ಕಾವ್ಯ ಸಂಗಾತಿ
ತಾತಪ್ಪ.ಕೆ.ಉತ್ತಂಗಿ
ʼಹೊಂಬಿಸಿಲ ಚೆಲುವೆʼʼ
ಚುಮುಚಮಕಿನ ತಳುಕುಬಳಕಿನ
ಬೆಂಬೆಳಕ ಮುಂಜಾವು,
ತಮಕಳೆದ ತಿಳಿಬೆಳಕ
ಮನೋಲ್ಲಾಸದ
ತಿಳಿಬಿಸಿಜಾವು
ನಗೆಮೊಗದ , ಸ್ನಿಗ್ಧಸ್ಮಿತದ
ಇಳೆಗಿಳಿದ ಇಬ್ಬನಿಯ
ಗಮ್ಮನೆಯ ನವಿರ್ಗಂಪು,
ಬೆಳ್ಳಂಬೆಳಗ್ಗೆಯ
ಚಿಲಿಪಿಲಿಕಲರವಿಸುವ ಕಾಜಾಣ ಗಿಳಿಕೋಗಿಲೆಗಳ
ದುಂಬಿಚಿಟ್ಟೆಗಳ
ಕಂಪನಿಂಪಿನಾಲಾಪದ
ತಕತೈ ಏರಿಳಿತದ ತಿಳಿರ್ತಂಪು..
ಅಂತರತಮಗೈಯುವ
ನಿರ್ದಿಗಂತದ ವಾರೇನೋಟ
ಮಾಘಚಳಿಯ ಮಬ್ಬು ಇಬ್ಬನಿಯ ಹನಿಗಳ ಚೆಲ್ಲಾಟ
ಅಣುಕಿ,ಇಣುಕಿ,ಪರದೆಯ
ಹಿಂಬೆಳಕ ಚೆಲ್ಲುವ ನೇಸರನಾಟ
ಹೊನ್ನಿನ ಬೆಳಕಿನ ರಸಗಂಗೆಯ
ಒಲವು ತಳುಕಿನ ಹರಿದಾಟ..
ರವಿಕಾಂತಿಯ ಕ್ಷಣದಲ್ಲಿ
ಮಬ್ಬಿನಿಂದ ಎಚ್ಚರಗೈದು
ಶುಭ್ರದಿಂದ ಶುಭೋದಯವ
ಎದುರುಗೊಂಡ ಎವೆತೆರೆದಿಕ್ಕುತ,
ನಲಿಯುವ,ಉಲಿಯುವ
ಗೆಜ್ಜೆಹೆಜ್ಜೆಯಿಕ್ಕುತ್ತಾ
ಚೆಲುವೆ ಇಳಿದಂಗಳಕ್ಕೆ
ಹೂಬಳ್ಳಿಗಳ ಹೃದಯಂಗಮಕ್ಕೆ
ಕೋಮಲ ಕೈಗಳಿಂದ
ಅರಳಿದ ಹೂಗಳ ಅಂತರಂಗಕ್ಕೆ
ನಿವೇದಿಸಿದಳು ಪ್ರಾರ್ಥಿಸಿದಳು
ನಿತ್ಯ ಆರಾಧನೆಗೆ ಸುಪುಷ್ಪ
ಕುಸುಮಗಳು ಬೇಕೆಂದು..
–
̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲
ತಾತಪ್ಪ.ಕೆ.ಉತ್ತಂಗಿ