ಪ್ರಸ್ತುತ

ಅಪ್ಪ

Indian Ink Painting of A Father With Son | DesiPainters.com

ರಾಘವೇಂದ್ರ ಈ ಹೊರಬೈಲು

“ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ” ಭೂಮಿಯ ಮೇಲೆ ಕಣ್ಣಿಗೆ ಕಾಣುವ, ಜೊತೆಯಲ್ಲಿಯೇ ಇರುವ, ಕಷ್ಟವೆಂದಾಗ ಮರುಗುವ, ದಾರಿಗೆಡದಂತೆ ಮಾರ್ಗದರ್ಶನ ಮಾಡುವ ಮೂರು ದೈವಗಳೆಂದರೆ ತಂದೆ, ತಾಯಿ ಮತ್ತು ಗುರು. ಇಡೀ ಭೂಮಂಡಲದ ಪ್ರತಿಯೊಬ್ಬರಿಗೂ ಇವರೇ ನಿಜವಾದ ತ್ರಿಮೂರ್ತಿಗಳು. ಮಗುವನ್ನು ಸದ್ಗತಿಗೆ ತರುವಲ್ಲಿ ಮೂವರ ಪಾತ್ರವೂ ಬಹುಮುಖ್ಯವಾದುದು. ತಾಯಿಯಾದವಳು ಕರುಣಾಮಯಿಯಾಗಿ, ಮುದ್ದು ಮಾಡುತ್ತಾ, ಸದಾ ಮಗುವಿನ ಹಿತಕ್ಕಾಗಿಯೇ ಬದುಕುವವಳು. ಗುರುವಾದವನು ಮಗುವು ದಾರಿ ತಪ್ಪದಂತೆ ಮಾರ್ಗದರ್ಶನ ನೀಡಿ, ಜಗತ್ತಿನ ಪರಿಚಯ ಮಾಡಿಕೊಡುವವನು. ಆದರೆ ತಂದೆಯಾದವನು ತಾಯಿಯಷ್ಟು ಮುದ್ದು ಮಾಡದೆ ಒರಟೊರಟಾಗಿ ಇದ್ದರೂ, ಹೃದಯದ ತುಂಬಾ ಪ್ರೀತಿಯನ್ನೇ ಹೊದ್ದು, ಮಗುವಿನ ಏಳ್ಗೆಗಾಗಿ ಹಗಲಿರುಳು ಶ್ರಮಿಸುವವನು. ಅಮ್ಮ ಭೂಮಿಯಂತೆ ಸಹಿಷ್ಣುವಾದರೆ, ಅಪ್ಪ ಆಕಾಶದಂತೆ ವಿಶಾಲವಾದವನು.

ನನ್ನಪ್ಪಾಜಿಯೂ ಕೂಡಾ ಮಗನಾದ ನನ್ನ ವಿಷಯದಲ್ಲಿ ಒರಟುತನಕ್ಕೆ, ಆಕಾಶದಂತಹ ಮನಸ್ಥಿತಿಗೆ ಹೊರತಾಗದವರು. ಚಿಕ್ಕವನಿದ್ದಾಗ ಅಪ್ಪಾಜಿಯಿಂದ ಕುಳಿತರೂ ಏಟು, ನಿಂತರೂ ಏಟು  ತಿಂದಿದ್ದರಿಂದ ಹಿಟ್ಲರನ ಬಗ್ಗೆ ಶಾಲೆಯಲ್ಲಿ ಓದಿ, ನಮ್ಮಪ್ಪಾಜಿಯನ್ನು ನೋಡಿದಾಗಲೂ ಹಿಟ್ಲರನನ್ನು ಕಂಡಂತೆಯೇ ಹೆದರಿ ಓಡುತ್ತಿದ್ದ ಘಳಿಗೆಗಳಿಗೆ ಲೆಕ್ಕವಿಲ್ಲ. ತೀರಾ ಸಣ್ಣ ತಪ್ಪು ಮಾಡಿದಾಗಲೂ ಬಾರುಕೋಲು ಹಿಡಿದು, ಬೀದಿಯಲ್ಲೆಲ್ಲ ಓಡಾಡಿಸಿ ಹೊಡೆದಿದ್ದರಿಂದ ಅವರಲ್ಲಿರುವ ಒಂದಿಷ್ಟು ಶಿಸ್ತು, ಬದ್ಧತೆ ನನಗೂ ಬಂತೆಂದರೆ ತಪ್ಪಿಲ್ಲ. ತಪ್ಪನ್ನು ಮಾಡಲು ಅವಕಾಶವನ್ನೇ ಕೊಡದಂತೆ ತಪರಾಕಿ ಕೊಡುತ್ತಿದ್ದರಿಂದ, ತಪ್ಪು ಮಾಡುವ ಆಲೋಚನೆಯೇ ಬರದಂತೆ ಮಾಡಿದವರು ನನ್ನಪ್ಪಾಜಿ. ಕೇವಲ ಸದಾ ಬಾರುಕೋಲು ಬೀಸಿ, ಬಡಿದಿದ್ದರೆ ನಾನಿಂದು ಒರಟು ಮನುಷ್ಯನಾಗಿ, ತಂದೆಯ ವಿರುದ್ದವೇ ತಿರುಗಿಬಿದ್ದು, ದಾರಿ ತಪ್ಪಿದ ಮಗನಾಗುತ್ತಿದ್ದೆನೇನೋ? ಆದರೆ ಪ್ರತೀ ಹೊಡೆತದ ಹಿಂದೆ ಅಪ್ಪಾಜಿಯ ಅಂತಃಕರಣ ಕಂಡಿದ್ದೇನೆ. ಹೊಡೆದ ದಿನ ರಾತ್ರಿ ಮಲಗಿ ನಿದ್ರಿಸುವಾಗ ನೋವಾದ ಜಾಗಕ್ಕೆ ಮುಲಾಮು ತಿಕ್ಕಿ, ತಾನೇಕೆ ಮಗನಿಗೆ ಹೊಡೆದುಬಿಟ್ಟೆ ಎಂದು ಮಮ್ಮಲ ಮರಗಿದ್ದನ್ನು ಕಂಡಿದ್ದೇನೆ. ದಾರಿ ತಪ್ಪಲು ಬಿಡದೆ ಹೊಡೆದು ಬುದ್ಧಿ ಕಲಿಸಿದರೆ, ಮುಂದೆ ತನ್ನ ಮಗ ತನ್ನಂತೆ ಅನಕ್ಷರಸ್ಥನಾಗದೇ ದೊಡ್ಡ ವ್ಯಕ್ತಿಯಾಗಬೇಕೆಂದು ಅಮ್ಮನೊಡನೆ ಹೇಳುತ್ತಿದ್ದುದನ್ನು ಮಲಗಿದಲ್ಲಿಂದಲೇ ಆಲಿಸಿದ್ದೇನೆ. ಮನೆಯಲ್ಲಿ ಕಡುಬಡತನವಿದ್ದರೂ ಮಕ್ಕಳಾದ ನಮ್ಮ ಹಂತಕ್ಕೆ ತಾಕದಂತೆ, ಯಾರ್ಯಾರದೋ ಕೈಕಾಲು ಹಿಡಿದಾದರೂ, ನಾವು ಕೇಳಿದ್ದೆಲ್ಲವನ್ನೂ ಅದೆಷ್ಟೆಷ್ಟೋ ಕಷ್ಟಪಟ್ಟಾದರೂ ಒದಗಿಸಿ ನಿಟ್ಟುಸಿರು ಬಿಟ್ಟಿದ್ದನ್ನು ನೋಡಿದ್ದೇನೆ. ಕಾಯಕವೇ ಕೈಲಾಸವೆಂಬ ಬಸವಣ್ಣನ ವಚನ ಗೊತ್ತಿಲ್ಲದಿದ್ದರೂ, ಇರುವ ಒಂದೆಕರೆ ಭೂಮಿಯಲ್ಲೇ ಹಗಲು-ರಾತ್ರಿಗಳ ವ್ಯತ್ಯಾಸವರಿಯದೆ, ಕಾಯಕವೇ ತನ್ನ ಜೀವನವೆನ್ನುವಂತೆ ದುಡಿದು, ಬಂಗಾರದ ಬೆಳೆ ತೆಗೆದು, ಅಕ್ಕಪಕ್ಕದವರು ಹುಬ್ಬೇರಿಸುವಂತೆ ಮಾಡಿದ್ದನ್ನು ಕಂಡಿದ್ದೇನೆ. ಕಾಲಿನಲ್ಲಿ ದೊಡ್ಡ ಹುಣ್ಣಾಗಿ, ನಡೆಯಲೂ ಹರಸಾಹಸಪಡುವಂತಿದ್ದರೂ, ಸುಮ್ಮನೆ ಕುಳಿತರೆ ದುಡಿಯುವರ್ಯಾರು, ಸಂಸಾರ ನಡೆಯುವುದು ಹೇಗೆಂದು ಕಾಲಿಗೆ ಬಟ್ಟೆ ಕಟ್ಟಿಕೊಂಡು, ಕೆಸರಿನಲ್ಲಿಯೇ ದುಡಿದದ್ದನ್ನು ಕಂಡು ಮರುಗಿದ್ದೇನೆ.

 ಕಾಯ ವಾಚಾ ಮನಸಾ ಪ್ರತಿಯೊಂದೂ ಶುದ್ಧವಾಗಿರಬೇಕೆಂಬ ಅಪ್ಪಾಜಿಯ ಶುದ್ಧತೆಯ ಬದ್ಧತೆಯನ್ನು ಕಂಡು ನಿಬ್ಬೆರಗಾಗಿದ್ದೇನೆ. ಒಮ್ಮೆ ಮೈಮೇಲೆ ಧರಿಸಿದ ಬಟ್ಟೆಯನ್ನು ಶುಚಿಗೊಳಿಸದೇ ಇನ್ನೊಮ್ಮೆ ಧರಿಸಿದ ಉದಾಹರಣೆಯನ್ನೇ ನಾನು ಕಂಡಿಲ್ಲ. ಹಾಗಂತ ಮನೆಯಲ್ಲಿ ಕೈಗೊಂದು ಕಾಲಿಗೊಂದು ಆಳುಗಳಿದ್ದು, ಬಟ್ಟೆ ತೊಳೆಯುತ್ತಿದ್ದರೆಂದಲ್ಲ. ಹೊಲದಲ್ಲಿ, ಮನೆಯಲ್ಲಿ ಮೈಮುರಿಯುವಂತೆ ದುಡಿದು ಬಂದರೂ, ಅಮ್ಮನಿಗೊಬ್ಬಳಿಗೇ ಎಲ್ಲಾ ಬಟ್ಟೆಗಳನ್ನು ತೊಳೆಯುವುದು ಕಷ್ಟವಾಗುವುದೆಂದು ತನ್ನ ಬಟ್ಟೆಗಳನ್ನು ತಾನೇ ತೊಳೆದುಕೊಂಡಿದ್ದನ್ನು ನೂರಾರು ಬಾರಿ ನೋಡಿ, ತನಗೆಷ್ಟೇ ಕಷ್ಟವಾದರೂ ಬೇರೆಯವರಿಗೆ ನೋವು ಕೊಡಬಾರದೆಂದು ಬದುಕುವ ರೀತಿಯನ್ನು ಕಂಡು, ಮಹಾತ್ಮಾ ಗಾಂಧೀಜಿಯವರನ್ನು ನೆನಪಿಸಿಕೊಂಡಿದ್ದೇನೆ.

ಮನೆಯಲ್ಲಿ ಒಂದೊಂದು ರೂಪಾಯಿಗೂ ಕಷ್ಟವೆನ್ನುವ ಪರಿಸ್ಥಿತಿಯಿದ್ದರೂ ಭಿಕ್ಷೆ ಕೇಳಿ ಬರುವವರಿಗೆ ಸೇರುಗಟ್ಟಲೆ ಅಕ್ಕಿಯನ್ನೋ, ಭತ್ತವನ್ನೋ, ಕೆಲವೊಮ್ಮೆ ಕೈಯಲ್ಲಿದ್ದ ಹತ್ತು, ಇಪ್ಪತ್ತು, ಐವತ್ತರ ನೋಟುಗಳನ್ನು ಕೊಟ್ಟಿದ್ದನ್ನು ಗಮನಿಸಿದ್ದೇನೆ. ದೇವ-ದೈವಗಳ ಬಗ್ಗೆ ಅಪಾರ ಭಕ್ತ ಹೊಂದಿ, ಅದೆಷ್ಟೋ ವರ್ಷಗಳಿಂದ ದೂರದೂರದ ದೇವಸ್ಥಾನಗಳಿಗೆ ಎಂದೂ ತಪ್ಪಿಸದೇ ಪ್ರತೀ ವರ್ಷವೂ ಹೋಗಿ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸಿ ಬಂದಿದ್ದನ್ನು, ಹೋಗಲಾಗದ ಇನ್ನೂ ಕೆಲವು ತೀರ್ಥಕ್ಷೇತ್ರಗಳಿಗೆ ಅಂಚೆಯ ಮೂಲಕ ಹಣ ಕಳುಹಿಸಿ, ಪ್ರಸಾದ ತರಿಸಿಕೊಂಡು ಧನ್ಯತಾಭಾವ ಹೊಂದಿದ್ದನ್ನು ಕಂಡು “ಕೈಯಲ್ಲಿ ಕಾಸಿಲ್ಲದಿದ್ದರೂ ಹೀಗೆ ಸಿಕ್ಕ ಸಿಕ್ಕ ದೇವರಿಗೆಲ್ಲ ಹರಕೆ- ಪೂಜೆ ಯಾಕೆಂದು” ಕೋಪಗೊಂಡು ಅಪ್ಪಾಜಿಯ ವಿರುದ್ಧವೇ ಹರಿಹಾಯ್ದಿದ್ದೇನೆ. ಅದಕ್ಕೂ ಕೋಪಗೊಳ್ಳದೆ “ದೇವರನ್ನು ನಂಬಿದರೆ ಒಳ್ಳೆಯದಾಗೇ ಆಗುತ್ತೆ ಇದು ನನ್ನ ನಂಬಿಕೆ, ನಿನಗೆ ನಂಬಿಕೆಯಿದ್ದರೆ ನಂಬು, ಇಲ್ಲದಿದ್ದರೆ ಬಿಡು, ನಾನಿರುವವರೆಗೆ ನಡೆಸಿಕೊಂಡು ಹೋಗುತ್ತೇನೆ” ಎಂಬ ಅವರ ವಿಶ್ವಾಸವನ್ನು ಕಂಡು ದಂಗಾಗಿದ್ದೇನೆ.

ಒಟ್ಟಿನಲ್ಲಿ ಒಂದೆರೆಡು ಮಾತುಗಳಲ್ಲಿ ಅಪ್ಪನನ್ನು ಕುರಿತು ಬರೆದು ಮುಗಿಸಿಬಿಡುವುದು, ಅಪ್ಪನಿಗೆ ಮಾಡುವ ಅವಮಾನ. ಯಾಕೆಂದರೆ ಅವನು ಪದಗಳಿಗೆ, ಶುಷ್ಕ ಪದಗಳ ವರ್ಣನೆಗೆ ನಿಲುಕದ ಎತ್ತರದ ವ್ಯಕ್ತಿತ್ವದವನು. ಅವನು ಅದೆಷ್ಟೇ ಒರಟನಾದರೂ, ಅವನೊಳಗೂ ಒಂದು ಅಂತಃಕರಣವಿರುವದನ್ನು ಮಕ್ಕಳಾದವರು ಮರೆಯಬಾರದು. ಹಾಗಾಗಿ ಅಪ್ಪನನ್ನು ಪ್ರೀತಿಸದವನು ಪಾಪಿಯೇ ಸರಿ. ಏನೇ ಆಗಲಿ ನನಗಾಗಿ ಹಗಲಿರುಳು ದುಡಿದು, ತಾನು ನಂಬಿದಂತೆಯೇ ನಡೆಯುತ್ತಾ, ನನಗೊಂದು ದಾರಿ ತೋರಿದ ನನ್ನಪ್ಪನಿಗೊಂದು ಧೀರ್ಘ ನಮನ.

******************

10 thoughts on “ಪ್ರಸ್ತುತ

  1. ಅಪ್ಪನೆಂಬ ಅದ್ಭುತ ದ ಬಗ್ಗೆ ಮನ ತಟ್ಟಿದ ಬರಹ

  2. ನನ್ನ ಬಾಲ್ಯ ಹಾಗು ವಾಸ್ತವತೆಯಲ್ಲಿಯು ಅಪ್ಪನ ವಾತ್ಸಲ್ಯ ವನು ಮೆಲುಕಿಸಿತು..ಅಭಿನಂದನೆಗಳು.

Leave a Reply

Back To Top