ಅಪ್ಪ

ಬಿದಲೋಟಿ ರಂಗನಾಥ್

ವಾತ್ಸಲ್ಯದ ಕೆನೆಕಟ್ಟಿ
ಅಪ್ಪನ ಕರಳು ಅರಳಿ
ಕಿರುಬೆರಳಿಡಿದು ನಡೆದ ಸ್ಪರ್ಶದ ಸುಖ
ಮೀಸೆ ಬಲಿತರೂ ಕಾಡುವ ನೆನಪು
ಊರ ಜಾತ್ರೆಯಲಿ
ಕನ್ನಡಕದೊಳಗಿನ ಕಣ್ಣು ಬರೆದ ಕವನ
ಮೌನದ ಮೆದು ಭಾಷೆಯಲಿ
ಹೃದಯ ತಟ್ಟಿ ಅವ್ವನ ನಿರರ್ಗಳ ಉಸಿರು
ದುಡ್ಡಿಲ್ಲದ ಅಪ್ಪನ ಜೇಬಿನಲಿ
ನೋವಿನ ಜೇಡರ ಬಲೆ ಕಟ್ಟಿದರೂ
ಬಿಡಿಸುತ್ತಾನೆ ಎಳೆ ಎಳೆಯಾಗಿ
ಕಾಲದ ನೆರಳ ಮೇಲೆ ಕುಳಿತು
ಅಪ್ಪನ ಹೇಗಲ ಮೇಲೆ
ಎರಡೂ ಕಾಲುಗಳು ಇಳಿಬಿಟ್ಟು
ಜಗದ ಬೆಳಕನು ಕಣ್ಣುಗಳಲ್ಲಿ ತುಂಬಿಕೊಂಡು
ನಡೆಯುವಾಗಿನ ದಾರಿಯ ಬದಿಯಲಿ
ಗರಿಕೆ ಚಿಗುರುವ ಪರಿಗೆ
ಸೂರ್ಯನಿಗೂ ಹೊಟ್ಟೆಕಿಚ್ಚು
ಗುಡಿಸಲ ಕವೆಗೆ ನೇತಾಕಿದ್ದ
ತಮಟೆಯ ಸದ್ದಿನಲಿ
ಕತ್ತಲೆಯ ಬೆನ್ನು ಮುರಿವ ಗತ್ತು
ಬೀಡಿ ಹೊಗೆಯು ಬರೆಯುವ ಚಿತ್ರ
ಮಗನೆಂದು ಬೀಗುವ ಎದೆಯಲಿ
ಎಷ್ಟೊಂದು ದಾರಿದೀಪದ ಬೆಳಕು
ಜೀವನದುದ್ದಕ್ಕೂ ಕಾವಲುಗಾರನಾಗಿ
ಬೆನ್ನಿಗೆ ಬಿದ್ದವನು
ದೇವರಿಗಿಂತಲೂ ಮಿಗಿಲು
*******