳಲ್ಲಿ ಜಾನು ಹೋಗಿಬಿಟ್ಟಳು. ಕುಳಿತವಳು ಎದ್ದು ಹೋದಂತೆ. ಒಂದು ದಿನವೂ ಮಲಗಲಿಲ್ಲ. ‘ಎದೆನೋವು’ ಎಂದವಳು ನನ್ನ ಕೊಂಡಿಯಿಂದ ಕಳಚಿಕೊಂಡುಬಿಟ್ಟಳು. ಆಗಿನಿಂದಲೇ ನಾನು ಒಬ್ಬಂಟಿ. ಹತ್ತು ವರ್ಷಗಳು ಯಾಂತ್ರಿಕವಾಗಿ ಸಾಗಿದ್ದವು. ಶುಗರ್, ಬಿ.ಪಿ. ಇದ್ದರೂ ತೊಂದರೆ ಕೊಡಲಿಲ್ಲ. ನಿತ್ಯ ಒಂದು ಡಯಾನಿಲ್, ಒಂದು ಲೋಸಾರ್ ನುಂಗಿದರಾಯಿತು. ಹೀಗಾಗಿ ಚಾಳಿನ ಮನೆಯನ್ನೇನೂ ಬಿಟ್ಟಿರಲಿಲ್ಲ. ನಿತ್ಯ ಸಾರ್ಗೇಟ್ನಲ್ಲಿರುವ ಮಗನ ಮನೆಗೆ ವಾಕಿಂಗ್ ಮಾಡುತ್ತಾ ಹೋಗಿ ತಿಂಡಿ, ಊಟ ಮುಗಿಸಿ ಒಂದಿಷ್ಟು ಓಡಾಡಿ, ನಿವೃತ್ತರೊಂದಿಗೆ ಕಾಲ ಕಳೆದು, ದೇವಸ್ಥಾನ, ಲೈಬ್ರರಿಗಳಿಗೆ ಭೇಟಿ ನೀಡಿ ರಾತ್ರಿ ಊಟ ಮುಗಿಸಿಯೇ ಮನೆ ಸೇರುವದಿತ್ತು. ಮನೆ ಕೀಲಿ ಹಾಕಿಕೊಂಡು ಮುಂಬೈಗೆ ಹೋದರೆ ಮೂರು ತಿಂಗಳು ಪುಣೆಯತ್ತ ಹೊರಳುತ್ತಿರಲಿಲ್ಲ. ನಕುಲ್ ಎರಡು ಬಾರಿ ಅಮೆರಿಕೆಗೆ ಕರೆಸಿಕೊಂಡಿದ್ದ. ನಯಾಗರ ನೋಡಿಕೊಂಡು ಬಂದಿದ್ದೆ. ಪಾಪ, ಜಾನು ಏನೂ ನೋಡಲಿಲ್ಲ. ಅವಳ ಜೀವನವೆಲ್ಲ ಕತ್ತೆಯಂತೆ ದುಡಿದು ಗಂಡ, ಮಕ್ಕಳಿಗೆ ಚಪಾತಿ, ಪಲ್ಯದ ಡಬ್ಬಿ ಕಟ್ಟಿದ್ದೇ ಬಂತು. ಮಕ್ಕಳ ಶ್ರೀಮಂತಿಕೆ, ಕಾರುಗಳು, ಚಿನ್ನ ಏನೂ ಕಾಣಲಿಲ್ಲ. ಅವಳಿಗೊಂದೆರೆಡು ಒಡವೆ  ಕೂಡ ಕೊಡಿಸಲಾಗಲಿಲ್ಲ. ಹೇಗೆ ಕೊಡಿಸುತ್ತಿದ್ದೆ? ಮೂರು ಮಕ್ಕಳ ಶಿಕ್ಷಣ, ಪುಣೆಯಲ್ಲಿ ಜೀವನ ಎಂದರೆ ಹುಡುಗಾಟವೇ? ಹಾಸಿದರೆ ಹೊದೆಯಲಿಲ್ಲ, ಹೊದ್ದರೆ ಹಾಸಲಿಲ್ಲ ಎಂಬಂಥ ಪರಿಸ್ಥಿತಿ. ಹೊಂದಾಣಿಕೆ ಮಾಡಿಕೊಳ್ಳುತ್ತಲೇ ನಮಗಾಗಿ ಬದುಕು ಕಳೆದುಬಿಟ್ಟಳು. ಏನೇ ಆದರೂ ನಾವಿಬ್ಬರೂ ಸಂಕಷ್ಟಿಯಂದು ‘ಪರ್ವತಿ’ಯಲ್ಲಿದ್ದ ಗಣಪತಿಯ ದರ್ಶನ ತಪ್ಪಿಸುತ್ತಿರಲಿಲ್ಲ. ಇಬ್ಬರೂ ಸೇರಿ ದರ್ಶನ ಮಾಡಿಕೊಂಡು ಎದುರಿನ ಹೊಟೆಲ್ನಲ್ಲಿ ಸಂಕಷ್ಟಿಯ ಸ್ಪೆಶಲ್ ಸಾಬೂದಾಣೆಯ ವಡೆ, ಬಟಾಟೆಯ ಹಪ್ಪಳ ತಿಂದು ಬರುತ್ತಿದ್ದೆವು. ಈಗ ಯಾಂತ್ರಿಕವಾಗಿ ಒಬ್ಬನೇ ಹೋಗುತ್ತೆನೆ.

            ಆ ಬಾರಿ ಅಂಗಾರಕ ಸಂಕಷ್ಟಿ ಬೇರೆ. ಪರ್ವತಿಯಲ್ಲಿ ಗಣಪತಿಯ ದರ್ಶನಕ್ಕೆ ಉದ್ದಾನುದ್ದ ಸಾಲು. ಸರತಿಯ ಸಾಲಿನಲ್ಲಿ ಯಾವುದೋ ಪರಿಚಿತ ಮುಖ ಕಂಡಂತಾಯಿತು. ನನ್ನಿಂದ ಅನತಿ ದೂರದಲ್ಲೇ. ತಲೆ ಕೆರೆದುಕೊಂಡು ಯೋಚಿಸಿದಾಗ ಚಿತ್ತಭಿತ್ತಿಯಲ್ಲಿ ಮೀನಾ ಕಂಡುಬಂದಳು. ಹೌದು, ಅವಳೇ ನನ್ನ ತಂಗಿ ಸುರೇಖಾಳ ಗೆಳತಿ ಮೀನಾ. ಸುರೇಖಾ ಮತ್ತು ಮೀನಾ ಆಟ್ರ್ಸ ತೆಗೆದುಕೊಂಡು ಧಾರವಾಡದ ಜೆ.ಎಸ್.ಎಸ್. ಕಾಲೇಜಿಗೆ ಹೋಗುತ್ತಿದ್ದರು. ಆಗ ನನ್ನದೂ ಹದಿ..ಹದಿ..ಹರಯ. ಅವಳ ಜಿಂಕೆಗಂಗಳ ಮೋಡಿಗೆ ಸಿಲುಕಿದ್ದೆ. ತೊಡುತ್ತಿದ್ದ ಲಂಗ, ದಾವಣಿ, ಸೀರೆ ಅವಳ ಮೈಮಾಟಕ್ಕೊಪ್ಪುತ್ತಿದ್ದವು. ಮಾತನಾಡಿಸಬೇಕೆಂಬ ಬಯಕೆ ತೀವ್ರವಾಗಿತ್ತು. ಆದರೆ ಅಪ್ಪನ ಹೆದರಿಕೆ. ಅಲ್ಲದೇ ಸುರೇಖಾ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದಳು. ಕೊನೆಗೆ ಧಾರವಾಡ ರೆಸ್ಟೋರೆಂಟ್ ಪಕ್ಕ ಅವಳು ಟೈಪಿಂಗ್ ಕ್ಲಾಸಿಗೆ ಹೋಗುವದನ್ನು ತಿಳಿದುಕೊಂಡು ಅಲ್ಲೇ ಹೋಗಿ ಮಾತನಾಡಿಸಿದೆ. ಬಹುಶ: ಅವಳಿಗೂ ನನ್ನ ಮೇಲೆ ಆಕರ್ಷಣೆ ಇತ್ತು. ಹೀಗಾಗಿ ಹೆದರದೇ ಮುಗುಳ್ನಗುತ್ತ ಮಾತನಾಡಿದಳು. ಇಬ್ಬರೂ ಮೊದಲೇ ನಿಶ್ಚಯಿಸಿಕೊಂಡು ಒಮ್ಮೆ ನುಗ್ಗೀಕೇರಿಗೆ ಹೋಗಿದ್ದೆವು. ಹನುಮಪ್ಪನ ದರ್ಶನ ಪಡೆದು ಮುಂದೆ ಮರದ ನೆರಳಿನಲ್ಲಿ ಕುಳಿತು ಪ್ರೇಮ ನಿವೇದನೆ ಮಾಡುತ್ತಾ ಅವಳ ಮುಂಗೈಯನ್ನು ತುಟಿಗೊತ್ತಿಕೊಂಡಿದ್ದೆ. ರೋಮಾಂಚನವಾಗಿತ್ತು. ತಕ್ಷಣ ಅವಳು ನಾಚಿಕೊಂಡು ಕೈ ಕೊಸರಿಕೊಂಡು ಓಡಿಹೋಗಿದ್ದಳು. ಮಾತಿಗೆ ನಿಲುಕದ ಸುಖ. ಜನ್ಮಪೂರ್ತಾ ಮರೆಯಲಾಗಿರಲಿಲ್ಲ.

            ಮುಂದೆ ನಾನು ಅಂಚೆ ಇಲಾಖೆ ಸೇರುತ್ತಿದ್ದಂತೆ ಸುರೇಖಾಳ ಮದುವೆಯಾಗಿತ್ತು. ಅವಳ ಮದುವೆಯಲ್ಲಿ ನಮ್ಮಿಬ್ಬರ ಓಡಾಟ ಕಂಡು ಕೆಲವರ ಕಣ್ಣು ಕೆಂಪಾಗಿದ್ದವು. ಮದುವೆ ಗಲಾಟೆ ಮುಗಿಯುತ್ತಿದ್ದಂತೆ ಅಪ್ಪ ಗುಡುಗಿದ್ದರು. ಅವರದು ಬ್ಯಾರೇ ಜಾತಿ. ನಿನಗ ಹುಡುಗಿನ್ನ ನಾವು ನೋಡೇವಿ ಎಂದಿದ್ದರು. ಅತ್ತ ಮೀನಳ ಮನೆಯಲ್ಲೂ ವಾಸನೆ ಬಡಿದಿತ್ತು. ವಾರದೊಳಗೇ ಅವಳ ಮದುವೆ ಗೊತ್ತಾಗಿತ್ತು. ನನಗೊಂದು ಭೇಟಿಗೂ ಅವಕಾಶವಾಗದಂತೆ ಮದುವೆ ಮುಗಿದು ಹೋಯಿತು. ರಾತ್ರಿ ಹೊದಿಕೆಯ ಒಳಗೇ ದು:ಖಿಸಿದ್ದೆ. ಮುಂದೆ ಜಾನು ನನ್ನ ಕೈಹಿಡಿದಳು. ಎಲ್ಲ ತೆರೆಯ ಮೇಲೆ ಸರಿಯುವ ರೀಲಿನಂತೆ. ಹಾಗೇ ಇದ್ದಾಳೆ. ಹೆಚ್ಚೇನೂ ಬದಲಾಗಿಲ್ಲ. ಮುಖದ ಮೇಲಿನೊಂದೆರಡು ಸುಕ್ಕುಗಳು, ಕಣ್ಣಸುತ್ತ ಕಪ್ಪು ವರ್ತುಲ

, ನೋವಿನ ಗೆರೆಗಳನ್ನು ಬಿಟ್ಟು.. ..

            ಗಣೇಶನ ದರ್ಶನ ಮಾಡಿಕೊಂಡು ಹುಡುಕುತ್ತ ಬಂದಾಗ ದೇವಾಲಯದ ಆವರಣದಲ್ಲೇ ಅವಳು ಪ್ರಸಾದದೊಂದಿಗೆ ಕುಳಿತಿರುವದು ಕಂಡಿತು. ತಟಕ್ಕನೇ ಮುಂದೆ ನಿಂತು  ಹೆಂಗಿದ್ದೀ ಮೀನಾ? ಎಂದೆ. ಅವಳು ಕಣ್ಕಣ್ಣು ಬಿಟ್ಟು ನೋಡಿದಳು. ನನ್ನ ಅರ್ಧ ಸಪಾಟಾದ ತಲೆ ಗುರುತು ಸಿಗಲು ತೊಡಕಾಗಿತ್ತು. ನಂತರ ಪ್ರ..ಕಾ..ಶ ? ಎಂದಳು ಪ್ರಶ್ನಾರ್ಥಕವಾಗಿ. ಹೌದು ಎನ್ನುತ್ತ ಕತ್ತಾಡಿಸಿದೆ. ನೀ ಹೆಂಗೋ ಇಲ್ಲೇ? ಎಂದಳು. ಅಲ್ಲೆ ಹೋಗೋಣ ಎಂದು ಕೊಂಚ ದೂರದ ಪಾರ್ಕ್ ಗೆ ಹೋಗಿ ಕುಳಿತೆವು. ನಾನು ನನ್ನ ಪ್ರವರವನ್ನೆಲ್ಲಾ ಹೇಳಿದೆ. ಕೇಳಿಸಿಕೊಂಡು ತನ್ನದನ್ನೂ ಹೇಳಿದಳು. ಹೇಳ್ಲಿಕ್ಕೆ ಭಾಳೇನಿಲ್ಲೋ ಪ್ರಕಾಶ. ಅವರದು ಸರ್ಕಾರಿ ಆಫೀಸಿನ್ಯಾಗ ಸ್ಟೆನೋ ಕೆಲಸಿತ್ತು. ಎರಡು ಮಕ್ಕಳು. ಮಗಳು ಮದಿವ್ಯಾಗಿ ‘ನಾಸಿಕ’ನ್ಯಾಗಿದ್ದಾಳ. ಮಗ ಭಾಸ್ಕರ ಪುಣೇದಾಗ ಬ್ಯಾರೇ ಮನಿ ಮಾಡಿಕೊಂಡು ಹೆಂಡ್ತಿ ಜೋಡಿ ಇದ್ದಾನ. ಅವರು ಹೋಗಿ ಹತ್ತು ವರ್ಷಾತು. ನಾ ಒಬ್ಬಾಕಿನ ಸಾರ್ಗೇಟ್ ಕಡೆ ಖೋಲಿ ಬಾಡಿಗಿಗೆ ತೊಗೊಂಡಿದ್ದೇನಿ. ಎಂದು ಮೌನವಾದಳು

.

            ಅಂದು ಮನೆಗೆ ಹಿಂತಿರುಗಿ ಬಂದರೂ ಮೀನಳ ಗುಂಗು ಆವರಿಸಿತ್ತು. ನಾವಿಬ್ಬರೂ ಸಮದು:ಖಿಗಳಿದ್ದಂತೆ. ಹೆಚ್ಚು ಕಡಿಮೆ ಜಾನು ಹೋದಾಗಲೇ ಅವಳ ಗಂಡನೂ ಹೋಗಿದ್ದು. ಅವಳದೂ ಒಂಟಿ ಜೀವ. ರಾತ್ರಿಯೆಲ್ಲ ಏಕೋ ಧಾರವಾಡದ ನುಗ್ಗಿಕೇರಿಯ ನಮ್ಮ ಭೇಟಿಯ ನೆನಪು ಮೂಡಿ ಬಂದಿತ್ತು. ಮುಂದಿನ ದಿನಗಳಲ್ಲಿ ನಾನು ಅನೇಕ ಬಾರಿ ಸಾರ್ಗೇಟ್ನ ಅವಳ ಮನೆಗೆ ಭೇಟಿ ಇತ್ತಿದ್ದೆ. ಅವಳೂ ನನ್ನ ಮನೆಗೆ ಬಂದು ಹೋಗಿದ್ದಳು. ಹಾಗೇ ನಮ್ಮ ಒಡನಾಟ ಬೆಳೆದು ವಾರಕ್ಕೆ ಎರಡು ಮೂರು ಬಾರಿಯಾದರೂ ನಾವು ಭೇಟಿಯಾಗುವಂತಾಯಿತು. ಹೆದರಿಸಲು ಇಲ್ಲೇನು ಅಪ್ಪನ ಕಣ್ಣುಗಳಿರಲಿಲ್ಲ. ಅಮ್ಮನ ನೊಂದ ಮುಖವಿರಲಿಲ್ಲ.

            ಈ ಮನಸ್ಸಿನ ಕಥೆಯನ್ನೇ ನಾನು ಹೇಳಿದ್ದು. ಎಷ್ಟು ವಿಚಿತ್ರ ನೋಡಿ. ಹೆಂಡತಿ ಎಂಬ ಚೌಕಟ್ಟಿದ್ದರೆ ಒಳಗೇ ಹರಿದಾಡಿಕೊಂಡಿರುತ್ತದೆ. ಇಲ್ಲವಾದರೆ ಎಲ್ಲೆಲ್ಲೋ ನುಗ್ಗಿ ಒಡ್ಡು ಮೀರಿ ಹರಿಯುತ್ತ.. ..ಮೊರೆಯುತ್ತದೆ. ನನಗೀಗ ಅರವತ್ತೆರಡು ವರ್ಷಗಳು. ಇತ್ತೀಚೆಗೆ ನನಗೆ ‘ಮೀನಳನ್ನೇಕೆ ಮದುವೆಯಾಗಬಾರದು?’ ಎನಿಸಿತ್ತು. ಅಂದು ಅಪ್ಪನ ಹೆದರಿಕೆಯಿಂದ ನಿಂತು ಹೋದ ಪ್ರೀತಿ ಮತ್ತೆ ಮುಂದುವರೆಯಬಹುದಲ್ಲ. ನನ್ನ ಮಕ್ಕಳಂತೂ ಬೇಡವೆನ್ನಲಿಕ್ಕಿಲ್ಲ. ‘ಫಾರ್ವರ್ಡ’ಹುಡುಗರು. ಬೇರೆ ಏನೂ ಜಂಜಡವಿಲ್ಲ. ಇಬ್ಬರೂ ಸಮದು:ಖಿಗಳು. ಜೋಡಿಯಾಗಿ ವೃದ್ಧಾಪ್ಯ ಕಳೆಯಬಹುದು. ಈ ವಯಸ್ಸಿಗೆ ಅವಶ್ಯಕವಾಗಿ ಬೇಕಾಗುವದು ‘ಸಾಂಗತ್ಯ.’ ಇಬ್ಬರೂ ಒಬ್ಬರಿಗೊಬ್ಬರು ಆಸರೆಯಾಗಿ ಹೆಜ್ಜೆ ಹಾಕಿದರೆ.. ಅನೇಕ ‘ರೇ..ಳು ಮನದಲ್ಲಿ ಸುಳಿದವು. ನುಗ್ಗೀಕೇರಿಯ ಆಲದ ಮರದಡಿಯ ಚಿತ್ರ ಮುಂದೋಡಿ ಉತ್ತುಂಗ ಸುಖ ತಂದಿಡುವಂತೆ ಭಾಸವಾಯಿತು. ವಿಷಯ ಪ್ರಸ್ತಾಪಿಸಿದಾಗ ಮೀನಳಿಗೆ ಅಚ್ಚರಿಯೇನೂ ಆಗಿರಲಿಲ್ಲ. ಬದಲಿಗೆ ನಿರೀಕ್ಷಿಸುತ್ತಿದ್ದವಳಂತೆ ಸಮ್ಮತಿಸಿದ್ದಳು. ನನಗ ಇಬ್ಬರು ಮಕ್ಕಳಿದ್ದಾರಂತ ಹೇಳಿದೆನಲ್ಲ ಪ್ರಕಾಶ. ನೀ ಬೇಕಾದರೆ ಅವರಿಬ್ಬರನ್ನೂ ಒಮ್ಮೆ ಭೆಟ್ಟಿ ಮಾಡು ಎಂದಿದ್ದಳು. ನಾನು ಹೀರೋನ ಪೋಸು ಕೊಟ್ಟು ಬೇಕಾಗಿಲ್ಲ ಮೀನಾ. ನಿನ್ನ ಮಕ್ಕಳಂದ್ರ ನನ್ನ ಮಕ್ಕಳಿದ್ದಂಗ. ನನಗಂತೂ ಹೆಣ್ಣು ಮಕ್ಕಳಿಲ್ಲ. ಹಿಂಗರೆ ಒಬ್ಬಾಕಿ ಮಗಳು ಸಿಕ್ಕಂಗಾತು. ಎಂದಿದೆ.್ದ

            ನನ್ನ ಮಕ್ಕಳಿಗೆ ವಿಷಯ ತಿಳಿಸಿದಾಗ ಅಚ್ಚರಿಯಿಂದ ಹುಬ್ಬೇರಿಸಿದರು. ಸೊಸೆಯಂದಿರೂ ಆಶ್ಚರ್ಯಚಕಿತರಾದರೂ ಬದಲು ಹೇಳಲಿಲ್ಲ. ಎಲ್ಲರ ಪರವಾಗಿ ಮುಕುಲ್ ಮಾತನಾಡಿದ್ದ. ದಾದಾ, ನಿಮ್ಮ ಇಚ್ಛಾಕ್ಕ ನಾವು ಅಡ್ಡ ಬರಂಗಿಲ್ಲ. ಆದ್ರ ನಮ್ಮವ್ವನ್ನ ನಾವು ಮರೀಲಿಕ್ಕಾಗೂದಿಲ್ಲ… .. ಎಂದಿದ್ದ. ಹೌದಲ್ಲ, ಇಷ್ಟೂ ದಿನಗಳೂ ಮೀನಳ ಭೇಟಿಯಾದಾಗಿನಿಂದ ನನ್ನ ಜಾನ್ಹವಿಯ ನೆನಪೇ ಬರದಷ್ಟು ಮರೆತು ಹೋಗಿದ್ದೆ. ‘ಈ ವಯಸ್ಸಿನಲ್ಲಿ..  ಮದುವೆಯಾಗಿ.. ಜಾನ್ಹವಿಗೇನಾದರೂ ಮೋಸ ಮಾಡುತ್ತಿದ್ದೇನಾ?’ ಎಂಬ ವಿಚಾರ ಒಳಹೊಕ್ಕು ತಲೆಯೆಲ್ಲ ಚಿಟ್ಟೆಂದಿತು. ‘ಉಹ್ಞೂಂ, ನಾನು ಜಾನ್ಹವಿಗೇನೂ ಅನ್ಯಾಯ ಮಾಡುತ್ತಿಲ್ಲ. ಒಮ್ಮೆ ನಿರ್ಧರಿಸಿ ಆಗಿದೆ. ಇನ್ನು ಮುಂದುವರೆದೇ ಸೈ’ ಎಂದು ತೀರ್ಮಾನಿಸಿದೆ. ಅಕ್ಕ ಪಕ್ಕದ ಒಂದೆರೆಡು ಮನೆಯವರಿಗೆ ವಿಷಯ ತಿಳಿಸಿದೆ. ಕೆಲವರು ಕಣ್ಣರಳಿಸಿದರು. ಹಲವರು ಸಂತೋಷದಿಂದ ಕಂಗ್ರಾಚುಲೇಷನ್ಸ ಎಂದರು. ಹಿಂದೆ ಆಡಿಕೊಂಡು ನಕ್ಕವರೂ ಇದ್ದರೆನ್ನಿ. ಏನೋ ಸಂತೋಷ, ಹುರುಪು.. ಮಹಾಬಲೇಶ್ವರದಲ್ಲಿ ಒಂದು ವಾರ ಮಜವಾಗಿ ಕಳೆದು ಬಂದು ಸಂಸಾರ ಆರಂಭಿಸಬೇಕು. ಏನೇನೋ ಕನಸುಗಳು, ಕನವರಿಕೆಗಳು…

            ನಿರೀಕ್ಷಿಸಿದಂತೆ ದೇವಸ್ಥಾನದಲ್ಲಿ ಹಾರ ಬದಲಾವಣೆ ಮಾಡಿಕೊಂಡು ಸರಳವಾಗೇ ಮದುವೆಯಾದೆವು. ಬಕುಲ್ ಗ್ರೀಟಿಂಗ್ಸ ಕಳಿಸಿದ್ದ. ನಕುಲ್ನಿಂದ ಶುಭಾಷಯದ ಸಂದೇಶ ಬಂದಿತ್ತು. ಮುಕುಲ್ ಒಬ್ಬನೇ ಬಂದು ಶುಭ ಹಾರೈಸಿದ. ಹೆಂಡತಿ, ಮಕ್ಕಳು ಬೇಸಿಗೆ ರಜಕ್ಕೆ ತವರಿಗೆ ಹೋಗಿದ್ದರಂತೆ. ಶಿಷ್ಟಾಚಾರದಂತೆ ನನಗೆ ಮೀನಳಿಗೆ ನಮಸ್ಕರಿಸಿ ಆಫೀಸಿಗೆ ಹೊರಟು ಹೋದ. ನಾವೇ ನವದಂಪತಿಗಳು ಪಾಂಚಾಲಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆವು. ಚಾಳದ ಕಣ್ಣುಗಳೆಲ್ಲ ಆನಂದಾಶ್ಚರ್ಯಗಳಿಂದ ನೋಡಿ ಶುಭ ಹಾರೈಸಿದರು. ಮೊದಲು ಬಂದು ಜಾನ್ಹವಿಯ ಫೋಟೋಕ್ಕೆ ಕೈ ಮುಗಿದೆ. ಮೀನ ನನ್ನನ್ನು ಅನುಸರಿಸಿದಳು. ಅಷ್ಟರಲ್ಲೇ ಅವಳ ಮೊಬೈಲ್ ಹಾಡು ಹೇಳಿತ್ತು. ಅವಳ ಮಗ ಭಾಸ್ಕರ ಮನೆಯ ದಾರಿ ಕೇಳಿದ್ದ. ಮುಂದೆರಡೇ ನಿಮಿಷಗಳಲ್ಲಿ ಆಯಿ, ದಾದಾ ಎನ್ನುತ್ತ ಬಂದು ನಮಸ್ಕರಿಸಿದ. ದೊಡ್ಡ ಹೂಗುಚ್ಛ, ರಸಗುಲ್ಲದ ಡಬ್ಬ ನೋಡಿ ಆನಂದವಾಯಿತು. ದಾದಾ, ನನಗ ಇನ್ನೊಮ್ಮೆ ಅಪ್ಪ ಸಿಕ್ಕಾರ ಎಂದು ಭಾವುಕನಾದ. ಮೀನಳ ಕಣ್ಣು ತುಂಬಿ ಬಂದವು. ನನಗೂ ಎಲ್ಲ ಬಹಳ ಆಪ್ಯಾಯಮಾನವೆನಿಸಿತು. ಮೀನಳ ಮಗಳು ಶ್ವೇತಾಳ ಟ್ರೇನು ತಡವಾಗಿ ಅವಳು ಮಕ್ಕಳೊಂದಿಗೆ ಸಂಜೆ ಬಂದಿಳಿದಳು. ಕಾಣಲು ಥೇಟ್ ಭಾಸ್ಕರನಂತೆಯೇ.  ಬರುತ್ತಲೂ ನನ್ನ ಪಾದಗಳಿಗೆ ಹಣೆಯೊತ್ತಿ ದಾದಾ ಎನ್ನುತ್ತ ನಮಸ್ಕರಿದಳು. ನನಗೆ ಶರ್ಟ, ಪ್ಯಾಂಟ ಬಟ್ಟೆ ಮತ್ತು ಮೀನಳಿಗೆ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಿದಳು. ಮೊಮ್ಮಕ್ಕಳು ಅಜ್ಜಿ, ಅಜ್ಜೋಬಾ ಎನ್ನುತ್ತ ನಮ್ಮ ಸುತ್ತ ಕುಣಿದಾಡಿದವು. 

            ರಾತ್ರಿ ನಮ್ಮ ಗುಬ್ಬಿಗೂಡಿನಲ್ಲಿ ಎಲ್ಲರಿಗೂ ಜಾಗ ಹೊಂದಿಸುವದೇ ದುಸ್ತರವಾಯಿತು. ಇನ್ನು ‘ಮೊದಲ ರಾತ್ರಿ’ಯ ಮಾತೇ ಇಲ್ಲ. ಮೊಮ್ಮಕ್ಕಳ ಎದಿರು ಅದೂ ಸರಿ ಎನಿಸಲಿಲ್ಲ. ಎರಡು ದಿನಗಳಿದ್ದು ಶ್ವೇತಾ ಹೊರಟಳು. ಮೀನ ಮೆತ್ತಗೆ ಮಗಳು ನಮ್ಮ ಮದಿವ್ಯಾದ ಮ್ಯಾಲೆ ಮದ್ಲೇ ಸಲ ಮನಿಗೆ ಬಂದಾಳಲಾ… ಎಂದು ರಾಗ ಎಳೆದಳು. ನನಗೂ ನಿಜವೆನಿಸಿತು. ‘ಹೆಣ್ಣುಮಕ್ಕಳಿಲ್ಲದ ನಮಗೆ ಇವೆಲ್ಲ ಸೂಕ್ಷ್ಮಗಳು ಗೊತ್ತಾಗುವದೇ ಇಲ್ಲ’ ಎಂದು ನಿಂದಿಸಿಕೊಂಡೆ. ದೊಡ್ಡತನ ತೋರಿಸಿಕೊಳ್ಳಲು ಡೆಬಿಟ್ ಕಾರ್ಡ್ ಕೊಟ್ಟು ಕಳಿಸಿದೆ. ಮಕ್ಕಳಿಗೆ ಬಟ್ಟೆ, ಶ್ವೇತಾಳಿಗೆ ಸೀರೆಯೋ, ಡ್ರೆಸ್ಸೋ ತರಲೆಂದು.  ಅವರು ಊಟ ಮಾಡಿ ನನಗಾಗಿ ಪಾರ್ಸೆಲ್ ಕಟ್ಟಿಸಿಕೊಂಡು ಬಂದಾಗ ರಾತ್ರಿ ಹತ್ತಾಗಿತ್ತು. ಮಕ್ಕಳು ಅಜ್ಜೋಬಾ.. ಎಂದು ಖುಷಿಯಿಂದ ಹೊಸ ಬಟ್ಟೆ ತೋರಿಸಿದವು. ಶ್ವೇತಾ ದಾದಾ..ದಾದಾ.. ಎಂದು ಅಕ್ಷರಶ: ಹಾರಾಡುತ್ತಲೇ ಎರಡು ತೊಲೆಯ ಚಿನ್ನದ ನೆಕ್ಲೆಸ್ ತೋರಿಸಿದಳು. ದಿಗ್ಭ್ರಾಂತನಾಗಿದ್ದೆ. ‘ಇಷ್ಟು ದೊಡ್ಡ ಉಡುಗೊರೆಯೇ?’ಎನ್ನುವ ಭಾವದಲ್ಲಿ ಮೀನಳತ್ತ ನೋಡಿದೆ. ತಲೆ ತಗ್ಗಿಸಿ ನಿಂತಿದ್ದಳು. ಏನೂ ಮಾತನಾಡದೆ ಪೆಚ್ಚು ಪೆಚ್ಚಾಗಿ ನಕ್ಕೆ. ಅಕಿ ಸ್ವಲ್ಪ ಹಠದ ಸ್ವಭಾವದಾಕಿ. ಬೇಕಂದದ್ದು ಬೇಕ ಅಕಿಗೆ.. .. ಎಂದು ಸಣ್ಣ ದನಿಯಲ್ಲಿ ಮೀನ ಅವಳು ಬಚ್ಚಲಿಗೆ ಹೋದಾಗ ಹೇಳಿದಳು. ನನ್ನ ಮಹಾಬಲೇಶ್ವರದ ಟ್ರಿಪ್ ಕರಗಿ ಶ್ವೇತಳ ಕೊರಳಲ್ಲಿ ಹಾರವಾಗಿತ್ತು.

            ನಂತರವೇ ನಮ್ಮ ನಿಜವಾದ ಸಂಸಾರ ಆರಂಭವಾಯಿತು. ಮೀನ ತನ್ನ ಖೋಲಿ ಖಾಲಿ ಮಾಡಿ ಸಾಮಾನುಗಳೊಂದಿಗೆ ಬಂದಳು. ಇಬ್ಬರೂ ಬೆಳಿಗ್ಗೆ ಚಹ ಕುಡಿದು ಒಂದು ಸುತ್ತು ವಾಕಿಂಗ್ ಮಾಡಿ ಬರುತ್ತಿದ್ದೆವು. ನಂತರ ಅಡಿಗೆ. ಮೀನಳಿಗೆ ಅಡಿಗೆ ಚೆನ್ನಾಗಿ ಬರುತ್ತಿತ್ತು ಜಾನ್ಹವಿಯಂತೆಯೇ. ಆದರೆ ಸ್ವಲ್ಪ ಸ್ಟಾರ್ಟಿಂಗ್  ಟ್ರಬಲ್.  ಮಾಡಲು ಸೋಮಾರಿತನ. ಅವಳ ಬಳಿ ಹಣವೇನೂ ಇರಲಿಲ್ಲ. ನನಗೆ ಅದು ಬೇಕಾಗೂ ಇರಲಿಲ್ಲ.

            ಮೀನ ಮನೆಗೆ ಬಂದಾಕ್ಷಣ ಕೆಲವು ಹೊಸ ಪಾತ್ರೆಗಳು, ಬೆಡ್ ಶೀಟುಗಳು, ಪರದೆ, ದಿಂಬು ಕೊಂಡು ತಂದಳು. ವರ್ಷಾನುಗಟ್ಟಲೆ ಬ್ರಹ್ಮಚಾರಿಯ ಸದನವಾಗಿದ್ದ ಮನೆಗೆ ಸಂಸಾರಸ್ಥರ ಕಳೆ ಬಂತು. ಮುಂದಿನ ತಿಂಗಳೇ ಮೀನಳ ಬರ್ತಡೇ ಬಂದಿತು. ಜಾನ್ಹವಿಗಂತೂ ಸಂಸಾರದ ಜಂಜಾಟದಲ್ಲಿ ಏನೂ ಕೊಡಿಸಲಾಗಲಿಲ್ಲ. ಇವಳಿಗೂ ಹಾಗಾಗಬಾರದು ಎನಿಸಿ ಹುಟ್ಟುಹಬ್ಬಕ್ಕೆ ಚಿನ್ನದ ಡಿಸೈನರ್ ಬಳೆ ಕೊಡಿಸಿದೆ. ಅವಳಿಗೆಷ್ಟು ಸಂತೋಷವಾಯಿತೆಂದರೆ… ..ವರ್ಣಸಲಸಾಧ್ಯ. ಇಬ್ಬರೂ ಅಂದು ಪಿಕ್ಚರ್ ನೋಡಿ, ಹೊಸ ಸೀರೆ ಖರೀದಿ ಮಾಡಿ ಹೊಟೆಲ್ನಲ್ಲೇ ಊಟ ಮಾಡಿ ಜಕ್ಕವಕ್ಕಿಗಳಂತೆ ನಲಿಯುತ್ತಾ ಬಂದೆವು. ನಮ್ಮ ಚಾಳದವರಿಗೆಲ್ಲ ನಾವು ಒಂದು ರೀತಿ ಉದಾಹರಣೆಯಾದೆವೆನ್ನಿ. ಮುಪ್ಪಿನತನದಾಗ ಮದಿವ್ಯಾದ್ರೂ ಎಂಜಾಯ್ ಮಾಡ್ಕೋತ ಎಷ್ಟ ಆರಾಮಿದ್ದಾರ ನೋಡ್ರಿ. ಎಂದು ಸಂತಸ, ಅಸೂಯೆ ಮಿಶ್ರಿತ ಸ್ವರದಲ್ಲಿ ಹೇಳುತ್ತಿದ್ದರು. ಸಂತಸದಿಂದ ಎದೆ ಕೊಂಚ ಉಬ್ಬಿದಂತಾಗಿ ಮೀನಳತ್ತ ನೋಡುತ್ತಿದ್ದೆ. ಅವಳೂ ಜಂಬದಿಂದ ಮುಗುಳ್ನಗುತ್ತಿದ್ದಳು.

            ಮೀನಳಿಗೆ ಐವತ್ತೈದು ವರ್ಷಗಳಷ್ಟೇ. ಲೈಂಗಿಕ ಸುಖಕ್ಕಾಗಿ ಹಾತೊರೆಯುತ್ತಿದ್ದಳೆಂಬುದು ಸ್ಪಷ್ಟವಾಗಿತ್ತು. ನನಗೋ ಮೊದಲೆಲ್ಲ ಉತ್ಸಾಹವಿದ್ದರೂ ನಂತರ ದೌರ್ಬಲ್ಯ, ನಿರಾಸಕ್ತಿ ಕಾಡತೊಡಗಿತ್ತು. ಬಿಟ್ಟು ಹತ್ತು ವರ್ಷಗಳೇ ಕಳೆದಿದ್ದವಲ್ಲ. ಅದೊಂದು ಸಣ್ಣ ತಲೆನೋವು ಅಂಟಿಕೊಂಡಿತು. ದೊಡ್ಡ ತಲೆನೋವು ಯಾವುದೆಂದಿರಾ? ಭಾಸ್ಕರ. ಅವನು ಬಿಸಿನೆಸ್ ಮಾಡುತ್ತಿದ್ದಾನಂತೆ. ಯಾವುದು? ಏನು? ಅಂದರೆ ‘ಪ್ಲಾಸ್ಟಿಕ್ ಪೈಪುಗಳನ್ನು ಬೆಂಡ್ ಮಾಡಿ ಮಾರುವದು’ ಎಂದ. ಒಂದು ದಿನ ಕರೆದುಕೊಂಡು ಹೋಗಿ ತೋರಿಸಿದ. ಪುಣೆಯ ಹೊರವಲಯ ಘೋರ್ಪಡಿಯಲ್ಲಿ ಒಂದು ಚಿಕ್ಕ ಸ್ಥಳದಲ್ಲಿ ಕೆಲಸ ನಡೆಯುತ್ತಿತ್ತು. ಸದ್ಯ ಐದು ಲಕ್ಷ ಬೇಕಾಗೇದ. ಎರಡು ತಿಂಗಳಿನ್ಯಾಗ ಪ್ರಾಫಿಟ್ ಬರ್ತದ. ಬಂದ ಕೂಡ್ಲೇ ವಾಪಸ್ ಕೊಟ್ಟುಬಿಡ್ತೇನಿ. ಎಂದು ಕುಳಿತ. ಮದುವೆಯಾಗಿ ಐದು ತಿಂಗಳಾಗಿಲ್ಲ. ಐದು ಲಕ್ಷ. ನಾನೇನೂ ಕೋಟಿಗಟ್ಟಲೇ ದುಡ್ಡು ಇಟ್ಟುಕೊಂಡು ಕುಳಿತ ಸಾಹುಕಾರನಲ್ಲ. ಮೊದಲು ಊಟ, ತಿಂಡಿ, ಬಟ್ಟೆಯೆಲ್ಲ ಮಕ್ಕಳ ಮನೆಯಲ್ಲೇ ಆಗಿ ಹೋಗುತ್ತಿತ್ತು. ನನ್ನ ಪಿಂಚಣಿ ಹಣ ನಾಮಮಾತ್ರ ಖರ್ಚಾಗುತ್ತಿತ್ತು. ಈಗ ಹೊಸ ಸಂಸಾರ ಆರಂಭವಾದಾಗಿನಿಂದ ಒಂದು ಪೈಸೆಯೂ ಉಳಿಯುವದಿಲ್ಲ. ಐದು ಲಕ್ಷ ಕೊಟ್ಟರೆ ಇನ್ನೈದು ಲಕ್ಷ ಮಾತ್ರವೇ ಉಳಿಯುತ್ತದೆ. ಮೀನ ಅವನು ನಿಮ್ಮನ್ನ ನಂಬ್ಯಾನ. ಎಂದು ಹನಿಗಣ್ಣಾದಳು. ಗಟ್ಟಿ ಮನಸು ಮಾಡಿ ಕೊಟ್ಟು ಬಿಟ್ಟೆ. ದೇವರ ಮೇಲೆ ಭಾರ ಹಾಕಿ.

            ಮುಂದೆ ಭಾಸ್ಕರ ನನಗೆ ಹೊಸ ಜುಬ್ಬಾ ತಂದುಕೊಟ್ಟು ನಮಸ್ಕರಿಸಿ ನನ್ನ ಪಾಲಿನ ದೇವರು ನೀವು ಎಂದು ಹೋಗಿದ್ದ. ಹಿಗ್ಗಬೇಕೋ ಕುಗ್ಗಬೇಕೋ ತಿಳಿಯಲಿಲ್ಲ. ಕೆಲವು ದಿನಗಳವರೆಗೆ ಅವನ ಕಾಟ ತಪ್ಪಿದ್ದಂತೂ ನಿಜ. ಆಗಾಗ ತಿಂಡಿ ಹಿಡಿದುಕೊಂಡು ಮನೆಗೆ ಬರುತ್ತಿದ್ದ. ಶ್ವೇತಾ ಕೂಡ ಆಗಾಗ ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದಳು. ನನ್ನ ಮಕ್ಕಳ ಬಗ್ಗೆ ನನಗೆ ಖೇದ ಉಂಟಾಗುತ್ತಿತ್ತು. ಕನಿಷ್ಠ ಒಂದು ಫೋನೂ ಇಲ್ಲದಂತಿದ್ದರು. ನಾನಾಗಿ ಒಮ್ಮೆ ಮೀನಳನ್ನು ಮುಕುಲ್ನ ಮನೆಗೆ ಕರೆದುಕೊಂಡು ಹೋದಾಗ ಸ್ವಾಗತ ಸಿಕ್ಕಿತ್ತು. ಆದರೆ  ಸಪ್ಪೆಯಾಗಿಯೇ. ಮತ್ತ ಬರ್ರಿ. ನಾವೂ ಬರ್ತೀವಿ ಅನ್ನುವ ಪದಗಳು ಶಿಷ್ಟಾಚಾರಕ್ಕೂ ಇಲ್ಲ. ಮೀನ ಮನೆಗೆ ಬಂದ ಮೇಲೆ ಅವರ ಮನಸ್ಥಿತಿ ಬ್ಯಾರೇನ ಇರ್ತದ ಪ್ರಕಾಶ. ಇಷ್ಟ  ದೊಡ್ಡಾವ್ರಾದ ಮ್ಯಾಲೆ ತಾಯಿ ಜಾಗಾಕ್ಕ ಬ್ಯಾರೇದಾವ್ರನ್ನ ಒಪಗೊಳ್ಳೋದು ತ್ರಾಸು. ಇರ್ಲಿ ಬಿಡ್ರಿ. ಎಂದಿದ್ದಳು. ಆದರೆ ನನ್ನ ಸಮಾಧಾನ ಕದಡಿ ಎದೆಯಲ್ಲೇನೋ ಹಿಂಡಿದಂತೆ ನೋವಾಗಿತ್ತು. ಮಕ್ಕಳ ಜೊತೆ ನಂಟೇ ಕಡಿದ ಭಾವ ಕಾಡಿತು. ಅವರು ನನ್ನನ್ನು ಮಾನಸಿಕವಾಗಿ ದೂರ ಮಾಡಿದ್ದಂತೂ ನಿಜವಾಗಿತ್ತು.

            ಮೀನ ಅಲಂಕಾರಪ್ರಿಯೆ. ಹೊಸ ಬಟ್ಟೆಗಳ ಖಯಾಲಿ ಅವಳಿಗೆ. ಪ್ರಕಾಶ, ನನ್ನ ಹಳೆ ಜೀವನಾನೂ ಬಡತನದಾಗ ಹೋತು. ಈಗರೆ ನಾಲ್ಕ ಅರವಿ ಮಾರಿ ನೋಡ್ತೇನಿ ಎಂದಿದ್ದಳು. ನಾನೂ ಸಮ್ಮತಿಸಿದ್ದೆ. ಅವಳನ್ನು ಸಂಪೂರ್ಣವಾಗಿ ತೃಪ್ತಿಪಡಿಸಲಾಗದ ಭಾವ ನನ್ನಲ್ಲಿ ಸಣ್ಣದಾಗಿ ಚುಚ್ಚುತ್ತಿತ್ತು. ಅವಳು ಅದನ್ನು ಪರೋಕ್ಷವಾಗಿ ಆಡಿಯೂ ತೋರಿಸುತ್ತಿದ್ದಳು. ಹೀಗಾಗಿ ಅವಳನ್ನು ಖುಷಿಯಾಗಿಡಲು ಅವಳ ಎಲ್ಲ ಮಾತುಗಳನ್ನೂ ಒಪ್ಪುತ್ತಿದ್ದೆ. ಪ್ರತೀ ತಿಂಗಳೂ ಹಿಡಿಸಿದ ಒಂದೆರಡು ಡ್ರೆಸ್ಗಳು, ಸೀರೆಗಳು ಮನೆಗೆ ಬಂದು ಬೀರು ಸೇರುತ್ತಿದ್ದವು. ನಾವೂ ತಿಂದು ಜೊತೆಯಲ್ಲಿ ಚೌಗಲೆ ಬಾಯಿಗೆ ಶೇವ್ ಪುರಿ ಶೇರ್ತದ.ಎಂದು ಕಟ್ಟಿಸಿಕೊಂಡು ಬರುವದಿತ್ತು. ಹಾಗೇ ಮಾವುಲಿ ಬಾಯಿಯ ಮಕ್ಕಳಿಗೆ ವಡಾ ಪಾವ್, ಜಾಧವನ ಹೆಂಡತಿಗೆ ಕಟ್-ಮಿಸಳ ಎನ್ನುತ್ತ ವಠಾರದವರಿಗೆಲ್ಲ ಉದಾರಿಯಾಗಿ ಅವರ ಪ್ರೀತಿ ಹೆಚ್ಚಾಗಿಯೇ ಸಂಪಾದಿಸಿದಳೆನ್ನಬೇಕು. ಜಾನು ಅನಾವಶ್ಯಕವಾಗಿ ಎಂದೂ ಏನೂ ಕೊಟ್ಟವಳಲ್ಲ. ಪ್ರಕಾಶ ಮಾಮಾ, ಹೀಚ ಬರಿ ಆಹೆ. (ಮೊದಲಿನವಳಿಗಿಂತ ಇವಳೇ ಚೆನ್ನಾಗಿದ್ದಾಳೆ.) ಎಂಬ ವ್ಯಾಖ್ಯಾನ ಕೇಳಿ ಬರುತ್ತಿತ್ತು. ಮೇಲೆ ನಕ್ಕರೂ ಒಳಗೆಲ್ಲೋ ಚುಚ್ಚಿದಂತಾಗುತ್ತಿತ್ತು.

            ತಿಂಗಳ ಕೊನೆಯಲ್ಲಿ ಜೇಬಿನಲ್ಲಿ ಒಂದು ರೂಪಾಯಿ ಕೂಡ ಇರದಂತಾಗಿತ್ತು ನನ್ನ ಪರಿಸ್ಥಿತಿ. ಒಂದನೇ ತಾರೀಖಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಜಾನು ಹೀಗೆಂದೂ ಮಾಡಿದವಳಲ್ಲ. ತಿಂಗಳ ಕೊನೆಯಲ್ಲಿ ಯಾವುದೋ ಡಬ್ಬದಿಂದ ದುಡ್ಡು ತೆಗೆದು ಕೊಡುವದಿತ್ತು. ಅವಳ ಸಂಬಂಧಿಕರು, ಗೆಳತಿಯರೆಲ್ಲ ಪಾಪ, ಅಕಿ ಬರೇ ದುಡದ ಸತ್ಲು. ಇಕಿ ಹೆಂಗ ಮಜಾ ಮಾಡ್ಲಿಕ್ಕತ್ತಾಳ. ಎನ್ನುವದಿತ್ತು. ಆಗ ನಾನೂ ಯೋಚಿಸುತ್ತಿದ್ದೆ. ‘ಎಷ್ಟು ಪಾಪದವಳು ಜಾನೂ. ಒಂದಿನವೂ ಸೀರೆ ಬೇಕು ಎಂದಿದ್ದೇ ಇಲ್ಲ. ನನ್ನ, ಮಕ್ಕಳ ಸರತಿಯಾದ ಮೇಲೆ ಉಳಿದದ್ದರಲ್ಲಿ ತನಗೊಂದು ಕೊಳ್ಳುವದಿತ್ತು. ಇಲ್ಲವಾದರೆ ಇಲ್ಲ. ಕಾಸಿಗೆ ಕಾಸು ಕೂಡಿಸಿ ಮಕ್ಕಳ ಶಿಕ್ಷಣವನ್ನೊಂದು ವ್ರತದಂತೆ ಪೂರೈಸಿದ್ದೆವು. ಪ್ರವಾಸ, ಯಾತ್ರೆ, ತೀರ್ಥ ಯಾವುದೂ ಕೇಳಬೇಡಿ. ಅದಕ್ಕಾಗಿ ಅವಳು ತನ್ನೂರಿನ ನೆಂಟರನ್ನು ಕೂಡ ಕೊಂಚ ದೂರ ಮಾಡಿಕೊಂಡದ್ದಿತ್ತು. ಬಂದು ತಿಂಗಳಾನಗಟ್ಟಲೆ ನಿಂತರ ಮಕ್ಕಳ ಅಭ್ಯಾಸಕ್ಕ ತ್ರಾಸು ಆಗ್ತದಎಂದಿದ್ದಳು. ಪುಣೇರಿ ಪದ್ಧತಿ ಎನಿಸಿದರೂ ಸಂಸಾರಕ್ಕೇನೂ ಚುಕ್ಕೆ ತಾರದಂತೆ ನಿರ್ವಹಿಸುತ್ತಿದ್ದಳು. ಮನೆಯಲ್ಲೇ ಅಡಿಕೆ ಪುಡಿ ಮಾಡಿ ಮಾರುವದು, ಸೀರೆಗಳಿಗೆ ಫಾಲ್ಸ ಹಾಕುವದು.. ..ಒಂದು ಕ್ಷಣ ಬಿಡುವಿಲ್ಲದಂತೆ ದುಡಿದು ನನ್ನ ಇತರರ ಎದಿರು ಕೈ ಚಾಚದಂತೆ ನೋಡಿಕೊಂಡಳು. ಏಕೋ ಮರುಮದುವೆಯಾದ ಆರೇ ತಿಂಗಳಲ್ಲಿ ಜಾನು ನನ್ನನ್ನು ಆವರಿಸಿ ಕಾಡತೊಡಗಿದ್ದಳು. ಬೇಕಾಬಿಟ್ಟಿ ಖರ್ಚು ಮಾಡುವ ಮೀನಳಿಗೆ ಮನಸ್ಸು ಅವಳನ್ನು ಹೋಲಿಸುತ್ತಿತ್ತು. ಮರುಕ್ಷಣ ‘ಈಗೆಲ್ಲಾ ಜವಾಬ್ದಾರಿ ಕಳದದ. ನಾನೂ ಆರಾಮಿರ್ತೇನಿ. ಅವಳೂ ಸುಖ ಪಡಲಿ. ಲೈಫ್ ಎಂಜಾಯ್ ಮಾಡಿದ್ರಾತು’ಎಂದುಕೊಂಡೆ.

            ಆದರೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಎಂಜಾಯ್ ಮಾಡುವದು. ದುಡ್ಡಿನ ಜೊತೆಗೆ ಆರೋಗ್ಯವೂ ಕಳೆದು ಹೊರಟಿತ್ತು. ಹೊರಗಿನ ಊಟ, ತಿಂಡಿಗಳಿಂದ ಎಸಿಡಿಟಿ, ಗ್ಯಾಸ್ಗಳ ತೊಂದರೆ ಉಂಟಾಯಿತು. ಶುಗರ್, ಬಿ.ಪಿ.ಗಳೂ ಏರಿ ಕುಳಿತವು. ಉಪಾಯವಿಲ್ಲದೇ ನಾನೇ ಅನ್ನಕ್ಕಿಟ್ಟುಬಿಡುತ್ತಿದ್ದೆ. ಅವಳು ಚಪಾತಿ ಮಾಡಿದರೆ ಸರಿ, ಇಲ್ಲವಾದರೆ ಚಪಾತಿಯೋ, ಬ್ರೆಡ್ಡೋ ಹೊರಗಿನಿಂದ ತಂದು ಇಬ್ಬರೂ ತಿನ್ನುತ್ತಿದ್ದೆವು. ಇದು ಅವಳಿಗೆ ಕಿರಿಕಿರಿಯೇ ಆಯಿತು.

            ಕೆಲವೇ ದಿನಗಳಲ್ಲಿ ಮಾಯವಾಗಿದ್ದ ದೊಡ್ಡ ತಲೆನೋವು ಭಾಸ್ಕರ ಮತ್ತೆ ಪ್ರತ್ಯಕ್ಷನಾಗಿದ್ದ. ಘೋರ್ಪಡ್ಯಾಗಿರೋ ಫ್ಯಾಕ್ಟರೀನ ಧೊಡ್ಡದು ಮಾಡ್ಲಿಕ್ಕತ್ತೀನಿ. ಮಟೀರಿಯಲ್ಸ ತರಬೇಕಾಗೇದ. ಬ್ಯಾಂಕಿನವರು ಹತ್ತು ಲಕ್ಷ ಸಾಲ ಕೊಡ್ಲಿಕ್ಕತ್ತಾರ. ಈಗ ಪೂರಾ ಫಾಯದಾ ಆಗ್ಲಿಕ್ಕತ್ತದ. ವರ್ಷದಾಗ ನಿಮ್ಮ ರೊಕ್ಕಾ ಎಲ್ಲಾ ತೀರಿಸಿಬಿಡತೇನಿ. ನೀವು ಶೂರಿಟಿಗೊಂದು ಸೈನ್ ಹಾಕ್ರಿ ದಾದಾ. ಎಂದು ಸಾಲ ಪತ್ರ ಹಿಡಿದು ನಿಂತ. ಏನೂ ತೋಚದೇ ಕಕ್ಕಾಬಿಕ್ಕಿಯಾಗಿದ್ದೆ. ಆಗಲೇ ಮಕ್ಕಳ ಬೇಸಿಗೆ ರಜಕ್ಕೆಂದು ಶ್ವೇತಾ ಕೂಡ ಬಂದಿದ್ದಳು. ಅಂವಾ ನಿಮ್ಮಿಂದನ ಉದ್ಧಾರ ಆಗಬೇಕು. ಮುಂದ ನಿಮ್ಮನ್ನ ಹೂವಿನ್ಹಂಗ ಹಿಡೀತಾನ. ಸೈನ್ ಹಾಕ್ರಿ ದಾದಾ. ಎಂದಳು. ಮೀನ ಕಣ್ಣಿನಲ್ಲೇ ಆಜ್ಞೆ ಮಾಡುತ್ತಿದ್ದಳು. ಎಲ್ಲಾ ಅಯೋಮಯ. ನನ್ನ ಮಕ್ಕಳಂತೂ ದೂರವಾಗಿದ್ದರು. ಹಾಲಾದರೂ ಸರಿ, ನೀರಾದರೂ ಸರಿ, ಇನ್ನು ಇವರನ್ನೇ ನಂಬಬೇಕಾಗಿತ್ತು. ದೇವರ ಮೇಲೆ ಭಾರ ಹಾಕಿ ಸೈನ್ ಮಾಡಿದೆ. ಪಾದಗಳಿಗೆ ಹಣೆಯೊತ್ತಿ ನಮಸ್ಕರಿಸಿ ಭಾಸ್ಕರ ಹೊರಟುಹೋದ. ಈ ಬಾರಿ ಮಗಳಿಗೆ ಉಡುಗೊರೆ ಕೊಡುವ ವಿಷಯವನ್ನೇ ಮೀನ ಎತ್ತಿರಲಿಲ್ಲ. ಒಳ್ಳೆಯದೇ ಆಯಿತು ಎಂದುಕೊಂಡೆ. ಬೀರು ತೆಗೆದಾಗ ಮೀನಳ ಹೊಸ ಸೀರೆ, ಡ್ರೆಸ್ಸುಗಳಲ್ಲಿ ಅರ್ಧವಷ್ಟೇ ಉಳಿದಿದ್ದವು.

            ಏಕೋ ನಿರಾಸೆ ಮುತ್ತಿಕೊಂಡಿತು. ‘ಊದೋದು ಕೊಟ್ಟು ಬಾರಸೋದು ತೊಗೊಂಡ’ ಹಾಗಿತ್ತು ನನ್ನ ಸ್ಥಿತಿ. ನನ್ನ ಪಾಡಿಗೆ ನಾನು ಮಕ್ಕಳ, ಮೊಮ್ಮಕ್ಕಳ, ನಿವೃತ್ತರ ಜೊತೆಯಲ್ಲಿ ಕಾಲ ಕಳೆದು ಜೇಬು ತುಂಬ ದುಡ್ಡಿಟ್ಟುಕೊಂಡು ಹಾಯಾಗಿದ್ದೆ. ಈಗ ಕುಚೇಲನ ಪರಿಸ್ಥಿತಿ. ಅವಳ ಸ್ಪರ್ಶ, ಅದರ ಅನುಭೂತಿಯನ್ನು ಬಯಸಿ ಮದುವೆಯಾದವನಿಗೆ ಈಗ ಅದೇ ಬೇಡವಾಗಿತ್ತು. ಸಾಂಗತ್ಯಕ್ಕೆ ಸಮಾನ ಮನಸ್ಸುಗಳಿರಬೇಕು. ಅವಳ ದಿಕ್ಕು ನನಗೆ ವಿರುದ್ಧವಾಗಿತ್ತು. ಯಾರೋ ಅಕೀ ಮಕ್ಕಳು ಅಕಿನ್ನ ಭಿಕಾರಿ ಮಾಡಿದ್ದರು. ಅದಕ್ಕ ಅಕಿ ಬ್ಯಾರೇ ಖೋಲಿ ಮಾಡಕೊಂಡಿದ್ಲು.ಎಂದದ್ದು ಕೇಳಿ ಜಿಗುಟಿದಂತಾಯಿತು. ಅವಳು ಮಕ್ಕಳ ಒಡನಾಟ ಬೆಳೆಸಿದ್ದು ಮದುವೆಯ ನಂತರ. ಅಂದರೆ ‘ತಾಯಿ ಮಕ್ಕಳು ಮೋಜು ಮಾಡಿ ನನ್ನನ್ನು ಬೀದಿಗಿಳಿಸಲು ಬಂದರೇ ಅಥವಾ ನಾನೇ ಅವರ ಸುಳಿಯಲ್ಲಿ ಹೋಗಿ ಸಿಲುಕಿದೆನೇ? ಅವರ ಸತ್ಯ ತಿಳಿಯಲಾರದೇ ಹೋದೆನೆ? ಈ ಮದುವೆಯಾಗಿ ಜಾನುಗೆ ಮೋಸ ಮಾಡಿದೆನೆ? ಅದಕ್ಕೆ ಹೀಗೆಲ್ಲ ಆಯಿತೆ?’ ವಿಚಾರಗಳ ತಾಕಲಾಟದಲ್ಲಿ ತೊಳಲಾಡಿದೆ.

            ಕೆಲವೇ ದಿನಗಳಲ್ಲಿ ಬ್ಯಾಂಕಿನವರು ಮನೆಗೆ ಬಂದಿದ್ದರು. ಭಾಸ್ಕರ ಬಡ್ಡಿಯ ಮೊದಲನೇ ಕಂತನ್ನೂ ಕಟ್ಟದೇ ನಾಪತ್ತೆಯಾಗಿದ್ದ. ನನ್ನ ಎದುರಿಗೇ ಅವನ ಫ್ಯಾಕ್ಟರಿಯನ್ನು ಬ್ಯಾಂಕು ಮುಟ್ಟುಗೋಲು ಹಾಕಿಕೊಂಡಿತು. ನನಗೆ ದಿಗ್ಭ್ರಮೆಯ ಜೊತೆ ಯಾರೋ ಕಪಾಳಕ್ಕೆ ಹೊಡೆದಂತೆ. ಮೀನ ಅಳುತ್ತ ಕುಳಿತಳು. ಐದು ಲಕ್ಷ ನನ್ನಿಂದ ಕಕ್ಕಿಸಿದ ಬ್ಯಾಂಕಿನವರು ಇನ್ನೈದು ಲಕ್ಷಕ್ಕೆ ಡಿಮಾಂಡ್ ಮಾಡಿದರು. ಚಿನ್ನದ ಬಳೆ ಕೇಳಿದಾಗ ಶ್ವೇತಾ ತೆಗೆದುಕೊಂಡು ಹೋದ ವಿಷಯ ಮೀನಾ ಹೇಳಿದಳು. ಮುಕುಲ್ನಿಗೆ ಫೋನ್ ಹೋಯಿತು. ಬಂದವನು ನನ್ನನ್ನು ದುರುಗುಟ್ಟಿಕೊಂಡು ನೋಡಿ ಹಣ ಕೊಟ್ಟು ಫಾರ್ಮಾಲಿಟೀಸ್ ಮುಗಿಸಿ ಒಂದೂ ಮಾತಾಡದೇ ಹೊರಟು ಹೋಗಿದ್ದ. ನಾನು ಸಾಲದಿಂದ ಬಿಡುಗಡೆಯಾಗಿದ್ದೆ ಆದರೆ ಮನದ ಭಾರದಿಂದಲ್ಲ. ಎದೆಯ ಮೇಲೊಂದು ಕಲ್ಲನ್ನಿಟ್ಟಂತೆ ಭಾಸವಾಗಿತ್ತು. ಅಕ್ಷರಶ: ದಿವಾಳಿಯಾಗಿದ್ದೆ.

            ಬ್ಯಾಂಕಿನಿಂದ ಹೊರಟವನು ಮನೆಗೆ ಹೋಗುವ ಮನಸ್ಸಾಗಲಿಲ್ಲ. ಪರ್ವತಿಯ ಗಣೇಶನ ದೇವಸ್ಥಾನದತ್ತ ನಡೆದು  ಕಲ್ಲು ಬೆಂಚಿನ ಮೇಲೆ ಕುಳಿತೆ. ಈಗ ಚಾಳದವರೆಲ್ಲ ಮುಪ್ಪಿನತನದಲ್ಲಿ ಮದುವೆಯಾಗಿ ಮಜಾ ಮಾಡಲು ಹೋಗಿ ಭಿಕಾರಿಯಾದದ್ದಕ್ಕೆ ನನ್ನ ಉದಾಹರಣೆ ಕೊಡುತ್ತಿರಬಹುದು. ಗಟ್ಟಿಯಾಗಿ ಕಣ್ಣು ಮುಚ್ಚಿದೆ. ಮನದ ಪರದೆಯ ಮೇಲೆ ಜಾನು ಮೂಡಿ ಬಂದು ನಕ್ಕಂತಾಯಿತು. ಆಗಲೇ ಮೀನಳಿಂದ ಫೋನ್ ಬಂದಿತ್ತು. ನಾನು ತೆಗೆಯಲೇ ಇಲ್ಲ. ಹಲವಾರು ಬಾರಿ ಮೊಳಗಿ ಮೆಸೇಜ್ ಬಂದಿತು. ‘ಶ್ವೇತಾ ಗಂಡನೊಡನೆ ಜಗಳವಾಡಿಕೊಂಡು ಮಕ್ಕಳೊಂದಿಗೆ ಮನೆಗೆ ಬಂದಿದ್ದಾಳೆ… ನಿಟ್ಟುಸಿರಿಟ್ಟೆ. ತಂದೆತನ ಸಾಕಾಗಿತ್ತು. ಯಾರದೋ ದೊಡ್ಡ ಗುಂಪು ಹೊರಟಿತ್ತು. ಶ್ರೀರಾಮ ಜಯರಾಮ ಜಯಜಯರಾಮ. ಬ್ರಹ್ಮಚೈತನ್ಯ ಮಹರಾಜ ಕಿ ಜೈ. ಬ್ರಹ್ಮಾನಂದ ಮಹಾರಾಜ ಕಿ ಜೈ. ಇತ್ಯಾದಿ ಘೋಷಣೆಗಳನ್ನು ಕೂಗುತ್ತ ನಡೆದಿತ್ತು. ಯಾರೋ ನನ್ನ ಹತ್ತಿರ ಬಂದು ಬ್ರಹ್ಮಚೈತನ್ಯ ಮಹಾರಾಜರ, ರಾಮನಾಮದ ಮಹತ್ವ ತಿಳಿಸಿದರು. ಸರಿ ಎಂದೆ. ಕೇಂವ್ಹಾತರಿ ಯಾ ಗೋಂದವಲೇಲಾ (ಯಾವಾಗಲಾದರೂ ಬನ್ನಿ ಗೋಂದವಲೆಗೆ) ಎಂದರು. ಈಗ ಬರಬಹುದೇನು? ಎಂದು ಕೇಳಿದೆ. ಕೊಂಚ ಅಪ್ರತಿಭರಾದವರು ನಿಮ್ಮ ಮನ್ಯಾಗ ಹೇಳಿ.. .. ಎನ್ನುತ್ತಿದ್ದಂತೆ ನಾನು ನನಗ ಯಾರೂ ಇಲ್ಲ.ಎಂದೆ. ಅವರು ಸಾವರಿಸಿಕೊಳ್ಳುತ್ತ ಯಾಕಿಲ್ಲ? ಮಹಾರಾಜರಿದ್ದಾರ. ಶ್ರೀರಾಮ ಇದ್ದಾನ. ಬರ್ರಿ ಎನ್ನುತ್ತ ನನಗೊಂದು ಜಪಮಾಲೆ ಕೈಯಲ್ಲಿ ಕೊಟ್ಟರು. ದೀನಾ ಹಾಕಾ ಮಾರೀ, ತುಜ ದಾರಾವರೀ(ದೀನ ನಿನ್ನ ದ್ವಾರಕ್ಕೆ ಬಂದು ಕೂಗುತ್ತಿದ್ದಾನೆ.) ಎಂದು ಹಾಡುತ್ತಿದ್ದ ಸಾಲಿನಲ್ಲಿ ಸೇರಿಕೊಂಡೆ. ಕೈಯಲ್ಲಿ ಜಪಮಾಲೆ ಹಿಡಿದುಕೊಂಡು ಮನದಲ್ಲಿ ಜಾನ್ಹವಿಯನ್ನಿಟ್ಟುಕೊಂಡು, ಶ್ರೀರಾಮನನ್ನು ಜಪಿಸುತ್ತ ಹೊರಟೇಬಿಟ್ಟೆ.         

*******

Leave a Reply

Back To Top