ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
“ಸವಿಯೋಕಾದೀತ”
ಏನ್ ಚೆಂದ ಅಂದು ಮಕರ ಸಂಕ್ರಾಂತಿ
ಎಳ್ಳು ಬೆಲ್ಲದ ಜೊತೆ ಒಳ್ಳೆ ಮಾತೂ ಇತ್ತು
ಎಷ್ಟೋ ದಿನದ ಮ್ಯಾಲ ಸಿಗೋ ಸಂಬಂಧ
ಹಳೆ ಗೆಳೆತ್ಯಾನದ ಕಂಪು ಮೈ ಮನ ತುಂಬತಿತ್ತು
ತಿಳಿ ನೀರ ಹೊಳ್ಯಾಗ ಮುಳಗೆದ್ದು
ಮಾದೇವಗ ಶರಣೆಂಬೋ ಮನಸ್ಸಿತ್ತು
ಭಕ್ತಿರಸ ಎಲ್ಲೆಲ್ಲೂ ಹರಿದಾಡಿದಾಗ
ಎದಿ ಅನ್ನೋದು ಹೂನಂಗಾಗ್ತಿತ್ತು
ಜಾತಿಗೀತಿ ಮರತು ಹೆಗಲ ಮ್ಯಾಲ ಕೈ ಹಾಕಿ
ಖಾರಾ ಮಂಡಕ್ಕಿ ತಿಂದು ನಗ್ಯಾಡಿದ್ದೀಗ ನೆನಪು
ಆ ಪಕ್ಷ ಈ ಪಕ್ಷ ಅಡಿಗಿ ಮನೀಗೂ ಕಾಲಿಟ್ಟಾಗ
ಸವಿಯೋಕಾದೀತ ಜಾತ್ರಿ, ತೇರು, ಸುಗ್ಗೀ ಸೊಂಪು
ಜನ ಮರಳ ಜಾತ್ರಿ ಮರಳ ಅಂತ ನಡದೈತೀಗೂ
ತೇರಿನ ಮುಂದ ಕೇಳಾಕಾಗದ ಹಾಡು ಮುಗಿಲ ಮುಟ್ಯಾವು
ಸೆಲ್ಪಿ ತಕ್ಕೊಂತ ಅಡ್ಡಾಡೋರಿಗೆಲ್ಲಿ ಕಂಡಾರು
ಬಂಧು-ಬಳಗ, ಮಕ್ಕಳು-ಮರಿ, ಮಂದಿ-ಮನಸ್ಯಾರು
———————————————————
ಶಕುಂತಲಾ ಎಫ್ ಕೋಣನವರ