ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಅಂತಿಮ ತ್ಯಾಗ
ಆತ ಹಿಮಾಚಲ ಪ್ರದೇಶದ ಶಾಲೆಯೊಂದರಲ್ಲಿ ಓರ್ವ ಸ್ಕೂಲ್ ಟೀಚರ್ ಮತ್ತು ಆತನ ಪತ್ನಿ ಓರ್ವ ಗೃಹಿಣಿ… ಕೆಲ ತಿಂಗಳುಗಳ ಹಿಂದೆ ತಮ್ಮ ಮಗನನ್ನು ಕಾರ್ಗಿಲ್ ಯುದ್ಧದಲ್ಲಿ ಕಳೆದುಕೊಂಡಿದ್ದ ಆ ದಂಪತಿಗಳಿಗೆ ಮಗ ವೀರ ಮರಣ ಹೊಂದಿದ ಸ್ಥಳಕ್ಕೆ ಭೇಟಿ ನೀಡುವ ಅಪೇಕ್ಷೆಯಿದ್ದು ಅದಕ್ಕಾಗಿ ಅನುಮತಿ ಪಡೆಯಲು ರಕ್ಷಣಾ ಸಚಿವಾಲಯಕ್ಕೆ ಕಾಗದ ಬರೆದರು. ಆ ಕಾಗದದಲ್ಲಿ ಅವರು ನನ್ನ ಮಗ ವೀರ ಮರಣ ಹೊಂದಿದ ಸ್ಥಳವನ್ನು ನಾನು ಮತ್ತು ನನ್ನ ಪತ್ನಿ ಆತನ ಮೊದಲ ವರ್ಷದ ಪುಣ್ಯತಿಥಿ 2000 ಜುಲೈ 7ರಂದು ನೋಡಲು ಇಚ್ಚಿಸುತ್ತೇವೆ. ಸಾಧ್ಯವಾದರೆ ನಮ್ಮ ಈ ಕೋರಿಕೆಯನ್ನು ಸ್ವೀಕರಿಸಿ ಅನುವು ಮಾಡಿಕೊಡಿ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗುತ್ತದೆ ಎಂದು ರಕ್ಷಣಾ ಸಚಿವಾಲಯಕ್ಕೆ ತೋರಿದಲ್ಲಿ ನಾನು ನನ್ನ ಈ ಅಹವಾಲನ್ನು ಹಿಂತೆಗೆದುಕೊಳ್ಳುತ್ತೇನೆ ಎಂದು ಬರೆದಿದ್ದರು.
ಪತ್ರವನ್ನು ಓದಿದ ಹಿರಿಯ ಸೇನಾಧಿಕಾರಿ ಆ ಟೀಚರ್ ಮತ್ತು ಅವರ ಪತ್ನಿಯನ್ನು ಅವರ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಜಾಗಕ್ಕೆ ಕರೆದುಕೊಂಡು ಹೋಗಲು ಅದೆಷ್ಟೇ ಖರ್ಚಾದರೂ ಅದನ್ನು ನನ್ನ ಸಂಬಳದಿಂದ ಕೊಡುತ್ತೇನೆ ಎಂದು ಹೇಳಿದ್ದಲ್ಲದೇ, ಅಕಸ್ಮಾತ್ ರಕ್ಷಣಾ ಸಚಿವಾಲಯ ಇದಕ್ಕೆ ಒಪ್ಪದೇ ಹೋದರೂ ಕೂಡ ನಾನು ನನ್ನ ಮಾತಿಗೆ ಬದ್ಧನಾಗಿ ಆ ದಂಪತಿಗಳ ಇಚ್ಛೆಯನ್ನು ಪೂರೈಸುತ್ತೇನೆ ಎಂದು ಮುಂದಿನ ಕ್ರಮಗಳಿಗೆ ಆದೇಶವಿತ್ತರು..
2000 ಇಸವಿಯ ಜುಲೈ 7ರ ದಿನ ಕಾರ್ಗಿಲ್ ನ ಯುದ್ಧ ಭೂಮಿಗೆ ಆ ದಂಪತಿಗಳನ್ನು ಸಗೌರವದಿಂದ
ಕರೆತರಲಾಯಿತು. ವೀರ ಮರಣ ಹೊಂದಿದ ಸ್ಥಳಕ್ಕೆ ಆ ದಂಪತಿಗಳನ್ನು ಕರೆ ತಂದಾಗ ಅಲ್ಲಿ ನೆರೆದಿದ್ದ ಎಲ್ಲಾ ಸೇನೆಯ ಸಿಬ್ಬಂದಿ ಎದ್ದು ನಿಂತು ಎದೆ ಸೆಟೆಸಿ ಆ ದಂಪತಿಗಳಿಗೆ ಗೌರವದಿಂದ ಸೆಲ್ಯೂಟ್ ಮಾಡಿದರು. ಓರ್ವ ಸೇನೆಯ ಆಫೀಸರ್ ಮಾತ್ರ ಆ ದಂಪತಿಗಳಿಗೆ
ಹೂವಿನ ಗುಚ್ಚವೊಂದನ್ನು ನೀಡಿ ಶಿರ ಬಾಗಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಕಣ್ಣೊರೆಸಿಕೊಂಡು ಗೌರವದಿಂದ ಸೆಲ್ಯೂಟ್ ಮಾಡಿದನು.
ಇದನ್ನು ನೋಡಿ ಭಾವುಕರಾದ ಆ ಶಿಕ್ಷಕರು ನೀವು ಒಬ್ಬ ಸೇನಾಧಿಕಾರಿ… ನೀವೇಕೆ ನನ್ನ ಪಾದ ಮುಟ್ಟಿ ನಮಸ್ಕರಿಸಿದರು ಎಂದು ಕೇಳಿದರು.
ನಿಮ್ಮ ಮಗ ವೀರೋಚಿತ ಹೋರಾಟವನ್ನು ಮಾಡಿ ಪ್ರಾಣ ತ್ಯಾಗ ಮಾಡಿದ್ದನ್ನು ಕಣ್ಣಾರೆ ನೋಡಿದ ಏಕೈಕ ವ್ಯಕ್ತಿ ನಾನೇ. ಪಾಕಿಸ್ತಾನಿಗಳು ತಮ್ಮ ಹೆಚ್ ಎಂ ಜಿ ಶಸ್ತ್ರಗಳಿಂದ ನಿಮಿಷಕ್ಕೆ ನೂರಾರು ಗುಂಡುಗಳನ್ನು. ಹಾರಿಸಿ ನಮ್ಮವರನ್ನು ಬಲಿ ತೆಗೆದುಕೊಳ್ಳುತ್ತಿದ್ದರು. ನಿಮ್ಮ ಮಗನು ಸೇರಿದಂತೆ ನಾವು ಐದು ಜನ ಅವರು ದಾಳಿ ಮಾಡುತ್ತಿದ್ದ ಬಂಕರ್ ಗೆ ಸುಮಾರು 30 ಅಡಿ ಹತ್ತಿರದವರೆಗೂ ಸಾಗಿ ಬಂಡೆಯ ಹಿಂದೆ ಬಚ್ಚಿಟ್ಟು ಕೊಂಡೆವು. ನಾನು ನಿಮ್ಮ ಮಗನಿಗೆ ನಾನು ಡೆತ್ ಚಾರ್ಜ್ ತೆಗೆದುಕೊಂಡು ಶತ್ರುಗಳ ಗುಂಡನ್ನು ಎದುರಿಸುತ್ತಾ ಅವರ ಬಂಕರ್ ಬಳಿ ಹೋಗಿ ಗ್ರೆನೇಡನ್ನು ಹಾಕಿ ಅವರ ಬಂಕರನ್ನು ನಾಶ ಮಾಡುತ್ತೇನೆ ನಂತರ ನೀವು ಈ ಬೆಟ್ಟವನ್ನು ವಶಪಡಿಸಿಕೊಳ್ಳಬಹುದು ಎಂದು ಗ್ರೆನೇಡ್ ಕೈಯಲ್ಲಿ ಹಿಡಿದುಕೊಂಡು ಸನ್ನದ್ಧನಾಗಿ ಹೇಳಿದಾಗ ನನ್ನ ಕೈಯಿಂದ ಗ್ರನೇಡನ್ನು ಕಸಿದುಕೊಂಡ ನಿಮ್ಮ ಪುತ್ರ ‘ನಿನಗೇನು ಹುಚ್ಛೇ?
ನಿನಗೆ ಮದುವೆಯಾಗಿ ಒಂದು ಮಗುವಿದೆ ಕೂಡ… ನಾನಿನ್ನೂ ಅವಿವಾಹಿತ. ನಾನೇ ಡೆತ್ ಚಾರ್ಜ್ ತೆಗೆದುಕೊಂಡು ಹೋಗುವೆ ನೀನು ನನಗೆ ಕವರ್ ಮಾಡು ಎಂದು ಹೇಳುತ್ತಾ ಗ್ರೈನೆಡನ್ನು ಕೈಯಲ್ಲಿ ಹಿಡಿದು ವೀರಾವೇಶದಿಂದ ಶತ್ರುಗಳ ಗುಂಡಿನ ಸುರಿಮಳೆಗೆ ಎದೆಯೊಡ್ಡಿ ಬಂಕರನ್ನು ತಲುಪಿದ ಆತ ಗ್ರೆನೇಡ್‌ನ ಪಿನ್ ಅನ್ನು ತೆಗೆದು ಬಂಕರನ್ನು ಉಡಾಯಿಸುವ ಮೂಲಕ 13 ಜನ ಪಾಕಿಸ್ತಾನಿ ಸೈನಿಕರನ್ನು ಕೊಲ್ಲುವ ಮೂಲಕ ಶತ್ರು ಸೈನ್ಯವನ್ನು ನಾಶಗೊಳಿಸಿದರು. ಬಂಕರ್ ನಮ್ಮ ವಶವಾಯಿತು.
ಓಡಿ ಹೋದ ನಾನು ನಿಮ್ಮ ಪುತ್ರನ ದೇಹವನ್ನು ಎತ್ತಿಕೊಂಡೆ. ಆತನ ದೇಹದಲ್ಲಿ ಸರಿಸುಮಾರು 42 ಗುಂಡುಗಳು ಹೊಕ್ಕಿದ್ದು ಇಡೀ ದೇಹ ರಕ್ತಸಿಕ್ತವಾಗಿದ್ದು ಉಸಿರು ಚೆಲ್ಲುವ ಮುನ್ನ ಅವರ ಬಾಯಿಂದ ಹೊರಟ ಅಂತಿಮ ಪದ ಜೈ ಹಿಂದ್… ಜೈ ಭಾರತ್ ಮಾತಾ ಕಿ ಎಂದಾಗಿತ್ತು. ನಿಮ್ಮ ಮಗನ ಕಳೇಬರವನ್ನು ನಿಮಗೆ ಹಸ್ತಾಂತರಿಸಲು ನಾನು ನಮ್ಮ ಹಿರಿಯ ಸೇನಾಧಿಕಾರಿಗಳನ್ನು ಕೇಳಿಕೊಂಡೆ…ಆದರೆ ನನಗೆ ಅವಕಾಶ ದೊರೆಯಲಿಲ್ಲ. ಅವರ ಪಾದಗಳಿಗೆ ಹೂವನ್ನು ಹಾಕಿ ಗೌರವ ವಂದನೆ ನೀಡುವ ಅವಕಾಶ ನನಗೆ ಅಂದು ದೊರೆಯದ ಕಾರಣ ಇಂದು ತಮ್ಮ ಪಾದಕ್ಕೆ ನಮಸ್ಕರಿಸಿ ನನ್ನ ಗೌರವ ವಂದನೆಯನ್ನು ಸಲ್ಲಿಸುತ್ತಿರುವೆ ಎಂದು ಭಾವುಕನಾಗಿ ನುಡಿದರು.
ಆ ವೃದ್ದ ಶಿಕ್ಷಕರ ಕಣ್ಣಂಚಿನಲ್ಲಿ ನೀರಿನ ಪಸೆ ಇದ್ದು, ದುಃಖದಿಂದ ಗಂಟಲು ಬಿಗಿದಂತಾದರೂ ಎದೆ ಅಂತಹ ವೀರ ಪುತ್ರನನ್ನು ಪಡೆದುದಕ್ಕೆ ಗರ್ವದಿಂದ ಸೆಟೆದು ನಿಂತಿತ್ತು. ಅವರ ಪತ್ನಿ ಮಾತ್ರ ತನ್ನ ಸೆರಗಿನ ಮರೆಯಲ್ಲಿ ನಿಶಬ್ದವಾಗಿ ಅತ್ತು ಕಣ್ಣೊರೆಸಿಕೊಂಡರು.
ಕೆಲ ಕ್ಷಣಗಳ ಮೌನದ ನಂತರ ಆ ಶಿಕ್ಷಕರು ಸೇನಾಧಿಕಾರಿಯನ್ನು ಕುರಿತು ಯುದ್ಧ ಮುಗಿದ ಮೇಲೆ ಮನೆಗೆ ಬರುವ ನನ್ನ ಮಗನಿಗಾಗಿ ನಾನು ಶರ್ಟ್ ಒಂದನ್ನು ಖರೀದಿಸಿದ್ದೆ… ಆದರೆ ಅವನು ಬರಲೇ ಇಲ್ಲ. ಇದೀಗ ಆ ಅಂಗಿಯನ್ನು ಆತನ ಸಮಾಧಿಗೆ ಅರ್ಪಿಸಲು ನಾನು ತಂದಿದ್ದು, ಆತನ ಬದಲಾಗಿ ನೀನೇಕೆ ಆ ಅಂಗಿಯನ್ನು ಧರಿಸಬಾರದು ಎಂದು ಕೇಳಿದರು.
ಹೀಗೆ ಕಾರ್ಗಿಲ್ನಲ್ಲಿ ವೀರ ಮರಣವನ್ನಪ್ಪಿದ ಆ ಯೋಧನ ಹೆಸರು ವಿಕ್ರಂ ಬಾತ್ರಾ ಮತ್ತು ಆತನ ತಂದೆ ಶಿಕ್ಷಕರಾದ ಗಿರಿಧಾರಿ ಲಾಲ್ ಬಾತ್ರಾ. ಆತನ ತಾಯಿ ಕಮಲ್ ಕಾಂತ ಬಾತ್ರಾ.
ಸ್ನೇಹಿತರೆ ಇಂತಹ ಅಸಂಖ್ಯಾತ ಸೈನಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ದೇಶದ ಅಂಚುಗಳಲ್ಲಿ ನಮ್ಮನ್ನು ಕಾಯುತ್ತ ವೀರ ಮರಣವನ್ನಪ್ಪಿದ್ದಾರೆ.. ಅವರ ಕುಟುಂಬದ ಋಣ ಮತ್ತು ಜವಾಬ್ದಾರಿ ನಮ್ಮ ಮೇಲಿದೆ. ದೇಶದ ಆಂತರಿಕ ಸಮಸ್ಯೆಗಳಿಗೆ ಕಾರಣವಾಗುವ ಕ್ಷುಲ್ಲಕ ರಾಜಕೀಯ, ಮತಾಂಧತೆ ಮುಂತಾದ ಸಣ್ಣ ಪುಟ್ಟ ಮನಸ್ತಾಪಗಳನ್ನು ದೊಡ್ಡದಾಗಿಸಿಕೊಳ್ಳುವ ನಾವುಗಳು ಅಂತಹ ವೀರ ಯೋಧರ ತ್ಯಾಗ ಬಲಿದಾನಕ್ಕೆ ಸಾರ್ಥಕವಾಗುವಂತಹ ಬದುಕನ್ನು ಬದುಕಬೇಕು ಅಲ್ಲವೇ?
ಯಾರಿಗಾದರೂ ದಾನ ಮಾಡು ಎಂದರೆ ಅವರು ಹಣ ಚಿನ್ನ ಭೂಮಿ ಮುಂತಾದ ಭೌತಿಕ ವಸ್ತುಗಳನ್ನು ದಾನ ಮಾಡಬಹುದು ಆದರೆ ನಮ್ಮ ವೀರ ಸೈನಿಕರು ತಮ್ಮ ಭೌತಿಕ ದೇಹವನ್ನೇ ದೇಶಕ್ಕಾಗಿ ಅರ್ಪಿಸಿ ದೇಶ ರಕ್ಷಣೆ ಮಾಡುತ್ತಾರೆ.
ಅಂತಹ ವೀರ ಯೋಧರಿಗೆ ಗೌರವ ವಂದನೆ ಸಲ್ಲಿಸುತ್ತಾ ಅವರ ತ್ಯಾಗ ಬಲಿದಾನಗಳು ಹುಸಿ ಹೋಗದಂತೆ ಬದುಕುವ ಆಶಯವನ್ನು ವ್ಯಕ್ತಪಡಿಸುವ
ವೀಣಾ ಹೇಮಂತ್ ಗೌಡ ಪಾಟೀಲ್