ಕಾವ್ಯಯಾನ

ಒಂದು ಕವಿತೆ

ಎಂ.ಎಸ್.ರುದ್ರೇಶ್ವರ ಸ್ವಾಮಿ

(he ran away from there, he preferred her. she shouted – listen, I am older than you… was he too young for her?)

ನಿನ್ನೆ ಮೊನ್ನೆಯಿಂದ ಮುನಿದು
ದೂರವೇ ಇದ್ದ
ಅವಳು, ಮತ್ತೆ ಬಂದು ಮಕ್ಕಳ ಆಟ
ಆಡೋಣವಾ? ಎಂದು,
ಮಗುವಿನ ಹಾಗೆ ಕೇಳಿದಳು.

ಭಾಷೆ, ಮಾತಿನ
ಅರ್ಥದ ಜಾಡು ಹಿಡಿದು ವಿಶ್ಲೇಷಣೆಗೆ
ಸಿದ್ಧವಾಯಿತು; ಮಗುವಿನ
ಹಾಗೆ, ಮಗುವಲ್ಲ ಅವಳು.

ಮನಸ್ಸು ನದಿ-
ಯ ಹಾಗೆ ಹರಿಯುತ್ತಲೇ ಹಿಂತಿರುಗಿ
ನೋಡಬಲ್ಲದು.
ಗೌರಿಶಂಕರದ ಕನಸು
ಕಾಣುತ್ತ ಮಳೆಯಾಗಿ ಇಳೆ ಸುತ್ತಬಲ್ಲದು.

ಮಕ್ಕಳ ಆಟ ಆಡೋಣವಾ?
ಮತ್ತೆ ಕೇಳಿದಳು.

ಒಂದು ಮೆಟಾಫರ್-ಗಾಗಿ ಕಾಯುತ್ತಿದ್ದ
ನನಗೆ, ಗತಿಸಿದ
ದಿನಗಳು ಕಣ್ಣ ಮುಂದೆ
ಥಕ ಥಕನೆ
ಕುಣಿಯಹತ್ತಿದವು. ಅವಳು ನನಗಿಂತ
ಒಂದು ವರ್ಷಕ್ಕೆ
ದೊಡ್ಡವಳು, ಐದು ಇರಬಹುದು,
ನನಗೆ ನಾಲ್ಕು.
ನಮಗೆಲ್ಲ ಅವಳೇ ಲೀಡರ್. ಅವಳ ಜೊತೆ
ಹುಡುಗಿಯರು; ನಾನಿದ್ದಲ್ಲಿ
ಹುಡುಗರು. ಅದಕ್ಕೇ
ಅವಳು ನನ್ನನ್ನೇ
ಕೇಳಿದ್ದು. ಮದುವೆ-ಆಟ ಆಡೋಣ, ಎಂದು.

ಬಟ್ಟೆಯಲ್ಲಿ ಗೊಂಬೆ-
ಮಾಡಿ, ಆಟ ಶುರು…
ನೀನು ಮದುವಣಿಗ,
ಗೌರಿ ಮದುವಣಗಿತ್ತಿ, ಎಂದು ಹೇಳುತ್ತ,
ಕೈ-ಹಿಡಿದು ನಮ್ಮಿಬ್ಬರನ್ನೂ ಕೂರಿಸಿ
ಅರಿಸಿನದ ನೀರು-
ಹಾಕುವ ಶಾಸ್ತ್ರ
ಶುರು ಆಗುತ್ತಿದ್ದಂತೆ, ಅಲ್ಲಿಂದ ಎದ್ದು, ನೀನು
ಹೆಂಡತಿ ಆಗುವುದಾದರೆ,
ಸರಿ. ಇಲ್ಲ, ನಾನು ಆಟ
ಕೆಡಿಸುತ್ತೇನೆ
ಎಂದು, ಸಿಟ್ಟಿನಿಂದ ಅವಳಿಗೆ ಹೇಳಿ ಕಾಲುಕಿತ್ತೆ.

ಕಿರುಚಿ ಕೂಗಿದಳು, ನಾನು –
ದೊಡ್ಡೋಳು ಕಣೋ, ನಿನ್ನ ಹೆಂಡತಿ
ಆಗುವುದಕ್ಕೆ….

*********

One thought on “ಕಾವ್ಯಯಾನ

  1. ಒಂದು ಮೆಟಫರ್ ಗಾಗಿ ಕಾಯುತ್ತಿದ್ದೆ.. ಚೆಂದ ಸರ್..

Leave a Reply

Back To Top