ಚಿಂತನೆ

ಅರಿಷಡ್ಬರ್ಗಗಳನು  ದಾಟಿ…..

Tilt-shift Photography of Birds

ಅಶ್ವಥ್

ಕಳೆದ ವಾರ ಗೆಳೆಯನೊಬ್ಬನಿಗೆ ಏನೋ ಗೊಂದಲವಾಗಿ ಕೆಲವು ಪ್ರಶ್ನೆಗಳನ್ನು ಒಂದಕ್ಕೊಂದು ಪೋಣಿಸಿ ಪ್ರಶ್ನೆಗಳ ಒಂದು ಮಾಲೆಯನ್ನೇ ಮಾಡಿಟ್ಟುಕೊಂಡಿದ್ದ.

ನಾವು ಕತೆ ಕೇಳ್ತೇವೆ, ಇತಿಹಾಸ ಅಧ್ಯಯನ ಮಾಡ್ತೇವೆ, ಪುರಾಣ ಪುಣ್ಯಕತೆಗಳನ್ನು ಓದುವುದು ಕೇಳುವುದು ನೋಡುವುದು ಇದ್ದೇ ಇದೆ. ಇಷ್ಟೇ ಅಲ್ಲದೇ ನಮ್ಮ ತಲೆಮಾರಿನವರಿಗೆ ಬಾಲ್ಯದಲ್ಲಿ ಪೌರಾಣಿಕ ನಾಟಕಗಳು, ಹರಿಕತೆಗಳು, ಬೀದಿನಾಟಕ, ಗೊಂಬೆನಾಟಕ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮ ಹೊರಗನ್ನು ತಿಳಿಯುವ ಸಾಮಾನ್ಯ ಸಾಧ್ಯತೆಗಳಿದ್ದವು. ಈಗ ಹಳೆಯ ಈ ಮಾಧ್ಯಮಗಳೆಲ್ಲ ಹಿನ್ನೆಲೆಗೆ ಸರಿದು, ಸಿನಿಮಾ, ಅಥವಾ ಕಿರುತೆರೆ (ಟಿವಿ, ಅಮೇಜಾನ್, ನೆಟ್ಫ್ಲಿಕ್ಸ್, ಯೂಟ್ಯೂಬ್ ಆದಿಯಾಗಿ ಮೊಬೈಲ್ಗಳನ್ನೂ ಸೇರಿಸಬಹುದು) ಇವೇ ವಿಜೃಂಭಿಸುವ ಕಾಲದಲ್ಲಿ ನಾವಿದ್ದೇವೆ. ಓದುವುದು ಒಂದು ಹವ್ಯಾಸ ಆಗಿರುವವರಿಗೆ ಕಾಲಾತೀತವಾಗಿ ವರ್ತಮಾನವನ್ನು ಗ್ರಹಿಸಿಕೊಳ್ಳುವುದು ಸಾಧ್ಯ. ಆದರೆ ಓದು ಅಂದರೆ ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ, ಪುಸ್ತಕಗಳನ್ನೋ, ಅಥವಾ ಮೇಷ್ಟರು ಬರೆಸಿದ ನೋಟ್ಬುಕ್ಗಳನ್ನೋ ಓದುವುದಕ್ಕೆ ಮೀಸಲಾದರೆ ಅದರಿಂದ ಏನೂ ಪ್ರಯೋಜನವಾಗಲಾರದು. ಆ ರೀತಿಯದ್ದಲ್ಲದ ವಿಷಯ, ವಿದ್ಯಮಾನಗಳ ಗ್ರಹಿಕೆಯ ಓದು ಒಂದು ಹವ್ಯಾಸವಾದವರಿಗೆ ಯಾವ ಮಾಧ್ಯಮ ಹಿನ್ನೆಲೆಗೆ ಸರಿದರೂ, ಯಾವ ಹೊಸ ಮಾಧ್ಯಮ ಚಾಲನೆಗೆ ಬಂದರೂ ಅಂತಹವುಗಳಿಂದ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

ನಮ್ಮಂತಹವರು ಅಂದರೆ ಸಾಮಾನ್ಯವಾಗಿ ಹೈಸ್ಕೂಲು, ಆನಂತರ ಎರಡು ಮೂರು ವರ್ಷ ಕಾಲೇಜು ಅಥವಾ ಒಂದು ಪದವಿ ಮುಗಿಸಿಕೊಂಡವರು ಅತ್ತ ಹಳೇಕಾಲದ ಗ್ರಹಿಕೆಯ ಮಾಧ್ಯಮದ ಅವಕಾಶಗಳೂ ಇಲ್ಲದೇ, ಇತ್ತ ಹೊಚ್ಚ ಹೊಸ ಆಕರ್ಷಣೀಯ ಮಾಧ್ಯಮಗಳ ಕಡೆ ಹೊರಳಿಕೊಂಡು ಸಿನಿಮಾ ಹೀರೋಗಳ ಡೈಲಾಗುಗಳಿಗೋ, ಅಥವಾ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ಡೈಲಾಗು ಬರೆದುಕೊಂಡು (ಬಹುತೇಕ ಬರೆಯಿಸಿಕೊಂಡು) ಭಾಷಣಭೀರುಗಳ ದಾಳಿಗೆ ಒಳಪಟ್ಟು, ಅವರವರ ಅಭಿಮಾನಿ ಸಂಘಗಳಿಗೆ ಸದಸ್ಯರುಗಳಾಗಿ, ಅಂತಹ ಡೈಲಾಗುಗಳನ್ನೊಂದಿಷ್ಟು ಕರತಲಾಮಲಕ ಮಾಡಿಕೊಂಡು ನಮ್ಮ ಗ್ರಹಿಕೆ ಹಿಗ್ಗಿದೆ ಅಂದುಕೊಂಡಿರ್ತೇವೆ.

ಮೊನ್ನೆ ಪ್ರಶ್ನೆ ಮಾಡಿದ ಗೆಳೆಯನನ್ನು ಕಾಡಿದ ಆ ಗೊಂದಲಗಳು ಅವನೊಬ್ಬನವೇ ಅಲ್ಲ; ಬಹುತೇಕ ನಮ್ಮೆಲ್ಲರವೂ ಹೌದು. ಅದಕ್ಕೆ ಉತ್ತರ ಹುಡುಕಲು ಹೊರಡುವುದು ಅಂದರೆ ಬದುಕೆಂದರೆ ಏನು ಅನ್ನುವುದನ್ನೆಲ್ಲ ಕ್ರೋಢೀಕರಿಸಲು ಹೊರಟಂತಹ ಸಾಹಸವಾಗಬಹುದು. ಆದರೂ ಸಂಕ್ಷಿಪ್ತವಾಗಿ ಕಡಿಮೆ ಹೊತ್ತಿನ ಆಲೋಚನೆಗೆ ಹೊಳೆದ ಕೆಲವು ಹೊಳಹುಗಳನ್ನು ಹಿಡಿದಿಡುವ ಪ್ರಯತ್ನ ಇದು.

ಆ ಪ್ರಶ್ನೆಗಳ ಸರಮಾಲೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಬದುಕು ಹೇಗಿರಬೇಕು. ಎಲ್ಲರಂತೆ ಬದುಕುವುದು ಅಂದರೆ ಈಗ ಕಿತ್ತಾಡಿಕೊಂಡೇ ಬದುಕಬೇಕಾದ ಅನಿವಾರ್ಯತೆಯಿದೆ. ಹೇಗೋ ಬದುಕುವುದಾದರೆ ಈ ಪ್ರಶ್ನೆಗಳು ಮೂಡುವುದೇ ಇಲ್ಲ. ಅಂತಃಕರಣದಲ್ಲಿ ಏನೋ ಸರಿಯಿಲ್ಲವೆನ್ನುವ ಭಾವನೆಯಿಂದಲೇ ಈ ಪ್ರಶ್ನೆಗಳ ಅಲೆಗಳು ಶುರುವಾಗುವಂತಹದ್ದು. ಹೈಸ್ಕೂಲಲ್ಲಿ “ಹೃದಯವಂತಿಕೆಯ ಸಮಸ್ಯೆಗಳು” (ವಿ.ಕೃಗೋಕಾಕರದ್ದು) ಅಂತ ನಮಗೊಂದು ಪಾಠ ಇತ್ತು . ಅಂತಹ ಹೃದಯವಂತಿಕೆ ಕಿಂಚಿತ್ತು ಇದ್ದಾಗ ನಮ್ಮ ತಪ್ಪುಗಳ ಬಗ್ಗೆ ನಾವೇ ಯೋಚಿಸುವ, ಪ್ರಶ್ನೆ ಮಾಡಿಕೊಳ್ಳುವ ಆ ಮೂಲಕ ಬದುಕು ಕಾಲದ ಹರಿವಿನೊಟ್ಟಿಗೇ ಕೊಚ್ಚಿಕೊಂಡು ಹೋಗಲು ಬಿಡದೇ, ಅಂಬಿಗನು ನಡೆಸುವ ಹರಿಗೋಲಿನ ಹಾಗೆ ಮುನ್ನಡೆಸುವುದು ಸಾಧ್ಯವಾಗಬಹುದು.

ಮಾನವನಿಗೆ ನೆಮ್ಮದಿಯಾಗಿರುವುದಕ್ಕೆ ಅನ್ನ, ಅರಿವು, ಉಡುಪು, ಆರೋಗ್ಯಮತ್ತು ವಸತಿ (ಮನೆ) ಈ ಐದು ಮೂಲಭೂತ ಸೌಕರ್ಯಗಳು ಅತ್ಯಗತ್ಯವಾದವು. ಈ ಐದನ್ನೇ ಸಂಪಾದಿಸಲು ಅಲ್ಲವೇ ಆ ಲಕ್ಷಾಂತರ ವಲಸೆ ಕಾರ್ಮಿಕರು; ಕಾಲಿಗೆ ಚಪ್ಪಲಿಯಿಲ್ಲದೆ, ಅನ್ನ ನೀರಿನ ಏರ್ಪಾಡೂ ಇಲ್ಲದೇ ನಡೆದವರು; ತಮ್ಮ ಸ್ವಂತ ಊರುಗಳನ್ನು ಬಿಟ್ಟು ಸಾವಿರಾರು ಮೈಲಿ ದೂರದಿಂದ ಅವಕಾಶಗಳನ್ನು ಅರಸಿಕೊಂಡು ಬಂದಿದ್ದು? ಈ ಐದು ಸೌಲಭ್ಯಗಳಿಗಾಗಿಯೇ ಬಹುತೇಕ ತೊಂಭತ್ತಕ್ಕೂ ಹೆಚ್ಚು ಶೇಕಡಾ ಜನ ಹೋರಾಡುವುದು. ಇದರಲ್ಲಿ ಕೆಲವು ಶೇಕಡಾ ಜನ ಮಾತ್ರ ಈ ನೆಮ್ಮದಿಯ ಟಾನಿಕ್ಕುಗಳಾಚೆಗೆ, ಕೆಲಸದ ಸುರಕ್ಷತೆ, ಭವಿಷ್ಯಕ್ಕೆಂದು ಒಂದಿಷ್ಟು ಗಂಟು, ಸಮಾಜದಲ್ಲಿ ಅಂತಸ್ತು, ಅಸ್ವಾಭಾವಿಕ ಮನ್ನಣೆ ಗಳಿಸುವ ಸರ್ಕಸ್ಸು, ಇಂಗ್ಲೀಷಿನಲ್ಲಿ ʼಲೈಮ್ಲೈಟ್ʼನ್ನುವ ನಿಂಬೆಹುಳಿಬೆಳಕಿನಲ್ಲಿ ಹೊಳೆಯುವ ವಿಲಕ್ಷಣ ಬಯಕೆ ಇತ್ಯಾದಿಗಳ ಮೊರೆಹೋಗಿ ತಾವು ನೆಮ್ಮದಿಯ ಆಚೆ ಒದ್ದಾಡುವುದರ ಜೊತೆಜೊತೆಯಲ್ಲೇ ತಮಗೆ ಬೇಕಾದ್ದಕ್ಕೆ ಬೇರೆ ಬಡ, ಮಧ್ಯಮ ವರ್ಗದ ಒಂದಿಷ್ಟು ಮಂದಿಯನ್ನೂ ಸೇರಿಸಿಕೊಂಡು ಗೌಜಿ ಸೃಷ್ಟಿ ಮಾಡ್ತಾರೆ. ಈ ರೀತಿಯ ಗೌಜಿಯೇ ಈ ಕಾಲದ ವಿಶೇಷ.

ಕಾಂಟ್ರಾವರ್ಸಿ ಎಲ್ಲಿದೆ ಅಂದರೆ ?ಎಲ್ಲಿಲ್ಲ ಅಂತ ಕೇಳಿಕೊಳ್ಳಬೇಕಾದ ಪರಿಸ್ಥಿತಿ ಈಗ ಇದೆ ಅನಿಸಲ್ವೇ?

“ರಾಮನುಕಾಡಿಗೆಹೋದನು”.

 ಕನ್ನಡದ ಕಾಪಿರೈಟಿಂಗ್ ಪುಸ್ತಕದಲ್ಲಿ ಸಾಮಾನ್ಯವಾಗಿ    ಇದು ಮೊದಲ ವಾಕ್ಯ. ಅಲ್ಲೊಂದು ಕುತೂಹಲ ಮೂಡಿಸುವ ಉದ್ದೇಶವಿದ್ದಿರಬಹುದು ಅನಿಸತ್ತೆ. ಪ್ರೈಮರಿ ಸ್ಕೂಲಿನ ಮಗುವೊಂದಕ್ಕೆ ರಾಮನು ಕಾಡಿಗೆ ಹೋದನು ಅಂದರೆ ರಾಮ ಯಾರು? ಕಾಡು ಅಂದರೆ ಏನು? ರಾಮ ಕಾಡಿಗೆ ಯಾಕೆ ಹೋಗಿದ್ದು? ಈ ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದರೆ ಕಾಪಿರೈಟಿಂಗಿನ ಜೊತೆಯಲ್ಲೇ ರಾಮಾಯಣ ತಿಳಿಯುವುದಕ್ಕೆ ಮಗುವಿಗೆ ಮಾರ್ಗಸೂಚಿ ಆಯ್ತು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಗ್ಗಾಗ್ಗೆ ನಾವು ಇದೇ ರೀತಿ ಪ್ರಶ್ನಿಸಿಕೊಳ್ಳುವ, ಕೆಲವು ಕುತೂಹಲಗಳನ್ನು ಮೂಡಿಸಿಕೊಳ್ಳುವ, ಅಂತಹ ಕುತೂಹಲಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳುವ ಒಂದಿಷ್ಟು ಅಭ್ಯಾಸ ಮಾಡುತ್ತಾ ಹೋಗುವುದು ವೈಯಕ್ತಿಕ ಮಟ್ಟದಲ್ಲಿ ಆರೋಗ್ಯಕರ. ಸಧ್ಯ  ಸಮೂಹ ಮಾಧ್ಯಮಗಳಲ್ಲೆಲ್ಲ, ಬೂಟಾಟಿಕೆಗಳೇ ತುಂಬಿ ಹೋಗುವ ಮಟ್ಟಕ್ಕೆ ನಮ್ಮನ್ನು ನಾವೇ ತಂದು ನಿಲ್ಲಿಸಿಕೊಂಡಿರುವ ಈ ಕಾಲದಲ್ಲಿ ಗೆಳೆಯನ ಗೊಂದಲಗಳ್ಯಾವೂ ಬೇರೆ ಯಾರಿಗೂ ಹೊಳೆಯದ ವಿಚಾರಗಳಲ್ಲ. ಆದರೂ ಅಂತಹ ಪ್ರಶ್ನೆಗಳು ಮೂಡುತ್ತಿವೆ ಅಂದರೆ ಕನಿಷ್ಟಪಕ್ಷ ಬೂಟಾಟಿಕೆಗಳನ್ನು ಮೀರಿ ಬದುಕುವ ಸಹಜದಾರಿಯೊಂದನ್ನು ಹುಡುಕುವ ಪ್ರಯತ್ನವೊಂದು ಮನಸ್ಸಿನೊಳಗೆ ನಡೆಯುತ್ತಿದೆ ಎಂದರ್ಥ.

ಸನಾತನ ಅಂತ ಕರೆಯುವ ಅನಾದಿಕಾಲದಿಂದಲೂ ಮನುಷ್ಯ ಹೀಗೇನೇ ಬದುಕಬೇಕು ಅನ್ನುವ ಚೌಕಟ್ಟು ಕಾಲಕಾಲಕ್ಕೆ ಕಟ್ಟಿಕೊಳ್ಳುತ್ತಾ ಕಾಲಾಂತರದಲ್ಲಿ ಸವೆತಕ್ಕೆ ಸಿಕ್ಕಿ ನವೀಕರಣಗೊಳ್ಳುತ್ತಾ ಬಂದಿರುವುದರಿಂದಲೇ ಸಾವಿರಾರು ವರ್ಷಗಳ ಹಿಂದೆ ಬದುಕಿದ್ದ ದಶರಥನ ಮಗ ರಾಮನೂ, ದೇವಕಿ-ಯಶೋಧೆಯರ ಮಗ ಕೃಷ್ಣನೂ, ಪಾಂಡವರೂ ಕೌರವರೂ ನಮಗೆ ಈಗಲೂ ಕತೆಗಳ ರೂಪದಲ್ಲಿ ಸಿಕ್ಕಿರುವುದು, ಸಿಗುತ್ತಿರುವುದು. ಆದರೆ ಕತೆ ಹರಿಯುವಾಗ ಯಥಾರೂಪಕ್ಕೆ ವೈಭವೀಕರಣವೆಲ್ಲ ಸೇರಿಕೊಂಡು ಅವೆಲ್ಲ ಅವತಾರಗಳು ಪೌರುಷಗಳು ಪವಾಡಗಳೆಲ್ಲ ಮಿಶ್ರಣವಾಗಿ ಮಾನವನ ಬದುಕಿಗೆ ಒಂದೊಳ್ಳೆ ಮಾರ್ಗದರ್ಶಿ ಆಗುವ ಅವಕಾಶಗಳೇ ಹೊರಟುಹೋಗಿವೆ. ಉದಾಹರಣೆಗೆ ಗಮನಿಸಿ, ಕುರುಕ್ಷೇತ್ರ ಅಂತ ಸಿನಿಮಾ ಮಾಡಿದ್ದಾರಲ್ಲ, ನಿತ್ಯದ ಬದುಕಿನಲ್ಲಿ ಆ ಸಿನಿಮಾ ಕುರುಕ್ಷೇತ್ರದ ಯಾವ ಭಾಗವನ್ನು ಅಳವಡಿಸಿಕೊಳ್ಳಲು ಸಾಧ್ಯವಾದೀತು? ಹಾಗೆ ಮಾಡಲೇಬೇಕೆಂದರೆ ನಾವೂ ಒಂದು ಸೆಟ್ ನಿರ್ಮಿಸಿಕೊಂಡು ನಾಟಕ ಆಡುವುದಾಗುತ್ತೆ ಅಷ್ಟೇ! ಅಥವಾ ಅವೆಲ್ಲ ಕೇವಲ ಮನರಂಜನೆಗೋಸ್ಕರ ಇರುವ ಪಾತ್ರಗಳೆಂದೂ, ಪಾತ್ರಗಳ ಮೂಲಕ ವರ್ಗಾವಣೆಯಾಗಬೇಕಾದ ನೀತಿ, ಮಾನವೀಯತೆಯ ಅಂಶಗಳೆಲ್ಲವೂ ಸಣ್ಣಗೆ ಸದ್ದುಮಾಡಿ ಮರೆಯಾಗಿ ಹೋಗುತ್ತವೆ.

ಆಧ್ಯಾತ್ಮ ಮಾನವನ ಒಳಜಗತ್ತಿನ ಆವಿಷ್ಕಾರಕ್ಕೆ, ವಿಹಾರಕ್ಕೆ ಆ ಮೂಲಕ ಮಾನಸಿಕ ನೆಮ್ಮದಿಗೆ ಒಂದು ಸಾಧನವಾಗಬೇಕು. ಆಧ್ಯಾತ್ಮ ಪ್ರತಿವ್ಯಕ್ತಿಗೂ ವೈಯಕ್ತಿಕವಾದದ್ದು. ಪ್ರತಿಯೊಬ್ಬರೂ ತಮಗೆ ಒಪ್ಪುವ ದೈವಿಕತೆಯನ್ನು ತಾವೇ ತಮ್ಮ ವಿಚಾರವಂತಿಕೆಯಿಂದ ಸಿದ್ಧಿಸಿಕೊಳ್ಳುವ ಹಾದಿ ತೆರೆದುಕೊಳ್ಳಬೇಕು, ಈ ದಾರಿಯಲ್ಲಿ ಪರಮಹಂಸರು, ವಿವೇಕಾನಂದರೂ ಕೆಲಸ ಮಾಡಿದ್ದಾರೆ. ಅದು ಬಿಟ್ಟು ಎಲ್ಲೋ ಯಾರೋ ಗುನುಗಿದ ಮಂತ್ರಕ್ಕೆ ಕಿವಿಯೊಡ್ಡುವ, ಯಾರೋ ಕೊಡುವ ತೀರ್ಥ ಪ್ರಸಾದಗಳೊಳಗಷ್ಟೇ ಭಕ್ತಿ ತೋರಿಸಿ ಅದನ್ನೇ ಆಧ್ಯಾತ್ಮ ಅಂದುಕೊಂಡು ಭ್ರಮೆಯಲ್ಲಿರುವುದು ಸೂಕ್ತ ಅಲ್ಲ.ವ್ಯಕ್ತಿ,   ವ್ಯಕ್ತಿತ್ವಗಳ ವಿಕಸನಕ್ಕೆ ಬೇಕಾದ ಪರಿಸರವನ್ನು ರೂಢಿಸುವುದಕ್ಕಾಗಿ ಪುರಾಣದ ಪಾತ್ರಗಳಿದ್ದರೆ, ಅವುಗಳ ಉಪಯೋಗ ಮಾತ್ರ ರಾಜಕಾರಣಕ್ಕೆ, ಮುಜರಾಯಿ ಇಲಾಖೆಯ(ಮುಜರಾಯಿಗೆ ಒಳಪಡದ ಖಾಸಗಿ ಸಂಸ್ಥೆಗಳನ್ನೂ ಸೇರಿಸಿಕೊಳ್ಳಬಹುದು) ಆದಾಯಕ್ಕೆ ಸೀಮಿತವಾಗಿಬಿಟ್ಟಿವೆ. ಅಂತಹವು ಬದಲಾಗಬೇಕು ಅಂತ ಕುವೆಂಪು ತರದ ನಮ್ಮ ಕಾಲದ ದಾರ್ಶನಿಕರು ಎಷ್ಟೇ ಪ್ರಯತ್ನಪಟ್ಟರೂ ಈ ಮೊದಲು ಹೇಳಿದ ಗೌಜಿಯ ಕಾರಣದಿಂದಾಗಿ ಅವರ ದರ್ಶನ, ಮಾರ್ಗದರ್ಶನಗಳೆಲ್ಲ ಹೊಳೆಯಲ್ಲಿ ಹುಣಸೆ ಕಲಸಿದ ಹಾಗೆ. ಯಾವ ಮೂಲೆಗೂ ಸಾಲುವುದಿಲ್ಲ.

ಹಾಗಾಗಿ ಗೆಳೆಯನಿಗೆ ಇಷ್ಟೇ ಹೇಳಬೇಕು ಅಂದುಕೊಂಡೆ. ನೆಮ್ಮದಿಗೆ ಬೇಕಾಗಿರುವುದನ್ನು ಸಂಪಾದಿಸಲು ಸಮಾಜದಲ್ಲಿರುವ ಸರಿಯಾದ, ನೈತಿಕವಾದ ದಾರಿ ಯಾವುದಿದೆಯೋ ಆ ಮೂಲಕ ಬದುಕು ಕಟ್ಟಿಕೊಳ್ಳಲು ಏನು ಬೇಕೋ ಅದು ಮಾಡೋಣ. ಇಲ್ಲಿ ನೆಮ್ಮದಿಯ ಅಗತ್ಯಗಳನ್ನು ಇಲ್ಲಿ ಹೇಳಿರುವ ಕ್ರಮದಲ್ಲಿಯೇ ಆದ್ಯತೆಯಾಗಿ ತೆಗೆದುಕೊಳ್ಳೋಣ. 

೧. ಅನ್ನ  ೨. ಅರಿವು .೩ಅರಿವೆ (ಬಟ್ಟೆ). ೪. ಆರೋಗ್ಯ (ದೈಹಿಕಹಾಗೂಮಾನಸಿಕ) ೫. ವಸತಿ.

(ಹೇಳ್ಕಾಳಾಕ್ಒಂದೂರುತಲೆಮ್ಯಾಲೆಒಂದ್ಸೂರು). ಇದರಾಚೆಗೆ ಏನೇ ಬಂದರೂ ಬರದಿದ್ದರೂ ಅಡ್ಡದಾರಿಯ ಕಡೆ ಯೋಚನೆಯನ್ನು ಹರಿಯಗೊಡದಿದ್ದರೆ, ಇದ್ದುದ್ದರಲ್ಲಿ ನೆಮ್ಮದಿ ಕಾಣುವುದು ಸಾಧ್ಯ ಇದೆ. ಹೀಗೇ ಇದ್ದಾಗಲೂ ಗೌರವ, ಮನ್ನಣೆ, ಅಂತಸ್ತು ಇತ್ಯಾದಿಗಳೆಲ್ಲವೂ ಬಂದರೂ ಸಹ ಮತ್ತೆ ನಿಂಬೆಹುಳಿಬೆಳಕಿನ ಕಡೆ (ನನ್ನ ಪ್ರಕಾರ ಇದನ್ನ ʼಹುಸಿಬೆಳಕುʼ ಅನ್ನಬಹುದು) ಜಿಗಿಯುವ ಮಿಡತೆಯಂತಾಗದೇ ನಮ್ಮ ಸ್ವಕರ್ಮವನ್ನು ಬಿಟ್ಟುಕೊಡದೇ ಇದ್ದರೆ ಅಷ್ಟು ಸಾಕು. ಈಗಿರುವ ತಲೆಮಾರಿನವರಿಗೂ, ಮುಂದೆ ಬರುವ ತಲೆಮಾರಿನವರಿಗೂ ಇದರಿಂದ ನಾವು ಗಳಿಸಿ ಗುಡ್ಡೆಹಾಕಿದ್ದು ಏನನ್ನೂ ತೋರ್ಪಡಿಸುವುದು ಸಾಧ್ಯವಾಗದೇ ಇದ್ದರೂ, ಯಾರನ್ನೂ, ಏನನ್ನೂ ನಾಶಮಾಡಿ ನಾವು ಬದುಕು ಕಟ್ಟಿಕೊಂಡಿಲ್ಲ ಅನ್ನುವ ನೆಮ್ಮದಿಯ ಮುಂದೆ ಬೇರೆ ಯಾವ ಗುಡ್ಡೆ ಐಶ್ವರ್ಯಗಳೂ   ನಗಣ್ಯ. ಇಷ್ಟರ ಬಗ್ಗೆ ಯೋಚಿಸಿ ಮುಂದುವರಿಯುವ ಆತ್ಮಶಕ್ತಿ ಬರಲಿ.

ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ?

ಸತ್ಯವಾದ ಘನತೆ ಸೋಲೇ ಕಾಣದಂತೆ.

************

Leave a Reply

Back To Top