ಶರಣ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
́ಅರಿವಿನ ದೀವಿಗೆ ಅಲ್ಲಮʼ
ಅಲ್ಲಮರು ಹನ್ನೆರಡನೆಯ ಶತಮಾನದ ಶ್ರೇಷ್ಠ ಚಿಂತಕ ಕಾರಣಿಕ ಪುರುಷ . ಅರಿವನ್ನು ಜಾಗೃತಗೊಳಿಸದ್ದಲ್ಲದೆ ಅರಿವಿನ ಆಂದೋಲನವನ್ನು ತೀವ್ರಗೊಳಿಸಿದ ಸಾಕಾರಮೂರ್ತಿ . ಅಲ್ಲಮ ಒಬ್ಬ ಅಧ್ಯಾತ್ಮದ ಅಲೆಮಾರಿ.ತನ್ನ ವಿಭಿನ್ನ ರೀತಿಯಲ್ಲಿ ಸಾಂಧರ್ಭಿಕವಾಗಿ ಗುರು ಲಿಂಗ ಜಂಗಮದ ಸುತ್ತ ಹುಟ್ಟಿಕೊಂಡ ಅನೇಕ ವಿಷಯಗಳಿಗೆ ಸ್ಪಟಿಕದ ಸ್ಪಷ್ಟತೆ ನೀಡಿದ ಅನುಭಾವಿ. ಇಷ್ಟಲಿಂಗವು ಅರಿವಿನ ಕುರುಹು ಎಂದು ಘಂಟಾ ಘೋಷವಾಗಿ ಮತ್ತೆ ಸಾರಿ ಲಿಂಗ ಯೋಗವೂಕೂಡಾ ಒಂದು ಒಣ ಆಚರಣೆ ಆಗಬಾರದು ಎಂಬ ಹಿರಿಯ ಆಶಯ ಹೊಂದಿದದವರು.
ಅಲ್ಲಮನ ಪ್ರಭಾವ ಮುಂದೆ ಹರಿಹರ ಎಡೆಯೂರು
ಶ್ರೀ ಸಿದ್ಧಲಿಂಗ ಶ್ರೀಗಳಿಗೆ ಜೇವರ್ಗಿಯ ಷಣ್ಮುಖ ಶಿವಯೋಗಿಗಳ ಅಗಾಧವಾದ ಪ್ರಭಾವಯಿತು . ಚಾಮರಸ ಮತ್ತು ಸರ್ವಜ್ಞರ ಶಿಶುನಾಳ ಶರೀಫರ ಮತ್ತು ಮುಂದೆ ಬಂದ ತತ್ವ ಪದಕಾರರ ಸಾಹಿತ್ಯದಲ್ಲಿ ಅಲ್ಲಮರು ಆಧ್ಯಾತ್ಮಕ ನಾಯಕ . ವಚನ ಸಾಹಿತ್ಯದ ತಾರ್ಕಿಕ ವೈಚಾರಿಕ ಗಟ್ಟಿ ಭದ್ರ ಬುನಾದಿ ಅಲ್ಲಮರು .
ಹೆಣ್ಣಿಗಾಗಿ ಸತ್ತವರು ಕೋಟಿ
ಮಣ್ಣಿಗಾಗಿ ಸತ್ತವರು ಕೋಟಿ
ಹೊನ್ನಿಗಾಗಿ ಸತ್ತವರು ಕೋಟಿ
ಗುಹೇಶ್ವರಾ
ನಿಮಗಾಗಿ ಸತ್ತವರನಾರನೂ ಕಾಣೆ
ಇಲ್ಲಿ ಅಲ್ಲಮ ಪ್ರಭುಗಳು, ಹೆಣ್ಣಿಗಾಗಿ ನಡೆದ ರಾಮ-ರಾವಣರ ಯುದ್ಧ, ಕೌರವ ಪಾಂಡವರ ಕದನ ಮಣ್ಣಿಗಾಗಿ ನೆಡೆದ ಕುರುಕ್ಷೇತ್ರ ಯುದ್ಧ, ಹೊನ್ನಿಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧವನ್ನು ಉದಾಹರಣೆ ನೀಡಿ, ದೇವರಿಗಾಗಿ ದೈವತಕ್ಕಾಗಿ ಯಾರೂ ಜೀವ ನೀಡಲು ಸಿದ್ಧರಿಲ್ಲದ, ಮಾನವನ ಸ್ವಾರ್ಥವನ್ನು ಟೀಕಿಸಿದ್ದಾರೆ.
“ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಯಲನಾ ಬಣ್ಣ ಶೃಂಗರಿಸಲು ಬಯಲು ಸ್ವರೂಪುಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ
ನಮ್ಮ ಗುಹೇಶ್ವರ ಲಿಂಗದ ಪ್ರಥಮಭಿತ್ತಿ.”
ಎಂದು ಅಲ್ಲಮಪ್ರಭುದೇವರು ಹೇಳುವಲ್ಲಿ ವಿಶ್ವದ ವಿರಾಟ್ ಸ್ವರೂಪದ ಕಲ್ಪನೆ ಇದೆ. ಚೈತನ್ಯವು ಚಲನಶೀಲತೆ ಮನುಷ್ಯರೂಪದಲ್ಲಿನ ದೈವೀ ಭಾವ .
ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಬಾರದು
ಅಂದಿನ ಸಂಪ್ರದಾಯಿಗಳ ವೇದ ಆಗಮ ಶಾಸ್ತ್ರಪುರಾಣ ಪ್ರಮಾಣೀಕೃತ ಬದುಕಿಗೆ ಹೊಸ ತಿರುಹು ನೀಡಿ ಇವೆಲ್ಲ ಅಜ್ಞಾನದ ತೊಟ್ಟಿಲಿಗೆ ಕಟ್ಟಿದ ಹಗ್ಗ ಜ್ಞಾನವನ್ನು ಒಳ್ಳಿ ಮಲಗಿಸಿ ಭ್ರಾಂತಿ ಎಂಬ ತಾಯಿ ತೊಟ್ಟಿಲು ತೂಗುತ್ತಿರಲು ತೊಟ್ಟಿಲು ಮುರಿದು ಅಂದರೆ ಅಜ್ಞಾನವು ಮುರಿದು ಹಗ್ಗ ಹರಿದು ಜೋಗುಳ ಮಂತ್ರ ಘೋಷ ನಿಲ್ಲ ಬೇಕಲ್ಲದೆ ಗುಹೇಶ್ವರನೆಂಬ ಬಯಲು ವೈಭವ ಲಿಂಗವ ಅರಿಯಲಾಗದು ಮತ್ತು ನೋಡಲಾಗದು ಎಂಬ ಅರ್ಥಗರ್ಭಿತ ನುಡಿಗಳು ಇಂದಿಗೂ ಮಾದರಿ ಎನಿಸುತ್ತವೆ.
ಅಲ್ಲಮ ಒಬ್ಬ ಕಾಲಜ್ಞಾನಿ ಅನುಭಾವಿ ಚಿಂತಕ ಅಧ್ಯಾತ್ಮ ಶಿಖರ ವಾಸ್ತವಿಕ ನೆಲೆಗಟ್ಟಿನಲ್ಲಿ ಜಗತ್ತಿಗೆ ಸರ್ವಕಾಲಕ್ಕೂ ಹಚ್ಚಿಟ್ಟ ಅರಿವಿನ ದೀವಿಗೆ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅಲ್ಲಮನ ಅರಿವಿನ ದೀವಿಗೆ ನಿಜಕ್ಕೂ ಜ್ಞಾನದ ಹೊಳಹು ಮತ್ತು ವೈಚಾರಿಕತೆಯಿಂದ ಕೂಡಿದ ಲೇಖನ ಸರ್
ಸುತೇಜ